ಗುರುವಾರ, ಜೂನ್ 17, 2021

ಬೆಂದಕಾಳೂರಿನಲ್ಲಿ ಬಾಳೆ ಎಲೆಯ ಮೇಲೆ ಊಟ...

ಬೆಂಗಳೂರು! ಬದುಕು ಕಟ್ಟಿಕೊಳ್ಳಲು ಬರುವವರಿಗೆಲ್ಲ ಅವಕಾಶಗಳ ನೆಲೆಬೀಡಾಗುತ್ತಿರುವ ಈ ಮಾಯಾನಗರಿಗೆ, ಚಿಕ್ಕ ಗಾರೆ ಕೆಲಸದವನಿಂದ ಹಿಡಿದು ದೊಡ್ಡ ಕಂಪನಿಯ ಸಿಇವೋ ವರೆಗೆ, ರಾಜ್ಯ ಮತ್ತು ದೇಶದ ವಿವಿಧ ಭಾಗಗಳಿಂದ ದಿನೆ ದಿನೆ ಜನಸಾಗರ ಹರಿದು ಬರ್ತಾಇದೆ.  ಆ ಒಂದು ಪಟ್ಟಿಯಲ್ಲಿ, ಖಾಸಗಿ ಕೆಲಸಾನೊ, ಸರ್ಕಾರಿ ಕೆಲಸನೊ, ಇಲ್ಲ ಏನೋ ಒಂದು ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಳ್ಳಲು ನೀವು ಬಂದಿರುತ್ತೀರಿ. ಹತ್ತು ತಿಂಗಳ ಮುಂಗಡ ಹಣ ಕಟ್ಟಿ ಬಾಡಗೆ ಮನೆಯಲ್ಲಿಯೊ ಅಥವಾ ಬ್ಯಾಂಕುಗಳ ಅಭಯ ಹಸ್ತದಿಂದ ತೆಗೆದುಕೊಂಡ ಒಂದು ಅಪಾರ್ಟ್ಮೆಂಟಿನಲ್ಲಿ ಬಂದು ಗೂಡು ಕಟ್ಟಿಕೊಂಡಿರುತ್ತೀರಿ. ಈ ರೀತಿ ಇಲ್ಲಿ ಬಂದು ನೆಲೆಸಿದಮೇಲೆ, ವರ್ಷಗಳು ಕಳೆದಂತೆ ಹೊಸ ಸಹೋದ್ಯೋಗಿಗಳು, ಮನೆಯ ನೆರೆ-ಹೊರೆಯವರು, ಹೀಗೆ ಹೊಸ ಜನರ ಪರಿಚಯವಾಗಿ, ಅದು ನಿಮಗೆ ಗೊತ್ತಿಲ್ಲದೇ ಸ್ನೇಹಕ್ಕೆ ತಿರುಗಿರುತ್ತದೆ. ನಿಮ್ಮಂತೆ ಈ ಊರಿಗೆ ಬಂದು ನೆಲೆಸಿದ ನಿಮ್ಮ ಹಳೆಯ ಗೆಳೆಯ, ನೀವು ಇದೆ ಊರಲ್ಲಿ ತಂಗಿದ್ದೀರೆಂದು ಅವರಿವರಿಂದ ತಿಳಿದುಕೊಂಡು, "ಏನೋ, ನೀನು ಬೆಂಗಳೂರಿನಲ್ಲಿ ಇದ್ದಿಯಂತೆ, ನಾನು ಇಲ್ಲೇ ಈ ಏರಿಯಾದಲ್ಲಿ ಇದೀನಪ್ಪಾ. ಯಾವಾಗ್ಲಾದ್ರು ಸಮಯ ಸಿಕ್ಕಾಗ ಮನೆಕಡೆ ಬಾರೋ, ಭೆಟ್ಟಿಯಾಗಿ ಬಹಳ ದಿನ ಆಯಿತು"..... ಅಂದಿರ್ತಾನೆ. ಕೆಲಸದ ಓಡಾಟದಲ್ಲಿ ಸಮಯ ಸಿಗುವುದು ವಾರಾಂತ್ಯದ ಶನಿವಾರ ಮತ್ತು ರವಿವಾರ ಮಾತ್ರ. ಅದು, ಮುಂಚೆನೇ ಪ್ಲಾನ್ ಮಾಡಿದ ಮನೆ ಕೆಲಸಗಳು ಹಾಗು ಹೆಂಡತಿ ಮಕ್ಕಳ ಜೊತೆ ಕಾಲ ಕಳೆಯುವುದರಲ್ಲಿ ಕಳೆದುಹೋಗುತ್ತದೆ. ಅದೇನೇ ಇರಲಿ, ನಿಮ್ಮ ಸ್ನೇಹಿತರ ಸಂಪರ್ಕಜಾಲ ಮಾತ್ರ ನೋಡು ನೋಡುತ್ತಿದ್ದಂತೆ ವಿಶಾಲವಾಗಿ ಹರಡಿಬಿಟ್ಟಿರುತ್ತದೆ. ಹೀಗಿರುವಾಗ, ವರ್ಷದಲ್ಲಿ ಒಂದು ಸಲವಾದರು ನಿಮ್ಮ ಸ್ನೇಹ ಸಂಪರ್ಕಜಾಲದ ಸದಸ್ಯರಲ್ಲಿ ಒಬ್ಬರಾದ್ರು ಅವರ ಮನೆಯಲ್ಲಿ ನಡೆಯಲಿರುವ ಮದುವೆ-ಮುಂಜಿ, ನಾಮಕರಣ ಕಾರ್ಯಕ್ಕೆ ಆಮಂತ್ರಿಸಿರುತ್ತಾರೆ. ಇಲ್ಲಾ ಅಂದ್ರೆ ಗೃಹಪ್ರವೇಶ,  ಹುಟ್ಟುಹಬ್ಬ, ಸತ್ಯನಾರಾಯಣ ಪೂಜೆ ಅಥವಾ ವರಮಹಾಲಕ್ಷ್ಮಿ ಪೂಜೆ ಅಂತ ಏನೋ ಒಂದು ಕಾರ್ಯಕ್ರಮಕ್ಕೆ ಆಮಂತ್ರಣ ಬಂದೇಇರುತ್ತದೆ. ಬಹಳ ಪರಿಪರಿಯಾಗಿ ಕೇಳಿಕೊಂಡಿರುತ್ತಾರೆ, ಹೊಸ ಸ್ನೇಹ ಬೇರೆ, ಅದಕ್ಕೆ ನೀವು ಹೆಚ್ಚು ವಿಚಾರಿಸದೆ ಆಮಂತ್ರಣವನ್ನು ಒಪ್ಪಿಕೊಂಡಿರುತ್ತೀರಿ. ಈ ಬೆಂಗಳೂರಿನ, ಎಲ್ಲೆಂದರಲ್ಲಿ ಮೆಟ್ರೋಕೆಲಸಗಳು ನಡೆಯುತ್ತಿರುವ ರಸ್ತೆಗಳ, ವಾಹನ ದಟ್ಟಣೆಯಲ್ಲಿ ಹೆಣಗಾಡುತ್ತಾ, ಸಮಾರಂಭದ ದಿನ ಆಮಂತ್ರಣ ನೀಡಿದ ಅತಿಥಿಗಳ ಮನೆಗೆ ಹೋಗಿರುತ್ತೀರಿ. ಹೋದಮೇಲೆ ಆಮಂತ್ರಿತರ ಮನೆಯವರೊಂದಿಗೆ ಉಭಯಕುಶಲೋಪರಿ. ನಿಮ್ಮಂತೆ ಆಮಂತ್ರಿತರಾದ ಸ್ನೇಹಿತರು ಇಲ್ಲ ಸಹುದ್ಯೋಗಿಗಳ ಜೊತೆ ಸ್ವಲ್ಪ ಹೊತ್ತು ಹರಟೆ, ಗಾಸಿಪ್ಪ್, ಮಾತುಕತೆಯಲ್ಲಿ ಕಾಲಕಳೆದು, ಮದುವೆ ಸಮಾರಂಭ ಇದ್ದರೆ ಎಲ್ಲರು ಸೇರಿ ವೇದಿಕೆಯ ಮೇಲಿರುವ ನವದಂಪತಿಗಳಿಗೆ ಉಡುಗೊರೆ ಒಪ್ಪಿಸಿ, ಶುಭಾಶಯ ತಿಳಿಸಿ ಫೋಟೋ ತೆಗೆಸಿಕೊಳ್ಳುವ ಕಾರ್ಯಕ್ರಮ. ಇದೆಲ್ಲ ನಡೆಯುತ್ತಿರುವಾಗಲೇ ಹೊಟ್ಟೆಯ ಆಜ್ಞೆಯ ಮೇರೆಗೆ ಕಣ್ಣುಗಳು ಊಟದ ಹಾಲ್ ಎಲ್ಲಿದೆ ಎಂದು ಆಕಡೆ ಈಕಡೆ ಕಣ್ಣಾಡಿಸಿ ಹುಡುಕಲು ಶುರುಮಾಡಿರುತ್ತವೆ. ಸಮಾರಂಭ ಅಂದಮೇಲೆ ಊಟೋಪಚಾರದ ವ್ಯವಸ್ಥೆ ಇದ್ದೆ ಇರುತ್ತದೆ, ಆದರೂ ಕಣ್ಣುಗಳಿಗೆ ಹುಡುಕುವ ತವಕ ಜಾಸ್ತಿ. ಆಮಂತ್ರಿಸಿದ ಸ್ನೇಹಿತರು ಊಟ ಮಾಡಿಕೊಂಡು ಹೋಗಿ ಅಂತ ಹೇಳುವುದಕ್ಕೆ ಮುಂಚೆನೇ ನಿಮ್ಮ ನಿರ್ಧಾರ ಆಗಿಯೇ ಬಿಟ್ಟಿರುತ್ತದೆ ಎಂದು ಅವರಿಗೇನು ಗೊತ್ತು. ಮೇಲಾಗಿ, ಎರಡು ಮೂರು ಅಂಗಡಿ ತಿರುಗಿ ಗಿಫ್ಟ್ ತೊಗೊಂಡು, ದುಡ್ಡು ಖರ್ಚುಮಾಡಿ ದೂರದಿಂದ ಆಟೋ, ಕ್ಯಾಬ್ ಅಥವಾ ಸ್ವಂತ ವಾಹನದಲ್ಲಿ ಬಂದಿರ್ತೀರಾ, ಊಟ ಮಾಡದೇ ಹಂಗೆ  ಹೋಗೋಕಾಗುತ್ತೆಯೇ! ಇನ್ನು ನನ್ನಂತಹ ಭೋಜನ ಪ್ರಿಯರಿಗೆ ಇದೆಲ್ಲ ಹೇಳಬೇಕೆ. ಮದುವೆ, ಸಮಾರಂಭ ಮತ್ತು ದೇವಸ್ಥಾನಗಳ ದಾಸೋಹಗಳನ್ನು ನಾನು ಎಂದು ತಪ್ಪಿಸುವುದಿಲ್ಲ. 

ಈ ಬೆಂಗಳೂರಿನಲ್ಲಿ ಊಟದ ಹಾಲ್ ಮತ್ತು ಊಟ ಬಡಿಸುವ ಪದ್ಧತಿ, ಇವೆರಡರಲ್ಲು ಒಂದು ವಿಶೇಷತೆ ಇದೆ. ಪ್ರಾಯಶಃ, ಕರ್ನಾಟಕದ ದಕ್ಷಿಣ ಭಾಗದ ಎಲ್ಲ ಊರುಗಳಲ್ಲಿ ಇದೆ ಪದ್ಧತಿಯನ್ನು ಅನುಸರಿಸುವುದುಂಟು. ಅದಕ್ಕೆ ನನ್ನಂತಹ ಉತ್ತರ ಕರ್ನಾಟಕದಿಂದ ಬಂದವರಾಗಿದ್ದರೆ, ಇಲ್ಲಿಯ ಊಟದ ಹಾಲಿಗೆ ಪ್ರವೇಶಮಾಡಿದಮೇಲೆ ನಿಮಗೆ ಖಂಡಿತ ಅಶ್ಚ್ಯರ ಕಾದಿರುತ್ತದೆ. ಹೌದು! ಈ ಊರಿನಲ್ಲಿ ಹೆಚ್ಚಾಗಿ ಎಲ್ಲ ಸಮಾರಂಭಗಳಲ್ಲಿ ಟೇಬಲ್ ಮತ್ತು ಕುರ್ಚಿ ಪದ್ಧತಿ  ಜಾರಿಯಲ್ಲಿದ್ದು, ಸಾಲಾಗಿ ಜೋಡಿಸಿದ ಸ್ಟೀಲಿನ ಡೈನ್ನಿಂಗ್ ಟೇಬಲ್ಲುಗಳ ಮುಂದೆ ಇಟ್ಟ ಸ್ಟೀಲಿನ ಕುರ್ಚಿ ಅಥವಾ ಸ್ಟೂಲುಗಳ ಮೇಲೆ ಆಮಂತ್ರಿತರನ್ನು ಪಂಕ್ತಿಯಲ್ಲಿ ಕೂಡಿಸಿ, ಬಾಳೆಯ ಎಲೆಯ ಮೇಲೆ ಊಟ ಬಡಿಸುತ್ತಾರೆ. ಈ ಪದ್ಧತಿ, ನೋಡಲು ವ್ಯವಸ್ಥಿತವಾದ ಮತ್ತು ಶಿಸ್ತಿನ ವ್ಯವಸ್ಥೆ ಅನಿಸಿದರು, ಅದಕ್ಕೆ ತನ್ನದೆ ಆದ ಸಮಸ್ಯೆಗಳಿವೆ. ಬಫೆಟ್ ಪದ್ಧತಿಯಾದರೆ, ಪ್ಲೇಟಿನಲ್ಲಿ ಊಟ ಬಡಿಸಿಕೊಂಡು ಎಲ್ಲಾದರು ಕುಂತೋ, ನಿಂತೋ ಊಟಮಾಡಬಹುದು. ಆದರೆ, ಇಲ್ಲಿ ಹಾಗಲ್ಲ, ಒಂದು ಪಂಕ್ತಿಯಲ್ಲಿ ಕುಳಿತವರೆಲ್ಲ ಎಲ್ಲ ಪದಾರ್ಥಗಳನ್ನು ಮನಃ ಪೂರ್ತಿ ತಿಂದು ಏಳುವವರೆಗೆ, ಮುಂದಿನ ಪಂಕ್ತಿಯವರು ಬಕಪಕ್ಷಿಯಂತೆ ನಿಂತು ಕಾಯಬೇಕು. ಈ ಸಮಸ್ಯೆ ಎದುರಾಗಬಾರದೆಂದು ಕೆಲವು ಜಾಣರು, ಈಗ ಪಂಕ್ತಿಯಲ್ಲಿ ಕುಳಿತು ಊಟ ಮಾಡುವವರ ಹಿಂದೆ ನಿಂತು, ಆ ಚೇರನ್ನು ಮುಂಗಡ ಬುಕಿಂಗ್ ಮಾಡಿರುತ್ತಾರೆ. ಅಕಸ್ಮಾತ್ ಆ ಸಮಾರಂಭದಲ್ಲಿ ಬಹಳ ಜನ ಬಂದಿದ್ದಾರೆ ಈ ರೀತಿ ಬುಕಿಂಗ್ ಮಾಡದಿದ್ದರೆ ಅವತ್ತು ನಿಮಗೆ ಊಟಮಾಡಲು ಸೀಟು ಸಿಕ್ಕಂತೆ ಅನ್ನಿ. ಇನ್ನು ಬೆಂಗಳೂರಿನಲ್ಲಿ ಮದುವೆಗಳ ಆರತಕ್ಷತೆ ಸಮಾರಂಭವು ಸಾಮಾನ್ಯವಾಗಿ ಸಂಜೆ ಶುರುವಾಗಿ ರಾತ್ರಿ ೧೧-೦೦ ವರೆಗೆ ನಡೆದು, 80 ಪ್ರತಿಶತ ಆಮಂತ್ರಿತರೆಲ್ಲ ಆರತಕ್ಷತೆಗೆ ಮಾತ್ರ ಬಂದು ಮಾರನೇದಿನ ಬೆಳಿಗ್ಗೆ ನಡೆಯುವ ಮಾಂಗಲ್ಯಧಾರಣೆ ಕಾರ್ಯಕ್ರಮಕ್ಕೆ ಕೇವಲ ಹತ್ತಿರದ ನೆಂಟರು, ಸ್ನೇಹಿತರು ಅಷ್ಟೇ ಇರುವುದು. ಹಾಗಾಗಿ, ನೀವು ಅರತಕ್ಷತೆಯ ಕಾರ್ಯಕ್ರಮದ ಅತಿಥಿಯಾಗಿದ್ದರೆ, ಇಲ್ಲಿ ಜನರು ಜಾಸ್ತಿ ಮತ್ತು ಎಲ್ಲರಿಗು ಬೇಗ ಊಟಮಾಡಿ ಮನೆ ಸೇರುವ ತವಕದಲ್ಲಿದ್ದು, ಇಲ್ಲಿ ನೀವು ಬುಕಿಂಗ್ ಟೆಕ್ನಿಕ್ ಉಪಯೋಗಿಸಲಿಲ್ಲ ಅಂದ್ರೆ ನಿಮಗೆ ಸಿಗುವುದು ರಾತ್ರಿ 10 ಘಂಟೆ ನಂತರದ ಕೊನೆಯ ಪಂಕ್ತಿ. ಆಮೇಲೆ ನೀವು ಊಟಮಾಡಿ ಮನೆ ಸೇರಿವುದರಲ್ಲಿ ಮಧ್ಯರಾತ್ರಿ ಆಗುವುದು ಗ್ಯಾರಂಟಿ.  

ಹಂಗು ಹಿಂಗು ಮಾಡಿ ಒಂದು ಪಂಕ್ತಿಯಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬದವರೊಂದಿಗೆ ಬಂದಿದ್ದರೆ, ಅವರಿಗೂ ಸ್ಥಾನ ಪಡೆದುಕೊಂದು ಕೂತಾಗ ಜೀವನದಲ್ಲಿ ಏನೋ ಒಂದು ದೊಡ್ಡ ಸಾಧನೆ ಮಾಡಿದಷ್ಟು ಸಂತೋಷದಿಂದ ಬೀಗುವಷ್ಟು ಖುಷಿ ಆಗಿರುತ್ತದೆ. ಆಯಿತಪ್ಪ, ಇನ್ನು  ಆರಾಮವಾಗಿ ಊಟಮಾಡಿ ಮನೆಗೆ ಹೋಗಬಹುದು ಅಂತ ಖಾತ್ರಿಯಾಗುತ್ತದೆ. ಅಷ್ಟರಲ್ಲಿ ನಿಮ್ಮ ಟೇಬಲಿನ ಮೇಲೆ ನೀರು ಹೀರಬಲ್ಲ ಒಂದು ದಪ್ಪನೆಯ ಬಿಳಿ ಹಾಳೆ ಹಾಸಲಾಗಿ. ಇಲ್ಲಿಂದ ಬಾಳೆ ಎಲೆಯ ಮೇಲಿನ ಊಟ ಬಡಿಸುವ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ, ಕ್ಯಾಟರಿಂಗ್ನವರು ಒಂದೊಂದು ಬಕೇಟಿನಲ್ಲಿ ಒಂದೊಂದು ಪದಾರ್ಥ ಹಿಡಿದು ನಿಮ್ಮ ಸೇವೆಗಾಗಿ ಸಾಲಾಗಿ ನಿಂತಿರುವುದನ್ನು ಕಾಣಬಹುದು. ಮೊದಲು ಹಾಸಿದ ಬೀಳಿ ಹಾಳೆಯ ಉದ್ದೇಶ, ಊಟ ಆದಮೇಲೆ ಮುಸುರಿ ಮತ್ತು ನೀರು ಚೆಲ್ಲಿದರೆ ತಗೆಯಲು ಹಗುರವಾಗಲೆಂದು. ಮೊದಲು ಒಬ್ಬ ವ್ಯಕ್ತಿ, ಪಂಕ್ತಿಯಲ್ಲಿ ಕುಳಿತ ಎಲ್ಲರ ಮುಂದೆ ಒಂದು ಅಗಲವಾದ ಬಾಳೆಯ ಎಲೆಯನ್ನು ಹಾಸಿ ಹೋಗುತ್ತಾನೆ ಮತ್ತು ಅವನ ಹಿಂದೆ ಇನ್ನೊಬ್ಬ ಪ್ರತಿ ಎಲೆಗೆ ಒಂದರಂತೆ ಒಂದು ನೀರಿನ ಬಾಟಲಿಯನ್ನು ಇಡುತ್ತ ಹೋಗುತ್ತಾನೆ. ಈ ಬಾಟಲಿಯ ನೀರು, ಕುಡಿಯಲು ಮತ್ತು ಊಟದ ಪದಾರ್ಥಗಳನ್ನು ಬಡಿಸುವ ಹಂತಕ್ಕಿಂತ ಮುಂಚೆ ಬರುವ ಎಲೆ ತೊಳೆಯುವ ಕಾರ್ಯಕ್ರಮಕ್ಕೆ ಉಪಯೋಗವಾಗುತ್ತದೆ. ಏನಿದು ಎಲೆ ತೊಳೆಯುವ ಕಾರ್ಯಕ್ರಮ ಅಂತೀರಾ. ಊಟಕ್ಕೆ ಮುಂಚೆ ಬಲಗೈಯಲ್ಲಿ ನೀರು ತೆಗೆದುಕೊಂಡು, ಎಲೆಯ ಮೇಲೆ ತೀರ್ಥದ ನೀರು ಪ್ರೋಕ್ಷಣೆ ಮಾಡಿದಂತೆ ಸಿಂಪಡಿಸಿ, ಎಡಗೈಯಿಂದ, ಎಲೆಯ ಬಲದಂಡೆಯಿಂದ ಎಡದಂಡೆಯವರೆಗೆ ನೀರನ್ನು ಸವರುತ್ತ ಎಲೆಯನ್ನು ಸ್ವಚ್ಛ ಮಾಡುವುದು. ಆ ಎಲೆಯ ಮೇಲಿಂದ ಬಳಿದು ಕೆಳಗೆ ಹಾಕಿದ ನೀರು ದಪ್ಪನೆಯ ಹಾಳೆಯ ಮೇಲೆ ಬಿದ್ದು ಇಂಗಿ ಹೋಗುತ್ತದೆ. ಈ ಎಲೆ ತೊಳೆಯುವ ಪ್ರಕ್ರಿಯೆಯ ಜೊತೆಗೆ ಹೊಂದಿಕೊಂಡ ನನ್ನದೊಂದು ಅನುಭವ ಹಂಚಿಕೊಳ್ಳಲೇಬೇಕು.  ಒಂದು ಸಲ ನಮ್ಮ ಸಹುದ್ಯೋಗಿಯೊಬ್ಬ ಹೊಸ ಅಪಾರ್ಟ್ಮೆಂಟ್ ಖರೀದಿ ಮಾಡಿ, ನಮ್ಮ ಕಂಪನಿಯ ಎಲ್ಲ ಸಹುದ್ಯೋಗಿಗಳಿಗೆ ಗೃಹಪ್ರವೇಶಕ್ಕೆ ಆಮಂತ್ರಿಸಿದ್ದ. ಆ ಆಮಂತ್ರಿತರಲ್ಲಿ, ಹದಿನೈದು ವರ್ಷ ಬೆಂಗಳೂರಿನಲ್ಲಿ ಇದ್ದರು ಒಂದು ಅಕ್ಷರ ಕನ್ನಡ ಕಲಿಯದ ಉತ್ತರ ಪ್ರದೇಶದ ನಮ್ಮ ಬಾಸ್ ಕೂಡ ಇದ್ದ. ಎಲ್ಲರು ಸಮಾರಂಭಕ್ಕೆ ಹೋಗಾಯಿತು. ಪೂಜೆ-ಪುನಸ್ಕಾರ ಎಲ್ಲ ಮುಗಿದಮೇಲೆ ಊಟದ ಕಾರ್ಯಕ್ರಮ ಪ್ರಾರಂಭವಾಗಿ, ನಾವು ಸಹುದ್ಯೋಗಿಗಳೆಲ್ಲ ಅವನು ಬರಲಿ ಇವನು ಬರಲಿ ಅಂತ ಲೇಟಾಗಿ ಬಂದವರಿಗೆ ಕಾಯುವುದರಲ್ಲಿ ವೇಳೆ ಬಹಳ ಆಗಿ, ಎಲ್ಲರ ಹೊಟ್ಟೆ ಚುರ್ರ್ ಅನ್ನುತಿತ್ತು. ಕೊನೆಗೆ ಎಲ್ಲರು ಸೇರಿದಮೇಲೆ ಒಟ್ಟಿಗೆ ಒಂದೇ ಪಂಕ್ತಿಯಲ್ಲಿ ಕೂಡೋಣವೆಂದು ನಿರ್ಧಾರವಾಗಿ, ಟೇಬಲ್ ಮತ್ತು ಚೇರ್/ಸ್ಟೂಲ್ ಪದ್ಧತಿಯ ಪಂಕ್ತಿಯಲ್ಲಿ ಕೂತೆವು. ತುಂಬಾ ಲೇಟಾಗಿದೆ ಮತ್ತು ಹೊಟ್ಟೆ ಬೇರೆ ಹಸಿದಿದೆ, ಆರಾಮಾಗಿ ಕೂತು ಚೆನ್ನಾಗಿ ಊಟಮಾಡಿದರಾಯಿತು ಎಂದು ನಿರ್ಧರಿಸಿದ್ದೆ, ಆದರೆ ಪಕ್ಕದಲ್ಲೂ ನೋಡಿದರೆ ನಮ್ಮ ಬಾಸ್ ಕೂಡಬೇಕೆ! ಇವನಿಗೆ ಈ ಪದ್ಧತಿ ಗೊತ್ತಿದೆಯೊ ಇಲ್ಲವೊ, ನಾನವನಿಗೆ ಎಲ್ಲ ಹಂತಗಳನ್ನು ತಿಳಿಸಿ ಹೇಳುತ್ತಾ ಊಟಮಾಡಬೇಕು. ಆಗ ನನ್ನ ಗಮನ ನನ್ನ ಊಟದ ಕಡೆಗೆ ಹೋಗುವುದಿಲ್ಲ ಎಂದು ಕೊರಗುತ್ತಿರುವಾಗ ಕ್ಯಾಟರಿಂಗ್ ಹುಡುಗ ಮುಂದೆ ಎಲೆ ಹಾಕಿ ನೀರಿನ ಬಾಟಲಿ ಇತ್ತು ಹೋದ. ನಾನು ಹಗುರವಾಗಿ ನೀರು ತೆಗೆದುಕೊಂಡು ಎಲೆಮೇಲೆ ಸಿಂಪಡಿಸಿ ಇನ್ನೇನು ಸ್ವಚ್ಛಗೊಳಿಸಬೇಕು, ಅಷ್ಟರಲ್ಲಿ ಅವನಕಡೆ ಲಕ್ಷ ಹೋಯಿತು. ಅಲ್ಲಿ ನೋಡಿದರೆ ಅವನು ಆಗಲೇ ನೀರು ಸಿಂಪಡಿಸಿ ಎಲೆ ಒರೆಸುತಿದ್ದ. ಅರೇ! ನಿಮಗಿದು ಗೊತ್ತಾ ಅಂತ ಕೇಳಿದೆ. ಅದಕ್ಕವನು, ನಾನು ಇಲ್ಲಿ ಬಂದು ಹದಿನೈದು ವರ್ಷವಾಯಿತು, ಹಿಂತಹ ಅನೇಕ ಕಾರ್ಯಕ್ರಮಗಳಿಗೆ ಹೋಗಿದ್ದು, ಈ ಬಾಳೆ ಎಲೆಯ ಮೇಲಿನ ಊಟದ ಪ್ರತಿ ಹಂತವು ನನಗೆ ಗೊತ್ತು ಎಂದು ಬೀಗಿದ. ಈ ವಿಷಯ ತಿಳಿದು ನಾನೇನೋ ನೀರಾಳನಾದೆ, ಆದರೆ ಹದಿನೈದು ವರ್ಷದಿಂದ ಬೆಂಗಳೂರಿನಲ್ಲಿ ಇದ್ದು ಕೇವಲ ಈ ಊಟದ ಪದ್ಧತಿಯನ್ನು ಕಲಿತಿದ್ದೀಯಾ, ಜೊತೆಗೆ ನಾಲ್ಕು ಮಾತು ಕನ್ನಡ ಕಲೀಲಿಕ್ಕೆ ನಿನಗೇನು ಧಾಡಿನಾ ಅಂತ ಮನದೊಳಗೆ ಬೈದು ಊಟ ಮುಂದುವರಿಸಿದೆ. 

ಈ ಪದ್ಧತಿಯಲ್ಲಿ, ಖಾದ್ಯಗಳ ಆಧಾರದಮೇಲೆ ಮೂರು ಸುತ್ತುಗಳಲ್ಲಿ ಊಟವನ್ನು ಬಡಿಸಲಾಗುವುದು ಮತ್ತು ಕೊನೆಯ ಸುತ್ತು ಸ್ವಲ್ಪ ಜಾಸ್ತಿ ಉದ್ದವಾಗಿರುತ್ತದೆ. ಆಮೇಲೆ, ಎಲೆಯ ಎಡಭಾಗದ ಮೇಲಿನ ಮೂಲೆಯಲ್ಲಿ ನೀಡುವ ಉಪ್ಪಿನಿಂದ ಹಿಡಿದು ಬಲಭಾಗದ ಕೆಳಮೂಲೆಯಲ್ಲಿ ನೀಡುವ ಸಿಹಿ ಪದಾರ್ಥದವರೆಗೆ, ಪ್ರತಿಯೊಂದು ಪದಾರ್ಥಕ್ಕೆ ಆ ಎಲೆಯ ಮೇಲೆ ತನ್ನದೇ ಆದ ಜಾಗ ಅಥವಾ ಹಕ್ಕು ಇದೆ. ಒಂದು ಸಲ ನಾನು ಹೀಗೆ ಒಂದು ಕಾರ್ಯಕ್ರಮಕ್ಕೆ ಹೋದಾಗ, ಊಟ ಬಡಿಸುವವನಿಗೆ, ಉಪ್ಪು ಅಲ್ಲಿ ಬೇಡ ಇಲ್ಲ ನೀಡು ಅಂತ ಬೇರೆ ಜಾಗ ತೋರಿಸಿದಕ್ಕೆ, ವಕ್ಕರಿಸಿಗೊಂಡು ನನ್ನನ್ನೇ ನೋಡುತ್ತಾ, ಇಲ್ಲ ಉಪ್ಪನ್ನು ಇಲ್ಲೇ ನೀಡಬೇಕು ಎಂಬ ಶಾಸ್ತ್ರ ಇದೆ ಅಂದ. ಆಯಿತು ಗುರುವೆ ನೀನು ನಿನ್ನ ಶಾಸ್ತ್ರ ಪಾಲಿಸು ನಾನು ನನ್ನ ರೀತಿಯಲ್ಲಿ ಊಟಮಾಡುವೆ ಅಂದು ಸುಮ್ಮನಾದೆ. 

ಮೊದಲನೆ ಸುತ್ತು ಒಂತರ ಸಿನಿಮಾ ಟ್ರೈಲರ್ ನೋಡಿದಂಗೆ ಇರುತ್ತದೆ. ಅಂದರೆ ಈ ಸುತ್ತಿನಲ್ಲಿ ಅವತ್ತು ಮಾಡಿದ ಎಲ್ಲ ಪದಾರ್ಥಗಳ ಕಿರುಪರಿಚಯ. ಉಪ್ಪು, ಉಪ್ಪಿನಕಾಯಿ ನೀಡಿದಮೇಲೆ, ಎರಡು-ಮೂರು ತರಹದ ಪಲ್ಯ, ಗೊಜ್ಜು, ತೊವ್ವೆ ಅಥವಾ ಪೊಪ್ಪು, ಸ್ವಲ್ಪ ಸಿಹಿ ಪದಾರ್ಥ (ಶ್ಯಾವಿಗೆ, ಅಕ್ಕಿ ಅಥವಾ ಗೋದಿ ಪಾಯಸ), ಸಂಡಿಗೆ ತುಣುಕುಗಳು, ಇತ್ಯಾದಿ. ಈ ಎಲ್ಲ ಸ್ಯಾಂಪಲ್ ಪದಾರ್ಥಗಳನ್ನು ರುಚಿನೋಡುತ್ತಿರುವಾಗ ಇನ್ನೊಬ್ಬ ಬಂದು ಎರಡು ಚಿಕ್ಕ ಚಪಾತಿ ನೀಡಿ, ಅದರೊಂದಿಗೆ ನೆಂಚಿಕೊಳ್ಳಕು ಬಟಾಟೆ ಸಾಗು ಬಡಿಸಿ ಹೋಗುತ್ತಾನೆ. ಇನ್ನು ಎರಡನೇ ಸುತ್ತು ಅಂದರೆ ಸಿಹಿ ಪಧಾರ್ಥಗಳ ಸುತ್ತು. ಈ ಸುತ್ತಿನಲ್ಲಿ ಕೆಲವೊಂದು ಸಲ ಹೋಳಿಗೆ (ಬೆಳೆ ಅಥವಾ ಕಾಯಿ ಹೋಳಿಗೆ) ಅಥವಾ ಪಾಯಸ, ಅದರ ಮೇಲೆ ತುಪ್ಪ ಇದ್ದರೆ, ಕೆಲವುಸಲ ಬುಂದಿ, ಮೋತಿಚೂರ್ ಲಡ್ಡು, ಅಥವಾ ಜಹಾಂಗೀರ್ ಇರುತ್ತದೆ. ಇನ್ನು ಕೆಲವೊಬ್ಬರ ಮನೆ ಕಾರ್ಯಕ್ರಮದಲ್ಲಿ, ಈಗ ತಿಳಿಸಿದ ಸಿಹಿ ಪದಾರ್ಥಗಳ ಜೊತೆಗೆ ಬೇರೆ ಪ್ಲೇಟಿನಲ್ಲಿ, ಬುಟ್ಟಿಯಾಕಾರದ ಶ್ಯಾವಿಗೆಯ ರಚನೆಯನ್ನಿಟ್ಟು, ಅದರ ಮೇಲೆ ಬಾದಾಮಿ ಹಾಲನ್ನು ಹಾಕಿ ಕೊಡುತ್ತಾರೆ. ನನಗಂತೂ ಒಮ್ಮೆ ಪರಚಯದವರ ಗೃಹಪ್ರವೇಶಕ್ಕೆ ಹೋದಾಗ, ಎಲೆಯಲ್ಲಿರುವ ಸಿಹಿನೇ ತಿನ್ನಕ್ಕಾಗ್ತಿಲ್ಲ ಈಗ ಇದನ್ನ ಬೇರೆ ತಿನ್ನಬೇಕಾ, ಆಗಲ್ಲ ಸ್ವಾಮಿ ಕ್ಷಮಿಸಿಬಿಡಿ ಅಂತ ಕೈಮುಗಿದೆ. 

ಮೂರನೇ ಸುತ್ತು, ಆಗಲೇ ಹೇಳಿದಂತೆ ಇದು ಸ್ವಲ್ಪ ಉದ್ದವಾದ ಕೊನೆಯ ಸುತ್ತು. ಈ ಸುತ್ತನ್ನು ಮತ್ತೆ ಮೂರು ಉಪಸುತ್ತುಗಳಾಗಿ ವಿಂಗಡಿಸಬಹುದಾಗಿದ್ದು, ಕಾರಣವನ್ನು ನನ್ನ ಅನುಭವದ ಮೂಲಕ ಹೇಳಬಯಸುತ್ತೇನೆ. ಅದು ನನ್ನ ಮೊಟ್ಟಮೊದಲ ಬಾಳೆ ಎಳೆಯ ಊಟದ ಅನುಭವ. ಮೊದಲೆರಡು  ಸುತ್ತುಗಳಲ್ಲಿ ಬಡಿಸಿದ ಎಲ್ಲ ಪದಾರ್ಥಗಳನ್ನು ಪ್ರಾಮಾಣಿಕವಾಗಿ ಸೇವಿಸಿ, ಸ್ವಲ್ಪ ಬಿಳಿ ಅನ್ನ-ಸಾಂಬಾರಿನೊಂದಿಗೆ ಊಟ ಮುಗಿಸೋಣ ಎಂದು ನಿರ್ಧರಿಸಿ, ಅನ್ನ ಬಡಿಸುವವನಿಗಾಗಿ ಕಾಯಿತ್ತಿದ್ದೆ. ಅಷ್ಟರಲ್ಲಿ ಒಬ್ಬ ವ್ಯಕ್ತಿ ಸಣ್ಣ ಬಕೇಟಿನಲ್ಲಿ ಬಿಳಿ ಅನ್ನವನ್ನು ತಂದು ಎರಡು ಚಮಚೆ ಬಡಿಸಿದ. ಅವನ ಹಿಂದೆಯೇ ಬಂದ ಇನ್ನೊಬ್ಬ, ನಾನು ಚಿಕ್ಕ ಪರ್ವತದಂತಿದ್ದ ಅನ್ನದ ನಡುವೆ ಕಟ್ಟಿದೆ ಕೆರೆಗೆ ಸುಡು ಸುಡು ಸಾಂಬಾರು ಸುರಿದು ಹೋದ. ವಿವಿಧ ತರಕಾರಿ, ಬೆಳೆ ಮತ್ತು ಮಸಾಲೆಗಳಿಂದ ಮಾಡಿದ ಘಮ ಘಮ ಸಾಂಬಾರಿನ ಜೊತೆಗೆ ಅನ್ನವನ್ನು ಹದವಾಗಿ ಕಲಸಿ ಸವಿದು ತೃಪ್ತವಾದ ಅಂತರಾತ್ಮ ಗೊತ್ತಿಲ್ಲದೆ ಅಡಿಗೆ ಮಾಡಿದವನ ಕುಶಲತೆಗೆ ಹೃದಯಪೂರ್ವಕ ಧನ್ಯವಾದ ಸಲ್ಲಿಸಿತು. ಆಯಿತು, ಎಲ್ಲ ಸುತ್ತುಗಳು ಮುಗಿದಿದ್ದು, ನೀರು ಕುಡಿದು ಕೈ ತೊಳೆಯಲು ಹೋಗೋಣ ಎಂದು ಕುಂತ ಜಾಗದಿಂದ ಇನ್ನೇನು ಏಳಬೇಕು ಅಷ್ಟರಲ್ಲಿ, ಅನ್ನದ ಬಕೇಟು ಹಿಡಿದು ಅದೇ ವ್ಯಕ್ತಿ ಮತ್ತೆ ಬಂದು, ಇನ್ನು ಊಟ ಮುಗಿದಿಲ್ಲ ಸರ್, ಇಕೊ ತೊಗೊಳ್ಳಿ ರಸಂ ಜೊತೆ ಇನ್ನೊಂದು ಚಮಚ ಅನ್ನ ಎಂದು ಮತ್ತೆ ಒಂದು ಚಮಚ ಅನ್ನ ನೀಡಿದ. ಊಟ ಇನ್ನು ಮುಗಿದಿಲ್ಲವಾ, ಆದರೆ ನನ್ನ ಹೊಟ್ಟೆಯಲ್ಲಿ ಜಾಗ ಇಲ್ಲ ಕಣಪ್ಪೋ, ಆಮೇಲೆ ಇದೇನಿದು ರಸಮ್ಮು, ಆಗ್ಲೇ ಸಾಂಬಾರ್ ಜೊತೆ ಅನ್ನ ತಿಂದಾಯಿತಲ್ಲ ಎಂದೇ. ಸರ್, ಅದು ಸಾಂಬಾರ್ ಜೊತೆ, ಈಗ ಇದು ರಸಮ್ಮ್ ಜೊತೆ. ಯಾಕಿಷ್ಟು ಅವಸರ ಪಡುತ್ತಿದ್ದೀರಿ, ಆರಾಮಾಗಿ ಕೂತು ನಿದಾನಕ್ಕೆ ಊಟಮಾಡಿ ಅಂದು ಹೋದ. ಇವನ ಬೆನ್ನ ಹಿಂದೆ ಬಂದವನು ಸುರಿದ ಒಂದು ಸೌಟು ರಸಮ್ಮ್ ನೋಡಿದಮೇಲೆ ಗೊತ್ತಾಯಿತು ಈ ರಸಮ್ಮ್ ಅಂದರೆ ನಮ್ಮ ಭಾಗದಲ್ಲಿ ಮಾಡುವ ತಿಳಿ ಸಾರಿನ ಸಹೋದರ ಎಂದು. ಸಾಕಪ್ಪ ಸಾಕು, ಹೊಟ್ಟೆ ತುಂಬೋಯಿತು, ಇನ್ನು ಜಾಗವಿಲ್ಲ ಅಂತ ಏಳುವಷ್ಟರಲ್ಲಿ ಮತ್ತೊಬ್ಬ ಬಂದು ಒಂದು ಚಮಚ ಮೊಸರನ್ನ ಇಕ್ಕಬೇಕೆ! ಸಿಟ್ಟು ನೆತ್ತಿಗೇರಿ, ಅವನನ್ನು ವಾಪಾಸ್ ಕರೆದು,  ಏನೈಯ್ಯಾ ಒಬ್ಬರಾದಮೇಲೆ ಒಬ್ಬರು ಬಂದು ಸಾಂಬಾರ್ ಜೊತೆ, ರಸಮ್ಮ್ ಜೊತೆ ಆಮೇಲೆ ಈಗ ಮೊಸರಿನ ಜೊತೆ ಅಂತ ಅನ್ನವನ್ನ ಸುರಿದೆ ಸುರಿಯುತ್ತಿದ್ದಿರಾ, ನೀವೇನು ನನ್ನ ಹೊಟ್ಟೆ ಒಡೆಯಬೇಕೆಂದಿದ್ದೀರಾ ಹೇಗೆ ಎಂದು ಗದರಿಸಿದೆ. ಸರ್, ನಿಮಗೆ ಈ ಊಟದ ಪದ್ಧತಿ ಹೊಸದು ಎನಿಸುತ್ತದೆ, ಆದರೆ ಊಟದ ಕೊನೆಗೆ ನೀವು ಮೊಸರನ್ನ ತಿನ್ನಲೇಬೇಕು, ಆಗಲೇ ಊಟ ಸಂಪೂರ್ಣವಾದಂತೆ ಅಂತ ಬುದ್ದಿ ಹೇಳಿದ. ಬೇರೆ ದಾರಿ ಇಲ್ಲದೆ ಮೊಸರನ್ನ ತಿಂದು, ನೀರು ಕುಡಿದು ಊಟ ಮುಗಿಸಿ ಕೈ ತೊಳೆಯಲು ಎದ್ದೆ. ಈಗ ಅರ್ಥವಾಗಿರಬಹುದು.  ನಾನು ಏಕೆ ಈ ಕೊನೆಯ ಸುತ್ತಿನಲ್ಲಿ ಮೂರು ಉಪಸುತ್ತುಗಳಿವೆ ಎಂದು  ಹೇಳಿದ್ದು. ಇಲ್ಲಿ ಒಂದು ಅರ್ಥಮಾಡಿಕೊಳ್ಳಬೇಕಾದ ಸಂಗತಿ, ವಾಸ್ತವವಾಗಿ ಮೊದಲೆರಡು ಸುತ್ತುಗಳು ಕೇವಲ ತಮಾಷೆಗಾಗಿ ಮತ್ತು ಊಟದ ಮುಖ್ಯ ಕೋರ್ಸ್ ಮತ್ತು ಗಮ್ಮತ್ತು ಇರುವುದು ಈ ಮೂರನೇ ಸುತ್ತಿನಲ್ಲಿಯೇ. 

ಕರ್ನಾಟಕದ ದಕ್ಷಿಣ ಭಾಗದಲ್ಲಿ, ವಾತಾವರಣಕ್ಕನುಗುಣವಾಗಿ ಮತ್ತು ನೀರಿನ ಸೌಕರ್ಯ ಇರುವುದರಿಂದ ಭತ್ತವನ್ನು ಹೆಚ್ಚಾಗಿ ಬೆಳೆಯುವುದರಿಂದ, ಈ ಭಾಗದ ಜನರು ಅನ್ನವನ್ನು ಹೆಚ್ಚಾಗಿ ಸೇವಿಸುತ್ತಾರೆ. ಆದ್ದರಿಂದ, ಅನ್ನವೇ ಇವರ ಮುಖ್ಯ ಆಹಾರ ಪದಾರ್ಥ. ಅಷ್ಟೇ ಏಕೆ, ಪಕ್ಕದ ತಮಿಳುನಾಡು ಮತ್ತು ಕೇರಳದಲ್ಲಿಯೂ ಕೂಡ ಅನ್ನವೇ ಮೂಲ ಆಹಾರ. ಈ ಪದ್ಧತಿಯಲ್ಲಿ ನನಗೆ ಅರ್ಥವಾದ ಇನ್ನೊಂದು ಸಂಗತಿ, ಸಾಂಬಾರು ಮತ್ತು ರಸಮ್, ಇವುಗಳ ಮಧ್ಯೆ ಇರುವ ವ್ಯತ್ಯಾಸ. ಸಾಂಬಾರ ಎಂದರೆ, ಕೈಗೆ ಸಿಕ್ಕ ತರಕಾರಿ, ಸೊಪ್ಪು ಎಲ್ಲವನ್ನು ಕತ್ತರಿಸಿ ಕುದಿಯುವ ಬೆಳೆಗೆ ಹಾಕಿ, ರುಚಿಗೆ ತಕ್ಕಂತೆ ಸಾಂಬಾರು ಪುಡಿ, ಖಾರ, ಉಪ್ಪು ಮತ್ತು ಹುಳಿ ಬೆರೆಸಿ ಕೊನೆಗೆ ಒಗ್ಗರಣೆ ಹಾಕಿ ಹದವಾಗಿ ಕುದಿಸಿದ ದ್ರವರೂಪದ ಮಿಶ್ರಣ. ಹಾಗಾದರೆ ರಸಮ್ಮ್ ಏನು? ಸಾಂಬಾರಿನಿಂದ ತರಕಾರಿ ಮತ್ತು ಬೆಳೆಯನ್ನು ತೆಗೆದು, ಸ್ವಲ್ಪ ಜಾಸ್ತಿ ಹುಳಿ, ಮಸಾಲೆ ಹಾಗು ಕರಿ ಮೆಣಸಿನ ಪುಡಿಯನ್ನು ಹಾಕಿ ವಗ್ಗರಣೆ ಕೊಟ್ಟರೆ ಅದುವೇ ರಸಮ್ಮು. ಈ ರಸಮ್ಮ ಎಷ್ಟು ಖಡಕ್ ಆಗಿರುತ್ತದೆಂದರೆ, ಇದನ್ನು ಹಾಗೆ ಕುಡಿದರೆ, ನೆತ್ತಿಗೆ ಹೊಡೆಯುವುದು ಗ್ಯಾರಂಟೀ. ಅಷ್ಟೇ ಅಲ್ಲ, ಈ ರಸಮ್ಮ ನೆಗಡಿಗೆ ರಾಮಬಾಣ ಎಂದು ಕೂಡ ಹೇಳುತ್ತಾರೆ. ಇನ್ನು ಕೊನೆಗೆ ಮೊಸರನ್ನ ಅಥವಾ ಮಜ್ಜಿಗೆ ಅನ್ನ ತಿನ್ನುವ ಪ್ರಕ್ರಿಯೆಯ ಹಿಂದೆ ವೈಜ್ಞಾನಿಕ ಕಾರಣ ಬೇರೆ ಇದೆಯಂತೆ. ಮುಂಚಿನ ಸುತ್ತಿನಲ್ಲಿ ತಿಂದ ಪದಾರ್ಥಗಳಿಂದ ಬಾಯಿ ಮತ್ತು ಗಂಟಲಿಗೆ ಒರಗಿಕೊಂಡಿರುವ ಎಣ್ಣೆಯ ಪದರಿನಿಂದ ಗಂಟಲು ಬಿಗಿದು, ಕೆಮ್ಮಿಗೆ ಆಹ್ವಾನ ಕೊಡುವ ಸಾಧ್ಯತೆ ಇರುವುದರಿಂದ, ಈ ಮೊಸರು ಅಥವಾ ಮಜ್ಜಿಗೆ ಅನ್ನ ತಿಂದರೆ ಆ ಎಣ್ಣೆಯ ಪದರು ತೊಳೆದುಕೊಂಡು ಹೊಟ್ಟೆಗೆ ಸೇರಿ, ಗಂಟಲು ಹಿಡಿಯುವ ಹಾಗು ಕೆಮ್ಮಿನ ತೊಂದರೆ ಬರುವುದಿಲ್ಲ ಎಂಬುದು ನಂಬಿಕೆ.     

ಇತ್ತೀಚಿಗೆ, ಉತ್ತರ ಭಾರತೀಯ ಸಂಸ್ಕೃತಿಯ ಪ್ರಭಾವದಿಂದ ಎಲ್ಲ ಸಭೆ ಸಮಾರಂಭಗಳಲ್ಲಿ, ಊಟವಾದಮೇಲೆ ಡೆಸರ್ಟ್ ಅಥವಾ ಸಿಹಿ ತಿನ್ನುವ ಪದ್ಧತಿ ಜಾರಿಯಲ್ಲಿದ್ದು, ಊಟ ಮಾಡಿದವರಿಗೆಲ್ಲ ಜಾಮೂನು, ರಸಗುಲ್ಲ, ಐಸ್ ಕ್ರೀಮು ಮತ್ತು ಹಣ್ಣುಗಳ ಸಲಾಡ್ನಂತಹ ಸಿಹಿ ಪದಾರ್ಥಗಳ ಸೇವೆ ನಡೆಯುತ್ತದೆ. ನನಗೆ ಸಿಹಿ ಅಂದರೆ ಅಲರ್ಜಿ, ಆದ್ದರಿಂದ ಸ್ವಲ್ಪ ಸಲಾಡ್ ತಿಂದು ಉಳಿದ ಪದಾರ್ಥಗಳಿಗೆ ಕ್ಷಮಿಸಿ ಎಂದು ಕೈಮುಗಿಯುತ್ತೇನೆ. ಇದೆಲ್ಲ ಆದಮೇಲೆ, ಕಾರ್ಯಕ್ರಮಕ್ಕೆ ಆಮಂತ್ರಿಸಿದ ಮಹಾನುಭಾವರನ್ನು ಆ ಗದ್ದಲಲ್ಲಿ ಹುಡುಕಿ, ಊಟ ತುಂಬಾ ಚೆನ್ನಾಗಿತ್ತು, ಎಲ್ಲವು ಸುಸೂತ್ರವಾಗಿ ನಡೆಯಿತು ಎಂದೆಲ್ಲ ಹೊಗಳಿ, ಮುಂದೆ ಮತ್ತೆ ಈ ತರಹದ ಸಮಾರಂಭಗಳು ನಡೆದರೆ ಕರೆಯುವುದು ಮರೆಯಬೇಡಿ ಎಂಬ ಮನದಾಳದ ಇಚ್ಛೆಯನ್ನು ಪರೋಕ್ಷವಾಗಿ ತಿಳಿಸಿ, ಸಾಯೋನಾರಾ ಹೇಳಿ ಹೋರಡುತ್ತಿರಿ. ಹೋಗುವ ಮುಂಚೆ ಸಮಾರಂಭ ನಡೆದ ಹಾಲಿನ ಮುಖ್ಯ ದ್ವಾರದಲ್ಲಿ ಇನ್ನೊಂದು ಆಶ್ಚರ್ಯ ಕಾದಿರುತ್ತದೆ. ಅಲ್ಲಿ ನಿಂತ ಕೆಲವು ಹರೆಯದ ಹುಡುಗ ಹುಡುಗಿಯರು ನಿಮ್ಮ ಕೈಗೊಂದು ಚಿಕ್ಕ್ ಚೀಲವಿಡುತ್ತಾರೆ. ಆ ಚೀಲ ತೆಗೆದು ನೋಡಿದರೆ ಅದರಲ್ಲಿ ಒಂದು ಸುಲಿದ ತೆಂಗಿನಕಾಯಿ, ಎರಡು ವೀಳ್ಯದೆಲೆಗಳು, ಬಾಳೆಹಣ್ಣು ಮತ್ತು ಒಂದು ಮಸಾಲೆ ಪಾನ್ ಇರುತ್ತವೆ. ಎಡಗೈಯಿಂದ ಈ ಚೀಲ ಹಿಡಿದುಕೊಂಡು, ಬಲಗೈಯಿಂದ ಹೊಟ್ಟೆಯ ಮೇಲೆ ಕೈ ಸವರುತ್ತ, ಬಾಯಲ್ಲಿ ಚೀಲದಲ್ಲಿದ್ದ ಆ ಮಸಾಲೆ ಪಾನ್ ಚಪ್ಪರಿಸುತ್ತ ಮನೆಯಕಡೆಗೆ ನಡೆದರೆ ಈ ಬಾಳೆ ಎಲೆಯ ಊಟದ ಕಥೆ ಮುಗಿದಂತೆ. 

ಈ ಲೇಖನ ಮುಗಿಸುವುದಕ್ಕಿಂತ ಮುಂಚೆ ನಮ್ಮ ಉತ್ತರ ಕರ್ನಾಟಕ ಭಾಗದ ಸಭೆ ಸಮಾರಂಭಗಳಲ್ಲಿನ ಊಟದ ಶೈಲಿಯ ಕಿರುಪರಿಚಯ ನೀಡದಿದ್ದರೆ ಕಥೆ ಪೂರ್ಣ ಗೊಂಡಂತೆ ಅನಿಸುವುದಿಲ್ಲ. ನಮ್ಮ ಭಾಗದಲ್ಲಿ ನಾನು ಚಿಕ್ಕವನಿದ್ದಾಗಿನ ನೆನಪು, ಎಲ್ಲ ಸಭೆ ಸಮಾರಂಭಗಳಲ್ಲಿ, ಉದ್ದನೆಯ ಚಾಪೆ ಅಥವಾ ಊಟದ ಪಟ್ಟಿ, ಅದು ಇಲ್ಲವೆಂದರೆ ಮನೆಯಲ್ಲಿನ ಹಳೆಯ ಸೀರೆಗಳನ್ನೂ ನೆಲದ ಮೇಲೆ ಹಾಸಿ, ಬಂದ ಅತಿಥಿಗಳನ್ನು ಸಾಲಾಗಿ ಪಂಕ್ತಿಯಲ್ಲಿ ಕೂಡಿಸಿ, ಬಾಳೆಯ ಇಲ್ಲ ಪತ್ರಾವಳಿ ಎಲೆಯಿಂದ ಮಾಡಿದ ಪ್ಲೇಟುಗಳ ಮೇಲೆ ಊಟ ಬಡಿಸುತ್ತಿದ್ದರು. ಕಾಲ ಕಳೆದಂತೆ, ಆಧುನಿಕ ಜೀವನಶೈಲಿಗೆ ಅಡಿಯಾಳಾಗಿ, ಈಗೆಲ್ಲ ಹೆಚ್ಚಾಗಿ ಬಫೆ ಪದ್ದತಿಯಂತೆ ಊಟಬಡಿಸುವ ಪ್ರಕ್ರಿಯೆಯನ್ನು ಅಳವಡಿಸಿಕೊಂಡಿದ್ದಾರೆ. ಪ್ರಾರಂಭದಲ್ಲಿ, ಇದನ್ನೂ ಜೈಲಿನಲ್ಲಿ ಕೈದಿಗಳಿಗೆ ನೀಡುವ ಊಟದ ಪದ್ಧತಿಯಂತಿದೆ ಎಂದು ವ್ಯಂಗ್ಯ ಮಾಡುವವರು ಕೂಡ ಈಗ ಇದೆ ಪದ್ಧತಿ ಇರಲಿ ಎಂದು ತಮ್ಮನ್ನು ತಾವು ಬದಲಾಯಿಸಿಕೊಂಡಿದ್ದಾರೆ. ಈ ಪದ್ಧತಿಯ ಒಂದು ಅನುಕೂಲವೇನೆಂದರೆ, ಕಡಿಮೆ ಜಾಗದಲ್ಲಿ ನೂರಾರು ಜನಕ್ಕೆ ಒಮ್ಮೆಲೇ ಊಟ ಬಡಿಸಬಹುದು. ಆಮೇಲೆ, ಪ್ಲೇಟಿನಲ್ಲಿ ಊಟ ಬಡಿಸಿಕೊಂಡಮೇಲೆ, ಎಲ್ಲೆಂದರಲ್ಲಿ ನಿಂತು ತಿನ್ನಬಹುದು ಮತ್ತು ವಯಸ್ಸಾದವರಿಗಾಗಿ ಒಂದು ಜಾಗದಲ್ಲಿ ಚೇರಿನ ವ್ಯವಸ್ಥೆ ಮಾಡಿರುತ್ತಾರೆ. ಮೊದಲೆಲ್ಲ ಮನೆಯವರು ಇಲ್ಲ ಸ್ನೇಹಿತರು ಊಟಬಡಿಸುವ ಮತ್ತು ಓಡಾಡುವ ಕೆಲಸಕ್ಕೆ ನಿಲ್ಲುತಿದ್ದರು. ಈಗ ಇದರಲ್ಲಿನೂ ಕೇಟರಿಂಗ್ ವ್ಯವಸ್ಥೆ ಬಂದು ನೀವು ದುಡ್ದು ಕೊಟ್ಟರೆ ಸಾಕು, ಅವರೇ ಬಂದು ಅಡಿಗೆಮಾಡಿ, ಊಟ ಬಡಿಸಿ, ಕೊನೆಗೆ ಪಾತ್ರೆ ತೊಳೆದು, ನೀಟಾಗಿ ಕೆಲಸ ಮುಗಿಸಿ ಹೋಗುತ್ತಾರೆ. ಈ ಪದ್ಧತಿಯಲ್ಲಿ, ಉದ್ದನೆಯ ಟೇಬಲ್ಲುಗಳ ಮೇಲೆ, ಬುಟ್ಟಿಯಲ್ಲಿ ಅಡಿಗೆ ಪದಾರ್ಥಗಳನ್ನು ಸಾಲಾಗಿ ಇಟ್ಟು, ಒಂದು ಪದಾರ್ಥ ಬಡಿಸಲಿಕ್ಕೆ ಒಬ್ಬರಂತೆ ಸೌಟು ಹಿಡಿದು ನಿಲ್ಲುತ್ತಾರೆ. ಆಮಂತ್ರಿತರು, ಸಾಲಿನಲ್ಲಿ ನಿಂತು ಒಬ್ಬಬ್ಬರಾಗಿ ಕೈಯಲ್ಲಿ ಸ್ಟೀಲಿನ ಪ್ಲೇಟು ಹಿಡಿದು, ಒಂದೊಂದು ಪದಾರ್ಥಗಳನ್ನು ಬಡಿಸಿಕೊಂಡು ಊಟ ಮಾಡುತ್ತಾರೆ. ನಮ್ಮಲ್ಲಿಯೂ ಕೂಡ ಮೂರು ಸುತ್ತಿನ ಊಟ ಬಡಿಸುವ ಪ್ರಕ್ರಿಯೆ ಜಾರಿಯಲ್ಲಿತ್ತು, ಆದರೆ ಈ ಬಫೆ ಸಿಸ್ಟಮ್ ಬಂದಮೇಲೆ ಎರಡೇ ಸುತ್ತಿನಲ್ಲಿ ಊಟ ಮುಗಿಯುತ್ತದೆ. ಮೊದಲ ಸುತ್ತಿನಲ್ಲಿ ಚಪಾತಿ, ಎರಡು ತರಹದ ಪಲ್ಯ (ಅದರಲ್ಲಿ ಒಂದು ಪಲ್ಯ ಕಾಯಂ ಬದನೆಕಾಯಿಯದ್ದು), ಮೊಸರು, ಶೇಂಗಾ ಹಿಂಡಿ ಇಲ್ಲ ಕೆಂಪು ಮೆಣಸಿನಕಾಯಿ ಚಟ್ನಿ ಇದ್ದು, ಇದೆ ಮೊದಲ ಸುತ್ತು.  ಇನ್ನು ಕೆಲವು  ಕುಟುಂಬಗಳಲ್ಲಿ, ಚಪಾತಿಯ ಜೊತೆಗೆ, ಉತ್ತರ ಕರ್ನಾಟಕದ ಸಂಸ್ಕೃತಿಯ ದ್ಯೋತಕವಾದ ಖಡಕ್ ಜೋಳದ ಅಥವಾ ಸಜ್ಜಿಯ ತೊಟ್ಟಿಯ ತುಣುಕುಗಳನ್ನು ನೀಡುತ್ತಾರೆ. ಅಕಸ್ಮಾತ್, ಸಮಾರಂಭಗಳು ಬೇಸಿಗೆಯಲ್ಲಿದ್ದರೆ, ಆ ಬಿಸಿಲೀನ ಧಗೆಯಲ್ಲಿ ಬೆವರು ಸುರಿಸುತ್ತ, ಖಾರವಾದ ಪಲ್ಯ, ಚಟ್ನಿಗಳನ್ನು ಚಪಾತಿ ಅಥವಾ ರೊಟ್ಟಿಯೊಂದಿಗೆ ತಿನ್ನುವವ ಮಜವೇ ಬೇರೆ. ನಮ್ಮ ಭಾಗದಲ್ಲಿ ಜೋಳ ಮತ್ತು ಗೋದಿ ಜಾಸ್ತಿ ಬೆಳೆಯುವುದರಿಂದ ರೊಟ್ಟಿ ಅಥವಾ ಚಪಾತಿಯೇ ನಮ್ಮ ಊಟದಲ್ಲಿ ಮುಖ್ಯ ಪದಾರ್ಥವಾಗಿರುತ್ತದೆ. ಎರಡನೇ ಸುತ್ತು, ಸಿಹಿ ಪದಾರ್ಥಗಳ ಸುತ್ತು. ಮುಂಚೆ ಎಲ್ಲ, ಎರಡನೇ ಸುತ್ತಿನಲ್ಲಿ ಗೋದಿ ಹುಗ್ಗಿ (ಪಾಯಸ) ಅಥವಾ ಕೇಸರಿ ಬಾತು ಸಾಮಾನ್ಯವಾಗಿದ್ದು, ಹುಗ್ಗಿ ತಿನ್ನುವ ಸವಾಲು ಸ್ಪರ್ಧೆಗಳು ನಡೆಯುತ್ತಿದ್ದವು. ಈಗ ಸ್ವೀಟ್ ಮಾರ್ಟ್ಗಳಲ್ಲಿ ಸಿಗುವ ಬುಂದಿ, ಮೋತಿಚುರ್ ಲಡ್ಡು ಅಥವಾ ಜಿಲೇಬಿಗಳನ್ನು ತಂದು ಬಡಿಸುತ್ತಾರೆ. ಕೊನೆಯದಾಗಿ, ಮೂರನೆಯ ಸುತ್ತು ಒಂದೆರಡು ಚಮಚೆ ಅನ್ನ ಮತ್ತು ಬೆಳೆಯ ಇಲ್ಲ ಬೆಳೆ ಕಟ್ಟಿನಿಂದ ಮಾಡಿದ ಖಡಕ್ ಮಸಾಲೆ ಸಾರು ಬಡಿಸುತ್ತಾರೆ. ಈ ಕಟ್ಟಿನ ಸಾರು ಅದೆಷ್ಟು ಖಡಕ್ ಆಗಿರುತ್ತದೆಂದರೆ, ಸಾರಿಗೆ ಕೈಬಿಚ್ಚಿ ಮಸಾಲೆ ಸುರಿದು ಅದರ ಮೇಲೆ ಅರ್ಧ ಇಂಚು ಎಣ್ಣೆ ತೇಲಬೇಕು, ಅಂದರೆನೇ ಅದು ಪಕ್ಕಾ ಕಟ್ಟಿನ ಸಾರು ಎನಿಸಿಕೊಳ್ಳುತ್ತದೆ. ಇಲ್ಲಿ ಇನ್ನೊಂದು ಸಂಗತಿ ಏನೆಂದರೆ, ಸಮಾರಂಭ, ಅತಿಥಿ ಸತ್ಕಾರ ಅದೆಷ್ಟೇ ವಿಜೃಂಭಣೆಯಿಂದ ಮಾಡಲಿ, ಅಡಿಗೆಯ ಎಲ್ಲ ಪದಾರ್ಥಗಳು ಎಷ್ಟೇ ರುಚಿಕರವಾಗಿರಲಿ, ಆದರೆ ಅಕಸ್ಮಾತ್ ಈ ಕೊನೆಯ ಸುತ್ತಿನ ಸಾರಿನ ರುಚಿಯಲ್ಲಿ ಏನಾದರು ಹೇರು-ಪೆರು ಆದರೆ, ಮುಗಿಯಿತು, ಬಂದವರೆಲ್ಲ ಅಡಿಗೆ ಮಾಡಿದವನನ್ನು ಮತ್ತು ಸಮಾರಂಭದ ಹಿರಿತನ ವಹಿಸಿಕೊಂಡ ಮಹಾನುಭಾವರನ್ನು ಆಡಿಕೊಳ್ಳದೆ ಮನೆಗೆ ಹೋಗುವುದಿಲ್ಲ. ಅದೃಷ್ಟವಶಾತ್ ಸಾರು ರುಚಿಯಾಗಿದ್ದರೆ, ಅವರನ್ನು ಹೊಗಳಿ ಹೊಗಳಿ ಹೊನ್ನ ಶೂಲಕ್ಕೇರಿಸಿ ಮನೆಗೆ ತೆರಳುತ್ತಾರೆ. 

ನಮ್ಮದು ವಿವಿಧತೆಗಳಿಂದ ಕೂಡಿದ ದೇಶವಾಗಿದ್ದು, ಪ್ರತಿ ಊರು, ಜಿಲ್ಲೆ ಮತ್ತು ರಾಜ್ಯಗಳಲ್ಲಿ ತಮ್ಮದೇ ಆದ ಆಚಾರ,, ವಿಚಾರ, ಭಾಷಾ ಶೈಲಿ, ಉಡುಗೆ-ತೊಡುಗೆ ಮತ್ತು ಊಟದ ಪದ್ದತಿಗಳು ಆಚರಣೆಯಲ್ಲಿವೆ. ಉತ್ತರ ಭಾರತೀಯರದು ಒಂದು ಸಂಸ್ಕೃತಿಯಾದರೆ, ದಕ್ಷಿಣ ಭಾರತೀಯರದು ಇನ್ನೊಂದು ಸಂಸ್ಕೃತಿ. ನಮ್ಮ ಕರ್ನಾಟಕದ ವಿಷಯಕ್ಕೆ ಬಂದರೆ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ, ಹೀಗೆ ಪ್ರತಿಯೊಂದು ಪ್ರಾಂತ್ಯದಲ್ಲಿ ಒಂದು ವಿವಿಧತೆಯಿದೆ. ಇದರಲ್ಲಿ ನನ್ನದು ಶ್ರೇಷ್ಠ ಅವರದು ಕೀಳು ಎಂಬ ತರ್ಕಕ್ಕೆ ಅವಕಾಶವಿಲ್ಲ, ಏಕೆಂದರೆ ಪ್ರತಿಯೊಂದು ಆಚರಣೆಗೂ ಅದರ ಹಿಂದೆ ಒಂದು ಅರ್ಥ ಮತ್ತು ಇತಿಹಾಸವಿದೆ. ಆದ್ದರಿಂದ ಪ್ರತಿಯೊಂದುನ್ನು ಗೌರವಿಸಲೇಬೇಕು. ನೀವು ಉತ್ತರ ಕರ್ನಾಟಕದವರಾಗಿದ್ದರೆ, ದಕ್ಷಿಣ ಭಾಗದ ಯಾರಾದರು  ಸ್ನೇಹಿತರು ಅಥವಾ ನೆಂಟರಿಂದ ಆಮಂತ್ರಣ ಬಂದಿದ್ದರೆ ದಯವಿಟ್ಟು ಹೋಗಿ, ಬಾಳೆಯ ಎಲೆಯ ಊಟದ ಪದ್ಧತಿಯನ್ನು ನೋಡಿ ಅನುಭವಿಸಿ ಬನ್ನಿ. ಅದೇ ರೀತಿ ನೀವು ದಕ್ಷಿಣ ಕರ್ನಾಟಕದವರಾಗಿದ್ದರೆ, ನಮ್ಮ ಭಾಗದ ಸಭೆ ಸಮಾರಂಭಗಳಿಗೆ ಹೋಗಿ ಅಲ್ಲಿನ ಭಾಷಾ ಶೈಲಿ, ಸಂಸ್ಕೃತಿ ಮತ್ತು ಊಟದ ಪದ್ಧತಿಗಳನ್ನು ನೋಡಿಕೊಂಡು ಬನ್ನಿ. ಕೋಶ ಓದಬೇಕು, ದೇಶ ಸುತ್ತಬೇಕು ಅಂತ ಹಿರಿಯರು ಹೇಳಿದಂತೆ, ಬದುಕಿನ ಓಡಾಟದಲ್ಲಿ ನೀವು ಎಷ್ಟು ಸುತ್ತುತ್ತಿರೋ ಅಷ್ಟು ಹೊಸ ಜಾಗಗಳ, ಸಂಸ್ಕೃತಿಯ ಅನುಭವದ ಭಂಡಾರ ಬೆಳೆದಂತೆ, ಜೀವನ ಪರಿಪೂರ್ಣತೆಯತ್ತ ಸಾಗುತ್ತದೆ ಎಂದು ಹೇಳುತ್ತಾ ನನ್ನ ಈ ಲೇಖನವನ್ನು ಮುಗಿಸುತ್ತೇನೆ. ಓದಿದಮೇಲೆ ನಿಮ್ಮ ಅಭಿಪ್ರಾಯ ತಿಳಿಸಿರಿ........ 
 

ಶನಿವಾರ, ಜೂನ್ 12, 2021

ಪದಗಳನ್ನು ಪೋಣಿಸಿ ಓಲೆಯೊಂದ ಬರೆಯುವೆನು....

ನಿನ್ನೆ ಟ್ವಿಟ್ಟರ್ ನಲ್ಲಿ ಸ್ನೇಹಿತರೊಬ್ಬರು ಅಂತರ್ದೇಶೀಯ ಪತ್ರದ (Inland Letter) ಫೋಟೋ ಒಂದನ್ನು ಹಂಚಿಕೊಂಡು, ಇದು ನಿಮಗೆ ನೆನಪಿದೆಯೇ? ಎಂಬ ಪ್ರಶ್ನೆ ಹಾಕಿದ್ದರು. ಈ ಫೋಟೋ ನೋಡಿದಮೇಲೆ ಗತಿಸಿಹೋದ ನೆನಪುಗಳ ದಿನಗಳತ್ತ ಗೊತ್ತಿಲ್ಲದೆ ಜಾರಿಕೊಂಡಿತು ಮನಸು.....

ಮೊಬೈಲ್, ಸ್ಮಾರ್ಟ್ ಫೋನ್, ಈ-ಮೇಲ್, ವಾಟ್ಸ್ಯಾಪ್ಪ್ಗಳೆಂಬ ಸಂಪರ್ಕ ಮಾಧ್ಯಮಗಳ ಮುಖಾಂತರ ಬಂದು-ಬಳಗ, ಸ್ನೇಹಿತರೊಂದಿಗೆ ಸಂಪರ್ಕದಲ್ಲಿಟ್ಟುಕೊಳ್ಳುವುದು ಇಂದಿನ ಆದುನಿಕ ಕಾಲದ ವಿಶೇಷತೆಯಾದರೆ, ಈ ಎಲ್ಲ ಮಾಧ್ಯಮಗಳ ಪರಿಚಯವೇ ಇಲ್ಲದ, ಕೇವಲ ಹದಿನೈದು ಪೈಸೆಗೆ ಬರುವ ಹಳದಿ ಬಣ್ಣದ ಅಂಚೆ ಕಾರ್ಡು ಅಥವಾ ಎಪ್ಪತೈದು ಪೈಸೆಯ ತಿಳಿ ನೀಲಿ ಬಣ್ಣದ ಅಂತರ್ದೇಶೀಯ ಪತ್ರ, ಇವುಗಳ ಮೂಲಕವೆ ಎಲ್ಲ ಸಂಪರ್ಕ, ವ್ಯವಹಾರಗಳು ನಡೆಯುತ್ತಿದ್ದುದು ಆ ಕಾಲದ ವೈಶಿಷ್ಟ್ಯವಾಗಿತ್ತು. ಹೆಚ್ಚು ಕಡಿಮೆ ತೊಂಬತ್ತರ ದಶಕದ ನಂತರದ ಯುವ ಪೀಳಿಗೆಗೆ ಈ ಸಂಪರ್ಕ ಮಾಧ್ಯಮದ ಬಳಕೆ ಕಡಿಮೆ ಆಗುತ್ತಾ ಹೋಯಿತು... 

ನಾನು ಮೊಟ್ಟಮೊದಲು ಪತ್ರ ಬರೆದದ್ದು ನನ್ನ ತಾತನಿಗೆ. ನಮ್ಮ ತಂದೆಯವರು ಮುಂದೆ ಕೂತು, ಹೇಗೆ ಬರೆಯುವುದೆಂದು ಹೇಳಿಕೊಟ್ಟು, ಬರೆಸಿದ್ದರು. ಅದು ದಸರಾ ಹಬ್ಬದ ಪ್ರಯುಕ್ತ, ಅಂತರ್ದೇಶೀಯ ಪತ್ರದ ಒಳಗೆ, ಎರಡು ಎಲೆ ಬನ್ನಿ ದಳಗಳನ್ನು ಇಟ್ಟು ಬರೆದ ದಸರಾ ಹಬ್ಬದ ಶುಭಾಶಯ ಪತ್ರ. ಆಗ ಆಕಾಶವಾಣಿ ಧಾರವಾಡ ಕೇಂದ್ರದಲ್ಲಿ ಪ್ರತಿ ರವಿವಾರ ನಡೆಯುವ "ಗಿಳಿವಿಂಡು" ಕಾರ್ಯಕ್ರಮಕ್ಕೆ ನಾನು, ತಮ್ಮ, ತಂಗಿ ಎಲ್ಲರು ಅಂಚೆ ಕಾರ್ಡಿನಲ್ಲಿ, ಚಿತ್ರಬರೆದು ಕಳುಹಿಸಿದ ನೆನಪು ಇನ್ನು ಹಸಿರಾಗಿದೆ.  ನಂತರ ಧಾರವಾಡದಲ್ಲಿ ನಾನು ಪಿಯುಸಿ ಕಲಿಯುತ್ತಿದ್ದಾಗ, ನನ್ನ ಊರಲ್ಲಿರುವ ಮನೆಯವರೊಂದಿಗೆ ಪತ್ರಗಳ ಮೂಲಕ ಸಂಪರ್ಕಿಸುತ್ತಿದ್ದೆ. ನಾನು ತಿಂಗಳಿಗೆ ಒಂದು ಸಲ, ನನ್ನ ಕಾಲೇಜು, ಧಾರವಾಡದಲ್ಲಿನ ಜೀವನದ, ಸಿಟಿ ಬಸ್ಸಿನಲ್ಲಿ ಪ್ರಯಾಣದ ಅನುಭವ, ಖಾನಾವಳಿಗಳಲ್ಲಿ ಊಟ, ಹೊಸ ವಿಷಯಗ ಅನುಭವ, ಹೀಗೆ ಅನೇಕ ವಿಷಯಗಳನ್ನು ಪತ್ರದಲ್ಲಿ ಹಂಚಿಕೊಳ್ಳುತಿದ್ದೆ. ಮನೆಯಲ್ಲಿ ಎಲ್ಲರು ನನ್ನ ಪತ್ರ ಬರುವಿಕೆಗಾಗಿ ಕಾಯುತಿದ್ದರಂತೆ. ಆಮೇಲೆ ದಿನಗಳು ಕಳೆದಂತೆ, ಎಸ್ಟಿಡಿ ಮತ್ತು ಮೊಬೈಲ್ ಫೋನುಗಳು ಬಂದವು, ಕಾರಣ ಈ ಪತ್ರಗಳನ್ನು ಬಿಟ್ಟು, ಫೋನಿನ ಮೂಲಕವೇ ಸಂಪರ್ಕ ಮುಂದುವರಿಯುತು......   
 
"ಪೂಜ್ಯ ....... ಅವರಿಗೆ,
ನಿಮ್ಮ ........ ಮಾಡುವ ಶಿ. ಸಾ. ನಮಸ್ಕಾರಗಳು.
ಇತ್ತಕಡೆ ಎಲ್ಲ ಕ್ಷೇಮ, ತಮ್ಮ ಕ್ಷೇಮದ ಬಗ್ಗೆ ತಿಳಿಸಿರಿ....
ತರುವಾಯ ಪತ್ರ ಬರೆಯಲು ಕಾರಣ.......................
............................................................................................
...........................................................................................
ಪತ್ರ ಮುಟ್ಟಿದ ತಕ್ಷಣ ಉತ್ತರ ಬರೆಯಿರಿ ಮತ್ತು ನಿಮ್ಮ ವಿಚಾರ ತಿಳಿಸಿರಿ.....
ಇಂತಿ ನಿಮ್ಮ ಆತ್ಮೀಯ,
............."

ಹೀಗೆ, ಪದಗಳನ್ನು ಸಾಲುಗಳಾಗಿ ಪೋಣಿಸುತ್ತಾ, ಮೇಲಿನ ಸಾಲುಗಳಲ್ಲಿ ಹಿರಿಯರಿಗೆ ವಂದಿಸುತ್ತಾ, ಕಿರಿಯರಿಗೆ ಆಶೀರ್ವದಿಸುತ್ತ, ಕ್ಷೇಮ ವಿಚಾರದಬಗ್ಗೆ ಕೇಳುತ್ತ, ನಂತರ ಪುಟಗಟ್ಟಲೆ ವಿಷಯಗಳನ್ನು ಬರೆದು, ಕೊನೆಗೆ ಕೆಳಗಿನ ಸಾಲುಗಳಲ್ಲಿ ಧನ್ಯವಾದಗಳನ್ನು ಅರ್ಪಿಸುತ್ತ, ಒಂದು ನಿರ್ಧಿಷ್ಟ ಕ್ರಮದಲ್ಲಿ,  ಅಂಚೆಪತ್ರಗಳನ್ನು ಬರೆದು, ಕಳುಹಿಸಬೇಕಾದ ವಿಳಾಸವನ್ನು ಗೀಚಿ, ರಸ್ತೆಯ ಮೂಲೆಯಲ್ಲಿರುವ ಕೆಂಪು ಬಣ್ಣದ ಅಂಚೆ ಡಬ್ಬಿಯಲ್ಲಿ ಹಾಕಿದರಾಯಿತು. ಅದು ವಾರ ಅಥವಾ ಹತ್ತು ದಿನದಲ್ಲಿ ತಲುಪಬೇಕಾದ ವಿಳಾಸಕ್ಕೆ ಮುಟ್ಟಿಯೆ ತೀರುತ್ತದೆ ಎಂಬ ಆತ್ಮವಿಶ್ವಾಸವಿದ್ದ ಕಾಲವದು.


ದೂರದ ಊರಲ್ಲಿ ಓದುತ್ತಿರುವ ಮಗ ಖರ್ಚಿಗೆ ಹಣ ಬೇಕೆಂದು ಅಪ್ಪನಿಗೆ ಕೇಳುವ ಕೋರಿಕೆಯ ಪತ್ರ....
ಹಬ್ಬಕ್ಕೆ ಮಗಳನ್ನು ತವರಿಗೆ ಕಳುಹಿಸಿಕೊಡಿ ಎಂದು ಅಳಿಯನಿಗೆ ಮಾವ ಬರೆಯುವ ವಿನಂತಿ ಪತ್ರ.....  
ತವರಿಗೆ ಹೋದ ಹೆಂಡತಿ ಬೇಗ ಬರದಿದ್ದಾಗ ಗಂಡ ಬರೆದ ಸಿಟ್ಟಿನ ಪತ್ರ......  
ಮೊಮ್ಮಕ್ಕಳ ಕುಶಲೋಪರಿಯನ್ನು ವಿಚಾರಿಸಲು ತಾತ ಬರೆದ ಅಕ್ಕರೆಯ ಪತ್ರ......  
ಕೆಲಸದ ನಿಮಿತ್ತ್ಯ ಊರಿಗೆ ಹೋದ ಗಂಡ, ಹೆಂಡತಿ ಮಕ್ಕಳನ್ನು ನೆನೆದು ಬರೆದ ಭಾವಭರಿತ ಪತ್ರ...... ಪ್ರೇಯಸಿಗೆ ಪ್ರಿಯತಮನು ಬರೆದ ಪ್ರೇಮ ಪತ್ರ.....   
ನಿಮ್ಮ ಹುಡುಗಿ ನಮಗೆ ಇಷ್ಟವಾಗಿದೆ ಮಾತುಕತೆ ಮುಗಿಸೋಣ ಎಂದು ಹುಡುಗನ ಕಡೆಯವರು ಬರೆದ ಸ್ವೀಕಾರ ಪತ್ರ......  
ನಿಮ್ಮ ರಜೆಗಳು ಮುಗಿದಿವೆ, ಬೇಗ ಬಂದು ಕೆಲಸಕ್ಕೆ ಹಾಜರಾಗಿ ಎಂದು ಬಾಸ್ ಬರೆದ ಆಜ್ಞಾಪನಾ ಪತ್ರ.....
ಹೀಗೆ, ವಿಷಯದ ಆದಾರದ ಮೇಲೆ, ಸುದ್ದಿ, ವಿಚಾರ, ಭಾವನೆಗಳನ್ನೊಳಗೊಂಡ, ವಿವಿಧ ರೀತಿಯ ಪತ್ರ ವ್ಯವಹಾರಗಳು ನಡೆಯುತ್ತಿದ್ದವು. ಸಿಹಿ-ಕಹಿ, ಸುಖ-ದುಃಖ, ನೋವು-ನಲಿವು, ಸಿಟ್ಟು-ಆಜ್ಞೆ, ಎಲ್ಲ ತರಹದ ಭಾವನೆಗಳ ಸಾರವನ್ನು ತನ್ನ ಹೃದಯದಲ್ಲಿಟ್ಟುಕೊಂಡು, ಒಬ್ಬರಿಂದ ಇನ್ನೊಬ್ಬರಿಗೆ ತಲುಪಿಸುವ ಮೇಘದೂತನ ಕೆಲಸವನ್ನು ಮಾಡುತ್ತಿದ್ದವು ಈ ಪತ್ರಗಳು.

ಖಾಕಿ ಯುನಿಫಾರ್ಮ್ ತೊಟ್ಟು, ಹೆಗಲಮೇಲಿನ ಚೀಲದಲ್ಲಿ ಪತ್ರಗಳು, ಮನಿ ಆರ್ಡರ್ಗಳು, ಪಾಕೀಟುಗಳು ಮತ್ತು ಪಾರ್ಸೆಲ್ಗಳನ್ನು ಹೊತ್ತು, ಸೈಕಲ್ ತುಳಿಯುತ್ತ ನಮ್ಮ ನಮ್ಮ ಬೀದಿಗೆ ಬರುವ ಅಂಚೆಯಣ್ಣನನ್ನು ನೋಡಿದ್ದೇ ತಡ, ಆ ಬೀದಿಯಲ್ಲಿರುವ ಮನೆಯವರೆಲ್ಲ, ನಮಗೇನಾದರು ಪತ್ರ ಬಂದಿದೆಯಾ, ಪಾರ್ಸೆಲ್ ಇದೆಯಾ, ಮನಿ ಆರ್ಡರ್ ಬಂತಾ ಅಂತ ಅವನನ್ನು ಸುತ್ತುವರಿದು ಪ್ರಶ್ನೆಗಳನ್ನು ಸುರಿದಾಗ, ಯಾರಿಗೆ ಏನು ಹೇಳಲಿ ಎಂಬ ಗೊದಲದಲ್ಲಿರುತ್ತಿದ್ದ ಅಂಚೆಯಣ್ಣ. ಅಷ್ಟೊಂದು ಕುತೂಹಲ ಮತ್ತು ಆಕರ್ಷಣೆಯನ್ನು ಸೃಸ್ಟಿಸುತಿತ್ತು ಆ ಅಂಚೆಯಣ್ಣನ ಆಗಮನ. ಪತ್ರಗಳನ್ನು ಹಂಚಿದ ಮೇಲೆ, ಓದು ಬಾರದವರಿಗೆ ಪತ್ರದಲ್ಲಿರುವ ವಿಷಯವನ್ನು ಕೆಲವೊಂದು ಸಲ ಓದಿ ಹೇಳುವ ಜವಾಬ್ದಾರಿಯು ಕೂಡ ಅಂಚೆಯಣ್ಣನ ಕೊರಳಿಗೆ ಬೀಳಿತಿತ್ತು. ಬಿಸಿಲು ಮಳೆ ಎನ್ನದೆ, ಕರ್ತವ್ಯ ನಿಷ್ಠೆಯಿಂದ, ತಲಿಪಿಸಬೇಕಾದ ಪತ್ರಗಳನ್ನು ಸಂಬಂಧಪಟ್ಟವರಿಗೆ ತಲುಪಿಸಿಯೇ ತನ್ನ ಕೆಲಸ ಮುಗಿಸಿ ಜನರ ಕಣ್ಣಲ್ಲಿ ಕರ್ಮಯೋಗಿಯಾಗಿಬಿಡುತ್ತಿದ್ದ ಆ ಅಂಚೆಯಣ್ಣ. 
 
ಈ ಕಂಪ್ಯೂಟರ್ ಯುಗದಲ್ಲಿ, ನಮ್ಮ ಎಲ್ಲ ಮಾಹಿತಿಗಳು ಪಾಸ್ವರ್ಡ್ ಪ್ರೊಟೆಕ್ಟ್ ಆಗಿದ್ದರು ಕೂಡ, ಪ್ರೈವಸಿ ವಿಚಾರದ ಬಗ್ಗೆ ಇತ್ತೀಚಿಗೆ ಅನೇಕ ವಾದ-ವಿವಾದಗಳು ನಡೆಯುತ್ತಿರುವುದು ಕಂಡುಬರುತ್ತಿದೆ. ಆದರೆ, ಎಲ್ಲವು ಓಪನ್ ಸೀಕ್ರೆಟ್ ಆಗಿರುವ ಹದಿನೈದು ಪೈಸೆಯ ಅಂಚೆ ಕಾರ್ಡಿನಲ್ಲಿ ಪತ್ರ ಬರೆಯುವಾಗ, ಯಾರಿಗೂ ಆಗ ಈ ಪ್ರೈವಸಿ ಬಗ್ಗೆ ಆತಂಕ ಕಾಡಲಿಲ್ಲ. ಬರೆದವರ ಎಲ್ಲ ವಿಷಯಗಳನ್ನು ಅಕ್ಷರಸಹಿತ ಓದಬಲ್ಲ ಈ ಓಪನ್ ಸೀಕ್ರೆಟ್ ಅಂಚೆಕಾರ್ಡುಗಳನ್ನು, ಅದರಲ್ಲಿರುವ ಒಂದು ಅಕ್ಷರವನ್ನು ಕೂಡ ಓದದೆ, ಪ್ರಾಮಾಣಿಕತೆಯಿಂದ, ತಲುಪಬೇಕಾದ ವಿಳಾಸಕ್ಕೆ ತಲುಪಿಸುವ ಜಾಯಮಾನ ಇತ್ತು ಅಂಚೆ ಇಲಾಖೆಯ ಸಿಬ್ಬಂದಿಗಳಲ್ಲಿ.
 
ಕಾಲ ಕಳೆದಂತೆ, ತಂತ್ರಜ್ಞಾನದ ಪ್ರಗತಿಗನುಗುಣವಾಗಿ, ಮನುಷ್ಯನ ಜೀವನಶೈಲಿಯಲ್ಲಾದ ಹಠಾತ್ ಬದಲಾವಣೆಗಳಿಂದ, ಎಲ್ಲವು ವೇಗವಾಗಿ ಆಗಬೇಕು ಎನ್ನುವ ಮನೋಭಾವ ಹೆಚ್ಚಾದಮೇಲೆ. ಸಮಯಕ್ಕೆ ಸರಿಯಾಗಿ ತಲುಪದ ಪತ್ರವನ್ನು ಕಾಯುವ ನೋವಿನಲ್ಲು ಸಂತಸ ಕಾಣುವ, ಕಾಯಿಸಿ ಕಾಯಿಸಿ ಕೊನೆಗೊಂದು ದಿನ ಕೈಸೇರುವ ಪತ್ರಗಳನ್ನು ಒಡೆದು ಓದುವ ಕುತೂಹಲವನ್ನು ವಿಜೃಂಭಿಸಿದ ನಾವುಗಳೆ ಇಂದು ಕೆಲವೇ ನಿಮಿಷಗಳಲ್ಲಿ ಕೈಸೇರುವ, ಭಾವರಹಿತ ನಿರರ್ಥಕ ಈ-ಮೇಲು, ವಾಟ್ಸಾಪ್ಪ್ ಮೆಸೇಜುಗಳಿಗೆ ನಮ್ಮನ್ನು ನಾನು ಅಳವಡಿಸಿಕೊಂಡಿದ್ದೇವೆ. ಹೃದಯದ ಸೂಕ್ಷ್ಮ ಸಂವೇದನೆಗಳ ಚಿತ್ತಾರ ಬಿಡಿಸುವ ಈ ಪತ್ರ ಮಾಧ್ಯಮಗಳೆಂಬ ಸ್ಮರಣೀಯ ನೆನಪುಗಳು ಇನ್ನು ಮುಂದಿನ ಪೀಳಿಗೆಗೆ ಕೇವಲ ದಂತಕಥೆಗಳಾಗಿ ಉಳಿದು ಹೋಗುವುದರಲ್ಲಿ ಎರಡುಮಾತಿಲ್ಲ.

ಭಾನುವಾರ, ಮೇ 23, 2021

ರವಿವಾರದ ರಗಳೆ : ಹೊಸ ಆವಿಷ್ಕಾರದ ಸಾಂಬಾರು.

ಮಗಳ ಬೇಸಿಗೆಯ ರಜೆಯ ನೆಪಮಾಡಿಕೊಂಡು ಮಡದಿ ಹೋಗಿಹಳು ತನ್ನ ತವರೂರಿಗೆ. ಅತ್ತ ತವರಿಗೆ ಕಳುಹಿಸಿದ ನಾಲ್ಕೆ ದಿನದಲ್ಲಿ ಇತ್ತ ಘೋಷಣೆಯಾಯಿತು ಕೋವಿಡ್ ಲಾಕ್ಡೌನ್. ವಾರ ಪೂರ್ತಿ ಕಂಪನಿಯ ಕ್ಯಾಂಟೀನು ಅನ್ನದಾತನಾದರು, ವಾರದ ಕೊನೆ ಮಾತ್ರ ನನಗೆ ನಾನೇ ಅನ್ನದಾತ. ಇಂದು ರವಿವಾರ, ಹೊರಗಡೆ ಲಾಕ್ಡೌನ್, ಅಡುಗೆ ಮಾಡದೆ ಬೇರೆ ದಾರಿ ಇಲ್ಲ. ವಿಧಿಯಿಲ್ಲದೆ ತಾಯಿ ಅನ್ನಪೂರ್ಣೇಶ್ವರಿಗೆ ನಮಿಸಿ, ಭೀಮಸೇನ-ನಳಮಹಾರಾಜರನ್ನು ನೆನೆಯುತ್ತ, ಹುಂಬು ಧೈರ್ಯದಿಂದ ನುಗ್ಗಿದೆ ಅಡುಗೆ ಮನೆಗೆ. ವೀರ ಯೋಧನಂತೆ ಕೈಯಲ್ಲಿ ಸೌಟನ್ನು ಹಿಡಿದು, ನನ್ನ ನಡುನೀರಲ್ಲಿ ಬಿಟ್ಟು ತವರಿಗೆ ಹೋದ ಮಡದಿ ಮೇಲೆ ಗೊಣಗುತ್ತಾ, ಶುರು ಹಚ್ಚಿಕೊಂಡೆ, ಈ ಕೆಳಗಿನಂತೆ ಸಾಂಬಾರು ಮಾಡಲು......


ನನ್ನ ಹೃದಯದ ಅಂಗಳದಲ್ಲಿ
ಅರಳಿನಿಂತ ಓ ಮಲ್ಲಿಗೆಯೇ
ಹೇಳದೆ ನೀ ಏಕೆ ಹೋದೆ
ಉಪ್ಪು ಖಾರ ಮಸಾಲೆ ಇಡುವ ಜಾಗವನ್ನು
ಅಲ್ಲಿ ನೀನು ಹಾಯಾಗಿರುವೆ
ನಿನ್ನ ತಾಯಿಯ ಮನೆಯಲಿ
ಇಲ್ಲಿ ಕೇಳುವರಾರು ನನ್ನ ಕಷ್ಟ-ಕಂತೆಗಳನ್ನ 
ಹುಡುಕಿ ಹುಡುಕಿ ಸೋತು ಹೋದೆ
ಉಪ್ಪು ಖಾರ ಮಸಾಲೆ ಡಬ್ಬಿಗಳನ್ನ
ಸಿಕ್ಕ ತರಕಾರಿಗಳನ್ನು ಕತ್ತರಿಸಿ ಹಾಕಿ
ಕುದಿಯಲಿಟ್ಟೆ ಬೇಳೆಯೊಂದಿಗೆ
ಫ್ರಿಡ್ಜಿನಲ್ಲಿ ಕಾಣಲಿಲ್ಲ
ಟೊಮೇಟೊ ಹುಣಸೆ ಹಣ್ಣುಗಳು
ಕೈಗೆ ಸಿಕ್ಕ ಟೊಮೇಟೊ ಸಾಸನ್ನು
ಸುರಿದು ಮಾಡಿದೆ ಹೊಸ ಪ್ರಯೋಗವನ್ನು
ಕೊನೆಗೆ ಸಿಕ್ಕಿತು ಮಸಾಲೆಗಳ ಉಗ್ರಾಣ
ಸಾಂಬಾರ್, ರಸಂ, ಬಿರಿಯಾನಿ ಮಸಾಲೆಗಳು
ಯಾವುದು ಹಾಕಲಿ ಯಾವುದು ಬಿಡಲಿ
ಸರ್ವರಿಗೂ ಕೊಡಲು ಸುವರ್ಣಾವಕಾಶ
ಹಾಕಿದೆ ಸ್ವಲ್ಪ ಸ್ವಲ್ಪ ಎಲ್ಲ ಮಸಾಲೆಗಳನ್ನು
ಕೊನೆಗೆ ಹಾಕಿದೆ ಚ್ಚೊರ್ರೆಂದು ವಗ್ಗರಣೆಯ
ಅಲಂಕಾರಗೊಳಿಸಿದೆ ಕೊತ್ತಂಬರಿ ಸೊಪ್ಪಿನ ಎಲೆಗಳಿಂದ
ಚೆನ್ನಾಗಿ ಕುದಿಯಿತು ಹೊಸ ಆವಿಷ್ಕಾರದ ಸಾಂಬಾರು
ಬಿಳಿ ಅನ್ನದ ಮೇಲೆ ಸುರಿದು ಕಲಸಿ
ರುಚಿಯ ಮೆಚ್ಚಿ ಚಪ್ಪರಿಸಿದೆ ನಾನೆ ನನ್ನ ಬೆನ್ನನ್ನು!

ಭಾನುವಾರ, ಮೇ 16, 2021

ನನ್ನ ಪೋಲೆಂಡ್ ದೇಶದ ಪ್ರಯಾಣದಲ್ಲಾದ ಆವಾಂತರ ಮತ್ತು ಅನುಭವಗಳು

ಅಂದು ಬೆಳಿಗ್ಗೆ 9-00 ಘಂಟೆ, ಅದೇ ತಾನೆ ವಿಶ್ವವಿದ್ಯಾಲಕ್ಕೆ ಬಂದು, ಇನ್ನೇನು ಸೀಟಿನಲ್ಲಿ ಕೂಡಬೇಕು ಅನ್ನುವಷ್ಟರಲ್ಲಿ ನನ್ನ ಪಿಎಚ್ ಡಿ ಸಹಪಾಠಿ ಹತ್ತಿರ ಬಂದು, ನಿನ್ನನ್ನು ಪ್ರೊಫೆಸರ್ (ನನ್ನ ಪಿಎಚ್ ಡಿ ಗೈಡ್) ಕರೀತಿದ್ದಾರೆ ಬೇಗ ಅವರ ಚೇಂಬರ್ಗೆ ಹೋಗು ಅಂದ. ಬೆಳಿಗ್ಗೆ ಬೆಳಿಗ್ಗೆ ಯಾಕಪ್ಪ ಕರೀತಿದ್ದಾರೆ, ನನ್ನ ಪ್ರಯೋಗ ಯಾವುದು ಫೇಲ್ ಆಗಿಲ್ಲ, ಮೇಲಾಗಿ ತಿಂಗಳ ರಿಪೋರ್ಟ್ ಕೂಡ ಕಳಿಸಿಯಾಗಿದೆ, ಮತ್ತೇನು ವಿಷಯ ಇರಬಹುದು ಎಂದು ಆತಂಕಕ್ಕೊಳಗಾದೆ. ಏನೇ ಇರಲಿ ವಿಚಾರಿಸೋಣ ಎಂದು ಹಗುರವಾಗಿ ಪ್ರೊಫೆಸರ್ ನಿಶಿನೊ ಅವರ ರೂಮಿನತ್ತ ಹೆಜ್ಜೆಹಾಕಿದೆ. ಪ್ರೊಫೆಸರ್ ನಿಶಿನೊ, ಇವರು ನನ್ನ ಪಿಎಚ್ ಡಿ ಗೈಡು, ತುಂಬಾ ಮುಂಗೋಪಿ, ಸ್ವಲ್ಪ ತಪ್ಪು ಏನಾದ್ರು ಆದರೆ ಸಿಕ್ಕಾಪಟ್ಟೆ ಬೈಯುತಿದ್ದರು, ಆದರೆ ತನ್ನ ವಿದ್ಯಾರ್ಥಿಗಳ ಮೇಲೆ ಅಷ್ಟೇ ಕಾಳಜಿ. ಏನೇ ಸಮಸ್ಯೆ ಬಂದರು ಸಹಾಯ ಮಾಡುತಿದ್ದರು. ಕೆಲಸದಲ್ಲಿ ಮಾತ್ರ ತುಂಬಾ ಸ್ಟ್ರಿಕ್ಟ್, ಶಿಸ್ತಿನ ಸಿಪಾಯಿ. ಬೆಳಿಗ್ಗೆ ಸರಿಯಾಗಿ 6-00 ಘಂಟೆಗೆ ತಮ್ಮ ಆಫೀಸಿನಲ್ಲಿ ಇರುತ್ತಿದ್ದರು, ಸಂಜೆ ಮನೆಗೆ ಹೋಗುವ ಸಮಯ ಮಾತ್ರ  ನಿಶ್ಚಿತವಾಗಿರುತ್ತಿರಲಿಲ್ಲ. ಏನೋ ಧೈರ್ಯಮಾಡಿ ಬಾಗಿಲಿನಿಂದ ಒಳಗೆ ಇಣುಕುತ್ತ ಒಳಗೆ ಬರಬಹುದೇ ಅಂತೆ ಕೇಳಿದೆ. ಯಾವಾಗಲು ಸಿಡಿಕು ಮುಖಹಾಕಿರುವ ನಿಶಿನೊ ಅಂದು ಮುಗುಳು ನಗುತ್ತ ಒಳಗೆ ಬರಮಾಡಿಕೊಂಡರು. ನನಗೆ ಎಲ್ಲಿಲ್ಲದ ಆಶ್ಚರ್ಯ. ಅಷ್ಟೋ ಇಷ್ಟೋ ಧೈರ್ಯ ಮಾಡಿಕೊಂಡು, ಏನ್ ಸರ್ ಕರೆದ್ರಂತೆ, ಏನು ವಿಷಯ ಅಂದೆ. ಆಗ ಹೇಳಿದ್ರು, ಪ್ರತಿವರ್ಷದಂತೆ ಈ ವರ್ಷ ಅಂತರಾಷ್ಟ್ರೀಯ ಪೆಪ್ಟೈಡ್ ಸಮಾವೇಶ ಪೋಲೆಂಡ್ ದೇಶದ ಗಡಂಸ್ಕ್ ಎಂಬ ಊರಿನಲ್ಲಿ ನಡೆಯುತ್ತಾ ಇದೆ. ನೀನಾಗಲೇ ಕಳೆದ ಎರಡು ವರ್ಷದಲ್ಲಿ ಪಿಎಚ್ ಡಿ ಕೆಲಸ ಸಾಕಷ್ಟು ಮಾಡಿದೀಯ. ಅಲ್ಲಿ ಹೋಗಿ ಮಂಡಣೆ ಮಾಡುವಷ್ಟು ನಿನ್ನ ಸಂಶೋಧನೆ ಕೆಲಸ ಆಗಿದ್ದು, ನೀನು ಅಲ್ಲಿ ಹೋಗಿ ನಿನ್ನ ಕೆಲಸವನ್ನು ಮಂಡಿಸಬಹುದು. ಅದಕ್ಕೆ ನಾನು ನಿನ್ನನ್ನು ಈ ಸಮಾವೇಶಕ್ಕೆ ಕಳಿಸುತ್ತಿದ್ದೇನೆ, ನಿನ್ನ ಜೊತೆಗೆ ನಿನ್ನ ಸಹಪಾಠಿ ಹಿರಾಶಿಮಾ ಕೂಡ ಬರುತ್ತಾನೆ, ವಿಶ್ವವಿದ್ಯಾಲಯ ಕಡೆಯಿಂದ ನಿನಗೆ 1000 ಡಾಲರ್ಸ್ ಧನಸಹಾಯ ಸಿಗುತ್ತದೆ ಅಂದ್ರು. ಅವರು ಹೇಳಿದ್ದೆಲ್ಲ ಕಿವಿಗೆ ಬೀಳ್ತಾಯಿದೆ, ಆದರೆ ಏನು ಉತ್ತರಿಸಬೇಕು ಅಂತ ಗೊತ್ತಾಗದ ಗೊಂದಲಮಯ ಸ್ಥಿತಿ. ಒಂದು ಕಡೆ ಖುಷಿ ಆಗ್ತಿದೆ, ಇನ್ನೊಂದು ಕಡೆ ವಾಸ್ತವ ನೆನೆದು ಎಲ್ಲಿ ಈ ಅವಕಾಶ ಕಳೆದುಕೊಳ್ಳುತ್ತೇನೆಯೋ ಎಂಬ ಆತಂಕ. ಮಾತು ಮುಂದುವರಿಸುತ್ತಾ, ನಿನ್ನ ಈವರೆಗಿನ ಸಂಶೋಧನಾ ಕೆಲಸದ ಸಾರಾಂಶವನ್ನು ಒಂದು ಪುಟದಷ್ಟು ಬರೆದು ನನಗೆ ಕಳುಹಿಸು, ನಾನು ಸಮಾವೇಶ ನಡೆಸುತ್ತಿರುವ ಕಮೀಟಿಗೆ ಕಳಿಸುತ್ತೇನೆ ಅಂದರು. ಅಯೀತು ಸರ್ ಅಂತ ತಲೆ ಅಲ್ಲಾಡಿಸಿ ರೂಮಿನಿಂದ ಹೊರಗೆ ಬಂದೆ. ತಲೆಯಲ್ಲಿ ಇನ್ನು ಹೋಗಬೇಕಾ ಬೇಡವಾ ಎನ್ನುವ ಯುದ್ಧ ನಡೀತಾನೇ ಇತ್ತು. ಯಾಕಂದ್ರೆ ಇದು ಉಹೆಯೇ ಮಾಡಿರದ ಅನಿರೀಕ್ಷಿತ ಅವಕಾಶ. ಮನಸ್ಸು ಹೇಳುತಿದೆ ಹೋಗು ಎಂದು, ಆದರೆ ವಾಸ್ತವ ಎಚ್ಚರಿಸುತ್ತದೆ ಇನ್ನಷ್ಟು ಯೋಚನೆ ಮಾಡು ಎಂದು. ವಾಸ್ತವದ ಹೆದರಿಕೆ ಏಕೆಂದ್ರೆ ಇವರು ಕೊಡೋದು 1000 ಡಾಲರ್ಸ್, ಆದರೆ ಅಲ್ಲಿಗೆ ಹೋಗಿಬರುವುದು ಮತ್ತು ಹತ್ತು ದಿನ ಅಲ್ಲಿ ಉಳಿದುಕೊಳ್ಳುವ ಖರ್ಚು, ಎಲ್ಲ ಈ ಕೊಟ್ಟ ಧನಸಹಾಯದಲ್ಲಿ ಸಾಕಾಗುವುದಿಲ್ಲ, ಮೇಲಾಗಿ ನನಗೆ ಬರುತ್ತಿರುವ ಫೆಲೋಶಿಪ್ ಕಡಿಮೆ, ಅದರಲ್ಲಿ ನನ್ನ ಜೀವನೋಪಾಯಕ್ಕಾಗುವ ಖರ್ಚೆಲ್ಲ ತಗೆದು, ಉಳಿದಿದ್ದರಲ್ಲಿ ಸ್ವಲ್ಪ ಮನೆಗೆ ಕಳಿಸಿ ಇನ್ನು ಸ್ವಲ್ಪ, ಆರು ತಿಂಗಳಿಗೊಮ್ಮೆ ಕಟ್ಟಬೇಕಾದ ಟ್ಯೂಷನ್ ಫಿ ಸಲುವಾಗಿ ಉಳಿಸಿಡುತ್ತಿದ್ದೆ. ಹೇಗಪ್ಪಾ ನಿರ್ವಹಿಸುವುದು ಎಂಬ ಚಿಂತೆ. ಈ ಗೊಂದಲಮಯ ಪರಿಸ್ಥಿತಿಯಲ್ಲಿ ಸರಿಯಾದ ನಿರ್ಧಾರ ತೆಗೆದೊಕೊಳ್ಳಲು ಸೋತುಹೋದ ನನಗೆ ಆಗ ನೆನಪಾದವರು ಡಾ. ಶ್ಯಾಮ್ ಪಾಂಡೆ.

ನೇರವಾಗಿ ಶ್ಯಾಮ್ ಪಾಂಡೆ ಅವರ ಹತ್ತಿರ ಹೋಗಿ, ಸರ್ ನಿಮ್ಮ ಹತ್ರ ಒಂದು ವಿಷಯ ಮಾತನಾಡಬೇಕು ಕಾಫಿ ರೂಮಿಗೆ ಹೋಗಿ ಕಾಫಿ ಕುಡಿಯುತ್ತ ಅಲ್ಲೇ ಮಾತಾಡೋಣ ಎಂದೆ. ಏನ್ ವಿಷಯ, ನಡಿ ಹೋಗೋಣ ಎಂದು, ಕಾಫಿ ರೂಮಿನತ್ತ ಹೊರಟೆವು. ಡಾ. ಶ್ಯಾಮ್ ಪಾಂಡೆ, ಇವರು ಉತ್ತರ ಪ್ರದೇಶದವರು, ದೆಹಲಿಯ ರಾಷ್ಟ್ರೀಯ ಭೌತಿಕ ಸಂಸ್ಥೆಯಲ್ಲಿ ಪಿಎಚ್ ಡಿ ಪಡೆದು, ಜಪಾನಿನ ನಮ್ಮ ವಿಶ್ವವಿದ್ಯಾಲಯದಲ್ಲಿ ಪೋಸ್ಟ್-ಡಾಕ್ಟೋರಲ್ ಫೆಲೋ ಅಂತ ಕೆಲಸ ಮಾಡುತಿದ್ದರು. ನಂಗಿಂತ ಬಹಳ ಹಿರಿಯರು, ಅನುಭವಿ ಮಾರ್ಗದರ್ಶಕರಾಗಿದ್ದರಿಂದ ಅವರನ್ನು ಹಿರಿಯ ಅಣ್ಣನಂತೆ ತಿಳಿದಿದ್ದೆ. ಆಮೇಲೆ ನನಗಿಂತ 6-7 ವರ್ಷ ಮೊದಲೇ ಜಪಾನಿಗೆ ಕಾಲಿಟ್ಟಿದ್ದರು, ಹಾಗಾಗಿ ಜಪಾನೀ ಭಾಷೆಯಮೇಲೂ ಕೂಡ ಹಿಡಿತ ಇತ್ತು. ವಯಕ್ತಿಕವಾಗಿ ತುಂಬಾ ಸ್ನೇಹಜೀವಿ, ಏನೇ ಸಮಸ್ಯೆ ಬಂದರು ಪರಿಹರಿಸುವುದಕ್ಕೆ ಯಾವಾಗಲು ಎತ್ತಿದ ಕೈ. ಎರಡು ವರ್ಷದಲ್ಲಿ ಇವರ ಜೊತೆ ಒಡನಾಟ ಬೆಳೆದುಬಿಟ್ಟಿತ್ತು. ಅವರ ಪರಿವಾರದವರೆಲ್ಲರೂ ಪರಿಚಯ. ಅವಾಗವಾಗ ಮನೆಗೆ ಕೂಡ ಹೋಗಿಬಂದಿದ್ದುಂಟು. ನಮ್ಮ ಸ್ನೇಹ ಈಗಲೂ ಜೀವಂತವಾಗಿದೆ. ಈಗ ಅವರು ಅದೇ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತಕ್ಕೆ ಬಂದಮೇಲೆ ನಾನು 2-3 ಹುಡುಗರನ್ನು ರೆಫರ್ ಮಾಡಿದಾಗ, ಅವರಿಗೆಲ್ಲ ಅದೇ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಮಾಡಲು ಬೇಕಾದ ಎಲ್ಲ ಸಹಯ ಮಾಡಿದರು. ಅಯೀತು, ಕಾಫಿ ರೂಮಿನಲ್ಲಿ ಕಾಫಿ ಕುಡಿಯುತ್ತ ಪ್ರೊಫೆಸರ್ ಹೇಳಿದ ವಿಷಯವನ್ನು ಅವರ ಮುಂದಿಟ್ಟೆ. ಗುರೂಜಿ (ಅವರು ನನ್ನ ಈಗಲೂ ಹೀಗೆ ಕರೆಯುವುದು) ಇದು ಅತ್ತ್ಯಂತ ಒಳ್ಳೆಯ ಅವಕಾಶ, ಯಾಕೆ ಯೋಚಿಸ್ತಾಇದ್ದೀರಿ ಅಂದ್ರು. ನಾನು, ಇಲ್ಲ ಸರ್ ನನ್ನ ಈಗಿನ ಆರ್ಥಿಕ ಸ್ಥಿತಿ ನಿಮಗೆ ಗೊತ್ತೇ ಇದೆ, ಏನ್ಮಾಡೋದು ಅಂದೆ. ಅದಕ್ಕವರು ದೇವರಿದ್ದಾನೆ, ಒಳ್ಳೆ ಕೆಲಸಕ್ಕೆ ಏನಾದ್ರು ಹಾದಿ ಸಿಕ್ಕೇ ಸಿಗುತ್ತದೆ, ಸುಮ್ನೆ ಪ್ರೊಫೆಸರ್ ಹತ್ತ್ರ ಹೋಗಿ ನಿಮ್ಮ ಒಪ್ಪಿಗೆ ತಿಳಿಸಿ ಅಂದ್ರು. ಅವರ ಮಾತಿನಿಂದ ಸ್ವಲ್ಪ ಧೈರ್ಯ ಬಂತು. ಅವತ್ತೇ ಕುಳಿತು ನನ್ನ ಸಂಶೋಧನಾ ಫಲಿತಾಂಶಗಳ ಒಂದು ಪುಟದಷ್ಟು ಸಾರಾಂಶವನ್ನು ಸಿದ್ದಪಡಿಸಿ, ಸಂಜೆ ಗೈಡ್ ರೂಮಿಗೆ ಹೋಗಿ ಒಪ್ಪಿಸಿದೆ. ಜೊತೆಗೆ ನನ್ನ ಸಮಸ್ಸ್ಯೆಯನ್ನು ಅವರ ಮುಂದೆ ತೋಡಿಕೊಳ್ಳುವ ಮುಂಚೆಯೇ, ಆ ವಿಷಯ ಪಾಂಡೆ ಅವರ ಮುಖಾಂತರ ಅವರ ಕಿವಿಗೆ ಬಿದ್ದಿತ್ತು. ನೀನೇನು ಯೋಚನೆ ಮಾಡಬೇಡ, ವಿಮಾನ ಟಿಕೆಟ್ ಬುಕ್ ಮಾಡು, ದುಡ್ಡು ಬೇಕೆನಿಸಿದರೆ ನಾನು ಕೊಡುತ್ತೇನೆ, ಆಮೇಲೆ ನಿನ್ನ ಅನುಕೂಲಕ್ಕೆ ತಕ್ಕಂತೆ ನನಗೆ ಹಿಂತಿರುಗಿಸು ಎಂದರು. ಆಗ ನನಗೆ ನಿರ್ಗಳವಾಯಿತು. ಅವತ್ತೇ ಸಂಜೆ ಮನೆಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಎಲ್ಲರಿಗು ತುಂಬಾ ಸಂತೋಷವಾಯಿತು. ಹೋಗುವುದು ನಿಶ್ಚಿತವಾಯಿತು, ಇನ್ನು ಮುಂದಿನ ತಯಾರಿ ವೀಸಾ ಪಡೆಯುವುದು, ವಿಮಾನದ ಟಿಕೆಟ್ ಬುಕ್ ಮಾಡುವುದು ಹಾಗು ಅಲ್ಲಿ ಮಂಡಿಸಬೇಕಾದ ವಿಷಯದ ಮೇಲಿನ ಪೋಸ್ಟರ್ ಸಿದ್ದಪಡಿಸುವುದು.

ನಾನು ಕೊಟ್ಟ ಸಾರಾಂಶವನ್ನು, ಸ್ವಲ್ಪ ತಿದ್ದುಪಡಿಯ ನಂತರ ಪ್ರೊಫೆಸರ್, ಸಮಾವೇಶ ನಡೆಸುವ ಕಮೀಟಿಗೆ ಕಳುಹಿಸಿಕೊಟ್ಟರು. ಒಂದು ವಾರದ ನಂತರ ನನ್ನ ಮತ್ತು ಸಹಪಾಠಿ ಹಿರಾಶಿಮಾನ ಸಂಶೋಧನಾ ಸಾರಾಂಶಗಳು ಆಯ್ಕೆಯಾಗಿದ್ದು, ತಾವಿಬ್ಬರು ಸಮಾವೇಶಕ್ಕೆ ಬರಬಹುದೆಂದು ಆಮಂತ್ರಣ ಪತ್ರಿಕೆ ಕಳುಹಿಸಿದರು. ಆಗ ಎಲ್ಲಿಲ್ಲದ ಖುಷಿ. ಈಗಾಗಲೇ ಒಂದು ದೇಶಕ್ಕೆ ಬಂದಿದ್ದೇನೆ, ಈಗ ಈ ದೇಶದ ಪ್ರತಿನಿಧಿಯಾಗಿ ಅಂತರ್ರಾಷ್ಟ್ರೀಯ ಸಮಾವೇಶಕ್ಕೆ ಹೋಗುವುದೆಂದರೆ ಹೆಮ್ಮೆಯ ವಿಷಯ. ಅವರು ಕಳುಹಿಸಿಕೊಟ್ಟ ಆಮಂತ್ರಣ ಪತ್ರಿಕೆಯ ಜೊತೆಗೆ ಇನ್ನಷ್ಟು ಸಂಬಂಧಪಟ್ಟ ದಾಖಲೆಗಳು ಹಾಗು ನನ್ನ ಫಾಸ್ಸ್ಪೋರ್ಟನ್ನು ಟೋಕಿಯೋದಲ್ಲಿರುವ ಪೋಲಂಡ್ ವೀಸಾ ಆಫೀಸಿಗೆ ಕಳುಹಿಸಿಕೊಟ್ಟೆ. ಯಾವುದೇ ಸಮಸ್ಸ್ಯೆಯಿಲ್ಲದೆ ಒಂದೆ ವಾರದಲ್ಲೇ ವೀಸಾ ಬಂದು, ಆದರೆ ಅದರಲ್ಲಿ, ಆ ದೇಶದಲ್ಲಿರಲು ಕೇವಲ ಹತ್ತು ದಿನಗಳ ಅನುಮತಿ ಇತ್ತು. ಮಾರನೇ ದಿನ ಪಾಂಡೆ ಅವರ ಜೊತೆಗೂಡಿ ಟಿಕೆಟ್ ಬುಕ್ ಮಾಡಲು ಟ್ರಾವೆಲ್ ಏಜೆಂಟ್ಸ್ ಹತ್ತಿರ ಹೋದ್ವಿ, ಏಕೆಂದರೆ ಅವರಿಗೆ ಜಪಾನೀ ಭಾಷಾ ಪರಿಣಿತಿ ಇತ್ತು. ನಾನು ಕೊಟ್ಟ ತಾರೀಕಿನ ಪರಿಮಿತಿಯಲ್ಲಿ, ಅವರು ನಮಗೆ ಎರಡು ಆಯ್ಕೆಗಳನ್ನು ಕೊಟ್ಟರು. ಒಂದು ಟೋಕಿಯೋದಿಂದ ಜರ್ಮನಿ ಮೂಲಕ ಸೀದಾ ಸಮಾವೇಶ ನಡೆಯುವ ಗಡಂಸ್ಕ್ ನಗರಕ್ಕೆ ಹೋಗುತಿತ್ತು. ಇನ್ನೊಂದು, ಲಂಡನ್ ಮಾರ್ಗವಾಗಿ ಪೋಲಂಡಿನ ರಾಜಧಾನಿ ವಾರ್ಸಾವ ನಗರಕ್ಕೆ ಹೋಗಿತ್ತಿತ್ತು. ಒಂದನೇ ಆಯ್ಕೆ ದುಬಾರಿ ಅನಿಸಿತು, ನನ್ನ ಬಜೆಟ್ಟಿಗೆ ಹೊಂದಾಣಿಕೆ ಅಗಲಿಲ್ಲ, ಅದಕ್ಕೆ ಎರಡನೇ ಆಯ್ಕೆ ಮಾಡೋಣ ಬಿಡಿ ಸರ್ ಅಂದೇ. ಆದರೆ ಇಲ್ಲಿ ಒಂದು ಸಮಸ್ಸೆ, ವಾರ್ಸಾವ ನಗರದಿಂದ ಗಡಂಸ್ಕ್ ನಗರಕ್ಕೆ ಹೋಗಲು ರಾತ್ರಿಎಲ್ಲ ರೈಲು ಪ್ರಯಾಣಮಾಡಬೇಕಿತ್ತು. ಪೋಲಂಡ್, ಅಷ್ಟೊಂದು ಆರ್ಥಿಕವಾಗಿ ಮುಂದರಿದ ದೇಶವಲ್ಲದರಿಂದ, ಅಲ್ಲಿ ಅಪರಾಧಗಳು, ಕಳ್ಳ-ಕಾಕರ ಕಾಟ ಸ್ವಲ್ಪ ಜಾಸ್ತಿ ಅಂತ ಕೆಳಪಟ್ಟಿದ್ದೆ. ಅಪರಿಚಿತ ದೇಶದಲ್ಲಿ ರಾತ್ರಿಯೆಲ್ಲಾ ರೈಲು ಪ್ರಯಾಣ, ನಿದ್ದೆಯಲ್ಲಿರುವಾಗ ಯಾರಾದ್ರು ಹತ್ತಿರ ಇರುವ ಬ್ಯಾಗು, ದುಡ್ಡು ಕಸಿದುಕೊಂಡು ಹೋದ್ರೆ ಹೆಂಗೆ ಎಂಬ ಕೊರಗು. ಪಾಂಡೆ ಅವರು, ಗುರೂಜಿ ಹುತ್ತಿನಲ್ಲಿ ಕೈ ಹಾಕಿಯಾಗಿದೆ, ಈಗ ಹಾವಿಗೆ ಹೆದರಿದರೆ ಹೆಂಗೆ. ನಾವು ಮಾಧ್ಯಮ ವರ್ಗದವರು, ಈ ರೀತಿಯ ಸಮಸ್ಯೆಗಳನ್ನ ಸವಾಲಾಗಿ ಸ್ವೀಕರಿಸಲೇಬೇಕು ಅಂದರು. ಆಯಿತು ಸರ್ ಅಂದು, ಬೇರೆ ವಿಚಾರ ಎಲ್ಲ ಮರೆತು ಧೈರ್ಯದಿಂದ ಹೋಗಲೇಬೇಕೆಂಬ ದೃಢ ನಿರ್ಧಾರ ಮಾಡಿ ಎರಡನೇ ಆಯಿಕೆಯಂತೆ ಬ್ರಿಟಿಷ್ ಏರ್ವೇಸ್ ವಿಮಾನ ಬುಕಿಂಗ್ ಮಾಡಿಸಿದೆವು.

ಪೋಸ್ಟರ್ ರೆಡಿ ಆಯೀತು, ಬ್ಯಾಗ್ ಪ್ಯಾಕ್ ಆಯಿತು, ನೋಡು ನೋಡಿತ್ತಿದ್ದಂತೆ ಪೋಲೆಂಡ್ಗೆ ಹಾರುವ ದಿನ ಹತ್ತಿರ ಬಂದೇಬಿಟ್ಟಿತು. ಬೆಳಿಗ್ಗೆ 7-00 ಘಂಟೆಗೆ ನಾನಿದ್ದ ಊರಿನಿಂದ ಟೋಕಿಯೋಗೆ ಹೋಗಲು ವಿಮಾನ ಇದ್ದು, ಹೆಚ್ಚುಕಡಿಮೆ ಒಂದು ಘಂಟೆಯ ಪ್ರಯಾಣ. ಅಲ್ಲಿಂದ ಮಧ್ಯಾಹ್ನ 12-30 ಗೆ ಟೋಕ್ಯೋದಿಂದ ಲಂಡನ್ನಿಗೆ. ಲಂಡನ್ನಿನಲ್ಲಿ ನಾಲ್ಕು ಘಂಟೆಗಳ ಅಂತರದಲ್ಲಿ ಪೋಲೆಂಡಿನ ವಾರ್ಸಾವಗೆ ಹೋಗುವ ವಿಮಾನ. ಈ ರೀತಿ ಪ್ರಯಾಣದ ವಿವರ ಇದ್ದು, ಲಂಡನ್ನಿನಲ್ಲಿ ನಾಲ್ಕು ಘಂಟೆ ತಂಗಬೇಕಾಗಿತ್ತು. ಬೆಳಿಗ್ಗೆ ಸರಿಯಾಗಿ 5-30 ಘಂಟೆಗೆ ಡಾ. ಪಾಂಡೆ ಅವರು ನನ್ನನ್ನು ಮನೆಯಿಂದ ವಿಮಾನ ನಿಲ್ದಾಣಕ್ಕೆ ಬಿಟ್ಟು, ಬೆನ್ನು ಚಪ್ಪರಿಸಿ, ಒಳ್ಳೆಯದಾಗಲಿ ಎಂದು ಹಾರೈಸಿ, ಸಾಯೋನಾರಾ ಹೇಳಿ ಹೋದರು. ನಾನು ಚೆಕ್ ಇನ್, ಸೆಕ್ಯೂರಿಟಿ, ಎಲ್ಲ ಮುಗಿಸಿ, ಬೋರ್ಡಿಂಗ್ ಪಾಸಿನಲ್ಲಿ ತಿಳಿಸಿದಂತೆ, ವಿಮಾನ ಬಿಡುವ ಗೇಟ್ ಹತ್ತಿರ ಕುಳಿತು, ಮತ್ತೊಮ್ಮೆ ಮನೆಗೆ ಫೋನ್ ಮಾಡಿ ಎಲ್ಲರ ಆಶೀರ್ವಾದ ಪಡೆದೆ. ವಿಮಾನ ಸರಿಯಾದ ಸಮಯಕ್ಕೆ ಟೋಕ್ಯೋದತ್ತ ಹಾರಿತು. ದುಗುಡು, ದುಮ್ಮಾನ, ಆತಂಕಗಳ ಮಧ್ಯೆ ಚಿಮ್ಮುತ್ತಿರುವ ಸಂತೋಷದ ಒಂದು ಸಣ್ಣ ಚಿಲುಮೆಯ ಆಸರೆಯ ಮೇಲೆ ನನ್ನ ಪ್ರಯಾಣ ಶುರುವಾಯಿತು.

ಸರಿಯಾಗಿ ಒಂದು ಘಂಟೆ ಪ್ರಯಾಣದ ನಂತರ ಟೋಕ್ಯೋನ "ನರಿತಾ" ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದೆ. ಇನ್ನು ನಾಲ್ಕು ಘಂಟೆಗಳಕಾಲ ಕಾಯಬೇಕು. ಸ್ವಲ್ಪ ಉಪಹಾರ ಮಾಡಿ, ಮುಂದಿನ ವಿಮಾನ ಬಿಡುವ ಟರ್ಮಿನಲ್ಲಿಗೆ ಹೊರಟೆ. ಇದು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹಾರುವ ವಿಮಾನವಾದ್ದರಿಂದ, ಇಮಿಗ್ರೇಷನ್ ಕೌಂಟರ್ಗೆ ಹೋಗಿ, ಇಮಿಗ್ರೇಷನ್ ಆಫೀಸರ್ ಹತ್ತಿರ ನಮ್ಮ ವೀಸಾ, ಪಾಸ್ಪೋರ್ಟ್ ಮತ್ತು ಇತರೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ಮಾಡಿಸಬೇಕು. ಎಲ್ಲ ಸರಿಯಾಗಿದ್ದರೆ ಮಾತ್ರ ಇಮಿಗ್ರೇಷನ್ ಆಫೀಸರ್ ಮುಂದೆ ಹೋಗಲು ಪರವಾನಿಗೆ ಕೊಡುತ್ತಾನೆ. ಅದರಂತೆ, ಬ್ಯಾಗಿನಲ್ಲಿದ್ದ ಎಲ್ಲ ದಾಖಲೆಗಳನ್ನು ತೆಗೆದು ಕೈಯಲ್ಲಿ ಹಿಡಿದುಕೊಂಡು ಸರದಿಯಲ್ಲಿ ನಿಂತೇ. ಸರದಿ ಬಹಳ ಉದ್ದವಾಗಿದ್ದು. ಅರ್ಧ ಘಂಟೆಯ ನಂತರ ನನ್ನ ನಂಬರ್ ಬಂತು. ಇಮಿಗ್ರೇಷನ್ ಆಫೀಸರ್ಗೆ ಎಲ್ಲ ದಾಖಲೆಗಳನ್ನು ಕೊಟ್ಟೆ. ದಾಖಲೆಗಳನ್ನೆಲ್ಲ ಪರಿಶೀಲಿಸಿದ ನಂತರ, ನೀನು ಭಾರತೀಯ ನಾಗರಿಕನಾ ಎಂದ. ಹೌದು ಸರ್ ಏನಾಯಿತು ಅಂದೇ. ಏನು ಹೇಳಲಿಲ್ಲ, ಬರಿ ದಾಖಲೆಗಳನ್ನು ನೋಡುವುದು ಮತ್ತು ನನ್ನ ಮುಖನೋಡುವುದು ಮಾಡುತ್ತ ಕುಳಿತುಬಿಟ್ಟ. ಹಿಂಗ್ಯಾಕೆ ಮಾಡ್ತಿದ್ದಾನೆ, ವೀಸಾ ಅಥವಾ ಪಾಸ್ಪೋರ್ಟ್ನಲ್ಲಿ ಏನಾದರು ದೋಷ ಇದೆಯಾ, ಇಲ್ಲ ಕಮಿಟಿ ಅವರು ಕಳುಹಿಸಿದ ಆವ್ಹಾನ ಪತ್ರಿಕೆಯಲ್ಲೇನಾದರೂ ದೋಷ ಇದೆಯಾ ಅಂತ ಯೋಚಿಸತೊಡಗಿದೆ. ಇದೆ ರೀತಿ ಐದಾರು ನಿಮಿಷ ಮಾಡಿ ಮೆಲ್ಲನೆ ಕೇಳಿದ, ನೀವು ಟಿಕೆಟ್ ಬುಕ್ ಮಡಿದ ಏಜೆಂಟ್ ಏನಾದ್ರು ಮುಚ್ಚಿಟ್ಟಿದ್ದಾರಾ, ಅಥವಾ ನೀನು ಭಾರತೀಯ ನಾಗಿದ್ದು ನಿನಗೆ ಮತ್ತು ಜಪಾನಿಯರಿಗೆ ಇಮಿಗ್ರೇಷನ್ ಕಾನೂನುಗಳು ಬೇರೆ ಎಂಬುದೇನಾದ್ರು ಗೊತ್ತಿದೆಯಾ ಎಂದ. ಏನ್ ಹೇಳೀತಿದಾನೆ ಅರ್ಥವಾಗ್ತಿಲ್ಲ. ಸರ್, ಸಮಸ್ಯೆ ಏನು, ವಿಸ್ತಾರವಾಗಿ ಹೇಳಿ ಎಂದೆ. ನಿನ್ನ ದಾಖಲೆಗಳ ಪ್ರಕಾರ ನೀನು ಮುಂದಿನ ವಿಮಾನಕ್ಕೆ ಹೋಗಲು ಅವಕಾಶವಿಲ್ಲ, ಈಗ ನಿನಗಿರುವ ಆಯ್ಕೆ ಅಂದರೆ ನೀನು ವಾಪಾಸ್ ನಿನ್ನ ಊರಿಗೆ ಹೋಗಬೇಕು ಅಂದ. ಏನ್ ಸರ್, ಹಿಂಗೇ ಹೇಳ್ತಿದಿರಿ, ಸ್ವಲ್ಪ ತಿಳಿಸಿ ಹೇಳಿ ಅಂದೇ. ವಿವರವಾಗಿ ಹೇಳ್ತೇನೆ, ನೀನು ಪಕ್ಕಕ್ಕೆ ಸರಿದು ನಿಲ್ಲು, ನಿನ್ನ ಹಿಂದೆ ಬಹಳ ಜನ ಕ್ಯೂನಲ್ಲಿದ್ದಾರೆ ಅವರಿಗೆ ಅವಕಾಶ ಮಾಡಿಕೊಡು ಎಂದ. ಆಕಾಶ ಕಳಚಿ ತಲೆಯಮೇಲೆ ಬಿದ್ದಂತಾಯಿತು. ಎಷ್ಟೆಲ್ಲ ಶ್ರಮಪಟ್ಟು ಇಲ್ಲಿಯವರೆಗೆ ಬಂದಿದ್ದೇನೆ, ಇವನೇನಪ್ಪಾ ಒಂದೇ ನಿಮಿಷಕ್ಕೆ ನನ್ನ ಪ್ರಯಾಣವನ್ನೇ ಮೊಟಕುಗೊಳಿಸಿದ ಅನಿಸಿತು. ಅಲ್ಲೇ ಪಕ್ಕಕ್ಕೆ ಸರಿದು ನಿಂತೆ, ಆದರೆ ಕ್ಯೂ ನಲ್ಲಿರುವವರೆಲ್ಲ ನನ್ನನ್ನೇ ವಿಚಿತ್ರವಾಗಿ ದುರುಗುಟ್ಟಿಕೊಂಡು ನೋಡುತಿದ್ದಾರೆ. ಮುಜುಗರ ಆಗ್ತಿದೆ, ಈ ಮಾನುಷ ಪೂರ್ತಿ ವಿಷಯ ತಿಳಿಸಿಲ್ಲ, ಏನ್ ನಡಿತಾಯಿದೆ ಒಂದು ಅರ್ಥವಾಗದ ಸ್ಥಿತಿ. ಸ್ವಲ್ಪ ಜನ ಕಡಿಮೆ ಆದಮೇಲೆ, ಮತ್ತೆ ಅವನ ಹತ್ತಿರ ಹೋಗಿ ಕೇಳಿದೆ. ಆಮೇಲೆ ವಿವರವಾಗಿ ಹೇಳಲು ಶುರು ಮಾಡಿದ. ನಾನು ಬುಕ್ ಮಾಡಿದ್ದೂ ಬ್ರಿಟಿಷ್ ಏರ್ಲೈನ್ಸ್, ಅದಕ್ಕೆ ಇಂಗ್ಲೆಂಡ್ ಮುಖೇನ ಹಾಯಿದು ಹೋಗಬೇಕು. ಆದರೆ, ಇಲ್ಲಿ ಸಮಸ್ಯೆ ಏನೆಂದರೆ, ಭಾರತೀಯರಿಗೆ ಇಂಗ್ಲೆಂಡ್ ಮೂಲಕ ಹಾಯಿದು ಹೋಗಬೇಕಾದರೆ, ಅಲ್ಲಿ ಒಂದು ಘಂಟೆ ಕೂಡ ತಂಗಿದರು, ಇಂಗ್ಲೆಂಡ್ ವೀಸಾ ಆಫೀಸಿನಿಂದ "ಟ್ರಾಂಜಿಟ್ ವೀಸಾ" ಎಂಬ ಇನ್ನೊಂದು ವೀಸಾ ಪಡೆಯಬೇಕಿತ್ತು. ಈ ವಿಷಯದ ಬಗ್ಗೆ ನನಗೆ ಕಿಂಚಿತ್ತೂ ಗೊತ್ತಿಲ್ಲ. ಇನ್ನು ಟ್ರಾವೆಲ್ ಏಜೆಂಟ್ಗು ಕೂಡ ಇದರ ಮಾಹಿತಿ ಇರಲಿಕ್ಕಿಲ್ಲ, ಏಕೆಂದರೆ ಜಪಾನಿಯರಿಗೆ ಅನೇಕ ದೇಶಗಳಿಗೆ ಪ್ರವಾಸ ಅಥವಾ ಬಿಸಿನೆಸ್ ಟ್ರಿಪ್ ಮಾಡಲು ವಿಸಾದ ಅವಶ್ಯಕತೆಯೇ ಇಲ್ಲ. ತುಂಬಾ ನಿರಾಸೆ ಅಯೀತು, ಇದೆಂತ ಅವಾಂತರ ಆಯೀತಲ್ಲ, ಪ್ರೊಫೆಸರ್ ಗೆ ಈ ವಿಷಯ ತಿಳಿಸಿದರೆ ಚೆನ್ನಾಗಿ ಉಗಿಸಿಕೊಳ್ಳುವುದು ನಿಶ್ಚಿತ. ಇಮಿಗ್ರೇಷನ್ ಆಫೀಸರ್ಗೆ ಧನ್ಯವಾದ ತಿಳಿಸಿ, ಬಂದ ದಾರಿಗೆ ಸುಂಕವಿಲ್ಲದಂತೆ, ಜೋತು ಮುಖಮಾಡಿಕೊಂಡು ಹೋಗಿ ಒಂದು ಕುರ್ಚಿಯಲ್ಲಿ ಕುಳಿತೆ. ಯಾಕೋ ಮತ್ತೆ ಪಾಂಡೆ ಅವರಿಗೆ ಫೋನ್ ಮಾಡಿ ತಿಳಿಸೋಣ ಅನಿಸಿ, ಅವರಿಗೆ ಫೋನ್ ಮಾಡಿ.....ಸರ್ ನನ್ನ ಪ್ರಯಾಣ ಇಲ್ಲಿಗೆ ಮೊಟಕುಗೊಂಡಿತು, ಸೋತು ಹೋದೆ ಅನಿಸ್ತಾಇದೆ ಅಂದೆ. ವಿಷಯ ಸಂಪೂರ್ಣವಾಗಿ ತಿಳಿಸಿದೆ. ಅವರಿಗೂ ಹಳಹಳಿ ಆಗಿ, ಪ್ರೊಫೆಸರ್ಗೆ ವಿಷಯ ತಿಳಿಸಿದ್ದಾರೆ. ಆದರೆ ಪ್ರೊಫೆಸರ್ ನಿಶಿನೊ ಮೊದಲೇ ಮುಂಗೋಪಿ, ಪಿತ್ತ ನೆತ್ತಿಗೇರಿಸಿ ಅಷ್ಟು ಸಮಸ್ಯೆ ಆಗಿದ್ದರೆ ವಾಪಾಸ್ ಬಂದುಬಿಡಲಿ ಎಂದು ಚೀರಾಡಿ ಕೈತೊಳೆದುಕೊಂಡರಂತೆ. ಯಾಕೊ ಪಾಂಡೆಯವರಿಗೆ ಮನಸ್ಸು ಒಪ್ಪಿಲ್ಲ, ಸೀದಾ ಟ್ರಾವೆಲ್ ಏಜೆಂಟ್ ಹತ್ರ ಹೋಗಿ, ವಿಷಯ ತಿಳಿಸಿದ್ದಾರೆ. ವಿಚಿತ್ರ ಏನೆಂದರೆ, ಈ ತಪ್ಪಿನಲ್ಲಿ ನಮ್ಮದು ಸಮಭಾಗವಿದ್ದರೂ ಕೂಡ, ಟ್ರಾವೆಲ್ ಏಜೆಂಟ್ ಈ ಅವಾಂತರದ ಸಂಪೂರ್ಣ ಜವಾಬ್ದಾರಿಯನ್ನು ತನ್ನ ಮೇಲೆ ಹೊತ್ತುಕೊಂಡು, ನಿಮ್ಮ ಹುಡುಗನಿಗೆ ಫೋನ್ ಮಾಡಿ, ಇಮಿಗ್ರೇಷನ್ ಆಫೀಸರ್ಗೆ ಫೋನ್ ಕೊಡಲು ತಿಳಿಸಿರಿ, ನಾನು ನೇರವಾಗಿ ಮಾತನಾಡಿ ಸಮಸ್ಯೆ ಅರ್ಥಮಾಡಿಕೊಂಡು ಬೇರೆ ಮಾರ್ಗ ಹುಡುಕುತ್ತೇನೆಂದು ಹೇಳಿದ್ದಾರೆ. ಅದರಂತೆ ಆಕಡೆಯಿಂದ ಫೋನ್ ಬಂತು, ಅವರ ಆದೇಶದಂತೆ ಆಫೀಸರ್ಗೆ ಫೋನ್ ಕೊಟ್ಟು ವಿಷಯ ತಿಳಿಸಿದೆ. ಅವನು ಪಾಪ, ತುಂಬಾ ಕನಿಕರ ಭಾವದಿಂದ ನನ್ನ ಫೋನ್ ಮೂಲಕ ಟ್ರಾವೆಲ್ ಏಜೆಂಟ್ ಜೊತೆ ಜಪಾನೀ ಭಾಷೆಯಲ್ಲಿ ಮಾತನಾಡಿ, ನನಗೆ ಫೋನ್ ಕೊಡುತ್ತ, ಏನು ಚಿಂತಿಸಬೇಡ ನಿನಗೆ ಬೇರೆ ವ್ಯವಸ್ಥೆ ಮಾಡುವವರಿದ್ದಾರೆ, ಅವರ ಫೋನ್ ಬರುತ್ತೆ ಇಲ್ಲೇ ಕುಳಿತು ಕಾಯುತ್ತಿರು ಅಂದ. ಒಂದು ಘಂಟೆ ಕಾಯ್ದಮೇಲೆ ಪಾಂಡೆ ಸರ್ ಫೋನ್ ಬಂತು. ನಿಮ್ಮ ಪ್ರಯಾಣ ಮೊಟಕುಗೊಳ್ಳಲಿಲ್ಲ ಗುರುಜಿ, ಟ್ರಾವೆಲ್ ಏಜೆಂಟ್ ಆಪತ್ಭಾಂದವನಂತೆ ಈ ಅವಾಂತರದ ಸಂಪೂರ್ಣ ಜವಾಬ್ದಾರಿ ತನ್ನಮೇಲೆ ಹೊತ್ತು, ಈ ಟಿಕೆಟ್ ಅನ್ನು ರದ್ದುಪಡಿಸಿ, ಮಾರನೇ ದಿನ 12=00 ಘಂಟೆಗೇ ಹೊರಡುವ ಆಸ್ಟ್ರಿಯನ್ ಏರ್ವೇಸ್ ವಿಮಾನದ ಟಿಕೆಟ್ ಬುಕ್ ಮಾಡಿದ್ದಾರೆ, ಆದರೆ ನೀವು ಅಲ್ಲಿ ಒಂದು ದಿನ ಹೆಚ್ಚಿಗೆ ನಿಲ್ಲಬೇಕಾಗುತ್ತದೆ. ನಾಳೆಯವರೆಗೆ ಇಳಿದುಕೊಳ್ಳಲು ನಾರಿತಾ ಏರ್ಪೋರ್ಟಿನ ಬಿಸಿನೆಸ್ ಹೋಟೆಲಿನಲ್ಲಿ ರೂಮ್ ಕಾಯಿದಿರಿಸಿದ್ದು, ನೀವು ಅಲ್ಲಿ ಹೋಗಿ ವಿಶ್ರಾಂತಿ ತೆಗೆದುಕೊಳ್ಳಿ ಅಂದರು. ಮತ್ತೆ ನನ್ನ ಆಸೆ ಚಿಗುರೊಡೆಯಿತು, ಜೊತೆಗೆ ಪಾಂಡೆ ಅವರಿಗೆ ಮತ್ತು ಟ್ರಾವೆಲ್ ಏಜೆಂಟ್ಗೆ ಅನಂತಾನಂತ ಕೃತಜ್ಞತೆಗಳನ್ನು ಸಲ್ಲಿಸಿದೆ. ಬ್ಯಾಗ ತೆಗೆದುಕೊಂಡು ಶಟಲ್ ಬಸ್ಸಿನಲ್ಲಿ ಹೋಟೆಲಿನತ್ತ ಪ್ರಯಾಣ ಬೆಳೆಸಿದೆ.

ಹೋಟೆಲ್ ತಲುಪಿದಮೇಲೆ ಫ್ರೆಶ್ ಆಗಿ, ಮನೆಗೆ ಫೋನ್ ಮಾಡಿ ಪಾಲಕರಿಗೆ ವಿಷಯ ತಿಳಿಸಿದೆ. ಅವರಿಗು ಹಳಹಳಿ ಆಯಿತು, ಪಾಂಡೆ ಅವರಿಗೆ ಧನ್ಯವಾದ ತಿಳಿಸಲು ಹೇಳಿದರು, ಜೊತೆಗೆ ಅಂದು ಜಪಾನಿಯರ ಪ್ರಾಮಾಣಿಕತೆ ಮತ್ತು ಸಹಾಯಗುಣಕ್ಕೆ ಉದಾಹರಣೆಯಾದ ಟ್ರಾವೆಲ್ ಏಜೆಂಟನನ್ನು ಪ್ರಶಂಶಿಸುವುದನ್ನು ಮರೆಯಲಿಲ್ಲ. ಬೆಳಗಿನಿಂದ ಓಡಾಡಿ, ದೈಹಿಕವಾಗಿ, ಮಾನಸಿಕವಾಗಿ ದಣಿದಿದ್ದೆ. ಹೋಟೆಲಿನವರು ಕಳುಹಿಸಿಕೊಟ್ಟ ಇಂಡಿಯನ್ ಕರಿ ಮತ್ತು ಅನ್ನವನ್ನು ತಿಂದು ನಿದ್ರೆಗೆ ಜಾರಿಬಿಟ್ಟೆ. ಬೆಳಿಗ್ಗೆ ಏಳುಘಂಟೆಗೆ ಯಾರೋ ಕದತಟ್ಟಿದಂತಾಗಿ, ತಟ್ಟನೆ ಎದ್ದು ಬಾಗಿಲು ತೆರೆದರೆ, ಹೋಟೆಲಿನ ರೂಮ್ ಬಾಯ್. ಕೈಯಲ್ಲಿ ಒಂದು ಕಾಗದ ಇದ್ದು, ಇದು ನಿಮಗೆ ಫ್ಯಾಕ್ಸ್ ಬಂದಿದೆ, ಇದರಲ್ಲಿ ನಿಮ್ಮ ವಿಮಾನದ ಟಿಕೆಟ್ ನಂಬರ ಮುಂತಾದ ಮಾಹಿತಿ ಇದೆ. 12-00 ಘಂಟೆಗೆ ವಿಮಾನ ಬಿಡುವುದು ಎಂದ. ಅವನಿಗೆ ಧನ್ಯವಾದ ತಿಳಿಸಿ, ಬೇಗ ಬೇಗ ತಯಾರಾಗಿ, ಬ್ಯಾಗ ಸರಿಮಾಡಿಕೊಂಡು, ಹತ್ತಿರವೇ ಇದ್ದ ವಿಮಾನ ನಿಲ್ದಾಣ ತಲುಪಿದೆ. ಆಸ್ಟ್ರಿಯನ್ ಏರ್ವೇಸ್ ಕೌಂಟರ್ಗೆ ಹೋಗಿ ಚೆಕ್ ಇನ್ ಮಾಡಿಸಿ, ಮತ್ತೆ ಇಮಿಗ್ರೇಷನ್ ಕೌಂಟರ್ಗೆ ಹೋದರೆ, ಅದೇ ನಿನ್ನೆಯ ಆಫೀಸರ್. ನನ್ನ ಸರದಿ ಬಂದಾಗ, ನನ್ನನು ನೋಡಿ ಗುರುತು ಹಿಡಿದು ಮುಗುಳು ನಕ್ಕ. ಈಗ ನೀನು ಆಸ್ಟ್ರಿಯಾ ದೇಶದ ಮೂಲಕ ಹೋಗುವುದರಿಂದ ಅಲ್ಲಿ ಯಾವುದೇ ಷರತ್ತುಗಳಿಲ್ಲ, ನಿನ್ನ ಪ್ರಯಾಣ ಸುಖಕರವಾಗಲಿ ಎಂದು ಹಾರೈಸಿ ಕಳುಹಿಸಿಕೊಟ್ಟ. ಸರಿಯಾದ ಸಮಯಕ್ಕೆ ವಿಮಾನ ಹಾರಿತು, ಅವಸರದಲ್ಲಿ ಸಸ್ಯಾಹಾರಿ ಊಟ ಆಯ್ಕೆ ಮಾಡುವುದು ಮರೆತುಹೋಗಿ, ಕೊಟ್ಟದ್ದರಲ್ಲೇ ಸಸ್ಯಾಹಾರಿ ಪದಾರ್ಥಗಳನ್ನು ಹೆಕ್ಕಿ ತಿಂದು ದಾರಿಕಳೆದೆ. 15 ಘಂಟೆಗಳ ಸುಧೀರ್ಘ ಪ್ರಯಾಣದ ನಂತರ ಆಸ್ಟ್ರಿಯಾ ರಾಜಧಾನಿ ವಿಯೆನ್ನಾ ತಲುಪಿ, ಆಗ ಅಲ್ಲಿ ಮಧ್ಯಾಹ್ನ ೧-೦೦ ಘಂಟೆ. ಇಲ್ಲಿ ಇನ್ನು ಮೂರು ಘಂಟೆ ಕಳೆಯಬೆಕಾಗಿತ್ತು, ಅದಕ್ಕೆ ಸ್ವಲ್ಪ ವಿಮಾನ ನಿಲ್ದಾಣದ ಒಳಗಡೆ ಸುತ್ತಾಡುವುದರಲ್ಲಿ ಕೆಲವು ಭಾರತಿಯರು ಭೆಟ್ಟಿಯಾಗಿ, ಅವರೊಂದಿಗೆ ಮಾತಾಡುತ್ತ ಕಾಲ ಕಳೆದೆ. ಇಲ್ಲಿಂದ ಪೋಲೆಂಡಿಗೆ ಹೋಗುವ ವಿಮಾನ ಸಿದ್ಧವಾಗಿತ್ತು. ಇದು ಕೇವಲ 25 ಜನರನ್ನು ಹೊತ್ತೊಯ್ಯಬಲ್ಲ ಚಿಕ್ಕ ವಿಮಾನವಾಗಿದ್ದು, ಭೂಮಿಯಿಂದ ಸ್ವಲ್ಪ ಎತ್ತರದಲ್ಲಿ ಹಾರಾಡುತ್ತಾ ಸಂಜೆ ಆರೂವರೆಗೆ ಪೋಲೆಂಡ್ ದೇಶದ ರಾಜಧಾನಿ ವಾರ್ಸಾವ ತಲುಪಿತು. ಇಮಿಗ್ರೇಷನ್, ಸೆಕ್ಯೂರಿಟಿ ಚೆಕ್ ಆದಮೇಲೆ ಬ್ಯಾಗ ತೆಗೆದುಕೊಂಡು ಹೊರಗೆ ಬಂದು ರೈಲು ನಿಲ್ದಾಣಕ್ಕೆ ಹೋಗುವ ಬಗ್ಗೆ ವಿಚಾರಿಸಿದೆ. ಏರ್ಪೋರ್ಟ್ ಮುಖ್ಯದ್ವಾರದ ಪಕ್ಕ ಇರುವ ಬಸ್ಸ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಹೋಗುವ ಬಸ್ಸು ಬರುವುದೆಂಬ ವಿಷಯ ತಿಳಿಯಿತು. ಹೊರಗೆ ಬಂದು ಆ ಬಸ್ ಸ್ಟಾಪಿನಲ್ಲಿ ಕುಳಿತೆ. ಅಷ್ಟೋತ್ತಿಗೆ ಸೂರ್ಯ ಬಾನಿನಿಂದ ಜಾರಿ ಭೂತಾಯಿಯ ಮಡಿಲು ಸೇರಿ, ಎಲ್ಲೆಲ್ಲೂ ಕತ್ತಲಾಗಿತ್ತು. ಚಿಕ್ಕದಿದ್ದರೂ ಅಚ್ಚುಕಟ್ಟಾದ ದೇಶ. ರಸ್ತೆಗಳ ಉದ್ದಗಲಕ್ಕೂ ದೊಡ್ಡ ದೊಡ್ಡ ಬೀದಿ ದೀಪಗಳ ಮೆರುಗು. ಲೆಕ್ಕವಿಲ್ಲದಷ್ಟು ಕಾರುಗಳು ರಸ್ತೆಯಲ್ಲೆಲ್ಲ ಓಡಾಡುತ್ತಿದ್ದವು. ಜನರೆಲ್ಲಾ ಕೆಲಸ ಕಾರ್ಯ ಮುಗಿಸಿ ಮನೆಯಕಡೆಗೆ ಹೋರಡುತ್ತಿರುವಂತಿತ್ತು. ಅಷ್ಟರಲ್ಲೇ, ಸಮಯಕ್ಕೆ ಸರಿಯಾಗಿ ಬಂದ, ನಮ್ಮ ಬೆಂಗಳೂರಿನ ವಾಯು ವಜ್ರದಂತಿರುವ ಬಸ್ಸು ಹತ್ತಿ ರೈಲು ನಿಲ್ದಾಣದತ್ತ ಹೊರಟೆ.

ವಿಶಾಲವಾದ ರೈಲು ನಿಲ್ದಾಣದಲ್ಲಿ ಅನೇಕ ಪ್ಲಾಟಫಾರ್ಮ್ಗಳು, ಟಿಕೆಟ್ ಕೌಂಟರ್ಗರು. ತಮ್ಮ ಕೆಲಸ ಮುಗಿಸಿ ಬೇರೆ ಬೇರೆ ಊರಿಗೆ ಹೋಗಲು ಸೇರಿರುವ ಜನಗಂಗೂಳಿ. ಬಸ್ಸು ಇಳಿದು, ಟಿಕೆಟ್ ಕೌಂಟರ್ಗೆ ಹೋಗಿ, ಗಡಂಸ್ಕ್ ನಗರಕ್ಕೆ ಹೋಗಬೇಕು, ರೈಲು ಎಷ್ಟು ಘಂಟೆಗಿದೆ, ಹಾಗು ಒಂದು ಟಿಕೆಟ್ ಕೊಡಿ ಎಂದೆ. ಆ ಕೌಂಟರ್ನಲ್ಲಿರುವ ಮಹಿಳೆಗೆ ಸರಿಯಾಗಿ ಇಂಗ್ಲಿಷ್ ತಿಳಿತಾಯಿಲ್ಲ. ಬಹಳ ಪ್ರಯತ್ನದ ನಂತರ ಅರ್ಥವಾಗಿ, ಒಂದು ಟಿಕೆಟ್ ಕೊಟ್ಟು, ರೈಲು ರಾತ್ರಿ 11-30 ಕ್ಕೆ ಇದೆ ಎಂದಳು. ಈಗ ಸಮಯ ಸಂಜೆ ಎಂಟು ಘಂಟೆಯಾಗಿದೆ, ಇನ್ನು ಮೂರುವರೆ ಘಂಟೆ ಕಾಯಬೇಕಾ, ಅಪರಿಚಿತ ಸ್ಥಳದಲ್ಲಿ ಹೇಗೆ ಹೊತ್ತು ಕಳೆಯುವುದು ತಿಳಿತಾಯಿಲ್ಲ. ಒಂದು ಘಂಟೆ ಅಲ್ಲೇ ನಿಲ್ದಾಣದ ಒಳಗೆ ಸುತ್ತಾಡುತ್ತ ಕಾಲ ಕಳೆದೆ. ಇಲ್ಲಿ ವಿಶೇಷವೇನೆಂದರೆ ಯುರೋಪ ಖಂಡದ, ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವೀಸಾ ಇಲ್ಲದೆ ಪ್ರಯಾಣಿಸಬಹುದಾದ್ದರಿಂದ, ಪಕ್ಕದ ಜರ್ಮನ್, ಫ್ರಾನ್ಸ್ ದೇಶಗಳಿಂದ ರೈಲುಗಳು ಈ ನಿಲ್ದಾಣದ ಮುಖಾಂತರ ಹೋಗುತಿದ್ದು, ಆಯಾ ದೇಶಗಳಿಗೆ ಜನರು ಪ್ರಯಾಣಿಸುತ್ತಿದ್ದರು. ಈ ಎಲ್ಲ ದೃಶಗಳನ್ನು ನೋಡುತ್ತಾ ಒಂದು ಮೂಲೆಯಲ್ಲಿ ಕುಳಿತೆ, ಆದರೆ ಬ್ಯಾಗು, ಪರ್ಸ್ಗಳಲ್ಲೂ ಮಾತ್ರ ಬಹಳ ಜೋಪಾನವಾಗಿ ನೋಡಿಕೊಂಡಿದ್ದೆ. ವೇಳೆ ಕಳೆದ ಹಾಗೆ, ಜನಜಂಗುಳಿ ಕಡಿಮೆ ಆಗುತ್ತಾ, ನಿಲ್ದಾಣ ಖಾಲಿ ಖಾಲಿ ಆಗಿ, ಅಲ್ಲಿಗೊ ಇಲ್ಲಿಗೋ ಒಬ್ಬರೋ ಇಬ್ಬರೋ ಕಾಣುತ್ತಿದ್ದರು. ಟಿಕೆಟ್ ಕೌಂಟರ್ಗಳೆಲ್ಲ ಮುಚ್ಚಿಹೋದವು. ರಾತ್ರಿ ನಾನು ಹೋಗುವ ರೈಲಿಗೆ ಜನ ಕಡಿಮೆ ಇರಬಹುದೇನೋ, ಆದರೆ ಈ ಖಾಲಿ ನಿಲ್ದಾಣದಲ್ಲಿ ಒಬ್ಬನೇ ಅಪರಿಚಿತ ಕುಳಿತಿದ್ದೀನಿ. ಅಷ್ಟರಲ್ಲಿ ಕೆಲಸ ಮುಗಿಸಿ ಮನೆಗೆ ಹೊರಟಂತಿರುವ ಕೂಲಿಕಾರ್ಮಿಕರಂತಿದ್ದ 3-4 ಜನ, ಸುತ್ತಾಡುತ್ತ ಹತ್ತಿರ ಬಂದು ದುರುಗುಟ್ಟಿ, ಪೋಲೆಂಡ್ ಭಾಷೆಯಲ್ಲಿ ಏನೇನು ಮಾತನಾಡಿಕೊಳ್ಳುತ್ತ ನಗುತ್ತಿದ್ದಾರೆ, ನನಗೊ ಭಾಷೆ ಅರ್ಥವಾಗುತ್ತಿಲ್ಲ, ಏನು ಮಾತಾಡಿತ್ತಿದ್ದರೆ ಅನ್ನುವುದು ಅರ್ಥವಾಗುತ್ತಿಲ್ಲ. ಮುಂದೆ ಹೋದಂತೆ ಮಾಡಿ ಮತ್ತೆ ವಾಪಾಸ್ ಬಂದು ಏನೋ ಹೇಳಲು ಪ್ರಯತ್ನಿಸುತ್ತಿದ್ದಾರೆ, ಏನು ಅರ್ಥವಾಗ್ತಿಲ್ಲ. ಯಾಕೋ ಈ ಸ್ಥಳ ಸುರಕ್ಷಿತ ಅನಿಸಲಿಲ್ಲ, ಅಲ್ಲಿಂದ ಎದ್ದು ಹೋಗಬೇಕೆನಿಸಿ, ಜಾಗ ಖಾಲಿ ಮಾಡಿದೆ. ಅವರು ಒಳ್ಳೆಯವರೇ ಆಗಿರಬಹುದು, ಸುಮ್ಮನೆ ಮಾತಾಡಿಸಲು ಬಂದಿರಬಹುದು, ಆದರೆ ಸುಮ್ಮನೆ ಯಾಕೆ ರಿಸ್ಕ್ ಅಂತ ಅನಿಸಿತು. ಮುಂದೆ ಸ್ವಲ್ಪ ದೂರ ಹೋಗುವಷ್ಟರಲ್ಲಿ, ಮೂರೂ ಜನ ಚೈನಾ ದೇಶದವರು ಕಂಡರು. ಅವರೆಲ್ಲ ನನ್ನ ಹತ್ತಿರಾನೆ ಬರುತ್ತಿರಬಹುದೆನಿಸಿ, ನಾನೇ ಮುಂದೆ ಹೋಗಿ ಮಾತಾಡಿಸಿದೆ. ಪುಣ್ಯ, ಅವರಿಗೆ ಇಂಗ್ಲಿಷ್ ಬರುತಿತ್ತು, ಸ್ವಲ್ಪ ಮಾತಾಡಿದಮೇಲೆ ಅರ್ಥವಾಯಿತು, ಅವರು ಇದೆ ಸಮಾವೇಶಕ್ಕೆ ಹೋಗುತ್ತಿದ್ದು, ಚೈನೀಸ್ ಕಂಪನಿಯ ಪರವಾಗಿ ಬಂದಿದ್ದರು. ಮುಳುಗುವವನಿಗೆ ಕಡ್ಡಿಯ ಆಸರೆ ಸಿಕ್ಕಂತಾಯಿತು. ನಾಲ್ಕು ಜನ ಒಂದೇ ಕಂಪಾರ್ಟ್ಮೆಂಟ್ನಲ್ಲಿ ಪ್ರಯಾಣಿಸುವುದಾಗಿ ನಿರ್ಧಾರವಾಯಿತು. ಇಲ್ಲಿನ ಕಳ್ಳ-ಕಾಕರ ವಿಷಯ ಅವರಿಗೂ ಮುಂಚೆ ತಿಳಿದಿದ್ದರಿಂದ, ರಾತ್ರಿಯೆಲ್ಲ ಜಾಗ್ರತೆಯಿಂದ ಇರೋಣವೆಂದು ಮಾತಾಯಿತು. ರೈಲು ಸ್ವಲ್ಪ ಸಮಯ ತಡವಾಗಿ ಬಂತು. ರೈಲು ಹತ್ತಿ ಒಂದೇ ಕಂಪಾರ್ಟ್ಮೆಂಟ್ನಲ್ಲಿ ನಾಲ್ಕು ಜನ ಕುಳಿತೆವು. ಸೀಟುಗಳು ಅರಮಗಾಗಿದ್ದು ಹೊಟ್ಟೆ ಹಸಿದಿದೆ, ದೇಹ ದಣಿದಿದೆ, ನಿದ್ದೆಗೆ ಜಾರಬೇಕೆಂದರೆ ತಲೆ ತಿನ್ನುತ್ತಿರುವ ಆತಂಕದ ಹೂಳ ಮಲಗಿಸಿಕೊಡುತ್ತಿಲ್ಲ. ನಾಲ್ಕು ಜನ ಜಾಗರಣೆ ಮಾಡುತ್ತ, ಕಣ್ಣು ಕೆಂಪಗೆ ಮಾಡಿಕೊಂಡು, ಮಧ್ಯೆ ತೂಗಾಡಿಸುತ್ತ ದಾರಿ ಕಳೆದೆವು..

ಸೂರ್ಯ ಅದೇ ಪೂರ್ವದಲ್ಲಿ ಮೇಲೆದ್ದು, ಎಲ್ಲೆಲ್ಲೂ ಚುಮು ಚುಮು ಬೆಳಕು. ರೈಲು ಬೆಳಗಿನ 6-00 ಕ್ಕೆ ಗಡಂಸ್ಕ್ ನಗರವನ್ನು ತಲುಪಿತು. ನನ್ನ ಜೊತೆ ಬಂದಿದ್ದ ಚೈನೀಸ್ ಟ್ಯಾಕ್ಸಿಯಲ್ಲಿ ತಾವು ಬುಕ್ ಮಡಿದ ಹೋಟೆಲಿನತ್ತಾ ಹೋದರು. ನಾನು ಕೂಡ ನಮ್ಮಂತಹ ವಿದ್ಯಾರ್ಥಿಗಳಿಗೆ ಇಳಿದುಕೊಳ್ಳಲು ವ್ಯವಸ್ಥೆ ಮಾಡಿದ ಗಡಂಸ್ಕ್ ವಿಶ್ವವಿದ್ಯಾಲಯದ ಹಾಸ್ಟೆಲಿನತ್ತ ಟ್ಯಾಕ್ಸಿಯಲ್ಲಿ ಹೊರಟೆ. ಗಡಂಸ್ಕ್, ಇದು ಪೋಲೆಂಡ್ ದೇಶದ ನಾಲ್ಕು ಮಹಾನಗರಗಳಲ್ಲಿ ಒಂದು. ಬಾಲ್ಟಿಕ್ ಸಮುದ್ರ ತೀರದಲ್ಲಿರುವ ಐತಿಹಾಸಿಕ ನಗರಿ, 1939 ರಲ್ಲಿ ಎರಡನೇ ಮಹಾಯುದ್ಧದಲ್ಲಿ, ಜರ್ಮನ್ನರು ಪೋಲೆಂಡ್ ದೇಶದ ಇದೆ ನಗರದ ಮೇಲೆ ದಾಳಿಮಾಡಿದ್ದರಂತೆ. ಅದರ ನೆನಪಿಗಾಗಿ ಇದೆ ಊರಲ್ಲಿ ವೆಸ್ಟರಪ್ಲ್ಯಾಟ್ಟ್ ಎಂಬ ದೊಡ್ಡದಾದ ಕಲ್ಲಿನಿಂದ ಮಾಡಿದ ಸ್ಮಾರಕ ಒಂದಿದೆ. ನಗರದ ತುಂಬೆಲ್ಲ ಸುಂದರವಾದ ರೋಮನ್ ಶೈಲಿಯಲ್ಲಿ ಕಟ್ಟಿದ, ಕೆಂಪು ಬಣ್ಣದ ಕಟ್ಟಡಗಳು, ಈ ನಗರವನ್ನು ಮತ್ತಷ್ಟು ಸುಂದರಗೊಳಿಸಿದ್ದವು. ಈ ನಗರದ ಮಧ್ಯೆ ಮಾರ್ಟ್ವಾ ವಿಸ್ತಾ ಎಂಬ ನದಿ ಹರಿಯುತ್ತದೆ. ಇಲ್ಲಿನ ಇನ್ನೊಂದು ವಿಶೇಷವೇನೆಂದರೆ ನಾನು ಪುಸ್ತಕಗಳಲ್ಲೇ ಓದಿದ್ದ ಟ್ರಾಮ್ ರೈಲುಗಳನ್ನು ಮೊಟ್ಟಮೊದಲಬಾರಿಗೆ ಕಣ್ಣಾರೆ ನೋಡಿದೆ. ಸಾರಿಗೆ ವ್ಯವಸ್ಥೆಗಾಗಿ, ಟ್ರಾಮು, ಲೋಕಲ್ ರೈಲು ಮತ್ತು ಬಸ್ಸುಗಳಿವೆ. ಹಾಸ್ಟೆಲ ತಲುಪಿದಮೇಲೆ ಕಚೇರಿಯಲ್ಲಿ ವಿಚಾರಿಸಿ ನನ್ನ ರೂಮಿನ ನಂಬರ ಗೊತ್ತುಮಾಡಿಕೊಂಡೇ. ನನ್ನ ಜೊತೆ ಅದೆ ರೂಮಿನಲ್ಲಿ ಐರ್ಲೆಂಡ್ ದೇಶದ ಇನ್ನೊಬ್ಬ ವ್ಯಕ್ತಿಯನ್ನು ಹಾಕಿದ್ದು, ಅವನು ನಿನ್ನೆ ಸಂಜೆಯೇ ತಲುಪಿ ರೂಮಿನಲ್ಲಿದ್ದ. ಅವನ ಪರಿಚಯ ಮಾಡಿಕೊಂಡೆ. ಇದೆ ಹಾಸ್ಟೆಲಿನಲ್ಲಿ, ಈ ಸಮಾವೇಶದಲ್ಲಿ ಭಾಗವಹಿಸಲು, ಬೇರೆ ಬೇರೆ ದೇಶದಿಂದ ಬಂದಿದ್ದ ಸರಿ ಸುಮಾರು 30 ಜನ ತಂಗಿದ್ದರು. ಅದರಲ್ಲಿ ನಾನು ಭಾರತದವರು ಯಾರಾದರೂ ಇದ್ದಾರಾ ಎಂದು ಕಚೇರಿಯಲ್ಲಿ ವಿಚಾರಿಸಿದಾಗ ಆಂಧ್ರದಿಂದ ಬಂದಿದ್ದ ವೆಂಕಟೇಶ್ ಎಂಬ ಐಐಟಿ ಕಾನಪುರಿನ ಪಿಎಚ್ ಡಿ ವಿದ್ಯಾರ್ಥಿ ಒಬ್ಬ ಸಿಕ್ಕ. ಆಮೇಲೆ ಅವನ ರೂಮಿಗೆ ಹೋಗಿ ಪರಿಚಯ ಮಾಡಿಕೊಂಡೆ. ಬೆಳಗಿನ ಕರ್ಮಾಚರಗಳನ್ನು ಮುಗಿಸಿಕೊಂಡು, ಸೂಟು ಬೂಟು ಧರಿಸಿ ಸಮಾವೇಶಕ್ಕೆ ರೆಡಿ ಆದೆ. ಅಲ್ಲೇ ಉಪಹಾರದ ವ್ಯವಸ್ಥೆಯನ್ನು ತುಂಬಾ ಒಳ್ಳೆಯ ರೀತಿಯಲ್ಲಿ ಮಾಡಲಾಗಿತ್ತು. ಉಪಹಾರ ಮುಗಿಸಿಕೊಂಡು, ಎಲ್ಲರು ಸಮಾವೇಶ ನಡೆಯುಗ ಸಭಾಂಗಣಕ್ಕೆ ಹೋಗಲು ವ್ಯವಸ್ಥೆ ಮಾಡಲಾಗಿದ್ದ ಬಸ್ಸಿನಲ್ಲಿ ಪ್ರಯಾಣ ಹೊರಟೆವು. ಹೊಸ ಮುಖ ಪರಿಚಯಗಳು, ವಿವಿಧ ಭಾಷೆ, ಸಂಸ್ಕೃತಿಯ ಜನರೆಲ್ಲಾ ಒಂದೇ ಛತ್ರದಲ್ಲಿ ಸೇರುವ ಈ ತರಹದ ಅನುಭವ ನಿಜವಾಗಿಯೂ ಅವಿಸ್ಮರಣೀಯ.

ಸಮಾವೇಶ ನಡೆಯುವ ಸಭಾಂಗಣ ನಿಜವಾಗಿಯೂ ತುಂಬಾ ದೊಡ್ಡದಾಗಿತ್ತು. ಆಡಿಟೋರಿಯಂನಲ್ಲಿ ಹೆಚ್ಚುಕಡಿಮೆ ಸಾವಿರ ಜನಕ್ಕೆ ಕೂಡುವ ವ್ಯವಸ್ಥೆ ಮಾಡಲಾಗಿತ್ತು, ಮುಂದೆ ವಿಶಾಲವಾದ ವೇದಿಕೆ, ಅದರ ಹಿಂದೆ ದೊಡ್ಡ ಎಲ್ಸಿಡಿ ಪರದೆ, ಹಿಂದೆ ಕುಳಿತವರಿಗು ನಿಚ್ಚಳವಾಗಿ ಕಾಣುವಂತಿತ್ತು. ಮೊದಲು ಹೆಸರು ನೊಂದಣೆಮಾಡಿಸಿ, ಒಂದು ಹೆಗಲಿಗೆ ಹಾಕುವ ಬ್ಯಾಗು ಪಡೆದುಕೊಂಡೆ. ಆ ಬ್ಯಾಗಿನಲ್ಲಿ, ಸಮಾವೇಶದಲ್ಲಿ ಭಾಷಣ ಮಾಡುವವರ ಹೆಸರು, ಸಮಯ ಮತ್ತು ಭಾಷಣಗಳ ಸಾರಾಂಶಗಳ ವಿವರಣಗಳನ್ನೊಳಗೊಂಡ ಪುಸ್ತಕ, ನಮ್ಮ ಹೆಸರು ಮುದ್ರಿತ ಬ್ಯಾಡ್ಜ, ಇವಲ್ಲ ಇದ್ದವು. ಎಲ್ಲವು ನನಗೆ ಹೊಸ ಅನುಭವ, ಯಾಕೆಂದರೆ ಇಂದು ಜೀವನದಲ್ಲಿ ಮೊದಲ ವೈಜ್ಞಾನಿಕಸಮಾವೇಶ. ದೊಡ್ಡ ಆಡಿಟೋರಿಯಂ ಹಾಲ್ ಪ್ರವೇಶ ಮಾಡಿ ಮುಂದಿನ ನಾಲ್ಕೈದು ಸಾಲುಗಳನ್ನು ಬಿಟ್ಟು ಮಧ್ಯದಲ್ಲಿ ಕುಳಿತುಕೊಂಡೆ. ಉದ್ಘಾಟನಾ ಸಮಾರಂಭ ಇನ್ನೇನು ಪ್ರಾರಂಭವಾಯಿತು. ನನ್ನ ಸುತ್ತಲೂ ಜಗತ್ತಿನ ಮೂಲೆ ಮೂಲೆಗಳಿಂದ ಬಂದ ಅನೇಕ ವಿಷಯ ಪರಿಣಿತರು, ಹೆಸರುವಾಸಿ ವಿಜ್ಞಾನಿಗಳು, ಪ್ರಖ್ಯಾತ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರುಗಳು ಹಾಗು ಅಸಂಖ್ಯಾತ ವಿದ್ಯಾರ್ಥಿಗಳು ಕಿಕ್ಕಿರಿದು ಕುಳಿತಿದ್ದಾರೆ. ಎದುರುಗಡೆ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಪ್ರೊ. ಕರ್ತ್ ವುಥ್ರಿಚ್ (ಸ್ಟಾಕ್ಹೋಮ್ ವಿಶ್ವವಿದ್ಯಾಲಯ) ಅವರು ಉದ್ಘಾಟನಾ ಭಾಷಣ ಮಾಡುತ್ತ ಎನ್ಎಂಆರ್ ಸ್ಪೆಕ್ಟ್ರೋಸ್ಕೋಪಿಯ ಬಗ್ಗೆ ತಮ್ಮ ಅಪಾರ ಅನುಭವ ಮತ್ತು ಜ್ಞಾನದ ಸುರಿಮಳೆಯನ್ನೇ ಸುರಿಯುತ್ತಿದ್ದಾರೆ. ಆಹಾ! ಎಂತಹ ವಿಹಂಗಮ ನೋಟ. ಈ ಎಲ್ಲ ವಿದ್ವಾನರ ಗುಂಪಿನ ಮಧ್ಯೆ, ಕರ್ನಾಟಕದ ರಾಜ್ಯದ, ಬನಹಟ್ಟಿ ಎಂಬ ಒಂದು ಸಣ್ಣ ಊರಿನಲ್ಲಿ ಬೆಳೆದು ಬಂದ ಒಬ್ಬ ಸಾಮಾನ್ಯ ವ್ಯಕ್ತಿಯಾದ ನಾನು, ಇಲ್ಲಿಯವರೆಗೆ, ಹಠಬಿಡದ ತ್ರಿವಿಕ್ರಮನಂತೆ ಸಾಗಿ ಬಂದು ಕುಳಿತಿದ್ದೇನೆ, ನಿಜವಾಗಿಯೂ ಆ ಸಮಯದಲ್ಲಿ ಸಂತೋಷ ಮತ್ತು ಹೆಮ್ಮೆ ಅನಿಸಿತು. ಈ ಹಂತಕ್ಕೆ ತಲುಪಲು ಸಹಾಯಕರಾದ ಪಾಂಡೆ ಅವರನ್ನು. ಬೆನ್ನುತಟ್ಟಿ ಕಳುಹಿಸಿದ ತಂದೆ ತಾಯಿ, ಪ್ರೊಫೆಸರ್ ನಿಶಿನೊ, ಎಲ್ಲರನ್ನು ನೆನೆಸಿಕೊಂಡು ಮನದಲ್ಲೇ ಧನ್ಯವಾದ ಸಲ್ಲಿಸಿದೆ. ಹೀಗೆ ಮುಂದಿನ ಎಂಟು ದಿನಗಳ ಕಾಲ ಅನೇಕ ಗಣ್ಯರು ಮತ್ತು ಸಂಶೋಧಕರಿಂದ ಉಪನ್ಯಾಸಗಳು ನಡೆದವು. ಎಲ್ಲವನ್ನು ಕೇಳಬೇಕೆಂದಿಲ್ಲ, ನಮ್ಮ ವಿಷಯಕ್ಕೆ ಸಂಬಂಧಪಟ್ಟ ಉಪನ್ಯಾಸಗಳಿಗೆ ಮಾತ್ರ ಹಾಜರಾಗಬಹುದಿತ್ತು. ಉಳಿದ ಸಮಯದಲ್ಲಿ, ಎಕ್ಸಿಬಿಷನ್ ಪ್ರದೇಶದಲ್ಲಿ ವಿವಿಧ ಕಂಪನಿಗಳ ಪ್ರಾಡಕ್ಟ್ಸ್ ಪ್ರದರ್ಶನಕ್ಕಿಟ್ಟಿದ್ದರು, ಅಲ್ಲಿ ಸುತ್ತಾಡಿ ಹೊಸ ಹೊಸ ಪ್ರಾಡಕ್ಟ್ಸ್ಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶವಿತ್ತು. ನಾನು ಮತ್ತು ವೆಂಕಟೇಶ್ ಎಕ್ಸಿಬಿಷನ್ ಏರಿಯಾದಲ್ಲಿ ಸುತ್ತಾಡುತ್ತಿರುವಾಗ, ಭಾರತ ಮತ್ತು ವಿವಿಧ ದೇಶಗಳಿಂದ ಬಂದಿದ್ದ 5-6 ಜನ ಭಾರತೀಯರು ಭೆಟ್ಟಿಯಾದರು. ಆಮೇಲೆ ನಮ್ಮೆಲ್ಲರದು ಒಂದು ಗುಂಪೇ ಅಯೀತು. ಅರ್ಥಾತ್, ಭಾರತೀಯತೆ ನಮ್ಮನ್ನೆಲ್ಲರನ್ನು ಒಂದುಗೂಡಿಸಿತ್ತು. ಹೀಗೆ ಒಟ್ಟಿಗೆ ಸುತ್ತಾಡುವುದು, ಒಂದು ದಿನ ಎಲ್ಲ ಸೇರಿ ಪಿಜ್ಜಾ ತಿನ್ನಲು ಹೋದರೆ, ಇನ್ನೊಂದು ದಿನ ಆ ಊರಲ್ಲಿದ್ದ ಒಂದೇ ಒಂದು ಇಂಡಿಯನ್ ರೆಸ್ಟೋರೆಂಟ್ಗೆ ಹೋಗುವುದು. ಯಾಕೋ ನನಗೆ ನಮ್ಮ ದೇಶದಲ್ಲಿದೇನೋ ಅನ್ನಿಸುವಷ್ಟು ಅನ್ನ್ಯೋನ್ಯತೆ ಬೆಳೆಯಿತು. ಅಷ್ಟರಲ್ಲಿ ನನ್ನ ಸಹಪಾಠಿ ಸಮಾವೇಶ ಸ್ಥಳಕ್ಕೆ ಬಂದಿದ್ದು, ಅವನಿಗೆ ಇಂಗ್ಲಿಷ್ ಅಷ್ಟು ಬರುತ್ತಿರಲಿಲ್ಲ, ಅದಕ್ಕಾಗಿ ನನ್ನ ಬಿಟ್ಟು ಅಗಲುತ್ತಿರಲಿಲ್ಲ. ಐದನೇ ದಿನ ನಮ್ಮ ಪೋಸ್ಟರ್ ಸೆಶನ್ ಇತ್ತು, ಬೆಳಿಗ್ಗೆ ಬೇಗನೆ ಎದ್ದು ಹೋಗಿ ನನಗೆ ಮೀಸಲಿಟ್ಟ ನಂಬರಿನ ಬೋರ್ಡಿನ ಮೇಲೆ ಪೋಸ್ಟರ್ ಅಂಟಿಸಿದೆ. ಪಕ್ಕದಲ್ಲಿ ನನ್ನ ಸಹಪಾಠಿ ಹಿರಾಶಿಮಾ ಪೋಸ್ಟರ್ ಅಂಟಿಸಿದ್ದ. ಇಬ್ಬರು ಎಲ್ಲ ತಯಾರಿಯೊಂದಿಗೆ ನಮ್ಮ ಪೋಸ್ಟರ್ ಹತ್ತಿರ ನಿಂತೆವು. ಪೋಸ್ಟರ್ ಸ್ಕ್ರೀನಿಂಗ್ ಕಮಿಟಿಯ ಸದಸ್ಯರು ಒಂದೊಂದಾಗಿ ಪೋಸ್ಟರ್ಗಳನ್ನು ನೋಡುತ್ತಾ ನನ್ನ ಹತ್ತಿರ ಬಂದು, ಪೋಸ್ಟರ್ನಲ್ಲಿದ್ದ ಎಲ್ಲ ವಿಷಯವನ್ನು ಓದಿ, ಅನೇಕ ಪ್ರಶ್ನೆ ಕೇಳಿದರು. ಸಾಧ್ಯವಾದಷ್ಟು ಎಲ್ಲವನ್ನು ಉತ್ತರಿಸಿದೆ. ನಂತರ ಬಹಳ ಜನ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಕೂಡ ನನ್ನ ಪೋಸ್ಟರ್ ಹತ್ತಿರ ಬಂದು, ವಿಷಯವನ್ನು ಅರ್ಥೈಸಿಕೊಂಡು, ಪ್ರಶ್ನೆಗಳನ್ನು ಕೇಳಿದರು. ಇದು ಒಂಥರಾ ಒಳ್ಳೆಯ ಅನುಭವ, ಏಕೆಂದರೆ ಅನೇಕ ಗೊತ್ತಿಲ್ಲದ ಹೊಸ ವಿಷಯಗಳನ್ನು ಈ ರೀತಿಯ ಚರ್ಚೆಗಳ ಮೂಲಕ ತಿಳಿದುಕೊಳ್ಳಬಹುದು. ಆಮೇಲೆ ನಾನು ಬೇರೆಯವರ ಪೋಸ್ಟರ್ಗಳತ್ತ ಹೋಗಿ, ಪ್ರಶ್ನೆಗಳ ಸುರಿಮಳೆಗೈದು, ಅನೇಕ ವಿಷಯ ತಿಳಿದುಕೊಂಡೆ. ಅಂತೂ ಪೋಸ್ಟರ್ ಸೆಶನ್ ಮುಗಿದು, ಇಲ್ಲಿಗೆ ನಾವು ಬಂದ 80% ಕೆಲಸ ಮುಗಿಯಿತು. ನಮ್ಮ ಗೈಡ್ ಅವರ ಸಹಾಯಕ ಪ್ರೊಫೆಸರ್ ಆದ ಡಾ. ತಮಾಕಿ ಕಾತೊ ಅವರು ಕೂಡ ಬರಬೇಕಾಗಿತ್ತು, ಏನೋ ಕಾರಣಗಳಿಂದ ಬರಲಿಲ್ಲ. ಆದರೆ ನಾನು ಬರುವಾಗ ಏನಾದರು ಸಮಸ್ಯೆ ಬಂದರೆ ಉಪಯೋಗ ಆಗಲಿ ಎಂದು, ನನ್ನ ಕೈಯಲ್ಲಿ 200 ಯುರೋ ದುಡ್ಡು ಮತ್ತು ಅಂತಾರಾಷ್ಟ್ರೀಯ ಕರೆ ಮಾಡಬಲ್ಲ ಮೊಬೈಲ್ ಫೋನ್ ಕೊಟ್ಟಿದ್ದರು. ಅವರು ಕೊಟ್ಟ ದುಡ್ಡು ಏನು ಬಳಸಲಿಲ್ಲ, ಊರು ಮುಟ್ಟಿದಮೇಲೆ ಹಾಗೆ ವಾಪಾಸ್ ಕೊಟ್ಟುಬಿಟ್ಟೆ. ಆಗ ಸ್ಟೇಟಸ್ ಹಾಕಲು ಇನ್ನು ಸ್ಮಾರ್ಟ್ ಫೋನುಗಳು ಇರಲಿಲ್ಲ, ಕಾರಣ ಅವರು ಕೊಟ್ಟ ಫೋನಿನಿಂದ ಮನೆಗೆ ಫೋನ್ ಮಾಡಿ, ಚಾರ್ಜ್ ಜಾಸ್ತಿ ಆಗಬಹುದೆಂದು, ತಂದೆಯವರೊಂದಿಗೆ ಸ್ವಲ್ಪವೇ ಮಾತನಾಡಿ, ಎಲ್ಲವು ಸುಲಲಿತವಾಗಿ ನಡಿತಾಯಿದೆ, ಚಿಂತಿಸಬೇಡಿ, ನಾನು ಜಪಾನ್ ತಲುಪಿದ ಮೇಲೆ ಮತ್ತೆ ಫೋನ್ ಮಾಡುತ್ತೇನೆ ಎಂದು ಹೇಳಿ ಮಾತು ಮುಗಿಸಿದೆ.

ಸಮಾವೇಷದ ಒಂಬತ್ತನೇ ದಿನ ಯಾವುದೇ ಉಪನ್ಯಾಸಗಳು ಮತ್ತು ಪೋಸ್ಟರ್ ಸೆಷನ್ಗಳು ಇರಲಿಲ್ಲ. ಆ ಒಂದು ದಿನ ಗಡಂಸ್ಕ್ ನಗರ ಮತ್ತು ಹತ್ತಿರದ ಪ್ರವಾಸಿ ಸ್ಥಳಗಳನ್ನು ನೋಡಲು ಹೋಗಬಹುದಿತ್ತು. ನಮ್ಮ ಇಂಡಿಯನ್ ಗ್ಯಾಂಗ್ ಎಲ್ಲ ಸೇರಿ ಗಡಂಸ್ಕ್ ನಗರದ ನ್ಯಾಷನಲ್ ಮರಿಟೆಂ ಮ್ಯೂಸಿಯಂ, ನೆಪ್ಚುನ್ ಫೌಂಟೆನ್ ಮುಂತಾದವುಗಳನ್ನು ನೋಡಿಕೊಂಡು ಉಲಿಕಾ ಡ್ಲುಗಾ (ಉದ್ದನೆಯ ಬೀದಿ) ಎಂಬ ಪ್ರಮುಖ ಬೀದಿಯಲ್ಲಿ ಸುತ್ತಾಡಿದೆವು. ಅದೇ ಬೀದಿಯಲ್ಲಿ ಕೆಲವರು ಶಾಪಿಂಗ್ ಮಾಡಿದರು ಮತ್ತು ಅಲ್ಲೇ ಇರುವ ಇಟಾಲಿಯನ್ ರೆಸ್ಟೋರೆಂಟಿನಲ್ಲಿ ಎಲ್ಲರು ಸೇರಿ ಪಾಸ್ತಾ ತಿಂದೆವು. ಮಧ್ಯಾಹ್ನ ನಾನು ಮತ್ತು ವೆಂಕಟೇಶ್, ಬಾಲ್ಟಿಕ್ ಸಮುದ್ರ ತೀರಕ್ಕೆ ಹೋಗಿ, ವೆಸ್ಟರಪ್ಲ್ಯಾಟ್ಟ್ ಸ್ಮಾರಕ ನೋಡಿಕೊಂಡು ಬಂದೆವು. ಇದು ಐರೊಪ್ಯ ದೇಶವಾದರೂ ಇಲ್ಲಿ ಬಹಳ ಜನಕ್ಕೆ ಇಂಗ್ಲಿಷ್ ಬರುವುದಿಲ್ಲ. ಇವರು ಮಾತನಾಡುವ ಭಾಷೆ ಪೋಲಿಷ್ ಮತ್ತು ಇಲ್ಲಿ ಯುರೋ ಕರೆನ್ಸಿಗಿಂತ ಇವರದೇ ಆದ ಜ್ಲೋಟಿ ಎಂಬ ಕರೆನ್ಸಿಯಲ್ಲೇ ವ್ಯಾಪಾರ ವಹಿವಾಟು ಮಾಡುವುದು. ಹತ್ತನೆಯ ದಿನ ಮಧ್ಯಾಹ್ನದ ವರೆಗೆ ಸಮಾವೇಶದ ಸಮಾರೋಪ ಸಮಾರಂಭ ಮುಗಿದು, ಸಮಾವೇಶದ ಅಧ್ಯಕ್ಷರೊಂದಿಗೆ, ಭಾಗವಹಿಸಿದ ಎಲ್ಲ ಸದಸ್ಯರನ್ನು ಸೇರಿಸಿ ಒಂದು ಗ್ರೂಪ್ ಫೋಟೋ ತೆಗೆಯಲಾಯಿತು. ಅಲ್ಲಿಗೆ ಸಮಾವೇಶ ಸಂಪೂರ್ಣ ಮುಕ್ತಾಯ ಕಂಡಿತು. ಸಂಜೆ ಔತಣಕೂಟ ಮತ್ತು ಸಂಗೀತ ಕಚೇರಿ ಎಲ್ಲ ಏರ್ಪಡಿಸಿದ್ದರು, ಆದರೆ ನಾನದಕ್ಕೆ ಹೋಗಲಿಲ್ಲ. ಅರ್ಧ ಜನ ಅವತ್ತೇ ಜಾಗ ಕಾಲಿ ಮಾಡಿದರೆ ಇನ್ನರ್ಧ ಜನ ಮಾರನೆ ದಿನ ಬೆಳಿಗ್ಗೆ ತಮ್ಮ ಊರು/ದೇಶಗಳಿಗೆ ಹೋದರು. ಹೋಗುವವರಿಗೆಲ್ಲ ವಿಧಾಯ ಹೇಳಿ ನನ್ನ ರೂಮು ಸೇರಿದೆ. ಹತ್ತನೆ ದಿನ ಮರಳಿ ಜಪಾನಿಗೆ ಪ್ರಯಾಣಬೆಳೆಸಲು ಆಸ್ಟ್ರಿಯನ್ ಏರ್ಲೈನ್ಸ್ ನಲ್ಲಿ ವಿಮಾನ ಇಲ್ಲದ ಕಾರಣ ನಾನು ಒಂದು ದಿನ ಹೆಚ್ಚಿಗೆ ಇರಬೇಕಾಗಿತ್ತು. ಈಗ ಹನ್ನೊಂದನೆ ದಿನ, ಇಡೀ ಹಾಸ್ಟೆಲ್ಲಿನಲ್ಲಿ ಸೆಕ್ಯೂರಿಟಿ ಮತ್ತು ಕಚೇರಿಯ ವ್ಯಕ್ತಿಯನ್ನು ಬಿಟ್ಟರೆ ನಾನೊಬ್ಬನೆ. ಬೆಳಿಗ್ಗೆ ಉಪಹಾರ ಮಾಡಿ, ಟ್ರಾಮ್ ನಲ್ಲಿ ಕೇಂದ್ರ ರೈಲು ನಿಲ್ದಾಣಕ್ಕೆ ವಾರ್ಸಾವಿಗೆ ಟಿಕೆಟ್ ಖರೀದಿಸಲು ಹೋದೆ. ಅಲ್ಲಿ ವಿಚಾರಿಸಿದಾಗ, ಮತ್ತೆ ರಾತ್ರಿ 11-30 ಕ್ಕೆ ರೈಲು ಇತ್ತು, ಬಿಟ್ಟರೆ ಮಧ್ಯಾಹ್ನ 1-00 ಘಂಟೆಗೆ ಒಂದು ರೈಲು ಇದ್ದು, ಅದು ರಾತ್ರಿ 8-30 ಕ್ಕೆ ವಾರ್ಸಾವ ನಗರ ತಲುಪುತಿತ್ತು. ವಾಪಾಸ್ ಹೋಗುವಾಗ ಒಬ್ಬನೇ ಇದ್ದೀನಿ, ಅದಕ್ಕೆ ನನಗೆ ಈ ರಾತ್ರಿಯ ರೈಲು ಪ್ರಯಾಣ ಯಾಕೋ ಬೇಡ ಅನಿಸಿ, ಮಧ್ಯಾಹ್ನದ ರೈಲು ಟಿಕೆಟ್ ತೊಗೊಂಡೆ, ಏಕೆಂದರೆ ವಿಮಾನ ನಿಲ್ದಾಣದಲ್ಲೆ ರಾತ್ರಿ ಕಳೆದು ಬೆಳಗಿನ ವಿಮಾನವನ್ನು ಸರಾಗವಾಗಿ ಹತ್ತಬಹುದಿತ್ತು. ಟಿಕೆಟ್ ತೆಗೆದುಕೊಂಡು, ಸೀದಾ ಇಂಡಿಯನ್ ರೆಸ್ಟುರೆಂಟಿಗೆ ಹೋಗಿ ಊಟ ಪಾರ್ಸೆಲ್ ಕಟ್ಟಿಸಿಕೊಂಡು, ಅವರಿಗೆಲ್ಲ ಸಾಯೋನಾರಾ ಹೇಳಿ ರೂಮಿಗೆ ಹೋದೆ. ಬೇಗ ಬೇಗ ಬ್ಯಾಗು ಸಿದ್ಧಪಡಿಸಿಕೊಂಡು, ಪಾರ್ಸೆಲ್ ತಂದಿದ್ದ ಊಟಮಾಡಿ, ಹಾಸ್ಟೆಲ್ಲಿನವರಿಗೆಲ್ಲ ಧನ್ಯವಾದ ತಿಳಿಸಿ ರೈಲು ನಿಲ್ದಾಣದತ್ತ ಹೊರಟೆ. ಮಧ್ಯಾಹ್ನ ಸರಿಯಾಗಿ ವಾರ್ಸಾವಿಗೆ ಹೋಗುವ ರೈಲು ಬಂತು. ಇದೇನು ಬಂದ ಕೆಲಸ ಮುಗಿದೇ ಹೋಯಿತಲ್ಲ. ಇಲ್ಲಿಗೆ ಬರುವ ವರೆಗೆ ಏನೆಲ್ಲಾ ಅಡೆ ತಡೆಗಳು, ಎಷ್ಟೊಂದು ಸಮಸ್ಯೆಗಳು. ಈಗ ಎಲ್ಲವು ಮುಗಿದು ಹೋದ ಒಂದು ಕನಸಿನಂತೆ ಭಾಸವಾಗುತ್ತಿದೆ. ಹತ್ತು ದಿನಗಳ ಸ್ಮರಣೀಯ ನೆನಪುಗಳನ್ನು ಕೊಟ್ಟ ಗಡಂಸ್ಕ್ ನಗರಕ್ಕೆ ಬೈ  ಬೈ ಹೇಳುವಾಗ ಮನಸು ಭಾರವಾಯಿತು. ಆ ಸುಂದರ ನೆನಪುಗಳನ್ನ ಮೆಲುಕು ಹಾಕುತ್ತ ವಾರ್ಸಾವ ನಗರದತ್ತ ಪ್ರಯಾಣ ಬೆಳೆಸಿದೆ.

ವಾರ್ಸಾವ ರೈಲು ನಿಲ್ದಾಣ ತಲುಪಿ, ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಬಸ್ ಹತ್ತಿ ನಿಲ್ದಾಣ ತಲುಪುವಷ್ಟರಲ್ಲಿ ರಾತ್ರಿ ಒಂಭತ್ತು ಘಂಟೆ ಆಗಿತ್ತು. ವಿಮಾನ ನಿಲ್ದಾಣದಲ್ಲಿ ಟಿಕೆಟ್ ತೋರಿಸಿ ಒಳಗೆ ಪ್ರವೇಶ ಮಾಡಿ ಸ್ವಾಗತ ಕೌಂಟರಿನಲ್ಲಿ ನನ್ನ ವಿಮಾನ ಬೆಳಿಗ್ಗೆ 7-00 ಘಂಟೆಗೆ ಇದ್ದು, ರಾತ್ರಿಯಲ್ಲ ಏರ್ಪೋರ್ಟ್ನಲ್ಲಿ ತಂಗಬಹುದಾ ಎಂದು ಕೇಳಿದೆ,  ಮೇಲಿನ ಮಹಡಿಯಲ್ಲಿ ಲಾಬಿ ಇದೆ ಅಲ್ಲಿ ತಂಗಬಹುದು ಎಂದರು. ಕೈಯಲ್ಲಿದ್ದ ಬ್ಯಾಗನ್ನೇ ತಲೆದಿಂಬುಮಾಡಿಕೊಂಡು ಒಂದು ಮೂಲೆಯಲ್ಲಿ ನಿದ್ರೆಗೆ ಜಾರಿದೆ. ಇನ್ನು ಬಹಳ ಜನ ರಾತ್ರಿಯೆಲ್ಲ ಇಲ್ಲೇ ಮಲಗಿದ್ದರು, ಬಹುಶ ಅವರದು ನನ್ನಂತಹ ಪರಿಸ್ತಿತಿ  ಇರಬಹುದು. ಬೆಳಿಗ್ಗೆ ವಾರ್ಸಾವ ನಿಂದ ಆಸ್ಟ್ರಿಯಾದ ರಾಜಧಾನಿ ವಿಯೆನ್ನಾಗೆ ಬಂದು, ಅಲ್ಲಿ ಮೂರುಘಂಟೆ ಅಂತರದ ನಂತರ ಟೋಕ್ಯೋಗೆ ಹೋಗುವ ವಿಮಾನ ಸಿದ್ಧವಾಗಿತ್ತು. ಸಹ ಪ್ರಯಾಣಿಕರಲ್ಲಿ ಹೆಚ್ಚಿನವರೆಲ್ಲ ಜಪಾನಿಯರೇ ಆಗಿದ್ದರು. ಇಲ್ಲಿಂದ ವಿಮಾನ ಹತ್ತಿ ಹಾರುವಾಗ ಒಂದು ದೊಡ್ಡ ಯುದ್ಧ ಮುಗುಸಿ ಮನೆಗೆ ಹೋಗುವಷ್ಟು ನೆಮ್ಮದಿ, ನಿರಾಳವಾಗಿ ಮಲಗಿಬಿಟ್ಟೆ, ಹದಿನೈದು ಘಂಟೆ ಹೇಗೆ ಕಳೆಯಿತೋ ಗೊತ್ತೇ ಆಗಲಿಲ್ಲ.  

ಅಂತೂ ಇಂತೂ ಈ ಪೋಲೆಂಡ್ ದೇಶದ ಪ್ರಯಾಣ ಕೊನೆಗೊಂಡು, ಬೆಳಿಗ್ಗೆ ಟೋಕಿಯೋ ಏರ್ಪೋರ್ಟ್ ತಲುಪಿದೆ. ಪ್ರೆಶ್ ಆಗಿ ಏನೋ ಸ್ವಲ್ಪ ಉದರ ಸೇವೆ ಮಾಡಿಕೊಂಡು ಕೂತೆ. ಮನೆಗೆ ಫೋನ್ ಮಾಡಬೇಕೆನಿಸಿತು, ಫೋನ್ ಹಚ್ಚಿ ಇನ್ನೇನು ಹಲೋ ಎನ್ನುವಷ್ಟರಲ್ಲಿ ಆಕಡೆಯಿಂದ ಅಮ್ಮನ ಧ್ವನಿ, ಜಪಾನಿಗೆ ಬಂದು ಮುಟ್ಟಿದೆಯೇನಪ್ಪಾ, ಪ್ರಯಾಣ ಸುಖಕರವಾಯಿತೇ, ನಿನ್ನ ಕಾರ್ಯಕ್ರಮ ಎಲ್ಲ ಹೆಂಗಾಯಿತು.....ಪ್ರಶ್ನೆಗಳ ಸುರಿಮಳೆ. ಎಷ್ಟೋತ್ತಿನಿಂದ ನನ್ನ ಫೋನಿಗಾಗಿ ಕಾಯ್ದು ಕೂತಿದ್ದಳೋ ಏನೋ, ಫೋನ್ ರಿಂಗ್ ಆದಕೂಡಲೇ ಓಡೋಡಿ ಬಂದಿದ್ದಾಳೆ.....ಅವಳ ಧ್ವನಿ ಕಿವಿಗೆ ಬೀಳುತ್ತಿದ್ದಂತೆ ಹೃದಯ ಭಾರವಾಯಿತು. ಹೌದಮ್ಮ, ಬಂದೀದಿನಿ, ಎಲ್ಲ ಚೆನ್ನಾಗಿ ಆಯಿತು ಅಂದೆ. ಮಾತು ಮುಂದುವರಿಸಿ, ಒಳ್ಳೆದಾಯಿತು, ಇವತ್ತು ಕಾಡಸಿದ್ದೇಶ್ವರ ಜಾತ್ರೆ, ನಸುಕಿನಲ್ಲಿ ದೇವಸ್ಥಾನಕ್ಕೆ ಹೋಗಿ ನೀನು ಯಶಸ್ವಿಯಾಗಿ, ಸುರಕ್ಷಿತವಾಗಿ ಬರಲಿ ಎಂದು ಹರಕೆ ಹೊತ್ತಿದ್ದೆ, ದೇವರು ನನ್ನ ಮಾತು ನಡೆಸಿಕೊಟ್ಟ ಅಂದ್ಲು.....ಯಾವತ್ತೂ ಒಳಿತನ್ನೇ ಬಯಸುವ ಮುಗ್ದ ತಾಯಿಹೃದಯ, ಮಮತೆ ತುಂಬಿದ ಆ ಮಾತುಗಳನ್ನು ಕೇಳಿತ್ತ ನನಗರಿವಿಲ್ಲದೆ ಕಣ್ಣಾಲಿಗಳು ತುಂಬಿಕೊಂಡಿದ್ದವು. ನಂತರ ತಂದೆಯ ಜೊತೆಗೆ ಕೂಡ ಮಾತಾಡಿ ವಿಷಯ ತಿಳಿಸಿದೆ. ನಮ್ಮ ತಂದೆಗೆ ಎಲ್ಲವು ಸರಿಯಾಗಿ ಸಾಗುತ್ತದೆ ಎಂಬ ಧೈರ್ಯ ಇತ್ತು. ಎಲ್ಲರು ಖುಷಿ ಪಟ್ಟರು. ಅಷ್ಟು ಮಾತಾಡಿ ಇನ್ನು ನಾನಿರುವ ಊರಿಗೆ ಹೋಗಬೇಕೆಂದು ಹೇಳಿ ಫೋನ್ ಇಟ್ಟೆ.

ಈ ಒಟ್ಟು ಪ್ರಯಾಣ ಮತ್ತು ಅದಕ್ಕೆ ಹೊಂದಿಕೊಂಡ ಅನುಭವಗಳು ನನಗೆ ಕಲಿಸಿಕೊಟ್ಟ ಅತಿದೊಡ್ಡ ಪಾಠವೆನೆಂದರೆ, ಜೀವನದಲ್ಲಿ ಅನೇಕ ಅವಕಾಶಗಳು ಬರುತ್ತವೆ. ಆದರೆ ಜೊತೆಗೆ ಬೆಟ್ಟದಷ್ಟು ಸಮಸ್ಯೆಗಳನ್ನೂ ಹೊತ್ತು ತರುತ್ತವೆ. ಅವಕಾಶ ಎಷ್ಟು ದೊಡ್ಡದಿರುತ್ತೊ, ಅದರ ಹಿಂದೆ ಸಮಸ್ಯೆಗಳು ಅಷ್ಟೇ ದೊಡ್ಡವಾಗಿರುತ್ತವೆ. ದೇವರು ಇದ್ದಾನೊ ಇಲ್ಲವೋ ಗೊತ್ತಿಲ್ಲ, ಆದರೆ ಆ ಅಗೋಚರ ಶಕ್ತಿಯಮೇಲಿನ ನಂಬಿಕೆ ಮತ್ತು ತಂದೆ ತಾಯಿ, ಗುರುಹಿರಿಯರ ಆಶೀರ್ವಾದಗಳನ್ನು ಬೆನ್ನಿಗೆ ಕಟ್ಟಿಕೊಂಡು, ಎಂತಹ ಅಡೆ-ತಡೆಗಳು ಬಂದರು ಅಳುಕದೆ ಮುನ್ನುಗಿದಾಗ, ಆ ಅಗೋಚರ ಶಕ್ತಿಯು ಪ್ರೊ. ನಿಶಿನೊ ರೂಪದಲ್ಲೋ, ಡಾ. ಪಾಂಡೆ ರೂಪದಲ್ಲೋ, ಆ ಟ್ರಾವೆಲ್ ಏಜೆಂಟ್ ರೂಪದಲ್ಲೋ ಅಥವಾ ರೈಲಿನಲ್ಲಿ ಸಹಪ್ರಯಾಣಿಕರಾಗಿ ಬಂದ ಚೈನೀಸ್ ವ್ಯಕ್ತಿಗಳ ರೂಪದಲ್ಲೋ ಬಂದು ನಮ್ಮ ಸಹಾಯಕ್ಕೆ ನಿಲ್ಲುತ್ತದೆ. 

ಒಂದಂತು ಸತ್ಯ, ಎಲ್ಲಿಯವರೆಗೆ ನಾವು ಮುನ್ನುಗುವುದಿಲ್ಲವೊ, ಅಲ್ಲಿಯತನಕ ಏನು ಮುಂದುವರೆಯುವುದಿಲ್ಲ. ಶಾಸ್ತ್ರಗಳು ಹೇಳುವ ಹಾಗೆ "ಧೈರ್ಯಂ ಸರ್ವತ್ರ ಸಾಧನಂ"...ಅಲ್ಲವೇ! 

ಭಾನುವಾರ, ಏಪ್ರಿಲ್ 25, 2021

ಕೊರೊನಾ ಎರಡನೇ ಅಲೆ: ರೆಮ್ಡೆಸಿವಿರ್ ಮತ್ತು ವಾಕ್ಸಿನುಗಳು.

"ರೆಮ್ಡೆಸಿವಿರ್", ಇದು ಮೊಟ್ಟ ಮೊದಲ ಬಾರಿಗೆ ಹೆಪಟೈಟಿಸ್-ಸಿ ಚಿಕಿತ್ಸೆಗೆ, ಗಿಲ್ಡ್ ಎಂಬ ಅಮೇರಿಕಾದ ಕಂಪನಿ ಅಭಿವೃದ್ಧಿಪಡಿಸಿದ ಔಷಧಿ. ನಂತರದ ದಿನಗಳಲ್ಲಿ ಕೆಲವು ದೇಶಗಳಲ್ಲಿ ತನ್ನ ಅಟ್ಟಹಾಸ ಮೆರೆದ ಎಬೋಲಾ ಎಂಬ ವೈರಾಣುವಿನಿಂದಾದ ಸಾಂಕ್ರಾಮಿಕ ರೋಗವನ್ನು ಚಿಕಿತ್ಸಿಸಲು ಪ್ರಯೋಗಿಸಲಾಯಿತು. ದುರದೃಷ್ಟವಶಾತ್ ಈ ಎರಡು ವೈರಸ್ಗಳ ಮೇಲೆ ರೆಮ್ಡೆಸಿವಿರ್ ತನ್ನ ಪರಿಣಾಮ ಬೀರಲಿಲ್ಲ. ಕಾರಣ ವಶಾತ್, ಅನೇಕ ವರ್ಷಗಳಕಾಲ ಈ ಔಷದಿ ಹೇಳಹೆಸರಿಲ್ಲದೆ ಒಂದು ಮೂಲೆ ಸೇರಿತ್ತು. ಆಮೇಲೆ, 2019 ರಲ್ಲಿ ವಕ್ಕರಿಸಿದ ಕೊರೊನ ವೈರಸ್ ಸೋಂಕಿನಿಂದ ಹರಡುತ್ತಿರುವ ಈ ಕೋವಿಡ್ ಮಹಾಮಾರಿಯನ್ನು ಹತ್ತಿಕ್ಕಲು, ಅನೇಕ ದಿನಗಳಿಂದ ಮೂಲೆ ಸೇರಿದ್ದ ರೆಮ್ಡೆಸಿವಿರ್ ಔಷಧಿಯನ್ನು ಮತ್ತೆ ಗಿಲ್ಡ್ ಕಂಪನಿ ಪ್ರಾಯೋಗಿಕ ಔಷಧಿಯಾಗಿ ಉಪಯೋಗಿಸಲು ನಿರ್ಧರಿಸಿತು. ಪ್ರಿಕ್ಲಿನಿಕಲ್ ಪ್ರಯೋಗಗಳಲ್ಲಿ ರೆಮ್ಡೆಸಿವಿರ್ ಉತ್ತಮ ಫಲಿತಾಂಶಗಳನ್ನು ನೀಡಿ, ಒಂದು ಆಶಾಕಿರಣವಾಗಿ ಹೊರಹೊಮ್ಮಿತು. ಆದರೆ, ನಂತರದ ಕ್ಲಿನಿಕಲ್ ಪ್ರಯೋಗಗಳಲ್ಲಿ (ಮಾನವನಮೇಲೆ ಪ್ರಯೋಗ) ಅಷ್ಟೊಂದು ಪರಿಣಾಮ ಬೀರದಿದ್ದರೂ, ಕೆಲವು ಸೋಂಕಿತ ವ್ಯಕ್ತಿಗಳ ಮೇಲೆ ಪ್ರಯೋಗಿಸಿದಾಗ ಇದು ಪರಿಣಾಮಕಾರಿಯಾಗಿ ಕಂಡುಬಂದಿತು. ಜಾಗತಿಕವಾಗಿ ಅನೇಕ ಸಾವಿರ ಸೋಂಕಿತ ವ್ಯಕ್ತಿಗಳ ಮೇಲೆ ಪ್ರಯೋಗಿಸಿದ ಫಲಿತಾಂಶಗಳ ಆಧಾರದ ಮೇಲೆ, ಅಮೆರಿಕಾದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ, ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತ ವ್ಯಕ್ತಿಗಳಿಗೆ ಈ ಔಷಧಿಯನ್ನು ಉಪಯೋಗಿಸಬಹುದೆಂದು ಪರವಾನಿಗೆ ಕೊಟ್ಟಿತು. ನಂತರ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನದ ಮೇರೆಗೆ, ಗಿಲ್ಡ್ ಸಂಸ್ಥೆ ಭಾರತ ಮತ್ತು ಕೆಲವು ದೇಶಗಳ ಹತ್ತಾರು ಫಾರ್ಮಾಸುಟಿಕಲ್ ಕಂಪನಿಗಳಿಗೆ ಈ ಔಷಧಿಯನ್ನು ಭಾರಿ ಪ್ರಮಾಣದಲ್ಲಿ ಉತ್ಪಾದಿಸುವ ಮತ್ತು ಮಾರಾಟಮಾಡುವ ಹಕ್ಕನ್ನು ಕೊಟ್ಟಿತು. ಆದ್ದರಿಂದ, ಭಾರತದಂತಹ ದೇಶದಲ್ಲಿ ಕೂಡ ಈ ಔಷಧಿ ಎಲ್ಲರಿಗು ಸಿಗುವಂತಾಯಿತು. ಈ ಕೊರೊನ ವೈರಸನ ರೂಪಾಂತರಿಯ ಎರಡನೇ ಅಲೆ ಎಲ್ಲೆಮೀರಿ ತಾಂಡವವಾಡುತ್ತಿದೆ. ಇದಕ್ಕೆ ಜನರ ಬೇಜವಾಬ್ದಾರಿತನವೋ, ಸರಕಾರಗಳ ಪೂರ್ವ ತಯಾರಿಯ ವೈಫಲ್ಯವೋ, ಅದು ಬೇರೆ ಚರ್ಚೆಯ ವಿಷಯ. ನನ್ನ ಕೇಳಿದರೆ ಇಲ್ಲಿ ಇಬ್ಬರ ಪಾಲು ಇದೆ. ಮೊದಲನೇ ಅಲೆ ಇನ್ನೇನು ಮುಗಿದೇ ಹೋಯಿತು ಅಂತ ಮಾಸ್ಕ ಧರಿಸದೆ ಬೇಕಾಬಿಟ್ಟಿ ತಿರುಗುವುದು, ಮದುವೆ, ಮೆರವಣಿಗೆ, ಸಮಾರಂಭ ಹಾಗು ರಾಜಕೀಯ ಪ್ರಚಾರ ಸಭೆಗಳು ಎಲ್ಲೆಂದರಲ್ಲಿ, ನೀತಿನಿಯಮಗಳಲ್ಲೂ ಗಾಳಿಗೆ ತೂರಿ ಬೇಕಾಬಿಟ್ಟಿ ವರ್ತಿಸಿದೆವು. ಎರಡನೇ ಅಲೆಯ ಬಗ್ಗೆ ಜಾಗತಿಕವಾಗಿ ಮುನ್ನೆಚ್ಚರಿಕೆ ಕೊಟ್ಟರು, ಯಾರು ಕ್ಯಾರೇ ಅನ್ನಲಿಲ್ಲ.

ಇದೆಲ್ಲದರ ಮಧ್ಯೆ, ರೋಗದ ವೈಪರಿತ್ತ್ಯ ಹೆಚ್ಚಾದಮೇಲೆ, ಆಸ್ಪತ್ರೆಗಳಿಗೆ ದಾಖಲಾದ ಅನೇಕ ರೋಗಿಗಳಿಗೆ, ಹೆಚ್ಚಿನ ವೈದ್ಯರು, ಈ ಸಮಯದಲ್ಲಿ ಸಂಜೀವಿನಿ ಎನಿಸಿಕೊಂಡಿರುವ ಈ "ರೆಮ್ಡೆಸಿವಿರ್" ಔಷಧಿಯನ್ನೇ ಪ್ರೇಸ್ಕ್ರೈಬ್ ಮಾಡುತ್ತಿರುವುದರಿದ, ರಾತ್ರೋರಾತ್ರಿ ಈ ಔಷಧೀಯ ಬೇಡಿಕೆ ಜಾಸ್ತಿ ಆಗಿದ್ದು ಸಹಜ. ಆದರೆ ಇದೆ ಪರಿಸ್ಥಿತಿಯನ್ನ ದುರುಪಯೋಗಪಡಿಸಿಕೊಂಡು ಅನೇಕ ದುರಾಸೆಯ ಕಿಡಿಗೇಡಿಗಳು, ಈ ಔಷಧಿಯನ್ನು ಅಕ್ರಮ ಸಂಗ್ರಹಣೆಮಾಡಿ, ದುಡ್ಡಿನ ಆಸೆಗಾಗಿ ಹೆಚ್ಚಿನ ಬೆಲೆಯಲ್ಲಿ ಕಾಳಸಂತೆಯಲ್ಲಿ ಮಾರಾಟಮಾಡುತ್ತಿರುವ ವರದಿಗಳನ್ನು ಓದಿದರೆ, ಇದು ಹೆಂತಹ ದುರಂತ ಮತ್ತು ನಾಚಿಕೆಗೇಡು ಸಂಗತಿ ಎನಿಸುತ್ತದೆ.

ರೆಮ್ಡೆಸಿವಿರ್ ಔಷಧಿಯ ಜೊತೆಗೆ, ಈಗ ನಮ್ಮೆಲ್ಲರಿಗೆ ಆಶಾಕಿರಣವಾಗಿರುವ ಇನ್ನೊಂದು ಜೀವ ಉಳಿಸುವ ಅಸ್ತ್ರವೆಂದರೆ ವಾಕ್ಸಿನುಗಳು, ಬೇರೆ ಬೇರೆ ಫಾರ್ಮ ಕಂಪನಿಗಳು, ಬೇರೆ ಬೇರೆ ಜೈವಿಕ ತಂತ್ರಜ್ಞಾನ ಬಳಸಿ ಅನೇಕ ವ್ಯಾಕ್ಸೀನ್ಗಳನ್ನೂ (ಲಸಿಕೆ) ಅಭಿವೃದ್ಧಿಪಡಿಸಿವೆ. ನಮ್ಮ ದೇಶದಲ್ಲಿಯೂ ಕೂಡ ಎರಡು ಕಂಪನಿಗಳ ವಾಕ್ಸಿನುಗಳು ಹೊರಬಂದಿವೆ. ಈ ವೈರಸ್ಸಿಗಾಗಿಯೇ ವಾಕ್ಸಿನುಗಳು ಬಂದವೋ ಅಥವಾ ವಾಕ್ಸಿನುಗಳಿಗಾಗಿಯೇ ಈ ವೈರಸ್ಸು ಜನ್ಮತಾಳಿತೋ ಅದು ಕೂಡ ಬೇರೆ ಚರ್ಚೆಯ ವಿಷಯ. ಆದರೆ ಈಗ ಈ ವೈರಸ್ ಜೊತೆ ಹೋರಾಡಲು ನಮ್ಮ ದೇಹದಲ್ಲಿ ರೋಗ ನಿರೋಧಕ ಕಣಗಳಾದ ಆಂಟಿಬಾಡೀಸ್ ಬೆಳೆಯಬೇಕೆಂದರೆ ಈ ವ್ಯಾಕ್ಸೀನ್ ತೆಗೆದುಕೊಳ್ಳುವುದು ಅವಶ್ಯವಾಗಿದೆ. ಬಹಳ ಜನ ಈ ವ್ಯಾಕ್ಸಿನುಗಳನ್ನು ತೆಗೆದುಕೊಳ್ಳಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದಾರೆ. ಈಗ ಪರಿಸ್ಥಿತಿ ಹೇಗಿದೆ ಎಂದರೆ, ಬರಿಗೈಯಿಂದ ಯುದ್ಧಕ್ಕೆ ಹೊರಡುವುದಕ್ಕಿಂತ, ಸಿಕ್ಕ ಕೆಲವು ಅಸ್ತ್ರಗಳೊಂದಿಗೆ ಯುದ್ಧವನ್ನು ಎದುರಿಸಿ ಪ್ರಾಣವುಳಿಸಿಕೊಳ್ಳುವುದು ಅತೀ ಅವಶ್ಯವಾಗಿದೆ. ಈಗಾಗಲೇ ಬಹಳ ಜನ ಈ ಲಸಿಕೆಗಳನ್ನು ತೆಗೆದುಕೊಂಡಿದ್ದು, ಸುರಕ್ಷಿತವಾಗಿವೆ ಎಂಬ ವರದಿಗಳು ಕೇಳಿಬಂದಿವೆ. ರೆಮ್ಡೆಸಿವಿರ್ ಔಷಧಿಯು, ಈ ವೈರಸ್ಸು ನಮ್ಮ ದೇಹದಲ್ಲಿರುವ ಜೀವಕೋಶಗಳನ್ನು ಸೇರಿ ಇನ್ನೇನ್ನು ತನ್ನ ಮರಿಗಳನ್ನು ಉತ್ಪಾದಿಸುತ್ತದೆ ಅನ್ನುವಷ್ಟರಲ್ಲಿ, ಅದರ ಕೆಲವೊಂದು ಪ್ರೊಟೀನುಗಳಮೇಲೆ ತನ್ನ ಪ್ರಭಾವ ಬೀರಿ, ವೈರಸ್ ಅನ್ನು ಸರ್ವನಾಶಮಾಡುತ್ತದೆ. ಆದರೆ ವಾಕ್ಸಿನುಗಳು ಹಾಗಲ್ಲ, ಅಕಸ್ಮಾತ್ ಸೋಂಕು ತಗುಲಿ, ವೈರಸ್ ನಮ್ಮ ದೇಹ ಸೇರಿ, ಜೀವಕೋಶಗಳ ಒಳಗೆ ಹೋಗುವ ಮುಂಚೆಯೇ, ಅದನ್ನು ಹೊಡೆದುರುಳಿಸುತ್ತವೆ. ರೆಮ್ಡೆಸಿವಿರ್ ತೊಗೊಳ್ಳುವಷ್ಟು ದುಃಸ್ಥಿತಿಗೆ ಹೋಗುವುದು ಬೇಡ ಎನ್ನುವವರು, ವಾಕ್ಸಿನನ್ನು ತೆಗೆದುಕೊಂಡು ವೈರಸ್ ಜೊತೆ ಹೋರಾಡಲು ಸದೃಢರಾಗಬಹುದು.

ಇನ್ನು, ಯಾಕಪ್ಪ ಸುಮ್ನೆ ಈ ವ್ಯಾಕ್ಸೀನ್ ಅಥವಾ ರೆಮ್ಡೆಸಿವಿರ್ ಗೋಜಿಗೆ ಹೋಗೋದು ಅನ್ನುವವರು, ಒಳ್ಳೆಯ ಆಹಾರ, ಯೋಗ-ವ್ಯಾಯಾಮ, ಅಥವಾ ಆಯುರ್ವೇದ-ಮನೆ ಔಷಧಿಗಳನ್ನು ಸೇವಿಸುತ್ತಾ, ಎಲ್ಲ ರೀತಿಯ ವೈರಸ್ಗಳೊಂದಿಗೆ ಹೋರಾಡಬಲ್ಲ ಸದೃಢ ರೋಗನಿರೋಧಕ ಶಕ್ತಿಯನ್ನ ಬೆಳೆಸಿಕೊಳ್ಳುವುದರ ಜೊತೆಗೆ, ಕೊರೊನ ಮಾರ್ಗಸೂಚಿಗಳನ್ನು (ಮಾಸ್ಕ, ಸ್ಯಾನಿಟೈಸರ್, ಕೈ ತೊಳೆಯುವುದು, ಸುರಕ್ಷಿತ ಸಾಮಾಜಿಕ ಅಂತರ) ಕಟ್ಟುನಿಟ್ಟಾಗಿ, ಚಾಚೂತಪ್ಪದೆ ಪಾಲಿಸಿ, ನಿಮ್ಮ ಮತ್ತು ಇತರರ ಅರೋಗ್ಯ ಕಾಪಾಡುವ ಮಹದೋದ್ದೇಶ ಹೊಂದಿ, ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡುವತ್ತ ಚಿಂತಿಸಿರಿ. ಬನ್ನಿ! ಒಟ್ಟಾಗಿ ಹೋರಾಡಿ, ಈ ಕೊರೊನದ ಎಷ್ಟು ಅಲೆಗಳು ಬಂದರು, ಅವುಗಳನ್ನು ಹೊಡೆದೋಡಿಸಿ ಯಶಸ್ವಿಯಾಗೋಣ.......