ಭಾನುವಾರ, ಮಾರ್ಚ್ 17, 2019

ಉತ್ತರ ಕರ್ನಾಟಕದ ಪ್ರಸಿದ್ಧ ಮಸಾಲೆ ಖಾರದ ಕಥೆ

ಉತ್ತರ ಕರ್ನಾಟಕ ಎಂದ ಕೂಡಲೆ ಒಮ್ಮೆಲೇ ತಲೆಯಲ್ಲಿ ಬರೋದು ವಿಭಿನ್ನ ಶೈಲಿಯ ಕನ್ನಡ, ತನ್ನದೇ ಆದ ವಿಶಿಷ್ಟವಾದ ಖಾದ್ಯಗಳು, ಮಾತಿನಲ್ಲಿ ಹಾಸ್ಯ ಮತ್ತು ರಸಿಕತೆ ತುಂಬಿದ ಜನ, ಇತ್ತ್ಯಾದಿ. ದಾವಣಗೆರೆಇಂದ ಬೀದರ್ ವರೆಗಿನ ಕರ್ನಾಟಕದ ಉತ್ತರ ದಿಕ್ಕಿನೆಡೆಗೆ ಹಬ್ಬಿರುವ ಈ ಗಂಡು ಮೆಟ್ಟಿದ ನಾಡು ಎಂದೆನಿಸಿಕೊಳ್ಳುವ ಭಾಗವೇ ಉತ್ತರ ಕರ್ನಾಟಕ. ಒಂದು ಕಡೆ ಮಹಾರಾಷ್ಟ್ರ, ಇನ್ನೊಂದು ಕಡೆ ಆಂಧ್ರ (ಈಗಿನ ತೆಲಂಗಾಣ), ಈ ಎರಡು ರಾಜ್ಯಗಳ ಭಾಷೆ ಮತ್ತು ಸಂಸ್ಕೃತಿಗಳ ಅಪಾರವಾದ ಪ್ರಭಾವಕ್ಕೊಳಪಟ್ಟು, ಇತ್ತ ಶುದ್ಧ ಕನ್ನಡವೂ ಅಲ್ಲದ ಅತ್ತ ಮರಾಠಿ ಅಥವಾ ತೆಲುಗು ಅಲ್ಲದ ಒಂದು ಮಿಶ್ರ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಿಕೊಂಡುಬಂದ ಈ ರಾಜ್ಯದ ಭಾಗ ಎನ್ನಬಹುದು. ಸಾಮಾನ್ಯವಾಗಿ ಎಲ್ಲರಿಗು ತಿಳಿದಿರುವ ಉತ್ತರ ಕರ್ನಾಟಕದ ಖಾದ್ಯಗಳೆಂದರೆ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಶೇಂಗಾ ಚಟ್ನಿ, ಕಾಳು ಪಲ್ಯ, ಎಣ್ಣೆಗಾಯಿ ಪಲ್ಯ, ಶೇಂಗಾ ಹೋಳಿಗೆ, ಇತ್ತ್ಯಾದಿ. ಇವುಗಳಂತೆ ಈ "ಮಸಾಲೆ ಖಾರ" ಕೂಡ ಒಂದು ಪ್ರಮುಖ ಖಾದ್ಯನು ಹೌದು ಹಾಗು ತರಕಾರಿ ಮಾಡಲು ಬೇಕಾದ ಬಹುಮುಖ್ಯ ಸಾಮಗ್ರಿನೂ ಹೌದು. ಈ ಮಸಾಲೆ ಖಾರದ ನಾಮಾರ್ಥ ವಿವರಣೆ, ಅದರ ಉಪಯೋಗ, ಮಾಡುವ ವಿಧಾನ ಹಾಗು ಇದರ ಜೊತೆಗೆ ಅಂಟಿಕೊಂಡಿರುವ ನನ್ನ ಬಾಲ್ಯದ ನೆನಪುಗಳ ನಂಟು, ಇವುಗಳ ಬಗ್ಗೆ ಹೇಳುವ ಪ್ರಯತ್ನವೇ ಈ ಲೇಖನದ ಉದ್ದೇಶ.  

ನಮ್ಮ ಉತ್ತರ ಕರ್ನಾಟಕದ ಯಾರದೇ ಅಡುಗೆ ಮನೆಯಲ್ಲಿ ನೀವು ಇಣುಕಿದರೆ ಅಲ್ಲಿ ನಿಮಗೆ ಎರಡು ಭರಣಿಗಳು ಕಂಡುಬರುವುದು ಸರ್ವೇ ಸಾಮಾನ್ಯ. ಆ ಎರಡರಲ್ಲಿ ಒಂದಂತೂ ಉಪ್ಪಿನಕಾಯಿಗೆ ಮೀಸಲು. ಹಾಗಾದ್ರೆ ಇನ್ನೊಂದು ಭರಣಿ ಏನು? ಅದು ಬೇರೇನೂ ಅಲ್ಲ, ಮಸಾಲೆ ಖಾರ ಎಂಬ ಅಡುಗೆಗೆ ಬೇಕಾಗುವೆ ಈ ಪದಾರ್ಥವನ್ನು ಶೇಖರಿಸುವ ಭರಣಿ. ಈ ಮಸಾಲೆ ಖಾರವನ್ನು ನಮ್ಮ ಜನ 6 ತಿಂಗಳಿನಿಂದ ಒಂದು ವರ್ಷದ ವರೆಗೆ ಬೇಕಾಗುವಷ್ಟು ಮಾಡಿ ಉಪ್ಪಿನಕಾಯಿಯಂತೆ, ಚೀನಿ ಮಣ್ಣಿನ ಭರಣಿಗಳಲ್ಲಿ ಶೇಖರಿಸುವುದು ವಾಡಿಕೆ. ಹಾಗಾದ್ರೆ ಏನಪ್ಪಾ ಇದು ಮಸಾಲೆ ಖಾರ ಅಂದ್ರೆ? ಈ ಪದಾರ್ಥದ ಹೆಸರೇ ಹೇಳುವಂತೆ ಇದು ಅಡುಗೆಗೆ ಬೇಕಾಗುವ ಎರಡು ಪ್ರಮುಖ ವಸ್ತುಗಳಾದ ಮಸಾಲೆ ಪುಡಿ ಮತ್ತು ಇನ್ನೊಂದು ಖಾರದ ಪುಡಿಗಳ ಸಮ್ಮಿಶ್ರಣ. ನಮ್ಮ ಉತ್ತರ ಕರ್ನಾಟಕದ ಪ್ರತಿಯೊಂದು ತರಕಾರಿ, ಸಾರು ಹಾಗು ಕಾಳು ಪಲ್ಯ ಮಾಡಲು ಬೇಕಾದ ಅತ್ತ್ಯಂತ ಮುಖ್ಯವಾದ ಸಾಮಗ್ರಿ ಅಂದರೆ ತಪ್ಪಾಗಲಿಕ್ಕಿಲ್ಲ. ಈ ಹಳೆ ಮೈಸೂರು ಅಧವಾ ಕರ್ನಾಟಕದ ದಕ್ಷಿಣ ಭಾಗಕ್ಕೆ ಬಂದ್ರೆ ಇಲ್ಲಿ ಜನ ಸಾಂಬಾರ್ ಪುಡಿ ಅಂತ ಮಾಡೋದುಂಟು. ಆದರೆ ಇದರಲ್ಲಿ ನೀವು ಮೆಣಸಿನಕಾಯಿ ಬೆರೆಸದೆ, ಖಾರದ ಪುಡಿ ಅಂತ ಬೇರೆಯಾಗಿ ಮಾಡ್ತೀರಿ. ಇಷ್ಟೇ ನೋಡಿ ಎರಡಕ್ಕೂ ಇರೋ ವ್ಯತ್ಯಾಸ ಮತ್ತು ಹೋಲಿಕೆ ಅಂದ್ರೆ. ಈ ಮಸಾಲೆ ಖಾರದ ಇನ್ನು ಕೆಲವು ವಿಶೇಷಗಳೇನೆಂದ್ರೆ, ನಮ್ಮ ಕಡೆ ಜನಕ್ಕೆ ಬೆಳಗಿನ ಉಪಹಾರಕ್ಕೆ ಇಡ್ಲಿ-ವಡೆ-ದೋಸೆ ಇರ್ಲೇಬೇಕಂತಿಲ್ಲ, ಖಡಕ್ ಅಥವಾ ಬಿಸಿ ರೊಟ್ಟಿ. ಅದರ ಜೊತೆಗೆ ಪಲ್ಯ, ಮೊಸರು, ಚಟ್ನಿಪುಡಿ ಇದ್ದರೆ ಅಷ್ಟೆ ಸಾಕು. ಅಕಸ್ಮಾತ್ ಅದು ಸಿಗಲಿಲ್ಲ ಅಂದ್ರೆ ರೊಟ್ಟಿ ಜೊತೆ ಗಟ್ಟಿ ಮೊಸರಿಗೆ ಅರ್ಧ ಚಮಚೆ ಮಸಾಲೆ ಖಾರ ಮಿಕ್ಸ್ ಮಾಡಿ ಹೊಡೀತಾರೆ. ಇಲ್ಲಿ ಅದು ಚಟ್ನಿಯ ಪಾತ್ರವಹಿಸುತ್ತದೆ. ಕುದಿಸಿದ ಬೆಳೆ ಇರಲಿ, ಮೆಂಥೆಪಲ್ಯ, ಇತ್ಯಾದಿ ಸಪ್ಪೆ ಪಲ್ಯದಲ್ಲಿ ಕೂಡ ಇದನ್ನು ಚಟ್ನಿಪುಡಿ ತರ ಬೆರೆಸಿ ತಿನ್ನೋದುಂಟು. ಅದೇನೇ ಇರಲಿ ಈ ಮಸಾಲೆ ಖಾರ ಬೆರೆಸಿ ತಿಂದಾಗ ಬರೋ ಸ್ವಾದ ಇದೆ ನೋಡಿ ಅದನ್ನ ಮಾತಿನಲ್ಲಿ ಹೇಳೋಕಾಗಲ್ಲ, ಕೇವಲ ಅನುಭವಿಸಬೇಕು. 

ಸಾಂಬಾರ್ ಪುಡಿ ತರಹ ಈ ಮಸಾಲೆ ಖಾರಕ್ಕೂ ಕೂಡ ತನ್ನದೇ ಆದ ಮಾಡುವ ವಿಧಿ ವಿಧಾನಗಳಿವೆ, ಹಾಗು ಈ ವಿಧಾನಗಳು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಮೌಖಿಕವಾಗಿ ಸಾಗುತ್ತ ಬಂದಿವೆ. ಈಗೆಲ್ಲ ಖಾರ ಕುಟ್ಟುವ ಮಷೀನ್ಗಳು ಬಂದಿರೋದ್ರಿಂದ ಬೇಕಾದ ಸಾಮಗ್ರಿಗಳನ್ನ ಗಿರಾಣಿಯವನಿಗೆ ಕೊಟ್ಟರೆ ಒಂದು ಘಂಟೆನಲ್ಲಿ ಅರೆದು ಕೊಟ್ಟಬಿಡ್ತಾನೆ. ಅಷ್ಟೆ ಏಕೆ ಕೆಲವೊಂದು ದೀನಸಿ ಅಂಗಡಿಗಳಲ್ಲಿ ರೆಡಿಮೇಡ್ ಮಸಾಲೆ ಖಾರದ ಪ್ಯಾಕೆಟ್ಗಳು ಕೂಡ ಸಿಗೋದುಂಟು. ಯಾಕಂದ್ರೆ ಜನರ ಹತ್ರ ಇದನ್ನೆಲ್ಲಾ ಮಾಡೋಕೆ ಸಮಯ ಇಲ್ಲ ನೋಡಿ. ಹಿಂದೆ ನಾವೆಲ್ಲಾ ಚಿಕ್ಕವರಿದ್ದಾಗ ಮನೆಯಲ್ಲೆ ಈ ಖಾರ ಕುಟ್ಟೋದು ವಾಡಿಕೆ. ಆಮೇಲೆ ಆ ಖಾರ ಕುಟ್ಟೋ ದಿನ ಅಂದರೆ ಒಂದು ತರಹದ ಹಬ್ಬದ ಸಡಗರ ಇದ್ದಹಾಗೆ. ಅಂದ್ರೆ ಮನೆ ಮಂದಿಯೆಲ್ಲ ಒಂದಿಲ್ಲ ಒಂದು ರೀತಿ ಈ ಕೆಲಸಕ್ಕೆ ಕೈಜೋಡಿಸುತ್ತಿದರು. ಸಾಮಾನ್ಯವಾಗಿ ಮಸಾಲೆ ಖಾರ ತಯಾರಿಸೋದಕ್ಕೆ ವರ್ಷದಲ್ಲಿ ಒಂದು ದಿನ ಅಂತ ಮುಂಚೆನೇ ನಿಗದಿಪಡಿಸ್ತಾರೆ, ಆಮೇಲೆ ಆ ದಿನ ಬರೋಕೆ ಮುಂಚೆ, ಸಂತೆಯಲ್ಲಿ ಇದಕ್ಕೆ ಬೇಕಾದ ಒಣ ಮೆಣಸಿನಕಾಯಿ ಮತ್ತು ವಿವಿಧ ಮಸಾಲೆ ಪದಾರ್ಥಗಳನ್ನು ಖರೀದಿಮಾಡಿ ಚನ್ನಾಗಿ ಬಿಸಿಲಲ್ಲಿ ಒಣಗಿಸಿ ತಯಾರಿ ಮಾಡಿಟ್ಟುಕೊಳ್ಳೋದುಂಟು. ಮೆಣಸಿನಕಾಯಿ ಅಂತ ಬಂದ್ರೆ ಇದರಲ್ಲಿ ಖಾರದ ಮೆಣಸಿನಕಾಯಿ ಮತ್ತು ಸಪ್ಪೆ, ಅಂದ್ರೆ ನಮ್ಮ ಪ್ರಸಿದ್ಧ ಬ್ಯಾಡಗಿ ಒಣಮೆಣಸಿನಕಾಯಿ ಅಂತ ವಿವಿಧ ಬಗೆಯ ಮೆಣಸಿನಕಾಯಿಗಳನ್ನ ಉಪಯೋಗಿಸೋದು ವಾಡಿಕೆ. ಕೆಲವೊಂದು ಕುಟುಂಬಗಳು ಖಾರ ಜಾಸ್ತಿ ತಿನ್ನೋದ್ರಿಂದ ಕೇವಲ ಖಾರದ ಮೆಣಸಿನಕಾಯಿ ಉಪಯೋಗಿಸ್ತಾರೆ, ಇಲ್ಲ ಮೀಡಿಯಂ ಖಾರ ಬೇಕಿದ್ರೆ ಮೂರು ಭಾಗ ಸಪ್ಪೆ ಬ್ಯಾಡಗಿ ಮೆಣಸಿನಕಾಯಿ ಮತ್ತು ಒಂದು ಭಾಗ ಖಾರ ಮೆಣಸಿನಕಾಯಿ ಮಿಶ್ರಣ ಮಾಡೋದು ಪದ್ಧತಿ. ಆಮೇಲೆ ಇದಕ್ಕೆ ಬೇಕಾದ ಇತರ ಸಾಮಗ್ರಿ ಅಂದ್ರೆ ಏಲಕ್ಕಿ, ಲವಂಗ, ಜೀರಿಗೆ, ದಾಲಚಿನ್ನಿ, ಕಲ್ಲು ಹೂವು, ಕೇಸರಿ ಹೂವು, ಪತ್ರಿ ಎಲೆ (Bay leaf), ಹೀಗೆ 10-14 ಮಸಾಲೆ ಪದಾರ್ಥಗಳು. ಇಲ್ಲಿ ಜನ ಬಹಳ ತೊಂದರೆ ತೊಗೊಳ್ಳದೆ, ಸಂತೆಯಲ್ಲಿ ಈ ಮಸಾಲೆಗಳನ್ನು ಮಾರುವವನಿಗೆ 2 kg ಖಾರಕ್ಕೆ ಬೇಕಾಗುವ ಮಸಾಲೆಗಳನ್ನು ಕೊಡಪ್ಪ ಅಂದ್ರೆ ಸಾಕು, ಅವನು ಸರಿಯಾಗಿ ಲೆಕ್ಕಹಾಕಿ ಎಲ್ಲವನ್ನು 50 ಅಥವಾ 100 g ಪೊಟ್ಟಣಗಳಲ್ಲಿ ಕಟ್ಟಿಕೊಟ್ಟುಬಿಡ್ತಾನೆ. ಇದು ಅವನಿಗೆ ತಲೆತಲಾಂತರದಿಂದ ಬಂದ ಅನುಭವ ಅಂತ ಹೇಳ್ಬಹುದು. ಇವುಗಳ ಜೊತೆಗೆ ಬೇಕಾಗುವ ಉಳಿದ ಸಾಮಗ್ರಿಗಳೆಂದ್ರೆ ಅರಿಶಿನ, ಒಣ ಕೊಬ್ಬರಿ ಮತ್ತು ಈರುಳ್ಳಿ, ಆಮೇಲೆ ಕರಿಯಲು ಎಣ್ಣೆ. ಆವಾಗಲೆಲ್ಲ ನಮ್ಮ ಮನೇಲಿ ನಮ್ಮ ಅಜ್ಜಿ ಮತ್ತು ಅಮ್ಮ ಈ ಮಸಾಲೆ ಖಾರವನ್ನ ಮನೇಲೆ ಕುಟ್ಟುತ್ತಿದ್ದರು. ಆಗ ನಾವೆಲ್ಲ ಅವರಿಗೆ ಸಹಾಯ ಅಂದ್ರೆ, ಅರಿಶಿನ ಕೊಂಬುಗಳನ್ನು ಒಡೆಯೋದು, ಒಣ ಕೊಬ್ಬರಿಯನ್ನು ಚಿಕ್ಕ ಚಿಕ್ಕ ಭಾಗಗಳಾಗಿ ಮುರಿಯೋದು, ಅಥವಾ ಇನ್ನ್ಯಾವುದೋ ಚಿಕ್ಕ ಪುಟ್ಟ ಸಹಾಯ ಮಾಡಿದ ನೆನಪುಗಳು ಉಂಟು. ಖಾರ ಕುಟ್ಟಲು ನಿಗದಿಯಾದ ದಿನ ಬಂತೆಂದ್ರೆ, ಅವತ್ತು ಮುಂಚೇನೆ ಬಿಸಿಲಿನಲ್ಲಿ ಒಣಗಿಸಿದ ಎಲ್ಲ ಸಾಮಗ್ರಿಗಳನ್ನ (ಮೆಣಸಿನಕಾಯಿಯನ್ನು ಬಿಟ್ಟು) ಸ್ವಲ್ಪ ಪ್ರಮಾಣದ ಎಣ್ಣೆಯಲ್ಲಿ ಚೆನ್ನಾಗಿ ಕರಿದು, ಮೆಣಸಿನಕಾಯಿಜೋತೆ ಒರಳು ಕಲ್ಲಿನಲ್ಲಿ ಕಬ್ಬಿಣದ ಒನಕೆಯಿಂದ ಚೆನ್ನಾಗಿ ಕುಟ್ಟುತ್ತಿದ್ದರು. ಆ ದಿನದ ವಿಶೇಷ ಏನಂದ್ರೆ, ಅವತ್ತು ಮನೆತುಂಬೆಲ್ಲ ಮಸಾಲೆ ವಾಸನೆ ಘಮಘಮಿಸುತ್ತಿತ್ತು. ಸಂಜೆ ಎನ್ನುವಷ್ಟರಲ್ಲಿ ಮಸಾಲೆ ಖಾರ ರೆಡಿಆಗಿ, ಸಂಜೆಯ ಅಡುಗೆಗೆ ಈ ತಾಜಾ ಖಾರವನ್ನೇ ಬಳಸುತಿದ್ದರು, ಆಮೇಲೆ ಈ ತಾಜಾ ಖಾರವನ್ನು ಬಳಸಿ ಮಾಡಿದ ಪಲ್ಯ, ಸಾರು ಅಥವಾ ಕಾರುಬೇಳೆ ಇವುಗಳ ರುಚಿ ಸೂಪರ್ ಅಂದ್ರೆ ಸೂಪರ್. ಏಕೆಂದ್ರೆ ಈ ಮಸಾಲೆ ಖಾರದ ಮಹಿಮೆನೆ ಹಾಗೆ. ಈ ರೀತಿ ತಯಾರಿಸಿದ ಮಸಾಲೆ ಖಾರವನ್ನು ಒಂದು ಸ್ವಚ್ಛವಾದ ಒಂದು ಚೀನಿ ಮಣ್ಣಿನ ಭರಣಿಯಲ್ಲಿ ಹಾಕಿ, ಸರಿಯಾಗಿ ಮುಚ್ಚಿ, ವರ್ಷಗಟ್ಟಲೆ ಉಪಯೋಗಿಸುತ್ತಾರೆ. ಈ ಬೆಂಗಳೂರಿನಲ್ಲಿ, ಮನೇಲಿ ಅದನ್ನ ಮಾಡಕ್ಕೂ ಆಗಲ್ಲ ಮತ್ತೆ ಹೊರಗಡೆನೂ ಎಲ್ಲೂ ಸಿಗಲ್ಲ, ಅದಕ್ಕೆ ನಮ್ಮ ಊರಿಗೇ ಹೋದಾಗ ಒಂದು ಅರ್ಧ ಕೆಜಿ ಎತ್ತಾಕೊಂಡು ಬರ್ತೀವಿ.  

ಇಷ್ಟೆಲ್ಲ ಹೇಳಿದ ಮೇಲೆ ನಿಮಗೂ ಇದನ್ನ ಸವಿಯೋ ಆಸೆ ಹುಟ್ಟಿದ್ರೆ, ನಮ್ಮ ಉತ್ತರ ಕರ್ನಾಟಕದ ಸ್ನ್ಹೇಹಿತರಿದ್ರೆ, ಅವರ ಮನೆಗೆ ಹೋಗಿ, ವಿಶೇಷವಾಗಿ ಮಸಾಲೆ ಖಾರ ಸ್ವಲ್ಪ ಟೇಸ್ಟ್ ಮಾಡಿ ಬನ್ನಿ, ನಂತರ ರುಚಿ ಹೇಗನಿಸಿತು ತಿಳಿಸೋದನ್ನ ಮರೀಬೇಡಿ....   

ನಾವು ಯಾವುದೇ ಭಾಗದವರಾಗಿರಲಿ, ನಮ್ಮ ಭಾಗ ಅಥವಾ ನಾಡು ಅಂತ ಬಂದಮೇಲೆ ಅದರ ವೈವಿದ್ಯತೆಯನ್ನು ಸಾರಿ ಹೇಳುವ ಒಂದು ವಿಶಿಷ್ಟವಾದ ವಸ್ತು ಅಥವಾ ಖಾದ್ಯ ಅಥವಾ ಕಲೆ, ಪರಂಪರೆ, ಸಂಸ್ಕೃತಿ ಅಂತ ಏನಾದರು ಒಂದು ಇದ್ದೆ ಇರುತ್ತದೆ. ಆ ತರಹದ ಒಂದು ವಿಶಿಷ್ಟವಾದ ವಸ್ತುವೇ ಈ "ಮಸಾಲೆ ಖಾರ". ಜಾಗತೀಕರಣದ ತೊಟ್ಟಿಲಲ್ಲಿ ತೂಗುತಿರುವ ನಮ್ಮ ಇಂದಿನ ಓಡಾಟದ ಬದುಕಿನಲ್ಲಿ ಸ್ವಲ್ಪ ಬಿಡುವು ಸಿಕ್ಕಾಗ  ಇಂತಹ ಒಂದು ವಿಶಿಷ್ಟವಾದ ವಸ್ತು ಅಥವಾ ವಿಷಯದ ನೆನಪು ಬಂದಾಗ ಅದಕ್ಕೆ ಸಂಬಂದಿಸಿದ ಅನೇಕ ಗತಿಸಿದ ಸುಮಧುರವಾದ ನೆನಪುಗಳ ಸರಮಾಲೆ ನಮ್ಮ ಕಣ್ಣಮುಂದೆ ಬರುವುದು ಸರ್ವೇ ಸಾಮಾನ್ಯ. ಅದೇ ರೀತಿ ನನ್ನ ನೆನಪಿಗೆ ಬಂದಿದ್ದು ಈ "ಮಸಾಲೆ ಖಾರದ ಕಥೆ"......ಬಹಳದಿನಗಳಿಂದ ಇದರ ಬಗ್ಗೆ ಬರಿಯಬೇಕೆನ್ನುವ ಯೋಚನೆ ಇತ್ತು, ವೇಳೆಯ ಅಭಾವದಿಂದ ಆಗಿರಲಿಲ್ಲ... ಕೊನೆಗೂ ಆ ಸಮಯ ಕೂಡುಬಂದ ಕಾರಣ ಇಂದು ಈ ಲೇಖನ ಪ್ರಸ್ತುತ ಪಡಿಸುತ್ತಿದ್ದೇನೆ.......ಓದಿ ನಿನ್ನ ಅನಿಸಿಕೆ ತಿಳಿಸಿರಿ....