ಗುರುವಾರ, ಜೂನ್ 17, 2021

ಬೆಂದಕಾಳೂರಿನಲ್ಲಿ ಬಾಳೆ ಎಲೆಯ ಮೇಲೆ ಊಟ...

ಬೆಂಗಳೂರು! ಬದುಕು ಕಟ್ಟಿಕೊಳ್ಳಲು ಬರುವವರಿಗೆಲ್ಲ ಅವಕಾಶಗಳ ನೆಲೆಬೀಡಾಗುತ್ತಿರುವ ಈ ಮಾಯಾನಗರಿಗೆ, ಚಿಕ್ಕ ಗಾರೆ ಕೆಲಸದವನಿಂದ ಹಿಡಿದು ದೊಡ್ಡ ಕಂಪನಿಯ ಸಿಇವೋ ವರೆಗೆ, ರಾಜ್ಯ ಮತ್ತು ದೇಶದ ವಿವಿಧ ಭಾಗಗಳಿಂದ ದಿನೆ ದಿನೆ ಜನಸಾಗರ ಹರಿದು ಬರ್ತಾಇದೆ.  ಆ ಒಂದು ಪಟ್ಟಿಯಲ್ಲಿ, ಖಾಸಗಿ ಕೆಲಸಾನೊ, ಸರ್ಕಾರಿ ಕೆಲಸನೊ, ಇಲ್ಲ ಏನೋ ಒಂದು ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಳ್ಳಲು ನೀವು ಬಂದಿರುತ್ತೀರಿ. ಹತ್ತು ತಿಂಗಳ ಮುಂಗಡ ಹಣ ಕಟ್ಟಿ ಬಾಡಗೆ ಮನೆಯಲ್ಲಿಯೊ ಅಥವಾ ಬ್ಯಾಂಕುಗಳ ಅಭಯ ಹಸ್ತದಿಂದ ತೆಗೆದುಕೊಂಡ ಒಂದು ಅಪಾರ್ಟ್ಮೆಂಟಿನಲ್ಲಿ ಬಂದು ಗೂಡು ಕಟ್ಟಿಕೊಂಡಿರುತ್ತೀರಿ. ಈ ರೀತಿ ಇಲ್ಲಿ ಬಂದು ನೆಲೆಸಿದಮೇಲೆ, ವರ್ಷಗಳು ಕಳೆದಂತೆ ಹೊಸ ಸಹೋದ್ಯೋಗಿಗಳು, ಮನೆಯ ನೆರೆ-ಹೊರೆಯವರು, ಹೀಗೆ ಹೊಸ ಜನರ ಪರಿಚಯವಾಗಿ, ಅದು ನಿಮಗೆ ಗೊತ್ತಿಲ್ಲದೇ ಸ್ನೇಹಕ್ಕೆ ತಿರುಗಿರುತ್ತದೆ. ನಿಮ್ಮಂತೆ ಈ ಊರಿಗೆ ಬಂದು ನೆಲೆಸಿದ ನಿಮ್ಮ ಹಳೆಯ ಗೆಳೆಯ, ನೀವು ಇದೆ ಊರಲ್ಲಿ ತಂಗಿದ್ದೀರೆಂದು ಅವರಿವರಿಂದ ತಿಳಿದುಕೊಂಡು, "ಏನೋ, ನೀನು ಬೆಂಗಳೂರಿನಲ್ಲಿ ಇದ್ದಿಯಂತೆ, ನಾನು ಇಲ್ಲೇ ಈ ಏರಿಯಾದಲ್ಲಿ ಇದೀನಪ್ಪಾ. ಯಾವಾಗ್ಲಾದ್ರು ಸಮಯ ಸಿಕ್ಕಾಗ ಮನೆಕಡೆ ಬಾರೋ, ಭೆಟ್ಟಿಯಾಗಿ ಬಹಳ ದಿನ ಆಯಿತು"..... ಅಂದಿರ್ತಾನೆ. ಕೆಲಸದ ಓಡಾಟದಲ್ಲಿ ಸಮಯ ಸಿಗುವುದು ವಾರಾಂತ್ಯದ ಶನಿವಾರ ಮತ್ತು ರವಿವಾರ ಮಾತ್ರ. ಅದು, ಮುಂಚೆನೇ ಪ್ಲಾನ್ ಮಾಡಿದ ಮನೆ ಕೆಲಸಗಳು ಹಾಗು ಹೆಂಡತಿ ಮಕ್ಕಳ ಜೊತೆ ಕಾಲ ಕಳೆಯುವುದರಲ್ಲಿ ಕಳೆದುಹೋಗುತ್ತದೆ. ಅದೇನೇ ಇರಲಿ, ನಿಮ್ಮ ಸ್ನೇಹಿತರ ಸಂಪರ್ಕಜಾಲ ಮಾತ್ರ ನೋಡು ನೋಡುತ್ತಿದ್ದಂತೆ ವಿಶಾಲವಾಗಿ ಹರಡಿಬಿಟ್ಟಿರುತ್ತದೆ. ಹೀಗಿರುವಾಗ, ವರ್ಷದಲ್ಲಿ ಒಂದು ಸಲವಾದರು ನಿಮ್ಮ ಸ್ನೇಹ ಸಂಪರ್ಕಜಾಲದ ಸದಸ್ಯರಲ್ಲಿ ಒಬ್ಬರಾದ್ರು ಅವರ ಮನೆಯಲ್ಲಿ ನಡೆಯಲಿರುವ ಮದುವೆ-ಮುಂಜಿ, ನಾಮಕರಣ ಕಾರ್ಯಕ್ಕೆ ಆಮಂತ್ರಿಸಿರುತ್ತಾರೆ. ಇಲ್ಲಾ ಅಂದ್ರೆ ಗೃಹಪ್ರವೇಶ,  ಹುಟ್ಟುಹಬ್ಬ, ಸತ್ಯನಾರಾಯಣ ಪೂಜೆ ಅಥವಾ ವರಮಹಾಲಕ್ಷ್ಮಿ ಪೂಜೆ ಅಂತ ಏನೋ ಒಂದು ಕಾರ್ಯಕ್ರಮಕ್ಕೆ ಆಮಂತ್ರಣ ಬಂದೇಇರುತ್ತದೆ. ಬಹಳ ಪರಿಪರಿಯಾಗಿ ಕೇಳಿಕೊಂಡಿರುತ್ತಾರೆ, ಹೊಸ ಸ್ನೇಹ ಬೇರೆ, ಅದಕ್ಕೆ ನೀವು ಹೆಚ್ಚು ವಿಚಾರಿಸದೆ ಆಮಂತ್ರಣವನ್ನು ಒಪ್ಪಿಕೊಂಡಿರುತ್ತೀರಿ. ಈ ಬೆಂಗಳೂರಿನ, ಎಲ್ಲೆಂದರಲ್ಲಿ ಮೆಟ್ರೋಕೆಲಸಗಳು ನಡೆಯುತ್ತಿರುವ ರಸ್ತೆಗಳ, ವಾಹನ ದಟ್ಟಣೆಯಲ್ಲಿ ಹೆಣಗಾಡುತ್ತಾ, ಸಮಾರಂಭದ ದಿನ ಆಮಂತ್ರಣ ನೀಡಿದ ಅತಿಥಿಗಳ ಮನೆಗೆ ಹೋಗಿರುತ್ತೀರಿ. ಹೋದಮೇಲೆ ಆಮಂತ್ರಿತರ ಮನೆಯವರೊಂದಿಗೆ ಉಭಯಕುಶಲೋಪರಿ. ನಿಮ್ಮಂತೆ ಆಮಂತ್ರಿತರಾದ ಸ್ನೇಹಿತರು ಇಲ್ಲ ಸಹುದ್ಯೋಗಿಗಳ ಜೊತೆ ಸ್ವಲ್ಪ ಹೊತ್ತು ಹರಟೆ, ಗಾಸಿಪ್ಪ್, ಮಾತುಕತೆಯಲ್ಲಿ ಕಾಲಕಳೆದು, ಮದುವೆ ಸಮಾರಂಭ ಇದ್ದರೆ ಎಲ್ಲರು ಸೇರಿ ವೇದಿಕೆಯ ಮೇಲಿರುವ ನವದಂಪತಿಗಳಿಗೆ ಉಡುಗೊರೆ ಒಪ್ಪಿಸಿ, ಶುಭಾಶಯ ತಿಳಿಸಿ ಫೋಟೋ ತೆಗೆಸಿಕೊಳ್ಳುವ ಕಾರ್ಯಕ್ರಮ. ಇದೆಲ್ಲ ನಡೆಯುತ್ತಿರುವಾಗಲೇ ಹೊಟ್ಟೆಯ ಆಜ್ಞೆಯ ಮೇರೆಗೆ ಕಣ್ಣುಗಳು ಊಟದ ಹಾಲ್ ಎಲ್ಲಿದೆ ಎಂದು ಆಕಡೆ ಈಕಡೆ ಕಣ್ಣಾಡಿಸಿ ಹುಡುಕಲು ಶುರುಮಾಡಿರುತ್ತವೆ. ಸಮಾರಂಭ ಅಂದಮೇಲೆ ಊಟೋಪಚಾರದ ವ್ಯವಸ್ಥೆ ಇದ್ದೆ ಇರುತ್ತದೆ, ಆದರೂ ಕಣ್ಣುಗಳಿಗೆ ಹುಡುಕುವ ತವಕ ಜಾಸ್ತಿ. ಆಮಂತ್ರಿಸಿದ ಸ್ನೇಹಿತರು ಊಟ ಮಾಡಿಕೊಂಡು ಹೋಗಿ ಅಂತ ಹೇಳುವುದಕ್ಕೆ ಮುಂಚೆನೇ ನಿಮ್ಮ ನಿರ್ಧಾರ ಆಗಿಯೇ ಬಿಟ್ಟಿರುತ್ತದೆ ಎಂದು ಅವರಿಗೇನು ಗೊತ್ತು. ಮೇಲಾಗಿ, ಎರಡು ಮೂರು ಅಂಗಡಿ ತಿರುಗಿ ಗಿಫ್ಟ್ ತೊಗೊಂಡು, ದುಡ್ಡು ಖರ್ಚುಮಾಡಿ ದೂರದಿಂದ ಆಟೋ, ಕ್ಯಾಬ್ ಅಥವಾ ಸ್ವಂತ ವಾಹನದಲ್ಲಿ ಬಂದಿರ್ತೀರಾ, ಊಟ ಮಾಡದೇ ಹಂಗೆ  ಹೋಗೋಕಾಗುತ್ತೆಯೇ! ಇನ್ನು ನನ್ನಂತಹ ಭೋಜನ ಪ್ರಿಯರಿಗೆ ಇದೆಲ್ಲ ಹೇಳಬೇಕೆ. ಮದುವೆ, ಸಮಾರಂಭ ಮತ್ತು ದೇವಸ್ಥಾನಗಳ ದಾಸೋಹಗಳನ್ನು ನಾನು ಎಂದು ತಪ್ಪಿಸುವುದಿಲ್ಲ. 

ಈ ಬೆಂಗಳೂರಿನಲ್ಲಿ ಊಟದ ಹಾಲ್ ಮತ್ತು ಊಟ ಬಡಿಸುವ ಪದ್ಧತಿ, ಇವೆರಡರಲ್ಲು ಒಂದು ವಿಶೇಷತೆ ಇದೆ. ಪ್ರಾಯಶಃ, ಕರ್ನಾಟಕದ ದಕ್ಷಿಣ ಭಾಗದ ಎಲ್ಲ ಊರುಗಳಲ್ಲಿ ಇದೆ ಪದ್ಧತಿಯನ್ನು ಅನುಸರಿಸುವುದುಂಟು. ಅದಕ್ಕೆ ನನ್ನಂತಹ ಉತ್ತರ ಕರ್ನಾಟಕದಿಂದ ಬಂದವರಾಗಿದ್ದರೆ, ಇಲ್ಲಿಯ ಊಟದ ಹಾಲಿಗೆ ಪ್ರವೇಶಮಾಡಿದಮೇಲೆ ನಿಮಗೆ ಖಂಡಿತ ಅಶ್ಚ್ಯರ ಕಾದಿರುತ್ತದೆ. ಹೌದು! ಈ ಊರಿನಲ್ಲಿ ಹೆಚ್ಚಾಗಿ ಎಲ್ಲ ಸಮಾರಂಭಗಳಲ್ಲಿ ಟೇಬಲ್ ಮತ್ತು ಕುರ್ಚಿ ಪದ್ಧತಿ  ಜಾರಿಯಲ್ಲಿದ್ದು, ಸಾಲಾಗಿ ಜೋಡಿಸಿದ ಸ್ಟೀಲಿನ ಡೈನ್ನಿಂಗ್ ಟೇಬಲ್ಲುಗಳ ಮುಂದೆ ಇಟ್ಟ ಸ್ಟೀಲಿನ ಕುರ್ಚಿ ಅಥವಾ ಸ್ಟೂಲುಗಳ ಮೇಲೆ ಆಮಂತ್ರಿತರನ್ನು ಪಂಕ್ತಿಯಲ್ಲಿ ಕೂಡಿಸಿ, ಬಾಳೆಯ ಎಲೆಯ ಮೇಲೆ ಊಟ ಬಡಿಸುತ್ತಾರೆ. ಈ ಪದ್ಧತಿ, ನೋಡಲು ವ್ಯವಸ್ಥಿತವಾದ ಮತ್ತು ಶಿಸ್ತಿನ ವ್ಯವಸ್ಥೆ ಅನಿಸಿದರು, ಅದಕ್ಕೆ ತನ್ನದೆ ಆದ ಸಮಸ್ಯೆಗಳಿವೆ. ಬಫೆಟ್ ಪದ್ಧತಿಯಾದರೆ, ಪ್ಲೇಟಿನಲ್ಲಿ ಊಟ ಬಡಿಸಿಕೊಂಡು ಎಲ್ಲಾದರು ಕುಂತೋ, ನಿಂತೋ ಊಟಮಾಡಬಹುದು. ಆದರೆ, ಇಲ್ಲಿ ಹಾಗಲ್ಲ, ಒಂದು ಪಂಕ್ತಿಯಲ್ಲಿ ಕುಳಿತವರೆಲ್ಲ ಎಲ್ಲ ಪದಾರ್ಥಗಳನ್ನು ಮನಃ ಪೂರ್ತಿ ತಿಂದು ಏಳುವವರೆಗೆ, ಮುಂದಿನ ಪಂಕ್ತಿಯವರು ಬಕಪಕ್ಷಿಯಂತೆ ನಿಂತು ಕಾಯಬೇಕು. ಈ ಸಮಸ್ಯೆ ಎದುರಾಗಬಾರದೆಂದು ಕೆಲವು ಜಾಣರು, ಈಗ ಪಂಕ್ತಿಯಲ್ಲಿ ಕುಳಿತು ಊಟ ಮಾಡುವವರ ಹಿಂದೆ ನಿಂತು, ಆ ಚೇರನ್ನು ಮುಂಗಡ ಬುಕಿಂಗ್ ಮಾಡಿರುತ್ತಾರೆ. ಅಕಸ್ಮಾತ್ ಆ ಸಮಾರಂಭದಲ್ಲಿ ಬಹಳ ಜನ ಬಂದಿದ್ದಾರೆ ಈ ರೀತಿ ಬುಕಿಂಗ್ ಮಾಡದಿದ್ದರೆ ಅವತ್ತು ನಿಮಗೆ ಊಟಮಾಡಲು ಸೀಟು ಸಿಕ್ಕಂತೆ ಅನ್ನಿ. ಇನ್ನು ಬೆಂಗಳೂರಿನಲ್ಲಿ ಮದುವೆಗಳ ಆರತಕ್ಷತೆ ಸಮಾರಂಭವು ಸಾಮಾನ್ಯವಾಗಿ ಸಂಜೆ ಶುರುವಾಗಿ ರಾತ್ರಿ ೧೧-೦೦ ವರೆಗೆ ನಡೆದು, 80 ಪ್ರತಿಶತ ಆಮಂತ್ರಿತರೆಲ್ಲ ಆರತಕ್ಷತೆಗೆ ಮಾತ್ರ ಬಂದು ಮಾರನೇದಿನ ಬೆಳಿಗ್ಗೆ ನಡೆಯುವ ಮಾಂಗಲ್ಯಧಾರಣೆ ಕಾರ್ಯಕ್ರಮಕ್ಕೆ ಕೇವಲ ಹತ್ತಿರದ ನೆಂಟರು, ಸ್ನೇಹಿತರು ಅಷ್ಟೇ ಇರುವುದು. ಹಾಗಾಗಿ, ನೀವು ಅರತಕ್ಷತೆಯ ಕಾರ್ಯಕ್ರಮದ ಅತಿಥಿಯಾಗಿದ್ದರೆ, ಇಲ್ಲಿ ಜನರು ಜಾಸ್ತಿ ಮತ್ತು ಎಲ್ಲರಿಗು ಬೇಗ ಊಟಮಾಡಿ ಮನೆ ಸೇರುವ ತವಕದಲ್ಲಿದ್ದು, ಇಲ್ಲಿ ನೀವು ಬುಕಿಂಗ್ ಟೆಕ್ನಿಕ್ ಉಪಯೋಗಿಸಲಿಲ್ಲ ಅಂದ್ರೆ ನಿಮಗೆ ಸಿಗುವುದು ರಾತ್ರಿ 10 ಘಂಟೆ ನಂತರದ ಕೊನೆಯ ಪಂಕ್ತಿ. ಆಮೇಲೆ ನೀವು ಊಟಮಾಡಿ ಮನೆ ಸೇರಿವುದರಲ್ಲಿ ಮಧ್ಯರಾತ್ರಿ ಆಗುವುದು ಗ್ಯಾರಂಟಿ.  

ಹಂಗು ಹಿಂಗು ಮಾಡಿ ಒಂದು ಪಂಕ್ತಿಯಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬದವರೊಂದಿಗೆ ಬಂದಿದ್ದರೆ, ಅವರಿಗೂ ಸ್ಥಾನ ಪಡೆದುಕೊಂದು ಕೂತಾಗ ಜೀವನದಲ್ಲಿ ಏನೋ ಒಂದು ದೊಡ್ಡ ಸಾಧನೆ ಮಾಡಿದಷ್ಟು ಸಂತೋಷದಿಂದ ಬೀಗುವಷ್ಟು ಖುಷಿ ಆಗಿರುತ್ತದೆ. ಆಯಿತಪ್ಪ, ಇನ್ನು  ಆರಾಮವಾಗಿ ಊಟಮಾಡಿ ಮನೆಗೆ ಹೋಗಬಹುದು ಅಂತ ಖಾತ್ರಿಯಾಗುತ್ತದೆ. ಅಷ್ಟರಲ್ಲಿ ನಿಮ್ಮ ಟೇಬಲಿನ ಮೇಲೆ ನೀರು ಹೀರಬಲ್ಲ ಒಂದು ದಪ್ಪನೆಯ ಬಿಳಿ ಹಾಳೆ ಹಾಸಲಾಗಿ. ಇಲ್ಲಿಂದ ಬಾಳೆ ಎಲೆಯ ಮೇಲಿನ ಊಟ ಬಡಿಸುವ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ, ಕ್ಯಾಟರಿಂಗ್ನವರು ಒಂದೊಂದು ಬಕೇಟಿನಲ್ಲಿ ಒಂದೊಂದು ಪದಾರ್ಥ ಹಿಡಿದು ನಿಮ್ಮ ಸೇವೆಗಾಗಿ ಸಾಲಾಗಿ ನಿಂತಿರುವುದನ್ನು ಕಾಣಬಹುದು. ಮೊದಲು ಹಾಸಿದ ಬೀಳಿ ಹಾಳೆಯ ಉದ್ದೇಶ, ಊಟ ಆದಮೇಲೆ ಮುಸುರಿ ಮತ್ತು ನೀರು ಚೆಲ್ಲಿದರೆ ತಗೆಯಲು ಹಗುರವಾಗಲೆಂದು. ಮೊದಲು ಒಬ್ಬ ವ್ಯಕ್ತಿ, ಪಂಕ್ತಿಯಲ್ಲಿ ಕುಳಿತ ಎಲ್ಲರ ಮುಂದೆ ಒಂದು ಅಗಲವಾದ ಬಾಳೆಯ ಎಲೆಯನ್ನು ಹಾಸಿ ಹೋಗುತ್ತಾನೆ ಮತ್ತು ಅವನ ಹಿಂದೆ ಇನ್ನೊಬ್ಬ ಪ್ರತಿ ಎಲೆಗೆ ಒಂದರಂತೆ ಒಂದು ನೀರಿನ ಬಾಟಲಿಯನ್ನು ಇಡುತ್ತ ಹೋಗುತ್ತಾನೆ. ಈ ಬಾಟಲಿಯ ನೀರು, ಕುಡಿಯಲು ಮತ್ತು ಊಟದ ಪದಾರ್ಥಗಳನ್ನು ಬಡಿಸುವ ಹಂತಕ್ಕಿಂತ ಮುಂಚೆ ಬರುವ ಎಲೆ ತೊಳೆಯುವ ಕಾರ್ಯಕ್ರಮಕ್ಕೆ ಉಪಯೋಗವಾಗುತ್ತದೆ. ಏನಿದು ಎಲೆ ತೊಳೆಯುವ ಕಾರ್ಯಕ್ರಮ ಅಂತೀರಾ. ಊಟಕ್ಕೆ ಮುಂಚೆ ಬಲಗೈಯಲ್ಲಿ ನೀರು ತೆಗೆದುಕೊಂಡು, ಎಲೆಯ ಮೇಲೆ ತೀರ್ಥದ ನೀರು ಪ್ರೋಕ್ಷಣೆ ಮಾಡಿದಂತೆ ಸಿಂಪಡಿಸಿ, ಎಡಗೈಯಿಂದ, ಎಲೆಯ ಬಲದಂಡೆಯಿಂದ ಎಡದಂಡೆಯವರೆಗೆ ನೀರನ್ನು ಸವರುತ್ತ ಎಲೆಯನ್ನು ಸ್ವಚ್ಛ ಮಾಡುವುದು. ಆ ಎಲೆಯ ಮೇಲಿಂದ ಬಳಿದು ಕೆಳಗೆ ಹಾಕಿದ ನೀರು ದಪ್ಪನೆಯ ಹಾಳೆಯ ಮೇಲೆ ಬಿದ್ದು ಇಂಗಿ ಹೋಗುತ್ತದೆ. ಈ ಎಲೆ ತೊಳೆಯುವ ಪ್ರಕ್ರಿಯೆಯ ಜೊತೆಗೆ ಹೊಂದಿಕೊಂಡ ನನ್ನದೊಂದು ಅನುಭವ ಹಂಚಿಕೊಳ್ಳಲೇಬೇಕು.  ಒಂದು ಸಲ ನಮ್ಮ ಸಹುದ್ಯೋಗಿಯೊಬ್ಬ ಹೊಸ ಅಪಾರ್ಟ್ಮೆಂಟ್ ಖರೀದಿ ಮಾಡಿ, ನಮ್ಮ ಕಂಪನಿಯ ಎಲ್ಲ ಸಹುದ್ಯೋಗಿಗಳಿಗೆ ಗೃಹಪ್ರವೇಶಕ್ಕೆ ಆಮಂತ್ರಿಸಿದ್ದ. ಆ ಆಮಂತ್ರಿತರಲ್ಲಿ, ಹದಿನೈದು ವರ್ಷ ಬೆಂಗಳೂರಿನಲ್ಲಿ ಇದ್ದರು ಒಂದು ಅಕ್ಷರ ಕನ್ನಡ ಕಲಿಯದ ಉತ್ತರ ಪ್ರದೇಶದ ನಮ್ಮ ಬಾಸ್ ಕೂಡ ಇದ್ದ. ಎಲ್ಲರು ಸಮಾರಂಭಕ್ಕೆ ಹೋಗಾಯಿತು. ಪೂಜೆ-ಪುನಸ್ಕಾರ ಎಲ್ಲ ಮುಗಿದಮೇಲೆ ಊಟದ ಕಾರ್ಯಕ್ರಮ ಪ್ರಾರಂಭವಾಗಿ, ನಾವು ಸಹುದ್ಯೋಗಿಗಳೆಲ್ಲ ಅವನು ಬರಲಿ ಇವನು ಬರಲಿ ಅಂತ ಲೇಟಾಗಿ ಬಂದವರಿಗೆ ಕಾಯುವುದರಲ್ಲಿ ವೇಳೆ ಬಹಳ ಆಗಿ, ಎಲ್ಲರ ಹೊಟ್ಟೆ ಚುರ್ರ್ ಅನ್ನುತಿತ್ತು. ಕೊನೆಗೆ ಎಲ್ಲರು ಸೇರಿದಮೇಲೆ ಒಟ್ಟಿಗೆ ಒಂದೇ ಪಂಕ್ತಿಯಲ್ಲಿ ಕೂಡೋಣವೆಂದು ನಿರ್ಧಾರವಾಗಿ, ಟೇಬಲ್ ಮತ್ತು ಚೇರ್/ಸ್ಟೂಲ್ ಪದ್ಧತಿಯ ಪಂಕ್ತಿಯಲ್ಲಿ ಕೂತೆವು. ತುಂಬಾ ಲೇಟಾಗಿದೆ ಮತ್ತು ಹೊಟ್ಟೆ ಬೇರೆ ಹಸಿದಿದೆ, ಆರಾಮಾಗಿ ಕೂತು ಚೆನ್ನಾಗಿ ಊಟಮಾಡಿದರಾಯಿತು ಎಂದು ನಿರ್ಧರಿಸಿದ್ದೆ, ಆದರೆ ಪಕ್ಕದಲ್ಲೂ ನೋಡಿದರೆ ನಮ್ಮ ಬಾಸ್ ಕೂಡಬೇಕೆ! ಇವನಿಗೆ ಈ ಪದ್ಧತಿ ಗೊತ್ತಿದೆಯೊ ಇಲ್ಲವೊ, ನಾನವನಿಗೆ ಎಲ್ಲ ಹಂತಗಳನ್ನು ತಿಳಿಸಿ ಹೇಳುತ್ತಾ ಊಟಮಾಡಬೇಕು. ಆಗ ನನ್ನ ಗಮನ ನನ್ನ ಊಟದ ಕಡೆಗೆ ಹೋಗುವುದಿಲ್ಲ ಎಂದು ಕೊರಗುತ್ತಿರುವಾಗ ಕ್ಯಾಟರಿಂಗ್ ಹುಡುಗ ಮುಂದೆ ಎಲೆ ಹಾಕಿ ನೀರಿನ ಬಾಟಲಿ ಇತ್ತು ಹೋದ. ನಾನು ಹಗುರವಾಗಿ ನೀರು ತೆಗೆದುಕೊಂಡು ಎಲೆಮೇಲೆ ಸಿಂಪಡಿಸಿ ಇನ್ನೇನು ಸ್ವಚ್ಛಗೊಳಿಸಬೇಕು, ಅಷ್ಟರಲ್ಲಿ ಅವನಕಡೆ ಲಕ್ಷ ಹೋಯಿತು. ಅಲ್ಲಿ ನೋಡಿದರೆ ಅವನು ಆಗಲೇ ನೀರು ಸಿಂಪಡಿಸಿ ಎಲೆ ಒರೆಸುತಿದ್ದ. ಅರೇ! ನಿಮಗಿದು ಗೊತ್ತಾ ಅಂತ ಕೇಳಿದೆ. ಅದಕ್ಕವನು, ನಾನು ಇಲ್ಲಿ ಬಂದು ಹದಿನೈದು ವರ್ಷವಾಯಿತು, ಹಿಂತಹ ಅನೇಕ ಕಾರ್ಯಕ್ರಮಗಳಿಗೆ ಹೋಗಿದ್ದು, ಈ ಬಾಳೆ ಎಲೆಯ ಮೇಲಿನ ಊಟದ ಪ್ರತಿ ಹಂತವು ನನಗೆ ಗೊತ್ತು ಎಂದು ಬೀಗಿದ. ಈ ವಿಷಯ ತಿಳಿದು ನಾನೇನೋ ನೀರಾಳನಾದೆ, ಆದರೆ ಹದಿನೈದು ವರ್ಷದಿಂದ ಬೆಂಗಳೂರಿನಲ್ಲಿ ಇದ್ದು ಕೇವಲ ಈ ಊಟದ ಪದ್ಧತಿಯನ್ನು ಕಲಿತಿದ್ದೀಯಾ, ಜೊತೆಗೆ ನಾಲ್ಕು ಮಾತು ಕನ್ನಡ ಕಲೀಲಿಕ್ಕೆ ನಿನಗೇನು ಧಾಡಿನಾ ಅಂತ ಮನದೊಳಗೆ ಬೈದು ಊಟ ಮುಂದುವರಿಸಿದೆ. 

ಈ ಪದ್ಧತಿಯಲ್ಲಿ, ಖಾದ್ಯಗಳ ಆಧಾರದಮೇಲೆ ಮೂರು ಸುತ್ತುಗಳಲ್ಲಿ ಊಟವನ್ನು ಬಡಿಸಲಾಗುವುದು ಮತ್ತು ಕೊನೆಯ ಸುತ್ತು ಸ್ವಲ್ಪ ಜಾಸ್ತಿ ಉದ್ದವಾಗಿರುತ್ತದೆ. ಆಮೇಲೆ, ಎಲೆಯ ಎಡಭಾಗದ ಮೇಲಿನ ಮೂಲೆಯಲ್ಲಿ ನೀಡುವ ಉಪ್ಪಿನಿಂದ ಹಿಡಿದು ಬಲಭಾಗದ ಕೆಳಮೂಲೆಯಲ್ಲಿ ನೀಡುವ ಸಿಹಿ ಪದಾರ್ಥದವರೆಗೆ, ಪ್ರತಿಯೊಂದು ಪದಾರ್ಥಕ್ಕೆ ಆ ಎಲೆಯ ಮೇಲೆ ತನ್ನದೇ ಆದ ಜಾಗ ಅಥವಾ ಹಕ್ಕು ಇದೆ. ಒಂದು ಸಲ ನಾನು ಹೀಗೆ ಒಂದು ಕಾರ್ಯಕ್ರಮಕ್ಕೆ ಹೋದಾಗ, ಊಟ ಬಡಿಸುವವನಿಗೆ, ಉಪ್ಪು ಅಲ್ಲಿ ಬೇಡ ಇಲ್ಲ ನೀಡು ಅಂತ ಬೇರೆ ಜಾಗ ತೋರಿಸಿದಕ್ಕೆ, ವಕ್ಕರಿಸಿಗೊಂಡು ನನ್ನನ್ನೇ ನೋಡುತ್ತಾ, ಇಲ್ಲ ಉಪ್ಪನ್ನು ಇಲ್ಲೇ ನೀಡಬೇಕು ಎಂಬ ಶಾಸ್ತ್ರ ಇದೆ ಅಂದ. ಆಯಿತು ಗುರುವೆ ನೀನು ನಿನ್ನ ಶಾಸ್ತ್ರ ಪಾಲಿಸು ನಾನು ನನ್ನ ರೀತಿಯಲ್ಲಿ ಊಟಮಾಡುವೆ ಅಂದು ಸುಮ್ಮನಾದೆ. 

ಮೊದಲನೆ ಸುತ್ತು ಒಂತರ ಸಿನಿಮಾ ಟ್ರೈಲರ್ ನೋಡಿದಂಗೆ ಇರುತ್ತದೆ. ಅಂದರೆ ಈ ಸುತ್ತಿನಲ್ಲಿ ಅವತ್ತು ಮಾಡಿದ ಎಲ್ಲ ಪದಾರ್ಥಗಳ ಕಿರುಪರಿಚಯ. ಉಪ್ಪು, ಉಪ್ಪಿನಕಾಯಿ ನೀಡಿದಮೇಲೆ, ಎರಡು-ಮೂರು ತರಹದ ಪಲ್ಯ, ಗೊಜ್ಜು, ತೊವ್ವೆ ಅಥವಾ ಪೊಪ್ಪು, ಸ್ವಲ್ಪ ಸಿಹಿ ಪದಾರ್ಥ (ಶ್ಯಾವಿಗೆ, ಅಕ್ಕಿ ಅಥವಾ ಗೋದಿ ಪಾಯಸ), ಸಂಡಿಗೆ ತುಣುಕುಗಳು, ಇತ್ಯಾದಿ. ಈ ಎಲ್ಲ ಸ್ಯಾಂಪಲ್ ಪದಾರ್ಥಗಳನ್ನು ರುಚಿನೋಡುತ್ತಿರುವಾಗ ಇನ್ನೊಬ್ಬ ಬಂದು ಎರಡು ಚಿಕ್ಕ ಚಪಾತಿ ನೀಡಿ, ಅದರೊಂದಿಗೆ ನೆಂಚಿಕೊಳ್ಳಕು ಬಟಾಟೆ ಸಾಗು ಬಡಿಸಿ ಹೋಗುತ್ತಾನೆ. ಇನ್ನು ಎರಡನೇ ಸುತ್ತು ಅಂದರೆ ಸಿಹಿ ಪಧಾರ್ಥಗಳ ಸುತ್ತು. ಈ ಸುತ್ತಿನಲ್ಲಿ ಕೆಲವೊಂದು ಸಲ ಹೋಳಿಗೆ (ಬೆಳೆ ಅಥವಾ ಕಾಯಿ ಹೋಳಿಗೆ) ಅಥವಾ ಪಾಯಸ, ಅದರ ಮೇಲೆ ತುಪ್ಪ ಇದ್ದರೆ, ಕೆಲವುಸಲ ಬುಂದಿ, ಮೋತಿಚೂರ್ ಲಡ್ಡು, ಅಥವಾ ಜಹಾಂಗೀರ್ ಇರುತ್ತದೆ. ಇನ್ನು ಕೆಲವೊಬ್ಬರ ಮನೆ ಕಾರ್ಯಕ್ರಮದಲ್ಲಿ, ಈಗ ತಿಳಿಸಿದ ಸಿಹಿ ಪದಾರ್ಥಗಳ ಜೊತೆಗೆ ಬೇರೆ ಪ್ಲೇಟಿನಲ್ಲಿ, ಬುಟ್ಟಿಯಾಕಾರದ ಶ್ಯಾವಿಗೆಯ ರಚನೆಯನ್ನಿಟ್ಟು, ಅದರ ಮೇಲೆ ಬಾದಾಮಿ ಹಾಲನ್ನು ಹಾಕಿ ಕೊಡುತ್ತಾರೆ. ನನಗಂತೂ ಒಮ್ಮೆ ಪರಚಯದವರ ಗೃಹಪ್ರವೇಶಕ್ಕೆ ಹೋದಾಗ, ಎಲೆಯಲ್ಲಿರುವ ಸಿಹಿನೇ ತಿನ್ನಕ್ಕಾಗ್ತಿಲ್ಲ ಈಗ ಇದನ್ನ ಬೇರೆ ತಿನ್ನಬೇಕಾ, ಆಗಲ್ಲ ಸ್ವಾಮಿ ಕ್ಷಮಿಸಿಬಿಡಿ ಅಂತ ಕೈಮುಗಿದೆ. 

ಮೂರನೇ ಸುತ್ತು, ಆಗಲೇ ಹೇಳಿದಂತೆ ಇದು ಸ್ವಲ್ಪ ಉದ್ದವಾದ ಕೊನೆಯ ಸುತ್ತು. ಈ ಸುತ್ತನ್ನು ಮತ್ತೆ ಮೂರು ಉಪಸುತ್ತುಗಳಾಗಿ ವಿಂಗಡಿಸಬಹುದಾಗಿದ್ದು, ಕಾರಣವನ್ನು ನನ್ನ ಅನುಭವದ ಮೂಲಕ ಹೇಳಬಯಸುತ್ತೇನೆ. ಅದು ನನ್ನ ಮೊಟ್ಟಮೊದಲ ಬಾಳೆ ಎಳೆಯ ಊಟದ ಅನುಭವ. ಮೊದಲೆರಡು  ಸುತ್ತುಗಳಲ್ಲಿ ಬಡಿಸಿದ ಎಲ್ಲ ಪದಾರ್ಥಗಳನ್ನು ಪ್ರಾಮಾಣಿಕವಾಗಿ ಸೇವಿಸಿ, ಸ್ವಲ್ಪ ಬಿಳಿ ಅನ್ನ-ಸಾಂಬಾರಿನೊಂದಿಗೆ ಊಟ ಮುಗಿಸೋಣ ಎಂದು ನಿರ್ಧರಿಸಿ, ಅನ್ನ ಬಡಿಸುವವನಿಗಾಗಿ ಕಾಯಿತ್ತಿದ್ದೆ. ಅಷ್ಟರಲ್ಲಿ ಒಬ್ಬ ವ್ಯಕ್ತಿ ಸಣ್ಣ ಬಕೇಟಿನಲ್ಲಿ ಬಿಳಿ ಅನ್ನವನ್ನು ತಂದು ಎರಡು ಚಮಚೆ ಬಡಿಸಿದ. ಅವನ ಹಿಂದೆಯೇ ಬಂದ ಇನ್ನೊಬ್ಬ, ನಾನು ಚಿಕ್ಕ ಪರ್ವತದಂತಿದ್ದ ಅನ್ನದ ನಡುವೆ ಕಟ್ಟಿದೆ ಕೆರೆಗೆ ಸುಡು ಸುಡು ಸಾಂಬಾರು ಸುರಿದು ಹೋದ. ವಿವಿಧ ತರಕಾರಿ, ಬೆಳೆ ಮತ್ತು ಮಸಾಲೆಗಳಿಂದ ಮಾಡಿದ ಘಮ ಘಮ ಸಾಂಬಾರಿನ ಜೊತೆಗೆ ಅನ್ನವನ್ನು ಹದವಾಗಿ ಕಲಸಿ ಸವಿದು ತೃಪ್ತವಾದ ಅಂತರಾತ್ಮ ಗೊತ್ತಿಲ್ಲದೆ ಅಡಿಗೆ ಮಾಡಿದವನ ಕುಶಲತೆಗೆ ಹೃದಯಪೂರ್ವಕ ಧನ್ಯವಾದ ಸಲ್ಲಿಸಿತು. ಆಯಿತು, ಎಲ್ಲ ಸುತ್ತುಗಳು ಮುಗಿದಿದ್ದು, ನೀರು ಕುಡಿದು ಕೈ ತೊಳೆಯಲು ಹೋಗೋಣ ಎಂದು ಕುಂತ ಜಾಗದಿಂದ ಇನ್ನೇನು ಏಳಬೇಕು ಅಷ್ಟರಲ್ಲಿ, ಅನ್ನದ ಬಕೇಟು ಹಿಡಿದು ಅದೇ ವ್ಯಕ್ತಿ ಮತ್ತೆ ಬಂದು, ಇನ್ನು ಊಟ ಮುಗಿದಿಲ್ಲ ಸರ್, ಇಕೊ ತೊಗೊಳ್ಳಿ ರಸಂ ಜೊತೆ ಇನ್ನೊಂದು ಚಮಚ ಅನ್ನ ಎಂದು ಮತ್ತೆ ಒಂದು ಚಮಚ ಅನ್ನ ನೀಡಿದ. ಊಟ ಇನ್ನು ಮುಗಿದಿಲ್ಲವಾ, ಆದರೆ ನನ್ನ ಹೊಟ್ಟೆಯಲ್ಲಿ ಜಾಗ ಇಲ್ಲ ಕಣಪ್ಪೋ, ಆಮೇಲೆ ಇದೇನಿದು ರಸಮ್ಮು, ಆಗ್ಲೇ ಸಾಂಬಾರ್ ಜೊತೆ ಅನ್ನ ತಿಂದಾಯಿತಲ್ಲ ಎಂದೇ. ಸರ್, ಅದು ಸಾಂಬಾರ್ ಜೊತೆ, ಈಗ ಇದು ರಸಮ್ಮ್ ಜೊತೆ. ಯಾಕಿಷ್ಟು ಅವಸರ ಪಡುತ್ತಿದ್ದೀರಿ, ಆರಾಮಾಗಿ ಕೂತು ನಿದಾನಕ್ಕೆ ಊಟಮಾಡಿ ಅಂದು ಹೋದ. ಇವನ ಬೆನ್ನ ಹಿಂದೆ ಬಂದವನು ಸುರಿದ ಒಂದು ಸೌಟು ರಸಮ್ಮ್ ನೋಡಿದಮೇಲೆ ಗೊತ್ತಾಯಿತು ಈ ರಸಮ್ಮ್ ಅಂದರೆ ನಮ್ಮ ಭಾಗದಲ್ಲಿ ಮಾಡುವ ತಿಳಿ ಸಾರಿನ ಸಹೋದರ ಎಂದು. ಸಾಕಪ್ಪ ಸಾಕು, ಹೊಟ್ಟೆ ತುಂಬೋಯಿತು, ಇನ್ನು ಜಾಗವಿಲ್ಲ ಅಂತ ಏಳುವಷ್ಟರಲ್ಲಿ ಮತ್ತೊಬ್ಬ ಬಂದು ಒಂದು ಚಮಚ ಮೊಸರನ್ನ ಇಕ್ಕಬೇಕೆ! ಸಿಟ್ಟು ನೆತ್ತಿಗೇರಿ, ಅವನನ್ನು ವಾಪಾಸ್ ಕರೆದು,  ಏನೈಯ್ಯಾ ಒಬ್ಬರಾದಮೇಲೆ ಒಬ್ಬರು ಬಂದು ಸಾಂಬಾರ್ ಜೊತೆ, ರಸಮ್ಮ್ ಜೊತೆ ಆಮೇಲೆ ಈಗ ಮೊಸರಿನ ಜೊತೆ ಅಂತ ಅನ್ನವನ್ನ ಸುರಿದೆ ಸುರಿಯುತ್ತಿದ್ದಿರಾ, ನೀವೇನು ನನ್ನ ಹೊಟ್ಟೆ ಒಡೆಯಬೇಕೆಂದಿದ್ದೀರಾ ಹೇಗೆ ಎಂದು ಗದರಿಸಿದೆ. ಸರ್, ನಿಮಗೆ ಈ ಊಟದ ಪದ್ಧತಿ ಹೊಸದು ಎನಿಸುತ್ತದೆ, ಆದರೆ ಊಟದ ಕೊನೆಗೆ ನೀವು ಮೊಸರನ್ನ ತಿನ್ನಲೇಬೇಕು, ಆಗಲೇ ಊಟ ಸಂಪೂರ್ಣವಾದಂತೆ ಅಂತ ಬುದ್ದಿ ಹೇಳಿದ. ಬೇರೆ ದಾರಿ ಇಲ್ಲದೆ ಮೊಸರನ್ನ ತಿಂದು, ನೀರು ಕುಡಿದು ಊಟ ಮುಗಿಸಿ ಕೈ ತೊಳೆಯಲು ಎದ್ದೆ. ಈಗ ಅರ್ಥವಾಗಿರಬಹುದು.  ನಾನು ಏಕೆ ಈ ಕೊನೆಯ ಸುತ್ತಿನಲ್ಲಿ ಮೂರು ಉಪಸುತ್ತುಗಳಿವೆ ಎಂದು  ಹೇಳಿದ್ದು. ಇಲ್ಲಿ ಒಂದು ಅರ್ಥಮಾಡಿಕೊಳ್ಳಬೇಕಾದ ಸಂಗತಿ, ವಾಸ್ತವವಾಗಿ ಮೊದಲೆರಡು ಸುತ್ತುಗಳು ಕೇವಲ ತಮಾಷೆಗಾಗಿ ಮತ್ತು ಊಟದ ಮುಖ್ಯ ಕೋರ್ಸ್ ಮತ್ತು ಗಮ್ಮತ್ತು ಇರುವುದು ಈ ಮೂರನೇ ಸುತ್ತಿನಲ್ಲಿಯೇ. 

ಕರ್ನಾಟಕದ ದಕ್ಷಿಣ ಭಾಗದಲ್ಲಿ, ವಾತಾವರಣಕ್ಕನುಗುಣವಾಗಿ ಮತ್ತು ನೀರಿನ ಸೌಕರ್ಯ ಇರುವುದರಿಂದ ಭತ್ತವನ್ನು ಹೆಚ್ಚಾಗಿ ಬೆಳೆಯುವುದರಿಂದ, ಈ ಭಾಗದ ಜನರು ಅನ್ನವನ್ನು ಹೆಚ್ಚಾಗಿ ಸೇವಿಸುತ್ತಾರೆ. ಆದ್ದರಿಂದ, ಅನ್ನವೇ ಇವರ ಮುಖ್ಯ ಆಹಾರ ಪದಾರ್ಥ. ಅಷ್ಟೇ ಏಕೆ, ಪಕ್ಕದ ತಮಿಳುನಾಡು ಮತ್ತು ಕೇರಳದಲ್ಲಿಯೂ ಕೂಡ ಅನ್ನವೇ ಮೂಲ ಆಹಾರ. ಈ ಪದ್ಧತಿಯಲ್ಲಿ ನನಗೆ ಅರ್ಥವಾದ ಇನ್ನೊಂದು ಸಂಗತಿ, ಸಾಂಬಾರು ಮತ್ತು ರಸಮ್, ಇವುಗಳ ಮಧ್ಯೆ ಇರುವ ವ್ಯತ್ಯಾಸ. ಸಾಂಬಾರ ಎಂದರೆ, ಕೈಗೆ ಸಿಕ್ಕ ತರಕಾರಿ, ಸೊಪ್ಪು ಎಲ್ಲವನ್ನು ಕತ್ತರಿಸಿ ಕುದಿಯುವ ಬೆಳೆಗೆ ಹಾಕಿ, ರುಚಿಗೆ ತಕ್ಕಂತೆ ಸಾಂಬಾರು ಪುಡಿ, ಖಾರ, ಉಪ್ಪು ಮತ್ತು ಹುಳಿ ಬೆರೆಸಿ ಕೊನೆಗೆ ಒಗ್ಗರಣೆ ಹಾಕಿ ಹದವಾಗಿ ಕುದಿಸಿದ ದ್ರವರೂಪದ ಮಿಶ್ರಣ. ಹಾಗಾದರೆ ರಸಮ್ಮ್ ಏನು? ಸಾಂಬಾರಿನಿಂದ ತರಕಾರಿ ಮತ್ತು ಬೆಳೆಯನ್ನು ತೆಗೆದು, ಸ್ವಲ್ಪ ಜಾಸ್ತಿ ಹುಳಿ, ಮಸಾಲೆ ಹಾಗು ಕರಿ ಮೆಣಸಿನ ಪುಡಿಯನ್ನು ಹಾಕಿ ವಗ್ಗರಣೆ ಕೊಟ್ಟರೆ ಅದುವೇ ರಸಮ್ಮು. ಈ ರಸಮ್ಮ ಎಷ್ಟು ಖಡಕ್ ಆಗಿರುತ್ತದೆಂದರೆ, ಇದನ್ನು ಹಾಗೆ ಕುಡಿದರೆ, ನೆತ್ತಿಗೆ ಹೊಡೆಯುವುದು ಗ್ಯಾರಂಟೀ. ಅಷ್ಟೇ ಅಲ್ಲ, ಈ ರಸಮ್ಮ ನೆಗಡಿಗೆ ರಾಮಬಾಣ ಎಂದು ಕೂಡ ಹೇಳುತ್ತಾರೆ. ಇನ್ನು ಕೊನೆಗೆ ಮೊಸರನ್ನ ಅಥವಾ ಮಜ್ಜಿಗೆ ಅನ್ನ ತಿನ್ನುವ ಪ್ರಕ್ರಿಯೆಯ ಹಿಂದೆ ವೈಜ್ಞಾನಿಕ ಕಾರಣ ಬೇರೆ ಇದೆಯಂತೆ. ಮುಂಚಿನ ಸುತ್ತಿನಲ್ಲಿ ತಿಂದ ಪದಾರ್ಥಗಳಿಂದ ಬಾಯಿ ಮತ್ತು ಗಂಟಲಿಗೆ ಒರಗಿಕೊಂಡಿರುವ ಎಣ್ಣೆಯ ಪದರಿನಿಂದ ಗಂಟಲು ಬಿಗಿದು, ಕೆಮ್ಮಿಗೆ ಆಹ್ವಾನ ಕೊಡುವ ಸಾಧ್ಯತೆ ಇರುವುದರಿಂದ, ಈ ಮೊಸರು ಅಥವಾ ಮಜ್ಜಿಗೆ ಅನ್ನ ತಿಂದರೆ ಆ ಎಣ್ಣೆಯ ಪದರು ತೊಳೆದುಕೊಂಡು ಹೊಟ್ಟೆಗೆ ಸೇರಿ, ಗಂಟಲು ಹಿಡಿಯುವ ಹಾಗು ಕೆಮ್ಮಿನ ತೊಂದರೆ ಬರುವುದಿಲ್ಲ ಎಂಬುದು ನಂಬಿಕೆ.     

ಇತ್ತೀಚಿಗೆ, ಉತ್ತರ ಭಾರತೀಯ ಸಂಸ್ಕೃತಿಯ ಪ್ರಭಾವದಿಂದ ಎಲ್ಲ ಸಭೆ ಸಮಾರಂಭಗಳಲ್ಲಿ, ಊಟವಾದಮೇಲೆ ಡೆಸರ್ಟ್ ಅಥವಾ ಸಿಹಿ ತಿನ್ನುವ ಪದ್ಧತಿ ಜಾರಿಯಲ್ಲಿದ್ದು, ಊಟ ಮಾಡಿದವರಿಗೆಲ್ಲ ಜಾಮೂನು, ರಸಗುಲ್ಲ, ಐಸ್ ಕ್ರೀಮು ಮತ್ತು ಹಣ್ಣುಗಳ ಸಲಾಡ್ನಂತಹ ಸಿಹಿ ಪದಾರ್ಥಗಳ ಸೇವೆ ನಡೆಯುತ್ತದೆ. ನನಗೆ ಸಿಹಿ ಅಂದರೆ ಅಲರ್ಜಿ, ಆದ್ದರಿಂದ ಸ್ವಲ್ಪ ಸಲಾಡ್ ತಿಂದು ಉಳಿದ ಪದಾರ್ಥಗಳಿಗೆ ಕ್ಷಮಿಸಿ ಎಂದು ಕೈಮುಗಿಯುತ್ತೇನೆ. ಇದೆಲ್ಲ ಆದಮೇಲೆ, ಕಾರ್ಯಕ್ರಮಕ್ಕೆ ಆಮಂತ್ರಿಸಿದ ಮಹಾನುಭಾವರನ್ನು ಆ ಗದ್ದಲಲ್ಲಿ ಹುಡುಕಿ, ಊಟ ತುಂಬಾ ಚೆನ್ನಾಗಿತ್ತು, ಎಲ್ಲವು ಸುಸೂತ್ರವಾಗಿ ನಡೆಯಿತು ಎಂದೆಲ್ಲ ಹೊಗಳಿ, ಮುಂದೆ ಮತ್ತೆ ಈ ತರಹದ ಸಮಾರಂಭಗಳು ನಡೆದರೆ ಕರೆಯುವುದು ಮರೆಯಬೇಡಿ ಎಂಬ ಮನದಾಳದ ಇಚ್ಛೆಯನ್ನು ಪರೋಕ್ಷವಾಗಿ ತಿಳಿಸಿ, ಸಾಯೋನಾರಾ ಹೇಳಿ ಹೋರಡುತ್ತಿರಿ. ಹೋಗುವ ಮುಂಚೆ ಸಮಾರಂಭ ನಡೆದ ಹಾಲಿನ ಮುಖ್ಯ ದ್ವಾರದಲ್ಲಿ ಇನ್ನೊಂದು ಆಶ್ಚರ್ಯ ಕಾದಿರುತ್ತದೆ. ಅಲ್ಲಿ ನಿಂತ ಕೆಲವು ಹರೆಯದ ಹುಡುಗ ಹುಡುಗಿಯರು ನಿಮ್ಮ ಕೈಗೊಂದು ಚಿಕ್ಕ್ ಚೀಲವಿಡುತ್ತಾರೆ. ಆ ಚೀಲ ತೆಗೆದು ನೋಡಿದರೆ ಅದರಲ್ಲಿ ಒಂದು ಸುಲಿದ ತೆಂಗಿನಕಾಯಿ, ಎರಡು ವೀಳ್ಯದೆಲೆಗಳು, ಬಾಳೆಹಣ್ಣು ಮತ್ತು ಒಂದು ಮಸಾಲೆ ಪಾನ್ ಇರುತ್ತವೆ. ಎಡಗೈಯಿಂದ ಈ ಚೀಲ ಹಿಡಿದುಕೊಂಡು, ಬಲಗೈಯಿಂದ ಹೊಟ್ಟೆಯ ಮೇಲೆ ಕೈ ಸವರುತ್ತ, ಬಾಯಲ್ಲಿ ಚೀಲದಲ್ಲಿದ್ದ ಆ ಮಸಾಲೆ ಪಾನ್ ಚಪ್ಪರಿಸುತ್ತ ಮನೆಯಕಡೆಗೆ ನಡೆದರೆ ಈ ಬಾಳೆ ಎಲೆಯ ಊಟದ ಕಥೆ ಮುಗಿದಂತೆ. 

ಈ ಲೇಖನ ಮುಗಿಸುವುದಕ್ಕಿಂತ ಮುಂಚೆ ನಮ್ಮ ಉತ್ತರ ಕರ್ನಾಟಕ ಭಾಗದ ಸಭೆ ಸಮಾರಂಭಗಳಲ್ಲಿನ ಊಟದ ಶೈಲಿಯ ಕಿರುಪರಿಚಯ ನೀಡದಿದ್ದರೆ ಕಥೆ ಪೂರ್ಣ ಗೊಂಡಂತೆ ಅನಿಸುವುದಿಲ್ಲ. ನಮ್ಮ ಭಾಗದಲ್ಲಿ ನಾನು ಚಿಕ್ಕವನಿದ್ದಾಗಿನ ನೆನಪು, ಎಲ್ಲ ಸಭೆ ಸಮಾರಂಭಗಳಲ್ಲಿ, ಉದ್ದನೆಯ ಚಾಪೆ ಅಥವಾ ಊಟದ ಪಟ್ಟಿ, ಅದು ಇಲ್ಲವೆಂದರೆ ಮನೆಯಲ್ಲಿನ ಹಳೆಯ ಸೀರೆಗಳನ್ನೂ ನೆಲದ ಮೇಲೆ ಹಾಸಿ, ಬಂದ ಅತಿಥಿಗಳನ್ನು ಸಾಲಾಗಿ ಪಂಕ್ತಿಯಲ್ಲಿ ಕೂಡಿಸಿ, ಬಾಳೆಯ ಇಲ್ಲ ಪತ್ರಾವಳಿ ಎಲೆಯಿಂದ ಮಾಡಿದ ಪ್ಲೇಟುಗಳ ಮೇಲೆ ಊಟ ಬಡಿಸುತ್ತಿದ್ದರು. ಕಾಲ ಕಳೆದಂತೆ, ಆಧುನಿಕ ಜೀವನಶೈಲಿಗೆ ಅಡಿಯಾಳಾಗಿ, ಈಗೆಲ್ಲ ಹೆಚ್ಚಾಗಿ ಬಫೆ ಪದ್ದತಿಯಂತೆ ಊಟಬಡಿಸುವ ಪ್ರಕ್ರಿಯೆಯನ್ನು ಅಳವಡಿಸಿಕೊಂಡಿದ್ದಾರೆ. ಪ್ರಾರಂಭದಲ್ಲಿ, ಇದನ್ನೂ ಜೈಲಿನಲ್ಲಿ ಕೈದಿಗಳಿಗೆ ನೀಡುವ ಊಟದ ಪದ್ಧತಿಯಂತಿದೆ ಎಂದು ವ್ಯಂಗ್ಯ ಮಾಡುವವರು ಕೂಡ ಈಗ ಇದೆ ಪದ್ಧತಿ ಇರಲಿ ಎಂದು ತಮ್ಮನ್ನು ತಾವು ಬದಲಾಯಿಸಿಕೊಂಡಿದ್ದಾರೆ. ಈ ಪದ್ಧತಿಯ ಒಂದು ಅನುಕೂಲವೇನೆಂದರೆ, ಕಡಿಮೆ ಜಾಗದಲ್ಲಿ ನೂರಾರು ಜನಕ್ಕೆ ಒಮ್ಮೆಲೇ ಊಟ ಬಡಿಸಬಹುದು. ಆಮೇಲೆ, ಪ್ಲೇಟಿನಲ್ಲಿ ಊಟ ಬಡಿಸಿಕೊಂಡಮೇಲೆ, ಎಲ್ಲೆಂದರಲ್ಲಿ ನಿಂತು ತಿನ್ನಬಹುದು ಮತ್ತು ವಯಸ್ಸಾದವರಿಗಾಗಿ ಒಂದು ಜಾಗದಲ್ಲಿ ಚೇರಿನ ವ್ಯವಸ್ಥೆ ಮಾಡಿರುತ್ತಾರೆ. ಮೊದಲೆಲ್ಲ ಮನೆಯವರು ಇಲ್ಲ ಸ್ನೇಹಿತರು ಊಟಬಡಿಸುವ ಮತ್ತು ಓಡಾಡುವ ಕೆಲಸಕ್ಕೆ ನಿಲ್ಲುತಿದ್ದರು. ಈಗ ಇದರಲ್ಲಿನೂ ಕೇಟರಿಂಗ್ ವ್ಯವಸ್ಥೆ ಬಂದು ನೀವು ದುಡ್ದು ಕೊಟ್ಟರೆ ಸಾಕು, ಅವರೇ ಬಂದು ಅಡಿಗೆಮಾಡಿ, ಊಟ ಬಡಿಸಿ, ಕೊನೆಗೆ ಪಾತ್ರೆ ತೊಳೆದು, ನೀಟಾಗಿ ಕೆಲಸ ಮುಗಿಸಿ ಹೋಗುತ್ತಾರೆ. ಈ ಪದ್ಧತಿಯಲ್ಲಿ, ಉದ್ದನೆಯ ಟೇಬಲ್ಲುಗಳ ಮೇಲೆ, ಬುಟ್ಟಿಯಲ್ಲಿ ಅಡಿಗೆ ಪದಾರ್ಥಗಳನ್ನು ಸಾಲಾಗಿ ಇಟ್ಟು, ಒಂದು ಪದಾರ್ಥ ಬಡಿಸಲಿಕ್ಕೆ ಒಬ್ಬರಂತೆ ಸೌಟು ಹಿಡಿದು ನಿಲ್ಲುತ್ತಾರೆ. ಆಮಂತ್ರಿತರು, ಸಾಲಿನಲ್ಲಿ ನಿಂತು ಒಬ್ಬಬ್ಬರಾಗಿ ಕೈಯಲ್ಲಿ ಸ್ಟೀಲಿನ ಪ್ಲೇಟು ಹಿಡಿದು, ಒಂದೊಂದು ಪದಾರ್ಥಗಳನ್ನು ಬಡಿಸಿಕೊಂಡು ಊಟ ಮಾಡುತ್ತಾರೆ. ನಮ್ಮಲ್ಲಿಯೂ ಕೂಡ ಮೂರು ಸುತ್ತಿನ ಊಟ ಬಡಿಸುವ ಪ್ರಕ್ರಿಯೆ ಜಾರಿಯಲ್ಲಿತ್ತು, ಆದರೆ ಈ ಬಫೆ ಸಿಸ್ಟಮ್ ಬಂದಮೇಲೆ ಎರಡೇ ಸುತ್ತಿನಲ್ಲಿ ಊಟ ಮುಗಿಯುತ್ತದೆ. ಮೊದಲ ಸುತ್ತಿನಲ್ಲಿ ಚಪಾತಿ, ಎರಡು ತರಹದ ಪಲ್ಯ (ಅದರಲ್ಲಿ ಒಂದು ಪಲ್ಯ ಕಾಯಂ ಬದನೆಕಾಯಿಯದ್ದು), ಮೊಸರು, ಶೇಂಗಾ ಹಿಂಡಿ ಇಲ್ಲ ಕೆಂಪು ಮೆಣಸಿನಕಾಯಿ ಚಟ್ನಿ ಇದ್ದು, ಇದೆ ಮೊದಲ ಸುತ್ತು.  ಇನ್ನು ಕೆಲವು  ಕುಟುಂಬಗಳಲ್ಲಿ, ಚಪಾತಿಯ ಜೊತೆಗೆ, ಉತ್ತರ ಕರ್ನಾಟಕದ ಸಂಸ್ಕೃತಿಯ ದ್ಯೋತಕವಾದ ಖಡಕ್ ಜೋಳದ ಅಥವಾ ಸಜ್ಜಿಯ ತೊಟ್ಟಿಯ ತುಣುಕುಗಳನ್ನು ನೀಡುತ್ತಾರೆ. ಅಕಸ್ಮಾತ್, ಸಮಾರಂಭಗಳು ಬೇಸಿಗೆಯಲ್ಲಿದ್ದರೆ, ಆ ಬಿಸಿಲೀನ ಧಗೆಯಲ್ಲಿ ಬೆವರು ಸುರಿಸುತ್ತ, ಖಾರವಾದ ಪಲ್ಯ, ಚಟ್ನಿಗಳನ್ನು ಚಪಾತಿ ಅಥವಾ ರೊಟ್ಟಿಯೊಂದಿಗೆ ತಿನ್ನುವವ ಮಜವೇ ಬೇರೆ. ನಮ್ಮ ಭಾಗದಲ್ಲಿ ಜೋಳ ಮತ್ತು ಗೋದಿ ಜಾಸ್ತಿ ಬೆಳೆಯುವುದರಿಂದ ರೊಟ್ಟಿ ಅಥವಾ ಚಪಾತಿಯೇ ನಮ್ಮ ಊಟದಲ್ಲಿ ಮುಖ್ಯ ಪದಾರ್ಥವಾಗಿರುತ್ತದೆ. ಎರಡನೇ ಸುತ್ತು, ಸಿಹಿ ಪದಾರ್ಥಗಳ ಸುತ್ತು. ಮುಂಚೆ ಎಲ್ಲ, ಎರಡನೇ ಸುತ್ತಿನಲ್ಲಿ ಗೋದಿ ಹುಗ್ಗಿ (ಪಾಯಸ) ಅಥವಾ ಕೇಸರಿ ಬಾತು ಸಾಮಾನ್ಯವಾಗಿದ್ದು, ಹುಗ್ಗಿ ತಿನ್ನುವ ಸವಾಲು ಸ್ಪರ್ಧೆಗಳು ನಡೆಯುತ್ತಿದ್ದವು. ಈಗ ಸ್ವೀಟ್ ಮಾರ್ಟ್ಗಳಲ್ಲಿ ಸಿಗುವ ಬುಂದಿ, ಮೋತಿಚುರ್ ಲಡ್ಡು ಅಥವಾ ಜಿಲೇಬಿಗಳನ್ನು ತಂದು ಬಡಿಸುತ್ತಾರೆ. ಕೊನೆಯದಾಗಿ, ಮೂರನೆಯ ಸುತ್ತು ಒಂದೆರಡು ಚಮಚೆ ಅನ್ನ ಮತ್ತು ಬೆಳೆಯ ಇಲ್ಲ ಬೆಳೆ ಕಟ್ಟಿನಿಂದ ಮಾಡಿದ ಖಡಕ್ ಮಸಾಲೆ ಸಾರು ಬಡಿಸುತ್ತಾರೆ. ಈ ಕಟ್ಟಿನ ಸಾರು ಅದೆಷ್ಟು ಖಡಕ್ ಆಗಿರುತ್ತದೆಂದರೆ, ಸಾರಿಗೆ ಕೈಬಿಚ್ಚಿ ಮಸಾಲೆ ಸುರಿದು ಅದರ ಮೇಲೆ ಅರ್ಧ ಇಂಚು ಎಣ್ಣೆ ತೇಲಬೇಕು, ಅಂದರೆನೇ ಅದು ಪಕ್ಕಾ ಕಟ್ಟಿನ ಸಾರು ಎನಿಸಿಕೊಳ್ಳುತ್ತದೆ. ಇಲ್ಲಿ ಇನ್ನೊಂದು ಸಂಗತಿ ಏನೆಂದರೆ, ಸಮಾರಂಭ, ಅತಿಥಿ ಸತ್ಕಾರ ಅದೆಷ್ಟೇ ವಿಜೃಂಭಣೆಯಿಂದ ಮಾಡಲಿ, ಅಡಿಗೆಯ ಎಲ್ಲ ಪದಾರ್ಥಗಳು ಎಷ್ಟೇ ರುಚಿಕರವಾಗಿರಲಿ, ಆದರೆ ಅಕಸ್ಮಾತ್ ಈ ಕೊನೆಯ ಸುತ್ತಿನ ಸಾರಿನ ರುಚಿಯಲ್ಲಿ ಏನಾದರು ಹೇರು-ಪೆರು ಆದರೆ, ಮುಗಿಯಿತು, ಬಂದವರೆಲ್ಲ ಅಡಿಗೆ ಮಾಡಿದವನನ್ನು ಮತ್ತು ಸಮಾರಂಭದ ಹಿರಿತನ ವಹಿಸಿಕೊಂಡ ಮಹಾನುಭಾವರನ್ನು ಆಡಿಕೊಳ್ಳದೆ ಮನೆಗೆ ಹೋಗುವುದಿಲ್ಲ. ಅದೃಷ್ಟವಶಾತ್ ಸಾರು ರುಚಿಯಾಗಿದ್ದರೆ, ಅವರನ್ನು ಹೊಗಳಿ ಹೊಗಳಿ ಹೊನ್ನ ಶೂಲಕ್ಕೇರಿಸಿ ಮನೆಗೆ ತೆರಳುತ್ತಾರೆ. 

ನಮ್ಮದು ವಿವಿಧತೆಗಳಿಂದ ಕೂಡಿದ ದೇಶವಾಗಿದ್ದು, ಪ್ರತಿ ಊರು, ಜಿಲ್ಲೆ ಮತ್ತು ರಾಜ್ಯಗಳಲ್ಲಿ ತಮ್ಮದೇ ಆದ ಆಚಾರ,, ವಿಚಾರ, ಭಾಷಾ ಶೈಲಿ, ಉಡುಗೆ-ತೊಡುಗೆ ಮತ್ತು ಊಟದ ಪದ್ದತಿಗಳು ಆಚರಣೆಯಲ್ಲಿವೆ. ಉತ್ತರ ಭಾರತೀಯರದು ಒಂದು ಸಂಸ್ಕೃತಿಯಾದರೆ, ದಕ್ಷಿಣ ಭಾರತೀಯರದು ಇನ್ನೊಂದು ಸಂಸ್ಕೃತಿ. ನಮ್ಮ ಕರ್ನಾಟಕದ ವಿಷಯಕ್ಕೆ ಬಂದರೆ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ, ಹೀಗೆ ಪ್ರತಿಯೊಂದು ಪ್ರಾಂತ್ಯದಲ್ಲಿ ಒಂದು ವಿವಿಧತೆಯಿದೆ. ಇದರಲ್ಲಿ ನನ್ನದು ಶ್ರೇಷ್ಠ ಅವರದು ಕೀಳು ಎಂಬ ತರ್ಕಕ್ಕೆ ಅವಕಾಶವಿಲ್ಲ, ಏಕೆಂದರೆ ಪ್ರತಿಯೊಂದು ಆಚರಣೆಗೂ ಅದರ ಹಿಂದೆ ಒಂದು ಅರ್ಥ ಮತ್ತು ಇತಿಹಾಸವಿದೆ. ಆದ್ದರಿಂದ ಪ್ರತಿಯೊಂದುನ್ನು ಗೌರವಿಸಲೇಬೇಕು. ನೀವು ಉತ್ತರ ಕರ್ನಾಟಕದವರಾಗಿದ್ದರೆ, ದಕ್ಷಿಣ ಭಾಗದ ಯಾರಾದರು  ಸ್ನೇಹಿತರು ಅಥವಾ ನೆಂಟರಿಂದ ಆಮಂತ್ರಣ ಬಂದಿದ್ದರೆ ದಯವಿಟ್ಟು ಹೋಗಿ, ಬಾಳೆಯ ಎಲೆಯ ಊಟದ ಪದ್ಧತಿಯನ್ನು ನೋಡಿ ಅನುಭವಿಸಿ ಬನ್ನಿ. ಅದೇ ರೀತಿ ನೀವು ದಕ್ಷಿಣ ಕರ್ನಾಟಕದವರಾಗಿದ್ದರೆ, ನಮ್ಮ ಭಾಗದ ಸಭೆ ಸಮಾರಂಭಗಳಿಗೆ ಹೋಗಿ ಅಲ್ಲಿನ ಭಾಷಾ ಶೈಲಿ, ಸಂಸ್ಕೃತಿ ಮತ್ತು ಊಟದ ಪದ್ಧತಿಗಳನ್ನು ನೋಡಿಕೊಂಡು ಬನ್ನಿ. ಕೋಶ ಓದಬೇಕು, ದೇಶ ಸುತ್ತಬೇಕು ಅಂತ ಹಿರಿಯರು ಹೇಳಿದಂತೆ, ಬದುಕಿನ ಓಡಾಟದಲ್ಲಿ ನೀವು ಎಷ್ಟು ಸುತ್ತುತ್ತಿರೋ ಅಷ್ಟು ಹೊಸ ಜಾಗಗಳ, ಸಂಸ್ಕೃತಿಯ ಅನುಭವದ ಭಂಡಾರ ಬೆಳೆದಂತೆ, ಜೀವನ ಪರಿಪೂರ್ಣತೆಯತ್ತ ಸಾಗುತ್ತದೆ ಎಂದು ಹೇಳುತ್ತಾ ನನ್ನ ಈ ಲೇಖನವನ್ನು ಮುಗಿಸುತ್ತೇನೆ. ಓದಿದಮೇಲೆ ನಿಮ್ಮ ಅಭಿಪ್ರಾಯ ತಿಳಿಸಿರಿ........ 
 

ಶನಿವಾರ, ಜೂನ್ 12, 2021

ಪದಗಳನ್ನು ಪೋಣಿಸಿ ಓಲೆಯೊಂದ ಬರೆಯುವೆನು....

ನಿನ್ನೆ ಟ್ವಿಟ್ಟರ್ ನಲ್ಲಿ ಸ್ನೇಹಿತರೊಬ್ಬರು ಅಂತರ್ದೇಶೀಯ ಪತ್ರದ (Inland Letter) ಫೋಟೋ ಒಂದನ್ನು ಹಂಚಿಕೊಂಡು, ಇದು ನಿಮಗೆ ನೆನಪಿದೆಯೇ? ಎಂಬ ಪ್ರಶ್ನೆ ಹಾಕಿದ್ದರು. ಈ ಫೋಟೋ ನೋಡಿದಮೇಲೆ ಗತಿಸಿಹೋದ ನೆನಪುಗಳ ದಿನಗಳತ್ತ ಗೊತ್ತಿಲ್ಲದೆ ಜಾರಿಕೊಂಡಿತು ಮನಸು.....

ಮೊಬೈಲ್, ಸ್ಮಾರ್ಟ್ ಫೋನ್, ಈ-ಮೇಲ್, ವಾಟ್ಸ್ಯಾಪ್ಪ್ಗಳೆಂಬ ಸಂಪರ್ಕ ಮಾಧ್ಯಮಗಳ ಮುಖಾಂತರ ಬಂದು-ಬಳಗ, ಸ್ನೇಹಿತರೊಂದಿಗೆ ಸಂಪರ್ಕದಲ್ಲಿಟ್ಟುಕೊಳ್ಳುವುದು ಇಂದಿನ ಆದುನಿಕ ಕಾಲದ ವಿಶೇಷತೆಯಾದರೆ, ಈ ಎಲ್ಲ ಮಾಧ್ಯಮಗಳ ಪರಿಚಯವೇ ಇಲ್ಲದ, ಕೇವಲ ಹದಿನೈದು ಪೈಸೆಗೆ ಬರುವ ಹಳದಿ ಬಣ್ಣದ ಅಂಚೆ ಕಾರ್ಡು ಅಥವಾ ಎಪ್ಪತೈದು ಪೈಸೆಯ ತಿಳಿ ನೀಲಿ ಬಣ್ಣದ ಅಂತರ್ದೇಶೀಯ ಪತ್ರ, ಇವುಗಳ ಮೂಲಕವೆ ಎಲ್ಲ ಸಂಪರ್ಕ, ವ್ಯವಹಾರಗಳು ನಡೆಯುತ್ತಿದ್ದುದು ಆ ಕಾಲದ ವೈಶಿಷ್ಟ್ಯವಾಗಿತ್ತು. ಹೆಚ್ಚು ಕಡಿಮೆ ತೊಂಬತ್ತರ ದಶಕದ ನಂತರದ ಯುವ ಪೀಳಿಗೆಗೆ ಈ ಸಂಪರ್ಕ ಮಾಧ್ಯಮದ ಬಳಕೆ ಕಡಿಮೆ ಆಗುತ್ತಾ ಹೋಯಿತು... 

ನಾನು ಮೊಟ್ಟಮೊದಲು ಪತ್ರ ಬರೆದದ್ದು ನನ್ನ ತಾತನಿಗೆ. ನಮ್ಮ ತಂದೆಯವರು ಮುಂದೆ ಕೂತು, ಹೇಗೆ ಬರೆಯುವುದೆಂದು ಹೇಳಿಕೊಟ್ಟು, ಬರೆಸಿದ್ದರು. ಅದು ದಸರಾ ಹಬ್ಬದ ಪ್ರಯುಕ್ತ, ಅಂತರ್ದೇಶೀಯ ಪತ್ರದ ಒಳಗೆ, ಎರಡು ಎಲೆ ಬನ್ನಿ ದಳಗಳನ್ನು ಇಟ್ಟು ಬರೆದ ದಸರಾ ಹಬ್ಬದ ಶುಭಾಶಯ ಪತ್ರ. ಆಗ ಆಕಾಶವಾಣಿ ಧಾರವಾಡ ಕೇಂದ್ರದಲ್ಲಿ ಪ್ರತಿ ರವಿವಾರ ನಡೆಯುವ "ಗಿಳಿವಿಂಡು" ಕಾರ್ಯಕ್ರಮಕ್ಕೆ ನಾನು, ತಮ್ಮ, ತಂಗಿ ಎಲ್ಲರು ಅಂಚೆ ಕಾರ್ಡಿನಲ್ಲಿ, ಚಿತ್ರಬರೆದು ಕಳುಹಿಸಿದ ನೆನಪು ಇನ್ನು ಹಸಿರಾಗಿದೆ.  ನಂತರ ಧಾರವಾಡದಲ್ಲಿ ನಾನು ಪಿಯುಸಿ ಕಲಿಯುತ್ತಿದ್ದಾಗ, ನನ್ನ ಊರಲ್ಲಿರುವ ಮನೆಯವರೊಂದಿಗೆ ಪತ್ರಗಳ ಮೂಲಕ ಸಂಪರ್ಕಿಸುತ್ತಿದ್ದೆ. ನಾನು ತಿಂಗಳಿಗೆ ಒಂದು ಸಲ, ನನ್ನ ಕಾಲೇಜು, ಧಾರವಾಡದಲ್ಲಿನ ಜೀವನದ, ಸಿಟಿ ಬಸ್ಸಿನಲ್ಲಿ ಪ್ರಯಾಣದ ಅನುಭವ, ಖಾನಾವಳಿಗಳಲ್ಲಿ ಊಟ, ಹೊಸ ವಿಷಯಗ ಅನುಭವ, ಹೀಗೆ ಅನೇಕ ವಿಷಯಗಳನ್ನು ಪತ್ರದಲ್ಲಿ ಹಂಚಿಕೊಳ್ಳುತಿದ್ದೆ. ಮನೆಯಲ್ಲಿ ಎಲ್ಲರು ನನ್ನ ಪತ್ರ ಬರುವಿಕೆಗಾಗಿ ಕಾಯುತಿದ್ದರಂತೆ. ಆಮೇಲೆ ದಿನಗಳು ಕಳೆದಂತೆ, ಎಸ್ಟಿಡಿ ಮತ್ತು ಮೊಬೈಲ್ ಫೋನುಗಳು ಬಂದವು, ಕಾರಣ ಈ ಪತ್ರಗಳನ್ನು ಬಿಟ್ಟು, ಫೋನಿನ ಮೂಲಕವೇ ಸಂಪರ್ಕ ಮುಂದುವರಿಯುತು......   
 
"ಪೂಜ್ಯ ....... ಅವರಿಗೆ,
ನಿಮ್ಮ ........ ಮಾಡುವ ಶಿ. ಸಾ. ನಮಸ್ಕಾರಗಳು.
ಇತ್ತಕಡೆ ಎಲ್ಲ ಕ್ಷೇಮ, ತಮ್ಮ ಕ್ಷೇಮದ ಬಗ್ಗೆ ತಿಳಿಸಿರಿ....
ತರುವಾಯ ಪತ್ರ ಬರೆಯಲು ಕಾರಣ.......................
............................................................................................
...........................................................................................
ಪತ್ರ ಮುಟ್ಟಿದ ತಕ್ಷಣ ಉತ್ತರ ಬರೆಯಿರಿ ಮತ್ತು ನಿಮ್ಮ ವಿಚಾರ ತಿಳಿಸಿರಿ.....
ಇಂತಿ ನಿಮ್ಮ ಆತ್ಮೀಯ,
............."

ಹೀಗೆ, ಪದಗಳನ್ನು ಸಾಲುಗಳಾಗಿ ಪೋಣಿಸುತ್ತಾ, ಮೇಲಿನ ಸಾಲುಗಳಲ್ಲಿ ಹಿರಿಯರಿಗೆ ವಂದಿಸುತ್ತಾ, ಕಿರಿಯರಿಗೆ ಆಶೀರ್ವದಿಸುತ್ತ, ಕ್ಷೇಮ ವಿಚಾರದಬಗ್ಗೆ ಕೇಳುತ್ತ, ನಂತರ ಪುಟಗಟ್ಟಲೆ ವಿಷಯಗಳನ್ನು ಬರೆದು, ಕೊನೆಗೆ ಕೆಳಗಿನ ಸಾಲುಗಳಲ್ಲಿ ಧನ್ಯವಾದಗಳನ್ನು ಅರ್ಪಿಸುತ್ತ, ಒಂದು ನಿರ್ಧಿಷ್ಟ ಕ್ರಮದಲ್ಲಿ,  ಅಂಚೆಪತ್ರಗಳನ್ನು ಬರೆದು, ಕಳುಹಿಸಬೇಕಾದ ವಿಳಾಸವನ್ನು ಗೀಚಿ, ರಸ್ತೆಯ ಮೂಲೆಯಲ್ಲಿರುವ ಕೆಂಪು ಬಣ್ಣದ ಅಂಚೆ ಡಬ್ಬಿಯಲ್ಲಿ ಹಾಕಿದರಾಯಿತು. ಅದು ವಾರ ಅಥವಾ ಹತ್ತು ದಿನದಲ್ಲಿ ತಲುಪಬೇಕಾದ ವಿಳಾಸಕ್ಕೆ ಮುಟ್ಟಿಯೆ ತೀರುತ್ತದೆ ಎಂಬ ಆತ್ಮವಿಶ್ವಾಸವಿದ್ದ ಕಾಲವದು.


ದೂರದ ಊರಲ್ಲಿ ಓದುತ್ತಿರುವ ಮಗ ಖರ್ಚಿಗೆ ಹಣ ಬೇಕೆಂದು ಅಪ್ಪನಿಗೆ ಕೇಳುವ ಕೋರಿಕೆಯ ಪತ್ರ....
ಹಬ್ಬಕ್ಕೆ ಮಗಳನ್ನು ತವರಿಗೆ ಕಳುಹಿಸಿಕೊಡಿ ಎಂದು ಅಳಿಯನಿಗೆ ಮಾವ ಬರೆಯುವ ವಿನಂತಿ ಪತ್ರ.....  
ತವರಿಗೆ ಹೋದ ಹೆಂಡತಿ ಬೇಗ ಬರದಿದ್ದಾಗ ಗಂಡ ಬರೆದ ಸಿಟ್ಟಿನ ಪತ್ರ......  
ಮೊಮ್ಮಕ್ಕಳ ಕುಶಲೋಪರಿಯನ್ನು ವಿಚಾರಿಸಲು ತಾತ ಬರೆದ ಅಕ್ಕರೆಯ ಪತ್ರ......  
ಕೆಲಸದ ನಿಮಿತ್ತ್ಯ ಊರಿಗೆ ಹೋದ ಗಂಡ, ಹೆಂಡತಿ ಮಕ್ಕಳನ್ನು ನೆನೆದು ಬರೆದ ಭಾವಭರಿತ ಪತ್ರ...... ಪ್ರೇಯಸಿಗೆ ಪ್ರಿಯತಮನು ಬರೆದ ಪ್ರೇಮ ಪತ್ರ.....   
ನಿಮ್ಮ ಹುಡುಗಿ ನಮಗೆ ಇಷ್ಟವಾಗಿದೆ ಮಾತುಕತೆ ಮುಗಿಸೋಣ ಎಂದು ಹುಡುಗನ ಕಡೆಯವರು ಬರೆದ ಸ್ವೀಕಾರ ಪತ್ರ......  
ನಿಮ್ಮ ರಜೆಗಳು ಮುಗಿದಿವೆ, ಬೇಗ ಬಂದು ಕೆಲಸಕ್ಕೆ ಹಾಜರಾಗಿ ಎಂದು ಬಾಸ್ ಬರೆದ ಆಜ್ಞಾಪನಾ ಪತ್ರ.....
ಹೀಗೆ, ವಿಷಯದ ಆದಾರದ ಮೇಲೆ, ಸುದ್ದಿ, ವಿಚಾರ, ಭಾವನೆಗಳನ್ನೊಳಗೊಂಡ, ವಿವಿಧ ರೀತಿಯ ಪತ್ರ ವ್ಯವಹಾರಗಳು ನಡೆಯುತ್ತಿದ್ದವು. ಸಿಹಿ-ಕಹಿ, ಸುಖ-ದುಃಖ, ನೋವು-ನಲಿವು, ಸಿಟ್ಟು-ಆಜ್ಞೆ, ಎಲ್ಲ ತರಹದ ಭಾವನೆಗಳ ಸಾರವನ್ನು ತನ್ನ ಹೃದಯದಲ್ಲಿಟ್ಟುಕೊಂಡು, ಒಬ್ಬರಿಂದ ಇನ್ನೊಬ್ಬರಿಗೆ ತಲುಪಿಸುವ ಮೇಘದೂತನ ಕೆಲಸವನ್ನು ಮಾಡುತ್ತಿದ್ದವು ಈ ಪತ್ರಗಳು.

ಖಾಕಿ ಯುನಿಫಾರ್ಮ್ ತೊಟ್ಟು, ಹೆಗಲಮೇಲಿನ ಚೀಲದಲ್ಲಿ ಪತ್ರಗಳು, ಮನಿ ಆರ್ಡರ್ಗಳು, ಪಾಕೀಟುಗಳು ಮತ್ತು ಪಾರ್ಸೆಲ್ಗಳನ್ನು ಹೊತ್ತು, ಸೈಕಲ್ ತುಳಿಯುತ್ತ ನಮ್ಮ ನಮ್ಮ ಬೀದಿಗೆ ಬರುವ ಅಂಚೆಯಣ್ಣನನ್ನು ನೋಡಿದ್ದೇ ತಡ, ಆ ಬೀದಿಯಲ್ಲಿರುವ ಮನೆಯವರೆಲ್ಲ, ನಮಗೇನಾದರು ಪತ್ರ ಬಂದಿದೆಯಾ, ಪಾರ್ಸೆಲ್ ಇದೆಯಾ, ಮನಿ ಆರ್ಡರ್ ಬಂತಾ ಅಂತ ಅವನನ್ನು ಸುತ್ತುವರಿದು ಪ್ರಶ್ನೆಗಳನ್ನು ಸುರಿದಾಗ, ಯಾರಿಗೆ ಏನು ಹೇಳಲಿ ಎಂಬ ಗೊದಲದಲ್ಲಿರುತ್ತಿದ್ದ ಅಂಚೆಯಣ್ಣ. ಅಷ್ಟೊಂದು ಕುತೂಹಲ ಮತ್ತು ಆಕರ್ಷಣೆಯನ್ನು ಸೃಸ್ಟಿಸುತಿತ್ತು ಆ ಅಂಚೆಯಣ್ಣನ ಆಗಮನ. ಪತ್ರಗಳನ್ನು ಹಂಚಿದ ಮೇಲೆ, ಓದು ಬಾರದವರಿಗೆ ಪತ್ರದಲ್ಲಿರುವ ವಿಷಯವನ್ನು ಕೆಲವೊಂದು ಸಲ ಓದಿ ಹೇಳುವ ಜವಾಬ್ದಾರಿಯು ಕೂಡ ಅಂಚೆಯಣ್ಣನ ಕೊರಳಿಗೆ ಬೀಳಿತಿತ್ತು. ಬಿಸಿಲು ಮಳೆ ಎನ್ನದೆ, ಕರ್ತವ್ಯ ನಿಷ್ಠೆಯಿಂದ, ತಲಿಪಿಸಬೇಕಾದ ಪತ್ರಗಳನ್ನು ಸಂಬಂಧಪಟ್ಟವರಿಗೆ ತಲುಪಿಸಿಯೇ ತನ್ನ ಕೆಲಸ ಮುಗಿಸಿ ಜನರ ಕಣ್ಣಲ್ಲಿ ಕರ್ಮಯೋಗಿಯಾಗಿಬಿಡುತ್ತಿದ್ದ ಆ ಅಂಚೆಯಣ್ಣ. 
 
ಈ ಕಂಪ್ಯೂಟರ್ ಯುಗದಲ್ಲಿ, ನಮ್ಮ ಎಲ್ಲ ಮಾಹಿತಿಗಳು ಪಾಸ್ವರ್ಡ್ ಪ್ರೊಟೆಕ್ಟ್ ಆಗಿದ್ದರು ಕೂಡ, ಪ್ರೈವಸಿ ವಿಚಾರದ ಬಗ್ಗೆ ಇತ್ತೀಚಿಗೆ ಅನೇಕ ವಾದ-ವಿವಾದಗಳು ನಡೆಯುತ್ತಿರುವುದು ಕಂಡುಬರುತ್ತಿದೆ. ಆದರೆ, ಎಲ್ಲವು ಓಪನ್ ಸೀಕ್ರೆಟ್ ಆಗಿರುವ ಹದಿನೈದು ಪೈಸೆಯ ಅಂಚೆ ಕಾರ್ಡಿನಲ್ಲಿ ಪತ್ರ ಬರೆಯುವಾಗ, ಯಾರಿಗೂ ಆಗ ಈ ಪ್ರೈವಸಿ ಬಗ್ಗೆ ಆತಂಕ ಕಾಡಲಿಲ್ಲ. ಬರೆದವರ ಎಲ್ಲ ವಿಷಯಗಳನ್ನು ಅಕ್ಷರಸಹಿತ ಓದಬಲ್ಲ ಈ ಓಪನ್ ಸೀಕ್ರೆಟ್ ಅಂಚೆಕಾರ್ಡುಗಳನ್ನು, ಅದರಲ್ಲಿರುವ ಒಂದು ಅಕ್ಷರವನ್ನು ಕೂಡ ಓದದೆ, ಪ್ರಾಮಾಣಿಕತೆಯಿಂದ, ತಲುಪಬೇಕಾದ ವಿಳಾಸಕ್ಕೆ ತಲುಪಿಸುವ ಜಾಯಮಾನ ಇತ್ತು ಅಂಚೆ ಇಲಾಖೆಯ ಸಿಬ್ಬಂದಿಗಳಲ್ಲಿ.
 
ಕಾಲ ಕಳೆದಂತೆ, ತಂತ್ರಜ್ಞಾನದ ಪ್ರಗತಿಗನುಗುಣವಾಗಿ, ಮನುಷ್ಯನ ಜೀವನಶೈಲಿಯಲ್ಲಾದ ಹಠಾತ್ ಬದಲಾವಣೆಗಳಿಂದ, ಎಲ್ಲವು ವೇಗವಾಗಿ ಆಗಬೇಕು ಎನ್ನುವ ಮನೋಭಾವ ಹೆಚ್ಚಾದಮೇಲೆ. ಸಮಯಕ್ಕೆ ಸರಿಯಾಗಿ ತಲುಪದ ಪತ್ರವನ್ನು ಕಾಯುವ ನೋವಿನಲ್ಲು ಸಂತಸ ಕಾಣುವ, ಕಾಯಿಸಿ ಕಾಯಿಸಿ ಕೊನೆಗೊಂದು ದಿನ ಕೈಸೇರುವ ಪತ್ರಗಳನ್ನು ಒಡೆದು ಓದುವ ಕುತೂಹಲವನ್ನು ವಿಜೃಂಭಿಸಿದ ನಾವುಗಳೆ ಇಂದು ಕೆಲವೇ ನಿಮಿಷಗಳಲ್ಲಿ ಕೈಸೇರುವ, ಭಾವರಹಿತ ನಿರರ್ಥಕ ಈ-ಮೇಲು, ವಾಟ್ಸಾಪ್ಪ್ ಮೆಸೇಜುಗಳಿಗೆ ನಮ್ಮನ್ನು ನಾನು ಅಳವಡಿಸಿಕೊಂಡಿದ್ದೇವೆ. ಹೃದಯದ ಸೂಕ್ಷ್ಮ ಸಂವೇದನೆಗಳ ಚಿತ್ತಾರ ಬಿಡಿಸುವ ಈ ಪತ್ರ ಮಾಧ್ಯಮಗಳೆಂಬ ಸ್ಮರಣೀಯ ನೆನಪುಗಳು ಇನ್ನು ಮುಂದಿನ ಪೀಳಿಗೆಗೆ ಕೇವಲ ದಂತಕಥೆಗಳಾಗಿ ಉಳಿದು ಹೋಗುವುದರಲ್ಲಿ ಎರಡುಮಾತಿಲ್ಲ.