ಭಾನುವಾರ, ಏಪ್ರಿಲ್ 26, 2020

"ಲಾಕಡೌನ್" ಎಂಬ ಗೃಹಬಂಧನದಲ್ಲಿ.....

ಕೋವಿಡ್19 ಎಂಬ ಸಾಂಕ್ರಾಮಿಕ ರೋಗ ಮಹಾಮಾರಿಯಾಗಿ ಇಡೀ ಜಗತ್ತನ್ನೇ ಕಾರ್ಮೋಡದಂತೆ ಆವರಿಸಿಕೊಂಡಿದೆ. ಈಗಾಗಲೇ ಜಾಗತಿಕವಾಗಿ ಸರಾಸರಿ 60 ಲಕ್ಷಕ್ಕೂ ಮೇಲ್ಪಟ್ಟು ಜನರು ಈ ಕಾಯಿಲೆಯಿಂದ ಸೋಂಕಿತರಾದರೆ, ಮೂರು ಲಕ್ಷ ಎಪ್ಪತ್ತು ಸಾವಿರಕ್ಕೂ ಮೇಲ್ಪಟ್ಟು ಜನ ಪ್ರಾಣಕಳೆದುಕೊಂಡಿದ್ದಾರೆ. ಅದರ ಜೊತೆಗೆ ಇಪ್ಪತ್ತೇಳು ಲಕ್ಷಕ್ಕೂ ಮೇಲ್ಪಟ್ಟು ಜನ ಗುಣಮುಖರಾಗಿದ್ದಾರೆ ಅನ್ನುವ ಒಳ್ಳೆಯ ಸುದ್ದಿಯು ಇದೆ. ಈ ರೋಗದ ಭೀಕರತೆ ಇಡೀ ಭೂಮಿಯನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಹಿಂತಹ ಆಧುನಿಕ ಯುಗದಲ್ಲಿಯೂ ಕೂಡ ಸೂಕ್ತ ಚಿಕಿತ್ಸೆಯ ಅಭಾವದಿಂದ, ಒಂದು ಸೂಕ್ಷ್ಮಾಣು ಜೀವಿಯ ಹೊಡತಕ್ಕೆ, ಅಸಹಾಯಕನಾಗಿ ಕೈಚೆಲ್ಲಿ ಕುಳಿತಿದ್ದಾನೆ ಮನುಷ್ಯ.

ಈ ಸಾಂಕ್ರಾಮಿಕ ಕಾಯಿಲೆಗಳೇ ಹಾಗೆ. ನನಗೆ ನೆನಪಿದೆ, ಚಿಕ್ಕವನಿದ್ದಾಗ ನಮ್ಮ ಅಜ್ಜಿ ಹೇಳ್ತಿದ್ದು. ಬಹಳ ದಿನಗಳ ಹಿಂದೆ ಪ್ಲೇಗ್ ಎಂಬ ಮಹಾಮಾರಿ ಬರುತ್ತಿತ್ತಂತೆ. ಅದು ಬಂದರೆ ಅನೇಕ ಜನರ ಪ್ರಾಣಹಾನಿ ಆಗುತ್ತಿತ್ತಂತೆ. ಅವಾಗ ಅಷ್ಟೊಂದು ವೈದ್ಯಕೀಯ ವ್ಯವಸ್ಥೆ ಇಲ್ಲದ ಕಾರಣ, ಒಂದು ಊರಲ್ಲಿ ಯಾರಿಗಾದರೂ ಪ್ಲೇಗ್ ಬಂದರೆ ಊರಿಗೆ ಊರೇ ಖಾಲಿಯಾಗಿ ಜನರೆಲ್ಲಾ ಬೇರೆಕಡೆ ವಲಸೆ ಹೋಗುತ್ತಿದ್ದರಂತೆ. ನಂತರ ಅದಕ್ಕೆ ಲಸಿಕೆ ಅಥವಾ ವ್ಯಾಕ್ಸಿನ್ ಬಂದಮೇಲೆ ಆ ಕಾಯಿಲೆ ನಿರ್ನಾಮವಾಯಿತು, ಆ ಮಾತು ಬೇರೆ. ಇದೆ ರೀತಿ ಕಾಲೆರಾ, ಮಲೇರಿಯಾ, ಸ್ವಾಯಿನ್ ಫ್ಲೂದಂತಹ ಸಾಂಕ್ರಾಮಿಕ ರೋಗಗಳು ಬಂದು ಹೋದ ಇತಿಹಾಸವಿದೆ.

ಕೊರೊನ ಎಂಬ ವೈರಸ್ ಸೋಂಕಿನಿಂದ ಬರುವ ಈ ಕಾಯಿಲೆ, ನೆವೆಂಬರ 2019 ರಲ್ಲಿ ಮೊದಲುಬಾರಿಗೆ ಚೀನಾದ ವುಹಾನ್ ಎಂಬ ನಗರದಲ್ಲಿ ಕಾಣಿಸಿಕೊಳ್ಳುತ್ತದೆ. ಮೊದಮೊದಲು ಅಷ್ಟೊಂದು ತೀವ್ರವಾಗಿ ಯಾರೂ ಚಿಂತಿಸಲಿಲ್ಲ ಆದರೆ ನೋಡು ನೋಡುತ್ತಲೇ ಈ ಕಾಯಿಲೆ ಹರಡುತ್ತಲೇ ಹೋಗಿ ಚೀನಾದಲ್ಲಿ ಸಾವಿರಾರು ಜನರ ಜೀವ ತೆಗೆದುಕೊಂಡು, ನಂತರ ದಕ್ಷಿಣ ಕೊರಿಯಾ, ಜಪಾನ್, ಇಟಲಿ, ಇರಾನ್, ಫ್ರಾನ್ಸ್, ನಂತರ ದೊಡ್ಡಣ್ಣ ಅಮೆರಿಕಾ, ಹೀಗೆ ಸಂಪರ್ಕ, ಸಹವಾಸ ಮತ್ತು ಪ್ರಯಾಣದ ಮೂಲಕ ಒಬ್ಬರಿಂದೊಬ್ಬರಿಗೆ ಹಬ್ಬುತ್ತಹೋಯಿತು. ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಸಾಂಕ್ರಾಮಿಕ ಕಾಯಿಲೆ ಎಂದು ಘೋಷಣೆ ಮಾಡಿಯೇಬಿಟ್ಟಿತು.

ನಮ್ಮ ಭಾರತದಲ್ಲಿ ಇನ್ನು ಯಾವುದೇ ಕೇಸ್ ಇಲ್ಲ ಎಂದು ಎಂದು ನಿರಾಳವಾಗಿ ನಿಟ್ಟುಸಿರು ಬಿಡುತ್ತಿರುವಾಗ, ಜನೆವರಿ 30 ಕ್ಕೆ ವುಹಾನ್ ದಿಂದ ಬಂದಂತಹ ಒಬ್ಬ ಕೇರಳದ ವಿದ್ಯಾರ್ಥಿಗೆ ಸೋಂಕು ತಗುಲಿದ ಮೊದಲ ಕೇಸು ರಿಪೋರ್ಟ್ ಆಗಿಯೇಬಿಟ್ಟಿತು. ಅಯ್ಯೋ! ನಮ್ಮಲ್ಲಿಯೂ ಬಂದೇಬಿಟ್ಟಿತೇ ಈ ಕಾಯಿಲೆ ಅನ್ನುವಷ್ಟರಲ್ಲಿಯೇ, ಫೆಬ್ರುವರಿ 24 ಕೆಲಸದ ನಿಮಿತ್ತ್ಯವಿದೇಶಕ್ಕೆ ಹೋಗಿಬಂದ ಬೆಂಗಳೂರಿನ ಸಾಫ್ಟ್ವೇರ್ ಉದ್ಯೋಗಿಗೆ ಕೊರೊನ ಸೋಂಕು ಕಾಣಿಸಿಕೊಳ್ಳುತ್ತದೆ. ಇದೆ ಕರ್ನಾಟಕಕ್ಕೆ ಮೊದಲ ಪ್ರವೇಶ. ಹೀಗೆ ನೋಡು ನೋಡುವಷ್ಟರಲ್ಲಿಯೇ ಬೇರೆ ಬೇರೆ ದೇಶಗಳಿಂದ ಬಂದವರಿಂದ ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ಈ ಸೋಂಕಿನ ಪಾಸಿಟಿವ್ ಕೇಸುಗಳು ಹೊರಬರ್ತಾ ಹೋಗುತ್ತವೆ. ಸರ್ಕಾರಗಳು ಹೀಗೆ ಸ್ವದೇಶಕ್ಕೆ ಬಂದವರಲ್ಲಿ ಸೋಂಕಿನ ಲಕ್ಷಣ ಕಂಡುಬಂದವರನ್ನು ಆಸ್ಪತ್ರೆಗಳಿಗೆ ಸೇರಿಸಿ, ಉಳಿದವರನ್ನು ಮನೆಯಲ್ಲಿಯೇ 14-15 ದಿನ ಗೃಹಬಂಧನದಲ್ಲಿಡಲು ಆದೇಶ ಹೊರಡಿಸುತ್ತವೆ. ಮಾರ್ಚ 12ನೇ ತಾರೀಕು ಕರ್ನಾಟಕದ ಕಲಬುರ್ಗಿಯಲ್ಲಿ ಮೊದಲ ಕೊರೊನ ಸೋಂಕಿತ ವ್ಯಕ್ತಿಯ ಸಾವಿನ ಸುದ್ದಿಇಂದ ಎಚ್ಛೆತ್ತುಕೊಂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಮುಚ್ಚುವ ಆದ್ನೇ ಹೊರಡಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳುವತ್ತ ಚುರುಕಾದವು. ಆದರೂ ಯಾಕೋ ಈ ನಿರ್ಧಾರ ತಡವಾಯಿತೇನೋ ಅನಿಸುತ್ತದೆ.

ಮೊದಲೇ ಈ ಕಾಯಿಲೆಗೆ ಮದ್ದಿಲ್ಲ ಆ ಕಡೆ ಇಟಲಿ, ಇರಾನ್ ಮತ್ತು ಫ್ರಾನ್ಸ್ ದೇಶಗಳಲ್ಲಿ ಟಪಟಪನೆ ಹೆಣಗಳು ಬೀಳುತ್ತಿವೆ. ಅಕಸ್ಮಾತ್ ಅದೇರೀತಿ ನಮ್ಮ ದೇಶದಲ್ಲಿ ಈ ಕಾಯಿಲೆ ತೀವ್ರಗತಿಯಲ್ಲಿ ಹರಡುತ್ತಾ ಎರಡನೇ ಮತ್ತು ಮೂರನೇ ಹಂತಕ್ಕೆ ತಲುಪಿದರೆ, ಅಷ್ಟೊಂದು ರೋಗಿಗಳಿಗೆ ಶುಶ್ರುಷೆ ಮಾಡಲು ಆಸ್ಪತ್ರೆಗಳಲ್ಲಿ ಹಾಸಿಗೆಗಳ ವ್ಯವಸ್ಥೆ ಇಲ್ಲ, ವೆಂಟಿಲೇಟರ್ಗಳೊ ಸುಮಾರು ಒಂದು ಲಕ್ಷ ಇರಬಹುದು. ಹಿಂತಹ ತುರ್ತುಪರಿಸ್ಥಿತಿಯಲ್ಲಿ ಬೇರೆ ದೇಶಗಳಿಂದ ಆಮದುಮಾಡಿಕೊಳ್ಳೋದು ಅಸಾಧ್ಯ. ಸಾಧ್ಯವಾದಷ್ಟು ಹೆಚ್ಚು ಜನರನ್ನು ಪ್ರರೀಕ್ಷೆ ಮಾಡಲು ಟೆಸ್ಟ್ ಕಿಟ್ಟಗಳ ಸಂಖ್ಯೆ ಕೂಡ ಕಡಿಮೆ ಇತ್ತು. ಆಗ ಈ ಕಾಯಿಲೆಯ ಹರಡುವಿಕೆಯನ್ನು ತಡೆಗಟ್ಟಲು ಮುಂದಿರುವ ಒಂದೇ ಮಾರ್ಗ, ಲಾಕಡೌನ್. ಅಂದರೆ ಅವಶ್ಯಕ ಸೇವೆಗಳನ್ನು (ವೈದ್ಯಕೀಯ ಮತ್ತು ದಿನಸಿ ಅಂಗಡಿ) ಹೊರತುಪಡಿಸಿ, ಸಾರಿಗೆ, ವ್ಯಾಪಾರ ವಹಿವಾಟು, ಶಾಲಾ-ಕಾಲೇಜು, ಸರ್ಕಾರೀ ಮತ್ತು ಖಾಸಗಿ ನೌಕರಿ ಎಲ್ಲವನ್ನು ನಿರ್ಧಿಷ್ಟ ದಿನಗಳ ಮಟ್ಟಿಗೆ ಸ್ತಬ್ದಗೊಳಿಸಿ, ಎಲ್ಲರನ್ನು ಮನೆಯಲ್ಲಿ ಇರಿಸುವ ಕಟ್ಟುನಿಟ್ಟಿನ ವ್ಯವಸ್ಥೆ. ಅದೇ ಪ್ರಕಾರ ಭಾರತದ ಪ್ರಧಾನ ಮಂತ್ರಿಗಳು ಮಾರ್ಚ್ 22ಕ್ಕೆ ಜನತಾ ಕರ್ಫ್ಯೂ ಎಂಬ ಒಂದುದಿನದ ಗೃಹಬಂಧನದ ಪ್ರಯೋಗಮಾಡಿ, ಮಾರ್ಚ್ 24ರ ಸಂಜೆ 21 ದಿನಗಳ ಮೊದಲ ಹಂತದ ಲಾಕಡೌನ್ ಘೋಷಣೆ ಮಾಡಿಯೇಬಿಟ್ಟರು......ಅಷ್ಟೇ ಸಾಕು ದೇಶಕ್ಕೆ ದೇಶವೇ ಸ್ತಬ್ಧವಾಗಿ, ಎಲ್ಲೆಲ್ಲೂ ನೀರವ ಮೌನ ಆವರಿಸಿಕೊಂಡಿತು. ಬಸ್, ರೈಲು, ವಿಮಾನಗಳೆಲ್ಲ ನಿಲ್ದಾಣ ಸೇರಿದವು. ರಸ್ತೆಗಳು ಖಾಲಿ ಖಾಲಿ. ವ್ಯಾಪಾರ-ವಹಿವಾಟುಗಳು ನಿಂತುಹೋಗಿ ಅಂಗಡಿಮುಗ್ಗಟ್ಟುಗಳೆಲ್ಲ ಮುಚ್ಚಿಹೋದವು. ದಿನದ 24 ಗಂಟೆ ಎಲ್ಲರು ತೆಪ್ಪಗೆ ತಮ್ಮ ತಮ್ಮ ಮನೆಯಲ್ಲೇ ಇರಬೇಕಾದ ಸ್ಥಿತಿ. ಆದರೆ ಹಿಂತಹ ತುರ್ತು ಪರಿಸ್ಥಿತಿಯಲ್ಲಿಯೂ ಹಗಲಿರುಳು ಶ್ರಮವಹಿಸುತ್ತಿರುವವರು, ಲಾಕಡೌನ್ ಅಚ್ಚುಕಟ್ಟಾಗಿ ನಡೆಸಲು ಸಕ್ರಿಯ ಪಾತ್ರವಹಿಸುತ್ತಿರುವ ಪೊಲೀಸರು, ತಮ್ಮ ಜೀವದ ಹಂಗನ್ನೇ ಮರೆತು ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ನಮ್ಮ ವೈದ್ಯರು ಮತ್ತು ಅರೋಗ್ಯ ಇಲಾಖೆಯ ಕಾರ್ಯಕರ್ತರು ಹಾಗು ನಮ್ಮ ಊರು, ನಗರಗಳನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಿರುವ ಪೌರಕಾರ್ಮಿಕರು. ಈ ಸಮಯದಲ್ಲಿ ಇವರೆಲ್ಲರಿಗೂ ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆಯೇ. ಅವರ ಸೇವೆ ಮಾತ್ರ ಶ್ಲಾಘನೀಯ.

ಗೃಹಬಂಧನದ ಘೋಷಣೆ ಆಗಿ ದೇಶವೆಲ್ಲಾ ಸ್ತಬ್ಧವಾಯೀತು, ಆದರೆ ನಿಜವಾದ ಸಮಸ್ಯೆಗಳು ಶುರುವಾಗಿದ್ದು ಇಲ್ಲಿಂದ. ನಮ್ಮ ಭಾರತ ವಿವಿಧ ಭಾಷೆ, ಸಂಸ್ಕೃತಿ, ನಂಬಿಕೆ, ವಿಚಾರ, ಬಡ, ಮಧ್ಯಮ, ಸಿರಿಮಂತ ವರ್ಗಗಳನ್ನೊಳಗೊಂಡ ದೇಶ. ಇಂತಹ ವಿವಿಧತೆಯುಳ್ಳ ದೇಶದಲ್ಲಿ ಎಲ್ಲರನ್ನು ಇಷ್ಟು ದಿನಗಳ ಕಾಲ ಒಟ್ಟಿಗೆ ಹಿಡಿದಿತ್ತು ಏಕತೆಯನ್ನು ಸಾಧಿಸುವುದು ಕಷ್ಟಸಾಧ್ಯ. ಹೊರಗಡೆ ಪೊಲೀಸರ ಲಾಠಿ ಏಟಿಗೆ ಹೆದರಿ ಮಧ್ಯಮ ಮತ್ತು ಶ್ರೀಮಂತವರ್ಗ ತಮ್ಮ ಮನೆಸೇರಿದರು, ಆದರೆ ಈ ನಿರ್ಧಾರದಿಂದ ನಿಜವಾಗಿ ತೊಂದರೆಗೀಡಾದವರು ದಿನಗೂಲಿಯನ್ನೇ ನಂಬಿ ನಗರಗಳಿಗೆ ಹೊಟ್ಟೆತುಂಬಿಕೊಳ್ಳಲು ವಲಸೆಬಂದ ಬಡ ಕಾರ್ಮಿಕವರ್ಗ. ಲಾಕಡೌನ್ ಆದಮೇಲೆ ಬದುಕೇ ಸ್ತಬ್ಧವಾಗಿದೆ, ಕೈಗೆ ಕೆಲಸವಿಲ್ಲ ಅಂದಮೇಲೆ ಸಂಸಾರ ಹೇಗೆ ನಡೆಸೋದು, ಜೊತೆಗೆ ಈ ರೋಗದ ಭೀತಿ ಬೇರೆ. ಸರ್ಕಾರಗಳೇನೋ ಬಡತನ ರೇಖೆಗಿಂತ ಕೆಳಗಿರುವವರಿಗಾಗಿ ಮೂರು ತಿಂಗಳ ತುರ್ತು ಪ್ಯಾಕೇಜ್ ಘೋಷಣೆ ಮಾಡಿದವು, ಆದರೆ ಅವೆಲ್ಲ ಅನುಷ್ಠಾನಕ್ಕೆ ಬರಲು ಸಮಯಬೇಕು. ಎಲ್ಲರು ಎಲ್ಲಿದ್ದೀರಿ ಅಲ್ಲೇ ಇರಿ, ನಾವು ವ್ಯವಸ್ಥೆ ಮಾಡುತ್ತೇವೆ ಎಂದು ಕೇಳಿಕೊಂಡರು ಏನು ಮಾಡಬೇಕೆಂದು ತೋಚದ ಇಕ್ಕಟ್ಟಿನ ಮನಸ್ಥಿತಿಯಲ್ಲಿದ್ದ ಕಾರ್ಮಿಕವರ್ಗ ಗಂಟು ಮೂಟೆ ಕಟ್ಟಿಕೊಂಡು ತಮ್ಮ ಮಕ್ಕಳುಮರಿಗಳನ್ನು ಕರೆದುಕೊಂಡು ಗುಳೆ ಅಂತ ತಮ್ಮ ಊರುಸೇರಿಕೊಳ್ಳಲು ಹೊರಟೇಬಿಟ್ಟರು. 3-4 ದಿನಗಳ ಕಾಲ ಊಟ, ನಿದ್ರೆ ಇಲ್ಲದೆ ಕಂಕುಳಲ್ಲಿ ಮಕ್ಕಳನ್ನು ಹೊತ್ತುಕೊಂಡು ನೂರಾರು ಕಿಲೋಮೀಟರ್ಗಳಷ್ಟು ದೂರ ನಡೀತಾ ಹೋಗೋ ದೃಶ್ಯ ಹೆಂತವರ ಹೃದಯವನ್ನು ಕರಗಿಸುವಂತಿತ್ತು. ಹಸಿವು ದಣಿವಿನಿಂದ ಮಕ್ಕಳ ಮುಖ ಸೊರಗಿಹೋಗಿವೆ. ನೋಡಲಾಗದೆ ಎಷ್ಟೋ ಜನ ಅವರಿಗೆ ರಸ್ತೆಯಲ್ಲಿ ಅನ್ನ ನೀರಿನ ತಾತ್ಕಾಲಿಕ ವ್ಯವಸ್ಥೆ ಮಾಡಿ ಉದಾರತನ ಮೆರೆದರು. ಪರಿಸ್ಥಿತಿ ಅರಿತ ಕೆಲವು ರಾಜ್ಯಸರಕಾರಗಳು ಸಾರಿಗೆ ವ್ಯವಸ್ಥೆ ಮಾಡಿ ಕೆಲವು ಮಟ್ಟಿಗೆ ಸಹಾಯಮಾಡಿ ಈ ಮೂರೂ ನಾಲ್ಕು ದಿನಗಳ ಘೋರ ದೃಶ್ಯಗಳಿಗೆ ತೆರೆ ಎಳೆದವು. ಆದರೂ ಇನ್ನು ಪರಿಸ್ಥಿತಿ ಸುಧಾರಿಸಿಲ್ಲ, ಕೆಲವು ಭಾಗಗಳಲ್ಲಿ ಮತ್ತು ನಗರಗಳಲ್ಲಿ ಜನರ ಆರ್ಥಿಕ ಸ್ಥಿತಿ ಸುಧಾರಿಸಲು ತಿಂಗಳುಗಳೇ ಬೇಕು.

ಆದರೆ ನನ್ನ ಪ್ರಕಾರ ಹಿಂತಹ ಸಮಸ್ಯೆಗೆ ಮೂಲ ಕಾರಣ ನಮ್ಮ ವ್ಯವಸ್ಥೆ. ನಮ್ಮ ದೇಶದ ಪಿಡುಗೆಂದರೆ ಕೇವಲ ಕೆಲವೇ ಕೆಲವು ಆಯ್ದ ನಗರಗನ್ನಷ್ಟೇ ಉದ್ಯೋಗ ಕೇಂದ್ರಗಳನ್ನಾಗಿ ಮಾಡಿ, ಬೇರೆ ಎರಡನೇ ದರ್ಜೆಯ ನಗರಗಳನ್ನು ನಿರ್ಲಕ್ಷಿಸಿರುವುದು. ಬೆರಳೆಣಿಕೆಯಷ್ಟೇ ನಗರಗಳಲ್ಲಿ ಉದ್ಯೋಗಗಳು ಕೇಂದ್ರೀಕೃತವಾಗಿವೆ. ಹೇಳಿಕೊಳ್ಳಲು ಮಾತ್ರ ಕೃಷಿ ಪ್ರಧಾನ ದೇಶವಿದ್ದರೂ ಮಳೆ ಕೈಕೊಟ್ಟಾಗ, ಹಳ್ಳಿಯ ಜನ ಕೆಲವು ಸಾವಿರ ದುಡ್ಡಿಗೋಸ್ಕರ ನೂರಾರು ಕಿಲೋಮೀಟರ್ಗಳಷ್ಟು ಸಂಚರಿಸಿ ಹೊಟ್ಟೆಪಾಡಿಗಾಗಿ ನಗರಗಳತ್ತ ವಲಸೆಹೋಗುತ್ತಾರೆ. ಬದಲಾಗಿ, ದ್ವಿತೀಯ ದರ್ಜೆಯ ನಗರಗಳನ್ನು ಕೂಡ ಬೆಳೆಸುತ್ತ ಬಂದರೆ, ಜನರು ದೂರದ ಊರುಗಳಿಗೆ ವಲಸೆ ಹೋಗುವುದು ತಪ್ಪುತ್ತದೆ ಮತ್ತು ಹಿಂತಹ ತುರ್ತುಪರಿಸ್ಥಿತಿ ಎದುರಾದಾಗ ನೂರಾರು ಮೈಲು ದೂರ ನಡೆಯುಗ ದುರ್ಗತಿ ಬರುವುದಿಲ್ಲ.

ಇಲ್ಲಿ ಹೇಳಲೇಬೇಕಾದ ಒಂದು ಮುಖ್ಯ ವಿಷಯ, ಈ ಲಾಕ್ಡೌನ್ ಎಂಬ ಗೃಹಬಂಧನವು ಜೀವನದಲ್ಲಿ ನೆನಪಿಡಬೇಕಾದ ಅನೇಕ ಅನುಭವಗಳನ್ನು ಕೊಡುತ್ತ ಹೋಯಿತು. ಈ ಪರಿಸ್ಥಿತಿ ಮನುಷ್ಯನಿಗೆ ಬದುಕಲು ಏನು ಮುಖ್ಯ ಮತ್ತು ಯಾವುದು ಆಡಂಬರ ಅನ್ನುವ ಮನವರಿಕೆ ಮಾಡುವುದರ ಜೊತೆಗೆ ಅರೋಗ್ಯ ನೈರ್ಮಲ್ಯದ ಬಗ್ಗೆ ತಿಳುವಳಿಕೆ ಮೂಡಿಸುತ್ತ ಸ್ವಚ್ಛತಾ ನಿಯಮಗಳನ್ನ ಪಾಲಿಸುವ ಜವಾಬ್ದಾರಿಯನ್ನು ಕಲಿಸಿಕೊಡ್ತಾಯಿದೆ. ವಿಚಿತ್ರವೆಂದರೆ, ಮನುಷ್ಯ ತನ್ನ ವಾಸಕ್ಕಾಗಿಯೇ ಕಟ್ಟಿಸಿದ ಮನೆಯಲ್ಲಿ ಹೊತ್ತುಕಳೆಯಲಾಗದೆ ತಡಪಡಿಸುವ ಪರಿಸ್ಥಿತಿ. ಪ್ರಾಣಿಪಕ್ಷಿಗಳನ್ನು ಪಂಜರದಲ್ಲಿಟ್ಟು ನೋಡಿ ಸಂತೋಷಪಡುವ ಈ ಮಾನವ ಇಂದು ತನ್ನ ಮನೆಯಲ್ಲಿಯೇ ಬಂಧಿಯಾಗದಾಗ, ಪ್ರಾಣಿಪಕ್ಷಿಗಳು ಇದನ್ನು ನೋಡಿ ಅಣುಕಿಸುವಂತಾಯಿತು. ಮನೆಕೆಲಸದವರಿಲ್ಲದೆ ಜನ ತಮ್ಮ ತಮ್ಮ ಮನೆಗೆಲಸಗಳನ್ನು ತಾವೇ ಮಾಡಿಕೊಳ್ಳುತ್ತ ಸ್ವಾವಲಂಭಿಗಳಾಗಬೇಕಾಯಿತು. ಅದಕ್ಕೆ ಏನೋ ನಮ್ಮ ಮಹಿಳಾಮಣಿಗಳು ತಮ್ಮ ಕೈಯಾರೆ ಸ್ನಾಕ್ಸ್ ಮತ್ತು ಫಾಸ್ಟ್ ಫುಡ್ಗಳನ್ನೂ ಮನೆಯಲ್ಲೇ ಮಾಡುವ ಪಾಂಡಿತ್ಯವನ್ನು ಪಡೆದುಕೊಂಡುಬಿಟ್ಟರು. ಈ ಬದಲಾದ ಪರಿಸ್ಥಿತಿಯಿಂದ ತಿಳಿಯುವ ಸಂಗತಿಯೆಂದರೆ ಲಾಕ್ಡೌನ್ ಮುಗಿದಮೇಲೆ ಈ ಫಾಸ್ಟ್ ಫುಡ್ ವ್ಯಾಪಾರಕ್ಕಂತೂ ಹೊಡೆತ ಬೀಳುವುದು ಖಂಡಿತ.

ಅದೇರೀತಿ ಈ ಲಾಕ್ಡೌನ್ ಹಂತ ಕೆಲವಂದು ಹಾಸ್ಯಾಸ್ಪದ ಸಂಗತಿಗಳನ್ನು ಅನುಭವಕ್ಕೆ ತಂದದ್ದುಂಟು. ಈ ಸಮಯದಲ್ಲಿ ಗಂಡ ಹೆಂಡತಿಯರು ಅತೀ ದೀರ್ಘಕಾಲ ಒಟ್ಟಿಗೆ ಇರಬೇಕಾದ ಪರಿಸ್ಥಿತಿ ಬಂದು,ಕೆಲವು ಪತಿ ಪತ್ನಿಯರ ಮಧ್ಯೆ ಸಂಬಂಧಗಳು ಗಟ್ಟಿಯಾದರೆ, ಕೆಲವರ ಮಧ್ಯೆ ಜಗಳಗಳು ಆದ ಸುದ್ದಿಗಳು ಕೇಳಿಬಂದವು. ಬಹಳ ದಿನಗಳ ನಂತರ ಹೆಂಡತಿಯರ ಕೈಗೆ ಸಿಕ್ಕ ಗಂಡಂದಿರ ಪಾಡು ಗೊಳೋ ಗೋಳು. ಯಾವುದೊ ಹಳೆಯ ವೈಷಮ್ಯವನ್ನು ತೀರಿಸಿಕೊಳ್ಳುವ ರೀತಿಯಲ್ಲಿ ಗಂಡಂದಿರಿಂದ ಮನೆಗೆಲಸವನ್ನು ಮಾಡಿಸಿದ್ದೆ ಮಾಡಿಸಿದ್ದು. ಆಫೀಸುಗಳು ಶುರು ಆದಮೇಲೆ ಗಂಡಂದಿರು ತಮ್ಮ ಆಫೀಸ್ ಕೆಲಸಗಳನ್ನೂ ಮರೆಯದಿರಲಿ. ಇನ್ನು ಕೆಲವರಿಗೆ ಹೆಂಡತಿಯನ್ನು ತವರಿಗೆ ಕಳುಹಿಸಿ ಸಂಪೂರ್ಣ ಸ್ವತಂತ್ರವೇನೋ ಸಿಕ್ಕಿತು ಆದರೆ ಹೊರಗಡೆ ಹೋಟೆಲ್ಲುಗಳು ತೆರೆಯದಿರದ ಕಾರಣ ಅಡುಗೆ, ಮನೆಕೆಲಸ ಎಲ್ಲವು ತಮ್ಮ ತಲೆಯಮೇಲೆ ಬಿದ್ದು, ಹೆಂಡತಿಯ ಶಾಪ ತಟ್ಟಿದ ಬಡಪಾಯಿ ಗಂಡಂದಿರಾಗಿದ್ದುಂಟು

ಮನೆಯಿಂದ ಆಫೀಸ್ ಕೆಲಸ ಮಾಡುವವರಿಗೆ ಡಿಜಿಟಲ್ ತಂತ್ರಜ್ನ್ಯಾನದ ಸದುಪಯೋಗವಾಗಿ, ಐಟಿ-ಬಿಟಿ ಉದ್ಯಮಗಳ ಕೆಲಸದ ಪದ್ಧತಿಯಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿತು. ಯೋಗ, ವ್ಯಾಯಾಮ, ಮತ್ತು ಅನೇಕ ವಿಷಯಗಳ ಕ್ಲಾಸುಗಳು ಮನೆಯಿಂದಲೇ ಆನ್ಲೈನ್ ಮುಖಾಂತರ ನಡೆಸುವಂತ ವ್ಯವಸ್ಥೆಯ ಜಾರಿಬಂದು, ಆಧುನಿಕ ತಂತ್ರಜ್ನ್ಯಾನದ ಸದುಪಯೋಗವಾಯಿತು. ಅಷ್ಟೇ ಅಲ್ಲದೆ, ಈ-ಕಾಮರ್ಸ್ ವ್ಯಾಪಾರಗಳಿಗೆ ಇದು ಸುಗ್ಗಿಯಕಾಲವಾಗಿ ಮಾರ್ಪಟ್ಟಿತು

ಮುಂದುವರೆದಂತೆ ಸರ್ಕಾರವು ಹಂತ ಹಂತವಾಗಿ ಲಾಕ್ಡೌನ್ ಅನ್ನು ಸಡಿಲಗೊಳಿಸುತ್ತ ಕೆಲವು ಸೇವೆಗಳನ್ನು ಪುನರಾರಂಭಗೊಳಿಸಲು ಅನುವು ಮಾಡುತ್ತ ಹೋಯಿತು. ಮೊದಲು 21 ದಿನಗಳು, ನಂತರ 19 ದಿನ, ಆಮೇಲೆ ಎರಡು ಸಲ 14 ದಿನಗಳು, ಈಗ ಲೊಕ್ಡೌನ್-5 ನ್ನು ಜೂನ್ 30 ವರೆಗೆ ಮುಂದುವರೆಸಿದ್ದು, ಈ ಕಾಯಿಲೆಯ ಹರಡುವಿಕೆ ಇನ್ನು ನಿಯಂತ್ರಣಕ್ಕೆ ಬಾರದ ಕಾರಣ, ಕೇಸುಗಳು ಹೆಚ್ಚಾಗಿರುವ ವ್ಯಾಪ್ತಿಗಳಲ್ಲಿ ಹೆಚ್ಚಿನ ನಿಗವಸುತ್ತಿರುವುದು. ಸರಕಾರದ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯ ಆದೇಶ ಇರುವುದರಿಂದ ನಿಯಮಗಳನ್ನ ನಿಯತ್ತಾಗಿ ಪಾಲಿಸಲೇಬೇಕು. ಪ್ರಚಲಿತ ಅಂಕಿಅಂಶಗಳ ಪ್ರಕಾರ ನಮ್ಮ ದೇಶದಲ್ಲಿ ಸೋಂಕಿತರ ಸಂಖ್ಯೆ ಒಂದು ಲಕ್ಷ ಎಂಭತ್ತು ಸಾವಿರ ಗಡಿ ದಾಟಿದ್ದು, ಅದರಲ್ಲಿ ಐದು ಸಾವಿರಕ್ಕೂ ಹೆಚ್ಚು ಜನ ತಮ್ಮ ಪ್ರಾಣಕಳೆದುಕೊಂಡಿದ್ದಾರೆ. ಇನ್ನು ಕರ್ನಾಟಕಕ್ಕೆ ಬಂದರೆ, ಸೋಂಕಿತರ ಸಂಖ್ಯೆ ಇನ್ನೇನು ಮೂರು ಸಾವಿರ ಗಡಿ ತಲುಪುವ ಹಂತದಲ್ಲಿದ್ದೇವೆ ಮತ್ತು ಒಟ್ಟು ನಲವತ್ತೆಂಟು ಜನರ ಪ್ರಾಣಹಾನಿಯಾಗಿದೆ. ಈಗಾಗಲೇ ಹೇಳಿದಂತೆ ಈ ರೋಗಕ್ಕೆ ಇನ್ನು ಔಷದಿ ಬಂದಿಲ್ಲ. ಈ ಕಾಯಿಲೆಗೆ ಔಷಧಿ ಅಥವಾ ವ್ಯಾಕ್ಸಿನ್ ಕಂಡಿಹಿಡಿಯಲು ಜಗತ್ತಿನಾಧ್ಯಂತ ತೀವ್ರಗತಿಯಲ್ಲಿ ಸಂಶೋಧನೆಗಳು ನಡಿತಾ ಇದ್ದು, ಅವು ಈಗ ಬೇರೆ ಬೇರೆ ಹಂತಗಳಲ್ಲಿ ಇದ್ದಾವೆ. ಒಂದು ಹೊಸ ಔಷದ ಕಂಡುಹಿಡಿಬೇಕಾದ್ರೆ ಅನೇಕ ಹಂತಗಳಿವೆ. ಈ ರೋಗಕ್ಕೆ ಔಷದ ಮೆಡಿಕಲ್ ಶಾಪಿಗೆ ಸೇರಬೇಕಾದ್ರೆ ಇನ್ನು ವರ್ಷಗಳೇ ಬೇಕು. ಇನ್ನು ಲಸಿಕೆ ಬಗ್ಗೆ ಹೇಳ್ಬೇಕಾದ್ರು, ಅದರಲ್ಲಿನೂ ಸಂಶೋಧನೆಗಳು ನಡಿತಾ ಇದ್ದು ಮಾರ್ಕೆಟಿಗೆ ಬರಬೇಕಾದ್ರೆ ಒಂದು ವರ್ಷ ಮೇಲ್ಪಟ್ಟು ಸಮಯ ಬೇಕು. ಕೆಲವು ರಾಜ್ಯಗಳಲ್ಲಿ ಪ್ಲಾಸ್ಮಾ ಥೆರಫಿಯ ಸಹಾಯದೊಂದಿಗೆ ಚಿಕಿತ್ಸೆ ಕೊಡುವ ಪ್ರಯತ್ನಗಳು ನಡೆಯುತ್ತಿವೆ. ಒಬ್ಬ ವಿಜ್ಞಾನಿಯಾಗಿ ನನ್ನ ಅನಿಸಿಕೆ ಒಂದು ಸಧ್ಯದಲ್ಲೇ ಒಂದು ಪರಿಪೂರ್ಣವಾಗಿ ಗುಣಪಡಿಸಬಲ್ಲ ಔಷದಿ ಸಿಗುವುದು ಕಷ್ಟ ಸಾಧ್ಯ ಅಂತಲೆ ಹೇಳಬಹುದು. ಆದ್ದರಿಂದ ಈಗಿರುವ ಉತ್ತಮ ಔಷದಿ ಎಂದರೆ, ಈ ಸೋಂಕು ಹರಡದಂತೆ ತಡೆಗಟ್ಟುವುದು. ಅದಕ್ಕಿರುವ ಒಂದೇ ದಾರಿಯೆಂದರೆ ಪರಸ್ಪರ ಸುರಕ್ಷಿತ ಅಂತರ, ಅವಾಗವಾಗ ಕೈ ತೊಳೆದುಕೊಳ್ಳೋದು, ಕೈಗೆ ಸ್ಯಾನಿಟೈಜರ್ ಬಳಕೆ, ಹೊರಗೆ ಹೋದಾಗ ಮಾಸ್ಕ ಧರಿಸುವುದು ಮತ್ತು ಬಹುಮುಖ್ಯವಾಗಿ, ಅನಾವಶ್ಯಕವಾದ ತಿರುಗಾಟವನ್ನು ತಪ್ಪಿಸಿ, ಸಾಧ್ಯವಾದಷ್ಟು ಮನೆಯಲ್ಲಿಯೇ ಇದ್ದು ಈ ಲಕ್ಡೌನ್ ಅನ್ನೋ ಗೃಹಬಂಧನವನ್ನು ಯಶಸ್ವಿಗೊಳಿಸುವುದು. ಸರಕಾರ ಮತ್ತು ವೈದ್ಯರು ಹಾಕಿಕೊಟ್ಟ ನಿಯಮ ಪಾಲಿಸೋಣ ಹಾಗು ಈ ಕೊರೊನ ವಿರುದ್ಧದ ಯುದ್ಧದಲ್ಲಿ ಆದಷ್ಟು ಬೇಗನೆ ಜಯ ಸಾಧಿಸೋಣ.

ಸೊಜುಗದ ಸೂಜು ಮಲ್ಲಿಗೆ.........

ವಯಸ್ಸು ನಲವತ್ತು ದಾಟಿದೆ, ಎಲ್ಲರೂ ಹೇಳೋಹಾಗೆ ನಲವತ್ತು ದಾಟಿದರೆ ಎರಡನೇ ಇನ್ನಿಂಗ್ಸ್ ಶುರುಆಗತ್ತಂತೆ. ನಲವತ್ತರ ನಂತರದ ಬದುಕೇ ಬೇರೆ, ಆರೋಗ್ಯದ ಕಡೆಗೆ ಗಮನ ಜಾಸ್ತಿ ಹರಿಸಬೇಕಾಗುತ್ತೆ, ನಾನು ಮುಂಚೆಯಿಂದ ಆಟ, ವ್ಯಾಯಾಮದಂತಹ ಚಟುವಟಿಗಳಿಗೆ ಗಮನ ಕಡಿಮೆ. ಇತ್ತಿತ್ತಲಾಗಿ ತೂಕ ಜಾಸ್ತಿ ಆಗಿ ಸ್ವಲ್ಪ ವಾಕಿಂಗ್ ಎಲ್ಲ ಮಾಡ್ತಇರಿ ಅಂದ್ರೆ ಮುಂದೆ ತೊಂದ್ರೆ ಇರಲ್ಲ ಅಂತ ಡಾಕ್ಟರ್ ಸಲಹೆ ಮೇರೆಗೆ ವಾಕಿಂಗ್ ಶುರು ಹಚ್ಚಗೊಂಡಿದೀನಿ.
ನಾನು ಮಾಮೂಲಾಗಿ ಬೆಳಿಗ್ಗೆ ಮನೆ ಪಕ್ಕ ಇರುವ ಅಂಬರೀಷ್ ಗಾರ್ಡನ್ನಿನಲ್ಲಿ (ಜೆಪಿ ನಗರದ ಚಿತ್ರನಟ ದಿವಂಗತ ಅಂಬರೀಶ್ ಮನೆ ಪಕ್ಕ ಇರೋದ್ರಿಂದ ಅದು ಅಂಬರೀಷ್ ಗಾರ್ಡನ್ ಆಯಿತು) ವಾಕಿಂಗ್ ಮಾಡೋಕೆ ಹೋಗೋದು. ಒಂದು 30-40 ನಿಮಿಷ ವಾಕಿಂಗ್ ಮಾಡೋ ರೂಢಿ ಇಟಗೊಂಡಿದಿನಿ.
ಹಿಂಗೇ ಒಂದು ದಿನ ವಾಕಿಂಗ್ ಬೆಳಿಗ್ಗೆ ಮಾಡ್ತಾಯಿದ್ದೆ....ಹಿಂದ್ಗಡೆಯಿಂದ ಸುಶ್ರಾವ್ಯ ಕಂಠದಲ್ಲಿ “ಸೊಜುಗದ ಸೂಜು ಮಲ್ಲಿಗೆ.....” ಹಾಡು ಕೇಳಿಬರ್ತಾಇತ್ತು. ಕುತೂಹಲದಿಂದ ಇಷ್ಟು ಬೆಳಿಗ್ಗೆ ಯಾರಪ್ಪ ಈ ಗಾರ್ಡನಿನಲ್ಲಿ ಹಾಡ್ತಾಯಿರೋದು, ಎಲ್ಲಿಂದ ಬರ್ತಾಇದೇ ಈ ಹಾಡು ಅಂತ ಹಿಂತಿರುಗಿ ನೋಡಿದೆ...ಯಾರೋ ಒಬ್ರು ತಮ್ಮ ಮೊಬೈಲಿನಲ್ಲಿ, ಮೇಲುಧ್ವನಿಯಲ್ಲಿ ಈ ಹಾಡನ್ನ ಕೇಳ್ತಾ ವಾಕ್ ಮಾಡ್ತಾಯಿದ್ರು.
ಮೊನ್ನೆ ಈಶ ಫೌಂಡೇಷನ್ನಿನ, ಸದ್ಗುರು ಆಶ್ರಮದಲ್ಲಿ ಶಿವರಾತ್ರಿ ಆಚರಣೆ ಸಂದರ್ಭದಲ್ಲಿ, ನಮ್ಮ ಕನ್ನಡದ ಹುಡುಗಿ “ಅನನ್ಯ ಭಟ್” ಹಾಡಿದ ಹಾಡು ಇದಾಗಿತ್ತು. ಈ ಹುಡುಗಿ ಮುಂಚೆ ಅನೇಕ ಬಾರಿ ಬೇರೆ ಬೇರೆ ಸಮಾರಂಭಗಳಲ್ಲಿ ಇದೆ ಹಾಡನ್ನು ಹಾಡಿದ ವಿಡಿಯೋಗಳು ಯುಟ್ಯೂಬಿನಲ್ಲಿ ಲಭ್ಯವಿದ್ದರೂ, ಅಷ್ಟೊಂದು ಪ್ರಚಲಿತವಾಗಿರಲಿಲ್ಲ. ಆದರೆ, ಆ ರಾತ್ರಿ ಅವಳಿಗೆ ಸಿಕ್ಕ ಆ ಒಂದು ವೇದಿಕೆ ಅಥವಾ ಅವಕಾಶ ಎಷ್ಟೊಂದು ಹೆಸರು ಮತ್ತು ಪ್ರಖ್ಯಾತಿ ತಂದುಕೊಟ್ಟಿತೆಂದರೆ, ಇವತ್ತು ಎಲ್ಲೆಲ್ಲೂ ಅವಳದೇ ಧ್ವನಿಯ “ಸೊಜುಗದ.....” ಹಾಡು ಕೇಳಿಬರ್ತಿದೆ.....ಎಷ್ಟೋ ಜನ ಅವಳು ಹಾಡಿದ ಬೇರೆ ಬೇರೆ ಹಾಡುಗಳನ್ನ ಹುಡುಕಿ ಕೇಳ್ತಿದ್ದಾರೆ...
ಒಂದು ಒಳ್ಳೆಯ ವೇದಿಕೆ ಒಬ್ಬರ ಜೀವನವನ್ನ ಹೇಗೆ ಬದಲಾಯಿಸುತ್ತದೆ ಎನ್ನೋದಕ್ಕೆ ಇದು ಒಳ್ಳೆ ಉದಾಹರಣೆ....ಏನಂತೀರಿ!!