ಭಾನುವಾರ, ಡಿಸೆಂಬರ್ 29, 2019

ನರನಾಡಿಗಳಲ್ಲೂ ಹರಿಯುತಿದೆ ಬೆಂಗಳೂರಿನ ರೇಡಿಯೋ ಸಿಟಿ....


ಇವತ್ತು ಭಾನುವಾರ ನೋಡಿ.... ತಿಂಗಳ ಕೊನೆ...... ಸಂಬಳ ಬೇರೆ ಬಂದಿತ್ತು....
ನನ್ನ  ಧರ್ಮಪತ್ನಿ ನಿನ್ನೆನೇ ವಾರ್ನಿಂಗ ಮಾಡಿದ್ಲು.... "ಮನೇಲಿ ತರಕಾರಿ ಖಾಲಿಯಾಗಿದೆ, ನಾಳೆ ಬೆಳಿಗ್ಗೆ ಜೆಪಿ ನಗರದ ಸಾರಕ್ಕಿ ಮಾರ್ಕೆಟಿಗೆ ಹೋಗಿ ತರಕಾರಿ ತರೋಣ" ಅಂತ.....
ಮನೆಯ ಯಜಮಾನಿ ಆರ್ಡರ್ ಅಂದ್ರೆ ಒಲ್ಲೆ ಅನ್ನೋಕಾಗುತ್ತಾ!!....ಎಲ್ಲ ಕೆಲಸಬಿಟ್ಟು ಬೆಳಿಗ್ಗೆ ಎದ್ದವರೇ ಕಾರಿನಲ್ಲಿ ತರಕಾರಿ ತರೋಕೆ ಪತಿ-ಪತ್ನಿ ಸಮೇತರಾಗಿ ಹೋದ್ವಿ......
ನಾನು ಬಾರ್ಗೇನು ಮಾಡೋದ್ರಲ್ಲಿ ಅವಳಿಗಿಂತ ಸ್ವಲ್ಪ ಅಲ್ಪ ಜ್ಞಾನಿ...... ಅದಕ್ಕೆ ತರಕಾರಿ ಮಾರೋನ ಹತ್ರ  ಲೆಕ್ಕ ತಪ್ಪಿ ಹತ್ತು ರೂಪಾಯಿ ಜಾಸ್ತಿ ಕೊಟ್ಟಬಿಟ್ಟೆ..... ಅಷ್ಟು ಸಾಕು ನೋಡಿ ಈ ಹೆಂಡ್ತೀರು ವಾದ ಮಾಡಿ ತಾವೇ ಬುದ್ಧಿವಂತರು ಅಂತ ಪ್ರೂವ್ ಮಾಡಕ್ಕೆ......
ವಾಪಸ್ ಮನೆಗೆ ಬರೋವಾಗ ಇದೆ ವಿಷಯಕ್ಕೆ ವಾದ ವಿವಾದ ನಡೀತಾಯಿತ್ತು......ಹೋಗ್ಲಿ ಬಿಡೆ ಏನು ಹತ್ತು ರೂಪಾಯಿ ತಾನೇ ಅಂದ್ರು ಕೇಳ್ತಾಯಿಲ್ಲ....ಆಗ ಈ ವಾದ ವಿವಾದ ದಿಂದ ಎಸ್ಕೇಪ್ ಆಗಕ್ಕೆ ಕಾರಿನ ಎಫ್ ಎಂ ರೇಡಿಯೋ ಮೊರೆಹೋದೆ.....ನೀನಾದ್ರೂ ವಿಷಯ ಚೇಂಜ್ ಮಾಡಿ ಪುಣ್ಣ್ಯಾ ಕಟ್ಕೋ ಮಾರಾಯ ಅಂತ.....

ಇನ್ನೇನು ಎಫ್ ಎಂ ರೇಡಿಯೋ ಆನ್ ಮಾಡಿದೆ.....ಆಗ ಬಂತು ನೋಡಿ ರೇಡಿಯೋ ಸಿಟಿ FM-91.1 ಅವರ ಆಂಥೆಮ್ಮ್ಯೂ .....

ನಮಸ್ಕಾರ ನೀವು ಕೇಳ್ತಾಯಿದ್ದೀರಿ ಎಫ್ ಎಂ ಅಂದ್ರೆ ರೇಡಿಯೋ ಸಿಟಿ 91.1 ಎಫ್ ಎಂ.....
 “ಒಂದು ಮಸಾಲೆ ಬೈ-ಟೂ ಕಾಫೀ ಬರ್ಲೆ....
ಹಲೋ ಎಕ್ಸ್ಕ್ಯೂಸ್ ಮೀ, ಇದು ಲೇಡೀಸ್ ಸೀಟು .....ಸ್ವಲ್ಪ ಅಡ್ಜಸ್ಟ್ ಮಾಡಿ.....
ಟಿಕೆಟ್.....ಟಿಕೆಟ್.....ಟಿಕೆಟ್......
ಬದ್ನೇಕಾಯಿ ಎಸ್ಟ್ರಿ ಕೆಜಿ....
ಹೇ! ವಾಟ್ ಡಾ ಮಚಾ....ಫುಲ್ ಮಿಂಚಿಂಗಾ....”
 ನರನಾಡಿಗಳಲ್ಲೂ ಹರಿಯುತಿದೆ ಸಿಟಿ....ಕಣ ಕಣದಲ್ಲೂ ಪ್ರತಿ ಉಸಿರಲ್ಲೂ ಸಿಟಿ...
 “ಮೀಟರ್ ಮೇಲೆ ಇಪ್ಪತ್ತು.....ಬರ್ತೀರಾ....”
 ಕೆಂಪೇಗೌಡರ ಸಾಹಸ.....ಐನೂರು ವರ್ಷದ ಇತಿಹಾಸ.....
ನಮ್ಮೂರು ಬೆಂದಕಾಳೂರು......ಇದುವೇ ನಮ್ಮ ಬೆಂಗಳೂರು......
 “ಕನ್ನಡ್ ಗೊತ್ತಿಲ್ಲ.....ಕನ್ನಡ್ ಅಲ್ಲ.....ಅದು ಕನ್ನಡ...”
 ನರನಾಡಿಗಳಲ್ಲೂ ಹರಿಯುತಿದೆ ಸಿಟಿ....ಕಣ ಕಣದಲ್ಲೂ ಪ್ರತಿ ಉಸಿರಲ್ಲೂ...
ಇಲ್ಲಿಗೆ ಎಲ್ಲಿದಲೋ ಬರ್ತಾರೆ.....ಕಷ್ಟದಲ್ಲೂ ನಗ್ತಾರೆ......
ತಳ್ಳು ಗಾಡಿ ಇಂದ ಹಿಡಿದು....ಫೈವ್ ಸ್ಟಾರ್ ವರೆಗೂ ನಮ್ಮವರೇ.....
 “ಇವರೇ ಛೋಟಾ....ಒಂದು ಚಾಯ್ ಹಾಕಿ....”
 ಐಟಿ-ಬಿಟಿ ಪಾರ್ಕಿನ ನಡುವೆ.....ಲಾಲ್ ಬಾಗು...ಕಬ್ಬನ್ ಪಾರ್ಕು....
ಬಸವನ ಗುಡಿಯ ದೋಸೆ....ಮಲ್ಲೇಶ್ವರದ ಇಡ್ಲಿ ಸಾಕು......
 “ಸಾರ್, ವಡೆ ಡಿಪ್ಪಾ.....ಸಪರೇಟಾ....”
 ಮೀಟರ್ ಇರೋ ಆಟೋದಲ್ಲಿ.....ಸ್ಪೀಡಾಗಿರೋ ಕ್ಯಾಬಿನಲ್ಲಿ....
ಬ್ರಿಗೇಡ್-ಎಂಜಿ ರೋಡಿನಕಡೆಗೆ......ಲೈಫ್ ಸೂಪರ್ ಇದೆ.....
ನರನಾಡಿಗಳಲ್ಲೂ ಹರಿಯುತಿದೆ ಸಿಟಿ....ಕಣ ಕಣದಲ್ಲೂ ಪ್ರತಿ ಉಸಿರಲ್ಲೂ.....ಸಿಟಿ.....
ಎಫ್ ಎಂ ಅಂದ್ರೆ.....ರೇಡಿಯೋ ಸಿಟಿ....

ಅದ್ಯಾರು ಪುಣ್ಯಾತ್ಮ ಈ ಹಾಡು ಸೃಷ್ಟಿಮಾಡಿದನೋ ಗೊತ್ತಿಲ್ಲ, ಆದರೆ ಈ ಒಂದು ಚಿಕ್ಕ ಟೈಟಲ್ ಸಾಂಗು ನಮ್ಮ ಈಡಿ ಬೆಂಗಳೂರಿನ ಬದುಕಿನ ಚಿತ್ರಣವನ್ನೇ ನಮ್ಮ ಕಣ್ಮುಂದೆ ತಂದು ಬಿಡತ್ತೆ.....ಅದಕ್ಕೆ ಕಾರಣ ಈ ಸಾಂಗಿನ ಮಧ್ಯ ಬರುವ ಕೆಲವು ವಿಶೇಷ ಸಂಭಾಷಣೆಗಳು....
ನಾವು, ವಿಶೇಷವಾಗಿ ಬೆಂಗಳೂರಿನಲ್ಲಿ ಜೀವನ ಮಾಡವ್ರು ಆ ಸಂಭಾಷಣೆಗಳನ್ನ ದಿನಾ ಕೇಳಿರ್ತೀವಿ ಅಥವಾ ಮಾತಾಡಿರ್ತೀವಿ.... ಆದರೆ ಈ ಹಾಡನ್ನ ಎಮ್ಮೆ ಕೇಳಿದಾಗ ನಿಮಗ ಈ ಸಂಭಾಷಣೆಗಳು ಈ ಊರಿನ ವೈಶಿಷ್ಟತೆಯನ್ನು ಹೊರಹೊಮ್ಮುವ ಒಂದು ಗುರುತನ್ನೇ ನಿಮ್ಮ ಮನಸಿನಲ್ಲಿ ಛಾಪಿಸುತ್ತವೆ.....

ಯಾವ ಯಾವ ಸಂಧರ್ಭಗಳಲ್ಲಿ ಈ ಸಂಭಾಷಣೆಗಳ ಪರಿಚಯ ಅಥವಾ ಅನುಭವ ನಮಗೆ ಆಗಿರುತ್ತದೆ ಅನ್ನೋದನ್ನ ನೆನಪಿಸಲು, ಈ ಹಾಡಿನಲ್ಲಿ ಬರುವ ಸಂಭಾಷಣೆಗಳನ್ನು ಸಂಧರ್ಬೋಚಿತವಾಗಿ, ಈ  ಕೆಳಗಿನಂತೆ ಸ್ವಲ್ಪ ವಿಸ್ತಾರವಾಗಿ ಹೇಳುವ ಪ್ರಯತ್ನ ಮಾಡಬೇಕನಿಸಿತು.....ಬೆಂಗಳೂರಿನಲ್ಲಿರುವವರು ಇದನ್ನು ಓದಿದಮೇಲೆ ನನ್ನೊಂದಿಗೆ ಒಪ್ಪುತ್ತೀರಾ ಅಂದ್ಕೋತೀನಿ.

ಯಾವಾಗ್ಲಾದ್ರೂ ಸರ್ವಿಸ್ ಇರೋ ರೆಸ್ಟೋರೆಂಟಿಗೆ ಹೋದಾಗ ನಮ್ಮ ಆರ್ಡೆರಿಗಾಗಿ ಕಾಯಿತಾಇರ್ತಿವಿ, ಆಗ ಸರ್ವರೂ "ಒಂದು ಮಸಾಲೆ ಬೈ-ಟೂ ಕಾಫೀ ಬರ್ಲೆ.." ಅಂತ ಕೂಗೋದನ್ನ ಕೇಳಿರಬಹುದು.....ಇನ್ನು ಅಕಸ್ಮಾತ್ ಸೆಲ್ಫ್ ಸರ್ವಿಸ್ ರೀಫ್ರೆಶ್ಮೆಂಟ್ಗೆ ಹೋದಾಗ, ಇಡ್ಲಿ-ವಡ ಆರ್ಡರ್ ಮಾಡಿ, ಕೌಂಟರ್ನಲ್ಲಿ ಹೋಟೆಲಿನವನು ಒಳಕ್ಕ ಕೇಳ್ತಾನೆ, "ಸಾರ್, ಡಿಪ್ಪಾ.....ಸಪರೇಟಾ....”, ಇಲ್ಲಿ ಡಿಪ್ಪ ಅಂದ್ರೆ ಒಂದು ಆಳ ಜಾಸ್ತಿ ಇರೋ ಪ್ಲೇಟಿನಲ್ಲಿ ಇಡ್ಲಿ-ವಡ ಎರಡನ್ನು ಸಾಂಬಾರಿನಲ್ಲಿ ಚನ್ನಾಗಿ ಮುಳುಗಿಸಿ ಕೊಡ್ತಾನೆ.....ಬೆಂಗಳೂರುನಲ್ಲಿ ಕೆಲವಂದು ಜನಕ್ಕೆ ಕೇವಲ ಇಡ್ಲಿ-ವಡ ತಿನ್ನಕ್ಕೆ ಸಿಕ್ಕಾಪಟ್ಟೆ ಸಾಂಬಾರ್ ಬೇಕು, ಇದು ಅಂಥವರಿಗಾಗಿ ಮಾಡಿರೋ ಡಿಪ್ಪ ಸಿಸ್ಟಮ್........ಇನ್ನು ಸಪರೇಟ್ ಅಂದ್ರೆ ಮಾಮೂಲಾಗಿ ಕೊಡೊತರ ಎರಡು ಲೊಟುಗಳಲ್ಲಿ ಸಾಂಬಾರು ಚಟ್ನಿ ಸಪರೇಟಾಗಿ ಕೊಡ್ತಾನೆ....

ಬೆಂಗಳೂರಿನಲ್ಲಿ ಮೆಟ್ರೋ, ಕ್ಯಾಬು ಎಲ್ಲ ಇದ್ರು, ಬಸ್ಸಿನಲ್ಲಿ ಕೆಲಸಕ್ಕೆ, ಶಾಲಾ ಕಾಲೇಜಿಗೆ ಹೋಗೋ ಜನರ ಸಂಖ್ಯೆ ಏನು ಕಡಿಮೆ ಆಗಿಲ್ಲ....ಪಾಪ ಅವರ ಪ್ರತಿದಿನದ ಹೆಣಗಾಟ ಕೆಳಬಾರ್ದು...ಈ ರೀತಿ ಬಿಎಂಟಿಸಿ ಬಸ್ಸುನಲ್ಲಿ ಏನಾದ್ರು ಪ್ರಯಾಣ ಮಾಡಿದ ಅನುಭವ ಇದ್ರೆ (ನನಗು ಇದೆ).....ಅಲ್ಲಿನೂ ಕೆಲವು ವಿಶೇಷ ಸಂಭಾಷಣೆಗಳನ್ನ ಕೇಳಿರ್ತೀವಿ. ಅತೀ ಕಾಮನ್ ಅಂದ್ರೆ "ಟಿಕೆಟ್.....ಟಿಕೆಟ್.....ಟಿಕೆಟ್...". ಇದು ಬೇರಾರದು ಅಲ್ಲ, ನಮ್ಮ ಕಂಡಕ್ಟರ್ ಸಾಹೆಬ್ರುಗಳು ಹೇಳೋ  ಸಾಮಾನ್ಯ ಡೈಲಾಗು......ಅಕಸ್ಮಾತ್ ಅವತ್ತು ಬಸ್ಸಿನಲ್ಲಿ ರಶ್ ಜಾಸ್ತಿ ಇದ್ದು,  ಯಾರಾದ್ರೂ ತಪ್ಪಿ ಲೇಡೀಸ್ ಸೀಟಿನಲ್ಲೇನಾದ್ರು ಕೂತುಬಿಟ್ಟರೆ, ಆಕಡೆ ಇಂದ "ಹಲೋ ಎಕ್ಸ್ಕ್ಯೂಸ್ ಮೀ, ಇದು ಲೇಡೀಸ್ ಸೀಟು... ಎದ್ದೇಳ್ರಿ.." ಅಂತ ಮಹಿಳಾಮಣಿಗಳ ಧ್ವನಿ ನಿಮ್ಮ ಕಿವಿಗೆ ಅಪ್ಪಳಿಸಿರುತ್ತೆ. ನೀವೇನೋ  "ಸ್ವಲ್ಪ ಅಡ್ಜಸ್ಟ್ ಮಾಡಿ... ಕಾಲ್ ನೋಯಿತಾಇದೆ" ಅಂತ ಹೇಳ್ಬಹುದು. ಆದರೆ ಈ ಊರಲ್ಲಿ ನಮ್ಮ ಹೆಣ್ಮಕ್ಳು ತುಂಬಾ ಸ್ಟ್ರಾಂಗ್ ಕಂಣ್ರಿ...... ಸುಮ್ನೆ ವಾದಕ್ಕೀಳಿದ್ರೆ ಹಂಗೆ ಪೊಲೀಸರನ್ನ ಕರಿಸಿ ದಂಡ ಹಾಕಿಸಿಬಿಡ್ತಾರೆ. ಅದ್ಕೆ ಸೀಟ್ ಬಿಟ್ಟಕೊಡೋದೇ ಪುರುಷಾರ್ಥದ ಲಕ್ಷಣ....😏😜

ಆಯಿತು ಈ ಬಸ್ಸಿನ ಗೋಜಿಗೆ ಹೋಗೋದೇ ಬೇಡ ಅಂತ, ಬೆಂಗಳೂರಿನ ಸಾರಿಗೆ ಸಾಧನಗಳ ಜೀವನಾಡಿ ಆಗಿರುವ ಆಟೋದಲ್ಲಿ ಏನಾದ್ರು ಹೋಗೋ ಪ್ಲಾನ್ ಏನಾದ್ರು ಮಾಡಿದ್ರೆ ಅಲ್ಲಿನೂ ಅನೇಕ ವಿಶೇಷ ಅನುಭವಗಳು ಆಗೋದುಂಟು. ಸಾಮಾನ್ಯವಾಗಿ ನಾವು ಆಟೋದವರ ಜೊತೆ ಮೀಟರ್ ಗೋಜಿಗೆ ಬಾರ್ಗೇನ್  ಮಡೋಕೆ  ಇಳೀತೀವಿ, ಯಾಕಂದ್ರೆ ಎಲ್ಲೆಲ್ಲೋ ಸುತ್ತಾಡಿಸಿ ಇವರು ಮೀಟರ್ ಬಿಲ್ಲು ಜಾಸ್ತಿ ಮಾಡ್ಬಹುದೇನೋ ಎಂಬ ಹೆದರಿಕೆ. ಬಾರ್ಗೇನ್ ಕೆಲಸಮಾಡ್ಲಿಲ್ಲ ಅಂತ  ಗೊತ್ತಾದಾಗ, ಹೋಗ್ಲಿ ಬಿಡು ಮೀಟರ್ ಹಾಕಪ್ಪ, ಆದ್ರೆ ಕರೆಕ್ಟ್ ಅಡ್ದ್ರೆಸ್ಗೆ ಕರ್ಕೊಂಡು ಹೋಗ್ಬೇಕು ನೋಡು ಅಂದಾಗ ಅವನು ಇನ್ನೊಂದು ದಾಳ ಹಾಕ್ತಾನೆ ಅದೇ “ಮೀಟರ್ ಮೇಲೆ ಇಪ್ಪತ್ತು ರೂಪಾಯಿ ತೊಗೋತೀನಿ .....ಬರ್ತೀರಾ....” ಅಂತ. ಅನಿವಾರ್ಯ ಆದ್ರೆ ಅವನು ಹಾಕಿದ ದಾಳಕ್ಕೆ ಸೋತು ಹೋಗ್ಲೇಬೇಕು.....

ನಮ್ಮ ಬೆಂಗಳೂರನ್ನು ಕಾಡುತ್ತಿರುವ ಇನ್ನೊಂದು ಜಟಿಲವಾದ ಸಮಸ್ಸ್ಯೆ ಅಂದ್ರೆ, ಕೆಲಸಕ್ಕೆ ಅಂತ ವಲಸೆ ಬರುತ್ತಿರುವ ಈ ಉತ್ತರ ಭಾರತೀಯರು. ಇವರೋ ಇಲ್ಲಿ ಕೆಲಸ ಬೇಕು, ಜೀವನ ಮಾಡಕ್ಕೆ ಇದೆ ಊರು ಬೇಕು, ಆದರೆ ನಮ್ಮ ಕನ್ನಡ ಭಾಷೆ ಮಾತ್ರ ಬೇಡ. ಇವರನ್ನ ಏನಾದ್ರು ವಿಷಯ ಹಿಡ್ಕೊಂಡು ಕನ್ನಡದಲ್ಲಿ ಮಾತಾಡ್ಸಕ್ಕೆ ಹೋಗಿ ಆಗ ಸಾಮಾನ್ಯವಾಗಿ ಇವರ ಬಾಯಿಯಿಂದ ಉದುರೋ ಮೊದಲ ಡೈಲಾಗು "“ಕನ್ನಡ್ ಗೊತ್ತಿಲ್ಲ....". ಅಯ್ಯೋ ದೇವ್ರೇ ಇವರಿಗೆ ಸರಿಯಾಗಿ "ಕನ್ನಡ" ಅಂತ ಉಚ್ಚರಿಸಲು ಬರಲ್ಲವೇ, ಇನ್ನು ಕನ್ನಡ ಮಾತಾಡೋದು ದೂರದ ಮಾತು ಅನ್ಸತ್ತೆ....... ಎಲ್ಲರೂ ಹಾಗೆ ಅಂತ ಹೇಳಲ್ಲ, ಕೆಲವರು ಅಲ್ಪ ಸ್ವಲ್ಪ ಹೇಗೋ ಮಾತಾಡೋಕೆ ಪ್ರಯತ್ನಮಾಡೋದನ್ನ ಕಾಣುತೀವಿ...."“ಇವರೇ ಛೋಟಾ....ಒಂದು ಚಾಯ್ ಹಾಕಿ."...ಇದು ಇಂಥಹ ಅರ್ಧ ಕನ್ನಡ ಕಲಿತವರಿಂದ ಬರುವ ಡೈಲಾಗು.

ಅದೇ ರೀತಿ ಇನ್ನು ಅನೇಕ ಸಂಭಾಷಣೆಗಳು......ನಮ್ಮ ಮಾಡ್ರನ್ ಪೀಳಿಗೆಗಳ, ಈಕಡೆ ಕನ್ನಡವೂ ಅಲ್ಲದ ಆಕಡೆ ಇಂಗ್ಲೀಷು ಅಲ್ಲದ ವಿಚಿತ್ರ ಡೈಲಾಗುಗಳು.... "ಹೇ! ವಾಟ್....ಮಚಾ....ಮಗಾ.... ಫುಲ್ ಮಿಂಚಿಂಗಾ....” ಇತರೆ....ಆಮೇಲೆ ಈ ಕೆ ರ್ ಮಾರ್ಕೆಟು, ಸಾರಕ್ಕಿ, ಮಲ್ಲೇಶ್ವರಂ ಮಾರ್ಕೆಟುಗಳಿಗೆ ಹೋದಾಗ ನಮ್ಮ ಜನ "ಬದ್ನೇಕಾಯಿ ಎಸ್ಟ್ರಿ ಕೆಜಿ....ಈರುಳ್ಳಿ ಹೆಂಗೆ ಹೋಡ್ತಿದ್ದೀಯ, ಸೊಪ್ಪು ಹೆಂಗೆ.... " ಈ ಥರ ಚೌಕಾಸಿ ಮಾಡುವ ದೃಶ್ಯ ಸರ್ವೇಸಾಮಾನ್ಯ.

ಅದೇನೇ ಇರಲಿ....ಅತ್ತ ಬ್ರಿಗೇಡ್-ಎಂಜಿ ರೋಡಿನಕಡೆಗೆ ಸೂಪರ್ ಫಾಸ್ಟ್ ಆಗಿ ಸಾಗುತ್ತಿರುವ, ಅನೇಕ ಐಟಿ-ಬಿಟಿ ಪಾರ್ಕುಗಳ ಮಧ್ಯೆಯೂ ಕೂಡ ನಮ್ಮ ಲಾಲ್ ಬಾಗು...ಕಬ್ಬನ್ ಪಾರ್ಕುಗಳ ಸೊಬಗು ಇನ್ನು ಅಳಿಸಿಲ್ಲ. ಎಷ್ಟೇ ಬಗೆ ಬಗೆಯ ತಿನಿಸುಗಳ ದೇಶದ ವಿವಿದ ಭಾಗಗಳ ರೆಸ್ಟೋರೆಂಟುಗಳು ಬಂದರು , ನಮ್ಮ ಬೆಂಗಳೂರಿನ ಮೂಲ ಸೊಗಡನ್ನು, ಬೆಂಗಳೂರಿನೊಂದಿಗೆ ಬೆಸೆದುಕೊಂಡಿರುವ ಆ ಭಾವನಾತ್ಮಕ ಸಂಬಂಧವನ್ನು ಉಳಿಸಲು ಬಸವನಗುಡಿಯ ದೋಸೆ....ಮಲ್ಲೇಶ್ವರದ ಇಡ್ಲಿಯ ರುಚಿಯೇ ಸಾಕು....

ಎಷ್ಟಾದ್ರೂ ನಮ್ಮ ಬೆಂಗಳೂರಿನ ವಿಷಯ ಅಂದಮೇಲೆ ಹೆಮ್ಮೆಯ ವಿಷಯಾನೇ ಅಲ್ಲ್ವಾ.....

ಮುಂದಿನ ಸಲ ರೇಡಿಯೋ ಸಿಟಿ FM-91.1 ಅವರ ಈ ಟೈಟಲ್ ಸಾಂಗನ್ನು ಕೇಳಿದ್ರೆ...... ನಾನು ಮೇಲೆ ತಿಳಿಸಿದ ಈ ಹಾಡಿನಲ್ಲಿ ಬರುವ ಸಂಭಾಷಣೆಗಳನ್ನು, ಸಂಧರ್ಬಗಳನ್ನು ನೆನಪಿಸಿಕೊಂಡು ನೀವು ಖುಷಿ ಪಡಿ.....

ಕೊನೆಯದಾಗಿ.....ರೇಡಿಯೋ ಸಿಟಿ....ನಮ್ಮ ಹೆಮ್ಮೆಯ ಬೆಂಗಳೂರು......ನಮ್ಮ ಹೆಮ್ಮೆಯ FM-91.1 ರೇಡಿಯೋ.....💓😊