ಮಂಗಳವಾರ, ಜನವರಿ 3, 2023

ಹೋಗಿ ಬಾ ಬೆಳಕೇ!!!!

ಬದುಕುವುದಕ್ಕೂ ಮತ್ತು ಬಾಳುವುದಕ್ಕೂ ಬಹಕ ವ್ಯತ್ಯಾಸ ಇದೆ. ಈ ಶತಮಾನದಲ್ಲಿ ಅತ್ಯಂತ ಉಚ್ಚ ಮೌಲ್ಯಗಳನ್ನು ಅಳವಡಿಸಿಕೊಂಡು ಒಬ್ಬ ಮಾದರಿ ಸಂತಾನಾಗಿ, ಯಾವುದೇ ಆಸೆ ಆಕಾಂಕ್ಷೆಗಳಿಲ್ಲದೆ ಸರಳ ಸಾಮಾನ್ಯ ಜೀವನವನ್ನು ನಡೆಸಿದ ವ್ಯಕ್ತಿ ಎಂದರೆ ನಮ್ಮ ವಿಜಯಪುರದಲ್ಲಿರುವ ಜ್ಞಾನಯೋಗಾಶ್ರಮದ ದಿವಂಗತ ಶ್ರೀ ಸಿದ್ದೇಶ್ವರ ಶ್ರೀಗಳು. ಅವರು ಕೇವಲ ಬದುಕಲಿಲ್ಲ, ಬಾಳಿದರು.....

ನಮ್ಮ ಕರ್ನಾಟಕದ, ಇನ್ನು ಹೆಚ್ಚಾಗಿ ಉತ್ತರಕರ್ನಾಟಕದ ಭಾಗದ ಜನರಿಗೆ ಅತೀ ಹೆಚ್ಚು ಪರಿಚಯದ ಪೂಜ್ಯರು. ಇವರು ಜನರಿಗೆ ಹತ್ತಿರವಾಗಿದ್ದು ಅವರ ಮನಸಿಗೆ ಹಿತನೀಡುವ ಪ್ರವಚನದ ಮಾತುಗಳಿಂದ. ಯಾವುದೇ ಒಂದು ಸಮಾರಂಭಕ್ಕೆ ಸಿದ್ದೇಶ್ವರ ಶ್ರೀಗಳು ಆವ್ಹಾನಿತರಿದ್ದಾರೆ ಎಂಬ ಸುದ್ದಿ ಕೇಳಿದರೆ ಸಾಕು, ಜನ ಹಂಗೆ ಕಿಕ್ಕಿರಿದು ಸೇರುವುದು ವಾಡಿಕೆ. 

ನಾನು ಶಾಲಾ ದಿನಗಳಿಂದ ಅನೇಕ ಬಾರಿ ಅವರ ಪ್ರವಚನ ಮಾತುಗಳನ್ನು ಕೇಳಿದ್ದುಂಟು. ಅಂತಹ ಒಂದು ಘಟನೆಯ ಅನುಭವ ಹೇಳಲೇಬೇಕು. ಅದು ನಾನು ಜಮಖಂಡಿಯ ಬಿ. ಎಲ್. ಡಿ. ಕಾಲೇಜಿನಲ್ಲಿ ಬಿಎಸ್ಸಿ ಪದವಿಯ ಎರಡನೇ ವರ್ಷದಲ್ಲಿ ಓದುತಿದ್ದ ಸಮಯ. ಆಗ ಶ್ರಾವಣ ಮಾಸ, ನಮ್ಮ ಉತ್ತರಕರ್ನಾಟಕದಲ್ಲಿ ಶ್ರಾವಣ ಮಾಸದಲ್ಲಿ ಪೂಜ್ಯರನ್ನು ಕರೆಸಿ ತಿಂಗಳು ಪೂರ್ತಿ ಪ್ರವಚನ ಹೇಳಿಸಿವುದು ಪದ್ಧತಿ. ನಮ್ಮ ಭಾಗದಲ್ಲಿ ಅದಕ್ಕೆ ಪುರಾಣ ಕಥೆ ಹೇಳಿಸುವುದು ಅನ್ನುವುದು. ಆ ವರ್ಷದ ಶ್ರಾವಣ ಮಾಸದಲ್ಲಿ ಜಮಖಂಡಿಯ ಪಿ ಬಿ ಹೈಸ್ಕೂಲಿನ ವಿಶಾಲವಾದ ಮೈದಾನದಲ್ಲಿ ಶ್ರೀ ಸಿದ್ದೇಶ್ವರ ಶ್ರೀಗಳ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂಬ ಸುದ್ದಿ ಕೇಳಿಪಟ್ಟೆವು. ಕಾಲೇಜಿನ ಒಂದೆರಡು ಸಮಾರಂಭಗಳಲ್ಲಿ ಕೇವಲ ಅರ್ಧಗಂಟೆ ಅವರ ಭಾಷಣ ಕೇಳಿ ಪುಳಕಿತರಾದ ನಮಗೆ ಪೂರ್ತಿ ಒಂದು ತಿಂಗಳು ಅವರ ಮಾತುಗಳನ್ನು ಕೇಳುವ ಭಾಗ್ಯ ಸಿಗುತ್ತಿರುವಾಗ ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕು ಎಂದು, ನಾನು ಮತ್ತು ಸ್ನೇಹಿತರು ಹಾಗು ಸಹಪಾಠಿಗಳಾದ ಸಿದ್ದು ಬಟಕುರ್ಕಿ, ಶಿವಾನಂದ ಮತ್ತು ನಿಂಗಪ್ಪ ತಳವಾರ (ಮೂವರು ಈಗ ಸರಕಾರಿ ಹೈಸ್ಕೂಲ್ ಮತ್ತು ಪ್ರಥಮ ಧರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ), ಅದೇನೇ ಆಗಲಿ ಪ್ರತಿದಿನ ತಪ್ಪದೆ ಸಂಜೆ ಒಂದು ಗಂಟೆ ಪ್ರವಚನ ಕೇಳಲು ಹೋಗುದು ಎಂದು ನಿರ್ಧರಿಸಿದೆವು. ಪ್ರತಿದಿನ ಪ್ರಯೋಗದ ಕ್ಲಾಸುಗಳು ಮುಗಿದಮೇಲೆ ಹಾಸ್ಟೆಲಿಗೆ ಹೋಗದೆ, ನಗರದ ಎತ್ತರದ ಭಾಗದಲ್ಲಿರುವ ಕಾಲೇಜಿನಿಂದ ನಡೆಯುತ್ತಲೇ ಪ್ರವಚನ ನಡೆಯುವ ಮೈದಾನಕ್ಕೆ ಹೋಗುತಿದ್ದೆವು. ಸಂಜೆ ಆರುಗಂಟೆ ಗಂಟೆಯಿಂದ ಏಳುಗಂಟೆಯವರೆಗೆ ಪ್ರವಚನ ನಡೆಯುತ್ತಿತ್ತು. ಶ್ರೀಗಳ ಒಂದು ವಿಶೇಷವೆಂದರೆ ಅವರು ಪ್ರವಚನ ಶುರು ಮಾಡುವುದು ಅತೀ ಮೆಲುಧ್ವನಿಯಲ್ಲಿ, ಶಾಂತಚಿತ್ತದಿಂದ ಪ್ರಾರಂಭಿಸುತ್ತಿತ್ತುದು. ಮೊದಲ ಸಲ ಕೇಳಲು ಬಂದವರಿಗೆ, ಜನ ಇವರ ಬಗ್ಗೆ ಎಷ್ಟೊಂದು ಹೇಳ್ತಾರೆ ಇವರ ನೋಡಿದ್ರೆ ಇಷ್ಟೊಂದು ಮಂದ ಧ್ವನಿಯಲ್ಲಿ ಮಾತಾಡುತ್ತಾರೆ, ಮಾತೆ ಕೇಳುತಿಲ್ಲ ಅನ್ನಬಹುದು. ಆದರೆ ಅದೇ ಅವರ ಶೈಲಿ. ಮೊದಮೊದಲಿಗೆ ಮಂದ ಧ್ವನಿಯಲ್ಲಿ ಮಾತು ಪ್ರಾರಂಭಿಸಿದರು ನಂತರ ಎತ್ತರದ ಧ್ವನಿಯಲ್ಲಿ ಎಲ್ಲರಿಗು ನಿಚ್ಚಳವಾಗಿ ಕೇಳುವಂತೆ ಅವರ ಮಾತುಗಳು ಎಲ್ಲಕಡೆ ಪಸರಿಸುತ್ತಿದ್ದವು. ಅವರ ಪ್ರವಚನ ಎಂದರೆ ಅದೊಂದು ಎನ್ಸೈಕ್ಲೋಪೀಡಿಯಾ ಇದ್ದಂತೆ. ಪ್ರಪಂಚದ ಎಲ್ಲ ವಿಷಯಗಳನ್ನು ತಮ್ಮ ಭಾಷಣದಲ್ಲಿ ಅಳವಡಿಸಿಕೊಂಡು, ಚಿಕ್ಕವರಿಂದ ಹಿರಿಯರವರೆಗೆ ಸರಾಗವಾಗಿ ಅರ್ಥವಾಗುವಂತೆ ಹೇಳುತ್ತಿದ್ದರು. ಅವರು ವಿಜ್ಞಾನ ಪಧವೀಧರರು ಆಗಿದ್ದು ನಂತರ ಅಧ್ಯಾತ್ಮ ಮತ್ತು ತತ್ವಜ್ಞಾನದ ಅಪಾರ ಜ್ಞಾನಪಡೆದುಕೊಂಡಿದ್ದರೆಂದು ನಂತರ ಕೇಳಿಪಟ್ಟೆ. ಅದಕ್ಕೆ ಅವರ ಮಾತುಗಳಲ್ಲಿ ವಿಜ್ಞಾನ, ತಂತ್ರಜ್ಞಾನದ ನಿದರ್ಶನಗಳು ಹೆಚ್ಚಾಗಿ ಹೇಳಬರುವುದುಂಟು. ನಮ್ಮ ನಿಮ್ಮಲ್ಲರ ಬದುಕಿನ ಚಿತ್ರಣವನ್ನು ನಮ್ಮ ಮುಂದಿಟ್ಟು ಎಲ್ಲೆಲ್ಲಿ ನಾವುಗಳು ತಪ್ಪೆಸಗುತ್ತೇವೆ, ಯಾವುದನ್ನೂ ಮಾಡಬಾರದು, ಯಾವುದು ಅನವಶ್ಯಕ, ಭಗವಂತನಿಗೆ ಪ್ರೀಯವಾದ ಅಧ್ಯಾತ್ಮದ ದಾರಿಯವುದು, ಬದುಕಿನ ನಿಜವಾದ ಸತ್ಯವೆಂದರೇನು, ಅದನ್ನು ಅರ್ಥಮಾಡಿಕೊಳ್ಳುವು ಹೇಗೆ...... ಈ ರೀತಿಯ ಅತೀ ಉನ್ನತವಾದ ವಿಚಾರಗಳು ಅವರ ಮಾತುಗಳಲ್ಲಿ ಕೇಳಸಿಗುತ್ತಿದ್ದವು. ಅವರ ಮಾತುಗಳೆಂದರೆ ಕೇಳುಗರ ಕೇವಿಯಮೇಲೆ ಅಪ್ಪಳಿಸುವ ಅಮೃತವನಿಗಳೇ ಎಂದು ಹೇಳಬಹುದು. ಆ ಒಂದು ತಿಂಗಳ ನಮ್ಮ ಅನುಭವ ಎಂದು ಮರೆಯಲಾಗದ ಅಮೂಲ್ಯವಾದ ಜೀವನ ಪಾಠ ಎಂದು ಹೇಳಿದರೆ ತಪ್ಪಾಗಲಾರದು. ಪ್ರವಚನ ಕೇಳಿ ಮುಗಿಸಿ ಹಾಸ್ಟೆಲಿನತ್ತ ನಡೆಯುತ್ತಾ ಬರುವಾಗ, ಅಲ್ಲಿ ಕೇಳಿದ ವಿಚಾರಗಳ ಮೇಲೆ ನಾವು ಸ್ನೇಹಿತರು ಚರ್ಚೆಮಾಡುತ್ತ, ಬಿನ್ನಾಬಿಪ್ರಾಯವಾದಾಗ ಜಗಳವಾಡುತ್ತ ಬರುತ್ತಿದ್ದ ಆ ಹಳೆಯ ನೆನಪುಗಳು ಇಂದಿಗೂ ಹೃದಯದಲದಲ್ಲಿ ಅವಿತು ಕುಳಿತಿವೆ......
 
ಶ್ರೀಗಳು ಎಂದಿಗು ಆಡಂಬರದ ಬದುಕು ಬದುಕಲಿಲ್ಲ, ಅವರೇ ಕೈ ಇಂದ ಹೊಲೆದ ಬಿಳಿಯ ಅಂಗಿ, ಸರಳವಾದ ಆಹಾರ, ಮತ್ತು ಜೀವನ ಶೈಲಿ ಈ ಲೋಕಕ್ಕೆ ಮಾದರಿ.......
ನಿನ್ನೆ ವೈಕುಂಠ ಏಕಾದಶಿಯ ಪುಣ್ಯದಿನದಂದು ಅಪಾರ ಭಕ್ತವೃಂದವನ್ನು ಬಿಟ್ಟು ಅವರು ಇಹಲೋಕ ತ್ಯಜಿಸಿದ್ದಾರೆ. ಮಹಾತ್ಮರಿಗೆ ಮರಣವೇ ಮಹಾನವಮಿ ಎಂದು ಶರಣು ಹೇಳುತ್ತಾರೆ. ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಲಿ.....ಓಂ ಶಾಂತಿ!!!

ನಿನ್ನೆಯಿಂದ ಅವರ ಅಂತಿಮ ದರ್ಶನಕ್ಕ ಎಲ್ಲ ಮೂಲಗಳಿಂದ ಬರ್ತಾಇರುವ ಭಕ್ತಸಮೂಹದ ಪ್ರವಾಹವನ್ನು ನೋಡುತಿದ್ದರೆ ಕೆಳಗಿನ ಜಾನಪದ ಸಾಲುಗಳು ನೆನಪಿಗೆ ಬರುತ್ತವೆ.....
 
ಲೋಕದಾಗಿರುತನಕ ಬೇಕಾಗಿ ಇರಬೇಕು
ಸಾಕಾಗಿ ಶಿವನ ಸದರಿಗೆ!
ಸಾಕಾಗಿ ಶಿವನ ಸದರಿಗೆ ಹೋಗಾಗ।।
ಎಲ್ಲಾರು ಬರುತ್ತಾರೆ ಕಳಿಸಾಕೆ.

(ಈ ಲೇಖನ ಶ್ರೀಗಳ ಪಾದಾರವಿಂದಗಳಿಗೆ ಅರ್ಪಣೆ)