ಶುಕ್ರವಾರ, ಫೆಬ್ರವರಿ 21, 2020

ಬಿಹಾರಿ ಆಲೂ ಗೋಬಿ: ನನ್ನ ಬ್ಯಾಚುಲರ್ ಲೈಫಿನ ಒಡನಾಡಿ.

ವಿದ್ಯಾರ್ಥಿ ಜೀವನ ಅಂತ ಬಂದಾಗ....... ಮನೇಲೆ ಇದ್ದ್ಕೊಂಡು ಶಾಲೆ ಕಾಲೇಜಿಗೆ ಹೋಗೋ ಸೌಲಭ್ಯ ಇದ್ದಾಗ ಅಮ್ಮ ಮಾಡಿದ ಮನೆ ಊಟ ಮಾಡ್ಕೊಂಡು ಆರಾಮಾಗಿ ಜೀವನ ನಡೀತಿರತ್ತೆ. ಆದರೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಥವಾ ಬೇಕಾದ ಕೋರ್ಸು ಊರಲ್ಲಿಲ್ಲದಿದ್ರೆ, ಮನೆ ಬಿಡ್ಲೇಬೇಕು. ಅವಾಗ ನೋಡಿ ಅಸಲಿ ಸಮಸ್ಸೆ ಶುರು ಆಗೋದು......ಅದೇ ರೀ  ಹೊಟ್ಟೆಪಾಡು......ನಮ್ಮ್ ದೇಶದಲ್ಲಿ  ಇರೋದಕ್ಕೆ ಯಾವುದೇ ತೊಂದ್ರೆ ಆಗಲ್ಲ ಯಾಕಂದ್ರೆ ಇಲ್ಲಿ ಪ್ರತಿ ಮೂಲೆಗೊಂದು ಮೆಸ್ಸುಗಳಿದ್ದವೇ, ನಮ್ಮ ಉತ್ತರಕರ್ನಾಟಕದಲ್ಲಿ ಬಂದ್ರೆ ಇದೆ ಮೇಸ್ಸ್ಗಳಿಗೆ ಖಾನಾವಳಿ ಅಂತೀವಿ. ಅಯ್ಯೋ ನಂಗೆ ಹೊರಗಡೆ ಊಟ ಆಗಲ್ಲರಿ, ಉದರ ಪೀಡಾ ಸಮಸ್ಸೆ ಶುರು ಆಗ್ಬಿಡತ್ತೆ ಅನ್ನೋರಿಗೆ, ಮನೆ ಊಟವನ್ನ ಮನೆ ಬಾಗಿಲಿಗೆ ಡೆಲಿವೆರಿ ಮಾಡವ್ರು ಇದ್ದಾರೆ.....ಆದರೆ, ಅಕಸ್ಮಾತ್ ಏನಾದ್ರು ಕಲೀಲಿಕ್ಕೆ ಹೊರದೇಶಕ್ಕೆ ಹೋದ್ರಿ, ಆಮೇಲೆ ನೀವು ಅಹಿಂಸಾವಾದಿ ಸಸ್ಯಾಹಾರಿಗಳಾಗಿದ್ದರೆ ನಿಮ್ಮನ್ನ ಆ ದೇವ್ರೇ ಕಾಪಾಡಬೇಕು....ಆಗ ನಿಮ್ಮನ್ನ ಕಾಪಾಡ್ಕೊಳ್ಳೋಕೆ ಒಂದೇ ಒಂದು ದಾರಿ ಅಂದ್ರೆ ಅಡುಗೆ ಮಾಡಕ್ಕೆ ಗೊತ್ತಿರಲೇಬೇಕು, ಅದಕ್ಕಾಗಿ extra added skill ಅಂತ ನೀವು ನಳಮಹಾರಾಜರು ಆಗ್ಲೇಬೇಕು ಕಣ್ಣ್ರೀ ....

ವಿದೇಶಕ್ಕೆ ಹೆಚ್ಚಿಗೆ ಓದ್ಕೊಂಡು ಬರೋಣ ಅಂತ ಹೋದ ನನಗೂ ಕೂಡ ಇದೆ ಸಮಸ್ಸ್ಯೆ ಎದುರಾಗಿದ್ದು. ನಮ್ಮ್ ದೇಶದಲ್ಲಿ ಇರುವಾಗ ಮೆಸ್ಸು/ಖಾನಾವಳಿಗಳನ್ನ ನಂಬಿಕೊಂಡು, ಚೆನ್ನಾಗಿ ಒಂದು ಕಪ್ ಟೀ ಕೂಡ ಮಾಡೋಕೆ ಗೊತ್ತಿರದ ಆಸಾಮಿ ನಾನು, ಅಂತಹದರಲ್ಲಿ ಜಪಾನ್ ದೇಶಕ್ಕೆ ಹೋಗ್ತಾಯಿದ್ದೀಯ ಅಲ್ಲಿ ಹೋದ್ಮೇಲೆ ಅದ್ಹೇಗೋ ನಿನ್ನ ಗತಿ ಅಂದ್ಲು ಅಮ್ಮ..... ಪರಿಸ್ಥಿತಿ ಮನುಷ್ಯನಿಗೆ ಎಲ್ಲ ಕಲ್ಸತ್ತೆ ಬಿಡಮ್ಮ ಯಾಕ ಚಿಂತೆ ಮಾಡ್ತಿಯಾ ಅಂದೇ.... ಅಮ್ಮನಿಗೆ ಹೇಳಿದಂಗೆ, ಅಲ್ಲಿ ಹೋದ್ಮೇಲೆ ಹಂಗೋ ಹಿಂಗೋ ವಿವಿಧ ದೇಶಗಳ ಮ್ಯಾಪ್ ಹೋಲೊತರ ಚಪಾತಿ ಮಾಡೋಕೆ ಕಲ್ತೆ.....ಸ್ವಲ್ಪ ಇಂಟರ್ನೆಟ್ನಲ್ಲಿ ಓದ್ಕೊಂಡು ತರಕಾರಿ, ಸಾಂಬಾರು ಮಾಡೋದು ಕಲ್ತು, ಅಷ್ಟರಲ್ಲೇ ಬದುಕಿನ ಜಟಕಾಬಂಡಿ ಓಡಿಸ್ತಾಯಿದ್ದೆ......

ಜಪಾನಿನಲ್ಲಿ ನಾನಿದ್ದ ಊರಿನಲ್ಲಿ ನನ್ನ ತರಹ ಇನ್ನು 3-4 ಜನ ಬ್ರಹ್ಮಚಾರಿಗಳಿದ್ರು......ಹೆಚ್ಚು ಕಡಿಮೆ ಎಲ್ಲರು ಉತ್ತರಭಾರತದ ಯುಪಿ ಮತ್ತು ಬಿಹಾರ್ ರಾಜ್ಯಗಳಿಂದ ಬಂದ ಹಿಂದಿ ಪಂಡಿತರು. ಅದಕೆ ಇರಬಹುದು, ಅವರೊಂದಿಗಿನ ಒಡನಾಟ ನನಗೆ ಹಿಂದಿ ಭಾಷಾ ಪ್ರಾವಿಣ್ಯತೆಯನ್ನ ಸ್ವಲ್ಪ ಜಾಸ್ತಿನೇ ಕೊಟ್ಟಿತು ಅನ್ಸತ್ತೆ. ಬರ್ತಾ ಬರ್ತಾ ಅವರಿಂದ ಉತ್ತರಭಾರತದ ಎಷ್ಟೋ ವಿಷಯಗಳನ್ನ ಅರ್ಥ ಮಾಡ್ಕೊಂಡೆ ಮತ್ತು ನಮ್ಮ ಕರುನಾಡಿನ ಮಣ್ಣಿನ ಸುವಾಸನೆಯನ್ನ ಅವರಿಗೂ ಉಣಬಡಿಸಿದೆ......ಭಾಷೆ, ಸಂಸ್ಕೃತಿ, ಜೀವನವಿಧಾನಗಳ ಪರಸ್ಪರ ವಿನಿಮಯ ಮಾಡ್ತಾ ಮಾಡ್ತಾ ನಾನು ಅವರಿಂದ ಕಲಿತದ್ದು "ಬಿಹಾರಿ ಆಲೂ ಗೋಬಿ" ಎಂಬ ವಿಶಿಷ್ಟ ಖಾದ್ಯ......
ಈಗಲೂ ಯಾವಾಗ್ಲಾದ್ರೂ ಕಿಚನ್ನಿನಲ್ಲಿ "ಬಿಹಾರಿ ಆಲೂ ಗೋಬಿ" ಮಾಡುವ ಸಂದರ್ಭ ಬಂದಾಗ ನನಗೆ ಇದನ್ನು ಹೇಳಿಕೊಟ್ಟ Dr. ಅನಿಲ್ ಥಾಕುರ್ ನೆನಪಿಗೆ ಬಂದುಬಿಡ್ತಾನೆ..... ಈಗ ಅವನು ಕೂಡ ಸ್ವದೇಶಕ್ಕೆ ಮರಳಿ, ಜಮ್ಮು ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಫಿಸಿಕ್ಸ್ ಪಾಠಮಾಡ್ತನೆ..... ಆದರೆ ಹೆಂಡ್ತಿ ಮಕ್ಳು ಅಂತ ಆದ್ಮೇಲೆ ಅವನು ಈ  "ಬಿಹಾರಿ ಆಲೂ ಗೋಬಿ" ಮಾಡ್ತಾನೋ ಇಲ್ಲೋ ಗೊತ್ತಿಲ್ಲ ಆದ್ರೆ ನಾನು ಮಾತ್ರ ಇನ್ನು ಬಿಟ್ಟಿಲ್ಲಾ.....

ಯಾಕೋ ಗೊತ್ತಿಲ್ಲ, ನಮ್ಮ ರಸಾಯನ ಶಾಸ್ತ್ರದ ಭಾಷೆಯಂತೆ, ಈ  "ಬಿಹಾರಿ ಆಲೂ ಗೋಬಿ" experimental procedure ಅನ್ನು ಎಲ್ಲರಜೊತೆಗೆ ಹಂಚ್ಕೋಬೇಕೆನಿಸಿ ಈ ಬ್ಲಾಗ್ ಅಂಕಣ ಬರೀತಾಇದ್ದಿನಿ.

ಬಿಹಾರಿ ಆಲೂ ಗೋಬಿ ಬೇಕಾಗುವ ಸಾಮಗ್ರಿಗಳು:

  1. ಮಧ್ಯಮ ಗಾತ್ರದ 4 ಆಲೂಗಡ್ಡೆ.  
  2. ಅರ್ಧ ಹೂಕೋಸು.  
  3. ಮಧ್ಯಮ ಗಾತ್ರದ ಎರಡು ಈರುಳ್ಳಿ.  
  4. ಮಧ್ಯಮ ಗಾತ್ರದ ಎರಡು ಟೊಮೇಟೊ (ನಾಟಿ ಇದ್ರೆ ಇನ್ನು ಚೆನ್ನ). 
  5. ಹಸಿ ಶುಂಠಿ-ಬೆಳ್ಳುಳ್ಳಿ ಪೇಸ್ಟು (ಒಂದು ಚಮಚ). 
  6. ಒಳ್ಳೆ ಗರಂ ಮಸಾಲಾ ಪುಡಿ (ಎರಡು ಚಮಚ). 
  7. ಅರಿಸಿನ ಪುಡಿ ಒಂದು ಚಮಚ.  
  8. ಕೆಂಪು ಖಾರದ ಪುಡಿ ಎರಡು ಚಮಚ (ಚಾಯ್ಸ್ ನಿಮ್ಮದು). 
  9. ಅಡುಗೆ ಎಣ್ಣೆ ಐದು ಚಮಚ (ನಾನು ಇನ್ನು ಸ್ವಲ್ಪ ಜಾಸ್ತಿನೇ ಹಾಕ್ತಿನಿ).
  10. ಕೊತಂಬರಿ ಸೊಪ್ಪು, ಗಾರ್ನಿಸಿಂಗ್ ಮಾಡಕ್ಕೆ. 
  11. ಉಪ್ಪು, ರುಚಿಗೆ ತಕ್ಕಂತೆ. 

ಬಿಹಾರಿ ಆಲೂ ಗೋಬಿ ಮಾಡುವ ವಿಧಾನ: 

ಮಾಡುವ ವಿಧಾನ ಬಹಳ ಸಿಂಪಲ್ ಕಣ್ಣ್ರೀ.....
ಮೊದಲು ಸಿಪ್ಪೆ ಸುಲಿದ ಆಲೂಗಡ್ಡೆ ಮತ್ತು ಹೂಕೋಸು ಎರಡನ್ನು ತೊಳೆದು ಸ್ವಚ್ಛ ಭಾರತೀಯರಾಗಿ, ನಂತರ ಸಣ್ಣ ಗಾತ್ರದಲ್ಲಿ ಕಟ್ ಮಾಡ್ಕೊಂಡು, ಒಂದು ಕಡಾಯಿಯಲ್ಲಿ ಸ್ವಲ್ಪ ಎಣ್ಣೆಯಲ್ಲಿ ಚೆನ್ನಾಗಿ ಫ್ರೈ ಮಾಡಿ ಪಕ್ಕಕ್ಕಿಡಿ. ಅದೇರೀತಿ ಈರುಳ್ಳಿ (ಚಿಂತೆಬಿಡಿ, ಈಗ 25/- ಗೆ ಕೆಜಿ ಸಿಗ್ತಿದೆ) ಮತ್ತು ಟೊಮೇಟೊ ಕೂಡ ಸಣ್ಣದಾಗಿ ಕಟ್ ಮಾಡ್ಕೊಳ್ಳಿ......ಇಲ್ಲಿಗೆ ಅರ್ಧ ಕೆಲಸ ಮುಗಿದಂತೆ....

ಆಮೇಲೆ, ಅದೇ ಕಡಾಯಿಗೆ ಎರಡು ಚಮಚ ಇನ್ನು ಹಾಕಿ, ಅದಕ್ಕೆ ಕಟ್ಮಾಡಿದ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟು ಎರಡನ್ನು ಚೆನ್ನಾಗಿ ಫ್ರೈ ಮಾಡಿ. ಬೇಕಿದ್ರೆ ಅರ್ಧ ಚಮಚ ಉಪ್ಪು ಹಾಕಿ.....ಈರುಳ್ಳಿ ಬೇಗನೆ ಬೆಂದು ಅದೇನೋ ಗೋಲ್ಡನ್ ಬ್ರೌನ್ ಆಗತ್ತಂತೆ. ಈಗ ಇದಕ್ಕೆ ಆಗಲೇ ಫ್ರೈ ಮಾಡಿದ ಆಲೂಗಡ್ಡೆ ಮತ್ತು ಹೂಕೋಸಿನ ತುಂಡುಗಳನ್ನ ಹಾಕಿ, ಇನ್ನು ಐದು ನಿಮಿಷ ಫ್ರೈ ಮಾಡಿ......ಆಗ ನಿಧಾನಕ್ಕೆ ನಿಮ್ಮ ಮೂಗಿಗೆ ಘಮ ಘಮ ವಾಸನೆ ಹೊಡಿಲಿಕ್ಕೆ ಶುರು ಮಾಡತ್ತೆ. ನಂತರ ಕಡಾಯಿಗೆ ಗರಂ ಮಸಾಲಾ ಪುಡಿ, ಅರಿಶಿನ ಪುಡಿ ಮತ್ತು ಖಾರದ ಪುಡಿ ಇವನ್ನೆಲ್ಲ ಹಾಕಿ ಚೆನ್ನಾಗಿ ಮಿಶ್ರಣ ಮಾಡ್ಕೊಳ್ಳಿ.......ಸ್ವಲ್ಪ ಕೈ ನೋವು ಅನಿಸಿದ್ರು, ಎದೆ ಗುಂದದೆ ಇನ್ನು ಐದು ನಿಮಿಷ ಹಂಗೆ ಫ್ರೈ ಮಾಡಿ....ಬೇಕಿದ್ರೆ ಮಧ್ಯ ಮಧ್ಯ ವಾಟ್ಸಪ್ಪ್, ಫೇಸ್ಬುಕ್ ಮೆಸ್ಸೆಜ್ಸ್ ನೋಡ್ಕೊಂಡು ಬರಬಹುದು........ ಆಹಾ! ಮಸಾಲೆ ವಾಸನೆ ಗಾಳಿಯಲ್ಲಿ ಇನ್ನು ಜೋರಾಗಿ ಹರಿಯುತ್ತ ಹರಿಯುತ್ತ ಪಕ್ಕದ ಮನೆಯವರ ಮೂಗಿಗೇನಾದ್ರು ಬಡಿದ್ರೆ, ಏನ್ರಿ ನಿಮ್ಮ ಮನೇಲಿ ಏನೋ ಸ್ಪೆಷಲ್ ಡಿಶ್ ಮಾಡಿದ್ರ ಹೆಂಗೆ.... ವಾಸನೆ ಜೋರಾಗಿತ್ತು ಅಂತ ಕೇಳಬಹುದು. 
ಅಮೇಲಿನ್ನೇನು,  ಕಡಾಯಿಯಲ್ಲಿ ಚೆನ್ನಾಗಿ ಫ್ರೈ  ಮಾಡಿದ  ಈ ಮಿಶ್ರಣಕ್ಕೆ ಎರಡು ಗ್ಲಾಸು ನೀರನ್ನ ಹಂಗೆ ಹುಯಿದು ರುಚಿಗೆ ತಕ್ಕಸ್ಟು ಉಪ್ಪು ಹಾಕಿ. ಕೊನೆಯದಾಗಿ ಅದಕ್ಕೆ ಸಣ್ಣದಾಗಿ ಕಟಮಾಡಿದ ಕೊತಂಬರಿ ಸೊಪ್ಪಿನಿಂದ ಗಾರ್ನಿಶ್ ಮಾಡಿ, ಹತ್ತು ನಿಮಿಷ ಮಧ್ಯಮ ಫ್ಲೇಮ್ ನಲ್ಲಿ ಚೆನ್ನಾಗಿ ಕುದಿಸಿಬಿಡಿ ...... ಆಯಿತು, ಕಡಿಮೆ ಅಂದ್ರು ನಾಲ್ಕು ಜನಕ್ಕೆ ಬಡಿಸೋವಷ್ಟು "ಬಿಹಾರಿ ಆಲೂ ಗೋಬಿ" ರೆಡಿ ಅಯೀತು. ಈಗ ಇದನ್ನ ನೀವು ಚಪಾತಿ ಜೊತೆ ತಿಂತಿರೋ, ತಂದೂರಿ ರೋಟಿ ಜೊತೆ ತಿಂತಿರೋ ಅಥವಾ ವೈಟ್ ರೈಸ್, ಜೀರಾ ರೈಸ್ ಜೊತೆ ತಿಂತಿರೋ ಅದು ನಿಮಗೆ ಬಿಟ್ಟ ವಿಷಯ..... ಅಕಸ್ಮಾತ್ ನೀವೇನಾದ್ರು ಮೊಟ್ಟೆ ಪ್ರೀಯರಾಗಿದ್ದರೆ, ಕುದಿಸಿ ಫ್ರೈ ಮಾಡಿದ ಮೊಟ್ಟೆಗಳನ್ನ ಇದಕ್ಕೆ ಹಾಕಿ "ಬಿಹಾರಿ ಅಂಡಾ ಆಲೂ ಗೋಬಿ" ಅಂತ ಸ್ವಲ್ಪ ಉದ್ದನೆಯ ಹೆಸರಿನಿಂದ ಕರೆದು ತಿನ್ನಬಹುದು........

ಈ ಒಂದು ಖಾದ್ಯ ನನ್ನ ಬ್ಯಾಚುಲರ್ ಲೈಫ್ ನಲ್ಲಿ ಎಷ್ಟೊಂದು ಒಡನಾಡಿ ಆಯೀತೆಂದ್ರೆ, ವಾರದಲ್ಲಿ ಮೂರುಬಾರಿ ಆದರು ನಾನು ಇದನ್ನೇ ಮಾಡಿ ತಿಂತಾಯಿದ್ದೆ. ಕೆಲವೊಂದು ಸಲ ಈ ಕರೀಗೆ ಹೆಚ್ಚು ನೀರು ಹಾಕಿ ಅದಕ್ಕೆ ಒಂದು ಗ್ಲಾಸ್ ಅಕ್ಕಿ ಹಾಕಿ ಕುಕ್ಕರ್ ನಲ್ಲಿ ಕುದಿಸಿ ಅದನ್ನೇ ಕಿಚಡಿಯನ್ನಾಗಿ ತಿಂದ್ದಿದ್ದುಂಟು......ಆಮೇಲೆ ನಾನು ಅಮೆರಿಕಾಗೆ ಹೋದಮೇಲೆ, ಅಲ್ಲೂ ಕೂಡ ಇದು ನನ್ನ ಜೊತೆ ಬಂದ್ಬಿಡ್ಬೇಕಾ!....ಅಲ್ಲಿನೂ ನನ್ನ ಉದರ ಪಾಲನೆ ಪೋಷಣೆ ಮಾಡಿದ್ದೂ ಇದೆ ಕರಿನೇ....
ನಾನು ಮದುವೆ ಮಾಡ್ಕೊಂಡು, ಸಭ್ಯ ಗ್ರಹಸ್ಥನಾಗಿ ಎರಡನೇಸಲ ಜಪಾನಿಗೆ ಹೋದಾಗ, ನಾನು ನನ್ನ ಹೆಂಡ್ತಿ ಒಂದು ಫುಡ್ ಕಾಂಪಿಟಿಷನ್ ನಲ್ಲಿ ಭಾಗವಹಿಸಿದ್ವಿ, ಆಗ ನನಗೆ ಬಹುಮಾನ ತಂದುಕೊಟ್ಟ ಮಹಾನ್ ಪುಣ್ಯಾತ್ಮ ಕಣ್ಣ್ರೀ ಈ ಬಿಹಾರಿ ಆಲೂ ಗೋಬಿ..... 

ನಾನು ಬ್ಯಾಚುಲರ್ ಆಗಿದ್ದಾಗ, ಮದುವೆ ಅಂತ ಆದ್ಮೇಲೆ ಸುತರಾಂ ಅಡುಗೆಮನೆ ಒಳಗೆ ಕಾಲಿಡಲ್ಲ ಅಂತ ಭೀಷ್ಮ ಪ್ರತಿಜ್ಞೆ...... ಯಾವಜನ್ಮದ ಪುಣ್ಯಾನೂ ಏನೋ ನಮ್ಮ್ ಹೆಂಡ್ರು ಅಡುಗೆ ಪ್ರವೀಣೆ, ಸಾಕ್ಷಾತ್ ಅನ್ನಪೂರ್ಣೇಶ್ವರಿ ಅನ್ನಬಹುದು. ಅದಕೆ ನನ್ನ ಅಡುಗೆ ಮನೆಗೆ ಬರಿಸಿಕೊಡಲ್ಲ. ಆದರು ಒಂದೊಂದ್ಸಲ ಈ ಸಿಟ್ಟು ಎನ್ನುವ ಮಾಯೆ ಅವಳನ್ನ ಅವರಿಸಿಬಿಟ್ಟರೆ, ಇಲ್ಲ ತುಂಬಾ ಟಾಯರ್ಡ್ ಆಗಿದ್ರೆ, ಅವಳಿಗೆ ರೆಸ್ಟ್ ಕೊಡೋಕೆ ನಾನು ನಳಪಾಕನಾಗಿ ಇದನ್ನ ಕುಕ್ ಮಾಡಿ ತಿನ್ಬಡಿಸಿ ಹಂಗೆ ಇಂಪ್ರೆಸ್ ಮಾಡಿಬಿಡ್ತೀನಿ...😎......ಅವಳಿಗೂ ಸ್ವಲ್ಪ ಚೇಂಜ್ ಕೂಡ ಅನ್ಸತ್ತಲ್ಲವಾ.....
ಗಂಡಂದಿರನ್ನ ಒಲಿಸಿಕೊಳ್ಳೋಕೆ ಹೆಂಡ್ತೀರು ಗಂಡನಿಗಿಷ್ಟವಾದ ಅಡುಗೆ ಮಾಡಿ ಮರುಳು ಮಾಡ್ತಾರಂತೆ......ಇದು ಒಂದು ತರಹ ಅದಕ್ಕೆ ವಿರುದ್ಧವಾದ ತಂತ್ರ...... ಅಂದ್ರೆ ಹೆಂಡತಿನ ಓಲೈಸೋ ತಂತ್ರ........

ಅಣ್ಣತಮ್ಮಂದಿರ, ಈ ಅಂಕಣ ಮುಗಿಸೋಕೆ ಮುಂಚೆ ಇನ್ನೊಮ್ಮೆ ನೆನಪಿಸ್ತಿದ್ದೀನಿ..... ಮನೇಲಿ ನಿಮ್ಮ ಮನೆಯೊಡತಿಯನ್ನ ಇಂಪ್ರೆಸ್ ಮಾಡೋ ಅನಿವಾರ್ಯತೆ ಬಂದಾಗ ಉಪಯೋಗ ಆಗ್ಬಹುದು. 😋
ನಾನು ಹೇಳಿದ ವಿಧಾನದಂತೆ, ಸಮರ್ಪಣಾಭಾವದಿಂದ ಈ ಬಿಹಾರಿ ಆಲೂ ಗೋಬಿ ಮಾಡಿ ನಿಮ್ಮ್ ಹೆಂಡ್ರಿಗೆ ತಿನ್ನಾಕ್ ಕೊಡಿ...... ಬೊ ಸಂದಾಕಿರತ್ತೆ ಕಣ್ಣ್ರೀ..... ತಿಂದು ಎರಡೇ ನಿಮಿಷದಲ್ಲಿ ಹೆಂಡ್ತಿ ಇಂಪ್ರೆಸ್ ಆಗ್ತಾವಳೇ......😉