ಶನಿವಾರ, ಜನವರಿ 25, 2020

ತೊಣ್ಣೂರು ಕೆರೆಯ ದಂಡೆಯಲ್ಲಿ ಸಂಕ್ರಾಂತಿ ಆಚರಣೆ

ಐರೋಪ್ಯ ಖಂಡದ ರಾಜಮನೆತನಗಳ ಸರ್ವಾಧಿಕಾರದ ಸಾಮ್ರಾಜ್ಯಶಾಹಿ ಆಡಳಿತವನ್ನು ಬಹಿಸ್ಕರಿಸಿದ 105 ಜನ ಸಾಹಸಿ ಯಾತ್ರಾರ್ಥಿಗಳ (Pilgrims) ಗುಂಪೊಂದು ಯಾವುದೇ ಕಾನೂನು-ಕಟ್ಟಳೆ, ನೀತಿ-ನಿಯಮಗಳಿಲ್ಲದ, ಸುಖ, ಸಮೃದ್ಧಿ, ಶೇಚ್ಚಾಚಾರದಿಂದ ಬದುಕಬಲ್ಲ ಹೊಸದೇಶವೊಂದನ್ನು ಕಟ್ಟುವ ಮಹತ್ವಾಕಾಂಕ್ಷೆಯನ್ನು ಹೊತ್ತು, ಇಂಗ್ಲೆಂಡಿನ Plymouth ಎಂಬ ಪ್ರದೇಶದಿಂದ, ಕ್ರಿ ಶ 1620 ರಲ್ಲಿ Mayflower ಎಂಬ ಹಡಗಿನಲ್ಲಿ, ಅಮೇರಿಕಾ ಖಂಡದತ್ತ ಪ್ರಯಾಣ ಬೆಳೆಸಿ, ೬೨ ದಿವಸಗಳ ನಂತರ ಈಗಿನ Massachusetts ಹತ್ತಿರ ಬಂದು ಇಳಿಯುತ್ತಾರೆ. ವ್ಯವಸಾಯವೇ ಗೊತ್ತಿರದ, ಹಸಿವಿನಿಂದ ಕಂಗಾಲಾದ ಯಾತ್ರಿಕರಿಗೆ, ಅಲ್ಲಿನ ಕೆಂಪು ಇಂಡಿಯನ್ನರು ಎಂಬ ಮೂಲನಿವಾಸಿಗಳು ಭೂಮಿಯಲ್ಲಿ ವ್ಯವಸಾಯಮಾಡಿ ಬೆಳೆ ಬೆಳೆಯುವುದನ್ನು ಮತ್ತು ಮೀನು ಹಿಡಿಯುದನ್ನು ಕಲಿಸಿಕೊಟ್ಟಮೇಲೆ, ಬಂದ ಮೊದಲ ಫಸಲನ್ನು ರಾಶಿ ಮಾಡಿ, ಅದರಿಂದ ವಿವಿಧ ಖಾದ್ಯಗಳನ್ನು ತಯಾರಿಸಿ, ಸುಗ್ಗಿಯ ಸಂಭ್ರಮಾಚರಣೆಯ ಹಬ್ಬವನ್ನು ಆಯೋಜಿಸಿ, ಅದಕ್ಕೆ ಮೂಲನಿವಾಸಿಗಳನ್ನು ಆಹ್ವಾನಿಸಿ, ಅವರಿಗೆಲ್ಲ ಧನ್ಯವಾದ ಅರ್ಪಿಸುತ್ತಾರೆ. ಅದೇ ಮುಂದೆ ಅಮೇರಿಕಾ ದೇಶದಲ್ಲಿ "ಥ್ಯಾಂಕ್ಸ್ ಗಿವಿಂಗ್ ಡೇ" ಎಂಬ ಸುಗ್ಗಿಯ ಹಬ್ಬವಾಗಿ ಆಚರಿಸಲ್ಪಡುತ್ತದೆ. ಚೀನೀಯರು ಶರತ್ಕಾಲದ ಮಧ್ಯದಲ್ಲಿ, ಬತ್ತದ ಹೊಸ ಫಸಲು ಬಂದಮೇಲೆ ಸುಗ್ಗಿಯ ಹಬ್ಬವನ್ನು Zhōngqiū Jié ಎಂಬ ಹೆಸರಿನಿಂದ ಚಂದ್ರನನ್ನು ಪೂಜಿಸುವ ಮೂಲಕ ಆಚರಿಸಿದರೆ, ಜಪಾನೀಯರು ಶಿಂಥೋ ಧರ್ಮದ ಪ್ರಕಾರ ಜನೇವರಿಯಲ್ಲಿ Oshogatsu ಮತ್ತು ಚೀನಾ ಸಂಸ್ಕೃತಿಯ ಪ್ರಭಾವದಿಂದ ಶರತ್ಕಾಲದ ಮಧ್ಯದಲ್ಲಿ Tsukimi ಎಂದು ಎರಡು ಬಾರಿ ತಮ್ಮದೇ ರೀತಿಯ ವಿಶಿಷ್ಟ ಆಚಾರ ಪದ್ಧತಿಗಳ ಪ್ರಕಾರ ಸಂತೋಷದಿಂದ ಸುಗ್ಗಿಯ ಹಬ್ಬಗಳನ್ನು ಆಚರಿಸಿ ಸಂಭ್ರಮಿಸುತ್ತಾರೆ. ಅದೇ ರೀತಿ, ನಮ್ಮ ಭಾರತ ದೇಶದಲ್ಲಿ ಜನೆವರಿ ಮಧ್ಯದಲ್ಲಿ ಆಚರಿಸುವ ಮಕರ ಸಂಕ್ರಾಂತಿಯೆಂಬ ಹಬ್ಬವು ಕೂಡ ಒಂದು ಸುಗ್ಗಿಯ ಹಬ್ಬವಾಗಿದೆ. ದೇಶ ಯಾವುದೇ ಇರಲಿ, ನಾಗರಿಕತೆ ಎಲ್ಲಿಯದೇ ಇರಲಿ, ಸುಗ್ಗಿಯ ಹಬ್ಬವೆನ್ನುವುದು ಎಲ್ಲಕಡೆ ಆಚರಿಸಲ್ಪಡುವ ವಿಶೇಷ ಹಬ್ಬವಾಗಿದೆ. ಮಾನವ ವಿಕಾಸದ ಕೊನೆಯ ಘಟ್ಟವಾದ ಆಧುನಿಕ ಮಾನವನು, ತನ್ನ ಬದುಕು ಕಟ್ಟಿಕೊಳ್ಳಲು ಅವಲಂಬಿಸಿದ್ದು ವ್ಯವಸಾಯ (ಕೃಷಿ) ಪದ್ಧತಿ. ಕಾಲ ಗತಿಸಿದಂತೆ, ಋತುಮಾನ, ಮಳೆಗಳಿಗನುಗುಣವಾಗ ಮತ್ತು ಭೂಮಿಯ ಗುಣಕ್ಕನುಗುಣವಾಗಿ ಬೇರೆ ಬೇರೆ ಬೆಳೆಗಳನ್ನು ಕೃಷಿಮಾಡುವ ಕಲೆಯನ್ನು ಕಲಿಯುತ್ತ ಬಂದ. ತನ್ನ ವರ್ಷಪೂರ್ತಿ ಪರಿಶಮದ ಪ್ರತೀಕವಾಗಿ ಹಸನಾಗಿ ಬೆಳೆದು ನಿಂತ ಫಸಲನ್ನು ರಾಶಿ ಮಾಡಿ, ಧಾನ್ಯಗಳ ರಾಶಿಕಣಗಳನ್ನು ಕಟ್ಟಿ, ಅವಕ್ಕೆ ಪೂಜೆ ಸಲ್ಲಿಸಿ, ಪ್ರಕೃತಿಮಾತೆಗೆ ಕೃತಜ್ಞತಾಭಾವದಿಂದ ಧನ್ಯವಾದ ಅರ್ಪಿಸುತ್ತಾನೆ. ವಿವಿಧ ಸಿಹಿ ಖಾದ್ಯಗಳನ್ನು ಮಾಡಿ ಕುಟುಂಬ ಪರಿವಾರದವರೆಲ್ಲರೂ ಸೇವಿಸಿ, ಹಾಡಿ, ಕುಣಿದು ಸಂಭ್ರಮದಿಂದ ಸುಗ್ಗಿಯ ಹಬ್ಬವನ್ನು ಆಚರಿಸುತ್ತ ಬಂದಿದ್ದಾನೆ.

ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಈ ಮಕರ ಸಂಕ್ರಾಂತಿಯು ವಾಡಿಕೆಯಂತೆ ಸುಗ್ಗಿ ಹಬ್ಬವೆಂದು ಕರೆಸಿಕೊಂಡರು ಕೂಡ, ಈ ಹಬ್ಬಕ್ಕೆ ಇನ್ನು ಅನೇಕ ವಿಶೇಷತೆಗಳಿವೆ. ವರ್ಷದ ಮೊದಲ ಹಬ್ಬವಾದ ಈ ಸಂಕ್ರಾಂತಿಯು ಸೌರಮಾನ ಪದ್ಧತಿಯಪ್ರಕಾರ ಜನೆವರಿ ೧೪ ರಂದು ಸೂರ್ಯ ತನ್ನ ಪಥವನ್ನು ಬದಲಿಸಿ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪ್ರಯಾಣಬೆಳೆಸುವ ಪುಣ್ಯಕಾಲ. ಜ್ಯೋತಿಷ್ಯ ಶಾಸ್ತ್ರದ ವಾದದಂತೆ, ಸೂರ್ಯ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಸಮಯ ಎಂದು ಕೂಡ ಹೇಳುವುದುಂಟು. ಇಂದಿನಿಂದ ರಾತ್ರಿಗಳು ಚಿಕ್ಕದಾಗಿ ಹಗಲುಗಳು ದೊಡ್ಡವಾಗುತ್ತವೆ. ಅಂದರೆ ಚಳಿಗಾಲ ಮುಗಿದು ಚೈತ್ರದ ಕಡೆ ವಾಲುವ ಸಮಯ ಇದಾಗಿದೆ. ಈ ಹಬ್ಬವನ್ನು ನಮ್ಮ ದೇಶದ ಎಲ್ಲ ರಾಜ್ಯಗಳಲ್ಲಿ ವಿವಿಧ ಹೆಸರು, ಪದ್ಧತಿ ಮತ್ತು ಆಚಾರ ವಿಚಾರಗಾಳಿಗನುಗುಣವಾಗಿ ಆಚರಿಸುವುದುಂಟು. ಕರ್ನಾಟಕದಲ್ಲಿ ನಾವು ಸಂಕ್ರಾಂತಿಯೆಂದೂ ಕರೆದರೆ, ತಮಿಳುನಾಡು ಮತ್ತು ಆಂಧ್ರದಲ್ಲಿ ಪೊಂಗಲ್ ಎಂದೂ, ಪಂಜಾಬಿನಲ್ಲಿ ಲೊಹ್ರಿ, ಗುಜರಾತ್‌ನಲ್ಲಿ ಉತ್ತರಾಯಣ, ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.

ಕರ್ನಾಟಕದಲ್ಲಿ, ಇನ್ನು ವಿಶೇಷವಾಗಿ ರೊಟ್ಟಿಯ ನಾಡೆಂದು ಹೆಸರುವಾಸಿಯಾದ ನಮ್ಮ ಉತ್ತರ ಕರ್ನಾಟಕದಲ್ಲಿ ಸಂಕ್ರಾಂತಿಯಾ ಆಚರಣೆಯ ವಿಶೇಷತೇನೆ ಬೇರೆ. ಇದು ನಮ್ಮಲ್ಲಿ ಬೋಗಿ, ಸಂಕ್ರಾಂತಿ ಮತ್ತು ಕರಿ ಎಂಬ ಮೂರು ದಿನಗಳ ಹಬ್ಬ. ಬೋಗಿಯ ದಿನ ಎಲ್ಲರು ಎಣ್ಣೆಸ್ನಾನ ಮಾಡಿದರೆ, ಸಂಕ್ರಾಂತಿಯ ದಿನ ಖಡಕ್ ಸಜ್ಜಿ ರೊಟ್ಟಿ, ಮೊಸರನ್ನ, ಜುಣುಕದ ವಡೆ (ಹಿಟ್ಟಿನ ಪಲ್ಯ), ಬದನೆಕಾಯಿ ಎಣ್ಣೆಗಾಯಿ ಪಲ್ಯ, ಹೆಸರು ಕಾಳು ಪಲ್ಯ, ಮಡಿಕೆ ಕಾಳು ಪಲ್ಯ, ಸಿಹಿ ತಿನಿಸುಗಳಾದ ಮಾದ್ಲಿ, ಹೋಳಿಗೆ, ಕರ್ಚಿಕಾಯಿ, ಹೀಗೆ ಉತ್ತರ ಕರ್ನಾಟಕದ ಅನೇಕ ವಿಶೇಷ ಖಾದ್ಯಗಳ ಬುತ್ತಿಯನ್ನು ಮಾಡಿಕೊಂಡು, ದೇವರಿಗೆ ಇವುಗಳದೇ ನೈವೇದ್ಯೆ ಅರ್ಪಿಸಿ, ಹಳ್ಳಿಗಳಾದರೆ ಮನೆಯ ಜನರೆಲ್ಲ ಕೂಡಿ ಎತ್ತಿನಬಂಡಿಯಲ್ಲಿ ತಮ್ಮ ಹೊಲಗದ್ದೆಗಳಿಗೆ ಹೋಗಿ, ಎಲ್ಲರು ಸೇರಿ ಬುತ್ತಿ ಊಟ ಮಾಡಿ, ಹಾಡಿ, ಕುಣಿದು ನಲಿಯುತ್ತಾರೆ. ಈ ಸಂಭ್ರಮವನ್ನ ಓದುವುದಕ್ಕಿಂತ ಅನುಭವಿಸಿದರೆ ಗೊತ್ತು ಅದರ ಗಮ್ಮತ್ತು. ಇದೆ ದಿನ ಸಂಜೆ ಪರಿವಾರದವರು ಸ್ನೇಹಿತರ, ಅಕ್ಕಪಕ್ಕದವರ ಮತ್ತು ಸಂಬಂದಿಕರ ಮನೆಗೆಲ್ಲ ಹೋಗಿ, ಎಳ್ಳು-ಬೆಲ್ಲ ಹಂಚಿ, ದ್ವೇಷಾಸೂಯೆಗಳನ್ನೆಲ್ಲ ಮರೆತು ಸಾಮರಸ್ಯದಿಂದ ಬದುಕೋಣ ಎನ್ನುವುದು ವಾಡಿಕೆ. ಇದನ್ನೇ ಉತ್ತರ ಕರ್ನಾಟಕ ಶೈಲಿಯಲ್ಲಿ ''ನಾವ್‌ ನೀವ್ ಎಳ್ಳು ಬೆಲ್ಲಾ ತೊಗೊಂಡ ಎಳ್ಳು ಬೆಲ್ಲದಾಂಗ್ ಇರೋನ್ರೀ'' ಅಂತ ಕೇಳ್ತಿವಿ ನೋಡ್ರಿ. ಕರಿ ಎಂದು ಕರೆಸಿಕೊಳ್ಳುವ ಮೂರನೇ ದಿನದಂದು ನಮ್ಮ ರೈತರು, ತಮ್ಮ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದ ಮಿತ್ರರಾದ ಎತ್ತುಗಳನ್ನು, ಅವುಗಳ ಮೈಮೇಲೆಲ್ಲ ಬಣ್ಣ ಬಣ್ಣದ ಚಿತ್ರ ತೆಗೆದು, ಕೋಡುಗಳಿಗೆ ರಿಬ್ಬನ್, ಬಲೂನುಗಳನ್ನು ಕಟ್ಟಿ ಶೃಂಗಾರ ಮಾಡಿ, ನಂತರ ಅವುಗಳನ್ನು ಓಡಿಸುತ್ತಾ ಬಂದು ಬೆಂಕಿಯ ಕಿಚ್ಚಿನ ಮೇಲೆ ಹಾಯಿಸುವ ಆಚರಣೆಗೆ "ಕರಿ ಹರಿಯುವುದು ಅಥವಾ ಕಿಚ್ಚು ಹಾಯಿಸುವುದು" ಎನ್ನುವುದು.  


ಈಗ ಬೆಂಗಳೂರು ಎಂಬ ಕರ್ಮಭೂಮಿಯಲ್ಲಿ ಕೆಲಸಮಾಡುತ್ತಿರುವ ನಮ್ಮಂಥಹ ಉದ್ಯೋಗಿಗಳ ವಿಷಯಕ್ಕೆ ಬರೋಣ. ನಮ್ಮ ಬೆಂಗಳೂರು ಜನಕ್ಕೆ ಈ ವೀಕೆಂಡ್ ಎಂಬ ಪೆಡಂಭೂತ ಬಂತೆಂದರೆ ಸಾಕು, ವಾರಪೂರ್ತಿ ದುಡಿದ ಮನಕ್ಕೆ ಸ್ವಲ್ಪ ವಿಶ್ರಾಂತಿ ಸಿಗಲು, ಅದೇ ಶಾಪಿಂಗ್ ಮಾಲ್, ಸಿನೆಮಾ, ಮಲ್ಟಿಪ್ಲೆಕ್ಸ್ ಎಲ್ಲ ಬೋರ್ ಆದಾಗ, ಯಾವುದಾದರು ಹೊಸ ಪ್ರವಾಸಿ ಸ್ಥಳ, ದೇವಸ್ಥಾನ, ಕೆರೆ, ನದಿ, ಸರೋವರ ಹೀಗೆ ಎಲ್ಲಾದರೂ ಫ್ಯಾಮಿಲಿ ಜೊತೆ ಸುತ್ತಾಡಿಕೊಂಡು ಬರೋಣ ಅನಿಸಿಬಿಡುತ್ತದೆ. ಇತ್ತಿತ್ತಲಾಗಿ ಪ್ರತಿ ಮನೆಗೊಂದು ಕಾರುಗಳ ಹಾವಳಿಬೆರೆ ಜಾಸ್ತಿ ಆಗಿದೆ, ಸಾರ್ವಜನಿಕ ಸಾರಿಗೆ ಮೇಲೆ ಅವಲಂಬನೆ ಕಡಿಮೆ ಆಗಿ, ಚಿಕ್ಕ ಚಿಕ್ಕ ಟ್ರಿಪ್ ಮಾಡೋದು ಅಭ್ಯಾಸವಾಗಿಬಿಟ್ಟಿದೆ. ಬಹಳ ದಿನಗಳಿಂದ ಎಳ್ಳು ಸುತ್ತಾಡೋಕೆ ಹೋಗಿರಲಿಲ್ಲ, ಸಂಕ್ರಾಂತಿ ಹಬ್ಬ ಹತ್ತಿರ ಬರ್ತಾಇತ್ತು, ಅದಕ್ಕೆ ಮಿತ್ರರಾದ ಪ್ರಶಾಂತ್ ಅವರ ಫ್ಯಾಮಿಲಿ ಮತ್ತು ನಮ್ಮ ಫ್ಯಾಮಿಲಿ ಸೇರಿ ಸಂಕ್ರಾಂತಿ ಆಚರಣೆ ಮಾಡಲು ಯಾವುದಾದರು ಒಳ್ಳೆಯ ಸ್ಥಳ ಹುಡುಕೋಣ ಅಂತ ಪ್ಲಾನ್ ಮಾಡ್ತಾ ಇರೋವಾಗ ನನಗೆ ಅನಿಸಿದ ಅತ್ಯಂತ ಸೂಕ್ತವಾದ ಸ್ಥಳ, ನಮ್ಮ ಕಂಪನಿಯ ವ್ಯಾನ್ ಡ್ರೈವರ್ ಹಳಿದ "ತೊಣ್ಣೂರು ಕೆರೆ".  

**************

ಮಂಡ್ಯ ಜಿಲ್ಲೆ ಎಂದಾಕ್ಷಣ ನಮ್ಮ ಕಣ್ಣಮುಂದೆ ಬರುವುದು ಎಲ್ಲೆಲ್ಲೂ ಹಚ್ಚ ಹಸಿರಿನಿಂದ ಕಂಗೊಳಿಸುವ ಭೂಮಾತೆ, ರಸ್ತೆಗಳ ಎಡ-ಬಲಗಳಲ್ಲಿ ಕಬ್ಬು, ಬಾಳೆ, ತೆಂಗು, ಭತ್ತದ ಗದ್ದೆಗಳು, ಕೆರೆ-ಕಟ್ಟೆ ಕಾಲುವೆಗಳು. ಕನ್ನಡದ ನಾಡಿನ ದಕ್ಷಿಣ ಭಾಗದ ಜೀವನಾಡಿ ಎನಿಸಿರುವ ಕಾವೇರಮ್ಮನ ಕೃಪಾಕಟಾಕ್ಷವೋ, ಮೈಸೂರು ವೊಡೆಯರ ಮನೆತನದ ತ್ಯಾಗ ಮತ್ತು ಸಹಾಯವೋ ಅಥವಾ ಈ ದೇಶ ಕಂಡ ಮಹಾನ್ ಇಂಜಿನಿಯರ್ "ಶ್ರೀ ವಿಶ್ವೇಶ್ವರಯ್ಯನವರ" ಶ್ರಮದ ಪ್ರತೀಕವೋ, ಮೈಸೂರು-ಮಂಡ್ಯ ಜಿಲ್ಲೆಗಳ ಮಧ್ಯೆ ಎದ್ದು ನಿಂತಿರುವ  ಕೃಷ್ಣರಾಜ ಸಾಗರ ಅಣೆಕಟ್ಟಿನಿಂದ, ಈ ಭಾಗದ ಭೂಮಿಗೆ ನೀರಿನ ಬರವೇ ಇಲ್ಲದಂತಾಗಿ, ರೈತನ ಬಾಳು ಹಸನಾಗಿದೆ. ಈ ಜಿಲ್ಲೆಯಲ್ಲಿ ಕಂಡುಬರುವ ಅನೇಕ ಪ್ರಸಿದ್ಧ ಕೆರೆಗಳಲ್ಲಿ ಒಂದಾದದ್ದು ಈ "ತೊಣ್ಣೂರು ಕೆರೆ". ಮಂಡ್ಯ ಜಿಲ್ಲೆಯ, ಶ್ರೀರಂಗಪಟ್ಟಣ ತಾಲೂಕಿನ "ತೊಣ್ಣೂರು" ಎಂಬ ಹಳ್ಳಿಯಲ್ಲಿ ಈ ಕೆರೆ ಇದ್ದು, ಪಾಂಡವಪುರದಿಂದ 8 ಕಿಮಿ ದೂರದಲ್ಲಿದೆ. ಬೆಂಗಳೂರಿನಿಂದ ಬರುವವರಿಗೆ, ಮೈಸೂರು ಮಾರ್ಗವಾಗಿ ಬಂದರೆ ಸರಿಯಾಗಿ 136 ಕಿಮಿ ದೂರ ಸಾಗಬೇಕಾಗುತ್ತದೆ.

ಸುಮಾರಾಗಿ 1400 ಎಕರೆಗಳಷ್ಟು ವಿಸ್ತಾರವಾಗಿ ಹರಡಿಕೊಂಡಿರುವ ಈ ಕೆರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಒಂದು ಸಾವಿರ ವರ್ಷಗಳ ಹಿಂದೆ ವೈಷ್ಣವ ಸಂತರಾದ ಶ್ರೀ ರಾಮಾನುಜಾಚಾರ್ಯರು ಈ ಕೆರೆಯನ್ನು ಸ್ಥಾಪಿಸಿ, ಅದಕ್ಕೆ ತಿರುಮಲಸಗಾರ ಎಂದು ನಾಮಕರಣ ಮಾಡಿದ್ದರು ಎಂದು ಹೇಳಲಾಗುತ್ತದೆ. ರಾಮಾನುಜಾಚಾರ್ಯರು ಹತ್ತಿರದ ಮೇಲುಕೋಟೆ ಕ್ಷೇತ್ರಕ್ಕೆ ಹೋಗುವ ಮುಂಚೆ ಈ ಕೆರೆಯ ಹತ್ತಿರ ವಾಸವಾಗಿದ್ದರು ಎನ್ನಲಾಗುತ್ತದೆ. ಅದಕ್ಕೆ ಪ್ರತೀಕವಾಗಿ ಶ್ರೀ ರಾಮಾನುಜಾಚಾರ್ಯರ ಪ್ರತಿಮೆಯನ್ನು ಮತ್ತು ಒಂದು ಚಿಕ್ಕ ದೇವಸ್ಥಾನವನ್ನು, ಕೆರೆಯ ಕೆಳಭಾಗದಲ್ಲಿ ಪ್ರತಿಷ್ಠಾಪಿಸಲಾಗಿದ್ದು ಕಂಡುಬರುತ್ತದೆ. ಇಲ್ಲಿನ ಸುತ್ತಮುತ್ತಲ ಜನ ಹೇಳುವಪ್ರಕಾರ ಈ ಕೆರೆ ಬತ್ತಿದ್ದು ನೋಡಿಯೇ ಇಲ್ಲ ಎನ್ನುತ್ತಾರೆ. ಅಷ್ಟೇ ಅಲ್ಲ ಕೆರೆಗೆ ಬರುವ ನೀರಿನ ಮೂಲ ಕೂಡ ಇಂದಿಗೂ ತಿಳಿಯದ ಸಂಗತಿಯೆನ್ನುವುದು ಇಲ್ಲಿಯ ಜನರ ವಾದ. ಶುಭ್ರವಾದ ನೀಲವರ್ಣದ ಜಲರಾಶಿಯನ್ನು ಹೊಂದಿರುವ ಈ ಕೆರೆಯನ್ನು ನೋಡಿ "ಟಿಪ್ಪು ಸುಲ್ತಾನನು" ಇದಕ್ಕೆ "ಮೋತಿ ತಾಲಾಬ್" ಅಂತ ಹೆಸರಿಟ್ಟಿದ್ದನಂತೆ. ಅಷ್ಟೇ ಅಲ್ಲದೆ ಈ ತೊಣ್ಣೂರು ಕೆರೆಯ ನೀರಿನಲ್ಲಿ ಔಷದಿಯ ಗುಣಗಳಿದ್ದು, ಚರ್ಮರೋಗದಿಂದ ಬಳಲುವವರು ಈ ನೀರಿನಲ್ಲಿ ಸ್ನಾನ ಮಾಡಿದರೆ ರೋಗಗಳು ವಾಸಿಯಾಗುತ್ತವೆ ಎಂಬ ನಂಬಿಕೆಇದೆ.


ಈ ಸ್ಥಳದ ಇನ್ನೊಂದು ವಿಶೇಷವೆಂದರೆ, ಕೆರೆಯ ಹತ್ತಿರ ಸಾವಿರಾರು ವರ್ಷಗಳ ಹಳೆಯದಾದ ವೆಂಕಟರಮಣ, ರಾಮಾನುಜಾಚಾರ್ಯ, ನಂಬಿನಾರಾಯಣ ಹಾಗು ಪಕ್ಕದ ಬೆಟ್ಟದ ಮೇಲಿರುವ ಯೋಗ ನರಷಿಂಹ ಎಂಬ ನಾಲ್ಕು ದೇವಸ್ಥಾನಗಳು. ಈ ನಾಲ್ಕೂ ದೇವಸ್ಥಾನಗಳಿಗೂ ತಮ್ಮದೇ ಇತಿಹಾಸವಿದ್ದು, ಈ ನಾಲ್ಕು ದೇವಸ್ಥಾನಗಳಲ್ಲಿ ವಿಶೇಷವಾದದ್ದು ನಂಬಿನಾರಾಯಣ ದೇವಸ್ಥಾನ. ಈ ದೇವಸ್ಥಾನದ ಮುಂದಿರುವ ಮಾಹಿತಿ ಪ್ರಲಕದ ಪ್ರಕಾರ ಇದು ಮೂಲತಃ ಹೊಯ್ಸಳರ ಕಾಲದ ಜೈನ ಬಸದಿಯಾಗಿದ್ದು ಇದನ್ನು ಬಿಟ್ಟಿದೇವರಾಯ ಎಂಬ ರಾಜ ನಿರ್ಮಿಸಿರುತ್ತಾನೆ. ಈ ಪ್ರಾಂತ್ಯಕ್ಕೆ ಶ್ರೀ ರಾಮಾನುಜಾಚಾರ್ಯರ ಆಗಮನವಾದನಂತರ, ಯಾವುದೊ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದ  ಬಿಟ್ಟಿದೇವರಾಯಣ ಮಗಳನ್ನು ಆಚಾರ್ಯರ ಗಮನಕ್ಕೆ ತಂದಾಗ, ಅವರು ರಾಜನ ಮಗಳನ್ನು ಈ ತೊಣ್ಣೂರು ಕೆರೆಯಲ್ಲಿ ಸ್ನಾನಮಾಡಿಸಿ ಬೆಟ್ಟದ ಮೇಲಿರುವ ಯೋಗ ನರಷಿಂಹ ಸ್ವಾಮಿಗಳ ಆಶೀರ್ವಾದ ಪಡೆಸಿದಮೇಲೆ ಅವಳು ಗುಣಮುಖಳಾದಳೆಂದು, ಇದರಿಂದ ಪ್ರಭಾವಿತಗೊಂಡ ಬಿಟ್ಟಿದೇವರಾಯನು ಶ್ರೀ ರಾಮಾನುಜಾಚಾರ್ಯರ ಅಣತಿಯಂತೆ ಜೈನಧರ್ಮದಿಂದ ಪರಿವರ್ತನಗೊಂಡು ವೈಷ್ಣವ ಧರ್ಮವನ್ನು ಸ್ವೀಕಾರಮಾಡಿ, ಆಚಾರ್ಯರಿಗೆ ಇದೆ ಬಸದಿಯಲ್ಲಿ ಶ್ರೀಮನ್ನಾರಾಯಣನ ಮೂರ್ತಿಯನ್ನು ಪ್ರತಿಷ್ಠಾಪಿಸಲು ಹೇಳಿದಮೇಲೆ ಈ  ಜೈನಬಸದಿಯು ನಂಬಿನಾರಾಯಣ ದೇವಸ್ಥಾನವಾಗಿ ಬದಲಾವಣೆಯಾಯಿತೆಂದು ಹೇಳಲಾಗುತ್ತದೆ. ನಿಜವಾಗಿಯೂ, ನಮ್ಮದೇಶದಲ್ಲಿನ ಇಂತಹ ಅದೆಷ್ಟೋ ಐತಿಹಾಸಿಕ ಹಿನ್ನೆಲೆಯುಳ್ಳ ದೇವಸ್ಥಾನಗಳು, ಬಸದಿ, ಪಗೋಡಗಳಬಗ್ಗೆ, ಮತ್ತು ಅವುಗಳ ವಿಶೇಷತೆಗಳ ಬಗ್ಗೆ ಅಗೆಯುತ್ತಾ ಹೋದರೆ ಅದೆಷ್ಟೋ ಮಾಹಿತಿಗಳು, ಕಥೆಗಳು ಹೊರಮ್ಮುತ್ತವೆಯಲ್ಲವೇ.... 

*************

    ಈ ವರ್ಷ ಸಂಕ್ರಾಂತಿ ಹಬ್ಬವು ಜನೇವರಿ 15 ಕ್ಕೆ ಬಂದಿದ್ದರಿಂದ ನಮ್ಮ ಕಂಪನಿಗಳು ಮುಂಚೆನೇ ಒಂದು ದಿನದ ರಜೆ ಘೋಷಣೆ ಮಾಡಿದ್ದವು. ನಮ್ಮ ಪ್ಲಾನಿನಂತೆ, ನಮ್ಮ ಮಹಿಳಾಮಣಿಗಳ ಪರಿಶ್ರಮದಿಂದ ಸಿದ್ದವಾದ ಉತ್ತರಕರ್ನಾಟಕದ ವಿವಿಧ ಖಾದ್ಯಗಳ ಬುತ್ತಿಊಟವನ್ನು ಕಟ್ಟಿಕೊಂಡು, ಆಧುನಿಕ ಬಂಡಿ ಎನಿಸಿದ ನಮ್ಮ ನಮ್ಮ ಕಾರುಗಳಲ್ಲಿ, ಬೆಳಿಗ್ಗೆ ಸರಿಯಾಗಿ 8-00 ಘಂಟೆಗೆ, ಜೆ ಪಿ ನಗರದ ನಂದಿನಿ ಅಂಡರ್ಪಾಸನ್ನು ಸ್ಟಾರ್ಟಿಂಗ್ ಪಾಯಿಂಟ್ ಮಾಡಿಕೊಂಡು, ವಿಷ್ಣುವರ್ಧನ್ ರಸ್ತೆಯಮೂಲಕ ಮೈಸೂರು ರಸ್ತೆ ತಲುಪಿ ಅಲ್ಲಿಂದ ಕೆರೆ ತೊಣ್ಣೂರು ಕಡೆಗೆ ಪ್ರಯಾಣ ಬೆಳೆಸಿದೆವು. ಮಾರ್ಗದ ಮಧ್ಯದಲ್ಲಿ ರಾಮನಗರದ ಹತ್ತಿರ ಒಂದು ಉಡುಪಿ ರೆಸ್ಟೋರೆಂಟ್ ಕಣ್ಣಿಗೆ ಬಿತ್ತು. ಎಲ್ಲರೂ ಅಲ್ಲೇ ಬೆಳಗಿನ ಉಪಹಾರ ಮುಗಿಸಿದಮೇಲೆ ಅರ್ಧಗಂಟೆ ಅಲ್ಲೇ ವಿಶ್ರಾಂತಿಮಾಡಿ, ಮುಂದೆ ಮಂಡ್ಯದ ಕಡೆಗೆ ನಮ್ಮ ಕಾರುಗಳನ್ನು ಓಡಿಸಿದೆವು,. ಅದ್ಯಾಕೋ ಗೊತ್ತಿಲ್ಲ, ಯಾವಾಗಲು ವಾಹನಗಳಿಂದ ಗಿಜಿ ಗಿಜಿ ಅನ್ನುತಿದ್ದ ಮೈಸೂರು ರಸ್ತೆಯು ಅವತ್ತು ತುಂಬಾ ಖಾಲಿ ಖಾಲಿ ಇತ್ತು. ಈ ರಜೆ ವಾರದ ಮಧ್ಯೆ ಬಂದಿದ್ದರಿಂದ ಬಹಳ ಜನ ಮನೆಯಲ್ಲೇ ಹಬ್ಬವಾಚರಿಸುತ್ತಿದ್ದಾರೇನೋ, ಅದಕ್ಕೆ ರಸ್ತೆ ಖಾಲಿ ಇರಬಹುದು ಅನಿಸಿತು. ಮಂಡ್ಯ ದಾಟಿದಮೇಲೆ ರಸ್ತೆಯ ಬಲಗಡೆ ಪಾಂಡವಪುರಕ್ಕೆ ಹೋಗುವ ದಾರಿ ಎಂಬ ಫಲಕ ನೋಡಿದಮೇಲೆ ಅದೇ ಮಾರ್ಗವಾಗಿ ಮುಂದುವರಿದೆವು. ಚಿಕ್ಕದಾದರೂ ಚೊಕ್ಕದಾದ ಪಾಂಡವಪುರ ರಸ್ತೆಯ ಎಡ-ಬಲದಲ್ಲಿ ಹಚ್ಚಹಸುರಿನ ಹೊಲಗದ್ದೆಗಳ ನಯನಮನೋಹರ ದೃಶ್ಯ ಕಣ್ಣಿಗೆ ಮುದನೀಡುತಿತ್ತು. ಗೂಗಲ್ ಮ್ಯಾಪಿನ ಸಹಾಯ ಇದ್ದರು ರಸ್ತೆಯುದ್ದಕ್ಕೂ ಒಂದೆರಡು ಸಲ ದಾರಿಹೋಕರನ್ನ ವಿಚಾರಿಸುತ್ತಾ ಹೋದೆವು. ಪಾಂಡವಪುರ ತಲುಪಿದಮೇಲೆ, ಅಲ್ಲಿಂದ ಎರಡು ಕಿಲೋಮೀಟರು ದೂರದಲ್ಲಿ ಎಡತಿರುವು ಇದ್ದು, ಅಲ್ಲಿಂದ ನಾಲ್ಕು ಕಿಲೋಮೀಟರು ದೂರ ಸಾಗಿದರೆ ಕೆರೆ ಸಿಗುತ್ತದೆ ಎಂದು ಒಬ್ಬರಾರು ಹಿರಿಯರು ಹೇಳುದಂತೆ ಸಾಗಿದಮೇಲೆ ಸರಿಯಾಗಿ 12-00 ಘಂಟೆಗೆ ನಮ್ಮ ಈ ಪ್ರವಾಸದ ಕೊನೆಯ ಘಟ್ಟವಾದ ತೊಣ್ಣೂರು ಕೆರೆಯನ್ನು ತಲುಪಿದೆವು. ಕೆರೆಯ ಹತ್ತಿರ ಕಾರುಗಳ ಪಾರ್ಕಿಂಗ್ ಮಾಡಲು ಬೇಕಾದಷ್ಟು ಸ್ಥಳ ಇದ್ದು, ನಮ್ಮ ಕಾರುಗಳನ್ನು ಅಲ್ಲೇ ಪಾರ್ಕ್ ಮಾಡಿ ಎಲ್ಲರು ಸೇರಿ ಕೆರೆಯತ್ತ ದಾಪುಗಾಲು ಹಾಕಿದೆವು. 

ಆಹಾ! ಎಂಥಹ ರಮಣೀಯ ದೃಶ್ಯ......ದೃಷ್ಟಿ ಹರಿಸಿದಷ್ಟು ಶುಭ್ರವಾದ ನೀಲವರ್ಣದ ಜಲರಾಶಿ, ಸಾವಿರಾರು ಎಕರೆ ವಿಶಾಲಾಗಿದೆ. ನಾನು ಇಲ್ಲಿ ಬರುವುದಕ್ಕೆ ಮುಂಚೆ ಈ ಸ್ಥಳದ ಬಗ್ಗೆ ತಿಳಿದ ಮಾಹಿತಿಗಿಂತ ಜಾಸ್ತಿನೇ ಸುಂದರವಾಗಿತ್ತು ಈ ಕೆರೆಯ ದೃಶ್ಯ. ಕೆಳಗೆ ಇಳಿದು ನೀರಿನಲ್ಲಿ ಕೈ ಕಾಲು ಮುಖ ತೊಳೆದುಕೊಂಡಮೇಲೆ ಅದೆಂತಹದೋ ಉಲ್ಲಾಸ. ಅಲ್ಲೇ ದಂಡೆಯಮೇಲೆ ಕುಳಿತರೆ 3-4 ಘಂಟೆ ಡ್ರೈವ್ ಮಾಡಿದ  ದಣಿವೆಲ್ಲಾ ಎರಡೇ ನಿಮಿಷದಲ್ಲಿ ಹಾರಿಹೋಯಿತು. ಅಲ್ಲೇ ಎಲ್ಲರು ಕೆಲವು ಭಂಗಿಗಳಲ್ಲೂ ಫೋಟೋಗ್ರಫಿ ಪ್ರೋಗ್ರಾಮ್ ಮುಗಿಸುವಷ್ಟರಲ್ಲಿ ಘಂಟೆ 1-30 ಅಯೀತು. ಊಟದ ಸಮಯ, ಹೊಟ್ಟೆ ಚುರ್ರ ಎನ್ನುತಿತ್ತು, ಕಾರುಗಳಲ್ಲಿರುವ ಪದಾರ್ತಗಳನ್ನು ನೆನಪಿಸಿಕೊಂಡಮೇಲೆ ಹಸಿವು ಇನ್ನು ಜಾಸ್ತಿ ಆಯೀತು. ಕೆರೆಯ ದಂಡೆಯಮೇಲೆ ಜನ ಜಾಸ್ತಿ ಇದ್ದರಿಂದ, ಪಕ್ಕದ ನಂಬಿನಾರಾಯಣ ಸ್ವಾಮಿ ದೇವಸ್ಥಾನದ ಮುಂದಿರುವ ಹಸಿರು ಹುಲ್ಲಿನ ಹಾಸಿನಮೇಲೆ ಕುಂತಿ ಬುತ್ತಿ ಊಟಮಾಡೋಣ ಎಂದು ನಿರ್ಧಾರವಾಯಿತು. ಎಲ್ಲರು ಅತ್ತಕಡೆ ಹೊರಟೆವು. ಊಟ ಶುರುಮಾಡುವುದಕ್ಕಿಂತ ಮುಂಚೆ ದೇವರ ಧರ್ಶನ ಮಾಡಬೇಕೆನ್ನುವಷ್ಟರಲ್ಲಿ ದೇವಸ್ಥಾನದ ಬಾಗಿಲಿ ಹಾಕಿದ್ದರಿಂದ, ಮಧ್ಯಾಹ್ನ 3-30 ಕ್ಕೆ ಪೂಜಾರಿಗಳು ಬಾಗಿಲು ತೆರೆಯುವುದು ಎಂದು ಸ್ಥಳೀಯರು ಮಾಹಿತಿ ನೀಡಿದಮೇಲೆ, ಬುತ್ತಿ ಊಟದ ಕಡೆಗೆ ನಮ್ಮ ಗಮನ ಸೆಳೆಯಿತು. 

ಹುಲ್ಲು ಹಾಸಿನಮೇಲೆ ಎಲ್ಲರು ವರ್ತುಲಾಕಾರವಾಗಿ ಕುಳಿತು ಸಂಕ್ರಾಂತಿಯ ವಿಶೇಷ ಬುತ್ತಿ ಊಟವನ್ನು ಮಾಡಿದೇವು. ನಿಜವಾಗಿವು ಇದು ಅತ್ಯಂತ ವಿಶೇಷ ಮತ್ತು ಮರೆಯಲಾಗದ ಅನುಭವ ಅನಿಸಿತು. ನಂತರ ಅಲ್ಲೇ ಒಂದು ಘಂಟೆ ದಣಿವಾರಿಸಿಕೊಳ್ಳುವಷ್ಟರಲ್ಲಿ ದೇವಸ್ಥಾನದ ಬಾಗಿಲು ತೆರೆಯಿತು. ಸಂಪೂರ್ಣವಾಗಿ ಕಲ್ಲಿನಲ್ಲೇ ಕಟ್ಟಿಸಿದ ಬಹಳ ಹಳೆಯ ದೇವಸ್ಥಾನ, ಗರ್ಭಗುಡಿಯಲ್ಲಿ ನಂಬಿನಾರಾಯಣ ಸ್ವಾಮಿಗೆ ಶಿರ ನಮಿಸಿ, ಅಲ್ಲಿಯೂ ಕೂಡ ಕೆಲವೊಂದು ಫೋಟೋಗಳನ್ನು ಕ್ಲಿಕ್ಕಿಸಿದೆವು. ಕೈಯಲ್ಲಿ ಸ್ಮಾರ್ಟ್ ಫೋನು ಒಂದಿದ್ದರೆ ಈಗಿನ ಕಾಲದಲ್ಲಿ ಫೋಟೋ ತೆಗೆಯುವುದು ಅತ್ಯಂತ ಸರಳ ಕೆಲಸ. ಅಲ್ಲೇ ದೇವಸ್ಥಾನದ ಮುಂದೆ ಒಬ್ಬರಿಗೊಬ್ಬರು ಎಳ್ಳು-ಬೆಲ್ಲ ಹಂಚಿ, ಉತ್ತರ ಕರ್ನಾಟಕ ಶೈಲಿಯಲ್ಲಿ ''ನಾವ್‌ ನೀವ್ ಎಳ್ಳು ಬೆಲ್ಲಾ ತೊಗೊಂಡ ಎಳ್ಳು ಬೆಲ್ಲದಾಂಗ್ ಇರೋನ್ರೀ'' ಅಂತ ಹೇಳಿ ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿದೆವು. 

ಸರಿಯಾಗಿ ಸಂಜೆ 5-00 ಘಂಟೆಗೆ ಈ ಸುಂದರವಾದ ಪ್ರವಾಸಿತಾಣಕ್ಕೆ "ಸಾಯೋನಾರ" ಹೇಳಿ, ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದೆವು. ಬರುವಾಗ ಮತ್ತೆ ಒಂದುಕಡೆ ಎಲ್ಲರು ಸೇರಿ ಮನಸಿಗ್ಗೆ ಉಲ್ಲಾಸನೀಡುವ ಚಹಾ ಸೇವನೆಮಾಡಿ, ಅಲ್ಲಿಂದ ನಮ್ಮ ನಮ್ಮ ಗೂಡುಗಳ ಕಡೆಗೆ, ಅದೇ ಮೈಸೂರು ರಸ್ತೆಯ ಮಾರ್ಗವಾಗಿ ಹೊರತು ನಿಂತೆವು. 

ಈ ಬೆಂಗಳೂರಿನ ಸುತ್ತ ಅನೇಕ ಆಕರ್ಷಣೀಯ ಪ್ರವಾಸಿ ಸ್ಥಳಗಳು ಇದ್ದು, ಬಹಳ ಸ್ಥಳಗಳಿಗೆ ನಾವೀಗಾಗಲೇ ಭೇಟಿಕೊಟ್ಟಾಗಿತ್ತು. ಆದರೆ ಅದ್ಹೇಗೆ ಈ ಒಂದು ಸ್ಥಳ ನನ್ನ ಗಮನಕ್ಕೆ ಬರಲಿಲ್ಲ ಅಂತ ಇಲ್ಲಿ ಬಂದಮೇಲೆ ನನಗೆ ಅನಿಸಿತು. ನನಗಷ್ಟೇ ಅಲ್ಲ, ಈ ಸ್ಥಳದ ಪರಿಚಯ ಬಹಳ ಕಡಿಮೆ ಜನಕ್ಕೆ ಇದೆ ಎಂದೆನಿಸಿ, ಈ ಸ್ಥಳದ ಮಾಹಿತಿಯಬಗ್ಗೆ ಹಾಗು ಸಂಕ್ರಾಂತಿ ಹಬ್ಬದ ಬಗ್ಗೆ ಒಂದು ವಿಸ್ತೃತ ಲೇಖನ ಅವಶ್ಯವಿದೆ ಅನಿಸಿ, ಈ ಲೇಖನವನ್ನು ಬರೆಯಲು ನಿರ್ಧರಿಸಿದೆ. ಇದನ್ನು ಓದಿದಮೇಲೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನ ಈ "ತೊಣ್ಣೂರು ಕೆರೆಯನ್ನು" ನೋಡಲು ಹೋಗಬರಲಿ ಎಂದು ನನ್ನ ಆಶಯ......... ನಿಮಗೆ ವೀಕೆಂಡ್ ಪ್ರವಾಸದ ಹವ್ಯಾಸವೇನಾದರೂ ಇದ್ದಾರೆ ಈ ಸ್ಥಳವನ್ನು ಇಂದೇ ನಿಮ್ಮ ಲಿಸ್ಟಿಗೆ ಸೇರಿಸಿಕೊಳ್ಳಿ..... ನೋಡಿಬಂದಮೇಲೆ ಕಾಮೆಂಟ್ ಸೆಕ್ಷನ್ ನಲ್ಲಿ ನಿಮ್ಮ ಅನಿಸಿಕೆ ತಿಳಿಸುವುದನ್ನು ಮರೆಯಬೇಡಿ....... 😊