ಭಾನುವಾರ, ಜುಲೈ 28, 2019

ನಾಡು, ನುಡಿ ಮತ್ತು ಸಂಸ್ಕೃತಿಯೆಂಬ ಮಾಯೆಯ ಪಾಶದಲ್ಲಿ.....

ಹೆಚ್ಚಿನ ವಿದ್ಯಾಭ್ಯಾಸ ಮತ್ತು ಕೆಲಸದ ನಿಮಿತ್ತ್ಯ ನಾನು ಕೆಲವು ವರ್ಷ ಬೇರೆ ಬೇರೆ ದೇಶಗಳಲ್ಲಿ ಜೀವನಸಾಗಿಸಬೇಕಾದ ಅನಿವಾರ್ಯತೆ ಬಂತು. ಆ ಸಮಯದಲ್ಲಿ ನನಗೆ ನೆನಪಿಡಲೇಬೇಕಾದ ಅನೇಕ ವಿಶಿಷ್ಟ ಅನುಭವಗಳು ಆದದ್ದುಂಟು.  ಅಂತಹ ಅನುಭವಗಳನ್ನು ಕೆಲವೊಮ್ಮೆ ಎಲ್ಲರೊಂದಿಗೆ ಹಂಚಿಕೊಬೇಕೆನಿಸುತ್ತದೆ, ಜೊತೆಗೆ ಆ ತರಹದ ಗತಿಸಿದ ಅನುಭವಗಳೊಂದಿಗೆ, ಸಾಮಾನವಾದ ಪ್ರಸ್ತುತ ಘಟನೆಗಳನ್ನು ಪರಸ್ಪರ ಹೋಲಿಸಿದಾಗ ಏನಾದರು ಒಂದು ವಿಚಾರ ಹೇಳಬಹುದೇನೋ ಅಂತ ಅನಿಸಿತು.  ಹೊರದೇಶದಲ್ಲಿದ್ದಾಗ, ನಾನು ಬಿಡುವಿನ ವೇಳೆಯಲ್ಲಿ ಹೊರಗಡೆ ಎಲ್ಲಾದ್ರೂ ಹೋದ ಸಮಯದಲ್ಲಿ, ಅಥವಾ ಕೆಲಸಕ್ಕೋ...... ಇಲ್ಲ ವೀಕೆಂಡ್ನಲ್ಲಿ ಸಿನಿಮಾ, ಶಾಪಿಂಗ್ ಅಂತ ಹೋದಾಗ, ಅಲ್ಲಿ ಅಕಸ್ಮಾತ್ ನಮ್ಮ ದೇಶದವರನ್ನ ಯಾರನ್ನಾದ್ರೂ ನೋಡಿದ್ರೆ ಏನೋ ಒಂಥರಾ ಖುಷಿ ಅನಿಸಿಬಿಡೋದು. ಅಬ್ಬಾ ನಮ್ಮ ಕಡೆದವರು, ಹೋಗಿ ಮಾತಾಡಿಸಿಬಿಡ್ಲಾ...... ಮಾಮೂಲಾಗಿ, ಅವರು ಯಾವ ರಾಜ್ಯದವ್ರಿರ್ಬಹುದು, ಏನ್ ಭಾಷೆ ಮಾತಾಡ್ತಾರೋ, ಈ ದೇಶಕ್ಕೆ ಏನಕ್ಕೆ ಬಂದಿರಬಹುದು, ಈ ಥರ ಅನೇಕ ಪ್ರಶ್ನೆಗಳು ಹುಟ್ಟಿಬಿಡೋದು. ಭಾಷೆ ಯಾವುದಿದ್ದರೇನು, ಇದೆಯಲ್ಲ  ನಮ್ಮ ಹಿಂದಿ, ಅದು ಬರದಿದ್ರೆ, ಆಂಗ್ಲರು ಕೊಟ್ಟುಹೋದ ಬಳುವಳಿ, ಇಂಗ್ಲಿಷ್ನಲ್ಲಿ ಶುರುಹಚ್ಕೊಂಡರಾಯಿತು ಅಂತ ಅನ್ನಕೋತಿದ್ದೆ. ಇನ್ನು ವಿಶೇಷ ಅಂದ್ರೆ ಅವ್ರೇನಾದ್ರೂ ಕನ್ನಡದವರಾಗಿದ್ರೆ ಆಗೋ ಖುಷಿನೇ ಬೇರೆ. ಅದೇನೋ ಒಂಥರಾ ಸೆಳೆತ...... ನಮ್ಮವರು, ನಮ್ಮ ನಾಡಿನಿಂದ ಬಂದವರು, ಜಗತ್ತಿನ ಯಾವುದೋ ಮೂಲೇಲಿ ಮತ್ತೆ ಸಿಕ್ಕಾಗ ನಮ್ಮ ಊರಿಗೆ ಹೋದಷ್ಟು ಖುಷಿ. ವಿದೇಶದಲ್ಲಿರೋ ಬೇರೆ ಅನೇಕ ಭಾರತೀಯರಿಗೆ ಇದೇತರಹದ ಅನುಭವಗಳು ಆಗಿರಬಹುದು. ಆದರೂ ನಾನು ಜಪಾನಿನಲ್ಲಿದ್ದಾಗ ನನಗೆ ಈ ಥರ ಅನುಭವ ಆಗಿದ್ದು ಜಾಸ್ತಿ. ಏಕೆಂದ್ರೆ ಅಲ್ಲಿ ಭಾರತೀಯರ ಸಂಖ್ಯೆ ತುಂಬಾ ವಿರಳ, ಏನೋ ಅಪರೂಪಕ್ಕೆ ದೊಡ್ಡ ದೊಡ್ಡ ಊರುಗಳಲ್ಲಿ ಅಲ್ಲೋ ಇಲ್ಲೋ ಯಾರಾದ್ರೂ ದೇಶಿಗಳು ಸಿಗ್ಬಹುದು....ಒಂಥರಾ ಮರಭೂಮಿಯಲ್ಲಿ ಓಯಸಿಸ್ ಸಿಕ್ಕಂಗೆ ನೋಡಿ.....ಇತ್ತಿತ್ತಲಾಗಿ ಜಪಾನ ಮತ್ತು ಇನ್ನು ಅನೇಕ ಉತ್ತರದ ದೇಶಗಳಿಗೆ ಭಾರತೀಯರ ವಲಸೆ ಜಾಸ್ತಿ ಆಗಿದೆ....... ಆ ವಿಷಯ ಬೇರೆ.  

ಅದೇ ಅಮೇರಿಕಾದಲ್ಲಿ ಇದ್ದಾಗ ನನಗೆ ಅಷ್ಟೊಂದು ಅಪರೂಪ ಅನಿಸಲಿಲ್ಲ, ಕಾರಣ ಇಷ್ಟೇ, ಅಲ್ಲಿ ಪ್ರತಿ ಕಿಲೋಮೀಟರ್ಗೆ ಒಬ್ರು ದೇಸಿಗಳನ್ನ ಕಾಣಬಹುದು. ಇದು ಸಹಜವೂ ಕೂಡ, ಯಾಕೆಂದ್ರೆ ಜಗತ್ತಿನಲ್ಲೇ ಅತಿ ಹೆಚ್ಚು ಭಾರತೀಯರು ನೆಲೆಸಿರುವ ದೇಶ ಅಂದ್ರೆ ಅಮೇರಿಕಾ. ಯಾಕೋ ಗೊತ್ತಿಲ್ಲ, ಅಮೇರಿಕಾದಲ್ಲಿ ನಮ್ಮ ದೇಸಿಗಳು ಅಷ್ಟೊಂದು ಬೇಗನೆ ತಗಲಾಕೊಳ್ಳದೆ, ಕಂಡ್ರು ಕಾಣದವರಂಗೆ, ಒಂದು ಸಿಂಪೆಲ್ ಹಾಯ್ ಹೇಳಿ ದೂರವಾಗ್ತಾರೆ. ಆಗಲೇ ಹೇಳಿದ ಆಗೇ ದೇಸಿಗಳ ಸಂಖ್ಯೆ ಜಾಸ್ತಿ ಇರುವುದರಿಂದ ಅಷ್ಟೊಂದು ಅಪರೂಪ ಅನಿಸೋದಿಲ್ಲ ನೋಡಿ. ಹಾಸ್ಸ್ಯವಾಗಿ ನಾನು ಅನ್ನಕೋತಿದ್ದುದು ಏನೆಂದ್ರೆ, ಎಲ್ಲಿ ಮಾತಿಗಿಳಿದ್ರೆ ನಾಳೆ ಮನೆಹುಡ್ಕೊಂಡು ಬಂದೆ ಬಿಡ್ತಾನೇನೋ ಮಹಾರಾಯ ಎಂಬ ಭಯದಿಂದ ಇರಬಹುದಲ್ಲ ಅಂತ .....😄😄. 

ಇದು ವಿದೇಶದ ಕಥೆಯಾದ್ರೆ, ಇನ್ನು ನಮ್ಮ ಬೆಂಗಳೂರಿಗೆ ಬರೋಣ. ಇಲ್ಲಿ ಬಂದು ಕೂಡ ಈಗ ಹೆಚ್ಚುಕಡಿಮೆ ಐದು ವರ್ಷ ಕಳಿತು. ಅಂದಮೇಲೆ ಇಲ್ಲಿನೂ ಹೇಳ್ಕೊಳ್ಳೋಕೆ ಅಂತ ಲೆಕ್ಕವಿಲ್ಲದಷ್ಟು ಅನುಭವಗಳ ಸರಮಾಲೆ ರೆಡಿ ಆಗಿಬಿಟ್ಟಿದೆ ಅನ್ನಬಹುದು. ಬೆಂಗಳೂರು ಅಂದ್ರೆ ಈಗ ಬರಿ ನಮ್ಮ ರಾಜ್ಯದ ರಾಜಧಾನಿ ಅಷ್ಟೇ ಆಗಿರದೆ, ಬರ್ತಾ ಬರ್ತಾ ಒಂದು ಕಾಸ್ಮೋಪಾಲಿಟನ್ ನಗರ ಆಗಿಬಿಟ್ಟಿದೆ. ಇಲ್ಲಿ ಈಗ ರಾಜ್ಯದ ವಿವಿಧ ಭಾಗಗಳಿಂದ (ಉಕ, ಹೈಕ, ಮಕ, ಕುಡ್ಲ ಮತ್ತು ಕೊಂಕಣ) ಅಷ್ಟೇ ಅಲ್ಲದೆ, ದೇಶದ ವಿವಿಧ ಭಾಗಗಳಿಂದ ವಿವಿಧ ಭಾಷೆ ಮಾತನಾಡೋ ಜನರೆಲ್ಲಾ ಕೆಲಸದ ನಿಮಿತ್ತ್ಯ ನೆಲೆಊರಿದ್ದಾರೆ. ಹಾಗಾಗಿ ಇಲ್ಲಿ ವಿವಿಧ ಭಾಷೆ, ಸಂಸ್ಕೃತಿ, ವೇಷಭೂಷಣಗಳಿಂದ ಕೂಡಿದ ಜನರಿಂದ ಕೂಡಿದ ಬಹುಸಾಂಸ್ಕೃತಿಕ ನಗರವಾಗಿರುವುದನ್ನು ಕಾಣಬಹುದು. ದಿನದಿಂದ ದಿನಕ್ಕೆ, ಜನದಟ್ಟಣೆ, ವಾಹನದಟ್ಟಣೆ, ಕಾಂಕ್ರೀಟ್ ಕಾಡಿನ ಬೀಡಾಗುತ್ತಿರುವ ಈ ಉದ್ಯಾನನಗರಿ ಮುಂದೆ ಯಾವ ದಿಕ್ಕಿನತ್ತ ಸಾಗುತಿದೆಯೋ ನಾಕಾಣೆ!. 

ಅದೇನೇ ಇರಲಿ, ಇಲ್ಲಿ ನಾನು ಹೇಳಬೇಕಾಗಿದ್ದು ಬೇರೇನೇ ಇದೆ. ಬೆಂಗಳೂರು ಮೊದಲಿನಿಂದಲೂ ಪುಸ್ತಕೀಯ ಅಥವಾ ಸಿನಿಮೀಯ ಕನ್ನಡ ಮಾತನಾಡುವ ನಗರ. ರಾಜ್ಯದ ಬೇರೆ ಭಾಗದ ಕನ್ನಡಕ್ಕೂ, ಮತ್ತೆ ಬೆಂಗಳೂರಿನ ಕನ್ನಡಕ್ಕೂ ಬಹಳ ವ್ಯತ್ತ್ಯಾಸ. ಉದಾರಣೆಗೆ ನಮ್ಮ ಉತ್ತರ ಕರ್ನಾಟಕದ ಜವಾರಿ ಕನ್ನಡ ಭಾಷೆಯೊಂದಿಗೆ ತುಲನೆ ಮಾಡಿದ್ರೆ......ಅಯ್ಯೋ, ಅದು ಊಹಿಸಲಾಗದಷ್ಟು ಘೋರ ವ್ಯತ್ತ್ಯಾಸ ಕಣ್ಣ್ರೀ.....  ವಿಷಯ ಹೀಗಿರುವಾಗ, ನನ್ನಂತಹ ಒಬ್ಬ ಉತ್ತರಕರ್ನಾಟಕದಿಂದ ಬಂದ ವ್ಯಕ್ತಿಗೆ ಅಕಸ್ಮಾತಾಗಿ ನಮ್ಮ ಉತ್ತರಕರ್ನಾಟಕದ ಜವಾರಿ ಭಾಷೆ ಮಾತನಾಡೋರು ಸಿಕ್ಕಾಬಿಟ್ಟರೆ, ವಿದೇಶದಲ್ಲಿ ಒಬ್ಬ ಭಾರತೀಯನಿಗೆ ಇನ್ನೊಬ್ಬ ಭಾರತೀಯ ಸಿಕ್ಕಷ್ಟೇ ಖುಷಿ ಆಗುತ್ತದೆ ಅಂತ ಹೇಳೋದ್ರಲ್ಲಿ ಎರಡು ಮಾತಿಲ್ಲ. ಆ ನಾಡು ನುಡಿ ಸಂಸ್ಕೃತಿಯ ಸೆಳೆತದಲ್ಲಿರೋ ಅದ್ಭುತ ಶಕ್ತಿನೇ ಹಂಗೇರಿ. ನಾನು ಬೆಂಗಳೂರಿಗೆ ಬಂದಾಗಿನಿಂದ ಈ ನಗರದ ಪ್ರಮುಖ ಬಡಾವಣೆಗಳಲ್ಲಿ ಒಂದಾದ ಜೆಪಿ ನಗರದಲ್ಲಿನೇ ಐದುವರ್ಷ ಕಳೆದದ್ದು. ಆಮೇಲೆ ಬೆಂಗಳೂರಿನ ದಕ್ಷಿಣಬಾಗದ ಜಯನಗರ, ಜೆಪಿ ನಗರ, ಬನಶಂಕರಿ, ಅಥವಾ ಬಿಟಿಎಂ ಹೀಗೆ ಯಾವುದೇ ಬಡಾವಣೆ ಇರಲಿ, ಇಲ್ಲಿ ಉತ್ತರ ಕರ್ನಾಟಕದ ಜನರ ಸಂಖ್ಯೆ ಬಹಳ ಕಡಿಮೆ. ಅದೇ ನೀವು ರಾಜಾಜಿನಗರ, ವಿಜಯನಗರ ಅಥವಾ ನಾಗರಬಾವಿ ಮುಂತಾದ ಬಡಾವಣೆಗಳಿಗೆ ಹೋದ್ರೆ, ಅಮೇರಿಕಾದಲ್ಲಿ ದೇಸಿಯರು ಸಿಗೋಹಾಗೆ, ಪ್ರತಿಕಿಲೋಮೀಟರ್ಗೆ ಒಂದು ಉತ್ತರಕರ್ನಾಟಕದ ಹೋಟೆಲ್, ಅಥವಾ ದಿನಸಿ ಅಂಗಡಿ ಇಲ್ಲಾಂದ್ರೆ ಉತ್ತರಕರ್ನಾಟಕದ ಜನ ಸಿಗೋದು ಸರ್ವೇ ಸಾಮಾನ್ಯ. ಬಹುಪಾಲು ತುಮಕೂರು ರೋಡಿನಿಂದ ಬರೋ ಆ ಭಾಗದ ಎಲ್ಲ ಬಸ್ಸುಗಳು ಮೊದಲು ನಿಲ್ಲೋದು ರಾಜಾಜಿನಗರದ ನವರಂಗ ಥಿಯೇಟರ್ ಹತ್ರ ಇರೋದ್ರಿಂದ ನಮ್ಮ ಉತ್ತರಕರ್ನಾಟಕದ ಜನ ಸುಮ್ಮನೆ ಎಲ್ಲಿ ದೂರ ಹೋಗೋದು ಬಿಡ್ರಿ ಅಂತ ಅಲ್ಲೇ ಸುತ್ತಮುತ್ತ ಸೆಟ್ಲ್ ಆಗಿರ್ಬಹುದೇನೋ.......

ಬೆಂಗಳೂರಿನ ದಕ್ಷಿಣಭಾಗದ ನಿವಾಸಿಯಾದ ನನಗೆ, ಒಂದು ವಾರದ ಹಿಂದೆ, ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ, ಜೆಪಿ ನಗರದ 7ನೇ ಹಂತದಲ್ಲಿ, ರೊಟ್ಟಿ ಮನೆ ಅಂತ ಒಂದು ಉತ್ತರಕರ್ನಾಟಕದ ದಿನಸಿ ಅಂಗಡಿ ಕಣ್ಣಿಗೆಬಿತ್ತು. ಅಷ್ಟೇ ಅಲ್ಲ, ಅಂಗಡಿಯವನು ಸಂಜೆ ಮಳೆಬರುವ ಹೊತ್ತಿನಲ್ಲಿ ಉತ್ತರಕರ್ನಾಟಕದ ಪ್ರಸಿದ್ಧ, ಬಿಸಿ ಬಿಸಿ ಮೆಣಸಿನಕಾಯಿ ಬಜ್ಜಿಗಳನ್ನು (ಮಿರ್ಚಿ ಬಜ್ಜಿ) ಹಂಗೆ ಬಾಣಲಿಯಿಂದ ಇಳಿಸ್ತಾಯಿದ್ದ..... ನಾಲಿಗೆ ಚುರ್ರ್ ಎಂದಿತು. ನಮ್ಮ ಕ್ಯಾಬ್ ಡ್ರೈವರ್ಗೆ ನಿಲ್ಲಿಸೋಕೆ ಹೇಳಿ ಅಲ್ಲೇ ಇಳಿದುಬಿಟ್ಟೆ. ಅಂಗಡಿಯವನ ಹತ್ರ ಹೋಗಿ ಎಷ್ಟಪ್ಪಾ ಒಂದು ಪ್ಲೇಟಿಗೆ ಅಂತ ಕೇಳ್ತಾ......ಹಂಗೆ ಸ್ವಲ್ಪ ಮುಂದುವರಿದು ಯಾವ ಊರಿನವರು, ಇಲ್ಲಿಗೆ ಬಂದು ಎಷ್ಟು ದಿನ ಅಂತೆಲ್ಲ ಕೇಳ್ತಾ ಮಾತಿಗಿಳಿದೆ. ಅವನು "ನಾವು ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರಿನವರ ರೀ ಸರ, ಅಂದಂಗ ನಿಮ್ಮದು ಯಾವ ಊರರಿಪ" ಅಂದಾ. ಆಲಾಇವನ, ಇವನು ನಮ್ಮ ಊರಿನ ಹತ್ತಿರದವನಲೇಪಾ ಅಂತ ಬಹಳ ಖುಷಿ ಆಯಿತು. ಆಮೇಲೆ ಇದ್ದೆ ಇದೆ, ಪಕ್ಕದ ಊರಿನವ ಅಂದಮೇಲೆ ಆಕಡೆ ವಿಷಯಗಳು, ಮಳೆ, ಬೆಳೆ, ಅಂತ ಮಾತನಾಡುತ್ತ ಮನೆಯವರಿಗೆಲ್ಲ ಸೇರಿಸಿ ನಾಲ್ಕು ಪ್ಲೇಟ್ ಬಜ್ಜಿ ಪಾರ್ಸಲ್ ತೊಗೊಂಡು ಹೋಗಿ ಎಲ್ಲರೊಂದಿಗೆ ಹಂಚಿಕೊಂಡು ತಿಂದು ಸಂತೋಷಪಟ್ಟಿವಿ. ಆ ಅನುಭವ ಹೇಗಿತ್ತೆಂದ್ರೆ ನಮ್ಮ ಊರಿನಲ್ಲೇ ಕುಂತು ತಿಂದಷ್ಟೇ ಖುಷಿಯಾಯಿತು.....

ಒಟ್ಟಿನಲ್ಲಿ ಹೇಳೋದಂದ್ರೆ, ನಾವು ಎಲ್ಲೇ ಹೋದರು, ಹೇಗೆ ಇದ್ದರೂ,  ನಮ್ಮ ನಾಡು, ನುಡಿ, ಸಂಸ್ಕೃತಿ ಅನ್ನುವ, ನಾವು ಮರೆತರು ನಮ್ಮನ್ನ ಬಿಡದಿ ಮಾಯೆ ಅನ್ನೋಥರ, ಆ ಒಂದು ವ್ಯಕ್ತಿ ಅಥವಾ ವಸ್ತುವಿನ ಆಕಸ್ಮಿಕ ಭೇಟಿಯ ಮೂಲಕ ನಮ್ಮ ಮೂಲ ನೆಲೆಗೆ ಕರೆದುಕೊಂಡು ಹೋಗುವದರಲ್ಲಿ ಎರಡುಮಾತಿಲ್ಲ.....ನಾವು ಬೇರೆ ದೇಶದಲ್ಲಿದ್ದಾಗ ನಮ್ಮ ದೇಶದವನ್ನು ಕಂಡಾಗ, ಬೇರೆ ರಾಜ್ಯದಲ್ಲಿದ್ದಾಗ ನಮ್ಮ ರಾಜ್ಯದವರನ್ನು ಕಂಡಾಗ ಅಥವಾ ನಮ್ಮ ರಾಜ್ಯದಲ್ಲೇ ಬೇರ ಊರಿನಲ್ಲಿದಾಗ ನಮ್ಮ ಊರು/ಭಾಗದವರು ಭೇಟಿಯಾದಾಗ ಆಗುವ ಅನಿಸಿಕೆಗಳು ಒಂದೇ ರೀತಿಯ ಅನುಭವಗಳನ್ನು ಕೊಡುತ್ತವೆ.... 

ನಿಮಗೂ ಈ ತರಹದ ಅನುಭವಗಳು ಆಗಿದ್ದರೆ ಕೆಳಗಿನ ಕಾಮೆಂಟ್ ಭಾಗದಲ್ಲಿ ಹಂಚಿಕೊಳ್ಳಬಹುದು......