ಭಾನುವಾರ, ಡಿಸೆಂಬರ್ 31, 2017

ಪ್ರಾರಂಭದ ಎರಡು ಮಾತುಗಳು....

ಮನಸು ಎಂಬ  ಮರ್ಕಟವನ್ನು ಒಂದೆಡೆ ನಿಲ್ಲಿಸಿ ಅಗೆದು ಅಂತರಾಳಕ್ಕೆ ಹೋದಾಗ ಸಿಗುವ ಅನಿಸಿಕೆಗಳು ಅನಂತಾನಂತ. ಈ ಅಂತರಾಳದ ಅನಿಸಿಕೆಗಳನ್ನು ಮನಸಲ್ಲೇ ಮುಚ್ಚಿಟ್ಟರೆ ಅವು ಮಾತುಗಳಾಗಿ ಮಾರ್ಪಾಟಾಗದೆ ಮರೆತು ಹೋಗುತ್ತವೆ. ನನ್ನ ಅಂತರಾಳದ ಇಂತಹ ಅದೆಷ್ಟೋ ಅನಿಸಿಕೆಗಳನ್ನು ಅಗೆದು ಹೊರತೆಗೆದು ಎಲ್ಲರೊಂದಿಗೆ ಹಂಚಿಕೊಳ್ಳೋದ್ರಲ್ಲಿ ಏನೋ ಒಂದು ಖುಷಿ.  ಜೀವನದ ಪಯಣದಲ್ಲಿ ಏನೇನೋ ಹೊಸ ಅನುಭವಗಳಾಗಿರ್ತಾವೆ, ಯಾವುದೊ ವಿಶಿಷ್ಟ ವ್ಯಕ್ತಿತ್ವದ ಜನರನ್ನ ಭೆಟ್ಟಿಆಗಿರ್ತಿವಿ, ಎಲ್ಲೋ ಒಂದು ಕಥೆ ಓದಿರ್ತೀವಿ, ಯಾರದೋ ಕಥೆ/ಕವನಗಳ ಸಾಲುಗಳು ಇಷ್ಟವಾಗಿರ್ತವೆ, ಒಂದು ಒಳ್ಳೆ ಚಲನಚಿತ್ರ, ಒಂದು ಒಳ್ಳೆ ಪ್ರವಾಸಿ ಸ್ಥಳಕ್ಕೆ ಹೋದ ಅನುಭವಗಳು. ಇಂತಹ ಅದೆಷ್ಟೋ ಅನುಭವ/ಅನಿಸಿಕೆಗಳ ಭಂಡಾರ ಪ್ರತಿಯೊಬ್ಬರ ಜೀವನದಲ್ಲೂ ಇರತ್ತೆ. ಅದನ್ನೆಲ್ಲ ತಮ್ಮೆಲ್ಲರ ಜೊತೆ ಈ ಹೊಸ ಬ್ಲಾಗ್  ಮೂಲಕ ಹಂಚಿಕೊಳ್ಳೋ ಒಂದು ಚಿಕ್ಕ ಪ್ರಯತ್ನ ಮಾಡ್ತಾಯಿದ್ದೀನಿ. ಅದು ಒಂದು ರಾಜಕೀಯ ವಿಷಯ ವಿರಬಹುದು, ಒಂದು ವೈಜ್ನ್ಯಾನಿಕ ಚರ್ಚೆ ಇರಬಹುದು, ಧಾರ್ಮಿಕ ವಿಷಯಗಳ ಅಭಿಪ್ರಾಯಗಳಿರಬಹದು, ಅಥವಾ ಪತ್ರಿಕೆಯಲ್ಲಿ ಬಂದ ವಿಶೇಷ ವಾರ್ತೆ ಇರಬಹದು, ಎಲ್ಲವನ್ನು ಒಂದು ಚೌಕಟ್ಟಿನಲ್ಲಿ ತರುವ ಪ್ರಯತ್ನ ಅಷ್ಟೇ.

ಈಗಾಗಲೇ ನಾನು ಒಂದು ಬ್ಲಾಗ್ ಬರೀತಾಇದ್ದಿನಿ. ಆದರೆ ಅದು ನನ್ನ ಮೂಲ ವೃತ್ತಿಯಾದ ಸಂಶೋಧನೆಗೆ ಹಾಗು ರಸಾಯನಶಾಸ್ತ ವಿಷಯಕ್ಕೆ ಸಂಬಂಧ ಪಟ್ಟ ಬ್ಲಾಗ್ ಅಷ್ಟೇ ಆಗಿದ್ದು, ಅಲ್ಲಿ ಒಂದು ಪರಿಮಿತಿಯನ್ನು ಮೀರಿ ಬರೆಯೋಕ್ಕೆ ನನಗೆ ಅವಕಾಶವಿರಲಿಲ್ಲ. ಅದಕ್ಕಾಗಿಯೇ ಯಾವುದೇ ಪರಿಮಿತಿ ಇಲ್ಲದ ಅನೇಕ ವಿಷಯಗಳ ಬಗ್ಗೆ ಬರೆಯಬಲ್ಲ ಒಂದು ಹೊಸ ಬ್ಲಾಗ್ ರಚನೆ ಮಾಡಿದ್ದೀನಿ. ಮೇಲಾಗಿ ಇದನ್ನು ನನ್ನ ಮಾತೃಭಾಷೆಯಾದ ಕನ್ನಡದಲ್ಲಿಯೇ ಬರೆಯಬೇಕೆನ್ನುವ ಉದ್ದೇಶ ಯಾಕೆಂದ್ರೆ, ಹೃದಯಾಳದ ಎಷ್ಟೋ ಮಾತುಗಳನ್ನು ಬೇರೆ ಭಾಷೆಗಳ ಸಹಾಯದಿಂದ ಭಾವನಾತ್ಮಕವಾಗಿ ಹೇಳೋಕಾಗಲ್ಲ.

ಎಷ್ಟೋಸಲ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಏನೇನೋ ಗೀಚುತ್ತಿರ್ತೀನಿ. ಟ್ವಿಟ್ಟರ್, ಫೇಸ್ಬುಕ್, ವಾಟ್ಸಪ್ ಹೀಗೆ ಅನೇಕ ಸಾಮಾಜಿಕ ಜಾಲತಾಣಗಳ ಸಹಾಯ ತೊಗೊಡಿದ್ದೀನಿ.  ಆದರೆ ಸಾಮಾಜಿಕ ಜಾಲತಾಣಗಳ ಸಮಸ್ಯೆ ಏನಂದರೆ ಅಲ್ಲಿ ಸ್ಥಳದ ಅಭಾವ ಮತ್ತು ತಾಂತ್ರಿಕ ಸವಾಲುಗಳನ್ನು ಎದುರಿಸಬೇಕಾಗುತ್ತಾರೆ

"ನನ್ನ ಅಂತರಾಳದ ಅನಿಸಿಕೆಗಳು" ಎಂಬ ಶೀರ್ಷಿಕೆ ಯೊಂದಿಗೆ ಪ್ರಾರಂಭಿಸಿದ್ದೇನೆ. ಮುಂದಿನ ದಿನಗಳಲ್ಲಿ ಮೇಲೆ ಹೇಳಿದ ವಿವಿಧ ವಿಷಯಗಳ ಬಗ್ಗೆ ಒಂದೊಂದಾಗಿ ಬರೆಯುತ್ತಾ ಹೋಗತೇನೆ. ತಪ್ಪದೆ ಓದಿ ತಮ್ಮ ಅಭಿಪ್ರಾಯ/ಟಿಪ್ಪಣಿಗಳನ್ನು ತಪ್ಪದೆ ಬರೆದು ಪ್ರೋತ್ಸಾಹಿಸಿ. ಟಿಪ್ಪಣೆಗಳಂತೆ ಟೀಕೆಗಳನ್ನೂ ಕೂಡ ಅಷ್ಟೇ ಸಂತೋಷದಿಂದ ಸ್ವೀಕರಿಸುತ್ತೇನೆ ಮತ್ತು ಸುಧಾರಣೆಗಳಿಗೆ ಅವಕಾಶಗಳಿದ್ದರೆ ಅದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇನೆ.

ಧನ್ಯವಾದಗಳು
ನಿಮ್ಮ ಗುರುರಾಜ