ಮಂಗಳವಾರ, ಡಿಸೆಂಬರ್ 29, 2020

ಬ್ಲಾಗ್ ರೈಟಿಂಗ್ ಎಂಬ ಇತ್ತೀಚಿನ ಗೀಳು.....


ಬರೆಯುವುದು ಒಂದು ಕಲೆ! ಒಬ್ಬ ಬರಹಗಾರ ತನ್ನ ವಿಚಾರ, ಅನುಭವ ಮತ್ತು ಭಾವನೆಗಳನ್ನು ಜಗತ್ತಿಗೆ ತಿಳಿಸಬಯಸುವ ಮಾಧ್ಯಮವೇ ಬರವಣಿಗೆ. ಒಂದು ಸಂವಾದ, ಸಂಭಾಷಣೆ, ಓದು, ಪ್ರವಾಸ ಹೀಗೆ ಅನೇಕ ಮಾಧ್ಯಮಗಳ ಮೂಲಕ ಹೊಸ ಹೊಸ ವಿಚಾರ ಮತ್ತು ಅನುಭವಗಳಾಗಲಿ, ಭಾವನೆಗಳಾಗಲಿ ನಮ್ಮಲ್ಲಿ ಶೇಖರಣೆ ಆದಾಗ, ಒಬ್ಬ ಒಳ್ಳೆಯ ಲೇಖಕ ಅವುಗಳಿಗೆ ಸುಂದರವಾದ ಶಬ್ದಗಳನ್ನು ಪೋಣಿಸುತ್ತಾ ಒಂದು ರೂಪ ಕೊಡುತ್ತಾನೆ. ಕೆಲವು ಲೇಖಕರು ಇತಿಹಾಸ, ತತ್ವ-ಸಿದ್ಧಾಂತ, ಶ್ರೇಷ್ಠ ವ್ಯಕ್ತಿಗಳ ಜೀವನ ಚರಿತ್ರೆ, ಮುಂತಾದ ವಿಷಯಗಳ ಲೇಖನ/ಪುಸ್ತಕಗಳನ್ನು ಬರೆದರೆ ಇನ್ನು ಕೆಲವು ಭಾವನಾತ್ಮಕ ಜೀವಿಗಳು ತಮ್ಮ ಭಾವನೆಗಳನ್ನು ಕಥೆ, ಕವನ ಮತ್ತು ಕಾದಂಬರಿಗಳನ್ನು ಬರೆಯುವುದರ ಮೂಲಕ ವ್ಯಕ್ತಪಡಿಸುತ್ತಾರೆ. ಇನ್ನು ಕೆಲವು ಲೇಖಕರು ಪತ್ರಿಕೆ ಅಥವಾ ನಿಯತಕಾಲಿಕೆಗಳಿಗೆ ಅಂಕಣಗಳನ್ನು ಬರೆದು ಓದುಗರು ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಈ ಮೂರು ವರ್ಗಗಳನ್ನು ಬಿಟ್ಟರೆ ಇತ್ತೀಚಿಗೆ ಕಂಡುಬರುವ ಇನ್ನೊಂದು ವರ್ಗವೆಂದರೆ ಬ್ಲಾಗ್ ಬರಹಗಾರರು. ಮುಂಚೆ ಬರೆಯುವ ಹವ್ಯಾಸ ಇರುವವರು, ತಮ್ಮ ಪುಟ್ಟ ಪುಟ್ಟ ಲೇಖನ, ಕಥೆ, ಕವನಗಳನ್ನು, ವಾರಪತ್ರಿಕೆ ಮಾಸಪತ್ರಿಕೆಗಳಲ್ಲಿ ಬರೀತಾಇದ್ದರು. ಈಗಲೂ ಕೂಡ ಕೆಲವರು ಈ ಹವ್ಯಾಸ ಬಿಟ್ಟಿಲ್ಲ. ಆದರೆ, ಈ ಬ್ಲಾಗ್ ಪದ್ಧತಿ ಬಂದಮೇಲೆ, ತಮ್ಮದೇ ಸ್ವಂತ ಬ್ಲಾಗ್ ಸೃಷ್ಟಿಸಿ ಅದರಲ್ಲಿ ಬರೆಯುದು ಸರ್ವೇ ಸಾಮಾನ್ಯ ಆಗ್ತಾಯಿದೆ. ಹೇಳಬೇಕಂದ್ರೆ ಕೇವಲ ಕನ್ನಡ ಭಾಷೆಯಲ್ಲಿಯೇ ಎಣಿಕೆಗೆ ಸಿಗದಷ್ಟು ಬ್ಲಾಗುಗಳು ಅಂತರ್ಜಾಲದಲ್ಲಿ ಪ್ರಚಲಿತದಲ್ಲಿವೆ. ನಾನು ಅನೇಕ ಇಷ್ಟವಾದ ಬ್ಲಾಗುಗಳನ್ನು ಪಟ್ಟಿ ಮಾಡಿದ್ದೂ, ಸಮಯ ಸಿಕ್ಕಾಗ ಓದುತ್ತ ಇರ್ತೀನಿ. ಇದರಲ್ಲಿ ಅನೇಕ ರೀತಿಯ ವಿಷಯಗಳಬಗ್ಗೆ ಲೇಖನಗಳು ನಿಮಗೆ ಸಿಗುತ್ತವೆ. ಕೆಲವರು ತಮ್ಮ ಅನುಭವಗಳಬಗ್ಗೆ ಬರೆದರೆ, ಕೆಲವರು ತಮ್ಮ ಪ್ರವಾಸ ಕಥನಗಳು, ಪುಸ್ತಕ ವಿಶ್ಲೇಷಣೆ, ಅಡುಗೆ, ರಾಜಕೀಯ, ಹಾಸ್ಸ್ಯ , ಹೀಗೆ ಬರಿತ ಹೋದರೆ, ಇನ್ನು ಕೆಲವರು ಕೇವಲ ಕವನಗಳಿಗೆ ತಮ್ಮ ಬ್ಲಾಗುಗಳನ್ನು ಸೀಮಿತಮಾಡಿರುವುದು ಕಂಡುಬರುತ್ತದೆ.

ಇತ್ತೀಚೆಗೆ ನಾನು ಅಲ್ಪ ಸ್ವಲ್ಪ ಈ ಬರೆಯುವ ಗೀಳು ಹಚ್ಚಿಕೊಂಡರು ಇನ್ನು ಅಷ್ಟೊಂದು ಪ್ರಭುದ್ದತೆ ಬಂದಿಲ್ಲ. ಆದರೆ ಈ ಬರೆಯುವ ಗೀಳು ಒಂಥರಾ ಸ್ಟ್ರೆಸ್ ಬಸ್ಟರ್ ಅನ್ನಬಹುದು. ಯಾಕಂದ್ರೆ ನಿಮ್ಮ ತಲೇಲಿ ಏನೇನೋ ಯೋಚನೆಗಳು, ವಿಚಾರಗಳು, ಅನುಭವಗಳು ಬರೋದು ಸಹಜ. ಅವನ್ನೆಲ್ಲ ಅಚ್ಚುಕಟ್ಟಾಗಿ ಒಂದು ರೂಪ ಕೊಟ್ಟು ಡೈರಿನಲ್ಲೋ, ಇಲ್ಲ ಇತ್ತೀಚಿನ ಬದ್ಧತಿಯಂತೆ ಬ್ಲಾಗಿನಲ್ಲೋ ಗೀಚಿ ಹೊರಹಾಕಿದರೆ, ಮನಸಿಗೆ ಏನೋ ಒಂಥರಾ ಹಗುರವಾದ ಬಾಸವಾಗುವುದು ಸಹಜ. ಎಲ್ಲವನ್ನು ಖಾಲಿ ಮಾಡಿ ರಿಲ್ಯಾಕ್ಸ್ ಆದ ಅನುಭವ ಬರುತ್ತದೆ.



ಲೇಖನಗಳ ಗುಣಮಟ್ಟವು, ಬರಹಗಾರರ ಭಾಷ ಶೈಲಿ, ವಿಷಯಗಳನ್ನು ಹೇಳುವ ರೀತಿ, ಓದುಗರನ್ನು ತರ್ಕಕ್ಕಿಳಿಸುವ ಚಾಕ್ಯಚಕ್ಕತೆ, ಇವುಗಳಮೇಲೆ ಅವಲಂಬಿತವಾಗಿರುತ್ತದೆ. ನನ್ನ ಅನುಭವದ ಪ್ರಕಾರ ಕರ್ನಾಟಕದಲ್ಲಿ ಎರಡು ಪ್ರಕಾರದ ಬರಹಗಾರರನ್ನಾಗಿ ವಿಂಗಡಿಸಬಲ್ಲೆ. ಈ ಬಯಲುಸೀಮೆ, ಮಧ್ಯ ಮತ್ತು ದಕ್ಷಿಣ ಕರ್ನಾಟಕದವರ ಬರವಣಿಗೆ ಒಂದು ಪ್ರಕಾರವಾದರೆ, ಮಲೆನಾಡಿನ ತಪ್ಪಲಿನಿಂದ ಬರುವ ಬರಹಗಾರರ ಶೈಲಿಯೇ ಬೇರೆ. ಮಲೆನಾಡಿನ ಹಚ್ಚ ಹಸುರಿನ ಪ್ರಕೃತಿ ಮಡಿಲಲ್ಲ ಬೆಳೆದು ಬಂದ ಈ ಮಹಾನುಭಾವರಲ್ಲಿ ಹುಟ್ಟಿನಿಂದಲೇ ಈ ಕಲೆ ಬಂದಿರುತ್ತೋ ಏನೋ ಗೊತ್ತಿಲ್ಲ, ಈ ಕಥೆ ಮತ್ತು ಕವನ ಬರೆಯುವುದರಲ್ಲಿ ಈ ಭಾಗದ ಜನರು ಎತ್ತಿದ ಕೈ. ಅವರ ಲೇಖನಗಳಲ್ಲಿ, ಆ ಹಸಿರು ಸಿರಿಯ ಗಿಡ-ಮರ, ಜರಿ-ಜಲಪಾತಗಳ ಮಧ್ಯೆ ಸುಯ್ಯಂತೆ ಸುಳಿದುಬರುವ ಸಂಪಾದ ತಂಗಾಳಿ ಸೋಕಿದಂತಹ ಅನುಭವ ಓದುಗರಿಗೆ ಬರುವುದು ಸರ್ವೇ ಸಾಮಾನ್ಯ. ಇದನ್ನು ಪ್ರಕೃತಿದತ್ತವಾಗಿ ಬಂದ ಬಳುವಳಿ ಎನ್ನಬಹುದೇ???

ಭಾನುವಾರ, ಡಿಸೆಂಬರ್ 20, 2020

ಹೊಸಪೇಟೆಯ ಕೆಮ್ಮಣ್ಣಿನ ಧೂಳಿನಲ್ಲಿ ಕಳೆದ ಆ ದಿನಗಳು

ಬೆಳಗಿನ 6-00 ಘಂಟೆ,  ಬಯಲು ಸೀಮೆ, ಬಳ್ಳಾರಿ ಜಿಲ್ಲೆಯ ಮೈಕೊರೆಯುವ ಚಳಿಗೆ ಮೈ ಮುದುರಿಕೊಂಡು ಹಾಸಿಗೆಯಲ್ಲಿ ಹೊರಳಾಡುತ್ತಿರುವಾಗ, ಕೆಳಗಡೆ ಫ್ಲೋರಿನಿಂದ "ನಲ್ಲಿಯಲ್ಲಿ ನೀರು ಬರ್ತಾಇದೇ, ಬೇಗ ಬಂದು ನೀರು ತುಂಬಿಕೊಳ್ಳಿ ಎಲ್ಲ್ರು" ಅಂತ ಮನೆಯ ಓನರ್ ಅಜ್ಜಿಯ ಕೂಗು ಕೇಳಿಬಂತು.  ಎಷ್ಟೊಂದು ಕರ್ಕಶ ಅವಳ ಕೂಗು, ಈ ಚಳಿಯಲ್ಲಿ ಯಾಕಾದ್ರೂ  ನರಕ ಯಾತನೆ ಕೊಡ್ತಿದ್ದಾಳಪ್ಪ, ಅನ್ನೋವಷ್ಟು ಸಿಟ್ಟು ಬರ್ತಾಇದೇ . ಆದ್ರೆ ಏನ್ ಮಾಡೋದು ಈ ಕಾರ್ಪೋರೇಶನ್ ನೀರು ದಿನಕ್ಕೆ ಒಂದು ತಾಸು ಅಷ್ಟೇ ಬರೋದು. ಮನೇಲಿ ಬೋರ್ವೆಲ್ ವ್ಯವಸ್ಥೆ ಬೇರೆ ಇಲ್ಲ. ಈಗ ಎದ್ದು ನೀರು ತುಂಬಿಕೊಳ್ಳಿಲ್ಲ ಅಂದ್ರೆ ಅದೋಗತಿ. ನಾವೋ ಬ್ಯಾಚುಲರ್ ಹುಡುಗ್ರು, ನೀರು ತುಂಬಿಕೊಳ್ಳೋಕೆ ನಮ್ಮ್ ಹತ್ರ ಒಂದು ಪ್ಲಾಸ್ಟಿಕ್ ಕೊಡ, ಬಿಟ್ಟರೆ ಒಂದು ಬಕೆಟು. ಅಷ್ಟ್ರಲ್ಲಿ ಅಯ್ಯೋ ೭-೩೦ ಗೆ ಕಂಪನಿ ಬಸ್ಸು  ಬೇರೆ ಬರತ್ತೆ, ಬೇಗ ಎದ್ದು ರೆಡಿ ಆಗ್ಬೇಕು. ನನ್ನ ರೂಮೇಟ್ ಸಂತೋಷನ್ನ ಎಬ್ಬಿಸಿದೆ, "ಸಂತೋಷ,  ಎಳ್ರಿ ನೀರು ತುಂಬ್ಕೊಂಡ್ ಬರೋಣ, ಆಫೀಸಿಗೆ ಟೈಮ್ ಆಗತ್ತೆ, ಬೇಗ ರೆಡಿ ಆಗ್ಬೇಕು" ಅಂದೆ. ಸಂತೋಷ ಗದಗಿನವನು, ಇಬ್ರು ಹೊಸಪೇಟೆಯ ಪ್ರತಿಷ್ಠಿತ ಕಬ್ಬಿಣದ ಅದಿರು ತೆಗೆಯುವ ಕಂಪನಿಯ ಕ್ವಾಲಿಟಿ ಕಂಟ್ರೋಲ್ ಮತ್ತು ಸಂಶೋಧನಾ ಪ್ರಯೋಗಾಲಯದಲ್ಲಿ ರಾಸಾಯನಶಾಸ್ತ್ರಜ್ಞರಾಗಿ ಸೇರಿಕೊಂಡು, ಕಂಪನಿಯ ಹೆಡ್ ಆಫೀಸ್ ಪಕ್ಕ ಐದು ನಿಮಿಷ ನಡೆದು ಹೋಗಬಲ್ಲ ದೂರದಲ್ಲಿ ಒಂದು ರೂಮ್ ಬಾಡಿಗೆ ಹಿಡಿದಿದ್ವಿ. ನಮ್ಮನ್ನೆಲ್ಲ ಹೊಸಪೇಟೆಯಿಂದ 12 ಕಿಲೋಮೀಟರು ದೂರವಿರುವ ಕಂಪನಿಯ ಕಬ್ಬಿಣದ ಅದಿರಿನ ಗಣಿಗೆ ಕರೆದೊಕೊಂಡು ಹೋಗುವ ಬಸ್ಸು ಇಲ್ಲಿಂದಲೇ ಪ್ರಯಾಣ ಬೆಳೆಸುತ್ತಿತ್ತು. ಈ ಬಸ್ಸು ಅಕಸ್ಮಾತ್ ಮಿಸ್ಸಾದರೆ ಅದೋಗತಿ. ಆಮೇಲೆ ಅತ್ತಕಡೆ ಹೋಗುವ ಯಾವುದಾದರು ಜೀಪಿಗಾಗಿ ಕಾಯಬೇಕಿತ್ತು. 

ಎಂಎಸ್ಸಿ ಮುಗಿಸಿದಮೇಲೆ ರನ್ನನ ಮಾಧೋಳದ ಒಂದು ಪುಟ್ಟ ಕಾಲೇಜಿನಲ್ಲಿ ಆರು ತಿಂಗಳು ಉಪನ್ಯಸಕನಾಗಿ ಕೆಲಸ ಮಾಡುತ್ತಿರುವಾಗ, ಒಂದು ದಿನ ಹೊಸಪೇಟೆಯ ಈ ಕಂಪನಿಯಿಂದ ನೌಕರಿ ಆಫರ್ ಬರುತ್ತೆ. ಉಪನ್ಯಾಸಕನಾಗಿ ಪಡೆಯುತ್ತಿದ್ದ ಸಂಬಳಕ್ಕಿಂತ, ಈ ಕಂಪನಿ ಕೊಡುವ ಸಂಬಳ ಮೂರು ಪಟ್ಟು ಜಾಸ್ತಿ ಇತ್ತು. ಜೊತೆಗೆ ಸಂಶೋಧನೆ, ಲ್ಯಾಬೋರೇಟೋರಿಯಲ್ಲಿ ಕೆಲಸ ಬೇರೆ. ಖಾಸಗಿ ಕಂಪನಿ ಕೆಲಸ ಸ್ವಲ್ಪ ಕಠಿಣ ಇರುತ್ತೆ, ಇಷ್ಟೊಂದು ಆರಾಮ ಇರಲ್ಲ ಅಂತೆಲ್ಲ ಹೇಳಿದ್ರು ಕಾಲೇಜು ಮ್ಯಾನೇಜುಮೆಂಟಿನವರು. ಆದರೂ ಇದು ಹೊಸ ಕೆಲಸ, ಕಲಿಯಲು ಬಹಳಷ್ಟು ಅವಕಾಶಗಳಿರುತ್ತವೆ ಅಂತೆಲ್ಲ ಯೋಚಿಸಿ, ಸಧ್ಯದ ನೌಕರಿಯನ್ನು ಅರ್ಧಕ್ಕೆ ನಿಲ್ಲಿಸಿ, ಹೊಸಪೇಟೆಯತ್ತ ಪ್ರಯಾಣ ಬೆಳೆಸಿದ್ದೆ. ಆ ಸಮಯದಲ್ಲಿ ನಾನು ತೆಗೆದುಕೊಂಡ ನಿರ್ಧಾರ ಸರಿ ಅನಿಸಿತು.  

ಅದು ಬಳ್ಳಾರಿ ಜಿಲ್ಲೆಯಲ್ಲಿಯೇ ದೊಡ್ಡ ಕಬ್ಬಿಣ ಅದಿರು ಮಾರಾಟ ಮಾಡುವ ಕಂಪನಿ. ಹೊಸಪೇಟೆಯ ಸುತ್ತಲಿನ ಕೆಂಪು ಗುಡ್ಡಗಳಲ್ಲಿ ಕಬ್ಬಿಣದ ಅದಿರನ ಅಪಾರವಾದ ಖಜಾನೆಯೇ ಇದೆ. ನಾನು ಸೇರಿದ ಈ ಕಂಪನಿಯವರು ಆ ಗುಡ್ಡಗಳನ್ನು ಅಗೆದು, ಕಬ್ಬಿಣದ ಅದಿರನ್ನು ಹೊರತೆಗೆದು ದೇಶ ವಿದೇಶಗಳಿಗೆ ಮಾರಾಟ ಮಾಡುತಿದ್ದರು. ಹೊಸಪೇಟೆಇಂದ 12 ಕಿಲೋಮೀಟರು ದೂರದ ವ್ಯಾಸನಕೆರೆ ಗುಡ್ಡಗಳಲ್ಲಿ ಇದ್ದ ಈ ಕಂಪನಿಯ ಮೈನ್ಸ್ ಮಧ್ಯೆ ಒಂದು ಪುಟ್ಟದಾದ ಲ್ಯಾಬೊರೇಟರಿಯಲ್ಲಿನೇ ನಮ್ಮ ಕೆಲಸ.  ಪ್ರಯೋಗಾಲಯವನ್ನು ಸುವ್ಯವಸ್ಥಿತವಾಗಿ ಮಾಡಿದ್ದರು. ಹೊಸಪೇಟೆಯ  ಮಧ್ಯದಲ್ಲಿನ ಹೆಡ್ ಆಫೀಸಿನಿಂದ ಬೆಳಿಗ್ಗೆ ಹೋರಾಟ ಬಸ್ಸಿನಲ್ಲಿ ವ್ಯಾಸನಕೆರೆಯ ಈ ಗಣಿಗೆ ಬಂದು ಸೇರಿಬಿಟ್ಟರೆ,  ದಿನಪೂರ್ತಿ ಆ ಕೆಂಪುಗುಡ್ಡಗಳ ಮಧ್ಯೆ ಕೆಂಪು ಮಣ್ಣಿನ ಧೂಳಿನಲ್ಲಿಯೇ ಜೀವನ ಕಳೆಯಬೇಕು. ಮತ್ತೆ ಸಂಜೆ 5-30 ಕ್ಕೆ ಅದೇ ಬಸ್ಸಿನಲ್ಲಿ ವಾಪಸ್ ಊರು ಸೇರುತ್ತಿದ್ದೆವು. ಸಂಜೆ ಮನೆಗೆ ಬಂದರೆ ಮೈಯೆಲ್ಲ ಕೆಂಪು ಕೆಂಪು, ಅಂದು ತೊಟ್ಟ ಬಟ್ಟೆಗಳನ್ನ ಮರುದಿನ ಹಾಕಲಾರದಷ್ಟು ಕೊಳೆಯಾಗುತಿದ್ದವು. ಅದಕ್ಕಾಗಿ ಇಲ್ಲಿರುವವರೆಗೆ ದಿನಕ್ಕೆ ಎರಡುಸಲ ಸ್ನಾನ ಖಡ್ಡಾಯವಾಗಿತ್ತು...

ಅಂತು ಇಂತು ನಾನು ಮತ್ತು ಸಂತೋಷ ನಲ್ಲಿಯಿಂದ ನಮಗೆ ಬೇಕಾದಷ್ಟು ನೀರು ತಂದು ಸ್ನಾನ ಎಲ್ಲ ಮುಗಿಸಿ ರೆಡಿ ಆದ್ವಿ. ಮನೆಯ ಟೆರೇಸಿನಿಂದ ಇಣುಕಿ ನೋಡಿದರೆ ಬಸ್ಸು ಬಂತಾ ಇಲ್ವಾ ಅಂತ ಗೊತ್ತಾಗ್ತಿತ್ತು. ಇಣುಕಿ ನೋಡಿದೆ, ಇನ್ನು ಬಂದಿರಲಿಲ್ಲ, ಮನೇಲಿರುವ ಕುರುಕುಲು ತಿಂಡಿ ಬಾಯಿಗೆ ಹಾಕಿಕೊಂಡು ಬಸ್ಸು ಬಿಡುವ ಸ್ಥಳಕ್ಕೆ ಹೋಗಿ ಕಾಯಿತ ನಿಂತಿದ್ವಿ. ಅಷ್ಟರಲ್ಲೆ ಏನ್. ರಾಘವೇಂದ್ರ ಬಂದು ನಿಂತಿದ್ರು. ನಮ್ಮ ಆಫೀಸಿನಲ್ಲಿ ಇಬ್ರು ರಾಘವೇಂದ್ರ ಇದ್ರು. ಕನ್ಫ್ಯೂಸ್ ಆಗ್ಬಾರ್ದು ಅಂತ ಅವರನ್ನ ಏನ್ ಮತ್ತು ಎಂ ರಾಘವೇಂದ್ರ ಅಂತ ಅವರವರ ಇನಿಶಿಯಲ್ಸ್ಗಳಿಂದ ಕರೀತಿದ್ವಿ. ಏನ್. ರಾಘವೇಂದ್ರ ಹೊಸಪೇಟೆ ಪಕ್ಕದವರು, ಮಾತು ಕಡಿಮೆ, ಆದರೆ ಒಳ್ಳೆ ಮನುಷ್ಯ.  ಇನ್ನೇನು ಅವರ ಜೊತೆ ಮಾತು ಶುರುಹಚ್ಚುವಷ್ಟರಲ್ಲಿ ಎಂ. ರಾಘವೇಂದ್ರ ಬರ್ತಾಯಿರೋದು ಕಂಡುಬಂತು. ಕಂಪನಿಯ ಯೂನಿಫಾರ್ಮ್ನಲ್ಲಿ, ಕೈಯಲ್ಲೊಂದು ಕಪ್ಪು ಬಣ್ಣದ ಬ್ಯಾಗು ಹಿಡಿದುಕೊಂಡು ಅಲ್ಲಿಂದಲೇ ಎಲ್ರಿಗೂ ಕೈ ಮಾಡುತ್ತ ಮುಗುಳ್ನಗೆ ಬೀರುತ್ತಾ ಬರ್ತಾಇದ್ರು. ಇವರೊಬ್ಬ ಚೈತನ್ಯ ಚಿಲುಮೆ, ಇವರ ಜೊತೆ ಮಾತಾಡೋದೇ ಒಂದು ಖುಷಿ. ಖುದ್ದು ಹೊಸಪೇಟೆಯವರೇ ಆದರೂ ಕಾಲೇಜು ಮುಗಿಸಿದಮೇಲೆ ಅನೇಕ ಕೆಲಸ ಮಾಡಿ ಈಗ ಈ ಕಂಪನಿಯಲ್ಲಿ ಸೇರಿದ್ದರು. ಇಲ್ಲಿ ಅವರಿಗೆ ಹೆಚ್ಚುಕಡಿಮೆ ೫-೬ ವರ್ಷ ಆಗಿರಬಹುದು. ಉಳಿದವರಿಗೆಲ್ಲ ಇವರೇ ಸೀನಿಯರ್. ವಯಸಿನಲ್ಲಿ ನನಗಿಂತ ೨-೩ ವರ್ಷ ಹಿರಿಯರಿರಬಹುದು, ಆದರೂ ಏನೇ ಸಮಸ್ಯೆ ಅಂತ ಬಂದಾಗ ಖುಷಿ ಖುಷಿಯಿಂದ ಸಹಾಯಕ್ಕೆ ಕೈಚಾಚುವ ಸ್ನ್ಹೇಹಜೀವಿ. ಒಹ್! ಇವರ ಬಗ್ಗೆ ಹೇಳುವಷ್ಟರಲ್ಲಿ ಬಂದೇಬಿಟ್ಟರುನೋಡು ಜ್ಯೋತಿ ಮೇಡಮ್ಮು. ಅಬ್ಬಾ, ಇವರಬಗ್ಗೆ ಕೇಳ್ತಿರಾ, ಒಂದ್ ರೀತಿ ನಮ್ಮೆಲ್ಲರಿಗೂ ಹಿರಿಯಕ್ಕ ಇವಳು. ಬೈಯೋಕಾಗ್ಲಿ, ಬುದ್ದಿಹೇಳೋದಿರ್ಲಿ, ಇವಳದು ಎತ್ತಿದ ಕೈ. ಕೆಲಸ ಮಾಡೋದ್ರಲ್ಲಂತೂ ರಾಕ್ಷಶಿ. ಬೆಳಿಗ್ಗೆ ಟಿಫನ್ ಮಾಡಿ ಕೆಲ್ಸಕ್ಕೆ ನಿಂತ್ಲು ಅಂದ್ರೆ ಅವತ್ತು ಟೇಸ್ಟಿಂಗಿಗೆ ಎಷ್ಟೇ ಸ್ಯಾಂಪಲ್ಸ್ ಇರ್ಲಿ, ಮಧ್ಯಾಹ್ನ ನಾಲ್ಕು ಘಂಟೆ ಅನ್ನೋದ್ರಲ್ಲಿ ಮುಗಿಸಿ ಮನೆಗೆ ಹೋಗೋದ್ರಲ್ಲಿ ರಿಪೋರ್ಟ್ ರೆಡಿ ಮಾಡಿ ಬಾಸ್ ಗೆ ಕೊಟ್ಟಬಿಡೋಳು. ಇವಳ ಸಹಾಯಕ್ಕಿದ್ದ ವೆಂಕಿ ಮತ್ತು ಗೌಸು, ಅಮ್ಮ ತಾಯಿ ಎಷ್ಟೊಂದು ಗೋಲಿಕ್ಕೋತಿಯ, ನಮ್ಮ ಬಿಟ್ಟಬಿಡು ಅನ್ನೋವಷ್ಟು ಕಾಟ ಕೊಡ್ತಿದ್ದ್ಲು. ಈ ಗೌಸು ಮತ್ತು ವೆಂಕಿ ಪರವಾಗಿ ನಿಂತು ಅವಳ ಜೊತೆ ಎಷ್ಟೋ ಸಲ ಜಗಳ ಮಾಡಿದ್ದೀನಿ. ಜಗಳಕ್ಕೆ ನಿಂತರೆ ಸಾಕು, ಹಿರಿಯಕ್ಕ ಇದ್ದವಳು ಅತ್ತೆ ಆಗಿಬಿಡ್ತಾಇದ್ದಳು. ಆದರು ಅದೊಂದು ಮಾತೃ ಹೃದಯ, ಬಾಸ್ ಹತ್ತ್ರ ಯಾವಾಗಾದ್ರೂ ಬೈಸ್ಕೊಂಡ್ರೆ, ನಮಗೆಲ್ಲ ಧೈರ್ಯ ತುಂಬಿ, ಮತ್ತೆ ಕೆಲಸ ಮಾಡಲು ಹುರಿದುಬಿಸೋಳು. ೧-೨ ಸಲ ನನ್ನ ಸಂತೋಷನ್ನ ಊಟಕ್ಕೆ ಮನೆಗೂ ಕರೆದಿದ್ದಳು.  ಆಯಿತು, ಎಲ್ಲರು ಸೇರಿದ್ವಿ, ಇನ್ನೇನು ಬಸ್ ಬರುವ ಟೈಮ್ ಅಯೀತು ಅನ್ನುವಷ್ಟರಲ್ಲಿ ಇವತ್ತು ಬಸ್ಸು ಲೇಟ್ ಆಗತ್ತೆ ಸ್ವಲ್ಪ ರಿಪೇರಿ ಕೆಲಸ ಇದೆ ಅಂತ ಹೆಡ್ ಆಫೀಸ್ನಿಂದ ಸುದ್ದಿ ಬಂತು. ಎಲ್ಲ ಸೇರಿ ಅಲ್ಲೇ ಪಕ್ಕದಲ್ಲಿ, ಒಬ್ಬ ಅಂಕಲ್ ಅವರ ಟೀ ಅಂಗಡಿಗೆ ಹೋಗಿ ಟೀ ಕುಡಿದು ಹರಟೆ ಹೊಡಿತಾಇದ್ದ್ವಿ. ಈ ಅಂಕಲ್ ಟೀ ಅಂಗಡಿ ನಮಗೆ ಒಂಥರಾ ಅಡ್ಡಾ ಆಗಿತ್ತು. ಶನಿವಾರ ಅಂದ್ರೆ ವಾರದ ಕೊನೆಯ ದಿನ, ಸಂಜೆ ಮೈನ್ಸ್ ನಿಂದ ಬಂದ್ಮೇಲೆ ಎಲ್ಲ ಸೇರಿ ಟೀ ಕುಡಿಯುತ್ತ ಸ್ವಲ್ಪ ಟೈಮ್ ಕಳೆಯುವುದು ರೂಢಿ ಆಗಿತ್ತು. 

ಸರಿಯಾಗಿ ಅರ್ಧಗಂಟೆ ಲೇಟ್ ಆಗಿ ಬಂತು ಬಸ್ಸು. ಎಲ್ಲ ಎಂಪ್ಲಾಯೀಸ್ ಮತ್ತು ಕಾರ್ಮಿಕರು ಹತ್ತಿದಮೇಲೆ ಬಸ್ಸು ಮೈನ್ಸ್ ಕಡೆಗೆ ಪ್ರಯಾಣ ಬೆಳೆಸಿತು. ಮೈನ್ಸ್ ಮುಟ್ಟೋಕ್ ಮುಂಚೆ ಹೊಸಪೇಟೆಯ ಹೊರಗಡೆ ಜೋಳದ ರಾಶಿ ಗುಡ್ಡದ ಹತ್ತಿರ ಒಂದು ಸ್ಟಾಪ್. ಅಲ್ಲಿ ಶೀಲಾ, ಸುರೇಶ ಮತ್ತು ರುಕ್ಮಿಣಿ ಹತ್ತಿದಮೇಲೆ ಬಸ್ಸು ಬೆಂಗಳೂರು ಸೋಲಾಪುರ್ ಹೈವೇ ಮಾರ್ಗವಾಗಿ 6 ಕಿಮಿ ಕ್ರಮಿಸಿದಮೇಲೆ ಒಂದು ಎಡತಿರುವು, ಅಲ್ಲಿಂದ ಸುಮಾರು ನಾಲ್ಕೈದು ಕಿಲೋಮೀಟರು ಹೈವೇ ಪಕ್ಕದ ಅರಣ್ಯದಲ್ಲಿ ನುಸಿಳಿಕೊಂಡು ಸ್ವಲ್ಪ ಗುಡ್ಡ ಹತ್ತಿದಮೇಲೆ ನಮ್ಮ ಮೈನ್ಸ್ ಪ್ರವೇಶ ಮಾಡಿತು. ಅಲ್ಲಿರುವ ಗಣೇಶ ದೇವಸ್ಥಾನದ ಮುಂದೆ ಬಸ್ಸು ನಿಂತಮೇಲೆ ಎಲ್ಲರು ಗಣೇಶನ ಆಶೀರ್ವಾದ ಪಡೆದು, ಬೈಯೋಮೆಟ್ರಿಕ್ ಹಾಜರಿ ಹಾಕಿ, ತಮ್ಮ ತಮ್ಮ ಡಿಪಾರ್ಟುಮೆಂಟುಗಳತ್ತ (ಲ್ಯಾಬೋರೇಟರಿ, ಸ್ಟೋರ್, ಪ್ರೊಕ್ಯೂರೇಮೆಂಟ್, ಮೆಂಟೆನನ್ಸ್, ಇಂಜಿನೀರಿಂಗು ಮತ್ತು ಜಿಯಾಲಜಿ ಹೀಗೆ) ಹೋಗುವುದು. ನಾವು ಲ್ಯಾಬಿನವರೆಲ್ಲ ಒಟ್ಟಾಗಿ ಬಂದು ಬ್ಯಾಗುಗಳನ್ನೆಲ್ಲ ಇಟ್ಟು, ಬೆಳಗಿನ ಅಲ್ಪೋಪಹಾರಕ್ಕೆ ಕ್ಯಾಂಟೀನಿನತ್ತ ಪಯಣ. ಕ್ಯಾಂಟೀನ್ ಚೆನ್ನಾಗಿತ್ತು, ದಿನ ಒಂದು ವೆರೈಟಿ ತಿಂಡಿ ಇರ್ತಾಇತ್ತು. ಇದಕ್ಕೊಂದು ಅರ್ಧಘಂಟೆ ಕಳೆದು ಚಹಾ ಕುಡಿದು ಕೆಲಸ ಶುರು ಹಚ್ಚಕೊಳ್ಳೋದು ನಮ್ಮೆಲ್ಲರ ದಿನಚರಿ.  

ಈ ಲ್ಯಾಬಿನಲ್ಲಿ ಕೆಲಸ ಅಂದ್ರೆ, ಈ ಮೈನ್ಸಿನ ವಿವಿಧ ಭಾಗಗಳಲ್ಲಿ ಅಗೆದ ಅದಿರನ್ನು ಸಣ್ಣಗೆ ಪುಡಿಮಾಡಿ ಒಂದು ಟೀಮಿನವರು ನಮಗೆ ಕೊಟ್ಟಮೇಲೆ ಅದನ್ನು ವಿವಿಧ ಪ್ರಯೋಗಗಳ ಮುಖಾಂತರ ಟೆಸ್ಟಿಂಗ್ ಮಾಡಿ, ಅದರಲ್ಲಿ ಕಬ್ಬಿಣ, ಅಲ್ಯೂಮಿನಿಯಂ, ಫಾಸ್ಫರಸ್ ಮತ್ತು ಸಿಲಿಕಾನ್ (ಉಸುಕಿನ ಪ್ರಮಾಣ) ಪ್ರಮಾಣ ಎಷ್ಟಿದೆ ಎಂದು ನಿರ್ಧರಿಸುವುದು. ಯಾವ ಸ್ಯಾಂಪಲ್ಲಿನಲ್ಲಿ ಕಬ್ಬಿಣದ ಪ್ರಮಾಣ ಹೆಚ್ಚಿದ್ದು. ಉಳಿದ ಖನಿಜಗಳ ಪ್ರಮಾಣ ಕಡಿಮೆ ಇದ್ದರೆ ಅದು ಒಳ್ಳೆಯ ಗುಣಮಟ್ಟದ ಅದಿರು ಎಂದು ಪ್ರಾಮಾಣಿಕರಿಸಿ, ಅದನ್ನು ಹೊರದೇಶಗಳಿಗೆ ಹೆಚ್ಚಿನ ಬೆಲೆಗೆ ರಫ್ತು ಮಾಡಲಾಗುತಿತ್ತು. ಕೇವಲ ಪ್ರಯೋಗಗಳಷ್ಟೇ ಅಲ್ಲದೆ, ಒಮ್ಮೊಮ್ಮೆ ಇದೆ ಪ್ರಯೋಗಾಲಯದಲ್ಲಿದ್ದ ಕೆಲವೊಂದು ವೈಜ್ನ್ಯಾನಿಕ ಇನ್ಸ್ಟ್ರುಮೆಂಟ್ಗಳಲ್ಲಿ ಕೂಡ ಟೆಸ್ಟಿಂಗ್ ಮಾಡಬೇಕಾಗ್ತಿತ್ತು. ಶೀಲಾ ಒಬ್ಬಳನ್ನು ಬಿಟ್ಟರೆ ಉಳಿದ ಐದು ಜನ ಹೆಚ್ಚುಕಡಿಮೆ ಇದೆ ಕೆಲಸವನ್ನು ಮಾಡ್ಬೇಕಿತ್ತು. ಯಾಕಂದ್ರೆ ಶೀಲಾ ಒಬ್ಬ ಜಿಯೋಲಾಜಿಸ್ಟ್, ಕುಮಟಾ ಹತ್ತಿರದ ಸಣ್ಣ ಊರಿನವಳು. ಕರ್ನಾಟಕ ವಿಶ್ವವಿದ್ಯಾಲಯದಿಂದ ಜಿಯಾಲಾಜಿಯಲ್ಲಿ ಎಂ ಎಸ್ಸಿ ಮಾಡಿ ಈ ಮೈನ್ಸಿನಲ್ಲಿ ಜಿಯಾಲಾಜಿಸ್ಟ್ ಆಗಿ ಕೆಲಸ ಮಾಡ್ತಿದ್ಲು. ಪರಿಶ್ರಮಿ ಮತ್ತು ಕೆಲಸದಲ್ಲಿ ಅಚ್ಚುಕಟ್ಟು. ಕಬ್ಬಿಣದ ಅದಿರನ್ನು ಸಣ್ಣಗೆ ಪುಡಿಮಾಡಿಸಿ, ಜಿಯಾಲಾಜಿಕಲ್ ಪದ್ಧತಿಯಲ್ಲಿ ಅದಿರಿನಲ್ಲಿ ಕಬ್ಬಿಣದ ಪ್ರಮಾಣ ದೃಢಪಡಿಸುವುದು ಅವಳ ಕೆಲಸ. ಅವಳ ಜಿಯಾಲಾಜಿಕಲ್ ಫಲಿತಾಂಶಕ್ಕೂ, ನಮ್ಮ ರಾಸಾಯನಿಕ ಪದ್ಧತಿಯಲ್ಲಿ ಬಂದ ಫಲಿತಾಂಶಕ್ಕೂ ಹೊಂದಾಣಿಕೆಯಾಗಬೇಕಾಗಿತ್ತು. ಎಂ. ರಾಘವೇಂದ್ರ ಅವರು ರಾಸಾಯನಿಕ ಪ್ರಯೋಗಗಳ ಜೊತೆಗೆ, ಎಎಎಸ ಅನ್ನುವ ಒಂದು ವೈಜ್ನ್ಯಾನಿಕ ಉಪಕರಣ ನೋಡಿಕೊಳ್ಳುವುದು ಅವರ ಜವಾಬ್ದಾರಿ. ಅದರಲ್ಲಿ ಅವರೊಬ್ಬರೇ ಪರಿಣಿತರಿದ್ದರು. ಅನೇಕ ಹೊಸ ಹೊಸ ವಿಷಯಗಳನ್ನು ಕಲಿಯೋ ಅವಕಾಶ ಸಿಕ್ಕಿತು. ಕಲಿತೆ, ಸ್ವಲ್ಪದಿನದಲ್ಲೇ ಪರಿಣಿತನಾದೆ. ಕಾರಣ ಸಹೋದ್ಯೋಗಿಗಳ ಸಹಕಾರ ಇಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. 

ಇನ್ನೇನು ನನ್ನ ಕೆಲಸ ಶುರು ಹಚ್ಚಕೊಬೇಕು, ಅಷ್ಟ್ರಲ್ಲಿ ಗೌಸು ಕೂಗಿದ, ಶಿವರಾಜ್ ಸರ್ ಬಂದ್ರು, ಎಲ್ಲರೂ ಬೇಗ ಬೇಗೆ ಕೆಲಸ ಶುರು ಹಚ್ಚಕೊಳ್ಳಿ ಅಂತ. ಗೌಸ್ ಧ್ವನಿ ಕೇಳಿದ್ದೆ, ಎಲ್ಲರು ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿ ಆದ್ವಿ. ಶಿವರಾಜ್ ಸರ್, ನಮ್ಮ ಲ್ಯಾಬಿನ ಮ್ಯಾನೇಜರ್. ಅಪಾರ ವರ್ಷಗಳ ಅನುಭವ. ಎತ್ತರದಲ್ಲಿ ಸ್ವಲ್ಪ ಕುಳ್ಳಗಿದ್ದರು, ನಡತೆಯಲ್ಲಿ ಶಿಸ್ತಿನ ಸಿಪಾಯಿ. ಅಷ್ಟೇ ಖಡಕ್ ಮ್ಯಾನೇಜ್ಮೆಂಟ್ ಅವರದು. ಕೆಲಸ ಬಿಟ್ಟು ಕೂತು ಮಾತು ಹರಟೆ ಮಾಡುವುದು ನೋಡಿದ್ರೆ, ಶಿವರಾಜ್ ಸರ್ ಸರಿಯಾಗಿ ಪೂಜೆನೆ ಮಾಡಿಬಿಡ್ತಿದ್ರು. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಿದ್ರೆ, ನೀವು ಏನಾದ್ರು ಮಾಡ್ಕೊಳ್ಳಿ, ಅದಕ್ಕೆಲ್ಲ ಅವರ ಅಭ್ಯಂತರ ಇರ್ತಿರಲಿಲ್ಲ. ಪ್ರಾರಂಭದಲ್ಲಿ ಅವರ ಜೊತೆ ಮಾತಾಡ್ಲಿಕ್ಕೆ ತುಂಬಾ ಹೆದರಿಕೆ ಆಗೋದು. ಕ್ರಮೇಣ ಅವರ ನೆಚ್ಚಿನ ಸಹುದ್ಯೋಗಿ ಆದೆ. ಈಗಲೂ ಅವರು ಸಾಮಾಜಿಕ ಜಾಲತಾಣದ ಮೂಲಕ ನನ್ನ ಸಂಪರ್ಕದಲ್ಲಿದ್ದಾರೆ.

ಮಧ್ಯಾಹ್ನ 1-00 ಇಂದ 2-00 ಘಂಟೆ ಊಟದ ಸಮಯ. ಸ್ವಲ್ಪ ಜನ ಬಿಟ್ಟರೆ, ಹೆಚ್ಚುಕಡಿಮೆ ಎಲ್ಲರು ಕ್ಯಾಂಟೀನನ್ನೇ ಅವಲಂಬಿಸಿದ್ದು, ಅಲ್ಲಿ ಕೊಡುವ ಊಟವನ್ನೇ ಮಾಡಬೇಕು. ಬೇರೆ ದಾರಿ ಇಲ್ಲ, ಯಾಕಾದ್ರೆ ಈ ಎತ್ತರದ ಗುಡ್ಡದಲ್ಲಿ ಮೆಸ್ಸು, ಹೋಟೆಲ್ ಅಂತ ಎಲ್ಲಿ ಹೋಗೋಕಾಗತ್ತೆ. ಹಂಗಂತ ಕ್ಯಾಂಟೀನ್ ಊಟದ ಕ್ವಾಲಿಟಿ ಚೆನ್ನಾಗಿರಲಿಲ್ಲ ಅಂತ ಅಲ್ಲ. ಬಳ್ಳಾರಿ ಜಿಲ್ಲೆಯ ಗಂಗಾವತಿ ಸೋನಾಮಸ್ಸೂರಿ ಅಕ್ಕಿಯಿಂದ ಮಡಿದ ಅನ್ನ, ಮತ್ತು ಘಮ ಘಮಿಸುವ ಸಾಂಬಾರು, ನಮ್ಮ ಊಟದ ಫಿಕ್ಸೆಡ್ ಮೆನ್ಯು. ಬೇಡಿದಷ್ಟು ನೀಡ್ತಾಯಿದ್ರು, ಆದ್ರೆ ದಿನ ಅದನ್ನೇ ತಿನ್ನಬೇಕು, ಇದು ಮಾತ್ರ ಬಿಡಲಾರದ ಕರ್ಮ. ಅವಾಗವಾಗ, ಪಕ್ಕದ ಹಳ್ಳಿಯಿಂದ ಬರ್ತಾಯಿದ್ದ ಕೆಲಸದವರ ಹತ್ರ ಮೊಸರಿನ ವ್ಯವಸ್ಥೆ ಮಾಡ್ಕೊಂಡಿದ್ವಿ. ಊಟವಾದ್ಮೇಲೆ ಒಂದು ಪುಟ್ಟ ವಾಕ್, ವಾಕ್ ಮಾಡುವಾಗ ಅದು ಇದು ಅಂತ ಸ್ವಲ್ಪ ಗಾಸಿಪ್ಪು. ನಂತರ ಮತ್ತೆ ಲ್ಯಾಬು. ಮತ್ತೆ ಮಧ್ಯಾಹ್ನ ಬಂದ ಸ್ಯಾಂಪಲ್ಲುಗಳನ್ನು ಟೆಸ್ಟಿಂಗ್ ಮಾಡೋದು. ಈ ಎರಡು ಲಾಟೀನಲ್ಲಿ ಸ್ಯಾಂಪಲ್ಲುಗಳ ಪಲಿತಾಶವನ್ನ ಸಂಜೆ 4-30 ಅಷ್ಟರಲ್ಲಿ ಶಿವರಾಜ್ ಸರ್ಗೆ ಕಲಿಸಬೇಕು. ಅದನ್ನೆಲ್ಲ ಪರಿಶೀಲಿಸಿ ಅವರು ಇಂಜಿನಿಯರಿಂಗ್ ಡೆಪಾರ್ಟ್ಮೆಂಟ್ಗೆ ರವಾನಿಸುತ್ತಿದ್ದರು. ಈ ರಿಪೋರ್ಟ್ ಸಿದ್ಧಪಡಿಸೋದು, ಅದನ್ನು ಮ್ಯಾನೇಜರ್ಗೆ ಕಳಿಸೋದು ಇವೆಲ್ಲ, ನಮ್ಮಲ್ಲಿ ಹಿರಿಯರಾಗಿದ್ದ ಜ್ಯೋತಿ ಮೇಡಂ ಮತ್ತು ಎಂ. ರಾಘವೇಂದ್ರ ಸರ್ ಕೆಲಸ. ಅವರಿಬ್ಬರೂ ಇಲ್ಲಿ 5-6 ವರ್ಷಗಳಿಂದ ಕೆಲಸ ಮಾಡ್ತಿದ್ದು, ನಮ್ಮೆಲ್ಲರಲ್ಲಿ ಸೀನಿಯರ್ಸ್ ಅಂದ್ರೆ ಅವರೇ. 

ಪ್ರತಿ ತಿಂಗಳು ಹದಿನೈದನೇ ತಾರೀಕು ಬಂತೆಂದರೆ, ನಾನು ಮತ್ತು ಶೀಲಾ ಇಬ್ಬರು ಪ್ರತಿದಿನ ಮಾಡುವ ಕೆಲಸ ಬಂದ್ ಮಾಡಿ, ಮುಂದಿನ ಎರಡು ವಾರ ಡಾ. ರಾಘವನ್ ಸರ್ ಅಸ್ಸಿಸ್ಟಂಟ್ಸ್ ಆಗಿ ಕೆಲಸ ಮಾಡೋದು. ಈ ರಾಘವನ್ ಸರ್ ಇನ್ನೊಂದು ಪ್ರಾಜೆಕ್ಟ್ನಲ್ಲಿ ಸುರೇಶ ಕೂಡ ಕೆಲಸ ಮಾಡ್ತಿದ್ರು. ಸುರೇಶ ಒಬ್ಬ ಕೆಮಿಕಲ್ ಇಂಜೀನಿಯರ್ ಆಗಿದ್ದು, ಮೂಲತಃ ಬೆಂಗಳೂರಿನವರು. ಅವರ ಅನುಭವ ಮತ್ತು ಕಲಿತ ವಿಷಯದ ಆಧಾರದ ಮೇಲೆ, ರಾಘವನ್ ಸರ್ ಸುರೇಶ್ಗೆ ಒಂದು ಬೇರೆ ಕೆಲಸ ಕೊಟ್ಟಿದ್ದು, ಅವರು ಸದಾ ಆ ಪ್ರೋಜೆಕ್ಟಿನಲ್ಲಿ ಬ್ಯುಸಿ ಆಗಿರ್ತಾಇದ್ರು. ಹಾಗಾದ್ರೆ ಈ ರಾಘವನ್ ಸರ್ ಯಾರು? ಇವರು ಅನೇಕ ವರ್ಷಗಳ ಕಾಲ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಲ್ಲಿ ವಿಜ್ನ್ಯಾನಿಯಾಗಿ ಕೆಲಸಮಾಡಿ, ನಿವೃತ್ತಿಯನಂತರ ಒಂದು ಪ್ರಾಜೆಕ್ಟ್ ಮೇಲೆ ನಮ್ಮ ಕಂಪನಿಯಲ್ಲಿ ವಿಸಿಟಿಂಗ್ ಸೈಂಟಿಸ್ಟ್ ಆಗಿ ಕೆಲ್ಸಮಾಡ್ತಾಯಿದ್ರು. ಮೂಲತಃ ಇವರು ಚೆನ್ನೈನವರು, ಬಹಳ ಹಳೆಯ ಕಾಲದಲ್ಲಿ ನಿರವಯವ ರಾಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಸಂಶೋಧನಾ ವಿಜ್ನ್ಯಾನಿಯಾಗಿ ಆಪಾರ ಅನುಭವ ಪಡೆದವರು. ನಮ್ಮಂತಹ ಯುವ ಸಂಶೋಧಕರಿಗೆ, ಇವರ ಜೊತೆ ಕೆಲಸ ಮಾಡುವುದು ಅಂದ್ರೆ ಒಂದು ಸುವರ್ಣಾವಕಾಶ. ನನ್ನ ಕಲಿಕಾ ಜೀವನದಲ್ಲಿ ಹಿಂತಹ ಅನೇಕೆ ನುರಿತ ಅನುಭವಿ ವಿಜ್ನ್ಯಾನಿಗಳ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕದ್ದು ನನ್ನ ಭಾಗ್ಯ ಅನ್ನಬಹುದು. ರಾಘವನ್ ಸರ್, ಒಬ್ಬ ಸ್ನ್ಹೇಹಜೀವಿ, ಹಿರಿಯರು, ಆದರೆ ಅಷ್ಟೇ ಮೃದು ಸ್ವಭಾವ. ಅವರು ಒಂದು ಮಾತು ಹೇಳ್ತಾಇದ್ರು, "ನೀವು ಮನಸಾಪೂರ್ವಕ ಸಂತೋಷವಾಗಿ ಇದ್ದಾರೆ ಮಾತ್ರ ಪ್ರಯೋಗ ಮಾಡಿ. ಸುಮ್ನೆ ಮನಸಿಲ್ಲ ಅಥವಾ ಯಾವುದೊ ನೋವು ನಿಮ್ಮ ಕೊರೀತಾಇದೆ, ಇಲ್ಲ ಯಾವುದೊ ಟೆನ್ಶನ್ನಲ್ಲಿದ್ದರೆ ದಯವಿಟ್ಟು ಕೆಲಸ ಶುರು ಹಚ್ಕೋಬೇಡಿ. ಎರಡು ದಿನ ಲೇಟ್ ಆದ್ರೂ ಪರವಾಗಿಲ್ಲ ಮನಸ್ಸು ಉಲ್ಲಾಸಭರಿತವಾಗಿ ಮತ್ತು ಆಸಕ್ತಿಯಿಂದಿರಬೇಕು ಆಗಲೇ ಪ್ರಯೋಗದಲ್ಲಿ ಒಳ್ಳೆಯ ಪಲಿತಾಂಶಬರೋದು" ಅನ್ನುವರು. ಅವರ ಮಾತು ಇಂದಿಗೂ ನನಗೆ ಸತ್ಯ ಅನಿಸುತ್ತದೆ. ನಾನು, ಸುರೇಶ ಮತ್ತು ಶೀಲಾ, ರಾಘವನ್ನ್ ಸರ್ ಜೊತೆಗೆ ಸಂತೋಷವಾಗಿ ಕೆಲಸ ಮಾಡಿ ಅನೇಕ ವಿಷಯಗಳನ್ನ ಕಲಿತು, ಒಳ್ಳೆಯ ಅನುಭವ ಪಡೆದ್ವಿ. ಅಷ್ಟೇ ಏಕೆ, ಒಟ್ಟಿಗೆ ಕೆಲಸ ಮಾಡ್ತಾ ಮಾಡ್ತಾ ಶೀಲಾ ಮತ್ತು ಸುರೇಶ ಮಧ್ಯೆ ಪ್ರೇಮಾಂಕುರ ಚಿಗುರಿ, 2-3 ವರ್ಷಗಳ ನಂತರ ಇಬ್ಬರು ಬಾಳ ಸಂಗಾತಿಳಾಗಿ, ಸಂಸಾರ ಸಮೇತ ಸ್ವಲ್ಪ ದಿನ ಕೂನೂರಿನಲ್ಲಿ ಕೆಲಸ ಮಾಡಿ, ಈಗ ಬೆಂಗಳೂರಿನಲ್ಲಿ ಸೆಟ್ಲ್ ಆಗಿದ್ದಾರೆಂದು ಕೇಳಲ್ಪಟ್ಟೆ. ಈ ನನ್ನ ದುಷ್ಟ ಸ್ನೇಹಿತರಿಬ್ಬರು, ಈ ಕೆಲಸ ಬಿಟ್ಟಮೇಲೆ, ಸ್ವಲ್ಪ ದಿನ ಸಂಪರ್ಕದಲ್ಲಿದ್ದರು. ಆಮೇಲೆ ನಾನು ಆ ದೇಶ ಈ ದೇಶ ಅಂತೆಲ್ಲ ಸುತ್ತಾಡೋದ್ರಲ್ಲಿ ಸಂಪರ್ಕ ಕಡಿದು ಹೋಯಿತು. ಹಂಗು ಹಿಂಗು ಆಟೋಗ್ರಾಫ್ ಬುಕ್ನಲ್ಲಿ ಸಿಕ್ಕ ಶೀಲಾನ ಕುಮಟಾ ವಿಳಾಸಕ್ಕೆ ನನ್ನ ಮದುವೆ ಇನ್ವಿಟೇಶನ್ ಕಳ್ಸಿದ್ದೆ. ಅವಾಗ ಒಂದ್ಸಲ ಇಬ್ರು ಫೋನ್ ಮಾಡಿದ್ರು. ಆಮೇಲೆ ಆ ಆಟೋಗ್ರಾಫ್ ಬುಕ್ಕು ಕಳೆದೋಯಿತು, ಅವರು ಫೋನ್ ನಂಬರ್ ಕೂಡ ಎಲ್ಲೋ ಹೋಯಿತು. ನಂತರ ಎಷ್ಟು ಹುಡುಕಿದರೂ ಸಂಪರ್ಕಕ್ಕೆ ಸಿಗಲಿಲ್ಲ. ಇದೆ ಬೆಂಗಳೂರಿನಲ್ಲಿದ್ದಾರೆ, ಆದರೆ ಇವರಿಬ್ಬರಿಗೂ ಈ ಫೇಸ್ಬುಕ್, ವಾಟ್ಸಪ್ಪ್ ಬಗ್ಗೆ ಗೊತ್ತಿಲ್ಲ ಏನೋ, ಅದರಲ್ಲಿನೂ ಕೂಡ ಸಿಗಲಿಲ್ಲ. ಅಕಸ್ಮಾತ್ ಈ ಬ್ಲಾಗ್ ಲೇಖನ ಏನಾದ್ರು ಅವರ ಕಣ್ಣಿಗೆ ಬಿದ್ದರೆ, ಇದರ ಮುಖಾಂತರ ಆದರು ನನ್ನ ಸಂಪರ್ಕಕ್ಕೆ ಬರಲಿ ಎಂದು ಆಶಿಸುವೆ. 

ಅವತ್ತಿನ ಎಲ್ಲ ಸ್ಯಾಂಪಲ್ಲುಗಳ ಟೆಸ್ಟಿಂಗ್ ಮುಗಿಸಿ, ಮ್ಯಾನೇಜರ್ಗೆ ರಿಪೋರ್ಟ್ ಕಳ್ಸಿ, ಎಲ್ಲರೂ ರೌಂಡ್ ಟೇಬಲ್ ಕಾನ್ಫರೆನ್ಸ್ ಮಾಡ್ತಾ, ಸಂಜೆ ಟೀಗಾಗಿ ಕಾಯಿತಾ ಕೂತಿದ್ವಿ. ಅಷ್ಟ್ರಲ್ಲಿ ಸಂತೋಷ ಕೂಗಿದ, ಅವಳು ಬರ್ತಾಇದ್ದಾಳೆ ನಾನು ಇಲ್ಲೇ ಸ್ಟೈಲಾಗಿ ಅವಳ ಕಣ್ಣಿಗೆ ಬಿಲೋಥರ ನಿಂತಿರ್ತೀನಿ ಅಂದ. ಎಲ್ಲರೂ ಕೊಳ್ಳ ಅಂತ ನಕ್ಕು ಅವಳು ನಮ್ಮ ಲ್ಯಾಬಿನಲ್ಲಿ ಬರುವಿಗಾಗಿ ಕಾಯುತ್ತಿರುವಾಗ, ಹಂಗೆ ಸುಯ್ಯಂತ ಬೀಸುವ ತಂಪಾದ ಗಾಳಿಯಂತೆ ನಮ್ಮ ಲ್ಯಾಬಿನಲ್ಲಿ ಸುಳಿದು, ತನ್ನ ನಗುಮುಖದಿಂದ ಎಲ್ಲರಿಗು ಹಾಯ್ ಹೇಳುತ್ತಾ ಬಂದ್ಲು. ಅವಳು ಯಾರಂದ್ರೆ, ನಮ್ಮ ಲ್ಯಾಬಿನ ಪಕ್ಕದ ಪ್ರೊಕ್ಯೂರೇಮೆಂಟ್ ಆಫೀಸಿನಲ್ಲಿ ಕಂಪ್ಯೂಟರ  ಆಪರೇಟರ್ ಆಗಿದ್ದ ರುಕ್ಮಿಣಿ. ನೋಡಲು ಸುಂದರಿ, ಅಷ್ಟೇ ಮಾತಿನ ಮಲ್ಲಿ. ಅವಳ ಮತ್ತು ನಮ್ಮ ಡಿಪಾರ್ಟ್ಮೆಂಟ್ ಮಧ್ಯೆ ಒಂದೇ ರೆಸ್ಟ್ರೂಮ್ ಇದ್ದದರಿಂದ, ಅವಾಗವಾಗ ರೆಸ್ಟ್ರೂಮ್ ನೆಪಮಾಡಿ ಲಾಬಿಗೆ ಬರ್ತಾಇದ್ದಳು. ನಾವೋ, ಎಲ್ಲರೂ ಇನ್ನು ಮದುವೆ ಆಗದ ಬ್ಯಾಚುಲರ್ ಹುಡುಗರು. ಇವಳು ಬಂದು ಹೋದರೆ ಸಾಕು, ಎಲ್ಲರಿಗು ಒಂದು ರೋಮಾಂಚನ, ಹುರುಪು. ಅವಳೂ ಅಷ್ಟೇ, ತನಗೆ ಕೆಲಸ ಇಲ್ಲಾಂದ್ರೆ ಇಲ್ಲಿ ಬಂದು ಯಾರನ್ನಾದ್ರೂ ಹಿಡ್ಕೊಂಡು ಕೊರೀತಾ ಕೂಡ್ತಿದ್ದ್ಲು. ಅವಳು ಹೆಚ್ಚಾಗಿ ಮಾತು ಹಚ್ಚಕೊಳ್ಳೋದು ನಮ್ಮ ಇಂಜಿನಿಯರು, ಸುರೇಶ ಜೊತೆ, ಅದನ್ನು ನೋಡಲಾಗದೆ ನಮ್ಮ ಶೀಲಕ್ಕನಿಗೆ ಮೈಯೆಲ್ಲ ಊರಿಯಾಗೋದು. ಆ ಬೆಂಕಿಗೆ ತುಪ್ಪ ಸುರಿಯೋಕೆ ನಾವು ಉಳಿದವರು ಬೇಕಂತಲೇ ಶೀಲಕ್ಕನಿಗೆ ಏನೇನೋ ಹೇಳಿ, ನಿನ್ನ ಹುಡಗನ್ನ ಕೈಜಾರೊಮೊದಲು ಕಾಪಾಡ್ಕೊ ತಾಯಿ ಅಂತ ಚುಡಾಯಿಸುವುದು. ಇದು ಒಂಥರಾ ಕಾಲೇಜು ಜೀವನದ ತರಹ ಆಗಿತ್ತು ನಮ್ಮ ಲೈಫ್. ಒಬ್ಬರನ್ನೊಬ್ಬರು ಚುಡಾಯಿಸುವುದು, ಹರಟೆ ಹೊಡೆಯುವುದು, ಆವಾಗಾವಾಗ ಸ್ವಲ್ಪ ಜಗಳ, ಗಾಸಿಪ್ಪು, ಮಣ್ಣು ಮಾಸಲೆ ಹೀಗೆ ತುಂಬಾ ಸಂತೋಷದಿಂದ ಕಳೆದ ದಿನಗಳವು. 

ಘಂಟೆ ಸಂಜೆಯ 5-30 ಆಯಿತು, ಅವತ್ತಿನ ಕೆಲಸ ಮುಗಿಯಿತು. ಎಲ್ಲರೂ ಅದೇ ಬಸ್ಸಿನತ್ತ ಪಯಣ ಬೆಳೆಸಿದ್ವಿ. ಎಲ್ಲರನ್ನು ಹತ್ತಿಸಿಕೊಂಡು ಬಸ್ಸು ಹೊಸಪೇಟೆಯತ್ತ ಪಯಣ ಬೆಳೆಸಿತು. ಮನೆಗೆ ಬಂದಮೇಲೆ, ಮೈಮೇಲಿನ ಬಟ್ಟೆಗಳೆಲ್ಲ ಮೈನ್ಸಿನ  ಕೆಂಪು ಮಣ್ಣಿನ ಧೂಳಿನಿಂದ ಕೆಂಪು ಕೆಂಪು. ಬಟ್ಟೆಗಳನ್ನೆಲ್ಲ ತೊಳೆಯಲು ಹಾಕಿ, ಬೆಳಿಗ್ಗೆ ತುಂಬಿ ಇಟ್ಟ ನೀರಿನಲ್ಲಿ ಎರಡನೇ ಸ್ನಾನ ಮಾಡಿ, ಕೆಂಪು ಮಣ್ಣನ್ನೆಲ್ಲ ತೊಳೆದುಕೊಳ್ಳುವುದು. ಸಂಜೆ ಸಂತೊಷ ಮತ್ತು ಎಂ. ರಾಘವೇಂದ್ರ ಜೊತೆ ಆಚೆ ಸುತ್ತಾಡೋಕೆ ಹೋಗುವುದು. ಪ್ರಸಿದ್ಧ ಮಂಡಕ್ಕಿ ಖಾರ ಮತ್ತು ಮಿರ್ಚಿ ಬಾಜಿ ತಿಂದು ಹಂಗೆ ಹೊಸಪೇಟೆಯ ಕಾರ್ಪೋರೇಶನ್ ಗ್ರೌಂಡ್ ಅಥವಾ ವಿಜಯ ಕಾಲೇಜಿನ ಗ್ರೌಂಡಿನಲ್ಲಿ ಸಂಜೆ ಹೊತ್ತು ಕಳೆಯುವುದು ವಾಡಿಕೆಯಾಗಿತ್ತು. ರಾಘವೇಂದ್ರ ಮತ್ತು ಸಂತೋಷ ತಮ್ಮ ಹಳೆಯ ಕೆಲಸದ ಅನುಭವ ಹಂಚಿಕೊಂಡರೆ, ನಾನು ನನ್ನ ಮುಂದಿನ ಕನಸುಗಳನ್ನು ಹಂಚಿಕೊಳ್ಳುತಿದ್ದೆ. ಎಲ್ಲರಲ್ಲಿನೂ ಕನಸುಗಳಿದ್ದವು, ಇಲ್ಲಿ ಎಷ್ಟು ದಿನ ಸಾಧ್ಯವೋ ಅಷ್ಟು ಕೆಲಸ ಮಾಡಿ ಮತ್ತೆ ಮುಂದೆ ಏನೇನೋ ಮಾಡಬೇಕು, ಎಲ್ಲೆಲ್ಲೋ ಹೋಗಬೇಕು ಎನ್ನುವ ಮಹತ್ವಾಕಾಂಕ್ಷೆಗಳಿದ್ದವು. ಕೆಲಸ ಏನೋ ಚೆನ್ನಾಗಿತ್ತು, ಆದರೆ ಪ್ರಯಾಣವನ್ನ ಇಲ್ಲಿಗೆ ಯಾಕೆ ನಿಲ್ಲಿಸಬೇಕು. ಮುಂದೆ ಇನ್ನು ಅಪಾರ ಅವಕಾಶಗಳು ಕಾಣುತ್ತಿರುವಾಗ, ಈ ಕೆಂಪು ಮಣ್ಣಿನ ದೂಳು ಸೇವಿಸುತ್ತಾ ಇಲ್ಲೇ ಇರಬೇಕೆ ಅನ್ನಿಸುತಿತ್ತು. ನನ್ನ ಮುಂದಿನ ಯೋಜನೆಗಳನ್ನು ಅವರೊಂದಿಗೆ ಚರ್ಚಿಸುತ್ತಿದ್ದೆ ಮತ್ತು ಅವರೆಲ್ಲ ತಮ್ಮ ಕನಸುಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ಆದರೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಿದ್ದೆವು ಹೊರತು, ಯಾರನ್ನು ನಿರುತ್ಸಾಹಗೊಳಿಸುತ್ತಿರಲಿಲ್ಲ. ಯಾವುದಾದರು ಮದುವೆ ಅಥವಾ ಇನ್ನಾವುದೋ ಕಾರ್ಯಕ್ರಮಕ್ಕೆ ಆಮಂತ್ರಣ ಬಂದಾಗ ಎಲ್ಲರು ಒಟ್ಟಾಗಿ ಹೋಗುವುದು, ಯಾವಾಗಲಾದರೊಮ್ಮೆ ಎಲ್ಲರು ಒಟ್ಟಿಗೆ ಹೋಟೆಲುಗಳಿಗೆ ಡಿನ್ನರ್ ಮಾಡೋಕೆ ಸೇರ್ತಾಇದ್ದ್ವಿ. 

ಈ ಕೆಂಪು ಮಣ್ಣಿನ ಧೂಳಿನಲ್ಲಿ ಹೀಗೆ ದಿನಕಳೆಯುತ್ತಿರುವಾಗ, ಒಂದು ದಿನ ನನಗೆ ಬೆಂಗಳೂರಿನ ಒಂದು ಚಿಕ್ಕ ಕಂಪನಿಯಿಂದ ಕೆಲಸಕ್ಕೆ ಆಫರ್ ಬಂತು. ಜೊತೆಗೆ ಸ್ವಲ್ಪ ದಿನಗಳ ಹಿಂದೆ ಅಪ್ಲಿಕೇಶನ್ ಕಳಿಸಿದ ಮೈಸೂರು ವಿಶ್ವವಿದ್ಯಾಲದಲ್ಲಿನ ಒಬ್ಬ ಪ್ರಾಧ್ಯಾಪಕರಿಂದ ಪಿ ಎಚ್ ಡಿ ಸಂದರ್ಶನ ಕೂಡ ಬಂದಿತ್ತು. ನಾನು ಯಾವುದು ಸಿಕ್ಕರೂ ಹೋದರಾಯಿತು ಎನ್ನುವ ನಿರ್ಧಾರದಲ್ಲಿದ್ದೆ. ಕೆಲದಿನಗಳ ನಂತರ ಪಿಎಚ್ಡಿ ಗಾಗಿ ಸಂದರ್ಶನ ಕೊಟ್ಟುಬಂದೆ, ಆದರೆ ಅದು ಮುಂಚೆನೇ ಆ ಪ್ರಾಧ್ಯಾಪಕರ ಪರಿಚಯದವರಿಗೆ ಫಿಕ್ಸ್ ಆಗಿರುವ ವಿಷಯ ತಿಳಿದು ಬೇಜಾರೆನಿಸಿತು. ಕೊನೆಗೆ ಬೆಂಗಳೂರಿನ ಆ ಚಿಕ್ಕ ಕಂಪನಿಯ ಆಫರ್ ಒಪ್ಪಿಕೊಂಡೆ. ಸಂಬಳ ಕಡಿಮೆ ಇದ್ದರು ಆ ಕಂಪನಿಯ ಮಾಲೀಕರು, ಒಬ್ಬ ಪ್ರಖ್ಯಾತ ವಿಜ್ಞಾನಿ. ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ, ಬಿಡಬೇಡ ಅಂತ ನನ್ನ ಗುರುಗಳೊಬ್ಬರ ಆಜ್ಞೆಯ ಮೇರೆಗೆ, ಈ ಮೈನ್ಸ್ ನೌಕರಿಗೆ ತಿಲಾಂಜಲಿಯನ್ನಿಟ್ಟು ಬೆಂಗಳೂರಿನತ್ತ ಪಯಣ ಬೆಳೆಸಿದೆ. ಹಂಗೆ ಮುಂದೆ ಹೋಗ್ತಾ ಹೋಗ್ತಾ ಬೆಂಗಳೂರಿನಿಂದ, ಪುಣೆ, ನಂತರ ವಿದೇಶ ಪಯಣ, ಹೀಗೆ ಹೋಗ್ತಾ ಹೋಗ್ತಾ ಹೊಸ ಪರಿಚಯಗಳು ಆಗ್ತಾ, ಹಳೆಯ ಸಂಪರ್ಕಗಳು ಕಳಚುತ್ತ ಹೋಯಿತು. ಆಗೆಲ್ಲ ಇಂಟರ್ನೆಟ್ ಆಗಷ್ಟೇ ಕಾಲಿಟ್ಟಿತ್ತು, ಸಾಮಾಜಿಕ ಜಾಲತಾಣಗಳಂತೂ ದೂರದ ಮಾತು. ಮೊಬೈಲ್ ಫೋನ್ ಅಂದ್ರೆ ಗೊತ್ತೇ ಇರಲಿಲ್ಲ. ಮಾಡಿದರೆ ನೆನಪಿನಿಂದ ಎಸ್ಟಿಡಿ ಫೋನ್ ನಂಬರ್ಗಳ ಮೂಲಕ ಫೋನ್ ಮಾಡಿ ಮಾತಾಡಬೇಕು. ಅದಕ್ಕೆ ಒಂದು ಚಿಕ್ಕ ಡೈರಿನಲ್ಲಿ ನಂಬರ್ಗಳನ್ನ ನೆನಪಿನಿಂದ ಬರೆದಿಡಬೇಕು. ಹೀಗಾಗಿ ಈಗಿನಂತೆ ಅದು ಅಷ್ಟು ಸುಲಭದ ಕೆಲಸ ಆಗಿರಲಿಲ್ಲ. ಆ ಗ್ರೂಪಿನಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಸಂಪರ್ಕದಲ್ಲಿದ್ದವರೆಂದರೆ ಏನ್. ರಾಘವೇಂದ್ರ ಮಾತ್ರ. ಶಿವರಾಜ್ ಸರ್ ಕೂಡ ಸಂಪರ್ಕದಲ್ಲಿದ್ದಾರೆ, ಆದರೆ ಅವರಿಗೂ ಯಾರ ಸಂಪರ್ಕ ಇಲ್ಲ ಅನಿಸಿತು. ಒಂದು ತಿಂಗಳ ಹಿಂದೆ ಏನ್. ರಾಘವೇಂದ್ರ ಫೋನ್ ಮಾಡಿದ್ದ. ನೀನು ಅವಾಗವಾಗ ಕೇಳ್ತಾಯಿದ್ದೆ ಯಾರಾದ್ರೂ ಸಂಪರ್ಕ ಇದ್ದಾರಾ ಅಂತ. ಮೊನ್ನೆ ಹೊಸಪೇಟೆಯ ಹಾಸ್ಪಿಟಲ್ ಒಂದರ ಲ್ಯಾಬಿನಲ್ಲಿ ಎಂ. ರಾಘವೇಂದ್ರ ಅವರನ್ನ ನೋಡಿ ಮಾತಾಡಿಸಿದೆ. ನನಗು ಅಪರೂಪ ಅನಿಸಿತು, ಯಾಕಂದ್ರೆ ಬಹಳ ದಿನಗಳ ಭೇಟಿ. ಅವಾಗ ನಿನ್ನ ಬಗ್ಗೆ ಹೇಳಿದೆ, ನಂಬರ್ ಕೊಟ್ಟಿದ್ದಾರೆ ಕಳಿಸ್ತೀನಿ, ಮಾತಾಡು ಅಂದ. ಎಷ್ಟೊಂದು ಖುಷಿ ಆಯಿತು ಅಂದ್ರೆ ನಂಬರ್ ಸೇವ್ ಮಾಡಿಕೊಂಡು, ತಟ್ಟನೆ ವಾಟ್ಸಪ್ಪ್ನಲ್ಲಿ ಅವರಿಗೊಂದು ಮೆಸೇಜು ಕಳಿಸಿದೆ. ಅವತ್ತೇ ನೋಡಿ ಹೊಸಪೇಟೆಯ  ಕೆಮ್ಮಣ್ಣಿನಲ್ಲಿ ಕಳೆದ ಆ ದಿನಗಳು ಸುಂದರವಾದ ನೆನಪುಗಳ ಸರಣಿ ನನ್ನ ಸ್ಮೃತಿಪಟಲದಲ್ಲಿ ಹಂಗೆ ಬರೋಕೆ ಶುರುಮಾಡಿತು. ನಂತರ ನನ್ನ ತಲೆಗೆ ಹೊಳೆದದ್ದು ಏಕೆ ಆ ಎಲ್ಲ ನೆನಪುಗಳನ್ನ ನನ್ನ ಬ್ಲಾಗಿನ ಒಂದು ಲೇಖನದ ರೂಪದಲ್ಲಿ ಬರೆದಿಡಬಾರದೆನಿಸಿತು. ಅದಕ್ಕೆ ಈ ಲೇಖನ ಬರೆದು ನಿಮ್ಮ ಮುಂದಿಡ್ತಾಯಿದ್ದೀನಿ. 

ಈ ಲೇಖನದ ಮುಖಾಂತರವಾದರೂ ಹೊಸಪೇಟೆಯ ಕೆಮ್ಮಣ್ಣಿನ ಧೂಳಿನಲ್ಲಿ ಕಳೆದ ಆ ದಿನಗಳು ನನ್ನಲ್ಲಿ ಎಂದೆಂದಿಗೂ ಹಸಿರಾಗಿರುತ್ತವೆಂದು ನನ್ನ ಅನಿಸಿಕೆ.........