ಭಾನುವಾರ, ಸೆಪ್ಟೆಂಬರ್ 23, 2018

24ನೇ ಮೇನ್ ಬಸ್ ನಿಲ್ದಾಣದಲ್ಲಿ ಒಂದು ಮುಂಜಾನೆ.....

ಅಲರಾಮು ಕರ್ಕಶವಾಗಿ ಹೊಡ್ಕೋಳಕ್ಕ್ ಶುರುಮಾಡಿತು. ಎದ್ದು ನೋಡ್ತಿತಿ ಬೆಳಗಿನ ಜಾವ ಸರಿಯಾಗಿ 5-30 ಆಗಿದೆ. ಏಳೋಕ ಮಾನಸಾಗ್ತಿಲ್ಲ, ಆದ್ರು ಕರ್ಮ......ಏಳಲೇಬೇಕು. ಪಕ್ಕದಲ್ಲಿ ನನ್ನವಳು ಮತ್ತು ಮಗಳು ಇಬ್ರು ಇನ್ನು ನೀರಾಳವಾಗಿ ಮಲಗಿದ್ದಾರೆ....ಪಾಪ ಆರಾಮಾಗಿ ಮಲಗಿದ್ದಾವೆ ಯಾಕೆ ಎಬ್ಬಸೋದು, ಹೋಗ್ಲಿಬಿಡು ಅನ್ನಿಸ್ತು. ಈ ಅಲರಾಮ ಶಬ್ದ ಇದೆ ನೋಡಿ......ಇದೆಂಗಂದ್ರೆ ನೀವೇಲ್ಲಾದ್ರೂ ಟ್ರಿಪ್ಗೋ, ಫ್ಯಾಮಿಲಿ ಔಟಿಂಗೋ ಹೋಗೋದಿದ್ರೆ ಆಗ ಕರ್ಕಶ ಅನ್ಸಲ್ಲ. ಹೋಗ್ಲಿಬಿಡಿ, ಈಗ ನನ್ನ ವಿಷಯಕೆ ಬರೋಣ....ಈ ಬೃಹತ್ತ್ ಬೆಂದಕಾಳೂರಿನಲ್ಲಿ ನನ್ನ ಬೆಳೆ ಬೇಯಿಸ್ಕೊಳ್ಳೊದಕ್ಕ್ಕೆ ಬಂದಿರುವ, ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಮಾಡುವ ಕಾರ್ಪೊರೇಟ್ ನೌಕರ. ಇದು ನನಗೆ ಒಂತರ ಬಯಸದೆ ಬಂದ ಭಾಗ್ಯ, ಏಕೆಂದ್ರೆ ನಾನು ಇದೆ ಕೆಲ್ಸನೆ ಮಾಡ್ಬೇಕೆಂದು ಗುರಿಇಟ್ಟ್ಕೊಂಡು ಬಂದೋನಲ್ಲ. ಏನೋ...ಪರಿಸ್ಥಿತಿ ಎಲ್ಲೆಲ್ಲೋ ಸುತ್ತಾಡಿಸಿಕೊಂಡಬಂದು ಕೊನೆಗೆ ಇಲ್ಲ ತಗಲಾಕಿಸಿತು....😂.... ಈ ಜೀವನ ಅಂದ್ರೆನೇ ಹಂಗೆರೀ, ನಾವೇನೋ ಪ್ಲಾನ್ ಮಾಡಿರ್ತೀವಿ.....ಆದ್ರೆ ಅದು ನಮ್ಮ್ ಪ್ಲಾನ್ಗಳನ್ನೆಲ್ಲ ಹೊಲಸೆಲ್ಆಗಿ ಗಿರಗಿಟ್ಟೇಥರ ತಿರ್ಗಿಸಿ ಒಂದು ದಿನ ನಮ್ಮನೆಲ್ಲೋ ಒಗದಬಿಡತ್ತೆ. ಬದುಕೋ ಹಠಇದ್ರೆ ತೆವಲಕೊಂಡು ಮೇಲೇಳಲೇಬೇಕು. ನಾನು ಎಸೆಸೆಲ್ಸಿ ಆದ್ಮೇಲೆ ವಿಜ್ನ್ಯಾನ ಆರಿಸ್ಕೊಂಡಿದ್ದು ಡಾಕ್ಟರ್ ಆಗಕ್ಕೆ, ಆದ್ರೆ ದಾರಿತಪ್ಪಿ ಬೇಸಿಕ್ ಸೈನ್ಸ್ ಸೇರ್ಕೊಂಡು, ಸಂಶೋಧನೆಯ ಹಿಂದೆ ಬಿದ್ದು 2-3 ದೇಶಗಳನ್ನ ತಿರುಗಾಡಿ, ಎಂಎಸ್ಸಿ, ಪಿಎಚ್ಡಿ ಅಂತ ಏನೇನೋ ಮಾಡ್ಕಂಡು,   ಈಗ ಬೇರೆ ಡಾಕ್ಟರ್ ಆಗಿ, ಯಾವುದೊ ದೇಶದಲ್ಲಿ ಕುತ್ಕೊಂಡು ಇನ್ನ್ಯಾವನೋ ಕೊಡೋಕೆಲ್ಸನ ಮುಚ್ಚ್ಕೊಂಡ್ ಮಾಡ್ಕೊಂಡು ಹೋಗ್ತಾಯಿದ್ದೀನಿ.................
ಒಹ್! ಮರ್ತೆಹೋಯಿತು.....ಕಥೆ ಮುಂದುವರಿಸಬೇಕಲ್ಲ. ಬೆಳಗಿನ ಕರ್ಮಚಾರಗಳನ್ನ ಮುಗಿಸ್ಕೊಂಡು ಬರೋವಷ್ಟ್ರಲ್ಲಿ, ಕಿಚನ್ನಲ್ಲಿ ನನ್ನವಳು ಆಗ್ಲೇ ಎದ್ದು ಉಪಹಾರ ರೆಡಿಮಾಡ್ತಿದ್ಲು. ಈ ವೈವಾಹಿಕ ಜೀವನ ಅಂದ್ರೆ ಹಂಗೆ ನೋಡಿ, ಇಲ್ಲಿ ಪತಿ-ಪತ್ನಿ ಇಬ್ರು ಸಮನಾಗಿ ಹೆಣಗಾಡಲೇಬೇಕು......ಆಗ್ಲೇ ಬದುಕೆಂಬ ಜಟಕಾಬಂಡಿ ಚನ್ನಾಗೋಡೋದು. ಆಮೇಲೆ, ನಿಮ್ಮ ವೈವಾಹಿಕ ಜೀವನದಲ್ಲಿ ನೆಮ್ಮದಿ, ಸಂತೋಷ ಇರಬೇಕಂದ್ರೆ ಒಳ್ಳೆ ಹೆಂಡ್ತಿ ಸಿಗ್ಬೇಕಂತೆ......ಇಲ್ಲಾಂದ್ರೆ ಸಾಕ್ರೆಟಿಸ್ ಹೇಳೋಥರ ಗಂಡ ತತ್ವಜ್ನ್ಯಾನಿ ಆಗ್ಬಿಡ್ತಾನಂತೆ. ಅದೃಷ್ಟವಶಾತ್.....ನಂಗೆ ಚನ್ನಾಗಿ ಹೊಂದುಕೊಂಡು ಬದುಕೋ ಒಳ್ಳೆ ಹೆಂಡ್ತಿ ಸಿಕ್ಕಬಿಟ್ಟಳು. ಅಂಬಿಕಾತನಯದತ್ತರು ಹೇಳಿದ ಹಾಗೆ "ನಾನು ಬಡವಿ...ಆತ ಬಡವ.....ಒಲವೇ ನಮ್ಮ ಬದುಕು" ಅನ್ನೋಹಾಗೆ ಯಾವುದೇ ಅತೀಆಸೆ ಇಲ್ಲದೆ, ಇರೋ ಅವಕಾಶನ ಚನ್ನಾಗಿ ಉಪಯೋಗಿಸಿಕೊಂಡು ಜೀವನ ಮಾಡ್ಕೊಂಡು ಹೋಗ್ತಿದ್ದೀವಿ. ಹಾಗಂತ ಜಗಳನೇ ಆಡೋದಿಲ್ಲ ಅಂತೇನಿಲ್ಲ.....ಯಾವಾಗ್ಲೋ ಒಮ್ಮೆ ಸಣ್ಣಪುಟ್ಟ ವಿಷಯಕ್ಕೆ ಸ್ವಲ್ಪ ಕಿರಿಕ್ ಆದರು, ಬೇಗನೆ ಪರಿಹಾರ ಕಂಡ್ಕೊಂಡ್ ಬಿಡ್ತಿವಿ. ಉಪಹಾರ/ಚಹಾ ಆದ್ಮೇಲೆ ರೆಡಿಯಾಗಿ ಇನ್ನೇನ್ ಕೆಲ್ಸಕ್ಕೆ ಹೋಗೋಣ ಅನ್ನೋದ್ರಲ್ಲಿ ನನ್ನ ಮಗಳು ಎದ್ದ್ಬಿಟ್ಟಳು. ಅವಳಿಗೆ ಎದ್ದತಕ್ಷಣ ಅಪ್ಪನ ಮುಖ ನೋಡ್ಬೇಕು.....ಅಪ್ಪನ ಮಗಳು ನೋಡಿ. ಇವಳು ಹೆಂಗಂದ್ರೆ, ಚನ್ನಾಗಿ ತಾಯೀಹೊಟ್ಟೇಲಿ ಬೆಳೆದು ಬಾರಮ್ಮ ಅಂದ್ರೆ, ಅವಳಿಗದೇನು ಅರ್ಜೆಂಟ್ ಇತ್ತೋ ಗೊತ್ತಿಲ್ಲ, ಏಳುವರೆ ತಿಂಗಳಿಗೇನೇ ಭೂಮಿಗೆ ಬಂದಬಿಟ್ಲು. ಹುಟ್ಟಿದಾಗ ಕೇವಲ ಒಂದೂವರೆ ಕಿಲೋ ತೂಕದ ಕೂಸು, NICU ನಲ್ಲಿ ಎರಡೂವಾರ ಎಂಜಾಯಮಾಡಿ, ನಮ್ಮ ಕೈಸೇರಿದ್ಲು. ಅವಳನ್ನ ಒಂದೂವರೆ ಕೆಜಿ ಇಂದ ಹನ್ನೆರಡು ಕೆಜಿ ಮಾಡಕ್ಕೆ ನಾವಿಬ್ರು ಗಂಡ-ಹೆಂಡ್ತಿ ಪಟ್ಟ ಕಷ್ಟ ಆ ದೇವ್ರಿಗೆ ಗೊತ್ತು. ಇರಲಿ ಇದು ಒಂದು ಥರ ಹೊಸ ಅನುಭವ, ಏನ್ಮಾಡಕಾಗತ್ತೆ.......ಅನುಭವಿಸಲೇಬೇಕು. ಈಗ ಅವಳಿಗೆ ನಾಲ್ಕು ವರ್ಷ, ಮನೆ ಹತ್ತಿರದಲ್ಲೇ ಒಂದು ಸ್ಕೂಲ್ಗೆ ಹಾಕಿದ್ದೀವಿ. ಮಕ್ಕಳು ಆಡುತ್ತ, ನಲಿಯುತ್ತ ಬೆಳೆಯೋದು ನೋಡೋಕೆ ಚಂದ.......  ಆ ಫೆಸ್ನಲ್ಲಿ ಅವರು ಕೊಡೊ ಖುಷಿ ಇದೆ ನೋಡಿ ಅದನ್ನ ಮಾತಿನಲ್ಲಿ ವರ್ಣಿಸೋಕಾಗಲ್ಲ. ಅವಳು ಏನಾದ್ರಿ ಕಲಿಲಿ, ಏನಾದ್ರು ಮಾಡ್ಲಿ.......ಯಾವುದೇ ಒತ್ತಡ ಹೆರಲ್ಲ, ಅವಳ ಜೀವನ, ಅವಳ ಇಚ್ಛೆಯಂತೆ ಆಗ್ಲಿ ಅಂತ ನಿರ್ಧಾರ ಮಾಡಿದ್ದೀವಿ. ಅಯೀತು ಕಥೆಗೆ ಬರೋಣ......ರೆಡಿ ಆಗಿ ಅಮ್ಮ ಮಗಳಿಗೆ ಟಾಟಾ ಬೈ ಬೈ ಹೇಳಿ, ಈ ಲೇಖನದ ಶೀರ್ಷಿಕೆಯಲ್ಲಿ ಹೇಳಿದ 24ನೇ ಮೇನ್ ಬಸ್ ನಿಲ್ದಾಣದ ಕಡೆಗೆ ಪ್ರಯಾಣ ಬೆಳೆಸಿದೆ...... 

ಈ ಜಯನಗರ, ಜೆಪಿ ನಗರದಲ್ಲಿರೋರಿಗೆ 24ನೇ ಮೇನ್ ಬಸ್ ನಿಲ್ದಾಣ ಎಲ್ಲಿದೆ ಅಂತ ಗೊತ್ತಿರಬಹುದು. ಜಯನಗರ 5ನೇ ಬ್ಲಾಕ್ನಲ್ಲಿರೋ ರಾಯರ ಮಠದಿಂದ, ಜೆಪಿ ನಗರದ 7ನೇ ಹಂತದಲ್ಲಿರೋ ಬ್ರಿಗೇಡ್ ಮಿಲ್ಲೇನಿಯಂ ಮಧ್ಯಇರುವ 24ನೇ ಮೇನ್ ರಸ್ತೆಯಲ್ಲಿ, RV ದಂತಮಹಾವಿದ್ಯಾಲಯದ ಸಿಗ್ನಲ್ ನಂತರ ಬರುವ ಬಸ್ ನಿಲ್ದಾಣಕ್ಕೆ 24ನೇ ಮೇನ್ ಬಸ್ ನಿಲ್ದಾಣ ಅನ್ನೋದು. ನಮ್ಮ ಕಂಪನಿಯ ಕ್ಯಾಬು, ನನ್ನನ ಆಫಿಸಿಗೆ ಕರ್ಕೊಂಡ್ ಹೋಗೋಕೆ ಎತ್ತಾಕೊಂಡ್ ಹೋಗೋದು ಇದೆ ಪಾಯಿಂಟ್ನಿಂದ. ನನ್ನ ಬೆಳಗಿನ ಕೆಲವು ಜೀವನದ ಅನುಭವಗಳು ಶುರುವಾಗೋದೆ ಈ ಪಾಯಿಂಟ್ನಿಂದ.........
ಈ ಬೆಂಗಳೂರಿನಲ್ಲಿ ಹಿಂತಾ ಪಿಕಪ್-ಪಾಯಿಂಟ್ಗಳು ಬೇಜಾನ್ ಇದಾವೆ.....ಮತ್ತೆ ಅಲ್ಲಿ ಸಾಮಾನ್ಯವಾಗಿ, ಕತ್ತಲ್ಲಿ ಒಂದು ID-ಕಾರ್ಡು ನೇತಾಕೊಂಡು, ಬೆನ್ನಿಗೆ ಒಂದು backpack ತಗಲಾಕೊಂಡು, ತಂತಮ್ಮ ಕ್ಯಾಬಿಗೆ ಕಾಯಿತಿರೋ ನಮ್ಮಂತ ತಿಂಗಳಕೂಲಿಗಳನ್ನ ನೋಡಬಹುದು. ಇಲ್ಲಿ ನಾವೆಲ್ಲ ಸೇರೋದು ಐದೋ-ಹತ್ತೋ ನಿಮಿಷ ಅಷ್ಟೇ, ಆದ್ರೆ ಪ್ರತಿದಿನ ಅದೇ ಜಾಗದಲ್ಲಿ ಸೇರೋದ್ರಿಂದ, ಅದೇನೋ ಒಂದು ತರಹದ ಬಾಂಧವ್ಯ ಬೆಳೆದುಬಿಟ್ಟಿರುತ್ತದೆ. ಹಿಂಗೇ ನಂಗೆ ಪರಿಚಯ ಆದವರು  3-4 ಜನ ಇರಬಹುದು. ಒಬ್ರು ನನಷ್ಟೇ ವಯಸ್ಸಿರಬಹುದು, ಟೈಮಿಗೆ ಸರಿಯಾಗಿ ಬರ್ತಾರೆ, ಆದರು ಅವರ ಪ್ರತಿದಿನದ  ಮಾತು ಶುರು ಆಗೋದೆ ನನ್ನ ಕೇಳೋದು ಒಂದೇ ಪ್ರಶ್ನೆಇಂದ, "ಸರ್, ನನ್ನ ಕ್ಯಾಬ್ ಹೊಯೀತ" ಅಂತ....ಇಲ್ಲ ಅನ್ಸತ್ತೆ ಅಂದ್ರೆ "ಓಕೆ, ಥ್ಯಾಂಕ್ಸ್" ಅಷ್ಟೇ, ಮುಗಿತು. ಆಮೇಲೆ, ಒಬ್ರು ವಯಸ್ಸಲ್ಲಿ ಹಿರಿಯರು, ವಯಸ್ಸು 60 ದಾಟಿರಬಹುದು, ಪಾಪ ಏನ್ ತೊಂದ್ರೇನೋ ಏನೋ ನಿವೃತ್ತಿ ವಯಸ್ಸಲ್ಲಿ ಕೂಡ ಯಾವುದೊ ಕಂಪನಿಲಿ ಕೆಲ್ಸಮಾಡೋಕೆ ಹೋಗೋದು. ಅತಿಯಾದ ಸ್ವಾಭಿಮಾನ ಇರಬಹುದು, ಅಥವಾ ಮಕ್ಕಳು ಕೈಬಿಟ್ಟು ಹೋಗಿರಬಹುದು....ಕಾರಣ ಬೇರೆ ಇನ್ನೇನೋ ಇರಬಹುದು. ಆದರೆ ಒಳ್ಳೆ ಮನುಷ್ಯ, ಚೆನ್ನಾಗಿ ಮಾತಾಡ್ತಾರೆ. ಅಲ್ಲಿ ಸೇರಿರೋ ಎಲ್ಲರನು ಮಾತಾಡ್ಸಿ, ಹಾಯ್, ಹಲೋ ಹೇಳೋದು. ನಾನೂ ಕೂಡ ಅವರ ಜೊತೆ ರಾಜಕೀಯ, ವಿವಿಧ ಸುದ್ದಿ ಹೀಗೆ ಮಾತಾಡಿದ್ದುಂಟು. ಇದೆ ಥರ ಇನ್ನಿಬ್ರು ಬರ್ತಾರೆ, ಅವರುದು ಕೂಡ ಒಂದು ಮುಗುಳ್ನಗೆ....ಎರಡು ಮಾತು ಹೀಗೆ ನಮ್ಮೆಲ್ಲರ ದಿನ ಶುರು ಆಗತ್ತೆ. ಈ ಗುಂಪಿನಲ್ಲಿ ಒಬ್ಬ ವಯಸ್ಸಿನ ಹುಡ್ಗಿನು ಬರ್ತಾಳೆ....ಸ್ವಲ್ಪ ದೂರ ನಿಂತಿರ್ತಾಳೆ, ನೋಡೋಕ ಚಂದ ಇದಾಳೆ, ಕೆಲ್ಸಕ್ಕೆ ಸೇರಿ ಬಹಳ ದಿನ ಆಗಿರಲಿಕ್ಕಿಲ್ಲ. ಬೆಳಗಿನ ತಂಪಲ್ಲಿ ಒಂದು ಇಂಪಾದ ಮುಗುಳುನಗೆಯೊಂದಿಗೆ ಒಂದು ಓರೆನೋಟ ಬೀರ್ತಾಳೆ.....ಅಷ್ಟು ಸಾಕು ಅವತ್ತಿಗೆ ಎನರ್ಜಿ ಬೂಸ್ಟರ್. ನಾನು ಅಷ್ಟೇ ಒಂದು ಸಿಂಪಲ್ ಸ್ಟೈಲು. ನಾನು ಹುಡುಗೀರನ್ನ ದೂರದಿಂದ ನೋಡೋದಷ್ಟೇ, ಮಾತಾಡ್ಸೋದು ಬಹಳ ಕಡಿಮೆ. ಬಹಳ ಪರಿಚಯ ಇದ್ರೆ ಸ್ವಲ್ಪ ಓಪನ್ ಆಗಿ ಮಾತಿಗಿಳಿತಿನಿ. ಹುಟ್ಟುಗುಣನೋ ಅಥವಾ ಸಂಕೋಚನೋ ಆ ದೇವರಿಗೆ ಗೊತ್ತು. ಈ ಜಾಗದಲ್ಲಿ  ದಿನ ಸಿಗೋ ನಾವೆಲ್ಲ ಒಂದುರೀತಿ ಪರಿಚಯವಿಲ್ಲದ ವಿಭಿನ್ನ ಪರಿಚಿತರು. ಒಂದು ದಿನ ನಮ್ಮಲ್ಲಿ ಯಾರಾದ್ರೂ ಒಬ್ರು ಕಾಣಲಿಲ್ಲ ಅಂದ್ರೆ ಎಲ್ಲರಿಗೂ ಏನೋ ಕಳ್ಕೊಂಡಗೆ ಆಗೋದು......ಮಾರನೇ ದಿನ ಯಾಕ್ರೀ ನಿನ್ನೆ ಕಾಣಲಿಲ್ಲ ಅಂತ ಕೇಳೋದು....ಅಂತಹ ಒಂದು ಬಾಂಧವ್ಯ ಬೆಳೆದ್ಬಿಟ್ಟಿದೆ. ಹಂಗೆ ಅದೇ ದಾರಿಲಿ ದಿನ ವಾಕಿಂಗ್ ಹೋಗೋ ಒಂದಿಬ್ಬರು ಕೂಡ ಮುಖಪರಿಚಯ ಆಗಿದ್ದುಂಟು, ಅವರು ಕೂಡ ಕೈಬೀಸಿ ಹಾಯ್, ಹಲೋ ಹೇಳೋದು......ನೋಡಿ ಹೆಂಗಿದೆ ಈ ಪಿಕಪ್-ಪಾಯಿಂಟು......
ಒಂದ ದಿನ ನನ್ನ ಕ್ಯಾಬ್ ಬರೋದು ಲೇಟ್ ಆಗಿತ್ತು, ನಮ್ಮ ಗ್ರೂಪಿನವರೆಲ್ಲ ಹೋಗಿಬಿಟ್ಟಿದ್ರು. ಬೇರೆ ದಾರಿ ಇಲ್ಲದೆ ಒಬ್ಬನೇ ಕೂತ್ಕೊಂಡು ಹೋಗೋ-ಬರೋ ಕಾರುಗಳನ್ನೆಲ್ಲ ನೋಡ್ತಾ, ನಮ್ಮ ದೇಶ ಎಷ್ಟೊಂದು ಮುಂದುವರಿತಲ್ಲ, ಒಂದ ಕಾಲದಲ್ಲಿ ಬರಿ ಅಂಬಾಸಿಡರ್, ಫಿಯಟ್ ಕಾರುಗಳು ಓಡಾಡ್ತಾಇದ್ದವು, ಈಗ ಎಲ್ಲ ಫಾರಿನ್ ಬ್ರಾಂಡ ಕಾರುಗಳು, ಅಂತ ಯೋಚಿಸ್ತಾ ಕುಂತಿದ್ದೆ. ಅಷ್ಟ್ರಲ್ಲಿ ಎಲ್ಲಿಂದಲೋ ಒಂದು ಸೋತ ಧ್ವನಿ, "ಸಾಹೇಬ್ರ ನಮಗ ಸ್ವಲ್ಪ ಈ ಅಡ್ಡೆಸರ ಎಲ್ಲಿ ಬರತೈತಿ ಅಂತ ಹೇಳ್ರಿಪಾ ಪುಣ್ಯ ಬರತೈತಿ" ಅಂತ........ಅರೆ ನಮ್ಮ ಉತ್ತರ ಕರ್ನಾಟಕದ ಭಾಷೆ. ತಿರುಗಿ ನೋಡ್ತೀನಿ, ಆಗಷ್ಟೇ ಬಸ್ ಇಳಿದು ತನ್ನ ಕುಟುಂಬದ ಹೊರೆಯನ್ನೆಲ್ಲ ತಾನೆ ಹೊತ್ತಿರೋಥರ, ಒಂದು ಗೋಣಿಚೀಲ ಹೆಗಲಮೇಲೆ ಹೊತ್ತುಕೊಂಡು ನಿಂತಿದ್ದಾನೆ, ಸೋತು ಸುಣ್ಣಗಾಗಿದ್ದಾನೆ. ಜೊತೆಗೆ ಹೆಂಡತಿ ಮೂರು ಮಕ್ಳು. ಅವರೆಲ್ಲರ ಮುಖದಲ್ಲಿ ಭಯದ ಛಾಯೆ......ಮನೆ ಯಜಮಾನ ಬದುಕು ಕಟ್ಟಕೊಳ್ಳೋಕೆ ಗೊತ್ತಿಲ್ದೆಇರೋ ಊರಿಗೆ ಕರ್ಕೊಂಡ್ ಬಂದಾನೆ, ಮುಂದೆ ಹೆಂಗೆ.....ಮಕ್ಳುಮರಿ ಕಟ್ಕೊಂಡು ಈ ದೊಡ್ಡ ಊರಲ್ಲಿ ಎಲ್ಲಿಅಂತ ಜೀವನ ಮಾಡೋದು, ಅನ್ನೋ ಆತಂಕದ ಛಾಯೆ ಅವನ ಹೆಂಡತಿ ಕಣ್ಣಲ್ಲಿ.......ಮಕ್ಕಳಂತೂ ಏನು ತಿಳಿಯದ ವಿಷ್ಮಯ ಲೋಕಕ್ಕೆ ಬಂದವರಂತೆ, ಇಲ್ಲಿ ಏನು ನಡೀತಿದೆ ಅಂತ ಪ್ರಶ್ನಾರ್ಥಕವಾಗಿ ನೋಡೊಹಂಗಿತ್ತು.......ಅವರ ಪರಿಸ್ಥಿತಿ ನೋಡಿ ಕರುಳು ಚುರ್ರ್ ಅಂತೂ.......
             
ನಮ್ಮ ಉತ್ತರ ಕರ್ನಾಟಕದ ಹೆಚ್ಚಿನ ಜಿಲ್ಲೆಗಳು ಕಾಲಕಾಲಕ್ಕೆ ಮಳೆ ಸುರಿಯದೆ, ದಿನೇ ದಿನೇ ಮರಭೂಮಿಥರ ಬದಲಾಗ್ತಾ ಇದಾವೆ. ಇನ್ನು ಮಳೆನೇ ನಂಬಿಕೊಂಡು ಕೃಷಿ ಮಾಡೋ ನಮ್ಮ ಜನ, ಮಳೆ ಇಲ್ಲದೆ ಹೀನಾಯ ಪರಿಸ್ಥಿಯಲ್ಲಿ ಇದ್ದಾರೆ. ಅವರ ಹತ್ತಿರ ಭೂಮಿ ಇದೆ, ಆದ್ರೆ ಏನು ಮಾಡೋದು ನೀರೇ ಇಲ್ಲ. ಸಾಲಗೀಲಾ ಮಾಡಿ ಮಳೆನೇ ನಂಬಿಕೊಂಡು ಬೆಳೆ ಬಿತ್ತಿ ಮಳೆ ಕೈಕೊಟ್ಟಮೇಲೆ ಆತ್ಮಹತ್ತೆ ಮಾಡ್ಕೊಂಡು ತಮ್ಮ ಕಥೇನ ಮುಗಿಸ್ತಿದ್ದಾರೆ. ವಿಪರ್ಯಾಸ ಅಂದ್ರೆ ಸರಕಾರಗಳು ಯಾವುದೇ ಉಪಯುಕ್ತ ಸಹಾಯ ಮಾಡ್ತಾಇಲ್ಲ. ನಮ್ಮ ಜನಕ್ಕೆ ಗೊತ್ತಿರೋದಂದ್ರೆ ಒಂದು ವ್ಯವಸಾಯ, ಇಲ್ಲಾಂದ್ರೆ ಕೂಲಿನಾಲಿ. ಹಾಗಾಗಿ, ಈ ಥರ ಕಷ್ಟದಲ್ಲಿ ಇರೋ ಎಷ್ಟೋ ಜನ, ಮಳೆ ಕೈಕೊಟ್ಟಮೇಲೆ, ಗಂಟು ಮೂಟೆ ಕಟಗೊಂಡು ಹೊಲ-ಮನೆ ಬಿಟ್ಟು, ಗುಳೇ ಅಂತ ದೊಡ್ಡ ದೊಡ್ಡ ಊರುಗಳಿಗೆ ಏನಾದ್ರು ಒಳ್ಳೆ ಕೂಲಿ ಕೆಲ್ಸನಾದ್ರು ಸಿಗಬಹುದಾ ಅಂತ ಆಸೆಇಟ್ಟ್ಕೊಂಡು ಬದುಕು ಕಟ್ಕೊಳ್ಳೋಕೆ ಬರ್ತಾರೆ. ಬೆಳಿಗ್ಗೆ ಮೆಜೆಸ್ಟಿಕ್, ರೈಲು ನಿಲ್ದಾಣದಲ್ಲಿ ಹೋಗ್ನೋಡಿ ಈ ಥರ ಗುಂಪು ಗುಂಪಲ್ಲಿ ಮಕ್ಳುಮರಿ ಕಟಗೊಂಡು ಬರೋ ಜನ್ರನ್ನ ಕಾಣ್ತಿರ. ಇಲ್ಲಿ ಯಾವನೋ ಕಾಂಟ್ರಾಕ್ಟರು ನಿಮಗೆ ಕೆಲಸ ಕೊಡಿಸ್ತೀನಿ ಬನ್ನಿ ಅಂತ ಕರದು, ಗಾರೆಕೆಲಸನೊ, ಇಲ್ಲ ಇನ್ನ್ಯಾವುದೇ ಕಟ್ಟಡ ಕಟ್ಟುವ ಕೆಲಸಮಾಡೋಕೆ ಸೇರಿಸ್ತಾನೇ. ಇವರು ಅದೇ ಕಟ್ಟಡದ ಕೆಳಗೆ ಒಂದು ಸಣ್ಣ ಮನೆ ಥರ ಮಾಡ್ಕೊಂಡು ಜೀವನ ಮಾಡ್ತವೆ......ಪಾಪ ಎಷ್ಟೋ ಸಲ ಕಟ್ಟಡ ಕುಸಿದು ಕೆಳ್ಗಡೆ ಎಷ್ಟೋಜನ ಸಿಕ್ಕಾಕೊಂಡು ಪ್ರಾಣಕಳ್ಕೊಡಿದ್ದು ಉಂಟು........ಈಗ ಅಡ್ರೆಸ್ ಕೇಳ್ಕೊಂಡು ನನ್ನ ಮುಂದೆ ನಿಂತಿರೋ ವ್ಯಕ್ತಿನೂ ಇದೆ ಥರ ಹೋರಾಟದ ಬದುಕು ಮಾಡ್ತಿರೊ ಜೀವಿ. ಆ ಚೀಟಿ ಇಸ್ಕೊಂಡು ನೋಡಿದೆ, ಪೆನ್ನಿನಿಂದ ಬರಿದಿರೋ ಅಡ್ದ್ರೆಸ್ಸು, ಕೆಳಗೆ ಒಂದು ಫೋನ್ ನಂಬರ್ ಇತ್ತು. ಫೋನ್ ಮಾಡ್ಬೇಕಾ ಅಂತ ಕೇಳಿದೆ ಬೇಡರೀ, ವಿಳಾಸ ಎಲ್ಲಿ ಬರತೈತಿ ಹೇಳ್ರಿ ಸಾಕು ಅಂದ.......ಆ ವಿಳಾಸ ಇರೋ ದಿಕ್ಕಿನ ಕಡೆಗೆ ಕೈಮಾಡಿ, ಹಿಂಗೇ ಹತ್ತು ನಿಮಿಷ ನಡೀತಾ ಹೋದ್ರೆ ಈ ವಿಳಾಸ ಬರತ್ತೆ ಅಂತೆ ಹೇಳಿ ಮತ್ತೆ ಯೋಚನಾಲಹರಿಯಲ್ಲಿ ಮುಳುಗಿದೆ.......
ನನ್ನಂಥಹ ಎಷ್ಟೋಜನ ಯುವಕರು, ಯಾವಾದ್ಯದೊ ದೇಶಗಳಿಗೋಗಿ, ಏನೆಲ್ಲಾ ಕಲಿತು, ಹೊಸ ಹೊಸ ಅನುಭವ ಪಡ್ಕೊಂಡು ನಮ್ಮ ದೇಶಕ್ಕೆ ಬರ್ತೀವಿ, ಆದ್ರೆ ವಾಪಾಸ್  ಬಂದಮೇಲೆ, ಒಂದು ಕೆಲಸ ಹಿಡ್ಕೊಂಡು ತಿಂಗಳ ಕೊನೆ ಸಂಬಳಕ್ಕೆ ಹೆಣಗಾಡೋದು ಬಿಟ್ಟು, ಈ ದೇಶಕ್ಕೆ, ಸಮಾಜಕ್ಕೆ ಏನು ಕೊಡುಗೆ ಕೊಡ್ತಾಇದ್ದೀವಿ?? ಈ ವ್ಯಕ್ತಿಥರ ಎಷ್ಟೋ ಜನ ಕಷ್ಟದಲ್ಲಿರೋರಿಗೆ ಬದುಕು ಕಟ್ಟಕೊಳ್ಳೋಕೆ ಏನಾದ್ರು ಉಪಯುಕ್ತವಾದ ವ್ಯವಸ್ಥೆ ಕಲ್ಪಿಸಿಕೊಡೋ ಪ್ರಯತ್ನಗಳು ಆಗ್ತಾ ಇಲ್ಲವಲ್ಲ, ಅನ್ನೋ ಅಸಹಾಯಕ ನೋಟ ಬೀರುತ್ತಾ, ಅವನು ಹೋದ ದಿಕ್ಕಿನ ಕಡೆಗೆನೇ ನೋಡ್ತಾ ಕೂತಬಿಟ್ಟೆ........
ಅಷ್ಟ್ರಲ್ಲಿ ಜೋರಾದ ಕ್ಯಾಬ್ ಹಾರ್ನ್ ಶಬ್ದ ಕೇಳಿತು....ನೋಡ್ತೀನಿ ನಮ್ಮ್ ಕಂಪನಿ ಕ್ಯಾಬು ಬಂದಿದೆ. ನಮ್ಮ ಡ್ರೈವರ್ ಚಂದ್ರು, ಯಾವಲೋಕದಲ್ಲಿ ಮುಳುಗಿದ್ದಿರಿ ಸರ್ ಬನ್ನಿ ಹೋಗೋಣ ಅಂತ ಕರೆದ. ಕರ್ತವ್ಯದ ಕರೆಬಂತು.....ಮುಗುಳುನಗುತ್ತಾ ಏನಿಲ್ಲಪಾ ಅಂತ ತಲೆಆಡಿಸಿ ಕ್ಯಾಬನಲ್ಲಿ ಕೂತಕೊಂಡೆ.......ಆಮೇಲೆ ನನಗೆ ನನ್ನ ವಾಸ್ತವದ ಅರಿವಾಗಿ ಬಸವಣ್ಣವರ ವಚನ "ಪರ ಚಿಂತೆ ಎಮಗೇಕಯ್ಯ... ಎಮ್ಮಯ್ಯ ಚಿಂತೆ ಎಮಗೆ ಸಾಲದೇ" ನೆನಪಿಗೆ ಬಂತು. ಬೇರೆ ದಾರಿ ಇಲ್ಲದೆ, ಮುಂಚೆ ನನ್ನ ತಲೇಲಿ ಬಂದ ಪ್ರಶ್ನೆಗಳು ಸತ್ಯನಾ ಅಥವಾ ವಾಸ್ತವಿಕತೆಗೆ ಹತ್ತಿರವಾದ ಬಸವಣ್ಣವರ ವಚನ ಸತ್ಯನಾ ಅನ್ನುವ ಗೊಂದಲಗಳ  ಮಧ್ಯೆ, ಕಿವಿಗೆ ಇಯರ್ ಫೋನ್ ಸಿಕ್ಕಿಸಿಗೊಂಡು ಯಾವುದೊ ಹಾಡುಕೇಳ್ಕೊಂಡು ಆಫೀಸಿನ ದಿಕ್ಕಿನೆಡೆಗೆ ಹೊರಟುಬಿಟ್ಟೆ........         


P. S.: ಲೇಖನ ಸ್ವಲ್ಪ ಉದ್ದವಾಗಿದ್ದಕ್ಕೆ ಕ್ಷಮಿಸಬೇಕು.......ಸಮಯ ಸಿಕ್ಕಾಗ ಓದಿ.......ನಿಮ್ಮ ಅನಿಸಿಕೆ ತಿಳಿಸಿ. ಏಕೆಂದ್ರೆ ನಿಮ್ಮ ಅನಿಸಿಕೆಗಳೇ ನನಗೆ ಸ್ಫೂರ್ತಿ. 

ಭಾನುವಾರ, ಸೆಪ್ಟೆಂಬರ್ 16, 2018

ಮಾನ್ಸೂನ ಮಳೆಗಳು ಮತ್ತು ಅವುಗಳ ನಾಮಕರಣ ಪದ್ಧತಿ..

ಚಿಕ್ಕವರಿದ್ದಾಗ ಬಹಳ ಜನಕ್ಕೆ ನೆನಪಿರಬಹುದು, ಮನೇಲಿ ಹಿರಿಯರು, ಅಜ್ಜ - ಅಜ್ಜಿಯಂದಿರು, ಬರೋ ಹುಣ್ಣಿಮೆಗೆ ಉತ್ತರಾ ಮಳೆ ಪ್ರಾರಂಭ ಆಗತ್ತೆ. ಇನ್ನು ಎರಡು ದಿನದಲ್ಲಿ ಪುಷ್ಯ ಮಳೆ ಹೋಗತ್ತೆ ಅಥವಾ ಈ ವರ್ಷ ಮೃಘಶಿರಾ ಮಳೆ ಕೈಕೊಟ್ಟಿತು.... ಅಂತೆಲ್ಲ ಮಾತಾಡೋದು ಕೇಳಿರ್ತೀವಿ. ಏನಿದು, ಸುಮ್ಮನೆ ಧೋ ಅಂತ ಸುರಿಯೋ ಮಳೆಗೆ ಇವರು ಏನೆಲ್ಲಾ ಹೆಸರಿಟ್ಟು ಕರೀತಾರೆ! ಅಲ್ಲದೆ, ನಿಖರವಾಗಿ ಇಷ್ಟೇ ದಿನಕ್ಕೆ ಈ ಮಳೆ ಹೋಗಿ ಆ ಮಳೆ ಬರತ್ತೆ ಅಂತೆಲ್ಲ ಮಾತಾಡ್ತಾರೆ. ಇದರಲ್ಲೇನಾದ್ರು ಒಂದು ವ್ಯವಸ್ಥಿತವಾದ ನಾಮಕರಣ ಪದ್ಧತಿ ಇದೇಯಾ? ಅಂತೆಲ್ಲ ಪ್ರಶ್ನೆಗಳು ನಿಮ್ಮ ಮನಸಿನಲ್ಲಿ ಕೂಡ ಬಂದಿರಬಹುದು. ನನಗಂತೂ ಈ ಕುತೂಹಲ ಯಾವಾಗಲು ಇತ್ತು. ಅದಕ್ಕಾಗಿ ಮಳೆಗಳು ಮತ್ತು ಅವುಗಳ ನಾಮಕರಣ ಪದ್ಧತಿಯಬಗ್ಗೆ ಸ್ವಲ್ಪ ಸಂಶೋಧನೆ ಮಾಡೋಣ ಅಂತ ಕ್ಯಾಲೆಂಡರು, ಪಂಚಾಂಗ ಮತ್ತು ಅಂತರ್ಜಾಲದಲ್ಲಿ ಸಿಕ್ಕ ಕೆಲವು ಮಾಹಿತಿಗಳನ್ನೂ ಓದಿದೆ. ಈ ವಿಷಯದಬಗ್ಗೆ ನನಗೆ ತಿಳಿದ ವಿಚಾರಗಳನ್ನು ಈ ಲೇಖನದಲ್ಲಿ ಬರೆಯೋ ಪ್ರಯತ್ನ ಮಾಡಿದ್ದೀನಿ. ಆಮೇಲೆ ಇದು ಎಷ್ಟೋ ಜನಕ್ಕೆ ತಿಳಿಯದೆ ಇರುವ ನಮ್ಮದೇ ಆದ ಐತಿಹಾಸಿಕ ಮತ್ತು ಸಾಂಪ್ರದಾಯಿಕ ಪದ್ಧತಿ. ಕಾರಣ ಮುಂದಿನ ಪೀಳಿಗೆಗೂ ಈ ಮಾಹಿತಿ ಉಪಯೋಗವಾಗಬಹುದು. 

ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಈಗಲೂ ಕೂಡ ರೈತರು ಮಳೆ ಆಧಾರಿತ ಕೃಷಿ ಪದ್ಧತಿಯನ್ನೇ ಅವಲಂಬಿಸಿರುವುದು ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆ ಕಾರಣ ನಮ್ಮ ದೇಶ ಭೂಮಧ್ಯರೇಖೆಗೆ ಹತ್ತಿರವಾಗಿರುವುದರಿಂದ (Tropical zone), ಮಾನ್ಸೂನ ಮಾರುತಗಳ ಪ್ರಭಾವದಿಂದ ವರ್ಷದ ಆರು ತಿಂಗಳು ಮಳೆಗಾಲ ಇರುವುದು. ಹಿಂದೂ ಪಂಚಾಗದ ಪ್ರಕಾರ ವರ್ಷದಲ್ಲಿ ಆರು ಋತುಗಳು ಬರುತ್ತವೆ (ವಸಂತ, ಗ್ರೀಷ್ಮ, ವರ್ಷ, ಶರತ, ಹೇಮಂತ ಮತ್ತು ಶಿಶರ), ಇದರಲ್ಲಿ ವರ್ಷ ಋತುವಿನಲ್ಲಿ ಮಳೆಗಾಲ ಬರುವದು. ಅಂದರೆ ಇದೆ ಸಮಯದಲ್ಲಿ ಮಾನ್ಸೂನ್ ಮಾರುತಗಳು ಬೀಸುವುದುಂಟು. ನಮ್ಮ ಪಂಚಾಂಗಳಲ್ಲಿ ಅಥವಾ ಜ್ಯೋತಿಷ್ಯಶಾಸ್ತ್ರದಲ್ಲಿ  ಉಲ್ಲೇಖಿತ ಮಾಹಿತಿಯ ಪ್ರಕಾರ ಸೂರ್ಯ ಒಂದು ವರ್ಷದಲ್ಲಿ 27 ನಕ್ಷತ್ರಗಲ್ಲಿ ಪಯಣ ಬೆಳೆಸುತ್ತಾನೆ. ಹಾಗು ಒಂದು ನಕ್ಷತ್ರದಿಂದ ಇನ್ನೊಂದು ನಕ್ಷತ್ರಕ್ಕೆ ಪ್ರಯಾಣ ಮಾಡಲು 13-14 ದಿನಗಳು ಬೇಕಾಗುವುದರಿಂದ ಒಂದು ನಕ್ಷತ್ರದ ಅವಧಿ 13-14 ದಿನಗಳು ಆಗುತ್ತದೆ. ಆದ್ದರಿಂದ ಈ ಅವಧಿಯಲ್ಲಿ ಬರುವ ಮಳೆಗೆ ಆ ನಕ್ಷತ್ರದ ಹೆಸರಿನಿಂದ ಕರೆಯುವುದು ಅನಾದಿಕಾಲದಿಂದ ಪಾಲಿಸಿಕೊಂಡು ಬಂದ ಸಂಪ್ರದಾಯ. ಒಂದು ಉದಾಹರಣೆ ನೋಡೋದಾದರೆ ಈ ವರ್ಷ ಮೇ 25 ರಿಂದ ಜೂನ್ 7 ವರೆಗೆ ರೋಹಿಣಿ ನಕ್ಷತ್ರದ ಅವಧಿ ಇದ್ದು ಈ ಸಮಯದಲ್ಲಿ ಸುರಿಯೋ ಮಳೆಗೆ ರೋಹಿಣಿ ಮಳೆ ಎಂದು ಹೇಳುವುದುಂಟು.  

ನಮ್ಮ ಮನೇಲಿರೋ 2018 ಕ್ಯಾಲೆಂಡರನ್ನು ಕೂಲಂಕುಷವಾಗಿ ಓದು ಈ ವರ್ಷದ ಮಾನ್ಸೂನ ಮಳೆಗಳನ್ನ ಮತ್ತು ಅವುಗಳ ಪ್ರಾರಂಭದ ದಿನಾಂಕವನ್ನ ಈ ಕೆಳಗಿನಂತೆ ಪಟ್ಟಿ ಮಾಡಿದ್ದೇನೆ


ಮೇಲ್ಕಾಣಿಸಿದ ಪಟ್ಟಿಯನ್ನು ತಿಳಿಸಿದ ಇನ್ನೊಂದು ಅಂಶವೇನೆಂದ್ರೆ, ಮಾನ್ಸೂನ್ ಮಾರುತಗಳನ್ನು ಬೀಸುವ ದಿಕ್ಕನ್ನು ಆಧರಿಸಿ ಎರಡು ವಿಧವಾಗಿ, ಮುಂಗಾರು ಮಳೆಗಳು ಮತ್ತು ಹಿಂಗಾರು ಮಳೆಗಳು ಎಂದು ವಿಂಗಡಿಸಲಾಗಿದೆ. ನಾಮಾನ್ಯವಾಗಿ ನೈರುತ್ತ್ಯ ಮಾನ್ಸೂನ್ ಮಾರುತಗಳು ಅರಬ್ಬೀ ಸಮುದ್ರದ ಮೇಲಿಂದ ಮೋಡಗಳನ್ನು ಹೊತ್ತುತಂದು ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚಿನ ಮಳೆ ಸುರಿಯುತ್ತವೆ. ಈ ಮಳೆಗಳನ್ನು ಮುಂಗಾರು ಮಳೆಗಳೆಂದು ಕರೆಯುವುದು ವಾಡಿಕೆ. ಅದೇ ರೀತಿ ಈಶಾನ್ಯ ಮಾನ್ಸೂನ್ ಮಾರುತಗಳು ಈಶಾನ್ಯ ದಿಕ್ಕಿನಿಂದ ಮೋಡಗಳನ್ನು ಹೊತ್ತು ತಂದು (ಬಂಗಾಲ ಕೊಲ್ಲಿಯಿಂದ) ಉತ್ತರ ಮತ್ತು ಮಧ್ಯ ಭಾರತದ ರಾಜ್ಯಗಳಲ್ಲಿ ಹೆಚ್ಚಿನ ಮಳೆ ಸುರಿಯೋದು, ಮತ್ತು ಇವುಗಳನ್ನು ಹಿಂಗಾರು ಮಳೆಗಳೆಂದು ಕೆರೆಯುವುದು. ಆದರೆ ನಮ್ಮ ಕರ್ನಾಟಕದಲ್ಲಿ ಹಿಂಗಾರು ಮಳೆಗಳ ಪ್ರಭಾವ ಅಷ್ಟೊಂದು ಕಡಿಮೆ. ಇನ್ನೊಂದು ವಿಶಿಷ್ಟವೇನೆಂದರೆ, ಸಾಂಪ್ರದಾಯಿಕವಾಗಿ ನಮ್ಮ ರೈತರು ಮುಂಗಾರಿನಲ್ಲಿ ಬೆಳೆಯೋ ಬೆಳೆಗಳೇ ಬೇರೆ ಹಾಗು ಹಿಂಗಾರಿನಲ್ಲಿ ಬೆಳೆಯೋ ಬೆಳೆಗಳೇ ಬೇರೆ. ಬಹಳ ವರ್ಷಗಳ ಪ್ರಾಯೋಗಿಕ ಅನುಭಾವದಿಂದ ವಾತಾವರಣಕ್ಕನುಗುಣವಾಗಿ ಈ ರೀತಿ ಎರಡು (ಮುಂಗಾರು ಮತ್ತು ಹಿಂಗಾರು) ಬೆಳೆಗಳನ್ನು ಬೆಳೆಯುತ್ತ ಬಂದರು. ಅದೇನೇ ಇರಲಿ ಪ್ರಕೃತಿಯಲ್ಲಿ ಕಾಣುವ ಈ ವಿಷ್ಮಯಗಳನ್ನು ನಮ್ಮ ಜನ ತಮ್ಮ ಉಪಯೋಗಕ್ಕೆ ತಕ್ಕಂತೆ ಮಾಡಿಕೊಂಡಿರುವ ಈ ಒಂದು ವ್ಯವಸ್ಥಿತವಾದ ಪದ್ಧತಿ ನಿಜವಾಗ್ಲೂ ಶ್ಲಾಘನೀಯ. 

ಕೊನೆಯದಾಗಿ, ಈ ವರ್ಷ ಭಯಂಕರವಾಗಿ ಸುರಿದ ಮುಂಗಾರು ಮಳೆ ಮತ್ತು ಅದರಿಂದ ಕೇರಳ ಹಾಗು ಕೊಡಗಿನಲ್ಲಾದ ಐತಿಹಾಸಿಕ ಪ್ರಕೃತಿ ವಿಕೋಪವನ್ನು ಯಾರು ಮರೆಯುವಂತಿಲ್ಲ. ಮನುಷ್ಯ ತನ್ನ ದುರಾಸೆಗಳಿಗಾಗಿ ದಿನೇ ದಿನೇ, ತನ್ನ ಒಳಿತಿಗಾಗಿಯೇ ಸೃಷ್ಟಿಯಾದ ಈ ಸುಂದರ ಪ್ರಕೃತಿಯನ್ನು ನಾಶಮಾಡುತ್ತ ಹೋಗುತ್ತಿದ್ದು, ಈ ತರಹದ ಪ್ರಕೃತಿ ವಿಕೋಪಗಳನ್ನು ಆವ್ಹಾನಿಸಿಕೊಳ್ಳುತಿದ್ದಾನೆ. ನಮಗೆ ಸುಂದರ, ಸ್ವಾಭಾವಿಕ ಮತ್ತು ಆರೋಗ್ಯಕರವಾದ ಬದುಕು ಬೇಕೆಂದರೆ ನಮ್ಮ ಸುತ್ತಲಿರುವ ಪ್ರಕೃತಿಯನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಆಧ್ಯ ಕರ್ತವ್ಯ, ಆಗಲೇ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಕಾಲಕಾಲಕ್ಕೆ ಸರಿಯಾಗಿ ಮಳೆಗಳನ್ನು ಕೊಡುತ್ತದೆ.

ಆದ್ದರಿಂದ ಗೆಳೆಯರೇ ಬನ್ನಿ ನಮ್ಮ ಸುತ್ತಲಿನ ಸುಂದರ ಪ್ರಕೃತಿಯನ್ನು ಕಾಪಾಡೋಣ.....ನಮ್ಮ ಮುಂದಿನ ಪೀಳಿಗೆಗೆ ಈ ಮಳೆಗಳಬಗ್ಗೆ ತಿಳಿಸೋಣ ......... ಅಲ್ಲವೇ!  

ಭಾನುವಾರ, ಜನವರಿ 7, 2018

ಟೋನಿ ಕನ್ನಡ ಸಿನೆಮಾ ಮತ್ತು ಜಾನಪದ ಹಾಡುಗಳು......

ಜಾನಪದ ಸಾಹಿತ್ಯ ಅನ್ನೋದು ಒಂದು ವಿಶಾಲವಾದ ಸಾಗರ. ನಮ್ಮ ಗ್ರಾಮೀಣ ಸೊಗಡುಗಳಲ್ಲಿ ಒಂದಾದ ಜಾನಪದ ಹಾಡುಗಳು, ಹಳ್ಳಿಯ ಜೀವನದ ಶೈಲಿ ಮತ್ತು ಸಂಸ್ಕೃತಿಯ ಪ್ರತೀಕ. ದುರಾದೃಷ್ಟವಷಾತ್ತ್ ಈ ಜಾನಪದ ಹಾಡುಗಳು ಯಾವುದೇ ಲಿಪಿ ಅಥವಾ ಗ್ರಂಥಗಳ ರೂಪಲ್ಲಿ ಇಲ್ಲದೆ, ಕೇವಲ ಗ್ರಾಮೀಣ ಹೆಣ್ಣುಮಕ್ಕಳ ಬಾಯಲ್ಲಿ ಹಾಡುಗಳ ರೂಪದಲ್ಲಿ ತಲತಲಾಂತರಗಳಿಂದ ಉಳಿದುಕೊಂಡು ಬಂದಿವೆ. ಇತ್ತಿತ್ತಲಾಗಿ ಬಹಳ ಜನ ಕವಿ/ಲೇಖಕರು ಜಾನಪದ ಸಾಹಿತ್ಯವನ್ನು ಗ್ರಂಥಗಳ ರೂಪದಲ್ಲಿ ಉಳಿಸೋ ಪ್ರಯತ್ತ್ನ ಮಾಡಿದ್ದುಂಟು.

ಕೆಲವು ದಿನಗಳ ಹಿಂದೆ ಯಾವುದೇ TV ಚಾನಲ್ಲಿನಲ್ಲಿ, "ಟೋನಿ" ಎಂಬ ಸಿನೆಮಾ ಬರುತಿತ್ತು. ಜಯತೀರ್ಥ ಎಂಬವರ ನಿರ್ದೇಶನದಲ್ಲಿ, ಶ್ರೀನಗರ ಕಿಟ್ಟಿ ಹಾಗು ಅಂದ್ರಿತಾ ರೈ ಮುಖ್ಯಪಾತ್ರಾಭಿನಯದ, ಒಂದು ರೋಮಾಂಚಕ ಪತ್ತೇದಾರಿ ಕಥೆ ಹಿನ್ನೆಲೆಯ ಸಿನೆಮಾ. ನಿರ್ದೇಶಕ ಈ ಚಿತ್ರದಲ್ಲಿ ಮೂರು ಕಥೆಗಳನ್ನು ಒಟ್ಟಿಗೆ ಹೆಣೆಯುತ್ತಾ ಹೋಗುತ್ತಾನೆ. ಮುಖ್ಯ ಕಥೆ ಬಂದು, ಸ್ವಲ್ಪ ಸಮಯದಲ್ಲಿಯೇ ಜಾಸ್ತಿ ದುಡ್ಡುಮಾಡೋ ಕನಸು ಕಾಣುತ್ತೀರೋ ಒಬ್ಬ ಯುವಕ, ದುಡ್ಡಿಗಾಗಿ ಏನೇ ಕೆಲಸ ಕೊಟ್ಟರು ಮಾಡಲು ಸಿದ್ಧವಿದ್ದು, ಒಂದು ಕ್ರಿಮಿನಲ್ಗಳ ಗುಂಪಿನ ಜಾಲಕ್ಕೆ ಸಿಲುಕಿ ಒದ್ದಾಡೊ ಕಥೆ. ಇದರ ಜೊತೆಗೆ, ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ನಡೆಯುವ ಇನ್ನೆರಡು ಉಪಕಥೆಗಳು. ಆ ಎರಡು ಉಪಕಥೆಗಳಲ್ಲಿ, ಒಂದು ಉಪಕಥೆಯನ್ನು ತುಂಬಾ ಚೆನ್ನಾಗಿ, ಗ್ರಾಮೀಣ ಸೊಗಡಿನಲ್ಲಿ, ಎಲ್ಲೋ ಅಡಗಿ ಕುಂತಿದ್ದ ಚತುಷ್ಪದಿಯಲ್ಲಿರುವ ಮೂರು ಜಾನಪದ ಗೀತೆಗಳ ಸಹಾಯದೊಂದಿಗೆ ವರ್ಣಿಸುತ್ತ ಹೋಗೋ ರೀತಿ ಅತೀ ಶ್ಲಾಘನೀಯ.

ನನಗೆ ಇಂತಹ ವಿಶಿಷ್ಟವಾದ ಜಾನಪದ ಗೀತೆಗಳು, ಚಲನಚಿತ್ರ ಅಥವಾ ಭಾವಗೀತೆಗಳ ಮನಸಿಗ್ಗೆ ಮುದನೀಡುವ ಒಳ್ಳೆಯ ಸಾಲುಗಳು ಹಾಗು ಶಾಯರಿಗಳನ್ನೂ ಸಂಗ್ರಹಿಸುವ ಹವ್ಯಾಸ. ಅದೇ ರೀತಿ ಈ ಟೋನಿ ಚಿತ್ರದ ಮೂರು ಸೊಗಸಾದ, ಜಾನಪದ ಗೀತೆಗಳನ್ನು ಸಂಗ್ರಹಿಸಿಟ್ಟಿದ್ದೆ. ಈ ನನ್ನ ಪೋಸ್ಟಿನಲ್ಲಿ ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳೋ ಪ್ರಯತ್ನ.......

ಮೇಲೆ ಹೇಳಿದ ಎರಡನೆ ಉಪಕಥೆಯಲ್ಲಿ ಊರೂರು ತಿರುಗುವ ಒಬ್ಬ ಜ್ಯೋಗಿ ತನ್ನ ಹೆಂಡತಿಯೊಡನೆ ಜಾನಪದ ಹಾಡುಗಳನ್ನು ಹಾಡುತ್ತ ಒಂದು ಹಳ್ಳಿಗೆ ಬರುತ್ತಾನೆ.....ಅವನ ಹಾಡಿಗೆ ಮರುಳಾಗಿ ಹಳ್ಳಿಯ ಒಬ್ಬ ಜಮೀನುದಾರ ಆ ಜ್ಯೋಗಿ ಮತ್ತು ಅವನ ಹೆಂಡಿತಿಯನ್ನು ಮನೆಗೆ ಸ್ವಾಗತಿಸಿ ...ಜ್ಯೋಗಿಯ ಬಾಯಲ್ಲಿ ಈ ಕೆಳಗಿನ ಗೀತೆಗಳನ್ನು ಹಾಡಿಸುತ್ತಾನೆ.


ಮೊದಲನೇ ಗೀತೆ......

ಎಂಟೆಲೆ ಮಾವಿನ ದಂಟಲ್ಲಿ ಇರುವೊಳೆ
ಗಂಟೆಯ ಗತಿಗೆ ನಲಿಯೊಳೆ
ಗಂಟೆಯ ಗತಿಗೆ ನಲಿಯೊಳೆ।। ಸರಸತಿಯೆ
ಗಂಟಲ ತೋಡರ ಬಿಡಿಸವ್ವ.

ಕಲ್ಲುಮುಳ್ಳಿದ್ದರೆ ಹುಲ್ಲಂತೆ ತಿಳಿದೆವು
ಸೊಲ್ಲೆರಿಸಿ ಹಾಡಿ ನಲಿದೆವು
ಸೊಲ್ಲೆರಿಸಿ ಹಾಡಿ ನಲಿದೆವು।। ಭಗವಂತ
ಸುಳ್ಳಾಡುವ ದಾರಿ ಬಿಡಿಸಯ್ಯ.

ಬಳಗವು ಹೆಚ್ಚಲಿ ಬಂಧನ ದಗ್ಗಲಿ
ಕೊಳಗದಿ ಹೊನ್ನ ಅಳೆಯಲಿ
ಕೊಳಗದಿ ಹೊನ್ನ ಅಳೆಯಲಿ।। ಮನವಂತ
ನಡುಮನೆ ಜ್ಯೋತಿ ಉರಿಯಲಿ.

ಎರಡನೇ ಗೀತೆ......

ಶಿವ ಶಿವ ಎಂದರೆ ಸಿಡಿಲೆಲ್ಲ ಬಯಲಾಗಿ
ಕಲ್ಲು ಬಂದೆರಗಿ ಕಡೆಗಾಗಿ
ಕಲ್ಲು ಬಂದೆರಗಿ ಕಡೆಗಾಗಿ।।ಎಲೆ ಮನವೇ
ಶಿವನೆಂಬ ಸವುದಾ ಬಿಡಬ್ಯಾಡ.

ಬೀಸುವ ಪದ ಚಂದ ಕೂಸಿನ ಧನಿ ಚಂದ,
ನವಿಲಾಡೋ ನಮ್ಮ ವನ ಚಂದ
ನವಿಲಾಡೋ ನಮ್ಮ ವನ ಚಂದ|| ಸೊಸೆ ಮುದ್ದ
ಮಲ್ಲಿಗೆ ಗಂಧ ಬಲು ಚಂದ.

ಮಳೆರಾಯ ಉಯ್ಯಲಿ, ಕೆರೆರಾಯ ತುಂಬಲಿ,
ಹನ್ನೆರಡು ಕೊಡಿ ಹರಿಯಲಿ
ಹನ್ನೆರಡು ಕೊಡಿ ಹರಿಯಲಿ|| ನಮ್ಮೂರ
ಸಣ್ಣಕಿ ವಯಲು ಬೆಳೆಯಲಿ.

ಮೂರನೇ ಗೀತೆ.......

ಕಾಸಿಗೆ ಹೋಗಾಕೆ ಏಸೊಂದು ದಿನಬೆಕು
ತಾಸೊತ್ತಿನ ಹಾದಿ ತವರೂರು
ತಾಸೊತ್ತಿನ ಹಾದಿ ತವರೂರು।। ಮನೆಯಾಗೆ
ಕಾದು ಕುಂತಾಳೆ ಹಡೆದವ್ವ, ಜಗಕೆಲ್ಲ ಇವಳೇ ಪರಧೈವ.

ಸೊಸೆಯು ಗಂಡಹಡೆಯಲಿ ಮಗಳು ಹೆಣ್ಣಹಡೆಯಲಿ
ಎಳೆಗರು ಎಮ್ಮೆ ಕರೆಯಲಿ
ಎಳೆಗರು ಎಮ್ಮೆ ಕರೆಯಲಿ।। ಈ ಮನೆಯ
ಸಡಗರ ನೋಡೋಕೆ ಶಿವ ಬರಲಿ.

ಲೋಕದಾಗಿರುತನಕ ಬೇಕಾಗಿ ಇರಬೇಕು
ಸಾಕಾಗಿ ಶಿವನ ಸದರಿಗೆ
ಸಾಕಾಗಿ ಶಿವನ ಸದರಿಗೆ ಹೋಗಾಗ।।
ಎಲ್ಲಾರು ಬರುತ್ತಾರೆ ಕಳಿಸಾಕೆ.


ನಾನು ಎಷ್ಟೋ ಜಾನಪದ ಗೀತೆಗಳನ್ನು ಓದಿದ್ದಿನಿ/ಕೇಳಿದ್ದೀನಿ, ಆದರೆ ಈ ಮುರು ಗೀತೆಗಳು ಯಾಕೋ ಎಲ್ಲೂ ಕೇಳಿರದ ಹೊಚ್ಚ ಹೊಸ ಪರಿಚಯ ಅನಿಸಿತು. ಸಾಧ್ಯವಾದರೆ ಟೋನಿ ಚಿತ್ರ ನೋಡಿ, ಸಂಧರ್ಭಕ್ಕೆ ತಕ್ಕಂತೆ ನಿರ್ದೇಶಕ ಈ ಗೀತೆಗಳನ್ನು ಕಥೆಯೊಂದಿಗೆ ಹೆಣೆದಿರುವ ರೀತಿ ನಿಮಗೆ ನಿಜವಾಗ್ಲೂ ಇಷ್ಟವಾಗತ್ತೆ. ನನಗೆ ಮಾತ್ರ ಈ ಕಳಸ ಬಹಳ ಇಷ್ಟವಾಯಿತು. ಯಾಕೆಂದ್ರೆ ನಶಿಸಿ ಹೋಗುತ್ತಿರುವ ಇಂಥ ಎಷ್ಟೋ ಕಾವ್ಯ ಸಂಪತ್ತನ್ನು ಉಳಿಸುವ ಪ್ರಯತ್ನವಾಗಬೇಕಾಗಿದೆ . ಇಲ್ಲಿ ನಿರ್ದೇಶಕ ಆ ಕೆಲಸ ಮಾಡಿದ್ದಾನೆ ಎನ್ನಿಸಿತು. ಹೇಮಂತ ಮತ್ತು ಪಲ್ಲವಿ ಯವರ ಧ್ವನಿಯಲ್ಲಿ, ಸಾಧುಕೋಲ ಅವರ ಸಂಗೀತ ನಿರ್ದೇಶನದಲ್ಲಿ ಈ ಗೀತೆಗಳು, ಕೇಳಲು ಇಂಪಾದ ಸಂಗೀತದೊಂದಿದೆ ಮೂಡಿ ಬಂದಿವೆ.

ಸೋಮವಾರ, ಜನವರಿ 1, 2018

ಜಪಾನಿಯರ ಹೊಸವರ್ಷಾಚರಣೆಯ ವೈಶಿಷ್ಟ್ಯಗಳು.

ಪ್ರತಿವರ್ಷದ ಮೊದಲ ದಿನ (ಜನೆವರಿ 1st) ಅಂದರೆ ಹೊಸವರ್ಷಾಚರಣೆ ದಿನ. ವಿವಿಧ ದೇಶಗಳಲ್ಲಿ ವಿವಿಧ ರೀತಿಗಳಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸುತ್ತಾರೆ. ಆದರೆ ಕೆಲವೊಂದು ದೇಶಗಳಲ್ಲಿ ಪಾಶ್ಚ್ಯಾತೀಕರಣದ ಪ್ರಭಾವವಿಲ್ಲದೆ ತಮ್ಮದೇ ಸಾಂಸ್ಕೃತಿಕ ಮತ್ತು ಐತಿಹಾಸಿಕ ನೆಲೆಗಟ್ಟಿನಮೇಲೆ ಹೊಸವರ್ಷಾಚರಣೆಯ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರುವುದು ಕಂಡು ಬರುತ್ತದೆ. ಇಂತಹ ಅನೇಕ ದೇಶಗಳಲ್ಲಿ ಜಪಾನ್ ಕೂಡ ಒಂದು. ಜಪಾನಿಯರು ತಾವು ಹೊಸವರ್ಷಾಚರಣೆಯನ್ನು ಆಚರಿಸುವ ವೈಶಿಷ್ಟ್ಯವೇ ಬೇರೆ. ನಾನು ಜಪಾನನಲ್ಲಿ ಇದ್ದಾಗ ಒಟ್ಟು ಎಂಟು ಹೊಸವರ್ಷಾಚರಣೆಗಳನ್ನು ನೋಡಿದ್ದೇನೆ ಮತ್ತು ಅವರೊಂದಿದೆ ಭಾಗಿಯಾಗಿ ನಾನೂ ಮತ್ತು ನನ್ನ ಧರ್ಮಪತ್ನಿ ಕೂಡ ಸಂಬ್ರಮಿಸಿದ್ದೇವೆ. ಆ ನನ್ನ ಅನುಭವಗಳನ್ನು ಮತ್ತು ಅವರ ಪದ್ದತಿಗಳನ್ನು ಈ ಪೋಸ್ಟ್ನಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳೋ ಪ್ರಯತ್ನ. 

ಜಪಾನಿಯರು ಹೊಸವರ್ಷಾಚರಣೆ ದಿನವನ್ನು Shogatsu ಎಂದು ಕರೆಯುತ್ತಾರೆ. ಸಾಮಾನ್ಯವಾಗಿ December 28 ರಿಂದ January 4 ವರೆಗೆ ಜಪಾನಿನಲ್ಲಿ ಎಲ್ಲ ಸರಕಾರಿ ಮತ್ತು ಖಾಸಗಿ ಕಚೇರಿಗಳು ರಜೆ ಘೋಷಿಸುತ್ತವೆ. ಹೀಗಾಗಿ ಅಲ್ಲಿ ಎಲ್ಲರಿಗು ಒಂದು ವಾರ ಪೂರ್ತಿ ರಜೆಯ ಸುಗ್ಗಿ. 

Joya No Kane (Ring out the old year): ಹೊಸವರ್ಷದ ಮುನ್ನಾ ದಿನ ರಾತ್ರಿ (December 31) ಜಪಾನಿಯರು ತಮ್ಮ ತಮ್ಮ ಊರ ಮುಂದಿರುವ ಬೌದ್ದ ಅಥವಾ ಶಿಂಥೋ ಧರ್ಮದ ದೇವಸ್ಥಾನಗಳಿಗೆ ಸಹಕುಟುಂಬ ಪರಿವಾರದೊಂದಿಗೆ ಹೋಗುತ್ತಾರೆ. ಈ ದೇವಸ್ಥಾನಗಳಲ್ಲಿ ಒಂದು ಬೃಹದಾಕಾರದ ಘಂಟೆ ಇರುತ್ತದೆ. Joya No Kane ಅಂದರೆ, ಎಲ್ಲರು ಸೇರಿ ಹೊಸವರ್ಷದ ಬರುವ ಕೆಲ ನಿಮಿಷಗಳ ಮೊದಲು 108 ಬಾರಿ ಆ ಘಂಟೆಯನ್ನು ಭರಿಸುತ್ತಾರೆ. ಯಾಕೆ ಅಂದರೆ, ಬೌಧ್ಧ ಧರ್ಮದಲ್ಲಿ ಅದು ಮನುಕುಲಕ್ಕೆ ಹೆಚ್ಚು ನೋವನ್ನು ಉಂಟುಮಾಡುವ ಒಂದು ಅನಿಷ್ಟ ಸಂಖ್ಯೆ, ಅದಕ್ಕೆ108 ಸಲ ಘಂಟೆ ಬಾರಿಸುವುದರಿಂದ ಅನಿಷ್ಟವೆಲ್ಲ ದೂರಾಗಿ ಹೊಸವರ್ಷಕ್ಕೆ ಮುನ್ನ ಎಲ್ಲರು ಪವಿತ್ರರಾಗುತ್ತಾರೆ ಮತ್ತು ಎಲ್ಲರಿಗು ಒಳ್ಳೆಯದಾಗುತ್ತದೆ ಎಂಬ ನಂಬಿಕೆ.  

Hatsumode (First temple/shrine visit): ಮೇಲೆ ಹೇಳಿದಂತೆ ರಾತ್ರಿನೇ ಎಲ್ಲರು ದೇವಸ್ಥಾನಗಳಿಗೆ ಪ್ರಯಾಣ ಬೆಳೆಸಿರುತ್ತಾರೆ. ಮೇಲೆ ಹೇಳಿದ ಪದ್ಧತಿ ಮುಗಿದಮೇಲೆ ಹೊಸವರ್ಷವನ್ನು ಆವ್ಹಾನಿಸಿ, ಅದೆ ದೇವಸ್ಥಾನದಲ್ಲಿ ದೇವರಿಗೆ ಹೊಸವರ್ಷದಲ್ಲಿ ಎಲ್ಲರಿಗು ಸಮೃದ್ಧಿ, ಸಂತೋಷ, ನೆಮ್ಮದಿ ಮತ್ತು ಉತ್ತಮ ಅರೋಗ್ಯ ಕರುಣಿಸು ಎಂದು ಪ್ರಾರ್ಥಿಸುತ್ತಾರೆ. ಇದನ್ನೇ ಅವರು Hatsumode ಪದ್ಧತಿ ಎನ್ನುವರು. 

Oshechi-Ryori (Traditional new year food): ಉತ್ತಮ ಅದೃಷ್ಟವನ್ನು ಆವ್ಹಾನಿಸುವುದೇ ಜಪಾನಿಯರ ಹೊಸ ವರ್ಷದ ಸಂಪ್ರದಾಯಗಳ ಹಿಂದಿನ ತಾರ್ಕಿಕತೆಯಾಗಿದ್ದು, ಅದೇ ರೀತಿ ಊಟೋಪಚಾರಗಳ ವಿಷಯದಲ್ಲೂ ಅವರು ಅಷ್ಟೇ ಪದ್ದತಿಗಳನ್ನು ಪಾಲಿಸುತ್ತಾರೆ. ಹೊಸವರ್ಷದ ದಿನ ಅವರು ವಿಶಿಷ್ಟ ರೀತಿಯ ಮೀನು, Sea foods, ಅಕ್ಕಿ  ಮತ್ತು ಗೆಣೆಸಿನ ಭಕ್ಷಗಳನ್ನು ಮಾಡಿ ಕುಟುಂಬದ ಎಲ್ಲರು ಒಟ್ಟಿಗೆ ಸೇವಿಸುತ್ತಾರೆ.  ಅಲ್ಲದೆ Tashikoshi Soba ಎನ್ನುವ ಶಾವಿಗೆಯ ವಿಶಿಷ್ಟ ಖಾದ್ಯವನ್ನು ಸೇವಿಸುವುದು ಹೊಸವರ್ಷದಲ್ಲಿ ಒಂದು ಸುವಿಯೋಗ ಎನ್ನುವ ನಂಬಿಕೆ (ನಮ್ಮಲ್ಲಿ ಯುಗಾದಿಯಲ್ಲಿ ಬೇವು-ಬೆಲ್ಲ ಸೇವಿಸುವಹಾಗೆ). 

Nengajou (New year's postcards): ನಮ್ಮ ದೇಶಗಳಲ್ಲಿ ಶುಭಾಶಯಪತ್ರಗಳನ್ನು (Greeting cards) ಸ್ನೇಹಿತರು ಹಾಗು ಸಂಭಂದಿಗಳಿಗೆ ಕಳಿಸುವ ಹಾಗೆ ಜಪಾನಿಯರಲ್ಲಿಯೂ ಕೂಡ ಹೊಸವರ್ಷದ ಅಂಚೆಪತ್ರಗಳನ್ನು ಕಳಿಸುವ ಪದ್ಧತಿ ಇದೆ. ಈಗಿನ ಯುವಜನತೆ ಈ ಪದ್ದತಿಯನ್ನು ಅಷ್ಟೊಂದು ಇಷ್ಟಪಡಲ್ಲ. ಯಾಕೆಂದರೆ ಇದು ತಾಂತ್ರಿಕ ಯುಗ, ಹಾಗಾಗಿ ಯುವಜನತೆ ಇಮೇಲ್, ವಾಟ್ಸಪ, ಫೇಸ್ಬುಕ್ ಮೊರೆಹೋಗುವುದೇ ಸಾಮಾನ್ಯ. ಆದರೆ ಹಿರಿಯರು ಮತ್ತು ಹಳೆಯಕಾಲದ ಜನರು ಈಗಲೂ ಅಂಚೆ ಕಚೇರಿಗಳಿಗೆ ಹೋಗಿ ವಿವಿಧ ರೀತಿಯಲ್ಲಿ ಅಲಂಕೃತ ಹೊಸವರ್ಷದ ಅಂಚೆಪತ್ರಗಳನ್ನು ಖರೀದಿ ಮಾಡಿ, ಆದರೆ ಮೇಲೆ ಶುಭಾಶಯಗಳನ್ನು ಬರೆದು ಸ್ನೇಹಿತರು ಹಾಗು ಸಂಭಂದಿಗಳಿಗೆ ಕಳಿಸುತ್ತಾರೆ. 

Traditional New Year Decorations: ಹೊಸವರ್ಷಾಚರಣೆ ಪ್ರಯುಕ್ತ ಮನೆಯಲ್ಲಿ ಮತ್ತು ಹೆಬ್ಬಾಗಿಲಿಗೆ ತೋರಣಗಳ ರೀತಿಯಲ್ಲಿ ವಿವಿಧ ಅಲಂಕೃತ ವಸ್ತುಗಳನ್ನು ನೇತಾಕುವುದು ಜಪಾನಿಯರ ಪದ್ಧತಿಗಳಲ್ಲಿ ಒಂದು. ಈ ಅಲಂಕೃತ ವಸ್ತುಗಳು ಅದೃಷ್ಟ, ಸಂತೋಷ, ಸಮೃದ್ಧಿಗಳನ್ನು ದಯಪಾಲಿಸುತ್ತವೆ ಮತ್ತು ದುಷ್ಟ ಶಕ್ತಿಗಳನ್ನು ಮನೆಯಿಂದ ಹೊರದೂಡುತ್ತವೆ ಎಂಬುವುದು ಅವರ ನಂಬಿಕೆಗಳು. ಅದಕ್ಕೆ ಬೇಕಾದ ಪ್ರತಿಯೊಂದು ಸಲಕರಣೆಗಳಿಗೂ ಒಂದೊಂದು ವೈಶಿಷ್ಟ್ಯವಿದೆ. Kadomatsu ಎಂಬುದು ಬಿದಿರಿನ ಕಳಲೆ (ಸಮೃದ್ಧಿ), ತಾಳೆ ಗಿಡದ ಎಳೆಗುಚ್ಚ (ಧೀರ್ಘಾಯುಷ್ಯ ) ಮತ್ತು ಪ್ಲಮ್ ಗಿಡದ ಟೊಂಗೆ (ಧೃಡತೆ) ಗಳಿಂದ ಮಡಿದ ಅಲಂಕೃತ ವಸ್ತುಯಾಗಿದ್ದು ಇದನ್ನು ಮನೆಯ ಬಾಗಿಲ ಹೊಸ್ತಿಲಲ್ಲಿ ಇಡುತ್ತಾರೆ.  ಇವು ದೇವರ ತಾತ್ಕಾಲಿಕ  ವಾಸಸ್ಥಳಗಳಾಗಿದ್ದು, ಮನುಷ್ಯರಿಗೆ ಆಶೀರ್ವದಿಸಲು ದೇವರು ಇಲ್ಲಿ ತಾತ್ಕಾಲಿಕವಾಗಿ ತಂಗುತ್ತಾರೆ ಎನ್ನುವ ನಂಬಿಕೆ. January15 ನಂತರ ಇವುಗಳನ್ನು ಅವರು ಸುಟ್ಟುಹಾಕುತ್ತಾರೆ. Shimekazari ಎನ್ನುವುದು ಬಾಗಿಲ ತೋರಣಕ್ಕೆ ನೇತಾಕುವ ಅಲಂಕಾರ ವಸ್ತು. ಇದನ್ನು Shimenawa ಎಂಬ ಪವಿತ್ರ ಹುಲ್ಲಿನ ಹಗ್ಗ, ತಾಳೆ ಟೊಂಗೆಗಳು ಮತ್ತು ಹಸಿ ಕಿತ್ತಳೆ ಹಣ್ಣಿನಿಂದ ಮಾಡಿರುತ್ತಾರೆ. ಇದರ ವಿಶೇಷ, ಇದು ದೈವೀಶಕ್ತಿಗಳನ್ನು ಆವ್ಹಾನಿಸಿ ದುಷ್ಟ ಶಕ್ತಿಗಳನ್ನು ದೂರವಿಡುತ್ತದೆ ಎನ್ನುವುದು ತಲತಲಾಂತರಗಳಿಂದ ನಂಬಿಕೊಂಡ ಪದ್ಧತಿ. 

ಅಲ್ಲದೆ ಇನ್ನು ಅನೇಕ ಪದ್ದತಿಗಳನ್ನು ಆಚರಿಸುತ್ತಾರೆ. Otoshidhama ಎಂಬ ಆಚರಣೆಯಲ್ಲಿ ಮಕ್ಕಳಿಗೆ ವಿಶಿಷ್ಟವಾಗಿ ಅಲಂಕೃತ ಲಕೋಟೆಗಳಲ್ಲಿ ಪ್ರೀತಿಇಂದ ದುಡ್ಡನ್ನು ಕೊಡುತ್ತಾರೆ. ಆರ್ಥಿಕ ಜಾಗತೀಕರಣದ ಬಿಸಿ ಎಲ್ಲೆಡೆಯೂ ತಟ್ಟಿದ ಕಾರಣ ಜಪಾನ್ನಲ್ಲಿ ಕೂಡ ಹೊಸವರ್ಷದ Sales ಮತ್ತು Shopping ಹುಚ್ಚು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಹೋಗುತ್ತಿದೇ. ಅದಕ್ಕಾಗಿ ಗ್ರಾಹಕರನ್ನು ಸೆಳೆಯಲು ವ್ಯಾಪಾರಿಗಳು ಹೊಸ ಹೊಸ ತಂತ್ರಗಳನ್ನು ಅನುಸರಿಸುತ್ತಾರೆ. ಅದರಲ್ಲಿ Fukubukuro (Lucky Bag) ಅನ್ನುವುದು ಒಂದು Shopping ಪದ್ಧತಿ, ಇಲ್ಲಿ ಗ್ರಾಹಕರಿಕೆ ಗೊತ್ತಿಲ್ಲದೆ ವಸ್ತುಗಳನ್ನು (ಬಟ್ಟೆ, ಬೂಟು, ಅಲಂಕಾರಿಕ ವಸ್ತುಗಳು, ಕಾಸ್ಮೆಟಿಕ್ಸ್) ಒಂದು Shopping ಚೀಲದಲ್ಲಿ ತುಂಬಿಸಿ ಕಡಿಮೆ ಬೆಲೆಯಲ್ಲಿ ಮಾರುತ್ತಾರೆ. ಕೊಳ್ಳುವವರಿಗೆ ಅವರವರ ಅದೃಷ್ಟಕ್ಕೆ ತಕ್ಕಂತೆ ವಸ್ತುಗಳು ಸಿಗುತ್ತವೆ. 

ಕೆಳಗೆ ಕೆಲವು ನಾನು ಜಪಾನಿನಲ್ಲಿ ಕ್ಲಿಕ್ಕಿಸಿದ ಹೊಸವರ್ಷಾಚರಣೆ ಚಿತ್ರಗಳು.

ಶಿಂಥೋ ದೇವಸ್ಥಾನ 
ನಾನು ದೇವಸ್ಥಾನಕ್ಕೆ ಹೋದಾಗ 

ಸಾಲಲ್ಲಿ ನಿಂತು ತಮ್ಮ ಸರದಿಗಾಗಿ ಕಾಯುತ್ತಿರುವರು 

Shimekazeri ಮತ್ತು Kagami Mochi  ಎಂಬ ಅಲಂಕಾರವಸ್ತುಗಳು 
ನನ್ನ ಈ ಲೇಖನವನ್ನು ಓದಿದಮೇಲೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕೆಳಗೆ ಬರೆಯಿರಿ. ನಿಮ್ಮ ಅನಿಸಿಕೆ, ಟಿಪ್ಪಣಿ ಮತ್ತು ಟೀಕೆಗಳೇ ನನಗೆ ಮುಂದೆ ಬರೆಯಲು ಸ್ಫೂರ್ತಿ.

ಸೂಚನೆ: ಈ ಲೇಖನದಲ್ಲಿ ಬರುವ ಎಲ್ಲ ವಿಷಯಗಳು ನನ್ನ ಸ್ವಂತದ್ದಲ್ಲ. ಕೆಲವು ವಿಷಯಗಳನ್ನು ಬೇರೆ ಮೂಲಗಳ ಸಹಾಯದಿಂದ ತಂದು ಇಲ್ಲಿ ಭಾಷಾಂತರಿಸಿದ್ದೇನೆ. ಕಾರಣ ಆ ಮೂಲಗಳ ಜಾಲತಾಣಗಳ ವಿಳಾಸವನ್ನು ಉಲ್ಲೇಖಿಸುವುದು ನನ್ನ ಕರ್ತವ್ಯವಾಗಿದ್ದು ಅವು ಈ ಕೆಳಗಿನಂತಿವೆ....

1. https://www.tripsavvy.com/japanese-new-year-celebrations-1550138
2. https://tokyocheapo.com/travel/holidays/japanese-new-year-tokyo/