ಭಾನುವಾರ, ಏಪ್ರಿಲ್ 25, 2021

ಕೊರೊನಾ ಎರಡನೇ ಅಲೆ: ರೆಮ್ಡೆಸಿವಿರ್ ಮತ್ತು ವಾಕ್ಸಿನುಗಳು.

"ರೆಮ್ಡೆಸಿವಿರ್", ಇದು ಮೊಟ್ಟ ಮೊದಲ ಬಾರಿಗೆ ಹೆಪಟೈಟಿಸ್-ಸಿ ಚಿಕಿತ್ಸೆಗೆ, ಗಿಲ್ಡ್ ಎಂಬ ಅಮೇರಿಕಾದ ಕಂಪನಿ ಅಭಿವೃದ್ಧಿಪಡಿಸಿದ ಔಷಧಿ. ನಂತರದ ದಿನಗಳಲ್ಲಿ ಕೆಲವು ದೇಶಗಳಲ್ಲಿ ತನ್ನ ಅಟ್ಟಹಾಸ ಮೆರೆದ ಎಬೋಲಾ ಎಂಬ ವೈರಾಣುವಿನಿಂದಾದ ಸಾಂಕ್ರಾಮಿಕ ರೋಗವನ್ನು ಚಿಕಿತ್ಸಿಸಲು ಪ್ರಯೋಗಿಸಲಾಯಿತು. ದುರದೃಷ್ಟವಶಾತ್ ಈ ಎರಡು ವೈರಸ್ಗಳ ಮೇಲೆ ರೆಮ್ಡೆಸಿವಿರ್ ತನ್ನ ಪರಿಣಾಮ ಬೀರಲಿಲ್ಲ. ಕಾರಣ ವಶಾತ್, ಅನೇಕ ವರ್ಷಗಳಕಾಲ ಈ ಔಷದಿ ಹೇಳಹೆಸರಿಲ್ಲದೆ ಒಂದು ಮೂಲೆ ಸೇರಿತ್ತು. ಆಮೇಲೆ, 2019 ರಲ್ಲಿ ವಕ್ಕರಿಸಿದ ಕೊರೊನ ವೈರಸ್ ಸೋಂಕಿನಿಂದ ಹರಡುತ್ತಿರುವ ಈ ಕೋವಿಡ್ ಮಹಾಮಾರಿಯನ್ನು ಹತ್ತಿಕ್ಕಲು, ಅನೇಕ ದಿನಗಳಿಂದ ಮೂಲೆ ಸೇರಿದ್ದ ರೆಮ್ಡೆಸಿವಿರ್ ಔಷಧಿಯನ್ನು ಮತ್ತೆ ಗಿಲ್ಡ್ ಕಂಪನಿ ಪ್ರಾಯೋಗಿಕ ಔಷಧಿಯಾಗಿ ಉಪಯೋಗಿಸಲು ನಿರ್ಧರಿಸಿತು. ಪ್ರಿಕ್ಲಿನಿಕಲ್ ಪ್ರಯೋಗಗಳಲ್ಲಿ ರೆಮ್ಡೆಸಿವಿರ್ ಉತ್ತಮ ಫಲಿತಾಂಶಗಳನ್ನು ನೀಡಿ, ಒಂದು ಆಶಾಕಿರಣವಾಗಿ ಹೊರಹೊಮ್ಮಿತು. ಆದರೆ, ನಂತರದ ಕ್ಲಿನಿಕಲ್ ಪ್ರಯೋಗಗಳಲ್ಲಿ (ಮಾನವನಮೇಲೆ ಪ್ರಯೋಗ) ಅಷ್ಟೊಂದು ಪರಿಣಾಮ ಬೀರದಿದ್ದರೂ, ಕೆಲವು ಸೋಂಕಿತ ವ್ಯಕ್ತಿಗಳ ಮೇಲೆ ಪ್ರಯೋಗಿಸಿದಾಗ ಇದು ಪರಿಣಾಮಕಾರಿಯಾಗಿ ಕಂಡುಬಂದಿತು. ಜಾಗತಿಕವಾಗಿ ಅನೇಕ ಸಾವಿರ ಸೋಂಕಿತ ವ್ಯಕ್ತಿಗಳ ಮೇಲೆ ಪ್ರಯೋಗಿಸಿದ ಫಲಿತಾಂಶಗಳ ಆಧಾರದ ಮೇಲೆ, ಅಮೆರಿಕಾದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ, ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತ ವ್ಯಕ್ತಿಗಳಿಗೆ ಈ ಔಷಧಿಯನ್ನು ಉಪಯೋಗಿಸಬಹುದೆಂದು ಪರವಾನಿಗೆ ಕೊಟ್ಟಿತು. ನಂತರ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನದ ಮೇರೆಗೆ, ಗಿಲ್ಡ್ ಸಂಸ್ಥೆ ಭಾರತ ಮತ್ತು ಕೆಲವು ದೇಶಗಳ ಹತ್ತಾರು ಫಾರ್ಮಾಸುಟಿಕಲ್ ಕಂಪನಿಗಳಿಗೆ ಈ ಔಷಧಿಯನ್ನು ಭಾರಿ ಪ್ರಮಾಣದಲ್ಲಿ ಉತ್ಪಾದಿಸುವ ಮತ್ತು ಮಾರಾಟಮಾಡುವ ಹಕ್ಕನ್ನು ಕೊಟ್ಟಿತು. ಆದ್ದರಿಂದ, ಭಾರತದಂತಹ ದೇಶದಲ್ಲಿ ಕೂಡ ಈ ಔಷಧಿ ಎಲ್ಲರಿಗು ಸಿಗುವಂತಾಯಿತು. ಈ ಕೊರೊನ ವೈರಸನ ರೂಪಾಂತರಿಯ ಎರಡನೇ ಅಲೆ ಎಲ್ಲೆಮೀರಿ ತಾಂಡವವಾಡುತ್ತಿದೆ. ಇದಕ್ಕೆ ಜನರ ಬೇಜವಾಬ್ದಾರಿತನವೋ, ಸರಕಾರಗಳ ಪೂರ್ವ ತಯಾರಿಯ ವೈಫಲ್ಯವೋ, ಅದು ಬೇರೆ ಚರ್ಚೆಯ ವಿಷಯ. ನನ್ನ ಕೇಳಿದರೆ ಇಲ್ಲಿ ಇಬ್ಬರ ಪಾಲು ಇದೆ. ಮೊದಲನೇ ಅಲೆ ಇನ್ನೇನು ಮುಗಿದೇ ಹೋಯಿತು ಅಂತ ಮಾಸ್ಕ ಧರಿಸದೆ ಬೇಕಾಬಿಟ್ಟಿ ತಿರುಗುವುದು, ಮದುವೆ, ಮೆರವಣಿಗೆ, ಸಮಾರಂಭ ಹಾಗು ರಾಜಕೀಯ ಪ್ರಚಾರ ಸಭೆಗಳು ಎಲ್ಲೆಂದರಲ್ಲಿ, ನೀತಿನಿಯಮಗಳಲ್ಲೂ ಗಾಳಿಗೆ ತೂರಿ ಬೇಕಾಬಿಟ್ಟಿ ವರ್ತಿಸಿದೆವು. ಎರಡನೇ ಅಲೆಯ ಬಗ್ಗೆ ಜಾಗತಿಕವಾಗಿ ಮುನ್ನೆಚ್ಚರಿಕೆ ಕೊಟ್ಟರು, ಯಾರು ಕ್ಯಾರೇ ಅನ್ನಲಿಲ್ಲ.

ಇದೆಲ್ಲದರ ಮಧ್ಯೆ, ರೋಗದ ವೈಪರಿತ್ತ್ಯ ಹೆಚ್ಚಾದಮೇಲೆ, ಆಸ್ಪತ್ರೆಗಳಿಗೆ ದಾಖಲಾದ ಅನೇಕ ರೋಗಿಗಳಿಗೆ, ಹೆಚ್ಚಿನ ವೈದ್ಯರು, ಈ ಸಮಯದಲ್ಲಿ ಸಂಜೀವಿನಿ ಎನಿಸಿಕೊಂಡಿರುವ ಈ "ರೆಮ್ಡೆಸಿವಿರ್" ಔಷಧಿಯನ್ನೇ ಪ್ರೇಸ್ಕ್ರೈಬ್ ಮಾಡುತ್ತಿರುವುದರಿದ, ರಾತ್ರೋರಾತ್ರಿ ಈ ಔಷಧೀಯ ಬೇಡಿಕೆ ಜಾಸ್ತಿ ಆಗಿದ್ದು ಸಹಜ. ಆದರೆ ಇದೆ ಪರಿಸ್ಥಿತಿಯನ್ನ ದುರುಪಯೋಗಪಡಿಸಿಕೊಂಡು ಅನೇಕ ದುರಾಸೆಯ ಕಿಡಿಗೇಡಿಗಳು, ಈ ಔಷಧಿಯನ್ನು ಅಕ್ರಮ ಸಂಗ್ರಹಣೆಮಾಡಿ, ದುಡ್ಡಿನ ಆಸೆಗಾಗಿ ಹೆಚ್ಚಿನ ಬೆಲೆಯಲ್ಲಿ ಕಾಳಸಂತೆಯಲ್ಲಿ ಮಾರಾಟಮಾಡುತ್ತಿರುವ ವರದಿಗಳನ್ನು ಓದಿದರೆ, ಇದು ಹೆಂತಹ ದುರಂತ ಮತ್ತು ನಾಚಿಕೆಗೇಡು ಸಂಗತಿ ಎನಿಸುತ್ತದೆ.

ರೆಮ್ಡೆಸಿವಿರ್ ಔಷಧಿಯ ಜೊತೆಗೆ, ಈಗ ನಮ್ಮೆಲ್ಲರಿಗೆ ಆಶಾಕಿರಣವಾಗಿರುವ ಇನ್ನೊಂದು ಜೀವ ಉಳಿಸುವ ಅಸ್ತ್ರವೆಂದರೆ ವಾಕ್ಸಿನುಗಳು, ಬೇರೆ ಬೇರೆ ಫಾರ್ಮ ಕಂಪನಿಗಳು, ಬೇರೆ ಬೇರೆ ಜೈವಿಕ ತಂತ್ರಜ್ಞಾನ ಬಳಸಿ ಅನೇಕ ವ್ಯಾಕ್ಸೀನ್ಗಳನ್ನೂ (ಲಸಿಕೆ) ಅಭಿವೃದ್ಧಿಪಡಿಸಿವೆ. ನಮ್ಮ ದೇಶದಲ್ಲಿಯೂ ಕೂಡ ಎರಡು ಕಂಪನಿಗಳ ವಾಕ್ಸಿನುಗಳು ಹೊರಬಂದಿವೆ. ಈ ವೈರಸ್ಸಿಗಾಗಿಯೇ ವಾಕ್ಸಿನುಗಳು ಬಂದವೋ ಅಥವಾ ವಾಕ್ಸಿನುಗಳಿಗಾಗಿಯೇ ಈ ವೈರಸ್ಸು ಜನ್ಮತಾಳಿತೋ ಅದು ಕೂಡ ಬೇರೆ ಚರ್ಚೆಯ ವಿಷಯ. ಆದರೆ ಈಗ ಈ ವೈರಸ್ ಜೊತೆ ಹೋರಾಡಲು ನಮ್ಮ ದೇಹದಲ್ಲಿ ರೋಗ ನಿರೋಧಕ ಕಣಗಳಾದ ಆಂಟಿಬಾಡೀಸ್ ಬೆಳೆಯಬೇಕೆಂದರೆ ಈ ವ್ಯಾಕ್ಸೀನ್ ತೆಗೆದುಕೊಳ್ಳುವುದು ಅವಶ್ಯವಾಗಿದೆ. ಬಹಳ ಜನ ಈ ವ್ಯಾಕ್ಸಿನುಗಳನ್ನು ತೆಗೆದುಕೊಳ್ಳಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದಾರೆ. ಈಗ ಪರಿಸ್ಥಿತಿ ಹೇಗಿದೆ ಎಂದರೆ, ಬರಿಗೈಯಿಂದ ಯುದ್ಧಕ್ಕೆ ಹೊರಡುವುದಕ್ಕಿಂತ, ಸಿಕ್ಕ ಕೆಲವು ಅಸ್ತ್ರಗಳೊಂದಿಗೆ ಯುದ್ಧವನ್ನು ಎದುರಿಸಿ ಪ್ರಾಣವುಳಿಸಿಕೊಳ್ಳುವುದು ಅತೀ ಅವಶ್ಯವಾಗಿದೆ. ಈಗಾಗಲೇ ಬಹಳ ಜನ ಈ ಲಸಿಕೆಗಳನ್ನು ತೆಗೆದುಕೊಂಡಿದ್ದು, ಸುರಕ್ಷಿತವಾಗಿವೆ ಎಂಬ ವರದಿಗಳು ಕೇಳಿಬಂದಿವೆ. ರೆಮ್ಡೆಸಿವಿರ್ ಔಷಧಿಯು, ಈ ವೈರಸ್ಸು ನಮ್ಮ ದೇಹದಲ್ಲಿರುವ ಜೀವಕೋಶಗಳನ್ನು ಸೇರಿ ಇನ್ನೇನ್ನು ತನ್ನ ಮರಿಗಳನ್ನು ಉತ್ಪಾದಿಸುತ್ತದೆ ಅನ್ನುವಷ್ಟರಲ್ಲಿ, ಅದರ ಕೆಲವೊಂದು ಪ್ರೊಟೀನುಗಳಮೇಲೆ ತನ್ನ ಪ್ರಭಾವ ಬೀರಿ, ವೈರಸ್ ಅನ್ನು ಸರ್ವನಾಶಮಾಡುತ್ತದೆ. ಆದರೆ ವಾಕ್ಸಿನುಗಳು ಹಾಗಲ್ಲ, ಅಕಸ್ಮಾತ್ ಸೋಂಕು ತಗುಲಿ, ವೈರಸ್ ನಮ್ಮ ದೇಹ ಸೇರಿ, ಜೀವಕೋಶಗಳ ಒಳಗೆ ಹೋಗುವ ಮುಂಚೆಯೇ, ಅದನ್ನು ಹೊಡೆದುರುಳಿಸುತ್ತವೆ. ರೆಮ್ಡೆಸಿವಿರ್ ತೊಗೊಳ್ಳುವಷ್ಟು ದುಃಸ್ಥಿತಿಗೆ ಹೋಗುವುದು ಬೇಡ ಎನ್ನುವವರು, ವಾಕ್ಸಿನನ್ನು ತೆಗೆದುಕೊಂಡು ವೈರಸ್ ಜೊತೆ ಹೋರಾಡಲು ಸದೃಢರಾಗಬಹುದು.

ಇನ್ನು, ಯಾಕಪ್ಪ ಸುಮ್ನೆ ಈ ವ್ಯಾಕ್ಸೀನ್ ಅಥವಾ ರೆಮ್ಡೆಸಿವಿರ್ ಗೋಜಿಗೆ ಹೋಗೋದು ಅನ್ನುವವರು, ಒಳ್ಳೆಯ ಆಹಾರ, ಯೋಗ-ವ್ಯಾಯಾಮ, ಅಥವಾ ಆಯುರ್ವೇದ-ಮನೆ ಔಷಧಿಗಳನ್ನು ಸೇವಿಸುತ್ತಾ, ಎಲ್ಲ ರೀತಿಯ ವೈರಸ್ಗಳೊಂದಿಗೆ ಹೋರಾಡಬಲ್ಲ ಸದೃಢ ರೋಗನಿರೋಧಕ ಶಕ್ತಿಯನ್ನ ಬೆಳೆಸಿಕೊಳ್ಳುವುದರ ಜೊತೆಗೆ, ಕೊರೊನ ಮಾರ್ಗಸೂಚಿಗಳನ್ನು (ಮಾಸ್ಕ, ಸ್ಯಾನಿಟೈಸರ್, ಕೈ ತೊಳೆಯುವುದು, ಸುರಕ್ಷಿತ ಸಾಮಾಜಿಕ ಅಂತರ) ಕಟ್ಟುನಿಟ್ಟಾಗಿ, ಚಾಚೂತಪ್ಪದೆ ಪಾಲಿಸಿ, ನಿಮ್ಮ ಮತ್ತು ಇತರರ ಅರೋಗ್ಯ ಕಾಪಾಡುವ ಮಹದೋದ್ದೇಶ ಹೊಂದಿ, ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡುವತ್ತ ಚಿಂತಿಸಿರಿ. ಬನ್ನಿ! ಒಟ್ಟಾಗಿ ಹೋರಾಡಿ, ಈ ಕೊರೊನದ ಎಷ್ಟು ಅಲೆಗಳು ಬಂದರು, ಅವುಗಳನ್ನು ಹೊಡೆದೋಡಿಸಿ ಯಶಸ್ವಿಯಾಗೋಣ.......

ಮಂಗಳವಾರ, ಡಿಸೆಂಬರ್ 29, 2020

ಬ್ಲಾಗ್ ರೈಟಿಂಗ್ ಎಂಬ ಇತ್ತೀಚಿನ ಗೀಳು.....


ಬರೆಯುವುದು ಒಂದು ಕಲೆ! ಒಬ್ಬ ಬರಹಗಾರ ತನ್ನ ವಿಚಾರ, ಅನುಭವ ಮತ್ತು ಭಾವನೆಗಳನ್ನು ಜಗತ್ತಿಗೆ ತಿಳಿಸಬಯಸುವ ಮಾಧ್ಯಮವೇ ಬರವಣಿಗೆ. ಒಂದು ಸಂವಾದ, ಸಂಭಾಷಣೆ, ಓದು, ಪ್ರವಾಸ ಹೀಗೆ ಅನೇಕ ಮಾಧ್ಯಮಗಳ ಮೂಲಕ ಹೊಸ ಹೊಸ ವಿಚಾರ ಮತ್ತು ಅನುಭವಗಳಾಗಲಿ, ಭಾವನೆಗಳಾಗಲಿ ನಮ್ಮಲ್ಲಿ ಶೇಖರಣೆ ಆದಾಗ, ಒಬ್ಬ ಒಳ್ಳೆಯ ಲೇಖಕ ಅವುಗಳಿಗೆ ಸುಂದರವಾದ ಶಬ್ದಗಳನ್ನು ಪೋಣಿಸುತ್ತಾ ಒಂದು ರೂಪ ಕೊಡುತ್ತಾನೆ. ಕೆಲವು ಲೇಖಕರು ಇತಿಹಾಸ, ತತ್ವ-ಸಿದ್ಧಾಂತ, ಶ್ರೇಷ್ಠ ವ್ಯಕ್ತಿಗಳ ಜೀವನ ಚರಿತ್ರೆ, ಮುಂತಾದ ವಿಷಯಗಳ ಲೇಖನ/ಪುಸ್ತಕಗಳನ್ನು ಬರೆದರೆ ಇನ್ನು ಕೆಲವು ಭಾವನಾತ್ಮಕ ಜೀವಿಗಳು ತಮ್ಮ ಭಾವನೆಗಳನ್ನು ಕಥೆ, ಕವನ ಮತ್ತು ಕಾದಂಬರಿಗಳನ್ನು ಬರೆಯುವುದರ ಮೂಲಕ ವ್ಯಕ್ತಪಡಿಸುತ್ತಾರೆ. ಇನ್ನು ಕೆಲವು ಲೇಖಕರು ಪತ್ರಿಕೆ ಅಥವಾ ನಿಯತಕಾಲಿಕೆಗಳಿಗೆ ಅಂಕಣಗಳನ್ನು ಬರೆದು ಓದುಗರು ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಈ ಮೂರು ವರ್ಗಗಳನ್ನು ಬಿಟ್ಟರೆ ಇತ್ತೀಚಿಗೆ ಕಂಡುಬರುವ ಇನ್ನೊಂದು ವರ್ಗವೆಂದರೆ ಬ್ಲಾಗ್ ಬರಹಗಾರರು. ಮುಂಚೆ ಬರೆಯುವ ಹವ್ಯಾಸ ಇರುವವರು, ತಮ್ಮ ಪುಟ್ಟ ಪುಟ್ಟ ಲೇಖನ, ಕಥೆ, ಕವನಗಳನ್ನು, ವಾರಪತ್ರಿಕೆ ಮಾಸಪತ್ರಿಕೆಗಳಲ್ಲಿ ಬರೀತಾಇದ್ದರು. ಈಗಲೂ ಕೂಡ ಕೆಲವರು ಈ ಹವ್ಯಾಸ ಬಿಟ್ಟಿಲ್ಲ. ಆದರೆ, ಈ ಬ್ಲಾಗ್ ಪದ್ಧತಿ ಬಂದಮೇಲೆ, ತಮ್ಮದೇ ಸ್ವಂತ ಬ್ಲಾಗ್ ಸೃಷ್ಟಿಸಿ ಅದರಲ್ಲಿ ಬರೆಯುದು ಸರ್ವೇ ಸಾಮಾನ್ಯ ಆಗ್ತಾಯಿದೆ. ಹೇಳಬೇಕಂದ್ರೆ ಕೇವಲ ಕನ್ನಡ ಭಾಷೆಯಲ್ಲಿಯೇ ಎಣಿಕೆಗೆ ಸಿಗದಷ್ಟು ಬ್ಲಾಗುಗಳು ಅಂತರ್ಜಾಲದಲ್ಲಿ ಪ್ರಚಲಿತದಲ್ಲಿವೆ. ನಾನು ಅನೇಕ ಇಷ್ಟವಾದ ಬ್ಲಾಗುಗಳನ್ನು ಪಟ್ಟಿ ಮಾಡಿದ್ದೂ, ಸಮಯ ಸಿಕ್ಕಾಗ ಓದುತ್ತ ಇರ್ತೀನಿ. ಇದರಲ್ಲಿ ಅನೇಕ ರೀತಿಯ ವಿಷಯಗಳಬಗ್ಗೆ ಲೇಖನಗಳು ನಿಮಗೆ ಸಿಗುತ್ತವೆ. ಕೆಲವರು ತಮ್ಮ ಅನುಭವಗಳಬಗ್ಗೆ ಬರೆದರೆ, ಕೆಲವರು ತಮ್ಮ ಪ್ರವಾಸ ಕಥನಗಳು, ಪುಸ್ತಕ ವಿಶ್ಲೇಷಣೆ, ಅಡುಗೆ, ರಾಜಕೀಯ, ಹಾಸ್ಸ್ಯ , ಹೀಗೆ ಬರಿತ ಹೋದರೆ, ಇನ್ನು ಕೆಲವರು ಕೇವಲ ಕವನಗಳಿಗೆ ತಮ್ಮ ಬ್ಲಾಗುಗಳನ್ನು ಸೀಮಿತಮಾಡಿರುವುದು ಕಂಡುಬರುತ್ತದೆ.

ಇತ್ತೀಚೆಗೆ ನಾನು ಅಲ್ಪ ಸ್ವಲ್ಪ ಈ ಬರೆಯುವ ಗೀಳು ಹಚ್ಚಿಕೊಂಡರು ಇನ್ನು ಅಷ್ಟೊಂದು ಪ್ರಭುದ್ದತೆ ಬಂದಿಲ್ಲ. ಆದರೆ ಈ ಬರೆಯುವ ಗೀಳು ಒಂಥರಾ ಸ್ಟ್ರೆಸ್ ಬಸ್ಟರ್ ಅನ್ನಬಹುದು. ಯಾಕಂದ್ರೆ ನಿಮ್ಮ ತಲೇಲಿ ಏನೇನೋ ಯೋಚನೆಗಳು, ವಿಚಾರಗಳು, ಅನುಭವಗಳು ಬರೋದು ಸಹಜ. ಅವನ್ನೆಲ್ಲ ಅಚ್ಚುಕಟ್ಟಾಗಿ ಒಂದು ರೂಪ ಕೊಟ್ಟು ಡೈರಿನಲ್ಲೋ, ಇಲ್ಲ ಇತ್ತೀಚಿನ ಬದ್ಧತಿಯಂತೆ ಬ್ಲಾಗಿನಲ್ಲೋ ಗೀಚಿ ಹೊರಹಾಕಿದರೆ, ಮನಸಿಗೆ ಏನೋ ಒಂಥರಾ ಹಗುರವಾದ ಬಾಸವಾಗುವುದು ಸಹಜ. ಎಲ್ಲವನ್ನು ಖಾಲಿ ಮಾಡಿ ರಿಲ್ಯಾಕ್ಸ್ ಆದ ಅನುಭವ ಬರುತ್ತದೆ.



ಲೇಖನಗಳ ಗುಣಮಟ್ಟವು, ಬರಹಗಾರರ ಭಾಷ ಶೈಲಿ, ವಿಷಯಗಳನ್ನು ಹೇಳುವ ರೀತಿ, ಓದುಗರನ್ನು ತರ್ಕಕ್ಕಿಳಿಸುವ ಚಾಕ್ಯಚಕ್ಕತೆ, ಇವುಗಳಮೇಲೆ ಅವಲಂಬಿತವಾಗಿರುತ್ತದೆ. ನನ್ನ ಅನುಭವದ ಪ್ರಕಾರ ಕರ್ನಾಟಕದಲ್ಲಿ ಎರಡು ಪ್ರಕಾರದ ಬರಹಗಾರರನ್ನಾಗಿ ವಿಂಗಡಿಸಬಲ್ಲೆ. ಈ ಬಯಲುಸೀಮೆ, ಮಧ್ಯ ಮತ್ತು ದಕ್ಷಿಣ ಕರ್ನಾಟಕದವರ ಬರವಣಿಗೆ ಒಂದು ಪ್ರಕಾರವಾದರೆ, ಮಲೆನಾಡಿನ ತಪ್ಪಲಿನಿಂದ ಬರುವ ಬರಹಗಾರರ ಶೈಲಿಯೇ ಬೇರೆ. ಮಲೆನಾಡಿನ ಹಚ್ಚ ಹಸುರಿನ ಪ್ರಕೃತಿ ಮಡಿಲಲ್ಲ ಬೆಳೆದು ಬಂದ ಈ ಮಹಾನುಭಾವರಲ್ಲಿ ಹುಟ್ಟಿನಿಂದಲೇ ಈ ಕಲೆ ಬಂದಿರುತ್ತೋ ಏನೋ ಗೊತ್ತಿಲ್ಲ, ಈ ಕಥೆ ಮತ್ತು ಕವನ ಬರೆಯುವುದರಲ್ಲಿ ಈ ಭಾಗದ ಜನರು ಎತ್ತಿದ ಕೈ. ಅವರ ಲೇಖನಗಳಲ್ಲಿ, ಆ ಹಸಿರು ಸಿರಿಯ ಗಿಡ-ಮರ, ಜರಿ-ಜಲಪಾತಗಳ ಮಧ್ಯೆ ಸುಯ್ಯಂತೆ ಸುಳಿದುಬರುವ ಸಂಪಾದ ತಂಗಾಳಿ ಸೋಕಿದಂತಹ ಅನುಭವ ಓದುಗರಿಗೆ ಬರುವುದು ಸರ್ವೇ ಸಾಮಾನ್ಯ. ಇದನ್ನು ಪ್ರಕೃತಿದತ್ತವಾಗಿ ಬಂದ ಬಳುವಳಿ ಎನ್ನಬಹುದೇ???

ಭಾನುವಾರ, ಡಿಸೆಂಬರ್ 20, 2020

ಹೊಸಪೇಟೆಯ ಕೆಮ್ಮಣ್ಣಿನ ಧೂಳಿನಲ್ಲಿ ಕಳೆದ ಆ ದಿನಗಳು

ಬೆಳಗಿನ 6-00 ಘಂಟೆ,  ಬಯಲು ಸೀಮೆ, ಬಳ್ಳಾರಿ ಜಿಲ್ಲೆಯ ಮೈಕೊರೆಯುವ ಚಳಿಗೆ ಮೈ ಮುದುರಿಕೊಂಡು ಹಾಸಿಗೆಯಲ್ಲಿ ಹೊರಳಾಡುತ್ತಿರುವಾಗ, ಕೆಳಗಡೆ ಫ್ಲೋರಿನಿಂದ "ನಲ್ಲಿಯಲ್ಲಿ ನೀರು ಬರ್ತಾಇದೇ, ಬೇಗ ಬಂದು ನೀರು ತುಂಬಿಕೊಳ್ಳಿ ಎಲ್ಲ್ರು" ಅಂತ ಮನೆಯ ಓನರ್ ಅಜ್ಜಿಯ ಕೂಗು ಕೇಳಿಬಂತು.  ಎಷ್ಟೊಂದು ಕರ್ಕಶ ಅವಳ ಕೂಗು, ಈ ಚಳಿಯಲ್ಲಿ ಯಾಕಾದ್ರೂ  ನರಕ ಯಾತನೆ ಕೊಡ್ತಿದ್ದಾಳಪ್ಪ, ಅನ್ನೋವಷ್ಟು ಸಿಟ್ಟು ಬರ್ತಾಇದೇ . ಆದ್ರೆ ಏನ್ ಮಾಡೋದು ಈ ಕಾರ್ಪೋರೇಶನ್ ನೀರು ದಿನಕ್ಕೆ ಒಂದು ತಾಸು ಅಷ್ಟೇ ಬರೋದು. ಮನೇಲಿ ಬೋರ್ವೆಲ್ ವ್ಯವಸ್ಥೆ ಬೇರೆ ಇಲ್ಲ. ಈಗ ಎದ್ದು ನೀರು ತುಂಬಿಕೊಳ್ಳಿಲ್ಲ ಅಂದ್ರೆ ಅದೋಗತಿ. ನಾವೋ ಬ್ಯಾಚುಲರ್ ಹುಡುಗ್ರು, ನೀರು ತುಂಬಿಕೊಳ್ಳೋಕೆ ನಮ್ಮ್ ಹತ್ರ ಒಂದು ಪ್ಲಾಸ್ಟಿಕ್ ಕೊಡ, ಬಿಟ್ಟರೆ ಒಂದು ಬಕೆಟು. ಅಷ್ಟ್ರಲ್ಲಿ ಅಯ್ಯೋ ೭-೩೦ ಗೆ ಕಂಪನಿ ಬಸ್ಸು  ಬೇರೆ ಬರತ್ತೆ, ಬೇಗ ಎದ್ದು ರೆಡಿ ಆಗ್ಬೇಕು. ನನ್ನ ರೂಮೇಟ್ ಸಂತೋಷನ್ನ ಎಬ್ಬಿಸಿದೆ, "ಸಂತೋಷ,  ಎಳ್ರಿ ನೀರು ತುಂಬ್ಕೊಂಡ್ ಬರೋಣ, ಆಫೀಸಿಗೆ ಟೈಮ್ ಆಗತ್ತೆ, ಬೇಗ ರೆಡಿ ಆಗ್ಬೇಕು" ಅಂದೆ. ಸಂತೋಷ ಗದಗಿನವನು, ಇಬ್ರು ಹೊಸಪೇಟೆಯ ಪ್ರತಿಷ್ಠಿತ ಕಬ್ಬಿಣದ ಅದಿರು ತೆಗೆಯುವ ಕಂಪನಿಯ ಕ್ವಾಲಿಟಿ ಕಂಟ್ರೋಲ್ ಮತ್ತು ಸಂಶೋಧನಾ ಪ್ರಯೋಗಾಲಯದಲ್ಲಿ ರಾಸಾಯನಶಾಸ್ತ್ರಜ್ಞರಾಗಿ ಸೇರಿಕೊಂಡು, ಕಂಪನಿಯ ಹೆಡ್ ಆಫೀಸ್ ಪಕ್ಕ ಐದು ನಿಮಿಷ ನಡೆದು ಹೋಗಬಲ್ಲ ದೂರದಲ್ಲಿ ಒಂದು ರೂಮ್ ಬಾಡಿಗೆ ಹಿಡಿದಿದ್ವಿ. ನಮ್ಮನ್ನೆಲ್ಲ ಹೊಸಪೇಟೆಯಿಂದ 12 ಕಿಲೋಮೀಟರು ದೂರವಿರುವ ಕಂಪನಿಯ ಕಬ್ಬಿಣದ ಅದಿರಿನ ಗಣಿಗೆ ಕರೆದೊಕೊಂಡು ಹೋಗುವ ಬಸ್ಸು ಇಲ್ಲಿಂದಲೇ ಪ್ರಯಾಣ ಬೆಳೆಸುತ್ತಿತ್ತು. ಈ ಬಸ್ಸು ಅಕಸ್ಮಾತ್ ಮಿಸ್ಸಾದರೆ ಅದೋಗತಿ. ಆಮೇಲೆ ಅತ್ತಕಡೆ ಹೋಗುವ ಯಾವುದಾದರು ಜೀಪಿಗಾಗಿ ಕಾಯಬೇಕಿತ್ತು. 

ಎಂಎಸ್ಸಿ ಮುಗಿಸಿದಮೇಲೆ ರನ್ನನ ಮಾಧೋಳದ ಒಂದು ಪುಟ್ಟ ಕಾಲೇಜಿನಲ್ಲಿ ಆರು ತಿಂಗಳು ಉಪನ್ಯಸಕನಾಗಿ ಕೆಲಸ ಮಾಡುತ್ತಿರುವಾಗ, ಒಂದು ದಿನ ಹೊಸಪೇಟೆಯ ಈ ಕಂಪನಿಯಿಂದ ನೌಕರಿ ಆಫರ್ ಬರುತ್ತೆ. ಉಪನ್ಯಾಸಕನಾಗಿ ಪಡೆಯುತ್ತಿದ್ದ ಸಂಬಳಕ್ಕಿಂತ, ಈ ಕಂಪನಿ ಕೊಡುವ ಸಂಬಳ ಮೂರು ಪಟ್ಟು ಜಾಸ್ತಿ ಇತ್ತು. ಜೊತೆಗೆ ಸಂಶೋಧನೆ, ಲ್ಯಾಬೋರೇಟೋರಿಯಲ್ಲಿ ಕೆಲಸ ಬೇರೆ. ಖಾಸಗಿ ಕಂಪನಿ ಕೆಲಸ ಸ್ವಲ್ಪ ಕಠಿಣ ಇರುತ್ತೆ, ಇಷ್ಟೊಂದು ಆರಾಮ ಇರಲ್ಲ ಅಂತೆಲ್ಲ ಹೇಳಿದ್ರು ಕಾಲೇಜು ಮ್ಯಾನೇಜುಮೆಂಟಿನವರು. ಆದರೂ ಇದು ಹೊಸ ಕೆಲಸ, ಕಲಿಯಲು ಬಹಳಷ್ಟು ಅವಕಾಶಗಳಿರುತ್ತವೆ ಅಂತೆಲ್ಲ ಯೋಚಿಸಿ, ಸಧ್ಯದ ನೌಕರಿಯನ್ನು ಅರ್ಧಕ್ಕೆ ನಿಲ್ಲಿಸಿ, ಹೊಸಪೇಟೆಯತ್ತ ಪ್ರಯಾಣ ಬೆಳೆಸಿದ್ದೆ. ಆ ಸಮಯದಲ್ಲಿ ನಾನು ತೆಗೆದುಕೊಂಡ ನಿರ್ಧಾರ ಸರಿ ಅನಿಸಿತು.  

ಅದು ಬಳ್ಳಾರಿ ಜಿಲ್ಲೆಯಲ್ಲಿಯೇ ದೊಡ್ಡ ಕಬ್ಬಿಣ ಅದಿರು ಮಾರಾಟ ಮಾಡುವ ಕಂಪನಿ. ಹೊಸಪೇಟೆಯ ಸುತ್ತಲಿನ ಕೆಂಪು ಗುಡ್ಡಗಳಲ್ಲಿ ಕಬ್ಬಿಣದ ಅದಿರನ ಅಪಾರವಾದ ಖಜಾನೆಯೇ ಇದೆ. ನಾನು ಸೇರಿದ ಈ ಕಂಪನಿಯವರು ಆ ಗುಡ್ಡಗಳನ್ನು ಅಗೆದು, ಕಬ್ಬಿಣದ ಅದಿರನ್ನು ಹೊರತೆಗೆದು ದೇಶ ವಿದೇಶಗಳಿಗೆ ಮಾರಾಟ ಮಾಡುತಿದ್ದರು. ಹೊಸಪೇಟೆಇಂದ 12 ಕಿಲೋಮೀಟರು ದೂರದ ವ್ಯಾಸನಕೆರೆ ಗುಡ್ಡಗಳಲ್ಲಿ ಇದ್ದ ಈ ಕಂಪನಿಯ ಮೈನ್ಸ್ ಮಧ್ಯೆ ಒಂದು ಪುಟ್ಟದಾದ ಲ್ಯಾಬೊರೇಟರಿಯಲ್ಲಿನೇ ನಮ್ಮ ಕೆಲಸ.  ಪ್ರಯೋಗಾಲಯವನ್ನು ಸುವ್ಯವಸ್ಥಿತವಾಗಿ ಮಾಡಿದ್ದರು. ಹೊಸಪೇಟೆಯ  ಮಧ್ಯದಲ್ಲಿನ ಹೆಡ್ ಆಫೀಸಿನಿಂದ ಬೆಳಿಗ್ಗೆ ಹೋರಾಟ ಬಸ್ಸಿನಲ್ಲಿ ವ್ಯಾಸನಕೆರೆಯ ಈ ಗಣಿಗೆ ಬಂದು ಸೇರಿಬಿಟ್ಟರೆ,  ದಿನಪೂರ್ತಿ ಆ ಕೆಂಪುಗುಡ್ಡಗಳ ಮಧ್ಯೆ ಕೆಂಪು ಮಣ್ಣಿನ ಧೂಳಿನಲ್ಲಿಯೇ ಜೀವನ ಕಳೆಯಬೇಕು. ಮತ್ತೆ ಸಂಜೆ 5-30 ಕ್ಕೆ ಅದೇ ಬಸ್ಸಿನಲ್ಲಿ ವಾಪಸ್ ಊರು ಸೇರುತ್ತಿದ್ದೆವು. ಸಂಜೆ ಮನೆಗೆ ಬಂದರೆ ಮೈಯೆಲ್ಲ ಕೆಂಪು ಕೆಂಪು, ಅಂದು ತೊಟ್ಟ ಬಟ್ಟೆಗಳನ್ನ ಮರುದಿನ ಹಾಕಲಾರದಷ್ಟು ಕೊಳೆಯಾಗುತಿದ್ದವು. ಅದಕ್ಕಾಗಿ ಇಲ್ಲಿರುವವರೆಗೆ ದಿನಕ್ಕೆ ಎರಡುಸಲ ಸ್ನಾನ ಖಡ್ಡಾಯವಾಗಿತ್ತು...

ಅಂತು ಇಂತು ನಾನು ಮತ್ತು ಸಂತೋಷ ನಲ್ಲಿಯಿಂದ ನಮಗೆ ಬೇಕಾದಷ್ಟು ನೀರು ತಂದು ಸ್ನಾನ ಎಲ್ಲ ಮುಗಿಸಿ ರೆಡಿ ಆದ್ವಿ. ಮನೆಯ ಟೆರೇಸಿನಿಂದ ಇಣುಕಿ ನೋಡಿದರೆ ಬಸ್ಸು ಬಂತಾ ಇಲ್ವಾ ಅಂತ ಗೊತ್ತಾಗ್ತಿತ್ತು. ಇಣುಕಿ ನೋಡಿದೆ, ಇನ್ನು ಬಂದಿರಲಿಲ್ಲ, ಮನೇಲಿರುವ ಕುರುಕುಲು ತಿಂಡಿ ಬಾಯಿಗೆ ಹಾಕಿಕೊಂಡು ಬಸ್ಸು ಬಿಡುವ ಸ್ಥಳಕ್ಕೆ ಹೋಗಿ ಕಾಯಿತ ನಿಂತಿದ್ವಿ. ಅಷ್ಟರಲ್ಲೆ ಏನ್. ರಾಘವೇಂದ್ರ ಬಂದು ನಿಂತಿದ್ರು. ನಮ್ಮ ಆಫೀಸಿನಲ್ಲಿ ಇಬ್ರು ರಾಘವೇಂದ್ರ ಇದ್ರು. ಕನ್ಫ್ಯೂಸ್ ಆಗ್ಬಾರ್ದು ಅಂತ ಅವರನ್ನ ಏನ್ ಮತ್ತು ಎಂ ರಾಘವೇಂದ್ರ ಅಂತ ಅವರವರ ಇನಿಶಿಯಲ್ಸ್ಗಳಿಂದ ಕರೀತಿದ್ವಿ. ಏನ್. ರಾಘವೇಂದ್ರ ಹೊಸಪೇಟೆ ಪಕ್ಕದವರು, ಮಾತು ಕಡಿಮೆ, ಆದರೆ ಒಳ್ಳೆ ಮನುಷ್ಯ.  ಇನ್ನೇನು ಅವರ ಜೊತೆ ಮಾತು ಶುರುಹಚ್ಚುವಷ್ಟರಲ್ಲಿ ಎಂ. ರಾಘವೇಂದ್ರ ಬರ್ತಾಯಿರೋದು ಕಂಡುಬಂತು. ಕಂಪನಿಯ ಯೂನಿಫಾರ್ಮ್ನಲ್ಲಿ, ಕೈಯಲ್ಲೊಂದು ಕಪ್ಪು ಬಣ್ಣದ ಬ್ಯಾಗು ಹಿಡಿದುಕೊಂಡು ಅಲ್ಲಿಂದಲೇ ಎಲ್ರಿಗೂ ಕೈ ಮಾಡುತ್ತ ಮುಗುಳ್ನಗೆ ಬೀರುತ್ತಾ ಬರ್ತಾಇದ್ರು. ಇವರೊಬ್ಬ ಚೈತನ್ಯ ಚಿಲುಮೆ, ಇವರ ಜೊತೆ ಮಾತಾಡೋದೇ ಒಂದು ಖುಷಿ. ಖುದ್ದು ಹೊಸಪೇಟೆಯವರೇ ಆದರೂ ಕಾಲೇಜು ಮುಗಿಸಿದಮೇಲೆ ಅನೇಕ ಕೆಲಸ ಮಾಡಿ ಈಗ ಈ ಕಂಪನಿಯಲ್ಲಿ ಸೇರಿದ್ದರು. ಇಲ್ಲಿ ಅವರಿಗೆ ಹೆಚ್ಚುಕಡಿಮೆ ೫-೬ ವರ್ಷ ಆಗಿರಬಹುದು. ಉಳಿದವರಿಗೆಲ್ಲ ಇವರೇ ಸೀನಿಯರ್. ವಯಸಿನಲ್ಲಿ ನನಗಿಂತ ೨-೩ ವರ್ಷ ಹಿರಿಯರಿರಬಹುದು, ಆದರೂ ಏನೇ ಸಮಸ್ಯೆ ಅಂತ ಬಂದಾಗ ಖುಷಿ ಖುಷಿಯಿಂದ ಸಹಾಯಕ್ಕೆ ಕೈಚಾಚುವ ಸ್ನ್ಹೇಹಜೀವಿ. ಒಹ್! ಇವರ ಬಗ್ಗೆ ಹೇಳುವಷ್ಟರಲ್ಲಿ ಬಂದೇಬಿಟ್ಟರುನೋಡು ಜ್ಯೋತಿ ಮೇಡಮ್ಮು. ಅಬ್ಬಾ, ಇವರಬಗ್ಗೆ ಕೇಳ್ತಿರಾ, ಒಂದ್ ರೀತಿ ನಮ್ಮೆಲ್ಲರಿಗೂ ಹಿರಿಯಕ್ಕ ಇವಳು. ಬೈಯೋಕಾಗ್ಲಿ, ಬುದ್ದಿಹೇಳೋದಿರ್ಲಿ, ಇವಳದು ಎತ್ತಿದ ಕೈ. ಕೆಲಸ ಮಾಡೋದ್ರಲ್ಲಂತೂ ರಾಕ್ಷಶಿ. ಬೆಳಿಗ್ಗೆ ಟಿಫನ್ ಮಾಡಿ ಕೆಲ್ಸಕ್ಕೆ ನಿಂತ್ಲು ಅಂದ್ರೆ ಅವತ್ತು ಟೇಸ್ಟಿಂಗಿಗೆ ಎಷ್ಟೇ ಸ್ಯಾಂಪಲ್ಸ್ ಇರ್ಲಿ, ಮಧ್ಯಾಹ್ನ ನಾಲ್ಕು ಘಂಟೆ ಅನ್ನೋದ್ರಲ್ಲಿ ಮುಗಿಸಿ ಮನೆಗೆ ಹೋಗೋದ್ರಲ್ಲಿ ರಿಪೋರ್ಟ್ ರೆಡಿ ಮಾಡಿ ಬಾಸ್ ಗೆ ಕೊಟ್ಟಬಿಡೋಳು. ಇವಳ ಸಹಾಯಕ್ಕಿದ್ದ ವೆಂಕಿ ಮತ್ತು ಗೌಸು, ಅಮ್ಮ ತಾಯಿ ಎಷ್ಟೊಂದು ಗೋಲಿಕ್ಕೋತಿಯ, ನಮ್ಮ ಬಿಟ್ಟಬಿಡು ಅನ್ನೋವಷ್ಟು ಕಾಟ ಕೊಡ್ತಿದ್ದ್ಲು. ಈ ಗೌಸು ಮತ್ತು ವೆಂಕಿ ಪರವಾಗಿ ನಿಂತು ಅವಳ ಜೊತೆ ಎಷ್ಟೋ ಸಲ ಜಗಳ ಮಾಡಿದ್ದೀನಿ. ಜಗಳಕ್ಕೆ ನಿಂತರೆ ಸಾಕು, ಹಿರಿಯಕ್ಕ ಇದ್ದವಳು ಅತ್ತೆ ಆಗಿಬಿಡ್ತಾಇದ್ದಳು. ಆದರು ಅದೊಂದು ಮಾತೃ ಹೃದಯ, ಬಾಸ್ ಹತ್ತ್ರ ಯಾವಾಗಾದ್ರೂ ಬೈಸ್ಕೊಂಡ್ರೆ, ನಮಗೆಲ್ಲ ಧೈರ್ಯ ತುಂಬಿ, ಮತ್ತೆ ಕೆಲಸ ಮಾಡಲು ಹುರಿದುಬಿಸೋಳು. ೧-೨ ಸಲ ನನ್ನ ಸಂತೋಷನ್ನ ಊಟಕ್ಕೆ ಮನೆಗೂ ಕರೆದಿದ್ದಳು.  ಆಯಿತು, ಎಲ್ಲರು ಸೇರಿದ್ವಿ, ಇನ್ನೇನು ಬಸ್ ಬರುವ ಟೈಮ್ ಅಯೀತು ಅನ್ನುವಷ್ಟರಲ್ಲಿ ಇವತ್ತು ಬಸ್ಸು ಲೇಟ್ ಆಗತ್ತೆ ಸ್ವಲ್ಪ ರಿಪೇರಿ ಕೆಲಸ ಇದೆ ಅಂತ ಹೆಡ್ ಆಫೀಸ್ನಿಂದ ಸುದ್ದಿ ಬಂತು. ಎಲ್ಲ ಸೇರಿ ಅಲ್ಲೇ ಪಕ್ಕದಲ್ಲಿ, ಒಬ್ಬ ಅಂಕಲ್ ಅವರ ಟೀ ಅಂಗಡಿಗೆ ಹೋಗಿ ಟೀ ಕುಡಿದು ಹರಟೆ ಹೊಡಿತಾಇದ್ದ್ವಿ. ಈ ಅಂಕಲ್ ಟೀ ಅಂಗಡಿ ನಮಗೆ ಒಂಥರಾ ಅಡ್ಡಾ ಆಗಿತ್ತು. ಶನಿವಾರ ಅಂದ್ರೆ ವಾರದ ಕೊನೆಯ ದಿನ, ಸಂಜೆ ಮೈನ್ಸ್ ನಿಂದ ಬಂದ್ಮೇಲೆ ಎಲ್ಲ ಸೇರಿ ಟೀ ಕುಡಿಯುತ್ತ ಸ್ವಲ್ಪ ಟೈಮ್ ಕಳೆಯುವುದು ರೂಢಿ ಆಗಿತ್ತು. 

ಸರಿಯಾಗಿ ಅರ್ಧಗಂಟೆ ಲೇಟ್ ಆಗಿ ಬಂತು ಬಸ್ಸು. ಎಲ್ಲ ಎಂಪ್ಲಾಯೀಸ್ ಮತ್ತು ಕಾರ್ಮಿಕರು ಹತ್ತಿದಮೇಲೆ ಬಸ್ಸು ಮೈನ್ಸ್ ಕಡೆಗೆ ಪ್ರಯಾಣ ಬೆಳೆಸಿತು. ಮೈನ್ಸ್ ಮುಟ್ಟೋಕ್ ಮುಂಚೆ ಹೊಸಪೇಟೆಯ ಹೊರಗಡೆ ಜೋಳದ ರಾಶಿ ಗುಡ್ಡದ ಹತ್ತಿರ ಒಂದು ಸ್ಟಾಪ್. ಅಲ್ಲಿ ಶೀಲಾ, ಸುರೇಶ ಮತ್ತು ರುಕ್ಮಿಣಿ ಹತ್ತಿದಮೇಲೆ ಬಸ್ಸು ಬೆಂಗಳೂರು ಸೋಲಾಪುರ್ ಹೈವೇ ಮಾರ್ಗವಾಗಿ 6 ಕಿಮಿ ಕ್ರಮಿಸಿದಮೇಲೆ ಒಂದು ಎಡತಿರುವು, ಅಲ್ಲಿಂದ ಸುಮಾರು ನಾಲ್ಕೈದು ಕಿಲೋಮೀಟರು ಹೈವೇ ಪಕ್ಕದ ಅರಣ್ಯದಲ್ಲಿ ನುಸಿಳಿಕೊಂಡು ಸ್ವಲ್ಪ ಗುಡ್ಡ ಹತ್ತಿದಮೇಲೆ ನಮ್ಮ ಮೈನ್ಸ್ ಪ್ರವೇಶ ಮಾಡಿತು. ಅಲ್ಲಿರುವ ಗಣೇಶ ದೇವಸ್ಥಾನದ ಮುಂದೆ ಬಸ್ಸು ನಿಂತಮೇಲೆ ಎಲ್ಲರು ಗಣೇಶನ ಆಶೀರ್ವಾದ ಪಡೆದು, ಬೈಯೋಮೆಟ್ರಿಕ್ ಹಾಜರಿ ಹಾಕಿ, ತಮ್ಮ ತಮ್ಮ ಡಿಪಾರ್ಟುಮೆಂಟುಗಳತ್ತ (ಲ್ಯಾಬೋರೇಟರಿ, ಸ್ಟೋರ್, ಪ್ರೊಕ್ಯೂರೇಮೆಂಟ್, ಮೆಂಟೆನನ್ಸ್, ಇಂಜಿನೀರಿಂಗು ಮತ್ತು ಜಿಯಾಲಜಿ ಹೀಗೆ) ಹೋಗುವುದು. ನಾವು ಲ್ಯಾಬಿನವರೆಲ್ಲ ಒಟ್ಟಾಗಿ ಬಂದು ಬ್ಯಾಗುಗಳನ್ನೆಲ್ಲ ಇಟ್ಟು, ಬೆಳಗಿನ ಅಲ್ಪೋಪಹಾರಕ್ಕೆ ಕ್ಯಾಂಟೀನಿನತ್ತ ಪಯಣ. ಕ್ಯಾಂಟೀನ್ ಚೆನ್ನಾಗಿತ್ತು, ದಿನ ಒಂದು ವೆರೈಟಿ ತಿಂಡಿ ಇರ್ತಾಇತ್ತು. ಇದಕ್ಕೊಂದು ಅರ್ಧಘಂಟೆ ಕಳೆದು ಚಹಾ ಕುಡಿದು ಕೆಲಸ ಶುರು ಹಚ್ಚಕೊಳ್ಳೋದು ನಮ್ಮೆಲ್ಲರ ದಿನಚರಿ.  

ಈ ಲ್ಯಾಬಿನಲ್ಲಿ ಕೆಲಸ ಅಂದ್ರೆ, ಈ ಮೈನ್ಸಿನ ವಿವಿಧ ಭಾಗಗಳಲ್ಲಿ ಅಗೆದ ಅದಿರನ್ನು ಸಣ್ಣಗೆ ಪುಡಿಮಾಡಿ ಒಂದು ಟೀಮಿನವರು ನಮಗೆ ಕೊಟ್ಟಮೇಲೆ ಅದನ್ನು ವಿವಿಧ ಪ್ರಯೋಗಗಳ ಮುಖಾಂತರ ಟೆಸ್ಟಿಂಗ್ ಮಾಡಿ, ಅದರಲ್ಲಿ ಕಬ್ಬಿಣ, ಅಲ್ಯೂಮಿನಿಯಂ, ಫಾಸ್ಫರಸ್ ಮತ್ತು ಸಿಲಿಕಾನ್ (ಉಸುಕಿನ ಪ್ರಮಾಣ) ಪ್ರಮಾಣ ಎಷ್ಟಿದೆ ಎಂದು ನಿರ್ಧರಿಸುವುದು. ಯಾವ ಸ್ಯಾಂಪಲ್ಲಿನಲ್ಲಿ ಕಬ್ಬಿಣದ ಪ್ರಮಾಣ ಹೆಚ್ಚಿದ್ದು. ಉಳಿದ ಖನಿಜಗಳ ಪ್ರಮಾಣ ಕಡಿಮೆ ಇದ್ದರೆ ಅದು ಒಳ್ಳೆಯ ಗುಣಮಟ್ಟದ ಅದಿರು ಎಂದು ಪ್ರಾಮಾಣಿಕರಿಸಿ, ಅದನ್ನು ಹೊರದೇಶಗಳಿಗೆ ಹೆಚ್ಚಿನ ಬೆಲೆಗೆ ರಫ್ತು ಮಾಡಲಾಗುತಿತ್ತು. ಕೇವಲ ಪ್ರಯೋಗಗಳಷ್ಟೇ ಅಲ್ಲದೆ, ಒಮ್ಮೊಮ್ಮೆ ಇದೆ ಪ್ರಯೋಗಾಲಯದಲ್ಲಿದ್ದ ಕೆಲವೊಂದು ವೈಜ್ನ್ಯಾನಿಕ ಇನ್ಸ್ಟ್ರುಮೆಂಟ್ಗಳಲ್ಲಿ ಕೂಡ ಟೆಸ್ಟಿಂಗ್ ಮಾಡಬೇಕಾಗ್ತಿತ್ತು. ಶೀಲಾ ಒಬ್ಬಳನ್ನು ಬಿಟ್ಟರೆ ಉಳಿದ ಐದು ಜನ ಹೆಚ್ಚುಕಡಿಮೆ ಇದೆ ಕೆಲಸವನ್ನು ಮಾಡ್ಬೇಕಿತ್ತು. ಯಾಕಂದ್ರೆ ಶೀಲಾ ಒಬ್ಬ ಜಿಯೋಲಾಜಿಸ್ಟ್, ಕುಮಟಾ ಹತ್ತಿರದ ಸಣ್ಣ ಊರಿನವಳು. ಕರ್ನಾಟಕ ವಿಶ್ವವಿದ್ಯಾಲಯದಿಂದ ಜಿಯಾಲಾಜಿಯಲ್ಲಿ ಎಂ ಎಸ್ಸಿ ಮಾಡಿ ಈ ಮೈನ್ಸಿನಲ್ಲಿ ಜಿಯಾಲಾಜಿಸ್ಟ್ ಆಗಿ ಕೆಲಸ ಮಾಡ್ತಿದ್ಲು. ಪರಿಶ್ರಮಿ ಮತ್ತು ಕೆಲಸದಲ್ಲಿ ಅಚ್ಚುಕಟ್ಟು. ಕಬ್ಬಿಣದ ಅದಿರನ್ನು ಸಣ್ಣಗೆ ಪುಡಿಮಾಡಿಸಿ, ಜಿಯಾಲಾಜಿಕಲ್ ಪದ್ಧತಿಯಲ್ಲಿ ಅದಿರಿನಲ್ಲಿ ಕಬ್ಬಿಣದ ಪ್ರಮಾಣ ದೃಢಪಡಿಸುವುದು ಅವಳ ಕೆಲಸ. ಅವಳ ಜಿಯಾಲಾಜಿಕಲ್ ಫಲಿತಾಂಶಕ್ಕೂ, ನಮ್ಮ ರಾಸಾಯನಿಕ ಪದ್ಧತಿಯಲ್ಲಿ ಬಂದ ಫಲಿತಾಂಶಕ್ಕೂ ಹೊಂದಾಣಿಕೆಯಾಗಬೇಕಾಗಿತ್ತು. ಎಂ. ರಾಘವೇಂದ್ರ ಅವರು ರಾಸಾಯನಿಕ ಪ್ರಯೋಗಗಳ ಜೊತೆಗೆ, ಎಎಎಸ ಅನ್ನುವ ಒಂದು ವೈಜ್ನ್ಯಾನಿಕ ಉಪಕರಣ ನೋಡಿಕೊಳ್ಳುವುದು ಅವರ ಜವಾಬ್ದಾರಿ. ಅದರಲ್ಲಿ ಅವರೊಬ್ಬರೇ ಪರಿಣಿತರಿದ್ದರು. ಅನೇಕ ಹೊಸ ಹೊಸ ವಿಷಯಗಳನ್ನು ಕಲಿಯೋ ಅವಕಾಶ ಸಿಕ್ಕಿತು. ಕಲಿತೆ, ಸ್ವಲ್ಪದಿನದಲ್ಲೇ ಪರಿಣಿತನಾದೆ. ಕಾರಣ ಸಹೋದ್ಯೋಗಿಗಳ ಸಹಕಾರ ಇಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. 

ಇನ್ನೇನು ನನ್ನ ಕೆಲಸ ಶುರು ಹಚ್ಚಕೊಬೇಕು, ಅಷ್ಟ್ರಲ್ಲಿ ಗೌಸು ಕೂಗಿದ, ಶಿವರಾಜ್ ಸರ್ ಬಂದ್ರು, ಎಲ್ಲರೂ ಬೇಗ ಬೇಗೆ ಕೆಲಸ ಶುರು ಹಚ್ಚಕೊಳ್ಳಿ ಅಂತ. ಗೌಸ್ ಧ್ವನಿ ಕೇಳಿದ್ದೆ, ಎಲ್ಲರು ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿ ಆದ್ವಿ. ಶಿವರಾಜ್ ಸರ್, ನಮ್ಮ ಲ್ಯಾಬಿನ ಮ್ಯಾನೇಜರ್. ಅಪಾರ ವರ್ಷಗಳ ಅನುಭವ. ಎತ್ತರದಲ್ಲಿ ಸ್ವಲ್ಪ ಕುಳ್ಳಗಿದ್ದರು, ನಡತೆಯಲ್ಲಿ ಶಿಸ್ತಿನ ಸಿಪಾಯಿ. ಅಷ್ಟೇ ಖಡಕ್ ಮ್ಯಾನೇಜ್ಮೆಂಟ್ ಅವರದು. ಕೆಲಸ ಬಿಟ್ಟು ಕೂತು ಮಾತು ಹರಟೆ ಮಾಡುವುದು ನೋಡಿದ್ರೆ, ಶಿವರಾಜ್ ಸರ್ ಸರಿಯಾಗಿ ಪೂಜೆನೆ ಮಾಡಿಬಿಡ್ತಿದ್ರು. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಿದ್ರೆ, ನೀವು ಏನಾದ್ರು ಮಾಡ್ಕೊಳ್ಳಿ, ಅದಕ್ಕೆಲ್ಲ ಅವರ ಅಭ್ಯಂತರ ಇರ್ತಿರಲಿಲ್ಲ. ಪ್ರಾರಂಭದಲ್ಲಿ ಅವರ ಜೊತೆ ಮಾತಾಡ್ಲಿಕ್ಕೆ ತುಂಬಾ ಹೆದರಿಕೆ ಆಗೋದು. ಕ್ರಮೇಣ ಅವರ ನೆಚ್ಚಿನ ಸಹುದ್ಯೋಗಿ ಆದೆ. ಈಗಲೂ ಅವರು ಸಾಮಾಜಿಕ ಜಾಲತಾಣದ ಮೂಲಕ ನನ್ನ ಸಂಪರ್ಕದಲ್ಲಿದ್ದಾರೆ.

ಮಧ್ಯಾಹ್ನ 1-00 ಇಂದ 2-00 ಘಂಟೆ ಊಟದ ಸಮಯ. ಸ್ವಲ್ಪ ಜನ ಬಿಟ್ಟರೆ, ಹೆಚ್ಚುಕಡಿಮೆ ಎಲ್ಲರು ಕ್ಯಾಂಟೀನನ್ನೇ ಅವಲಂಬಿಸಿದ್ದು, ಅಲ್ಲಿ ಕೊಡುವ ಊಟವನ್ನೇ ಮಾಡಬೇಕು. ಬೇರೆ ದಾರಿ ಇಲ್ಲ, ಯಾಕಾದ್ರೆ ಈ ಎತ್ತರದ ಗುಡ್ಡದಲ್ಲಿ ಮೆಸ್ಸು, ಹೋಟೆಲ್ ಅಂತ ಎಲ್ಲಿ ಹೋಗೋಕಾಗತ್ತೆ. ಹಂಗಂತ ಕ್ಯಾಂಟೀನ್ ಊಟದ ಕ್ವಾಲಿಟಿ ಚೆನ್ನಾಗಿರಲಿಲ್ಲ ಅಂತ ಅಲ್ಲ. ಬಳ್ಳಾರಿ ಜಿಲ್ಲೆಯ ಗಂಗಾವತಿ ಸೋನಾಮಸ್ಸೂರಿ ಅಕ್ಕಿಯಿಂದ ಮಡಿದ ಅನ್ನ, ಮತ್ತು ಘಮ ಘಮಿಸುವ ಸಾಂಬಾರು, ನಮ್ಮ ಊಟದ ಫಿಕ್ಸೆಡ್ ಮೆನ್ಯು. ಬೇಡಿದಷ್ಟು ನೀಡ್ತಾಯಿದ್ರು, ಆದ್ರೆ ದಿನ ಅದನ್ನೇ ತಿನ್ನಬೇಕು, ಇದು ಮಾತ್ರ ಬಿಡಲಾರದ ಕರ್ಮ. ಅವಾಗವಾಗ, ಪಕ್ಕದ ಹಳ್ಳಿಯಿಂದ ಬರ್ತಾಯಿದ್ದ ಕೆಲಸದವರ ಹತ್ರ ಮೊಸರಿನ ವ್ಯವಸ್ಥೆ ಮಾಡ್ಕೊಂಡಿದ್ವಿ. ಊಟವಾದ್ಮೇಲೆ ಒಂದು ಪುಟ್ಟ ವಾಕ್, ವಾಕ್ ಮಾಡುವಾಗ ಅದು ಇದು ಅಂತ ಸ್ವಲ್ಪ ಗಾಸಿಪ್ಪು. ನಂತರ ಮತ್ತೆ ಲ್ಯಾಬು. ಮತ್ತೆ ಮಧ್ಯಾಹ್ನ ಬಂದ ಸ್ಯಾಂಪಲ್ಲುಗಳನ್ನು ಟೆಸ್ಟಿಂಗ್ ಮಾಡೋದು. ಈ ಎರಡು ಲಾಟೀನಲ್ಲಿ ಸ್ಯಾಂಪಲ್ಲುಗಳ ಪಲಿತಾಶವನ್ನ ಸಂಜೆ 4-30 ಅಷ್ಟರಲ್ಲಿ ಶಿವರಾಜ್ ಸರ್ಗೆ ಕಲಿಸಬೇಕು. ಅದನ್ನೆಲ್ಲ ಪರಿಶೀಲಿಸಿ ಅವರು ಇಂಜಿನಿಯರಿಂಗ್ ಡೆಪಾರ್ಟ್ಮೆಂಟ್ಗೆ ರವಾನಿಸುತ್ತಿದ್ದರು. ಈ ರಿಪೋರ್ಟ್ ಸಿದ್ಧಪಡಿಸೋದು, ಅದನ್ನು ಮ್ಯಾನೇಜರ್ಗೆ ಕಳಿಸೋದು ಇವೆಲ್ಲ, ನಮ್ಮಲ್ಲಿ ಹಿರಿಯರಾಗಿದ್ದ ಜ್ಯೋತಿ ಮೇಡಂ ಮತ್ತು ಎಂ. ರಾಘವೇಂದ್ರ ಸರ್ ಕೆಲಸ. ಅವರಿಬ್ಬರೂ ಇಲ್ಲಿ 5-6 ವರ್ಷಗಳಿಂದ ಕೆಲಸ ಮಾಡ್ತಿದ್ದು, ನಮ್ಮೆಲ್ಲರಲ್ಲಿ ಸೀನಿಯರ್ಸ್ ಅಂದ್ರೆ ಅವರೇ. 

ಪ್ರತಿ ತಿಂಗಳು ಹದಿನೈದನೇ ತಾರೀಕು ಬಂತೆಂದರೆ, ನಾನು ಮತ್ತು ಶೀಲಾ ಇಬ್ಬರು ಪ್ರತಿದಿನ ಮಾಡುವ ಕೆಲಸ ಬಂದ್ ಮಾಡಿ, ಮುಂದಿನ ಎರಡು ವಾರ ಡಾ. ರಾಘವನ್ ಸರ್ ಅಸ್ಸಿಸ್ಟಂಟ್ಸ್ ಆಗಿ ಕೆಲಸ ಮಾಡೋದು. ಈ ರಾಘವನ್ ಸರ್ ಇನ್ನೊಂದು ಪ್ರಾಜೆಕ್ಟ್ನಲ್ಲಿ ಸುರೇಶ ಕೂಡ ಕೆಲಸ ಮಾಡ್ತಿದ್ರು. ಸುರೇಶ ಒಬ್ಬ ಕೆಮಿಕಲ್ ಇಂಜೀನಿಯರ್ ಆಗಿದ್ದು, ಮೂಲತಃ ಬೆಂಗಳೂರಿನವರು. ಅವರ ಅನುಭವ ಮತ್ತು ಕಲಿತ ವಿಷಯದ ಆಧಾರದ ಮೇಲೆ, ರಾಘವನ್ ಸರ್ ಸುರೇಶ್ಗೆ ಒಂದು ಬೇರೆ ಕೆಲಸ ಕೊಟ್ಟಿದ್ದು, ಅವರು ಸದಾ ಆ ಪ್ರೋಜೆಕ್ಟಿನಲ್ಲಿ ಬ್ಯುಸಿ ಆಗಿರ್ತಾಇದ್ರು. ಹಾಗಾದ್ರೆ ಈ ರಾಘವನ್ ಸರ್ ಯಾರು? ಇವರು ಅನೇಕ ವರ್ಷಗಳ ಕಾಲ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಲ್ಲಿ ವಿಜ್ನ್ಯಾನಿಯಾಗಿ ಕೆಲಸಮಾಡಿ, ನಿವೃತ್ತಿಯನಂತರ ಒಂದು ಪ್ರಾಜೆಕ್ಟ್ ಮೇಲೆ ನಮ್ಮ ಕಂಪನಿಯಲ್ಲಿ ವಿಸಿಟಿಂಗ್ ಸೈಂಟಿಸ್ಟ್ ಆಗಿ ಕೆಲ್ಸಮಾಡ್ತಾಯಿದ್ರು. ಮೂಲತಃ ಇವರು ಚೆನ್ನೈನವರು, ಬಹಳ ಹಳೆಯ ಕಾಲದಲ್ಲಿ ನಿರವಯವ ರಾಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಸಂಶೋಧನಾ ವಿಜ್ನ್ಯಾನಿಯಾಗಿ ಆಪಾರ ಅನುಭವ ಪಡೆದವರು. ನಮ್ಮಂತಹ ಯುವ ಸಂಶೋಧಕರಿಗೆ, ಇವರ ಜೊತೆ ಕೆಲಸ ಮಾಡುವುದು ಅಂದ್ರೆ ಒಂದು ಸುವರ್ಣಾವಕಾಶ. ನನ್ನ ಕಲಿಕಾ ಜೀವನದಲ್ಲಿ ಹಿಂತಹ ಅನೇಕೆ ನುರಿತ ಅನುಭವಿ ವಿಜ್ನ್ಯಾನಿಗಳ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕದ್ದು ನನ್ನ ಭಾಗ್ಯ ಅನ್ನಬಹುದು. ರಾಘವನ್ ಸರ್, ಒಬ್ಬ ಸ್ನ್ಹೇಹಜೀವಿ, ಹಿರಿಯರು, ಆದರೆ ಅಷ್ಟೇ ಮೃದು ಸ್ವಭಾವ. ಅವರು ಒಂದು ಮಾತು ಹೇಳ್ತಾಇದ್ರು, "ನೀವು ಮನಸಾಪೂರ್ವಕ ಸಂತೋಷವಾಗಿ ಇದ್ದಾರೆ ಮಾತ್ರ ಪ್ರಯೋಗ ಮಾಡಿ. ಸುಮ್ನೆ ಮನಸಿಲ್ಲ ಅಥವಾ ಯಾವುದೊ ನೋವು ನಿಮ್ಮ ಕೊರೀತಾಇದೆ, ಇಲ್ಲ ಯಾವುದೊ ಟೆನ್ಶನ್ನಲ್ಲಿದ್ದರೆ ದಯವಿಟ್ಟು ಕೆಲಸ ಶುರು ಹಚ್ಕೋಬೇಡಿ. ಎರಡು ದಿನ ಲೇಟ್ ಆದ್ರೂ ಪರವಾಗಿಲ್ಲ ಮನಸ್ಸು ಉಲ್ಲಾಸಭರಿತವಾಗಿ ಮತ್ತು ಆಸಕ್ತಿಯಿಂದಿರಬೇಕು ಆಗಲೇ ಪ್ರಯೋಗದಲ್ಲಿ ಒಳ್ಳೆಯ ಪಲಿತಾಂಶಬರೋದು" ಅನ್ನುವರು. ಅವರ ಮಾತು ಇಂದಿಗೂ ನನಗೆ ಸತ್ಯ ಅನಿಸುತ್ತದೆ. ನಾನು, ಸುರೇಶ ಮತ್ತು ಶೀಲಾ, ರಾಘವನ್ನ್ ಸರ್ ಜೊತೆಗೆ ಸಂತೋಷವಾಗಿ ಕೆಲಸ ಮಾಡಿ ಅನೇಕ ವಿಷಯಗಳನ್ನ ಕಲಿತು, ಒಳ್ಳೆಯ ಅನುಭವ ಪಡೆದ್ವಿ. ಅಷ್ಟೇ ಏಕೆ, ಒಟ್ಟಿಗೆ ಕೆಲಸ ಮಾಡ್ತಾ ಮಾಡ್ತಾ ಶೀಲಾ ಮತ್ತು ಸುರೇಶ ಮಧ್ಯೆ ಪ್ರೇಮಾಂಕುರ ಚಿಗುರಿ, 2-3 ವರ್ಷಗಳ ನಂತರ ಇಬ್ಬರು ಬಾಳ ಸಂಗಾತಿಳಾಗಿ, ಸಂಸಾರ ಸಮೇತ ಸ್ವಲ್ಪ ದಿನ ಕೂನೂರಿನಲ್ಲಿ ಕೆಲಸ ಮಾಡಿ, ಈಗ ಬೆಂಗಳೂರಿನಲ್ಲಿ ಸೆಟ್ಲ್ ಆಗಿದ್ದಾರೆಂದು ಕೇಳಲ್ಪಟ್ಟೆ. ಈ ನನ್ನ ದುಷ್ಟ ಸ್ನೇಹಿತರಿಬ್ಬರು, ಈ ಕೆಲಸ ಬಿಟ್ಟಮೇಲೆ, ಸ್ವಲ್ಪ ದಿನ ಸಂಪರ್ಕದಲ್ಲಿದ್ದರು. ಆಮೇಲೆ ನಾನು ಆ ದೇಶ ಈ ದೇಶ ಅಂತೆಲ್ಲ ಸುತ್ತಾಡೋದ್ರಲ್ಲಿ ಸಂಪರ್ಕ ಕಡಿದು ಹೋಯಿತು. ಹಂಗು ಹಿಂಗು ಆಟೋಗ್ರಾಫ್ ಬುಕ್ನಲ್ಲಿ ಸಿಕ್ಕ ಶೀಲಾನ ಕುಮಟಾ ವಿಳಾಸಕ್ಕೆ ನನ್ನ ಮದುವೆ ಇನ್ವಿಟೇಶನ್ ಕಳ್ಸಿದ್ದೆ. ಅವಾಗ ಒಂದ್ಸಲ ಇಬ್ರು ಫೋನ್ ಮಾಡಿದ್ರು. ಆಮೇಲೆ ಆ ಆಟೋಗ್ರಾಫ್ ಬುಕ್ಕು ಕಳೆದೋಯಿತು, ಅವರು ಫೋನ್ ನಂಬರ್ ಕೂಡ ಎಲ್ಲೋ ಹೋಯಿತು. ನಂತರ ಎಷ್ಟು ಹುಡುಕಿದರೂ ಸಂಪರ್ಕಕ್ಕೆ ಸಿಗಲಿಲ್ಲ. ಇದೆ ಬೆಂಗಳೂರಿನಲ್ಲಿದ್ದಾರೆ, ಆದರೆ ಇವರಿಬ್ಬರಿಗೂ ಈ ಫೇಸ್ಬುಕ್, ವಾಟ್ಸಪ್ಪ್ ಬಗ್ಗೆ ಗೊತ್ತಿಲ್ಲ ಏನೋ, ಅದರಲ್ಲಿನೂ ಕೂಡ ಸಿಗಲಿಲ್ಲ. ಅಕಸ್ಮಾತ್ ಈ ಬ್ಲಾಗ್ ಲೇಖನ ಏನಾದ್ರು ಅವರ ಕಣ್ಣಿಗೆ ಬಿದ್ದರೆ, ಇದರ ಮುಖಾಂತರ ಆದರು ನನ್ನ ಸಂಪರ್ಕಕ್ಕೆ ಬರಲಿ ಎಂದು ಆಶಿಸುವೆ. 

ಅವತ್ತಿನ ಎಲ್ಲ ಸ್ಯಾಂಪಲ್ಲುಗಳ ಟೆಸ್ಟಿಂಗ್ ಮುಗಿಸಿ, ಮ್ಯಾನೇಜರ್ಗೆ ರಿಪೋರ್ಟ್ ಕಳ್ಸಿ, ಎಲ್ಲರೂ ರೌಂಡ್ ಟೇಬಲ್ ಕಾನ್ಫರೆನ್ಸ್ ಮಾಡ್ತಾ, ಸಂಜೆ ಟೀಗಾಗಿ ಕಾಯಿತಾ ಕೂತಿದ್ವಿ. ಅಷ್ಟ್ರಲ್ಲಿ ಸಂತೋಷ ಕೂಗಿದ, ಅವಳು ಬರ್ತಾಇದ್ದಾಳೆ ನಾನು ಇಲ್ಲೇ ಸ್ಟೈಲಾಗಿ ಅವಳ ಕಣ್ಣಿಗೆ ಬಿಲೋಥರ ನಿಂತಿರ್ತೀನಿ ಅಂದ. ಎಲ್ಲರೂ ಕೊಳ್ಳ ಅಂತ ನಕ್ಕು ಅವಳು ನಮ್ಮ ಲ್ಯಾಬಿನಲ್ಲಿ ಬರುವಿಗಾಗಿ ಕಾಯುತ್ತಿರುವಾಗ, ಹಂಗೆ ಸುಯ್ಯಂತ ಬೀಸುವ ತಂಪಾದ ಗಾಳಿಯಂತೆ ನಮ್ಮ ಲ್ಯಾಬಿನಲ್ಲಿ ಸುಳಿದು, ತನ್ನ ನಗುಮುಖದಿಂದ ಎಲ್ಲರಿಗು ಹಾಯ್ ಹೇಳುತ್ತಾ ಬಂದ್ಲು. ಅವಳು ಯಾರಂದ್ರೆ, ನಮ್ಮ ಲ್ಯಾಬಿನ ಪಕ್ಕದ ಪ್ರೊಕ್ಯೂರೇಮೆಂಟ್ ಆಫೀಸಿನಲ್ಲಿ ಕಂಪ್ಯೂಟರ  ಆಪರೇಟರ್ ಆಗಿದ್ದ ರುಕ್ಮಿಣಿ. ನೋಡಲು ಸುಂದರಿ, ಅಷ್ಟೇ ಮಾತಿನ ಮಲ್ಲಿ. ಅವಳ ಮತ್ತು ನಮ್ಮ ಡಿಪಾರ್ಟ್ಮೆಂಟ್ ಮಧ್ಯೆ ಒಂದೇ ರೆಸ್ಟ್ರೂಮ್ ಇದ್ದದರಿಂದ, ಅವಾಗವಾಗ ರೆಸ್ಟ್ರೂಮ್ ನೆಪಮಾಡಿ ಲಾಬಿಗೆ ಬರ್ತಾಇದ್ದಳು. ನಾವೋ, ಎಲ್ಲರೂ ಇನ್ನು ಮದುವೆ ಆಗದ ಬ್ಯಾಚುಲರ್ ಹುಡುಗರು. ಇವಳು ಬಂದು ಹೋದರೆ ಸಾಕು, ಎಲ್ಲರಿಗು ಒಂದು ರೋಮಾಂಚನ, ಹುರುಪು. ಅವಳೂ ಅಷ್ಟೇ, ತನಗೆ ಕೆಲಸ ಇಲ್ಲಾಂದ್ರೆ ಇಲ್ಲಿ ಬಂದು ಯಾರನ್ನಾದ್ರೂ ಹಿಡ್ಕೊಂಡು ಕೊರೀತಾ ಕೂಡ್ತಿದ್ದ್ಲು. ಅವಳು ಹೆಚ್ಚಾಗಿ ಮಾತು ಹಚ್ಚಕೊಳ್ಳೋದು ನಮ್ಮ ಇಂಜಿನಿಯರು, ಸುರೇಶ ಜೊತೆ, ಅದನ್ನು ನೋಡಲಾಗದೆ ನಮ್ಮ ಶೀಲಕ್ಕನಿಗೆ ಮೈಯೆಲ್ಲ ಊರಿಯಾಗೋದು. ಆ ಬೆಂಕಿಗೆ ತುಪ್ಪ ಸುರಿಯೋಕೆ ನಾವು ಉಳಿದವರು ಬೇಕಂತಲೇ ಶೀಲಕ್ಕನಿಗೆ ಏನೇನೋ ಹೇಳಿ, ನಿನ್ನ ಹುಡಗನ್ನ ಕೈಜಾರೊಮೊದಲು ಕಾಪಾಡ್ಕೊ ತಾಯಿ ಅಂತ ಚುಡಾಯಿಸುವುದು. ಇದು ಒಂಥರಾ ಕಾಲೇಜು ಜೀವನದ ತರಹ ಆಗಿತ್ತು ನಮ್ಮ ಲೈಫ್. ಒಬ್ಬರನ್ನೊಬ್ಬರು ಚುಡಾಯಿಸುವುದು, ಹರಟೆ ಹೊಡೆಯುವುದು, ಆವಾಗಾವಾಗ ಸ್ವಲ್ಪ ಜಗಳ, ಗಾಸಿಪ್ಪು, ಮಣ್ಣು ಮಾಸಲೆ ಹೀಗೆ ತುಂಬಾ ಸಂತೋಷದಿಂದ ಕಳೆದ ದಿನಗಳವು. 

ಘಂಟೆ ಸಂಜೆಯ 5-30 ಆಯಿತು, ಅವತ್ತಿನ ಕೆಲಸ ಮುಗಿಯಿತು. ಎಲ್ಲರೂ ಅದೇ ಬಸ್ಸಿನತ್ತ ಪಯಣ ಬೆಳೆಸಿದ್ವಿ. ಎಲ್ಲರನ್ನು ಹತ್ತಿಸಿಕೊಂಡು ಬಸ್ಸು ಹೊಸಪೇಟೆಯತ್ತ ಪಯಣ ಬೆಳೆಸಿತು. ಮನೆಗೆ ಬಂದಮೇಲೆ, ಮೈಮೇಲಿನ ಬಟ್ಟೆಗಳೆಲ್ಲ ಮೈನ್ಸಿನ  ಕೆಂಪು ಮಣ್ಣಿನ ಧೂಳಿನಿಂದ ಕೆಂಪು ಕೆಂಪು. ಬಟ್ಟೆಗಳನ್ನೆಲ್ಲ ತೊಳೆಯಲು ಹಾಕಿ, ಬೆಳಿಗ್ಗೆ ತುಂಬಿ ಇಟ್ಟ ನೀರಿನಲ್ಲಿ ಎರಡನೇ ಸ್ನಾನ ಮಾಡಿ, ಕೆಂಪು ಮಣ್ಣನ್ನೆಲ್ಲ ತೊಳೆದುಕೊಳ್ಳುವುದು. ಸಂಜೆ ಸಂತೊಷ ಮತ್ತು ಎಂ. ರಾಘವೇಂದ್ರ ಜೊತೆ ಆಚೆ ಸುತ್ತಾಡೋಕೆ ಹೋಗುವುದು. ಪ್ರಸಿದ್ಧ ಮಂಡಕ್ಕಿ ಖಾರ ಮತ್ತು ಮಿರ್ಚಿ ಬಾಜಿ ತಿಂದು ಹಂಗೆ ಹೊಸಪೇಟೆಯ ಕಾರ್ಪೋರೇಶನ್ ಗ್ರೌಂಡ್ ಅಥವಾ ವಿಜಯ ಕಾಲೇಜಿನ ಗ್ರೌಂಡಿನಲ್ಲಿ ಸಂಜೆ ಹೊತ್ತು ಕಳೆಯುವುದು ವಾಡಿಕೆಯಾಗಿತ್ತು. ರಾಘವೇಂದ್ರ ಮತ್ತು ಸಂತೋಷ ತಮ್ಮ ಹಳೆಯ ಕೆಲಸದ ಅನುಭವ ಹಂಚಿಕೊಂಡರೆ, ನಾನು ನನ್ನ ಮುಂದಿನ ಕನಸುಗಳನ್ನು ಹಂಚಿಕೊಳ್ಳುತಿದ್ದೆ. ಎಲ್ಲರಲ್ಲಿನೂ ಕನಸುಗಳಿದ್ದವು, ಇಲ್ಲಿ ಎಷ್ಟು ದಿನ ಸಾಧ್ಯವೋ ಅಷ್ಟು ಕೆಲಸ ಮಾಡಿ ಮತ್ತೆ ಮುಂದೆ ಏನೇನೋ ಮಾಡಬೇಕು, ಎಲ್ಲೆಲ್ಲೋ ಹೋಗಬೇಕು ಎನ್ನುವ ಮಹತ್ವಾಕಾಂಕ್ಷೆಗಳಿದ್ದವು. ಕೆಲಸ ಏನೋ ಚೆನ್ನಾಗಿತ್ತು, ಆದರೆ ಪ್ರಯಾಣವನ್ನ ಇಲ್ಲಿಗೆ ಯಾಕೆ ನಿಲ್ಲಿಸಬೇಕು. ಮುಂದೆ ಇನ್ನು ಅಪಾರ ಅವಕಾಶಗಳು ಕಾಣುತ್ತಿರುವಾಗ, ಈ ಕೆಂಪು ಮಣ್ಣಿನ ದೂಳು ಸೇವಿಸುತ್ತಾ ಇಲ್ಲೇ ಇರಬೇಕೆ ಅನ್ನಿಸುತಿತ್ತು. ನನ್ನ ಮುಂದಿನ ಯೋಜನೆಗಳನ್ನು ಅವರೊಂದಿಗೆ ಚರ್ಚಿಸುತ್ತಿದ್ದೆ ಮತ್ತು ಅವರೆಲ್ಲ ತಮ್ಮ ಕನಸುಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ಆದರೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಿದ್ದೆವು ಹೊರತು, ಯಾರನ್ನು ನಿರುತ್ಸಾಹಗೊಳಿಸುತ್ತಿರಲಿಲ್ಲ. ಯಾವುದಾದರು ಮದುವೆ ಅಥವಾ ಇನ್ನಾವುದೋ ಕಾರ್ಯಕ್ರಮಕ್ಕೆ ಆಮಂತ್ರಣ ಬಂದಾಗ ಎಲ್ಲರು ಒಟ್ಟಾಗಿ ಹೋಗುವುದು, ಯಾವಾಗಲಾದರೊಮ್ಮೆ ಎಲ್ಲರು ಒಟ್ಟಿಗೆ ಹೋಟೆಲುಗಳಿಗೆ ಡಿನ್ನರ್ ಮಾಡೋಕೆ ಸೇರ್ತಾಇದ್ದ್ವಿ. 

ಈ ಕೆಂಪು ಮಣ್ಣಿನ ಧೂಳಿನಲ್ಲಿ ಹೀಗೆ ದಿನಕಳೆಯುತ್ತಿರುವಾಗ, ಒಂದು ದಿನ ನನಗೆ ಬೆಂಗಳೂರಿನ ಒಂದು ಚಿಕ್ಕ ಕಂಪನಿಯಿಂದ ಕೆಲಸಕ್ಕೆ ಆಫರ್ ಬಂತು. ಜೊತೆಗೆ ಸ್ವಲ್ಪ ದಿನಗಳ ಹಿಂದೆ ಅಪ್ಲಿಕೇಶನ್ ಕಳಿಸಿದ ಮೈಸೂರು ವಿಶ್ವವಿದ್ಯಾಲದಲ್ಲಿನ ಒಬ್ಬ ಪ್ರಾಧ್ಯಾಪಕರಿಂದ ಪಿ ಎಚ್ ಡಿ ಸಂದರ್ಶನ ಕೂಡ ಬಂದಿತ್ತು. ನಾನು ಯಾವುದು ಸಿಕ್ಕರೂ ಹೋದರಾಯಿತು ಎನ್ನುವ ನಿರ್ಧಾರದಲ್ಲಿದ್ದೆ. ಕೆಲದಿನಗಳ ನಂತರ ಪಿಎಚ್ಡಿ ಗಾಗಿ ಸಂದರ್ಶನ ಕೊಟ್ಟುಬಂದೆ, ಆದರೆ ಅದು ಮುಂಚೆನೇ ಆ ಪ್ರಾಧ್ಯಾಪಕರ ಪರಿಚಯದವರಿಗೆ ಫಿಕ್ಸ್ ಆಗಿರುವ ವಿಷಯ ತಿಳಿದು ಬೇಜಾರೆನಿಸಿತು. ಕೊನೆಗೆ ಬೆಂಗಳೂರಿನ ಆ ಚಿಕ್ಕ ಕಂಪನಿಯ ಆಫರ್ ಒಪ್ಪಿಕೊಂಡೆ. ಸಂಬಳ ಕಡಿಮೆ ಇದ್ದರು ಆ ಕಂಪನಿಯ ಮಾಲೀಕರು, ಒಬ್ಬ ಪ್ರಖ್ಯಾತ ವಿಜ್ಞಾನಿ. ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ, ಬಿಡಬೇಡ ಅಂತ ನನ್ನ ಗುರುಗಳೊಬ್ಬರ ಆಜ್ಞೆಯ ಮೇರೆಗೆ, ಈ ಮೈನ್ಸ್ ನೌಕರಿಗೆ ತಿಲಾಂಜಲಿಯನ್ನಿಟ್ಟು ಬೆಂಗಳೂರಿನತ್ತ ಪಯಣ ಬೆಳೆಸಿದೆ. ಹಂಗೆ ಮುಂದೆ ಹೋಗ್ತಾ ಹೋಗ್ತಾ ಬೆಂಗಳೂರಿನಿಂದ, ಪುಣೆ, ನಂತರ ವಿದೇಶ ಪಯಣ, ಹೀಗೆ ಹೋಗ್ತಾ ಹೋಗ್ತಾ ಹೊಸ ಪರಿಚಯಗಳು ಆಗ್ತಾ, ಹಳೆಯ ಸಂಪರ್ಕಗಳು ಕಳಚುತ್ತ ಹೋಯಿತು. ಆಗೆಲ್ಲ ಇಂಟರ್ನೆಟ್ ಆಗಷ್ಟೇ ಕಾಲಿಟ್ಟಿತ್ತು, ಸಾಮಾಜಿಕ ಜಾಲತಾಣಗಳಂತೂ ದೂರದ ಮಾತು. ಮೊಬೈಲ್ ಫೋನ್ ಅಂದ್ರೆ ಗೊತ್ತೇ ಇರಲಿಲ್ಲ. ಮಾಡಿದರೆ ನೆನಪಿನಿಂದ ಎಸ್ಟಿಡಿ ಫೋನ್ ನಂಬರ್ಗಳ ಮೂಲಕ ಫೋನ್ ಮಾಡಿ ಮಾತಾಡಬೇಕು. ಅದಕ್ಕೆ ಒಂದು ಚಿಕ್ಕ ಡೈರಿನಲ್ಲಿ ನಂಬರ್ಗಳನ್ನ ನೆನಪಿನಿಂದ ಬರೆದಿಡಬೇಕು. ಹೀಗಾಗಿ ಈಗಿನಂತೆ ಅದು ಅಷ್ಟು ಸುಲಭದ ಕೆಲಸ ಆಗಿರಲಿಲ್ಲ. ಆ ಗ್ರೂಪಿನಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಸಂಪರ್ಕದಲ್ಲಿದ್ದವರೆಂದರೆ ಏನ್. ರಾಘವೇಂದ್ರ ಮಾತ್ರ. ಶಿವರಾಜ್ ಸರ್ ಕೂಡ ಸಂಪರ್ಕದಲ್ಲಿದ್ದಾರೆ, ಆದರೆ ಅವರಿಗೂ ಯಾರ ಸಂಪರ್ಕ ಇಲ್ಲ ಅನಿಸಿತು. ಒಂದು ತಿಂಗಳ ಹಿಂದೆ ಏನ್. ರಾಘವೇಂದ್ರ ಫೋನ್ ಮಾಡಿದ್ದ. ನೀನು ಅವಾಗವಾಗ ಕೇಳ್ತಾಯಿದ್ದೆ ಯಾರಾದ್ರೂ ಸಂಪರ್ಕ ಇದ್ದಾರಾ ಅಂತ. ಮೊನ್ನೆ ಹೊಸಪೇಟೆಯ ಹಾಸ್ಪಿಟಲ್ ಒಂದರ ಲ್ಯಾಬಿನಲ್ಲಿ ಎಂ. ರಾಘವೇಂದ್ರ ಅವರನ್ನ ನೋಡಿ ಮಾತಾಡಿಸಿದೆ. ನನಗು ಅಪರೂಪ ಅನಿಸಿತು, ಯಾಕಂದ್ರೆ ಬಹಳ ದಿನಗಳ ಭೇಟಿ. ಅವಾಗ ನಿನ್ನ ಬಗ್ಗೆ ಹೇಳಿದೆ, ನಂಬರ್ ಕೊಟ್ಟಿದ್ದಾರೆ ಕಳಿಸ್ತೀನಿ, ಮಾತಾಡು ಅಂದ. ಎಷ್ಟೊಂದು ಖುಷಿ ಆಯಿತು ಅಂದ್ರೆ ನಂಬರ್ ಸೇವ್ ಮಾಡಿಕೊಂಡು, ತಟ್ಟನೆ ವಾಟ್ಸಪ್ಪ್ನಲ್ಲಿ ಅವರಿಗೊಂದು ಮೆಸೇಜು ಕಳಿಸಿದೆ. ಅವತ್ತೇ ನೋಡಿ ಹೊಸಪೇಟೆಯ  ಕೆಮ್ಮಣ್ಣಿನಲ್ಲಿ ಕಳೆದ ಆ ದಿನಗಳು ಸುಂದರವಾದ ನೆನಪುಗಳ ಸರಣಿ ನನ್ನ ಸ್ಮೃತಿಪಟಲದಲ್ಲಿ ಹಂಗೆ ಬರೋಕೆ ಶುರುಮಾಡಿತು. ನಂತರ ನನ್ನ ತಲೆಗೆ ಹೊಳೆದದ್ದು ಏಕೆ ಆ ಎಲ್ಲ ನೆನಪುಗಳನ್ನ ನನ್ನ ಬ್ಲಾಗಿನ ಒಂದು ಲೇಖನದ ರೂಪದಲ್ಲಿ ಬರೆದಿಡಬಾರದೆನಿಸಿತು. ಅದಕ್ಕೆ ಈ ಲೇಖನ ಬರೆದು ನಿಮ್ಮ ಮುಂದಿಡ್ತಾಯಿದ್ದೀನಿ. 

ಈ ಲೇಖನದ ಮುಖಾಂತರವಾದರೂ ಹೊಸಪೇಟೆಯ ಕೆಮ್ಮಣ್ಣಿನ ಧೂಳಿನಲ್ಲಿ ಕಳೆದ ಆ ದಿನಗಳು ನನ್ನಲ್ಲಿ ಎಂದೆಂದಿಗೂ ಹಸಿರಾಗಿರುತ್ತವೆಂದು ನನ್ನ ಅನಿಸಿಕೆ......... 

ಭಾನುವಾರ, ನವೆಂಬರ್ 22, 2020

ಉತ್ತರ ಕರ್ನಾಟಕದ ಶೈಲಿಯಲ್ಲಿ ದೀಪಾವಳಿ ಹಬ್ಬ

ನಾನು ಈ ಬೆಂಗಳೂರಿನಲ್ಲಿ, ನನ್ನ ಮೊದಲ ಮತ್ತು ಎರಡನೇ ಇನ್ನಿಂಗ್ಸ್ ಸೇರಿಸಿ ಹೆಚ್ಚುಕಡಿಮೆ ಏಳು ವರ್ಷ ಕಳೆದಿದ್ದಿನಿ. ಆದರೆ ಹಬ್ಬ ಹರಿದಿನಗಳು ಅಂತ ಬಂದಾಗ, ಯಾಕೋ ಗೊತ್ತಿಲ್ಲ, ಬೇರೆ ಊರುಗಳಿಗೆ ಹೋಲಿಸಿದಾಗ ನನಗೆ ಅಷ್ಟೊಂದು ಸಂಭ್ರಮ ಅಥವಾ ಸಡಗರ ಕಂಡುಬರುವುದಿಲ್ಲ. ಕೇವಲ ವರಮಹಾಲಕ್ಷ್ಮಿ ಮತ್ತು ಆಯುಧಪೂಜೆಗೆ ಮಾತ್ರ ಇಲ್ಲಿ ಜನ ಅತ್ಯಂತ ಸಡಗರದಿಂದ ಆಚರಿಸುವುದನ್ನು ನೋಡಬಹುದು. ಅದೇ ರೀತಿ ಬೇರೆ ಹಬ್ಬಗಳು ಬಂದಾಗ ಬದುಕು ಸಾಮಾನ್ಯವಾಗಿಯೇ ಇರುತ್ತದೆ. ಇನ್ನು ವಿಶೇಷವಾಗಿ ಹೇಳಬೇಕಂದರೆ. ಮೊನ್ನೆ ತಾನೇ ಆಚರಿಸಲ್ಪಟ್ಟ ದೇಶದಲ್ಲೇ ಅತಿ ದೊಡ್ಡ ಹಬ್ಬ ದೀಪಾವಳಿ. ನನಗ ವಿಚಿತ್ರ ಅಂದರೆ ಇದು ಇಡೀ ದೇಶದಲ್ಲೇ ಅತಿ ವಿಜೃಂಭಣೆಯಿಂದ ಕುಟುಂಬ ಪರಿವಾರದವರೆಲ್ಲ ಸೇರಿ ಆಚರಿಸುವ ಹಬ್ಬ. ದೇಶದ ವಿವಿಧ ಬಾಗಗಳಲ್ಲಿ ಬೇರೆ ಬೇರೆ ರೀತಿ ರಿವಾಜುಗಳಿಂದ ಸಂಭ್ರಮಿಸುವ ಹಬ್ಬ. ಆದರೆ ಬೆಂಗಳೂರಿನಲ್ಲಿ ಮಾತ್ರ ಎಲ್ಲ ಅಷ್ಟಕಷ್ಟೆ. ಉದಾಹರಣೆಗಾಗಿ ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಈ ದೀಪಾವಳಿಯಲ್ಲಿ ಮೂರು ದಿನಗಳ ಕಾಲ, ಬಹಳ ವಿಶೇಷವಾಗಿ ಆಚರಿಸುತ್ತೇವೆ. ಈ ದೀಪಾವಳಿ ಹಬ್ಬದಲ್ಲಿ ನಮ್ಮ ಉತ್ತರ ಕರ್ನಾಟಕ ಭಾಗದ ಆ ವಿಶೇಷ ಪದ್ದತಿಗಳು, ಆಚರಣೆಗಳು ಹೇಗೆ ಇರುತ್ತವೆ, ಒಂದೊಂದು ಆಚರಣೆಯ ಹಿಂದಿನ ಮಹತ್ವ ಏನು, ತಿಳಿಸಿಕೊಡುವ ಉದ್ದೇಶದಿಂದ, ಈ ಲೇಖನವನ್ನು ಓದುಗರ ಮುಂದಿಡುತ್ತಿದ್ದೇನೆ. ನಾನು ಇಲ್ಲಿ ತಿಳಿಸಿದ ಮಾಹಿತಿಗಳೆಲ್ಲವೂ ಸರಿ ಇದೆ ಅಂತ ಹೇಳಲ್ಲ. ನನಗೆ ನನ್ನ ಹಿರಿಯರಿಂದ ತಿಳಿಯಲ್ಪಟ್ಟ ಮತ್ತು ನನ್ನ ಅನುಭವದಿಂದ ಬಂದ ಮಾಹಿತಿಯ ಆಧಾರದ ಮೇಲೆ ಈ ಲೇಖನವನ್ನು ಬರೆದಿದ್ದೇನೆ. 

ದೀಪಾವಳಿ ಹಬ್ಬ, ವಾಸ್ತವವಾಗಿ ಭರಮನ ಹಬ್ಬ, ನರಕ ಚತುರ್ದಶಿ, ಅಮವಾಸೆ ಮತ್ತು ಬಳಿ ಪಾಡ್ಯೇ ಅಂತ ನಾಲ್ಕು ದಿನಗಳ ಹಬ್ಬವಾದರೂ ಕೂಡ, ಬಹುಮುಖ್ಯವಾಗಿ ಮೂರು ದಿನಗಳ ಆಚರಣೆ ಬಹಳ ವಿಶೇಷವಾಗಿರುತ್ತದೆ. ಮೊದಲನೇ ದಿನ, ಅಂದರೆ ಭರಮನ ಹಬ್ಬ ಅಂತ ಕರೆಯುವ ಈ ದಿವಸವನ್ನು ನೀರು ತುಂಬುವ ಹಬ್ಬ ಅಂತ ಕೆರೆಯುವುದು. ಮನೆಯಲ್ಲಿ ಎಲ್ಲ ನೀರು ಶೇಖರಿಸುವ ಪಾತ್ರೆ ಕೊಳಾಯಿಗಳನ್ನು ತುಂಬಿಸಿ ಅವುಗಳಿಗೆ ಪೂಜೆ ಸಲ್ಲಿಸುವುದು. ಆಮೇಲೆ ಮನೆಯ ಹೊರಗಡೆ ಬಣ್ಣ ಬಣ್ಣದ ಕಾಗದಗಳಿಂದ ಮಾಡಿದ ಶಿವನ ಬುಟ್ಟಿಯನ್ನು ಕಟ್ಟಿ ಅದರ ಒಳಗಡೆ ಒಂದು ಚಿಕ್ಕ ವಿದ್ಯುತ್ ಬಲ್ಬನ್ನು ಇಳಿಬಿಟ್ಟು, ಸಂಜೆಯಾದಮೇಲೆ ನೋಡಲು ಈ ಶಿವನ ಬಿಟ್ಟು ಬಹುಸುಂದರವಾಗಿ ಕಾಣುವುದು. ಇದು ವಾರಪೂರ್ತಿ ಹೀಗೆ ಮನೆಯ ಮುಂಭಾಗದಲ್ಲಿ ನೇತಾಡುತ್ತಿರುತ್ತದೆ. ಇನ್ನು ಈ ದೀಪಾವಳಿ ದೀಪಗಳ ಹಬ್ಬವಾದ್ದರಿಂದ, ಮನೆಯ ಹೊರಗಡೆ ಈ ಭರಮಣ ಹಬ್ಬದಿಂದ ನಾಲ್ಕು ದಿನಗಳವರೆಗೆ ಮಣ್ಣಿನ ಹಣತೆಯಲ್ಲಿ ಅರಳಿಯ ಬತ್ತಿ, ಎಣ್ಣೆ ಹಾಕಿ ದೀಪಗಳನ್ನು ಹಚ್ಚುವುದುಂಟು. ಈ ನಾಲ್ಕು ದಿನಗಳು, ಬೀದಿ ಬೀದಿಗಳೆಲ್ಲ ದೀಪದ ಬೆಳಕಿನಿಂದ, ಬಣ್ಣ ಬಣ್ಣದ ಶಿವನ ಬುಟ್ಟಿಗಳಿಂದ ಕಂಗೊಳಿಸುವ ಆ ದೃಶ್ಯವನ್ನು ನೋಡುವುದೇ ಒಂದು ಚೆಂದ. ಆಯಾ ದಿನಕ್ಕನುಗುಣವಾದ, ಆ ಮೂರು ಪ್ರಮುಖ ದಿನಗಳ ಆಚರಣೆಗಳು ಮತ್ತು ಪದ್ಧತಿಗಳ ವಿವರ ಈ ಮುಂದೆ ವಿಸ್ತರಿಸಿದ್ದೇನೆ..... 

ಮೊದಲ ದಿನ: ನರಕ ಚತುರ್ದಸಿ. 
ನಮ್ಮ ಉತ್ತರ ಕರ್ನಾಟಕದಲ್ಲಿ ಹಬ್ಬದ ಸಡಗರವೇ ಬೇರೆ. ದೀಪಾವಳಿ ಮೂರು ದಿನದ ಹಬ್ಬವೆಂದರೆ ಪ್ರತಿ ದಿವಸಕ್ಕೂ ಒಂದು ವಿಶೇಷತೆ. ಮೊದಲನೇ ದಿನ ನರಕ ಚತುರ್ದಶಿ ಕೃಷ್ಣನು ನರಕಾಸುರನನ್ನು ವಧಿಸಿದ ದಿನ. ಅಂದು ಮನೆಯವರೆಲ್ಲ ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ, ಮಹಿಳೆಯರು ತಮ್ಮ ಅಣ್ಣಂದಿರಿಗೆ ತಿಲಕವಿಟ್ಟು ಆರತಿ ಬೆಳಗಿ; ಅಣ್ಣನಿಂದ ಹಬ್ಬಕ್ಕೆ ಕಾಣಿಕೆ ಪಡೆಯುವ ಪದ್ಧತಿ. ಮನೆಯ ಹೊರಗಡೆ ಆಕಳ ಸಗಣಿಯಿಂದ ಮಾಡಿದ ಗೊಂಬೆಗಳನ್ನು ಪಾಂಡವರ ಪ್ರತಿರೂಪವಾಗಿ ಪೂಜಿಸುವುದು. ಮನೆಯವರೆಲ್ಲ ಬೆಳಿಗ್ಗೆ ವಿವಿಧ ಉಂಡೆ ಮತ್ತು ಚುರುಮುರಿ ಖಾರ ತಿನ್ನಿವುದು. ಇದನ್ನ ಪರಾಳ ಅನ್ನುವುದು ವಾಡಿಕೆ. ಅಷ್ಟೇ ಅಲ್ಲದೆ ಸಂಬಂಧಿಗಳು ಮತ್ತು ಸ್ನೇಹಿತರಿಗೆಲ್ಲ ಶುಭಾಶಯಕೋರುವುದು ಮತ್ತು ಸಿಹಿ ಹಂಚುವುದು...... ಇವತ್ತಿನ ವಿಶೇಷ ಖಾದ್ಯ ಶ್ಯಾವಿಗೆ ಬಸೆದು, ಅದಕ್ಕೆ ಹಾಲು ಸಕ್ಕರೆ ತುಪ್ಪ ಹಾಕಿ ಮನೆಯವರೆಲ್ಲರೂ ಸೇವಿಸುವುದು....

ಎರಡನೇ ದಿನ: ಅಮಾವಾಸೆಯ ಲಕ್ಷ್ಮಿ ಪೂಜೆ. 
ದೀಪಾವಳಿ ಅಮಾವಾಸ್ಯೆ ಅಂದರೆ ಹಬ್ಬದ ಎರಡನೇ ದಿನ. ಆದರೆ ಅಮಾವಾಸ್ಯೆ ಅನ್ನೋದು ದೀಪಾವಳಿಯ ಪ್ರಮುಖ ದಿನ ಅನ್ನಬಹುದು. ಈ ದಿನದ ವಿಶೇಷ ಆಚರಣೆಯೆಂದರೆ ಲಕ್ಷ್ಮಿ ಪೂಜೆ. ಅದೃಷ್ಟ ಸಂಪತ್ತು ಮತ್ತು ಸಮೃದ್ಧಿಯ ಪ್ರತೀಕವಾಗಿರುವ ವಿಷ್ಣು ಸತಿ ಶ್ರೀ ಲಕ್ಷ್ಮಿ ದೇವಿಯ ಕೃಪಾ ಕಟಾಕ್ಷ ಎಲ್ಲರಮೇಲೂ ಅನುಗ್ರಹಿಸಲಿ ಎಂದು ಭಕ್ತಿಯಿಂದ ವಿಜೃಂಭಣೆ ಪೂಜಿಸುವರು. ಮನೆಯನ್ನೆಲ್ಲ ತೊಳೆದು ಮಡಿಗೊಳಿಸಿ. ಬಾಗಿಲುಗಳಿಗೆ ತಳಿರು ತೋರಣಗಳನ್ನು ಕಟ್ಟಿ ಮನೆಯನ್ನೆಲ್ಲ ದೀಪಗಳನ್ನು ಹಚ್ಚುವುದರ ಮೂಲಕ ಅಲಂಕರಿಸುವರು. ಈ ಪೂಜೆಯನ್ನು ಕೆಲವರ ಮನೆಯಲ್ಲಿ ಬೆಳಗಿನ ಮಹೂರ್ತದಲ್ಲಿ ಮಾಡಿದರೆ ಹೆಚ್ಚಾಗಿ ಅನೇಕ ಮನೆಗಳಲ್ಲಿ ಸಂಜೆಯ ಶುಭ ಮಹೂರ್ತದಲ್ಲಿ ಮನೆಯವರೆಲ್ಲರೂ ಸೇರಿ ಭಕ್ತಿ ಭಾವದಿಂದ ಪೂಜಿಸುವರು. ಒಂದು ಮಂಚ ಅಥವಾ ಟೇಬಲ್ಲಿಗೆ ಕಬ್ಬು ಬಾಳೆಗಳನ್ನು ಕಟ್ಟಿ ಮಂಚದ ಮೇಲೆ ಹೊಸ ಬಟ್ಟೆ ಹಾಸಿ ಅದರ ಮೇಲೆ ಕಲಶ ರೂಪದಲ್ಲಿ ಲಕ್ಷ್ಮಿ ಪ್ರತಿಷ್ಠಾಪಿಸಿ ಅದಕ್ಕೆ ಹೊಸ ಸೀರೆ ಆಭರಣಗಳಿಂದ ಅಲಂಕರಿಸುವುದು. ಈ ಪೂಜೆಯ ಇನ್ನೊಂದು ವಿಶೇಷತೆ ಹಳದಿ ಮತ್ತು ಕೇಸರಿ ಬಣ್ಣದ ಚಂಡೂ ಹೂವುಗಳು ಹಾಗು ಅವುಗಳಿಂದ ಮಾಡಿದ ಮಾಲೆಗಳಿಂದ ದೇವರಿಗೆ ಅಲಂಕರಿಸುವುದು. ದೇವರಿಗೆ ಹೋಳಿಗೆ ಪಾಯಸ ಮತ್ತು ಹಣ್ಣು ಹಂಪಲುಗಳ ನೈವೇದ್ಯೆ ಮಾಡುವರು. ಮನೆಯಲ್ಲ ಘಮಘಮಿಸುವ ಪರಿಮಳ ಸೂಸುವ ಅಗರಬತ್ತಿಗಳನ್ನು ಕರ್ಪುರದ ಆರತಿಯನ್ನು ಮಂಗಳಾರತಿ ಮಾಡುವರು. ನೆರೆಹೊರೆಯವರನ್ನು ಸಂಬಂಧಿಗಳು ಸ್ನೇಹಿತರನ್ನು ಪರಸ್ಪರ ಪೂಜೆಗೆ ಆವ್ಹಾನಿಸುವುದು ವಾಡಿಕೆ.......

ಮೂರನೇ ದಿನ: ಬಲಿ ಪಾಡ್ಯೇ ಹಬ್ಬ. 
ಬಲಿ ಪಾಡ್ಯೇ, ಇದು ದೀಪಾವಳಿ ಹಬ್ಬದ ಮೂರನೆಯ ಹಾಗು ಕೊನೆಯ ದಿನ. ಜೊತೆಗೆ ಕಾರ್ತಿಕ ಮಾಸ ಪ್ರಾರಂಭವಾಗುವುದು ಇದೆ ಶುಭದಿನದಂದು. ಪುರಾಣದಲ್ಲಿ ಈ ದಿನಕ್ಕೆ ಒಂದು ವಿಶೇಷತೆ ಇದೆ. ಇದೆ ದಿನದಂದು ವಿಷ್ಣುವು ವಾಮನ ಅವತಾರದಲ್ಲಿ ಬಂದು, ಬಲಿ ಚಕ್ರವರ್ತಿ ಎಂಬ ಅಸುರನನ್ನು ಸಂಹರಿಸಿದ ದಿನ..... 

ಬಲಿ ಪಾಡ್ಯೇ ದಿನ ಅಂದರೆ ವ್ಯಾಪಾರಸ್ಥರು ಮತ್ತು ರೈತಾಪಿ ಮನೆತನಗಳಿಗೆ ಸಂಭ್ರಮದ ದಿನ ಅಂತ ಹೇಳಬಹುದು. ವ್ಯಾಪಾರಸ್ಥರಂತೂ ತಮ್ಮ ತಮ್ಮ ಅಂಗಡಿಗಳನ್ನು, ಕಾರ್ಖಾನೆಗಳನ್ನು ಸುಣ್ಣ ಬಣ್ಣಗಳಿಂದ ರಂಗುಗೊಳಿಸಿ, ತಳಿರು ತೋರಣ, ಹೂವುಗಳಿಂದ ಸಿಂಗರಿಸುವುದು. ವರ್ಷಪೂರ್ತಿ ವ್ಯಾಪಾರದಿಂದ ಬಂದ ಆದಾಯ ಮತ್ತು ಬರುವ ವರ್ಷವೂ ವ್ಯಾಪಾರ ವ್ಯವಹಾರ ಚೆನ್ನಾಗಿ ನಡೆಯಲು ಆ ಲಕ್ಷ್ಮಿ ಮಾತೆಯ ಕೃಪಾಶೀರ್ವಾದ ಪಡೆಯಲು, ವಿಜೃಂಭಣೆಯಿಂದ ಮತ್ತು ಕೃತಜ್ಞತಾ ಭಾವದಿಂದ ಲಕ್ಷ್ಮಿ ಪೂಜೆಯನ್ನು ನೆರವೇಸುವರು. ರೈತಾಪಿ ಮನೆತನಗಳು ಕೂಡ ಹೊಲದಲ್ಲಿ, ಬಾವಿ-ಬೋರೆವೆಲ್ಲ್ ಪೂಜೆ, ದನಕರುಗಳು, ನೇಗಿಲು ಮುಂತಾದ ಕೃಷಿ ಉಪಕರಣಗಳು ಮತ್ತು ಕೃಷಿ ವಾಹನಗಳನ್ನು ಪೂಜಿಸುವರು. 

ಇನ್ನು ಸಾಮಾನ್ಯ ಮನೆಗಳಲ್ಲಿ, ಇಂದು ಕೂಡ ಎಣ್ಣೆ ಸ್ನಾನ, ಹೊಸ ಬಟ್ಟೆ ಧರಿಸುವುದು, ಸಹೋದರಿಯರು ಸಹೋದರರಿಗೆ ತಿಲಕವಿಟ್ಟು ಆರತಿ ಬೆಳಗುವುದು, ಮನೆ ತುಂಬಾ ದೀಪಗಳ ಹಚ್ಚಿ ಸಂತೋಷ ಪಡುವುದು, ಇವೆ ಈ ದಿನದ ವಿಶೇಷಗಳು. ಇನ್ನು ನೇಕಾರಿಕೆಗೆ ಪ್ರಖ್ಯಾತವಾಗಿರುವ ನನ್ನ ಊರಿನಲ್ಲಿ ಮಗ್ಗಗಳ ಪೂಜೆ ಮತ್ತು ಸೀರೆ ಅಂಗಡಿಗಳಲ್ಲಿ ಲಕ್ಷ್ಮಿ ಪೂಜೆ ನೆರವೇರುವುದು. ಜೊತೆಗೆ ಮಾಲೀಕರು ತಮ್ಮ ಕಾರ್ಖಾನೆಗಳಲ್ಲಿ ನೇಯುವ ನೇಕಾರರನ್ನೆಲ್ಲ ಮನೆಗೆ ಕರೆದು ಹೋಳಿಗೆ, ಪಾಯಸದ ಪಕ್ವಾನ ಭೋಜನ ಏರ್ಪಡಿಸಿ, ಅವರಿಗೆಲ್ಲ ಹಬ್ಬದ ಬೋನಸ್ ಕೊಟ್ಟು ಸಂತೋಷ ಪಡಿಸುತ್ತಾರೆ. ಇದೆ ರೀತಿ ಮೂರು ದಿನಗಳ ಈ ದೀಪಾವಳಿ ಹಬ್ಬವು ಅನೇಕ ಆಚರಣೆಗಳು, ಪೂಜೆ ಪುನಸ್ಕಾರಗಳೊಂದಿಗೆ ಮುಗಿದು ಹೋಗುತ್ತದೆ......

ಮನೆಮನೆಯಲ್ಲಿ ದೀಪಗಳನ್ನು ಹಚ್ಚುವುದರ ಮೂಲಕ, ಬಾಳಿನಲ್ಲಿ ಕತ್ತಲನ್ನು ದೂರ ಮಾಡಿ ಹೊಸ ಬೆಳಕನ್ನು ತರಲಿ ಅಂತ ಆಶಿಸುತ್ತಾ, ಮನೆಯವರೆಲ್ಲರೂ ಒಟ್ಟಾಗಿ ಸೇರಿ ಆಚರಿಸುವ ಈ ಹಬ್ಬ, ದೇಶದ ವಿವಿಧ ಬಾಗಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಚರಿಸಲ್ಲ್ಪಟ್ಟರು, ನಮ್ಮ ಉತ್ತರಕರ್ನಾಟಕದಲ್ಲಿ ತನ್ನದೇ ವಿಶೇಷತೆ ಮತ್ತು ಪದ್ಧತಿಗಳಿಂದ ಆಚರಿಸಲ್ಪಡುತ್ತದೆ......

ನಮ್ಮ ಮಿತ್ರರೊಬ್ಬರು, ಕವಿ ಶಿರೋಮಣಿ, ಶ್ರೀ ಬೆನಕ ಶೃಂಗೇರಿ ಅವರು ತಮ್ಮ ಇತ್ತೀಚಿನ, ಹಂಚಿಕೊಂಡ ಕವನದಲ್ಲಿ ಹೇಳಿದಂತೆ ಒಂದೇ ಸೂರಿನಡಿ ಎಲ್ಲರ ಸೇರಿಸಿ, ಸಂಬಂಧಗಳ ಗಾಢಗೊಳಿಸಲು ಹಿರಿಯರಿತ್ತ ಬಳುವಳಿ ಈ ದೀಪಾವಳಿ, ಅನ್ನುವಂತೆ, ಈ ಆಧುನಿಕ ಯುಗದಲ್ಲಿ ಬದುಕ ಕಟ್ಟಿಕೊಳ್ಳಲು ಊರು ಕೇರಿ ಸ್ನೇಹ ಸಂಬಂಧಗಳಿಂದ ದೂರ, ಕಾಲಿಗೆ ಚಕ್ರಕಟ್ಟಿಕೊಂಡು ಎಲ್ಲೆಲ್ಲೋ ಸುತ್ತುತಿರುವಾಗ, ಈ ಹಬ್ಬ ಹರಿದಿನಗಳೇ ತಾನೇ ಎಲ್ಲರನ್ನು ಬೆಸೆದು ಒಂದಾಗಿಸುವ ಸ್ನೇಹ ಸೇತುಗಳು. ಈ ಹಬ್ಬ ಹರಿದಿನಗಳ ಆಚರಣೆಗಳ ಹಿಂದಿರುವ ಕಥೆ, ದಂತ ಕಥೆ, ಹಿನ್ನಿಲೆ ಏನೆ ಇರಲಿ ಆದರೆ ಒಂದು ಹಬ್ಬ ಅಂತ ಬಂದಾಗ ಅದು ಹಿರಿಯ ಕಿರಿಯರೆನ್ನದೆ ಎಲ್ಲರ ಮನಗಳಲ್ಲಿ ಸಂತಸ, ಉತ್ಸಾಹಗಳನ್ನು ತುಂಬುವುದಂತೂ ನಿಜ....... 

ಶನಿವಾರ, ಜೂನ್ 27, 2020

ಅಪ್ಪಂದಿರ ದಿನ: ಅಪ್ಪನಿಂದ ಕಲಿತ ವಿದ್ಯೆಗಳು.....

ಈ 2020 ಒಂದು ಅರ್ಥದಲ್ಲಿ ಹೇಳಬೇಕೆಂದ್ರೆ, ದುರಂತ ಎನ್ನಬಹುದು. ಕೊರೊನ ವೈರಾಣುವಿನ ಅಟ್ಟಹಾಸ ದಿನೆ ದಿನೆ ಹೆಚ್ಚಾಗುತ್ತಲೇ ಇದೆ. ಜನರ ನೀರ್ಲಕ್ಷವೋ, ಸರಕಾರಗಳ ಬಿಕ್ಕಟ್ಟು ನಿರ್ವಹಣೆಯ ವೈಫಲ್ಯವೊ, ಒಂದು ಅರ್ಥವಾಗ್ತಿಲ್ಲ. ಈ ವಿಪತ್ತಿನ ಹೊಡೆತಕ್ಕೆ ಸಿಕ್ಕಿಹಾಕಿಕೊಂಡಿರುವ ಅನೇಕ ವಲಯಗಳಲ್ಲಿ, ಶೈಕ್ಷಣಿಕ ವಲಯವು ಒಂದು. ಹೋದ ಶೈಕ್ಷಣಿಕ ವರ್ಷದ ಮಕ್ಕಳನ್ನು ಅದೆಂಗೋ ಮಾಡಿ ಪರೀಕ್ಷೆ ಇಲ್ಲದೆ ಪಾಸುಮಾಡಿ ಮುಂದಿನ ತರಗತಿಗೆ ಮುಂದೂಡಿದರು. ಆದರೆ ಈ ವರ್ಷದ ಶಾಲಾ ತರಗತಿಗಳನ್ನು ಪ್ರಾರಂಭಿಸುವುದರ ಇನ್ನು ಸರ್ಕಾರ ದೃಢ ನಿರ್ಧಾರ ತಗೆದುಕೊಂಡಿಲ್ಲ. ವಿವಿಧ ಮಟ್ಟದಲ್ಲಿ ಈ ವಿಷಯದ ಬಗ್ಗೆ ಚರ್ಚೆಗಳು ನಡೀತಾನೇ ಇವೆ. ಸ್ಕೂಲುಗಳನ್ನು ಪ್ರಾರಂಭಿಸಬೇಕೋ ಬೇಡವೋ, ಆನ್ಲೈನ್ ಶಿಕ್ಷಣ ಪದ್ಧತಿ ಎಷ್ಟು ಪರಿಣಾಮಕಾರಿ ಅಂತೆಲ್ಲ ಅನೇಕ ಪರ-ವಿರುದ್ಧ ವಿಚಾರಗಳು ಮತ್ತು ಅಭಿಪ್ರಾಯಗಳು ಕೇಳಿ ಬರ್ತಾಇವೆ. ಪೋಷಕರು ಹಿಂತಹ ದುರ್ಗಮ ಪರಿಸ್ಥಿತಿಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವಬಗ್ಗೆ ಹಿಂದೇಟು ಹಾಕುತ್ತಿದ್ದಾರೆ. ಈ ಅತಂತ್ರ ಸ್ಥಿತಿ ಇನ್ನು ಎಷ್ಟು ದಿನ ಮುಂದುವರೆಯುದು ಎಂಬುದು ಅರಿಯದ ವಿಷಯ... 

ಈ ವರ್ಷ ಮಗಳು ಒಂದನೇ ತರಗತಿಗೆ ಹೊಸ ಸ್ಕೂಲಿಗೆ ಪ್ರವೇಶ ಪಡೆದಿದ್ದಾಳೆ.  ಈ ಗೊಂದಲಗಳ ಮಧ್ಯದಲ್ಲಿಯೇ ಅವಳಿಗೆ ಪಠ್ಯ ಪುಸ್ತಕ ಹಾಗು ನೋಟಬುಕ್ಕುಗಳ ಜೊತೆಗೆ ಅವುಗಳಿಗೆ ಕವರ್ ಹಾಕಲು ಖಾಕಿ ಪೇಪರಗಳ ವಿತರಣೆ ಆಗಿದೆ. ಹೊಸ ಪುಸ್ತಕ ಅಂದಮೇಲೆ ಮಕ್ಕಳು ಅವುಗಳನ್ನು ಜೋಪಾನವಾಗಿಡಲು ಅದಕ್ಕೆ ಕವರ್ ಹಾಕುವುದು ಸಾಮಾನ್ಯ ವಾಡಿಕೆ. ಹೋದವಾರದಿಂದ ಮಗಳು ಕವರ್ ಹಾಕಿಕೊಡು ಎಂದು ಕೇಳಿತಿದ್ದಳು. ಇಂದು ಭಾನುವಾರ, ಸಮಯ ಇದ್ದದ್ದರಿಂದ ಅವಳನ್ನು ಮುಂದೆ ಕೂರಿಸಿ, ಪುಸ್ತಕಗಳಿಗೆಲ್ಲ ಖಾಕಿ ಬಣ್ಣದ ಪೇಪರಿನಿಂದ ಕವರ್ ಹಾಕುತ್ತ ಅವಳಿಗೂ ತೋರಿಸುತ್ತ ಕುಳಿತಿದ್ದೆ. ಈ ಪುಸ್ತಕಗಳಿಗೆ ಕವರ್ ಹಾಕುವುದು ಭಾರಿ ದೊಡ್ಡ ಕಲೆಯೇನಲ್ಲ. ಆದರೂ ಈ ಕೆಲಸದಲ್ಲಿ ಒಂದು ಕೌಶಲ್ಯ ಅಡಗಿದೆ. ಈಗೆಲ್ಲ ಇಂಟರ್ನೆಟ್ ಮೂಲಕ ನೋಡಿ ಕಲೆಯಬಹುದು. ಆದರೆ ಮುಂಚೆಯೆಲ್ಲಾ, ಈ ತರಹದ ಚಿಕ್ಕ ಚಿಕ್ಕ ಕಲೆಗಳನ್ನು ಮತ್ತೊಬ್ಬರಿಂದ ಕಲಿಯಲೇಬೇಕಾಗುತಿತ್ತು. ಮಗಳಿಗೆ ಕವರ್ ಹಾಕುವುದನ್ನು ತೋರಿಸುತ್ತ, ಯೋಚಿಸುತ್ತಿದ್ದೆ, ನಾನ್ಯಾರಿಂದ ಈ ಕಲೆಯನ್ನು ಕಲಿತೆ. ನನಗು ಈ ಕಲೆಯನ್ನು ಯಾರಾದರೂ ಒಬ್ಬರು ಹೇಳಿರಲೇಬೇಕಲ್ಲ ಆಗ ನನ್ನ ಶಾಲಾ ದಿನಗಳನ್ನು ನೆನಪಿಸಿಕೊಳ್ಳುತ್ತಾ ಬಾಲ್ಯದ ದಿನಗಳತ್ತ ಮನಸ್ಸು ಹರಿಸಿದಂತೆ ಅನೇಕ ನೆನಪುಗಳನ್ನು ಕಲೆಹಾಕುತ್ತಾ ಹೋದೆ, ಆಗ ಅಲ್ಲಿ ನನಗೊಬ್ಬ ವ್ಯಕ್ತಿ ಕಣ್ಣಮುಂದೆ ಬರುತ್ತಾನೆ. ಈ ವ್ಯಕ್ತಿ ಪ್ರತಿಯೊಬ್ಬರ ಜೀವನದಲ್ಲಿ ಒಂದು ಪ್ರಮುಖ ಪಾತ್ರದಾರನಾಗಿರುತ್ತಾನೆ. ಹೌದು ಅವನೇ ನನಗೆ ಈ ಕಲೆಯನ್ನು ಕಲಿಸಿಕೊಟ್ಟದ್ದು. ಹಾಗಾದರೆ ಯಾರದು ಆ ವ್ಯಕ್ತಿ?? ಯಾರು ಅಲ್ಲ, ಅದು ನನ್ನ ಅಪ್ಪ.....



ಆ ಕಾಲದ ಶಾಲಾ ದಿನಗಳು, ಜೂನ್ ಬಂತೆಂದರೆ ಶಾಲೆಗಳು ತೆರೆದುಕೊಳ್ಳುವ ಸಮಯ. ಹೊಸ ತರಗತಿ ಸೇರುವ, ಹೊಸ ಪುಸ್ತಕಗಳ ಓದುವ, ಹೊಸ ವಿದ್ಯೆ ಕಲಿಯುವ ತವಕ. ಅದೇ ಸಮಯಕ್ಕೆ ಮುಂಗಾರಿನ ಜಿಟಿ ಜಿಟಿ ಮಳೆ ಬೇರೆ, ಎಲ್ಲೆಡೆ ಹಸಿರು, ರಸ್ತೆಗಳೆಲ್ಲ ರೊಜ್ಜು. ಇದೆ ಜಿಟಿ ಜಿಟಿ ಮಳೆಯಲ್ಲಿ ಹೊಸ ತರಗತಿಗೆ ಬೇಕಾದ ಪುಸ್ತಕಗಳನ್ನು, ನೋಟುಪುಸ್ತಕಗಳನ್ನು ಕೊಂಡುಕೊಳ್ಳಲು ಅಪ್ಪನ ಜೊತೆಗೆ ಒಂದಾದಮೇಲೊಂದು ಅಂಗಡಿಯಲ್ಲಿ ವಿಚಾರಿಸುವುದು, ಇಷ್ಟವಾದರೆ ಖರೀದಿ ಮಾಡುವುದು. ಮನೆಗೆ ತಂದಮೇಲೆ ಅವುಗಳಿಗೆಲ್ಲ ಖಾಕಿ ಬಣ್ಣದ ಕವರ್ ಪೇಪರ್ ನಿಂದ ಕವರ್ ಹಾಕಿ, ಮೇಲೆ ಪುಟ್ಟ ಹೆಸರು ಬರೆದ ಲೇಬಲ್ ಅಂಟಿಸುವುದು, ಇದನೆಲ್ಲ ನೆನಪಿಸಿಕೊಳ್ಳೋದೆ ಒಂದು ಆನಂದ. ನಾನು ಮತ್ತು ತಮ್ಮ ತಂಗಿಯಂದಿರು ವಿದ್ಯಾರ್ಥಿ ಜೀವನದಲ್ಲಿದ್ದಾಗ, ಎಲ್ಲರ ಪುಸ್ತಕಗಳಿಗೆ ನಮ್ಮ ತಂದೆ, ಮಾರ್ಕೆಟಿನಿಂದ ಒಳ್ಳೆಯ ಖಾಕಿ ಪೇಪರ್ ತಂದು ತಾವೇ ಖುದ್ದಾಗಿ ಕವರ್ ಹಾಕಿ ಕೊಡುತ್ತಿದ್ದುದು, ನಾವೆಲ್ಲಾ ಸುತ್ತಲೂ ಕುಳಿತು ಏಕಚಿತ್ತದಿಂದ ನೋಡುತ್ತಿದ್ದುದು. ಕ್ರಮೇಣ ಅದನ್ನು ನೋಡ್ತಾ ನೋಡ್ತಾ ನಾವು ಆ ಕಲೆಯಲ್ಲಿ ಪರಿಣಿತರಾದೆವು. ತಂದೆಯಿಂದ ಬಳುವಳಿಯಾಗಿ ಬರುವ ಅನೇಕ ವಿದ್ಯೆಗಳಲ್ಲಿ ಇದು ಒಂದು ಅನ್ನಬಹುದೇ.....ಹೌದು! ಮನೆಯೇ ಮೊದಲ ಪಾಠಶಾಲೆ, ತಂದೆ ತಾಯಿಯರೆ ಮೊದಲ ಗುರುಗಳು ಅನ್ನುವ ಹಾಗೆ, ತಾಯಿ ಕೆಲವು ವಿಷಯಗಳನ್ನು ಕಲಿಸಿಕೊಟ್ಟರೆ ತಂದೆ ಇನ್ನು ಕೆಲವು ವಿಷಯಗಳನ್ನು ಕಲಿಸಿಕೊಡುತ್ತಾನೆ. ಮಕ್ಕಳ ಶೂ ಗೆ ಲೇಸು ಕಟ್ಟುವುದರಿಂದ ಶೂ ಪಾಲಿಶ್ ಮಾಡುವವರೆಗೆ, ಈಜು ಕಲಿಸುವುದರಿಂದ ಹಿಡಿದು ಸೈಕಲ್ ಕಲಿಸುವುದರವರೆಗೆ, ಬಟ್ಟೆ ಇಸ್ತ್ರಿ ಮಾಡುವುದು, ಬಟ್ಟೆಗೆ ಬಟನ್ ಹರಿದರೆ ಹೊಸ ಬಟನ್ ಹಚ್ಚುವುದು. ಜೀವನದಲ್ಲಿ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ತಿಳಿಸುವುದಷ್ಟಲ್ಲದೆ ಕಷ್ಟ ಎದುರಾದಾಗ ಹೇಗೆ ಎದುರಿಸಬೇಕು ಎಂಬ ಧೈರ್ಯವನ್ನು ಕೂಡ ಅಪ್ಪ ಹೇಳಿ ಕೊಡುತ್ತಾನೆ. ಅದಕ್ಕೆ ಹೇಳೋದು, ಅಪ್ಪ ಅನ್ನುವುದು ಒಂದು ಶಕ್ತಿ, ಒಂದು ಆದರ್ಶ. ಬದುಕಿನುದ್ದಕ್ಕೂ ದಾರಿದೀಪವಾಗುವ ಒಂದು ಬೆಳಕು...ಅನೇಕ ವಿಷಯಗಳನ್ನು ತಿಳಿಸಿಹೇಳುವ ಒಂದು ವಿದ್ಯಾಪೀಠ......

ಕಾಲ ಬದಲಾಗುತ್ತದೆ, ನಾವು ಓದಿ ಬೆಳೆದು, ಕೆಲಸ ಹಿಡಿದು ಮದುವೆ ಮಕ್ಕಳು ಅಂತಾದಾಗ ನೋಡು ನೋಡುತ್ತಿದ್ದಂತೆ ಒಂದು ದಿನ ನಾವು ಅಪ್ಪನ ಪಾತ್ರದಾರಿಯಾಗುತ್ತೇವೆ. ಅಂದರೆ ನಾವು ಮಕ್ಕಳಾಗಿದ್ದಾಗ ನೋಡಿದ ನಮ್ಮ ಅಪ್ಪನ ಪಾತ್ರವನ್ನು ಈಗ ನಿಭಾಯಿಸುವ ಕಾಲ. ಸೃಷ್ಟಿಯ ನೀಯಮ, ಆ ಪಾತ್ರ ಅಂತ ಬಂದಾಗ ನಿಭಾಯಿಸಲೇಬೇಕು. ನಾವು ಅಪ್ಪನಿಂದ ಪಡೆದ ಅದೇಷ್ಟೋ ಸಣ್ಣ ಪುಟ್ಟ ಬಳುವಳಿಗಳನ್ನು ಹಸ್ತಾಂತರಿಸುವ ಜವಾಬ್ದಾರಿ ಈಗ ನಮ್ಮ ಹೆಗಲಿಗೆ ಬರುತ್ತದೆ, ಆ ಜವಾಬ್ದಾರಿಗಳನ್ನು ಚಾಚು ತಪ್ಪದೆ ನಿಭಾಯಿಸಲೇಬೇಕು, ಆಗಲೇ ಆ ಪಾತ್ರಕ್ಕೆ ಒಂದು ಅರ್ಥ ಮತ್ತು ಘನತೆ ಬರುವುದು. ಅವತ್ತು ನನ್ನ ಅಪ್ಪನಿಂದ ಕಲಿತ ಅನೇಕ ವಿಷಯಗಳಲ್ಲಿ ಒಂದಾದ ಈ ಪುಸ್ತಕಗಳಿಗೆ ಕವರ್ ಹಾಕುವ ಆ ಒಂದು ಕಲೆಯನ್ನು ಇಂದು ನಾನು ಅಪ್ಪನ ಸ್ಥಾನದಲ್ಲಿ  ನಿಂತು ನನ್ನ ಮಗಳಿಗೆ ತೋರಿಸಿಕೊಡುತ್ತಿದ್ದೇನೆ, ಅದಲ್ಲಿರುವ ಏನೋ ಒಂದು ಸಂತಸವನ್ನು ಅನುಭವಿಸುತ್ತಿದ್ದೇನೆ......

ಈ ಬದುಕೇ ಹೀಗೆ, ಇಲ್ಲಿ ನಡೆಯುವ ಅನೇಕ ಘಟನೆಗಳು ಮತ್ತೆ ಮತ್ತೆ ಮರುಕಳಿಸಿ ನಮ್ಮ ಕಣ್ಣಮುಂದೆ ಬರುತ್ತವೆ. ಕಾಲಕ್ಕನುಗುಣವಾಗಿ ಆ ಘಟನೆಗಳಲ್ಲಿ ನಾವು ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತೇವೆ.....ಆ ಪಾತ್ರಗಳನ್ನೂ ನಿಭಾಯಿಸಬೇಕಾಗಿ ಬಂದಾಗ, ಪಾತ್ರದಾರಿಗಳು ಬೇರೆ ಆಗಿರಬಹುದು, ಆದರೆ ಆ ಪಾತ್ರಕ್ಕೆ ತಕ್ಕ ಜವಾಬ್ದಾರಿಗಳು ಮಾತ್ರ ಒಂದೇ ಆಗಿರುತ್ತವೆ..........ಅಲ್ಲವೇ!!

ಜೂನ್ 21, ವಿಶ್ವ ಅಪ್ಪಂದಿರ ದಿನ, ಅವತ್ತು ಇದೆ ಲೇಖನವನ್ನು ನನ್ನ ಫೇಸ್ಬುಕ್ ಗೋಡೆಯಮೇಲೆ ಬರೆದಿದ್ದೆ. ಅದನ್ನೇ ಇನ್ನಷ್ಟು ವಿಸ್ತರಿಸಿ ಒಂದು ಬ್ಲಾಗ್ ಲೇಖನವಾಗಿ ಬರೆದು, ಅಪ್ಪಂದಿರ ದಿನದ ನೆನಪಿಗಾಗಿ ಜಗತ್ತಿನ ಎಲ್ಲ ಅಪ್ಪಂದಿರಿಗೆ ಈ ಲೇಖನವನ್ನು ಅರ್ಪಿಸುತ್ತಿದ್ದೇನೆ....

ಶನಿವಾರ, ಮೇ 23, 2020

ಕನ್ನಡಕ್ಕಾಗಿ ಬರೆಯೋಣ.......

ಸಾಮಾಜಿಕ ಜಾಲತಾಣದಲ್ಲಿ ಅವಾಗವಾಗ ಏನೇನೋ ಚಾಲೆಂಜುಗಳು ನಡೀತಾ ಇರೋದನ್ನ ನೋಡಿದೀವಿ........ಅದ್ರಲ್ಲೂ, ಈ ಲೊಕ್ಡೌನ್ ಸಮಯದಲ್ಲಂತೂ,  ಚ್ಯಾಲೆಂಜುಗಳ ಸುರಿಮಳೆ ಅಯೀತು. ಇಂತಹ ಉಭಯ ಸಂಕಟದ ಮಧ್ಯೆ ನಮ್ಮ ಹೆಂಗಳೆಯರು ಮಾಡಿದ, ಚಂದ ಚಂದದ ಸೀರೆಗಳನ್ನುಟ್ಟ "ಸಾರಿ ಚಾಲೆಂಜ್", ತಮ್ಮ ಪರಿವಾರದೊಂದಿದೆ ವಿವಿಧ ಸಂಧರ್ಭದಲ್ಲಿ ಕ್ಲಿಕ್ಕಿಸಿದ "ಫ್ಯಾಮಿಲಿ ಫೋಟೋ ಚಾಲೆಂಜ್",  ಫೇಸ್ಬುಕ್ ಸ್ನೇಹಿತರೊಂದಿಗೆ ತಾವು ಭೆಟ್ಟಿಯಾದ ಸ್ಥಳ ಸಂದರ್ಭ ನೆನಪು ಹಂಚಿಕೊಳ್ಳುವ ಚಾಲೆಂಜ್...... ಹೀಗೆ ಅನೇಕ ಸವಾಲುಗಳನ್ನು ಸ್ವೀಕರಿಸುವ ಚಾಲೆಂಜುಗಳು ಕಂಡು ಬಂದಿದ್ದು ವಿಶೇಷ ........ ಮುಂದಿನದು ಗೊತ್ತಿಲ್ಲ, ಇಂದು ಮಾತ್ರ ಇಷ್ಟವಾದ್ದನ್ನ ಮಾಡಿ ಖುಷಿಯಾಗಿರೋಣ ಅನ್ನುವ ಮನೋಸ್ಥಿತಿ....  ಈ ಲೊಕ್ಡೌನ್ ಸಮಯದಲ್ಲಿ ವಾಸ್ತವಿಕವಾಗಿ ದೂರ ಇದ್ದರು,  ಈ ತರಹದ ಚಾಲೆಂಜುಗಳ ಮೂಲಕ ಸಾಮಾಜಿಕವಾಗಿ ಹತ್ತಿರವಾಗಿ, ಮನೋಸ್ಥೈರ್ಯ ಬೆಳೆಸಿಕೊಳ್ಳಲು ಸಹಾಯವಾದ ಒಂದು ಪ್ರಸಂಗ...... 

ಆದರೆ ಇದುವರೆಗೆ ಕಂಡಂತಹ ಅನೇಕ ಚಾಲೆಂಜ್ಗಳಲ್ಲಿ ನನಗೆ ಅತೀ ಇಷ್ಟವಾಗಿದ್ದು, ಒಂತರಾ ಭಿನ್ನವಾದ ಕನ್ನಡಕ್ಕಾಗಿ_ಬರೆಯೋಣ ಎಂಬ ಚಾಲೆಂಜು....... ಈ ಚಾಲೆಂಜು ಬಹಳ ಸಿಂಪಲ್, ನಿಮ್ಮ ನೆಚ್ಚಿನ ಕನ್ನಡದ ಎರಡು ಸಾಲುಗಳನ್ನು ನಿಮ್ಮ ಹಸ್ತಾಕ್ಷರಗಳಲ್ಲಿ ಒಂದು ಕಾಗದದ ಮೇಲೆ ಬರೆದು ಫೋಟೋ ತೆಗೆದು ಅದನ್ನ ನೀಮ್ಮ ಫೇಸ್ಬುಕ್ ಗೋಡೆಯಮೇಲೆ ಹಂಚಿಕೊಳ್ಳೋದು. ಆಮೇಲೆ ನಿಮ್ಮ ಸ್ನೇಹಿತ ಬಳಗಕ್ಕೆ ಈ ಸವಾಲನ್ನು ನೀಡಿ, ಅವರನ್ನು ಟ್ಯಾಗ್ ಮಾಡೋದು...... ಆ ಎರಡು ಸಾಲುಗಳು ನಿಮ್ಮ ಸ್ವಂತದ್ದಾಗಿರಬಹುದು ಇಲ್ಲ ನಿಮಗಿಷ್ಟವಾದ ಕವಿಗಳು ಬರೆದ ಕವನದ ಸಾಲುಗಳಾಗಿರಬಹುದು....

ಸ್ವಹಸ್ತಾಕ್ಷರಗಳಲ್ಲಿ ಕನ್ನಡದಲ್ಲಿ ಬರೆದು ದಶಕಗಳೇ ಕಳೆದುಹೋಗಿವೆ..... ನನಗೆ ನೆನಪಿರೋಪ್ರಕಾರ ಬಿ ಎಸ್ಸಿ ಎರಡನೇ ವರ್ಷದ ಕನ್ನಡ ವಿಷಯದ ಪೇಪರ್ ಬರೆದದ್ದೇ ಕೊನೆ. ಆಮೇಲೆ ಆಗೋ ಈಗೋ ಅಲ್ಪ ಸ್ವಲ್ಪ ಡೈರೀನಲ್ಲಿ ಬರೆದದ್ದುಂಟು....... ಈ ಕಂಪ್ಯೂಟರ್ ಯುಗದಲ್ಲಿ, ಮುಂಚೆಯಂತೆ ಪತ್ರವ್ಯವಹಾರಗಳಿಲ್ಲ..... ದೊಡ್ಡದಾಗಿ ಕನ್ನಡ ಬ್ಲಾಗ್ ಬರೀತೀನಿ ಅಂತ ಹೇಳ್ಕೊಂಡ್ರು, ಅದು ಕೇವಲ ಕಂಪ್ಯೂಟರ್ ಕೀಬೋರ್ಡ್ ಕುಟ್ಟಿ ಬರೆಯೋದೇ ಹೊರತು ಕೈಬರಹ ಅಲ್ಲ...... ಅದಕ್ಕಾಗಿ ಈ ಚಾಲೆಂಜ್, ಬಹಳ ದಿನಗಳ ನಂತರ ಕೈಗೆ ಒಳ್ಳೆ ಕೆಲಸ ಕೊಡೋಹಂಗೆ ಇತ್ತು ಅನ್ನಬಹುದು ..... ಅಸಂಖ್ಯಾತ ಕನ್ನಡಿಗರು ವಿಶೇಷ ಕಾಳಜಿ ಮತ್ತು ಉತ್ಸಾಹದಿಂದ ಈ ಸವಾಲನ್ನು ಸ್ವೀಕರಿಸಿ ತಮ್ಮ ಕವನ ಬರೆಯೋ ಪ್ರತಿಭೆ ಹಾಗು ಕೈಬರಹ ತೋರಿಸಿದ್ದು ಇನ್ನು ವಿಶೇಷವಾಗಿತ್ತು.....

ನನಗು ಸ್ನೇಹಿತರೊಬ್ಬರು ಕೊಟ್ಟ ಈ ಸವಾಲನ್ನು ಸ್ವೀಕರಿಸೋ ಅವಕಾಶ...... ಡಿ. ವಿ. ಜಿ. ಅವರ ಮಂಕುತಿಮ್ಮನ ಕಗ್ಗದ ಸಾಲುಗಳನ್ನು ಲೇಖನಿಯಲ್ಲಿ ಹಾಳೆಯ ಮೇಲೆ ಮೂಡಿಸಿ ಆ ಫೋಟೋವನ್ನು ನನ್ನ FB ಗೋಡೆಯಮೇಲೆ ಹಂಚಿಕೊಂಡು ಸ್ನೇಹಬಳಗಕ್ಕೆ ಈ ಸವಾಲನ್ನು ಮುಂದುವರಿಸಿದೆ.....

ಯಾಕೋ ಗೊತ್ತಿಲ್ಲ ಈ ವಿಭಿನ್ನವಾದ ಚಾಲೆಂಜಿಗೆ ಇನ್ನಷ್ಟು ಮನ್ನಣೆ ಕೊಡಬೇಕನಿಸಿತು, ಅದಕ್ಕಾಗಿ ಮತ್ತೊಮ್ಮೆ ಈ ಚಾಲೆಂಜನ್ನು ಸಾರ್ವಜನಿಕವಾಗಿ ಸ್ವೀಕರಿಸಿ, ನನಗೆ ತುಂಬಾ ಇಷ್ಟವಾದ ಹಾಗು ಇತ್ತೀಚೆಗೆ ಅಂತ್ಯಂತ ಪ್ರಚಲಿತವಾದ , ಶ್ರೀ ಎಚ್. ಎಸ್. ವೆಂಕಟೇಶ್ ಮೂರ್ತಿ ಅವರು ಬರೆದ ......."ತೂಗುಮಂಚದಲ್ಲಿ ಕೂತು....".... ಎಂಬ, ಕೃಷ್ಣ-ರಾಧೇಯರ ಮಧ್ಯೆ ನಡೆಯುವ ಪ್ರಣಯ ಪ್ರಸಂಗವನ್ನು ರಸಭರಿತ ಸಾಹಿತ್ಯದೊಂದಿದೆ ಹೇಳುವ ಸುಂದರವಾದ ಕವನ, ಕಿರಿಕ್ ಪಾರ್ಟಿ ಎಂಬ ಸಿನಿಮಾದಲ್ಲಿ ಕೂಡ ಬಂದದ್ದು..... ಏಳೆಂಟು ಪ್ರಯತ್ನಗಳ ನಂತರ ಖಾಲಿ ಹಾಳೆಯಮೇಲೆ ಕೊನೆಗೂ ಬರೆದೆ....ಈ ಬ್ಲಾಗ್ ಲೇಖನದಲ್ಲಿ ಆ ನನ್ನ ಕೈಬರಹದ ಚಿತ್ರವನ್ನ ಹಂಚಿಕೊಳ್ತಾಯಿದ್ದೀನಿ..... 





ಈ ಸುಂದರವಾದ ಕವನವನ್ನು ಕೊಟ್ಟ ಶ್ರೀ ಎಚ್. ಎಸ್. ವೆಂಕಟೇಶ್ ಮೂರ್ತಿ ಅವರಿಗೆ ಧನ್ಯವಾದಗಳನ್ನ ಹೇಳಲೇಬೇಕು. ಆಮೇಲೆ, ಅದ್ಯಾರು ಮಹಾತ್ಮರು ಈ ಚಾಲೆಂಜನ್ನು ಶುರು ಮಾಡಿದ್ರೋ ಗೊತ್ತಿಲ್ಲ, ಆದರೆ ಅವರ ಈ ಕೆಲಸಕ್ಕೆ ತುಂಬಾ ತುಂಬಾ ಧನ್ಯವಾದಗಳು .....ಒಂದೇ ಬಗೆಯ ರೂಢಿಗಳ ಮಧ್ಯೆ ಹಿಂತಹ ವಿಭಿನ್ನ ಕ್ರಿಯೇಟಿವಿಟಿ ಅಥವಾ ಪ್ರಯತ್ನಗಳು ಅವಾಗವಾಗ ಆಗ್ತಾಇರಬೇಕು...... ಆಗಲೇ ಈ ಬದುಕು ಸುಂದರ ಅನಿಸುವುದು....... ಅಲ್ಲ್ವ  ಮತ್ತೆ!!

ಭಾನುವಾರ, ಏಪ್ರಿಲ್ 26, 2020

"ಲಾಕಡೌನ್" ಎಂಬ ಗೃಹಬಂಧನದಲ್ಲಿ.....

ಕೋವಿಡ್19 ಎಂಬ ಸಾಂಕ್ರಾಮಿಕ ರೋಗ ಮಹಾಮಾರಿಯಾಗಿ ಇಡೀ ಜಗತ್ತನ್ನೇ ಕಾರ್ಮೋಡದಂತೆ ಆವರಿಸಿಕೊಂಡಿದೆ. ಈಗಾಗಲೇ ಜಾಗತಿಕವಾಗಿ ಸರಾಸರಿ 60 ಲಕ್ಷಕ್ಕೂ ಮೇಲ್ಪಟ್ಟು ಜನರು ಈ ಕಾಯಿಲೆಯಿಂದ ಸೋಂಕಿತರಾದರೆ, ಮೂರು ಲಕ್ಷ ಎಪ್ಪತ್ತು ಸಾವಿರಕ್ಕೂ ಮೇಲ್ಪಟ್ಟು ಜನ ಪ್ರಾಣಕಳೆದುಕೊಂಡಿದ್ದಾರೆ. ಅದರ ಜೊತೆಗೆ ಇಪ್ಪತ್ತೇಳು ಲಕ್ಷಕ್ಕೂ ಮೇಲ್ಪಟ್ಟು ಜನ ಗುಣಮುಖರಾಗಿದ್ದಾರೆ ಅನ್ನುವ ಒಳ್ಳೆಯ ಸುದ್ದಿಯು ಇದೆ. ಈ ರೋಗದ ಭೀಕರತೆ ಇಡೀ ಭೂಮಿಯನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಹಿಂತಹ ಆಧುನಿಕ ಯುಗದಲ್ಲಿಯೂ ಕೂಡ ಸೂಕ್ತ ಚಿಕಿತ್ಸೆಯ ಅಭಾವದಿಂದ, ಒಂದು ಸೂಕ್ಷ್ಮಾಣು ಜೀವಿಯ ಹೊಡತಕ್ಕೆ, ಅಸಹಾಯಕನಾಗಿ ಕೈಚೆಲ್ಲಿ ಕುಳಿತಿದ್ದಾನೆ ಮನುಷ್ಯ.

ಈ ಸಾಂಕ್ರಾಮಿಕ ಕಾಯಿಲೆಗಳೇ ಹಾಗೆ. ನನಗೆ ನೆನಪಿದೆ, ಚಿಕ್ಕವನಿದ್ದಾಗ ನಮ್ಮ ಅಜ್ಜಿ ಹೇಳ್ತಿದ್ದು. ಬಹಳ ದಿನಗಳ ಹಿಂದೆ ಪ್ಲೇಗ್ ಎಂಬ ಮಹಾಮಾರಿ ಬರುತ್ತಿತ್ತಂತೆ. ಅದು ಬಂದರೆ ಅನೇಕ ಜನರ ಪ್ರಾಣಹಾನಿ ಆಗುತ್ತಿತ್ತಂತೆ. ಅವಾಗ ಅಷ್ಟೊಂದು ವೈದ್ಯಕೀಯ ವ್ಯವಸ್ಥೆ ಇಲ್ಲದ ಕಾರಣ, ಒಂದು ಊರಲ್ಲಿ ಯಾರಿಗಾದರೂ ಪ್ಲೇಗ್ ಬಂದರೆ ಊರಿಗೆ ಊರೇ ಖಾಲಿಯಾಗಿ ಜನರೆಲ್ಲಾ ಬೇರೆಕಡೆ ವಲಸೆ ಹೋಗುತ್ತಿದ್ದರಂತೆ. ನಂತರ ಅದಕ್ಕೆ ಲಸಿಕೆ ಅಥವಾ ವ್ಯಾಕ್ಸಿನ್ ಬಂದಮೇಲೆ ಆ ಕಾಯಿಲೆ ನಿರ್ನಾಮವಾಯಿತು, ಆ ಮಾತು ಬೇರೆ. ಇದೆ ರೀತಿ ಕಾಲೆರಾ, ಮಲೇರಿಯಾ, ಸ್ವಾಯಿನ್ ಫ್ಲೂದಂತಹ ಸಾಂಕ್ರಾಮಿಕ ರೋಗಗಳು ಬಂದು ಹೋದ ಇತಿಹಾಸವಿದೆ.

ಕೊರೊನ ಎಂಬ ವೈರಸ್ ಸೋಂಕಿನಿಂದ ಬರುವ ಈ ಕಾಯಿಲೆ, ನೆವೆಂಬರ 2019 ರಲ್ಲಿ ಮೊದಲುಬಾರಿಗೆ ಚೀನಾದ ವುಹಾನ್ ಎಂಬ ನಗರದಲ್ಲಿ ಕಾಣಿಸಿಕೊಳ್ಳುತ್ತದೆ. ಮೊದಮೊದಲು ಅಷ್ಟೊಂದು ತೀವ್ರವಾಗಿ ಯಾರೂ ಚಿಂತಿಸಲಿಲ್ಲ ಆದರೆ ನೋಡು ನೋಡುತ್ತಲೇ ಈ ಕಾಯಿಲೆ ಹರಡುತ್ತಲೇ ಹೋಗಿ ಚೀನಾದಲ್ಲಿ ಸಾವಿರಾರು ಜನರ ಜೀವ ತೆಗೆದುಕೊಂಡು, ನಂತರ ದಕ್ಷಿಣ ಕೊರಿಯಾ, ಜಪಾನ್, ಇಟಲಿ, ಇರಾನ್, ಫ್ರಾನ್ಸ್, ನಂತರ ದೊಡ್ಡಣ್ಣ ಅಮೆರಿಕಾ, ಹೀಗೆ ಸಂಪರ್ಕ, ಸಹವಾಸ ಮತ್ತು ಪ್ರಯಾಣದ ಮೂಲಕ ಒಬ್ಬರಿಂದೊಬ್ಬರಿಗೆ ಹಬ್ಬುತ್ತಹೋಯಿತು. ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಸಾಂಕ್ರಾಮಿಕ ಕಾಯಿಲೆ ಎಂದು ಘೋಷಣೆ ಮಾಡಿಯೇಬಿಟ್ಟಿತು.

ನಮ್ಮ ಭಾರತದಲ್ಲಿ ಇನ್ನು ಯಾವುದೇ ಕೇಸ್ ಇಲ್ಲ ಎಂದು ಎಂದು ನಿರಾಳವಾಗಿ ನಿಟ್ಟುಸಿರು ಬಿಡುತ್ತಿರುವಾಗ, ಜನೆವರಿ 30 ಕ್ಕೆ ವುಹಾನ್ ದಿಂದ ಬಂದಂತಹ ಒಬ್ಬ ಕೇರಳದ ವಿದ್ಯಾರ್ಥಿಗೆ ಸೋಂಕು ತಗುಲಿದ ಮೊದಲ ಕೇಸು ರಿಪೋರ್ಟ್ ಆಗಿಯೇಬಿಟ್ಟಿತು. ಅಯ್ಯೋ! ನಮ್ಮಲ್ಲಿಯೂ ಬಂದೇಬಿಟ್ಟಿತೇ ಈ ಕಾಯಿಲೆ ಅನ್ನುವಷ್ಟರಲ್ಲಿಯೇ, ಫೆಬ್ರುವರಿ 24 ಕೆಲಸದ ನಿಮಿತ್ತ್ಯವಿದೇಶಕ್ಕೆ ಹೋಗಿಬಂದ ಬೆಂಗಳೂರಿನ ಸಾಫ್ಟ್ವೇರ್ ಉದ್ಯೋಗಿಗೆ ಕೊರೊನ ಸೋಂಕು ಕಾಣಿಸಿಕೊಳ್ಳುತ್ತದೆ. ಇದೆ ಕರ್ನಾಟಕಕ್ಕೆ ಮೊದಲ ಪ್ರವೇಶ. ಹೀಗೆ ನೋಡು ನೋಡುವಷ್ಟರಲ್ಲಿಯೇ ಬೇರೆ ಬೇರೆ ದೇಶಗಳಿಂದ ಬಂದವರಿಂದ ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ಈ ಸೋಂಕಿನ ಪಾಸಿಟಿವ್ ಕೇಸುಗಳು ಹೊರಬರ್ತಾ ಹೋಗುತ್ತವೆ. ಸರ್ಕಾರಗಳು ಹೀಗೆ ಸ್ವದೇಶಕ್ಕೆ ಬಂದವರಲ್ಲಿ ಸೋಂಕಿನ ಲಕ್ಷಣ ಕಂಡುಬಂದವರನ್ನು ಆಸ್ಪತ್ರೆಗಳಿಗೆ ಸೇರಿಸಿ, ಉಳಿದವರನ್ನು ಮನೆಯಲ್ಲಿಯೇ 14-15 ದಿನ ಗೃಹಬಂಧನದಲ್ಲಿಡಲು ಆದೇಶ ಹೊರಡಿಸುತ್ತವೆ. ಮಾರ್ಚ 12ನೇ ತಾರೀಕು ಕರ್ನಾಟಕದ ಕಲಬುರ್ಗಿಯಲ್ಲಿ ಮೊದಲ ಕೊರೊನ ಸೋಂಕಿತ ವ್ಯಕ್ತಿಯ ಸಾವಿನ ಸುದ್ದಿಇಂದ ಎಚ್ಛೆತ್ತುಕೊಂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಮುಚ್ಚುವ ಆದ್ನೇ ಹೊರಡಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳುವತ್ತ ಚುರುಕಾದವು. ಆದರೂ ಯಾಕೋ ಈ ನಿರ್ಧಾರ ತಡವಾಯಿತೇನೋ ಅನಿಸುತ್ತದೆ.

ಮೊದಲೇ ಈ ಕಾಯಿಲೆಗೆ ಮದ್ದಿಲ್ಲ ಆ ಕಡೆ ಇಟಲಿ, ಇರಾನ್ ಮತ್ತು ಫ್ರಾನ್ಸ್ ದೇಶಗಳಲ್ಲಿ ಟಪಟಪನೆ ಹೆಣಗಳು ಬೀಳುತ್ತಿವೆ. ಅಕಸ್ಮಾತ್ ಅದೇರೀತಿ ನಮ್ಮ ದೇಶದಲ್ಲಿ ಈ ಕಾಯಿಲೆ ತೀವ್ರಗತಿಯಲ್ಲಿ ಹರಡುತ್ತಾ ಎರಡನೇ ಮತ್ತು ಮೂರನೇ ಹಂತಕ್ಕೆ ತಲುಪಿದರೆ, ಅಷ್ಟೊಂದು ರೋಗಿಗಳಿಗೆ ಶುಶ್ರುಷೆ ಮಾಡಲು ಆಸ್ಪತ್ರೆಗಳಲ್ಲಿ ಹಾಸಿಗೆಗಳ ವ್ಯವಸ್ಥೆ ಇಲ್ಲ, ವೆಂಟಿಲೇಟರ್ಗಳೊ ಸುಮಾರು ಒಂದು ಲಕ್ಷ ಇರಬಹುದು. ಹಿಂತಹ ತುರ್ತುಪರಿಸ್ಥಿತಿಯಲ್ಲಿ ಬೇರೆ ದೇಶಗಳಿಂದ ಆಮದುಮಾಡಿಕೊಳ್ಳೋದು ಅಸಾಧ್ಯ. ಸಾಧ್ಯವಾದಷ್ಟು ಹೆಚ್ಚು ಜನರನ್ನು ಪ್ರರೀಕ್ಷೆ ಮಾಡಲು ಟೆಸ್ಟ್ ಕಿಟ್ಟಗಳ ಸಂಖ್ಯೆ ಕೂಡ ಕಡಿಮೆ ಇತ್ತು. ಆಗ ಈ ಕಾಯಿಲೆಯ ಹರಡುವಿಕೆಯನ್ನು ತಡೆಗಟ್ಟಲು ಮುಂದಿರುವ ಒಂದೇ ಮಾರ್ಗ, ಲಾಕಡೌನ್. ಅಂದರೆ ಅವಶ್ಯಕ ಸೇವೆಗಳನ್ನು (ವೈದ್ಯಕೀಯ ಮತ್ತು ದಿನಸಿ ಅಂಗಡಿ) ಹೊರತುಪಡಿಸಿ, ಸಾರಿಗೆ, ವ್ಯಾಪಾರ ವಹಿವಾಟು, ಶಾಲಾ-ಕಾಲೇಜು, ಸರ್ಕಾರೀ ಮತ್ತು ಖಾಸಗಿ ನೌಕರಿ ಎಲ್ಲವನ್ನು ನಿರ್ಧಿಷ್ಟ ದಿನಗಳ ಮಟ್ಟಿಗೆ ಸ್ತಬ್ದಗೊಳಿಸಿ, ಎಲ್ಲರನ್ನು ಮನೆಯಲ್ಲಿ ಇರಿಸುವ ಕಟ್ಟುನಿಟ್ಟಿನ ವ್ಯವಸ್ಥೆ. ಅದೇ ಪ್ರಕಾರ ಭಾರತದ ಪ್ರಧಾನ ಮಂತ್ರಿಗಳು ಮಾರ್ಚ್ 22ಕ್ಕೆ ಜನತಾ ಕರ್ಫ್ಯೂ ಎಂಬ ಒಂದುದಿನದ ಗೃಹಬಂಧನದ ಪ್ರಯೋಗಮಾಡಿ, ಮಾರ್ಚ್ 24ರ ಸಂಜೆ 21 ದಿನಗಳ ಮೊದಲ ಹಂತದ ಲಾಕಡೌನ್ ಘೋಷಣೆ ಮಾಡಿಯೇಬಿಟ್ಟರು......ಅಷ್ಟೇ ಸಾಕು ದೇಶಕ್ಕೆ ದೇಶವೇ ಸ್ತಬ್ಧವಾಗಿ, ಎಲ್ಲೆಲ್ಲೂ ನೀರವ ಮೌನ ಆವರಿಸಿಕೊಂಡಿತು. ಬಸ್, ರೈಲು, ವಿಮಾನಗಳೆಲ್ಲ ನಿಲ್ದಾಣ ಸೇರಿದವು. ರಸ್ತೆಗಳು ಖಾಲಿ ಖಾಲಿ. ವ್ಯಾಪಾರ-ವಹಿವಾಟುಗಳು ನಿಂತುಹೋಗಿ ಅಂಗಡಿಮುಗ್ಗಟ್ಟುಗಳೆಲ್ಲ ಮುಚ್ಚಿಹೋದವು. ದಿನದ 24 ಗಂಟೆ ಎಲ್ಲರು ತೆಪ್ಪಗೆ ತಮ್ಮ ತಮ್ಮ ಮನೆಯಲ್ಲೇ ಇರಬೇಕಾದ ಸ್ಥಿತಿ. ಆದರೆ ಹಿಂತಹ ತುರ್ತು ಪರಿಸ್ಥಿತಿಯಲ್ಲಿಯೂ ಹಗಲಿರುಳು ಶ್ರಮವಹಿಸುತ್ತಿರುವವರು, ಲಾಕಡೌನ್ ಅಚ್ಚುಕಟ್ಟಾಗಿ ನಡೆಸಲು ಸಕ್ರಿಯ ಪಾತ್ರವಹಿಸುತ್ತಿರುವ ಪೊಲೀಸರು, ತಮ್ಮ ಜೀವದ ಹಂಗನ್ನೇ ಮರೆತು ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ನಮ್ಮ ವೈದ್ಯರು ಮತ್ತು ಅರೋಗ್ಯ ಇಲಾಖೆಯ ಕಾರ್ಯಕರ್ತರು ಹಾಗು ನಮ್ಮ ಊರು, ನಗರಗಳನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಿರುವ ಪೌರಕಾರ್ಮಿಕರು. ಈ ಸಮಯದಲ್ಲಿ ಇವರೆಲ್ಲರಿಗೂ ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆಯೇ. ಅವರ ಸೇವೆ ಮಾತ್ರ ಶ್ಲಾಘನೀಯ.

ಗೃಹಬಂಧನದ ಘೋಷಣೆ ಆಗಿ ದೇಶವೆಲ್ಲಾ ಸ್ತಬ್ಧವಾಯೀತು, ಆದರೆ ನಿಜವಾದ ಸಮಸ್ಯೆಗಳು ಶುರುವಾಗಿದ್ದು ಇಲ್ಲಿಂದ. ನಮ್ಮ ಭಾರತ ವಿವಿಧ ಭಾಷೆ, ಸಂಸ್ಕೃತಿ, ನಂಬಿಕೆ, ವಿಚಾರ, ಬಡ, ಮಧ್ಯಮ, ಸಿರಿಮಂತ ವರ್ಗಗಳನ್ನೊಳಗೊಂಡ ದೇಶ. ಇಂತಹ ವಿವಿಧತೆಯುಳ್ಳ ದೇಶದಲ್ಲಿ ಎಲ್ಲರನ್ನು ಇಷ್ಟು ದಿನಗಳ ಕಾಲ ಒಟ್ಟಿಗೆ ಹಿಡಿದಿತ್ತು ಏಕತೆಯನ್ನು ಸಾಧಿಸುವುದು ಕಷ್ಟಸಾಧ್ಯ. ಹೊರಗಡೆ ಪೊಲೀಸರ ಲಾಠಿ ಏಟಿಗೆ ಹೆದರಿ ಮಧ್ಯಮ ಮತ್ತು ಶ್ರೀಮಂತವರ್ಗ ತಮ್ಮ ಮನೆಸೇರಿದರು, ಆದರೆ ಈ ನಿರ್ಧಾರದಿಂದ ನಿಜವಾಗಿ ತೊಂದರೆಗೀಡಾದವರು ದಿನಗೂಲಿಯನ್ನೇ ನಂಬಿ ನಗರಗಳಿಗೆ ಹೊಟ್ಟೆತುಂಬಿಕೊಳ್ಳಲು ವಲಸೆಬಂದ ಬಡ ಕಾರ್ಮಿಕವರ್ಗ. ಲಾಕಡೌನ್ ಆದಮೇಲೆ ಬದುಕೇ ಸ್ತಬ್ಧವಾಗಿದೆ, ಕೈಗೆ ಕೆಲಸವಿಲ್ಲ ಅಂದಮೇಲೆ ಸಂಸಾರ ಹೇಗೆ ನಡೆಸೋದು, ಜೊತೆಗೆ ಈ ರೋಗದ ಭೀತಿ ಬೇರೆ. ಸರ್ಕಾರಗಳೇನೋ ಬಡತನ ರೇಖೆಗಿಂತ ಕೆಳಗಿರುವವರಿಗಾಗಿ ಮೂರು ತಿಂಗಳ ತುರ್ತು ಪ್ಯಾಕೇಜ್ ಘೋಷಣೆ ಮಾಡಿದವು, ಆದರೆ ಅವೆಲ್ಲ ಅನುಷ್ಠಾನಕ್ಕೆ ಬರಲು ಸಮಯಬೇಕು. ಎಲ್ಲರು ಎಲ್ಲಿದ್ದೀರಿ ಅಲ್ಲೇ ಇರಿ, ನಾವು ವ್ಯವಸ್ಥೆ ಮಾಡುತ್ತೇವೆ ಎಂದು ಕೇಳಿಕೊಂಡರು ಏನು ಮಾಡಬೇಕೆಂದು ತೋಚದ ಇಕ್ಕಟ್ಟಿನ ಮನಸ್ಥಿತಿಯಲ್ಲಿದ್ದ ಕಾರ್ಮಿಕವರ್ಗ ಗಂಟು ಮೂಟೆ ಕಟ್ಟಿಕೊಂಡು ತಮ್ಮ ಮಕ್ಕಳುಮರಿಗಳನ್ನು ಕರೆದುಕೊಂಡು ಗುಳೆ ಅಂತ ತಮ್ಮ ಊರುಸೇರಿಕೊಳ್ಳಲು ಹೊರಟೇಬಿಟ್ಟರು. 3-4 ದಿನಗಳ ಕಾಲ ಊಟ, ನಿದ್ರೆ ಇಲ್ಲದೆ ಕಂಕುಳಲ್ಲಿ ಮಕ್ಕಳನ್ನು ಹೊತ್ತುಕೊಂಡು ನೂರಾರು ಕಿಲೋಮೀಟರ್ಗಳಷ್ಟು ದೂರ ನಡೀತಾ ಹೋಗೋ ದೃಶ್ಯ ಹೆಂತವರ ಹೃದಯವನ್ನು ಕರಗಿಸುವಂತಿತ್ತು. ಹಸಿವು ದಣಿವಿನಿಂದ ಮಕ್ಕಳ ಮುಖ ಸೊರಗಿಹೋಗಿವೆ. ನೋಡಲಾಗದೆ ಎಷ್ಟೋ ಜನ ಅವರಿಗೆ ರಸ್ತೆಯಲ್ಲಿ ಅನ್ನ ನೀರಿನ ತಾತ್ಕಾಲಿಕ ವ್ಯವಸ್ಥೆ ಮಾಡಿ ಉದಾರತನ ಮೆರೆದರು. ಪರಿಸ್ಥಿತಿ ಅರಿತ ಕೆಲವು ರಾಜ್ಯಸರಕಾರಗಳು ಸಾರಿಗೆ ವ್ಯವಸ್ಥೆ ಮಾಡಿ ಕೆಲವು ಮಟ್ಟಿಗೆ ಸಹಾಯಮಾಡಿ ಈ ಮೂರೂ ನಾಲ್ಕು ದಿನಗಳ ಘೋರ ದೃಶ್ಯಗಳಿಗೆ ತೆರೆ ಎಳೆದವು. ಆದರೂ ಇನ್ನು ಪರಿಸ್ಥಿತಿ ಸುಧಾರಿಸಿಲ್ಲ, ಕೆಲವು ಭಾಗಗಳಲ್ಲಿ ಮತ್ತು ನಗರಗಳಲ್ಲಿ ಜನರ ಆರ್ಥಿಕ ಸ್ಥಿತಿ ಸುಧಾರಿಸಲು ತಿಂಗಳುಗಳೇ ಬೇಕು.

ಆದರೆ ನನ್ನ ಪ್ರಕಾರ ಹಿಂತಹ ಸಮಸ್ಯೆಗೆ ಮೂಲ ಕಾರಣ ನಮ್ಮ ವ್ಯವಸ್ಥೆ. ನಮ್ಮ ದೇಶದ ಪಿಡುಗೆಂದರೆ ಕೇವಲ ಕೆಲವೇ ಕೆಲವು ಆಯ್ದ ನಗರಗನ್ನಷ್ಟೇ ಉದ್ಯೋಗ ಕೇಂದ್ರಗಳನ್ನಾಗಿ ಮಾಡಿ, ಬೇರೆ ಎರಡನೇ ದರ್ಜೆಯ ನಗರಗಳನ್ನು ನಿರ್ಲಕ್ಷಿಸಿರುವುದು. ಬೆರಳೆಣಿಕೆಯಷ್ಟೇ ನಗರಗಳಲ್ಲಿ ಉದ್ಯೋಗಗಳು ಕೇಂದ್ರೀಕೃತವಾಗಿವೆ. ಹೇಳಿಕೊಳ್ಳಲು ಮಾತ್ರ ಕೃಷಿ ಪ್ರಧಾನ ದೇಶವಿದ್ದರೂ ಮಳೆ ಕೈಕೊಟ್ಟಾಗ, ಹಳ್ಳಿಯ ಜನ ಕೆಲವು ಸಾವಿರ ದುಡ್ಡಿಗೋಸ್ಕರ ನೂರಾರು ಕಿಲೋಮೀಟರ್ಗಳಷ್ಟು ಸಂಚರಿಸಿ ಹೊಟ್ಟೆಪಾಡಿಗಾಗಿ ನಗರಗಳತ್ತ ವಲಸೆಹೋಗುತ್ತಾರೆ. ಬದಲಾಗಿ, ದ್ವಿತೀಯ ದರ್ಜೆಯ ನಗರಗಳನ್ನು ಕೂಡ ಬೆಳೆಸುತ್ತ ಬಂದರೆ, ಜನರು ದೂರದ ಊರುಗಳಿಗೆ ವಲಸೆ ಹೋಗುವುದು ತಪ್ಪುತ್ತದೆ ಮತ್ತು ಹಿಂತಹ ತುರ್ತುಪರಿಸ್ಥಿತಿ ಎದುರಾದಾಗ ನೂರಾರು ಮೈಲು ದೂರ ನಡೆಯುಗ ದುರ್ಗತಿ ಬರುವುದಿಲ್ಲ.

ಇಲ್ಲಿ ಹೇಳಲೇಬೇಕಾದ ಒಂದು ಮುಖ್ಯ ವಿಷಯ, ಈ ಲಾಕ್ಡೌನ್ ಎಂಬ ಗೃಹಬಂಧನವು ಜೀವನದಲ್ಲಿ ನೆನಪಿಡಬೇಕಾದ ಅನೇಕ ಅನುಭವಗಳನ್ನು ಕೊಡುತ್ತ ಹೋಯಿತು. ಈ ಪರಿಸ್ಥಿತಿ ಮನುಷ್ಯನಿಗೆ ಬದುಕಲು ಏನು ಮುಖ್ಯ ಮತ್ತು ಯಾವುದು ಆಡಂಬರ ಅನ್ನುವ ಮನವರಿಕೆ ಮಾಡುವುದರ ಜೊತೆಗೆ ಅರೋಗ್ಯ ನೈರ್ಮಲ್ಯದ ಬಗ್ಗೆ ತಿಳುವಳಿಕೆ ಮೂಡಿಸುತ್ತ ಸ್ವಚ್ಛತಾ ನಿಯಮಗಳನ್ನ ಪಾಲಿಸುವ ಜವಾಬ್ದಾರಿಯನ್ನು ಕಲಿಸಿಕೊಡ್ತಾಯಿದೆ. ವಿಚಿತ್ರವೆಂದರೆ, ಮನುಷ್ಯ ತನ್ನ ವಾಸಕ್ಕಾಗಿಯೇ ಕಟ್ಟಿಸಿದ ಮನೆಯಲ್ಲಿ ಹೊತ್ತುಕಳೆಯಲಾಗದೆ ತಡಪಡಿಸುವ ಪರಿಸ್ಥಿತಿ. ಪ್ರಾಣಿಪಕ್ಷಿಗಳನ್ನು ಪಂಜರದಲ್ಲಿಟ್ಟು ನೋಡಿ ಸಂತೋಷಪಡುವ ಈ ಮಾನವ ಇಂದು ತನ್ನ ಮನೆಯಲ್ಲಿಯೇ ಬಂಧಿಯಾಗದಾಗ, ಪ್ರಾಣಿಪಕ್ಷಿಗಳು ಇದನ್ನು ನೋಡಿ ಅಣುಕಿಸುವಂತಾಯಿತು. ಮನೆಕೆಲಸದವರಿಲ್ಲದೆ ಜನ ತಮ್ಮ ತಮ್ಮ ಮನೆಗೆಲಸಗಳನ್ನು ತಾವೇ ಮಾಡಿಕೊಳ್ಳುತ್ತ ಸ್ವಾವಲಂಭಿಗಳಾಗಬೇಕಾಯಿತು. ಅದಕ್ಕೆ ಏನೋ ನಮ್ಮ ಮಹಿಳಾಮಣಿಗಳು ತಮ್ಮ ಕೈಯಾರೆ ಸ್ನಾಕ್ಸ್ ಮತ್ತು ಫಾಸ್ಟ್ ಫುಡ್ಗಳನ್ನೂ ಮನೆಯಲ್ಲೇ ಮಾಡುವ ಪಾಂಡಿತ್ಯವನ್ನು ಪಡೆದುಕೊಂಡುಬಿಟ್ಟರು. ಈ ಬದಲಾದ ಪರಿಸ್ಥಿತಿಯಿಂದ ತಿಳಿಯುವ ಸಂಗತಿಯೆಂದರೆ ಲಾಕ್ಡೌನ್ ಮುಗಿದಮೇಲೆ ಈ ಫಾಸ್ಟ್ ಫುಡ್ ವ್ಯಾಪಾರಕ್ಕಂತೂ ಹೊಡೆತ ಬೀಳುವುದು ಖಂಡಿತ.

ಅದೇರೀತಿ ಈ ಲಾಕ್ಡೌನ್ ಹಂತ ಕೆಲವಂದು ಹಾಸ್ಯಾಸ್ಪದ ಸಂಗತಿಗಳನ್ನು ಅನುಭವಕ್ಕೆ ತಂದದ್ದುಂಟು. ಈ ಸಮಯದಲ್ಲಿ ಗಂಡ ಹೆಂಡತಿಯರು ಅತೀ ದೀರ್ಘಕಾಲ ಒಟ್ಟಿಗೆ ಇರಬೇಕಾದ ಪರಿಸ್ಥಿತಿ ಬಂದು,ಕೆಲವು ಪತಿ ಪತ್ನಿಯರ ಮಧ್ಯೆ ಸಂಬಂಧಗಳು ಗಟ್ಟಿಯಾದರೆ, ಕೆಲವರ ಮಧ್ಯೆ ಜಗಳಗಳು ಆದ ಸುದ್ದಿಗಳು ಕೇಳಿಬಂದವು. ಬಹಳ ದಿನಗಳ ನಂತರ ಹೆಂಡತಿಯರ ಕೈಗೆ ಸಿಕ್ಕ ಗಂಡಂದಿರ ಪಾಡು ಗೊಳೋ ಗೋಳು. ಯಾವುದೊ ಹಳೆಯ ವೈಷಮ್ಯವನ್ನು ತೀರಿಸಿಕೊಳ್ಳುವ ರೀತಿಯಲ್ಲಿ ಗಂಡಂದಿರಿಂದ ಮನೆಗೆಲಸವನ್ನು ಮಾಡಿಸಿದ್ದೆ ಮಾಡಿಸಿದ್ದು. ಆಫೀಸುಗಳು ಶುರು ಆದಮೇಲೆ ಗಂಡಂದಿರು ತಮ್ಮ ಆಫೀಸ್ ಕೆಲಸಗಳನ್ನೂ ಮರೆಯದಿರಲಿ. ಇನ್ನು ಕೆಲವರಿಗೆ ಹೆಂಡತಿಯನ್ನು ತವರಿಗೆ ಕಳುಹಿಸಿ ಸಂಪೂರ್ಣ ಸ್ವತಂತ್ರವೇನೋ ಸಿಕ್ಕಿತು ಆದರೆ ಹೊರಗಡೆ ಹೋಟೆಲ್ಲುಗಳು ತೆರೆಯದಿರದ ಕಾರಣ ಅಡುಗೆ, ಮನೆಕೆಲಸ ಎಲ್ಲವು ತಮ್ಮ ತಲೆಯಮೇಲೆ ಬಿದ್ದು, ಹೆಂಡತಿಯ ಶಾಪ ತಟ್ಟಿದ ಬಡಪಾಯಿ ಗಂಡಂದಿರಾಗಿದ್ದುಂಟು

ಮನೆಯಿಂದ ಆಫೀಸ್ ಕೆಲಸ ಮಾಡುವವರಿಗೆ ಡಿಜಿಟಲ್ ತಂತ್ರಜ್ನ್ಯಾನದ ಸದುಪಯೋಗವಾಗಿ, ಐಟಿ-ಬಿಟಿ ಉದ್ಯಮಗಳ ಕೆಲಸದ ಪದ್ಧತಿಯಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿತು. ಯೋಗ, ವ್ಯಾಯಾಮ, ಮತ್ತು ಅನೇಕ ವಿಷಯಗಳ ಕ್ಲಾಸುಗಳು ಮನೆಯಿಂದಲೇ ಆನ್ಲೈನ್ ಮುಖಾಂತರ ನಡೆಸುವಂತ ವ್ಯವಸ್ಥೆಯ ಜಾರಿಬಂದು, ಆಧುನಿಕ ತಂತ್ರಜ್ನ್ಯಾನದ ಸದುಪಯೋಗವಾಯಿತು. ಅಷ್ಟೇ ಅಲ್ಲದೆ, ಈ-ಕಾಮರ್ಸ್ ವ್ಯಾಪಾರಗಳಿಗೆ ಇದು ಸುಗ್ಗಿಯಕಾಲವಾಗಿ ಮಾರ್ಪಟ್ಟಿತು

ಮುಂದುವರೆದಂತೆ ಸರ್ಕಾರವು ಹಂತ ಹಂತವಾಗಿ ಲಾಕ್ಡೌನ್ ಅನ್ನು ಸಡಿಲಗೊಳಿಸುತ್ತ ಕೆಲವು ಸೇವೆಗಳನ್ನು ಪುನರಾರಂಭಗೊಳಿಸಲು ಅನುವು ಮಾಡುತ್ತ ಹೋಯಿತು. ಮೊದಲು 21 ದಿನಗಳು, ನಂತರ 19 ದಿನ, ಆಮೇಲೆ ಎರಡು ಸಲ 14 ದಿನಗಳು, ಈಗ ಲೊಕ್ಡೌನ್-5 ನ್ನು ಜೂನ್ 30 ವರೆಗೆ ಮುಂದುವರೆಸಿದ್ದು, ಈ ಕಾಯಿಲೆಯ ಹರಡುವಿಕೆ ಇನ್ನು ನಿಯಂತ್ರಣಕ್ಕೆ ಬಾರದ ಕಾರಣ, ಕೇಸುಗಳು ಹೆಚ್ಚಾಗಿರುವ ವ್ಯಾಪ್ತಿಗಳಲ್ಲಿ ಹೆಚ್ಚಿನ ನಿಗವಸುತ್ತಿರುವುದು. ಸರಕಾರದ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯ ಆದೇಶ ಇರುವುದರಿಂದ ನಿಯಮಗಳನ್ನ ನಿಯತ್ತಾಗಿ ಪಾಲಿಸಲೇಬೇಕು. ಪ್ರಚಲಿತ ಅಂಕಿಅಂಶಗಳ ಪ್ರಕಾರ ನಮ್ಮ ದೇಶದಲ್ಲಿ ಸೋಂಕಿತರ ಸಂಖ್ಯೆ ಒಂದು ಲಕ್ಷ ಎಂಭತ್ತು ಸಾವಿರ ಗಡಿ ದಾಟಿದ್ದು, ಅದರಲ್ಲಿ ಐದು ಸಾವಿರಕ್ಕೂ ಹೆಚ್ಚು ಜನ ತಮ್ಮ ಪ್ರಾಣಕಳೆದುಕೊಂಡಿದ್ದಾರೆ. ಇನ್ನು ಕರ್ನಾಟಕಕ್ಕೆ ಬಂದರೆ, ಸೋಂಕಿತರ ಸಂಖ್ಯೆ ಇನ್ನೇನು ಮೂರು ಸಾವಿರ ಗಡಿ ತಲುಪುವ ಹಂತದಲ್ಲಿದ್ದೇವೆ ಮತ್ತು ಒಟ್ಟು ನಲವತ್ತೆಂಟು ಜನರ ಪ್ರಾಣಹಾನಿಯಾಗಿದೆ. ಈಗಾಗಲೇ ಹೇಳಿದಂತೆ ಈ ರೋಗಕ್ಕೆ ಇನ್ನು ಔಷದಿ ಬಂದಿಲ್ಲ. ಈ ಕಾಯಿಲೆಗೆ ಔಷಧಿ ಅಥವಾ ವ್ಯಾಕ್ಸಿನ್ ಕಂಡಿಹಿಡಿಯಲು ಜಗತ್ತಿನಾಧ್ಯಂತ ತೀವ್ರಗತಿಯಲ್ಲಿ ಸಂಶೋಧನೆಗಳು ನಡಿತಾ ಇದ್ದು, ಅವು ಈಗ ಬೇರೆ ಬೇರೆ ಹಂತಗಳಲ್ಲಿ ಇದ್ದಾವೆ. ಒಂದು ಹೊಸ ಔಷದ ಕಂಡುಹಿಡಿಬೇಕಾದ್ರೆ ಅನೇಕ ಹಂತಗಳಿವೆ. ಈ ರೋಗಕ್ಕೆ ಔಷದ ಮೆಡಿಕಲ್ ಶಾಪಿಗೆ ಸೇರಬೇಕಾದ್ರೆ ಇನ್ನು ವರ್ಷಗಳೇ ಬೇಕು. ಇನ್ನು ಲಸಿಕೆ ಬಗ್ಗೆ ಹೇಳ್ಬೇಕಾದ್ರು, ಅದರಲ್ಲಿನೂ ಸಂಶೋಧನೆಗಳು ನಡಿತಾ ಇದ್ದು ಮಾರ್ಕೆಟಿಗೆ ಬರಬೇಕಾದ್ರೆ ಒಂದು ವರ್ಷ ಮೇಲ್ಪಟ್ಟು ಸಮಯ ಬೇಕು. ಕೆಲವು ರಾಜ್ಯಗಳಲ್ಲಿ ಪ್ಲಾಸ್ಮಾ ಥೆರಫಿಯ ಸಹಾಯದೊಂದಿಗೆ ಚಿಕಿತ್ಸೆ ಕೊಡುವ ಪ್ರಯತ್ನಗಳು ನಡೆಯುತ್ತಿವೆ. ಒಬ್ಬ ವಿಜ್ಞಾನಿಯಾಗಿ ನನ್ನ ಅನಿಸಿಕೆ ಒಂದು ಸಧ್ಯದಲ್ಲೇ ಒಂದು ಪರಿಪೂರ್ಣವಾಗಿ ಗುಣಪಡಿಸಬಲ್ಲ ಔಷದಿ ಸಿಗುವುದು ಕಷ್ಟ ಸಾಧ್ಯ ಅಂತಲೆ ಹೇಳಬಹುದು. ಆದ್ದರಿಂದ ಈಗಿರುವ ಉತ್ತಮ ಔಷದಿ ಎಂದರೆ, ಈ ಸೋಂಕು ಹರಡದಂತೆ ತಡೆಗಟ್ಟುವುದು. ಅದಕ್ಕಿರುವ ಒಂದೇ ದಾರಿಯೆಂದರೆ ಪರಸ್ಪರ ಸುರಕ್ಷಿತ ಅಂತರ, ಅವಾಗವಾಗ ಕೈ ತೊಳೆದುಕೊಳ್ಳೋದು, ಕೈಗೆ ಸ್ಯಾನಿಟೈಜರ್ ಬಳಕೆ, ಹೊರಗೆ ಹೋದಾಗ ಮಾಸ್ಕ ಧರಿಸುವುದು ಮತ್ತು ಬಹುಮುಖ್ಯವಾಗಿ, ಅನಾವಶ್ಯಕವಾದ ತಿರುಗಾಟವನ್ನು ತಪ್ಪಿಸಿ, ಸಾಧ್ಯವಾದಷ್ಟು ಮನೆಯಲ್ಲಿಯೇ ಇದ್ದು ಈ ಲಕ್ಡೌನ್ ಅನ್ನೋ ಗೃಹಬಂಧನವನ್ನು ಯಶಸ್ವಿಗೊಳಿಸುವುದು. ಸರಕಾರ ಮತ್ತು ವೈದ್ಯರು ಹಾಕಿಕೊಟ್ಟ ನಿಯಮ ಪಾಲಿಸೋಣ ಹಾಗು ಈ ಕೊರೊನ ವಿರುದ್ಧದ ಯುದ್ಧದಲ್ಲಿ ಆದಷ್ಟು ಬೇಗನೆ ಜಯ ಸಾಧಿಸೋಣ.